ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಭೇದ ಏಕೆ?

Last Updated 11 ಡಿಸೆಂಬರ್ 2020, 2:34 IST
ಅಕ್ಷರ ಗಾತ್ರ

ತ್ರಯಾಣಾಮೇಕಭಾವನಾಂ ಯೋ ನ ಪಶ್ಯತಿ ವೈ ಭಿದಾಮ್‌ ।

ಸರ್ವಭೂತಾತ್ಮನಾಂ ಬ್ರಹ್ಮನ್‌ ಸ ಶಾಂತಿಮಧಿಗಚ್ಛತಿ ।।

ಇದರ ತಾತ್ಪರ್ಯ ಹೀಗೆ:

‘ಎಲ್ಲ ಪ್ರಾಣಿಗಳಿಗೂ ಆತ್ಮಸ್ವರೂಪರಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಯಾರು ಭೇದವನ್ನು ಎಣಿಸುವುದಿಲ್ಲವೋ ಅವರು ಶಾಂತಿಯನ್ನು ಹೊಂದುತ್ತಾರೆ.‘

ನಮ್ಮದು ಒಡಕು ಬುದ್ಧಿ; ಎಲ್ಲದರಲ್ಲೂ ಭೇದವನ್ನೇ ಎಣಿಸುವವರು ನಾವು. ಇಂಥ ಬಿರುಕು ವ್ಯಕ್ತಿತ್ವ ಇದ್ದರೆ ಶಾಂತಿಯೂ ಸಿಗದು ಎನ್ನುವುದು ಸುಭಾಷಿತದ ಸಂದೇಶ.

ದೇವರ ಕಲ್ಪನೆಯಲ್ಲೂ ಭೇದವನ್ನು ಎಣಿಸುವವರು ನಾವು. ಶಿವನೇ ಬೇರೆ, ವಿಷ್ಣುವೇ ಬೇರೆ, ಬ್ರಹ್ಮನೇ ಬೇರೆ; ನಮ್ಮ ಹರಿಯೇ ದೊಡ್ಡವನು, ನಮ್ಮ ಹರನೇ ಶ್ರೇಷ್ಠ – ಇಂಥ ಸಂಕುಚಿತ ಬುದ್ಧಿಯಿಂದ ನೂರಾರು ವರ್ಷಗಳಿಂದ ನಮ್ಮ ಸಮಾಜವನ್ನೂ ಶಿಥಿಲ ಮಾಡುತ್ತಿದ್ದೇವೆ, ನಮ್ಮ ನೆಮ್ಮದಿಯನ್ನೂ ಹಾಳುಮಾಡಿಕೊಳ್ಳುತ್ತಿದ್ದೇವೆ.

ದೇವರು ಒಬ್ಬನೇ ಎನ್ನುವ ಕಲ್ಪನೆ ನಮ್ಮ ಸಂಸ್ಕೃತಿಯಲ್ಲಿ ವೇದಕಾಲದಿಂದಲೂ ಇದೆ. ಒಂದೇ ಸತ್ಯವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವಂತೆ, ಇರುವ ಒಬ್ಬನೇ ದೇವರನ್ನು ನಾನಾ ಹೆಸರುಗಳಿಂದ ಕರೆಯಲಾಗಿದೆ ಎಂಬುದು ಇಲ್ಲಿಯ ನಿಲವು; ಹೆಸರುಗಳು ಬೇರೆ ಎಂದಮಾತ್ರಕ್ಕೆ ಸತ್ತ್ವವೂ ಬೇರೆ ಬೇರೆಯೇ ಆಗಿರಬೇಕು ಎಂದೇನಿಲ್ಲವಷ್ಟೆ. ಆದರೆ ನಮ್ಮ ದುರ್ದೈವ, ವೈವಿಧ್ಯದ ಹಿಂದಿರುವ ಏಕತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ವಿಫಲರಾಗುತ್ತಿರುವುದರ ಪರಿಣಾಮವಾಗಿ ಶಾಂತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಏಕತೆಯ ಅನುಸಂಧಾನದಿಂದ ಮತ್ತೆ ಶಾಂತಿ–ಸಮಾಧಾನಗಳನ್ನು ಪಡೆಯಿರಿ ಎಂದು ಸುಭಾಷಿತ ಆಶಿಸುತ್ತಿದೆ.

ಕರ್ನಾಟಕರಾಜ್ಯದಲ್ಲಿರುವ ಈ ಶಾಸನಪದ್ಯ ಇಂಥ ಏಕತೆಗೆ ನಿದರ್ಶನವಾಗಿದೆ:

ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ |

ಬೌದ್ಧ ಬುದ್ಧ ಇತಿ ಪ್ರಮಾಣಪಟವಃ ಕರ್ತೇತಿ ನೈಯಾಯಿಕಾಃ ||

ಅರ್ಹನ್ನಿತ್ಯಥ ಜೈನಶಾಸನರತಾಃ ಕರ್ಮೇತಿ ಮೀಮಾಂಸಕಾಃ |

ಸೋsಯಂ ವೋ ವಿದಧಾತು ವಾಂಛಿತಫಲಂ ಶ್ರೀಕೇಶವಸ್ಸರ್ವದಾ ||

’ಶೈವರು ಶಿವನೆಂದೂ, ವೇದಾಂತಿಗಳು ಬ್ರಹ್ಮನೆಂದೂ, ಬೌದ್ಧರು ಬುದ್ಧನೆಂದೂ, ನ್ಯಾಯಪ್ರಸ್ಥಾನದವರು ಕರ್ತ ಎಂದೂ, ಜೈನರು ಅರ್ಹತ್‌ ಎಂದೂ, ಮೀಮಾಂಸಕರು ಕರ್ಮ ಎಂದೂ ಯಾವ ಕೇಶವನನ್ನು ಕರೆಯುತ್ತಾರೋ, ಆ ಒಬ್ಬನೇ ದೇವರು ನಮ್ಮ ಇಷ್ಟಾರ್ಥಫಲಗಳನ್ನು ಎಂದಿಗೂ ನೀಡಲಿ‘ ಎಂಬುದು ಈ ಪದ್ಯದ ತಾತ್ಪರ್ಯ.

ಭೇದಬುದ್ಧಿ ಅಳಿಯಲಿ, ಏಕಭಾವ ಉಳಿಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT