ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಆತ್ಮಗೌರವವನ್ನು ಕಾಪಾಡಿ

Last Updated 2 ಅಕ್ಟೋಬರ್ 2020, 1:25 IST
ಅಕ್ಷರ ಗಾತ್ರ

ದೋಷಾಕರೋsಪಿ ಕುಟಿಲೋಪಿ ಕಲಂಕಿತೋsಪಿ
ಮಿತ್ರಾವಸಾನಸಮಯೇ ವಿಹಿತೋದಯೋsಪಿ ।
ಚಂದ್ರಸ್ತಥಾಪಿ ಹರವಲ್ಲಭತಾಮುಪೈತಿ
ನೈವಾಶ್ರಿತೇಷು ಗುಣದೋಷವಿಚಾರಣಾ ಸ್ಯಾತ್ ।।

ಇದರ ತಾತ್ಪರ್ಯ ಹೀಗೆ:

‘ಅನೇಕ ದೋಷಗಳಿಗೆ ಆಸ್ಪದವಾಗಿದ್ದರೂ, ವಕ್ರನಾಗಿದ್ದರೂ, ಕಲೆಯನ್ನು ಹೊಂದಿದ್ದರೂ, ಮಿತ್ರನ – ಎಂದರೆ ಸೂರ್ಯನ –ಕಷ್ಟಕಾಲದಲ್ಲಿ ತಾನು ಏಳಿಗೆಯನ್ನು ಹೊಂದುತ್ತಿದ್ದರೂ, ಚಂದ್ರನು ಶಿವನ ಪ್ರೀತಿಗೆ ಪಾತ್ರನಾಗಿದ್ದಾನೆ. ಆಶ್ರಿತರು ಎಂದಮೇಲೆ ಅವರಲ್ಲಿರುವ ಗುಣದೋಷಗಳನ್ನು ವಿಚಾರಿಸಬೇಕಾಗಿಲ್ಲವಷ್ಟೆ!’

ನಮ್ಮನ್ನು ಯಾರಾದರೂ ಆಶ್ರಯ ಕೋರಿ ಬಂದಿದ್ದಾರೆ ಎಂದರೆ ಅವರು ನಮಗಿಂತಲೂ ಅಶಕ್ತರು, ಅಸಹಾಯಕರು ಎಂದೇ ಹೌದಲ್ಲವೆ? ಇವರಲ್ಲಿ ಸಹಜವಾಗಿಯೇ ಹಲವು ದೋಷಗಳು ಇದ್ದೇ ಇರುತ್ತವೆ. ಈ ದೋಷಗಳ ಕಾರಣದಿಂದಾಗಿಯೇ ಅವರು ಇನ್ನೊಬ್ಬರ ಆಶ್ರಯವನ್ನು ಅರಸಿ ಬಂದಿರುತ್ತಾರೆ. ಇದನ್ನು ತಿಳಿದೇ ನಾವು ಅವರಿಗೆ ಆಶ್ರಯವನ್ನು ಕೊಟ್ಟಿರುತ್ತೇವೆ. ಹೀಗಿರುವಾಗ ಮತ್ತೆ ಯಾವುದೋ ಸಂದರ್ಭದಲ್ಲಿ ಅವರ ದೋಷಗಳನ್ನು ಎತ್ತಿಹೇಳಿ, ಅವರನ್ನು ಅಪಮಾನಮಾಡುವುದರಲ್ಲಿ ಏನೂ ಅರ್ಥವಿಲ್ಲ – ಎಂದು ಸುಭಾಷಿತ ಹೇಳುತ್ತಿದೆ.

ಸುಭಾಷಿತ ಇಲ್ಲಿ ಆಯ್ದುಕೊಂಡಿರುವುದು ಶಿವ ಮತ್ತು ಚಂದ್ರನ ಸಂಬಂಧ. ಶಿವನು ಚಂದ್ರನನ್ನು ತನ್ನ ತಲೆಯ ಮೇಲೆ ಧರಿಸಿದ್ದಾನೆ. ದೇವದೇವನಾದ ಸಾಕ್ಷತ್‌ ಪರಮೇಶ್ವರನ ಜಟೆಯನ್ನು ಅಲಂಕರಿಸಿದ ಕೀರ್ತಿ ಚಂದ್ರನಿಗೆ ದಕ್ಕಿದೆ. ಆದರೆ ಶಿವನಂತೆ ಅವನು ಪರಿಪೂರ್ಣನಲ್ಲ; ಅವನಲ್ಲಿ ಹಲವು ದೋಷಗಳಿವೆ. ಅಂಥ ಕೆಲವು ದೋಷಗಳನ್ನು ಸುಭಾಷಿತ ಪಟ್ಟಿ ಮಾಡಿದೆ.

