ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಸಹವಾಸಕ್ಕೆ ತಕ್ಕ ಫಲ

Last Updated 20 ಫೆಬ್ರುವರಿ 2021, 1:09 IST
ಅಕ್ಷರ ಗಾತ್ರ

ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ

ಮುಕ್ತಾಕಾರತಯಾ ತದೇವ ನಳಿನೀಪತ್ರಸ್ಥಿತಂ ರಾಜತೇ ।

ಸ್ವಾತ್ಯಾಂ ಸಾಗರಶುಕ್ತಿಸಂಪುಟಗತಂ ತನ್ಮೌಕ್ತಿಕಂ ಜಾಯತೇ

ಪ್ರಾಯೇಣಾಧಮಮಧ್ಯಮೋತ್ತಮಗುಣಃ ಸಂಸರ್ಗತೋ ಜಾಯತೇ ।।

ಇದರ ತಾತ್ಪರ್ಯ ಹೀಗೆ:

‘ಚೆನ್ನಾಗಿ ಕಾದ ಕಬ್ಬಿಣದಲ್ಲಿರುವ ನೀರಿನ ಹೆಸರೂ ತಿಳಿಯದಂತೆ ನಾಶವಾಗುತ್ತದೆ; ಅದೇ ನೀರು ತಾವರೆಯ ಎಲೆಯ ಮೇಲೆ ಇದ್ದಾಗ ಮುತ್ತಿನಂತೆ ಹೊಳೆಯುತ್ತದೆ; ಸ್ವಾತೀಮಳೆಯಲ್ಲಿ ಸಮುದ್ರದಲ್ಲಿರುವ ಕಪ್ಪೆಚಿಪ್ಪಿನೊಳಗೆ ಬಿದ್ದದ್ದೇ ಆದರೆ ಅದು ಮುತ್ತೇ ಆಗುತ್ತದೆ. ಆದುದರಿಂದ ಪ್ರಾಯಶಃ ಅಧಮ, ಮಧ್ಯಮ ಮತ್ತು ಉತ್ತಮಗುಣವು ಸಹವಾಸದಿಂದಲೇ ಉಂಟಾಗುತ್ತದೆ.’

ನಮ್ಮ ಸ್ಥಿತಿ–ಗತಿಗಳು ನಮ್ಮ ಸಹವಾಸವನ್ನು ಅವಲಂಬಿಸಿರುತ್ತವೆ ಎಂದು ಸುಭಾಷಿತ ಹೇಳುತ್ತಿದೆ.

ಸುಭಾಷಿತ ಇಲ್ಲಿ ನೀರಿನ ಉದಾಹರಣೆಯನ್ನು ತೆಗೆದುಕೊಂಡಿದೆ. ನೀರು ಎಂದಿಗೂ ನೀರಾಗಿಯೇ ಉಳಿಯುವುದಿಲ್ಲ. ಅದು ಯಾವ ವಸ್ತುವಿನೊಂದಿಗೆ ಸಹವಾಸವನ್ನು ಮಾಡುತ್ತದೆ ಎಂಬುದರ ಮೇಲೆ ಅದರ ಸ್ಥಿತಿ–ಗತಿಗಳು ನಿರ್ಧಾರವಾಗುತ್ತವೆ.

ಕಬ್ಬಿಣದ ಸಲಾಕೆಯೊಂದು ಚೆನ್ನಾಗಿ ಕಾದಿದೆ. ಈಗ ಅದರ ಮೇಲೆ ನೀರಿನ ಹನಿ ಬಿದ್ದರೆ ಏನಾಗುತ್ತದೆ? ಕ್ಷಣಾರ್ಧದಲ್ಲಿ ಅದು ಆವಿಯಾಗುತ್ತದೆ; ಎಂದರೆ ನೀರು ಕ್ಷಣಾರ್ಧದಲ್ಲಿ ನಾಶವಾಗುತ್ತದೆ. ಅದೇ ನೀರಿನ ಹನಿ ತಾವರೆಯ ಎಲೆಯ ಮೇಲೆ ಬಿದ್ದಾಗ ಏನಾಗುತ್ತದೆ? ಮುತ್ತಿನಂತೆ ಅದು ಕಂಗೊಳಿಸುತ್ತದೆ, ಅಲ್ಲವೆ? ಅದೇ ನೀರು ಸ್ವಾತೀಮಳೆಯಲ್ಲಿರುವ ಕಪ್ಪೆಯ ಚಿಪ್ಪಿನಲ್ಲಿ ಬಿದ್ದರೆ ಅದು ಸಾಕ್ಷಾತ್‌ ಮುತ್ತೇ ಆಗುತ್ತದೆ.

ನೀರಿನ ಹನಿ ಒಂದೇ. ಆದರೆ ಕಬ್ಬಿಣ, ತಾವರೆಯ ಎಲೆ, ಕಪ್ಪೆಯ ಚಿಪ್ಪು ಅದರ ಸ್ವಭಾವವನ್ನೇ ಬದಲಾಯಿಸುತ್ತದೆ. ಕಬ್ಬಿಣದಂತೆ ತಾವರೆಯ ಎಲೆ ಅದನ್ನು ಬದಲಾಯಿಸದು; ತಾವರೆಯ ಎಲೆಯಂತೆ ಕಪ್ಪೆಯ ಚಿಪ್ಪು ಮಾಡದು. ಒಂದೊಂದು ವಸ್ತುವೂ ತನ್ನ ಸ್ವಭಾವಕ್ಕೆ ಅನುಗುಣವಾಗಿ ನೀರನ್ನೂ ಬದಲಾಯಿಸುತ್ತಿರುತ್ತದೆ.

ನಾವು ಕೂಡ ಹೀಗೆಯೇ. ನಾವು ಯಾರ ಸಂಪರ್ಕದಲ್ಲಿರುತ್ತೇವೆಯೋ ಅವರಂತೆಯೇ ನಾವೂ ಆಗುತ್ತೇವೆ; ಅವರ ಸ್ವಭಾವ ನಮ್ಮನ್ನು ಬದಲಾಯಿಸುತ್ತದೆ. ಗಂಧದ ಜೊತೆ ನಾವು ಗುದ್ದಾಟ ನಡೆಸಿದರೆ ಗಂಧದ ಪರಿಮಳ ನಮ್ಮ ಮೈಗೂ ಅಂಟುತ್ತದೆ; ಸಗಣಿಯವನೊಂದಿಗೆ ಕಾದಾಟ ನಡೆಸಿದರೆ ಸಗಣಿಯ ವಾಸನೆಯೇ ನಮ್ಮ ಮೈಯನ್ನು ಆವರಿಸುತ್ತದೆ. ಒಳ್ಳೆಯವರ ಸಹವಾಸದಿಂದ ನಾವೂ ಒಳ್ಳೆಯವರಾಗುತ್ತೇವೆ; ಕೆಟ್ಟವರೊಂದಿಗಿನ ಒಡನಾಟ ನಮ್ಮಲ್ಲಿ ಕೆಟ್ಟಬುದ್ಧಿಯನ್ನೇ ಹುಟ್ಟಿಸುತ್ತದೆ.

ಹೀಗಾಗಿ ನಾವು ನಮ್ಮ ಜೀವನದಲ್ಲಿ ಯಾರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ, ಸಂಗಾತಿಗಳನ್ನಾಗಿಸಿಕೊಳ್ಳುತ್ತೇವೆ, ಆದರ್ಶವನ್ನಾಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಸ್ವಭಾವವನ್ನೂ ಜೀವನದ ಸಾರ್ಥಕತೆಯನ್ನೂ ನಿರ್ಧರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT