ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಿಜವಾದ ಜೀವನ

Last Updated 30 ಅಕ್ಟೋಬರ್ 2020, 1:20 IST
ಅಕ್ಷರ ಗಾತ್ರ

ಯಾವದ್‌ ಭ್ರಿಯೇತ ಜಠರಂ ತಾವತ್‌ ಸ್ವತ್ವಂ ಹಿ ದೇಹಿನಾಮ್ ।

ಅಧಿಕಂ ಯೋsಭಿಮನ್ಯೇತ ಸ ಸ್ತೇನೋ ದಂಡಮರ್ಹತಿ ।।

ಇದರ ತಾತ್ಪರ್ಯ ಹೀಗೆ:

‘ಉದರಪೋಷಣೆಗೆ ಎಷ್ಟು ಆವಶ್ಯಕವೋ ಅಷ್ಟು ಮಾತ್ರ ಮಾನವನ ಸ್ವತ್ತಾಗಿರುತ್ತದೆ. ಯಾರು ಅದಕ್ಕಿಂತ ಹೆಚ್ಚು ಬೇಕೆಂದು ಆಸೆಪಡುತ್ತಾನೋ ಅವನು ಕಳ್ಳ; ಅವನಿಗೆ ದಂಡನೆಯನ್ನು ವಿಧಿಸತಕ್ಕದ್ದು.’

ನಮ್ಮ ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಆಸ್ತಿಯನ್ನು ನೋಡಿದಾಗ ಈ ಸುಭಾಷಿತದ ನೆನಪಾಗಬೇಕು.

ನಾವೆಲ್ಲರೂ ಈ ಲೋಕಕ್ಕೆ ಬರುವುದೂ ಖಾಲಿ ಕೈಯಲ್ಲಿ ಮತ್ತು ಇಲ್ಲಿಂದ ಹೋಗುವುದು ಕೂಡ ಖಾಲಿ ಕೈಯಲ್ಲಿಯೇ ಹೌದು. ಆದರೂ ನಾವು ಹೋಗುವಾಗ ನಮ್ಮ ಎಲ್ಲ ಆಸ್ತಿಯನ್ನೂ ಜೊತೆಯಲ್ಲಿ ತೆಗೆದುಕೊಂಡುಹೋಗುತ್ತೇವೆ ಎನ್ನುವಂತೆ ದುರಾಸೆಯಿಂದ ಆಸ್ತಿಯನ್ನು ಸಂಪಾದಿಸುತ್ತೇವೆ; ದುರಾಸೆಯ ಜೊತೆಗೆ ಮೋಸವೂ ಸೇರಿಕೊಂಡಿರುತ್ತದೆ. ಸುಭಾಷಿತ ಹೇಳುತ್ತಿರುವುದು ಇಂಥ ಮಾನಸಿಕತೆಯನ್ನು ಕುರಿತು.

ನಾವು ಎಷ್ಟು ಸಂಪಾದಿಸಿದರೂ ತಿನ್ನುವುದು ಮೂರು ಹೊತ್ತು; ಅದೂ ನಮ್ಮ ಹೊಟ್ಟೆ ಎಷ್ಟು ಹಿಡಿಯುತ್ತದೆಯೋ ಅಷ್ಟು ಮಾತ್ರವನ್ನೇ ತಿನ್ನಲು ಸಾಧ್ಯವಾಗುವುದು ಕೂಡ. ನಾವು ಐಶ್ವರ್ಯವಂತರಾದ ಮಾತ್ರಕ್ಕೆ ಚಿನ್ನದ ಅಕ್ಕಿಯಿಂದ ಅನ್ನಮಾಡಿಕೊಂಡು ತಿನ್ನಲು ಸಾಧ್ಯವಿಲ್ಲವಷ್ಟೆ. ಬಡವರಾದರೂ ಶ್ರೀಮಂತರಾದರೂ ಎಲ್ಲರೂ ಅಕ್ಕಿಯಿಂದ ಮಾಡಿದ ಅನ್ನವನ್ನೇ ತಿನ್ನಬೇಕು, ನೀರನ್ನೇ ಕುಡಿಯಬೇಕು. ಈ ವಾಸ್ತವನ್ನು ತಿಳಿದುಕೊಳ್ಳದೆ ಜೀವನಪೂರ್ತಿ ಹಣದ ಸಂಪಾದನೆಯಲ್ಲಿಯೇ ಮುಳುಗುತ್ತೇವೆ. ತಟ್ಟೆಯಲ್ಲಿರುವ ಅನ್ನವನ್ನೂ ತೃಪ್ತಿಯಿಂದ ತಿನ್ನುವಷ್ಟು ವ್ಯವಧಾನವೇ ನಮಗಿರುವುದಿಲ್ಲ. ಹಾಗಾದರೆ ಸಂಪಾದಿಸುವುದು ಯಾವುದಕ್ಕಾಗಿ? ಯಾರಿಗಾಗಿ? ಈ ಪ್ರಶ್ನೆಯನ್ನು ಎಂದಾದರೂ ನಾವು ಕೇಳಿಕೊಂಡಿದ್ದೇವೆಯೆ?

ಜೀವನದ ಅರ್ಥವನ್ನೂ ಸ್ವಾರಸ್ಯಕತೆಯನ್ನೂ ಅರ್ಥಮಾಡಿಕೊಂಡು ಸಾರ್ಥಕತೆಯಿಂದ ಬಾಳುವುದನ್ನು ಕಲಿಯಬೇಕು. ಇರುವವರೆಗೂ ನಾವೂ ಸಂತೋಷದಿಂದ ಬಾಳಬೇಕು; ನಾಲ್ಕು ಜನರಿಗೂ ಸಂತೋಷವನ್ನು ನೀಡಬೇಕು. ಇದು ನಿಜವಾದ ಜೀವನ. ಇದನ್ನು ಬಿಟ್ಟು, ಹಣ ಹಣ – ಎಂದು ದಿನದ ಇಪ್ಪತ್ತನಾಲ್ಕು ಗಂಟೆಗಳೂ ಹಣದ ಹಿಂದೆ ಓಡುವುದಾದರೂ ಏಕೆ? ನಮ್ಮ ಹೊಟ್ಟೆ ಹಿಡಿಯದಷ್ಟು ಅನ್ನವನ್ನು ತಟ್ಟೆಯಲ್ಲಿ ಹಾಕಿಕೊಂಡಮಾತ್ರಕ್ಕೆ ಅದನ್ನು ತಿನ್ನಲಾದೀತೆ? ಅಗತ್ಯಕ್ಕಿಂತ ಜಾಸ್ತಿ ಸಂಪಾದಿಸುವುದು ಕಳ್ಳತನವೇ ಹೌದು.

ಸರಳವಾಗಿಯೂ ಸುಂದರವಾಗಿಯೂ‍‍ಪ್ರಾಮಾಣಿಕವಾಗಿಯೂ ಜೀವನವನ್ನು ನಡೆಸುವುದನ್ನು ಕಲಿಯಬೇಕು. ಇದೇ ಜೀವನದ ಸತ್ಯ ಶಿವ ಸುಂದರಗಳ ಸಾಕ್ಷಾತ್ಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT