ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ಯಾವುದು ಸಿಹಿ?

Last Updated 17 ಮಾರ್ಚ್ 2021, 4:57 IST
ಅಕ್ಷರ ಗಾತ್ರ

ದಧಿ ಮಧುರಂ ಮಧು ಮಧುರಂ

ದ್ರಾಕ್ಷಾ ಮಧುರಾ ಸುಧಾಪಿ ಮಧುರೈವ ।

ತಸ್ಯ ತದೇವ ಹಿ ಮಧುರಂ

ಯಸ್ಯ ಮನೋ ಯತ್ರ ಸಂಲಗ್ನಮ್‌ ।।

ಇದರ ತಾತ್ಪರ್ಯ ಹೀಗೆ:

‘ಮೊಸರು ಮಧುರ; ಜೇನು, ದ್ರಾಕ್ಷಿ ಮತ್ತು ಅಮೃತವೂ ಮಧುರವೇ. ಯಾರ ಮನಸ್ಸು ಯಾವುದರಲ್ಲಿ ನೆಟ್ಟಿದೆಯೋ ಅವರಿಗೆ ಅದೇ ಮಧುರವಾಗಿರುವುದು.’

ನಮಗೆ ಯಾವುದು ಇಷ್ಟವೋ ಜಗತ್ತಿಗೆಲ್ಲ ಅದೇ ಇಷ್ಟವಾಗಬೇಕು; ನಮಗೆ ಯಾವುದು ಸರಿಯೋ ಪ್ರಪಂಚಕ್ಕೆಲ್ಲ ಅದೇ ಸರಿಯಾಗಿ ಕಾಣಬೇಕು. ಇಂಥ ಮನೋಧರ್ಮ ನಮ್ಮದು. ಆದರೆ ನಮ್ಮ ಇಂಥ ಹಠ ಎಷ್ಟು ಪೊಳ್ಳು ಎಂಬುದನ್ನು ಈ ಸುಭಾಷಿತ ಮನವರಿಕೆ ಮಾಡಿಕೊಡುತ್ತಿದೆ.

ನಮ್ಮ ನಾಲಿಗೆಗೆ ಮೊಸರು ತುಂಬ ಮಧುರವಾಗಿದೆ, ಎಂದರೆ ಸಿಹಿಯಾಗಿದೆ ಎಂದು ಅನಿಸಬಹುದು. ಇನ್ನೊಬ್ಬನಿಗೆ ಅದು ಸಪ್ಪೆಯಾಗಿ, ಜೇನು ತುಂಬ ಸಿಹಿ ಎಂದೆನಿಸಬಹುದು. ಮತ್ತೊಬ್ಬನಿಗೆ ಜೇನಿಗಿಂತಲೂ ದ್ರಾಕ್ಷಿಯೇ ಮಧುರವಾಗಿದೆ ಎಂದೆನಿಸಬಹುದು. ಮಗದೊಬ್ಬನಿಗೆ ಅಮೃತದ ಮಾಧುರ್ಯದ ಮುಂದೆ ಇವೆಲ್ಲವೂ ಸಪ್ಪೆಯಾಗಿ ತೋರಬಹುದು. ಹಾಗಾದರೆ ಮೊಸರು, ದ್ರಾಕ್ಷಿ, ಜೇನುಗಳಲ್ಲಿ ನಿಜವಾಗಿಯೂ ಮಧುರತೆ ಇಲ್ಲವೆ? ಇವರೆಲ್ಲರೂ ಸುಳ್ಳನ್ನು ಹೇಳುತ್ತಿದ್ದಾರೆಯೆ?

ಹಾಗೇನಿಲ್ಲ, ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆ; ಆದರೆ ಆ ಸತ್ಯ ಅವರ ನೆಲೆಯಿಂದ ಹೊರಟ ಸತ್ಯ, ಸಾಪೇಕ್ಷ ಸತ್ಯ. ನಮಗೆ ಯಾವುದು ಇಷ್ಟವೋ ಅದೇ ಚೆನ್ನ, ಶ್ರೇಷ್ಠ ಎಂದು ಸಾಧಿಸಲು ಹೊರಡುತ್ತೇವೆ. ಇಂಥ ಮಾನಸಿಕತೆ ನಮ್ಮ ಬಟ್ಟೆಯ ಬಣ್ಣದಿಂದ ಮೊದಲುಗೊಂಡು ನಾವು ಬೆಂಬಲಿಸುವ ರಾಜಕೀಯ ಪಕ್ಷದ ರೀತಿ–ನೀತಿಗಳವರೆಗೂ ಹಬ್ಬಿರುತ್ತದೆ.

ಸವಿತಾ ವಿಧವತಿ ವಿಧುರಪಿ ಸವಿತರತಿ

ತಥಾ ದಿನಂತಿ ಯಾಮಿನ್ಯಃ ।

ಯಾಮಿನಯಂತಿ ದಿನಾನಿ ಚ

ಸುಖದುಃಖವಶೀಕೃತೇ ಮನಸಿ ।।

ಎಂದರೆ ‘ಮನಸ್ಸು ಸುಖದುಃಖಗಳ ವಶದಲ್ಲಿರುವಾಗ ಸೂರ್ಯ ಚಂದ್ರನಾಗುತ್ತಾನೆ, ಚಂದ್ರ ಸೂರ್ಯನಾಗುತ್ತಾನೆ. ರಾತ್ರಿಗಳು ಹಗಲುಗಳಾಗುತ್ತವೆ; ಹಗಲುಗಳು ರಾತ್ರಿಗಳಾಗುತ್ತವೆ.’

ನಮ್ಮ ಮನಸ್ಸು ಸಂತೋಷದಲ್ಲಿದ್ದಾಗ ಸೋಲು ಕೂಡ ಗೆಲುವಾಗಿ ಕಾಣುತ್ತದೆ; ದುಃಖದಲ್ಲಿದ್ದಾಗ ಗೆಲುವು ಕೂಡ ಸೋಲಿನಂತೆಯೇ ಕಾಡುತ್ತದೆ, ಅಲ್ಲವೆ? ಇದನ್ನೇ ಈ ಸುಭಾಷಿತ ಹೇಳುತ್ತಿರುವುದು.

ಕಿಮಪ್ಯಸ್ತಿ ಸ್ವಭಾವೇನ ಸುಂದರಂ ವಾಪ್ಯಸುಂದರಮ್ ।

ಯದೇವ ರೋಚತೇ ಯಸ್ಮೈ ಭವೇತ್ತತ್ತಸ್ಯ ಸುಂದರಮ್‌ ।।

’ಸ್ವಭಾವತಃ ಸುಂದರವಾದದ್ದು ಸುಂದರವಲ್ಲದ್ದು ಎಂದು ಯಾವುದಾದರೂ ಇದೆಯೇನು? ಯಾರಿಗೆ ಯಾವುದು ರುಚಿಸುತ್ತದೆಯೋ ಅದೇ ಅವರಿಗೆ ಸುಂದರ’ ಎಂಬುದು ಈ ಸುಭಾಷಿತದ ತಾತ್ಪರ್ಯ.

ಹೀಗಾಗಿ ಸುಂದರ–ಕುರೂಪ, ಒಳಿತು–ಕೆಡಕು, ಸಿಹಿ–ಕಹಿ, ಸುಖ–ದುಃಖ - ಇಂಥವೆಲ್ಲವೂ ಸಾಪೇಕ್ಷ ವಿವರಗಳೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT