ಸೋಮವಾರ, ಜನವರಿ 18, 2021
22 °C

ದಿನದ ಸೂಕ್ತಿ: ಉತ್ಥಾನದ್ವಾದಶೀ

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ।
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ।।

ಇದರ ತಾತ್ಪರ್ಯ ಹೀಗೆ:

‘ಏಳು ಗೋವಿಂದ, ಏಳು; ಏಳು ಗರುಡಧ್ವಜನಾದ ವಿಷ್ಣುವೇ! ಏಳು, ಲಕ್ಷ್ಮೀರಮಣನೆ, ಮೂರು ಲೋಕಗಳನ್ನು ಮಂಗಳಮಯ ಮಾಡು.’

ಈ ಶ್ಲೋಕವನ್ನು ಬಹಳ ಜನರು ಕೇಳಿರುತ್ತಾರೆ; ವೆಂಕಟೇಶ ಸುಪ್ರಭಾತದಲ್ಲಿ ಬರುವ ಒಂದು ಶ್ಲೋಕ. 

ಸುಪ್ರಭಾತ ಎಂದರೆ ಒಳ್ಳೆಯ ಬೆಳಗು ಎಂದು ಸರಳವಾಗಿ ಅರ್ಥಮಾಡಬಹುದು. ನಮ್ಮ ಇಡೀ ದಿನ ಚೆನ್ನಾಗಿರಲಿ ಎಂಬ ಹಾರೈಕೆ ಅದರ ಉದ್ದೇಶ. ನಿದ್ರೆಯಿಂದ ಏಳುವ ಮೊದಲು, ಎಂದರೆ ನಿದ್ರೆಯಿಂದ ಯಾರನ್ನಾದರೂ ಎಬ್ಬಿಸುವ ಸಮಯದಲ್ಲಿ ಬಳಸುವ ಮಾತುಗಳು. ಈಗ ಬೆಳಗ್ಗೆ ಏಳುವಾಗ ಆತ್ಮೀಯರಿಗೆ ‘ಗುಡ್ ಮಾರ್ನಿಂಗ್‌‘ ಹೇಳುತ್ತೀವಲ್ಲವೆ, ಹಾಗೆ.

ಮೇಲಿನ ಶ್ಲೋಕವನ್ನು ಹೇಳುವುದು ವೆಂಕಟೇಶ್ವರನ ಸುಪ್ರಭಾತವಾಗಿ. ವೆಂಕಟೇಶ್ವರ ಎಂದರೆ ಶ್ರೀನಿವಾಸ; ಎಂದರೆ ವಿಷ್ಣು ಎಂದರ್ಥ. ಮಹಾವಿಷ್ಣುವಿಗೆ ಸುಪ್ರಭಾತ ಹೇಳುತ್ತಿದ್ದೇವೆ ಎಂದರೆ ಅವನು ಮಲಗಿದ್ದಾನೆ ಎಂದು ಅರ್ಥವಾಗುತ್ತದೆ ಅಲ್ಲವೆ? ಹಾಗಾದರೆ ದೇವರಿಗೂ ನಿದ್ರೆ ಇದೆಯೆ? ದೇವರೇ ಮಲಗಿ ನಿದ್ರೆ ಮಾಡಿದರೆ ಜಗತ್ತನ್ನು ಕಾಪಾಡುವವರು ಯಾರು? ಹೀಗೆಲ್ಲ ನಮಗೆ ಪ್ರಶ್ನೆಗಳು ಬರುವುದು ಸಹಜ. ನಮ್ಮ ಸಂಸ್ಕೃತಿಯಲ್ಲಿಯ ಇಂಥ ಪರಿಕಲ್ಪನೆಗಳನ್ನು ವಾಚ್ಯಾರ್ಥದಲ್ಲಿ ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆ ಮುಖ್ಯ.

ಮಹಾವಿಷ್ಣುವು ನಾಲ್ಕು ತಿಂಗಳು ನಿದ್ರೆಯಲ್ಲಿರುತ್ತಾನೆ ಎಂಬ ಕಲ್ಪನೆಯಿದೆ. ನಿದ್ರೆ ಎಂದರೆ ಅದು ನಾವು ಮಾಡುವಂಥ ನಿದ್ರೆಯ ರೀತಿಯದಲ್ಲ; ಅದು ಯೋಗನಿದ್ರೆ. ಇದಕ್ಕೆ ಹಲವು ರೀತಿಯ ಅರ್ಥಗಳಿವೆ. ನಿದ್ರಾಮುದ್ರೆಯಲ್ಲಿರುವ ಭಗವಂತ ನಮ್ಮ ಶ್ರದ್ಧಾಭಕ್ತಿಗಳನ್ನು ಪರೀಕ್ಷಿಸುತ್ತಿರುತ್ತಾನೆ. ಅವನು ಈ ನಿದ್ರೆಯಿಂದ ಏಳುವ ದಿನವೇ ಉತ್ಥಾನದ್ವಾದಶೀ. ಉತ್ಥಾನ – ಎಂದರೆ ನಿದ್ರೆಯಿಂದ ಏಳುವುದು ಎಂದು ಅರ್ಥ.

ಭಗವಂತನನ್ನು ನಿದ್ರೆಯಿಂದ ಏಳುವಂತೆ ಪ್ರಾರ್ಥಿಸುವುದೇ ಸುಪ್ರಭಾತದ ಉದ್ದೇಶ. ನಿದ್ರಾಮುದ್ರೆಯಿಂದ ಅವನು ಏಕಾದರೂ ಹೊರಗೆ ಬರಬೇಕು ಎಂದರೆ ಎಲ್ಲ ಲೋಕಗಳನ್ನೂ ಅವನು ಕರುಣಿಸಬೇಕಿದೆ, ಮಂಗಳಮಯ ಮಾಡಬೇಕಿದೆ. ಹೀಗಾಗಿ ಅವನ ಎಚ್ಚರ ನಮಗೆ ಮುಖ್ಯ.

ನಾವು ದಿನವೂ ಮಲಗುತ್ತೇವೆ; ದಿನವೂ ಏಳುತ್ತೇವೆ. ಆದರೆ ನಮ್ಮ ನಿದ್ರೆಗೂ ಎಚ್ಚರಕ್ಕೂ ಹಲವು ಸಲ ದಿಕ್ಕು–ದೆಸೆಗಳೇ ಇರುವುದಿಲ್ಲ. ನಾವು ಏಳುವಾಗಲೇ ಒಳ್ಳೆಯ ಸಂಕಲ್ಪವನ್ನು ಮಾಡಬೇಕು. ‘ನನ್ನ ಮನೆಯ ಮಂಗಳಕ್ಕಾಗಿ, ಸಮಾಜದ ಒಳಿತಿಗಾಗಿ, ಸಮಸ್ತ ಸೃಷ್ಟಿಯ ಹಿತಕ್ಕಾಗಿ ನಾನು ಎಚ್ಚರವಾಗಬೇಕಿದೆ; ಎಚ್ಚರವಾಗಿ ಕ್ರಿಯಾಶೀಲವಾಗಬೇಕಿದೆ’ – ಎಂಬ ಸಂಕಲ್ಪ ನಮ್ಮದಾಗಬೇಕು. ಕೆಲವೊಮ್ಮೆ ನಾವು ಎಚ್ಚರವಾಗಿದ್ದೇವೆ ಎಂದುಕೊಂಡಿರುತ್ತೇವೆ; ಆದರೆ ವಾಸ್ತವವಾಗಿ ನಾವು ನಿದ್ರೆಯಲ್ಲೇ ಇರುತ್ತೇವೆ! ಹೀಗಾಗಿ ಎಚ್ಚರ ಎಂದರೆ ಕ್ರಿಯಾಶೀಲತೆ; ಅದು ಎಲ್ಲರ ಒಳಿತಿಗಾಗಿ ನಡೆಸುವಂಥ ಕ್ರಿಯಾಶೀಲತೆ. ಅಂಥ ಸಂಕಲ್ಪದಿಂದ ನಮ್ಮ ದಿನದ ಆರಂಭವನ್ನು ನಡೆಸುವುದೇ ನಿಜವಾದ ಸುಪ್ರಭಾತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.