ಮಂಗಳವಾರ, ಆಗಸ್ಟ್ 11, 2020
27 °C

ದಿನದ ಸೂಕ್ತಿ | ನ್ಯಾಯಕ್ಕೇ ಜಯ

ಎಸ್‌. ಸೂರ್ಯಪ್ರಕಾಶ ಪಂಡಿತ್ Updated:

ಅಕ್ಷರ ಗಾತ್ರ : | |

Prajavani

ಯಾಂತಿ ನ್ಯಾಯಪ್ರವೃತ್ತಸ್ಯ ತಿರ್ಯಂಚೋsಪಿ ಸಹಾಯತಾಮ್ ।
ಅಪಂಥಾನಂ ತು ಗಚ್ಛಂತಂ ಸೋದರೋsಪಿ ವಿಮುಂಚತಿ ।।

ಇದರ ತಾತ್ಪರ್ಯ ಹೀಗೆ: 

‘ನ್ಯಾಯವಾದ ದಾರಿಯಲ್ಲಿ ಹೋಗುವವನಿಗೆ, ರಾಮನಿಗೆ ಕಪಿಗಳು ಸಹಾಯಮಾಡಿದಂತೆ ಮನುಷ್ಯೇತರ ಪ್ರಾಣಿಗಳೂ, ಸಹಾಯಮಾಡುತ್ತವೆ. ತಪ್ಪುದಾರಿ ತುಳಿಯುವನನ್ನು, ರಾವಣನನ್ನು ವಿಭೀಷಣನು ಬಿಟ್ಟಂತೆ, ಸಹೋದರನೂ ಕೈಬಿಡುತ್ತಾನೆ.‘

ಎಲ್ಲರಿಗೂ ಅಂತಃಕರಣ ಇದ್ದೇ ಇರುತ್ತದೆ. ಹೀಗಾಗಿ ನ್ಯಾಯ ಯಾವುದು, ಅನ್ಯಾಯ ಯಾವುದು – ಎಂದು ನಮ್ಮ ಅಂತರಂಗಕ್ಕೆ ತಿಳಿಯುತ್ತಿರುತ್ತದೆ. ಆದರೂ ನಮಗೆ ನ್ಯಾಯದ ದಾರಿ ಹಿಡಿಯಲು ಅಂಜಿಕೆ. ನನ್ನ ಬೆಂಬಲಕ್ಕೆ ಯಾರೂ ಬರದಿದ್ದರೆ, ಏನು ಮಾಡುವುದು? ಈ ದಾರಿಯಲ್ಲಿ ನಾನು ಒಂಟಿಯಾದರೆ ಹೇಗೆ? ಇದೇ ನಮ್ಮೆಲ್ಲರ ಹೆದರಿಕೆ.

ಅಂಗಡಿಗೆ ಹೋಗಿದ್ದೇವೆ; ಅಲ್ಲಿ ಕೆಲವರು ಪರಸ್ಪರ ಅಂತರವನ್ನು ಪಾಲಿಸುತ್ತಿಲ್ಲ; ಜೊತೆಗೆ ಮಾಸ್ಕ್‌ ಕೂಡ ಧರಿಸಿಲ್ಲ; ಏನನ್ನೋ ತಿಂದು ಅಲ್ಲೇ ಉಗಿಯುತ್ತಿದ್ದಾರೆ. ಇವೆಲ್ಲವೂ ಕೊರೊನಾ ಸಂಕಷ್ಟದ ಸಮಯದಲ್ಲಿ ಆತಂಕ ತರುವಂಥ ನಡೆವಳಿಕಗಳು ಎಂದು ನಮಗೆ ಗೊತ್ತಿದೆ. ಆದರೆ ಆ ಪುಂಡರಿಗೆ ಬುದ್ಧಿ ಹೇಳಲು ನಮಗೆ ಅಂಜಿಕೆ. ಒಂದು ವೇಳೆ ಆ ಧೂರ್ತರು ನಮ್ಮ ಮೇಲೆ ಏರಿಬಂದರೆ, ಆಗ ನಮ್ಮ ಸಹಾಯಕ್ಕೆ ಯಾರೂ ಧಾವಿಸದಿದ್ದರೆ, ಏನು ಮಾಡುವುದು? ಮನಸ್ಸಿನಲ್ಲಿಯೇ ಗೊಣಗಿಕೊಂಡು ಮನೆಗೆ ಸುಮ್ಮನೆ ಹಿಂದಿರುಗುತ್ತೇವೆ.

ಸುಭಾಷಿತ ಇಂಥದೇ ಸಂದರ್ಭದ ಬಗ್ಗೆ ಮಾತನಾಡುತ್ತಿದೆ.

ರಾಮ ಎಷ್ಟೆಲ್ಲ ಕಷ್ಟಗಳನ್ನು ಎದುರಿಸಿದ; ಅದರೆ ಅವನು ನ್ಯಾಯದ ದಾರಿಯನ್ನು ಬಿಡಲಿಲ್ಲ, ಸತ್ಯದ ದಾರಿಯನ್ನು ಬಿಡಲಿಲ್ಲ. ಅವನ ಈ ಧರ್ಮಬುದ್ಧಿಯ ಕಾರಣದಿಂದಲೇ ಅವನಿಗೆ ಪ್ರಕೃತಿಯ ಎಲ್ಲ ವಿವರಗಳೂ ಸಹಾಯಕ್ಕೆ ನಿಂತವು; ಕಪಿಗಳು, ಕರಡಿಗಳು – ಇಂಥ ಪ್ರಾಣಿಗಳು ಕೂಡ ಅವನಿಗೆ ಸಹಾಯಮಾಡಿದವು. ಆದರೆ ಇದಕ್ಕೆ ವಿರುದ್ಧವಾದ ವಿದ್ಯಮಾನ ರಾವಣನ ಜೀವನದಲ್ಲಿ ನಡೆಯಿತು. ಅಣ್ಣನ ಅನ್ಯಾಯಮಾರ್ಗವನ್ನು ಖಂಡಿಸಿದ ವಿಭೀಷಣ, ಅವನ ತಮ್ಮ ಅವನನ್ನು ತೊರೆದು ರಾಮನ ಆಶ್ರಯಕ್ಕೆ ಧಾವಿಸಿದ. ಇದರ ತಾತ್ಪರ್ಯ, ನ್ಯಾಯಮಾರ್ಗವು ಕಷ್ಟದ ದಾರಿ, ದಿಟ. ಆರಂಭದಲ್ಲಿ ನಮಗೆ ಸಹಾಯ ದೊರೆಯುವ ಸಾಧ್ಯತೆಯೂ ಕ್ಷೀಣವಾಗಿರುತ್ತದೆ. ಆದರೆ ನಾವು ಆ ದಾರಿಯಲ್ಲಿ ಅಚಲವಾಗಿ ನಿಂತರೆ ಆಗ ನಮಗೆ ಹಲವು ದಿಕ್ಕುಗಳಿಂದ ದೊರೆಯುತ್ತದೆ ಎನ್ನುವ ವಿಶ್ವಾಸವನ್ನು ಸುಭಾಷಿತ ನೀಡುತ್ತಿದೆ.

ನಾವು ಸಾಮಾಜಿಕ ಅಭಿಯಾನ, ಹೋರಾಟಗಳನ್ನೇ ಉದಾಹರಣೆಯಾಗಿ ನೋಡಬಹುದು. ಆರಂಭದಲ್ಲಿ ಈ ಹೋರಾಟಗಳಿಗೆ ಬೆಂಬಲವೇ ಇರುವುದಿಲ್ಲ. ಆದರೆ ಹಂತಹಂತವಾಗಿ ಇವಕ್ಕೆ ವ್ಯಾಪಕವಾಗಿ ಬೆಂಬಲ ದೊರೆತು ಯಶಸ್ವಿಯಾಗಿರುವುದನ್ನು ನೋಡಬಹುದು. ನಮ್ಮ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವನ್ನೇ ಇಲ್ಲಿ ಮೆಲುಕು ಹಾಕಬಹುದು. ಅಸ್ಪೃಶ್ಯತೆಯ ವಿರುದ್ಧ ನಡೆದ ಹೋರಾಟ, ಸತಿಪದ್ಧತಿಯ ವಿರುದ್ಧ ನಡೆದ ಅಭಿಯಾನ – ಇಂಥ ಹಲವು ಚಳವಳಿಗಳನ್ನೂ ಇಲ್ಲಿ ಉದಾಹರಿಸಬಹುದು. 

ಹೀಗಾಗಿ ಸಮಾಜದಲ್ಲಿ ಬದಲಾವಣೆ ಬೇಕು ಎಂದು ಪ್ರಾಮಾಣಿಕವಾಗಿ ಬಯಸುವವರು ನಿರಂತರವಾಗಿ ಹೆಜ್ಜೆ ಹಾಕುತ್ತ ನಡೆಯಬೇಕು. ಒಂದೇ ದಿನದಲ್ಲಿ ಬೆಂಬಲ ಸಿಗದು. ಆದರೆ ನಮ್ಮ ದಾರಿ ದಿಟವಾಗಿಯೂ ನ್ಯಾಯಮಾರ್ಗವಾಗಿದ್ದರೆ, ಸಮಾಜದ ಏಳಿಗೆಗೆ ಪೂರಕವಾಗಿದ್ದರೆ ಖಂಡಿತ ಸಮಾಜದ ಬೆಂಬಲ ಸಿಕ್ಕೇ ಸಿಗುವುದು.

ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ |
ತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

ಇದರ ತಾತ್ಪರ್ಯ:

‘ಲಂಕೆಯನ್ನು ಗೆಲ್ಲಬೇಕು; ಸಮುದ್ರವನ್ನು ನಡೆದೇ ದಾಟಬೇಕು; ರಾವಣನಂಥ ರಾಕ್ಷಸನು ವೈರಿ; ಯುದ್ಧರಂಗದಲ್ಲಿ ಸಹಾಯಮಾಡಲು ನಿಂತವರು ಕಪಿಗಳು. ಆದರೂ ರಾಮನು ಒಂಟಿಯಾಗಿಯೇ ಸಕಲ ರಾಕ್ಷಸಕುಲವನ್ನು ಧ್ವಂಸಮಾಡಿದ. ಮಹಾತ್ಮರ ಕ್ರಿಯಾಸಿದ್ಧಿ ಅವರ ಸತ್ತ್ವಸಿದ್ಧಿಯಲ್ಲಿರುತ್ತದಯೇ ವಿನಾ ಅವರಿಗೆ ಒದಗುವ ಸಲಕರಣೆಗಳ ಮೇಲೆ ಅವಲಂಬಿತವಾಗಿರುವುದಿಲ್ಲ.‘

ಮಹಾತ್ಮರ ಯಶಸ್ಸಿನ ಕಾರಣ ಅವರ ಅಂತರಂಗದ ಸತ್ತ್ವ ಆಗಿರುತ್ತದೆಯೇ ವಿನಾ ಹೊರಗಿನ ಸೌಲಭ್ಯ–ಸಲಕರಣೆಗಳು ಕಾರಣವಲ್ಲ. ಅಂತರಂಗದ ಸತ್ತ್ವ ಎಂದರೆ ’ನಾನು ಸರಿಯಾದ ದಾರಿಯಲ್ಲಿ, ಋಜುಮಾರ್ಗದಲ್ಲಿ ನಡೆಯುತ್ತಿದ್ದೇನೆ‘ ಎಂಬ ದೃಢವಾದ ವಿಶ್ವಾಸ, ಅಂತರಂಗದ ವಿಶ್ವಾಸ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.