ಚಂದ್ರನು ವಕ್ರನಾಗಿದ್ದಾನೆ; ಎಂದರೆ ಅವನ ಆಕಾರ ಸುಂದರವಾಗಿಲ್ಲ; ಕೆಲವೊಮ್ಮೆ ಪೂರ್ಣಾಕಾರದಲ್ಲಿರುತ್ತಾನೆ, ಕೆಲವೊಮ್ಮೆ ಕ್ಷೀಣವಾಗಿರುತ್ತಾನೆ. ಅವನಲ್ಲಿ ಕಲೆಯಿದೆ; ಅವನ ಮುಖ ದುಂಡುಗಿದ್ದರೂ ಅದರಲ್ಲಿ ಕಲೆಗಳಿವೆ. ಅವನು ಮಿತ್ರನ ಕಷ್ಟಕಾಲದಲ್ಲಿ ತಾನು ಮಾತ್ರ ಅಭಿವೃದ್ಧಿಯನ್ನು ಹೊಂದುತ್ತಾನಂತೆ. ಇಲ್ಲಿ ಕವಿಯು ಶ್ಲೇಷೆಯನ್ನು ಬಳಸಿದ್ದಾನೆ. ಮಿತ್ರ ಎಂದರೆ ಸ್ನೇಹಿತನೂ ಆಗುತ್ತಾನೆ; ಸೂರ್ಯನೂ ಆಗುತ್ತಾನೆ. ಮಿತ್ರ, ಎಂದರೆ ತಮ್ಮ ಸ್ನೇಹಿತರು ಕಷ್ಟದಲ್ಲಿದ್ದಾಗ ಯಾರು ತಮ್ಮ ಸುಖವನ್ನು ಮಾತ್ರವೇ ನೋಡಿಕೊಳ್ಳುತ್ತಾರೋ ಅಂಥವರು ಸ್ನೇಹಿತ ಎನಿಸಿಕೊಳ್ಳಲು ಅನರ್ಹರು. ಆದರೆ ಚಂದ್ರ ಮಾತ್ರ ಮಿತ್ರನು ಕಷ್ಟದಲ್ಲಿದ್ದಾಗ ತಾನು ಮಾತ್ರ ಏಳಿಗೆಯನ್ನು ಹೊಂದುತ್ತಾನೆ. ಎಂದರೆ ಸೂರ್ಯನು ಕಷ್ಟದಲ್ಲಿರುವ ಸಮಯ, ಎಂದರೆ ರಾತ್ರಿಯ ಕಾಲದಲ್ಲಿ ಚಂದ್ರನು ಮಾತ್ರ ಬೆಳಗುತ್ತಿರುತ್ತಾನೆ ಎಂದು ಇದರ ತಾತ್ಪರ್ಯ.

ಇಷ್ಟೆಲ್ಲ ದೋಷಗಳಿದ್ದರೂ ಚಂದ್ರನು ಶಿವನ ಪ್ರೀತಿಗೆ ಪಾತ್ರನಾಗಿದ್ದಾನೆ. ಏಕೆಂದರೆ ನಮ್ಮನ್ನು ಆಶ್ರಯಿಸಿ ಬಂದವರ ದೋಷಗಳನ್ನು ಎತ್ತಿಹೇಳುವುದು ಸುಸಂಸ್ಕೃತನವಲ್ಲ – ಎಂಬುದು ಸುಭಾಷಿತದ ಭಾವ.

ನಮ್ಮ ಆಶ್ರಯದಲ್ಲೂ ಹಲವರು ಇರುತ್ತಾರೆ. ಅವರ ದೋಷಗಳನ್ನು ಎತ್ತಿ ಹೇಳಿ ಅವರನ್ನು ಅಪಮಾನಮಾಡುವಂಥ ಕೀಳು ಅಭಿರುಚಿ ಎಂದಿಗೂ ನಮ್ಮದಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT