ಸೋಮವಾರ, ಜೂನ್ 14, 2021
24 °C

ದಿನದ ಸೂಕ್ತಿ | ಮಾನವಜನ್ಮ ದೊಡ್ಡದು

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

Prajavani

ಆಯುಷಃ ಕ್ಷಣ ಏಕೋಪಿ ನ ತುಲ್ಯಂ ಸ್ವರ್ಣಕೋಟಿಭಿಃ ।

ಸ ವೃಥಾ ನೀಯತೇ ಯೇನ ಪ್ರಮಾದಃ ಸುಮಹಾನಯಮ್‌ ।।

ಇದರ ತಾತ್ಪರ್ಯ ಹೀಗೆ:

‘ಕೋಟಿ ಹೊನ್ನುಗಳೂ ಆಯುಸ್ಸಿನ ಒಂದು ಕ್ಷಣಕ್ಕೆ ಸಮಾನವಲ್ಲ; ಅದನ್ನೇ ವ್ಯರ್ಥಗೊಳಿಸುವುದೆಂದರೆ ಬಹಳ ದೊಡ್ಡ ನಷ್ಟವೇ ಸರಿ.‘ 

ಜೀವನದಲ್ಲಿ ಬಹುಶಃ ಏನನ್ನು ಬೇಕಾದರೂ ಮರಳಿ ಪಡೆಯಬಹುದೇನೋ, ಆಯುಸ್ಸು ಒಂದನ್ನು ಹೊರತು ಪಡಿಸಿ!

ಸುಭಾಷಿತ ಇದನ್ನೇ ಹೇಳುತ್ತಿರುವುದು.

ನಾವು ಆಸ್ತಿ–ಅಂತಸ್ತು–ಅಧಿಕಾರಗಳ ಬೇಟೆಯಲ್ಲಿಯೇ ಇಡಿಯ ಜೀವನವನ್ನು ವ್ಯರ್ಥವಾಗಿ ಕಳೆಯುತ್ತಿದ್ದೇವೆ. ಹಣ–ಅಧಿಕಾರ–ಐಶ್ವರ್ಯ–ದರ್ಪಗಳನ್ನೇನೋ ಗಳಿಸುತ್ತೇವೆ; ಆದರೆ ಈ ಸಂಪಾದನೆಯಲ್ಲಿ ನಮ್ಮ ಜೀವನವನ್ನೇ ಕಳೆದುಕೊಂಡಿರುತ್ತೇವೆ. ಹೀಗಿದ್ದರೂ ಈ ವಿದ್ಯಮಾನ ನಮ್ಮ ಗಮನಕ್ಕೇ ಬಂದಿರುವುದಿಲ್ಲ. ನಾವು ಸಂಪಾದಿಸಿರುವ ಒಂದು ಕೋಟಿಯಷ್ಟು ಮಾತ್ರವೇ ಅಲ್ಲ, ಸಹಸ್ರ ಸಹಸ್ರ ಕೋಟಿ, ಅಷ್ಟೇಕೆ ನಮ್ಮ ಸಮಸ್ತ ಆಸ್ತಿಯನ್ನು ಸುರಿದರೂ ನಾವು ಕಳೆದುಕೊಂಡ ಆಯುಸ್ಸಿನಲ್ಲಿ ಒಂದೇ ಒಂದು ಕ್ಷಣವನ್ನೂ ಮತ್ತೆ ಪಡೆಯಲು ಸಾಧ್ಯವಾಗುವುದೇ ಇಲ್ಲ!

ದಿನದ ಸೂಕ್ತಿ ಕೇಳಲು: ಮಾನವಜನ್ಮ ದೊಡ್ಡದು

ಹಾಗಾದರೆ ಜೀವನದಲ್ಲಿ ಏನನ್ನೂ ಸಾಧಿಸಬಾರದೆ? ಸುಮ್ಮನೆ ಜೀವನವನ್ನು ನೋಡುತ್ತ ಕುಳಿತಿರಬೇಕೆ?

ಹಾಗೇನಿಲ್ಲ; ಜೀವನದಲ್ಲಿ ಕ್ರಿಯಾಶೀಲವಾಗಿರಬೇಕು; ಜೀವನವನ್ನು ಸವಿಯುವುದು ಎಂದರೆ ಸುಮ್ಮನೆ ಸೋಮಾರಿಯಾಗಿ ಕುಳಿತಿರುವುದಲ್ಲವಷ್ಟೆ!

ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್‌ ರಿಪುಃ ।

ನಾಸ್ತ್ಯುದ್ಯಮಸಮೋ ಬಂಧುಃ ಕೃತ್ವಾ ಯಂ ನಾವಸೀದತಿ ।।

‘ಸೋಮಾರಿತನವು ಮನುಷ್ಯನ ದೇಹದಲ್ಲಿಯೇ ಇರುವಂಥ ದೊಡ್ಡ ಶತ್ರು. ಹೀಗೆಯೇ ಕಾಯಕಕ್ಕೆ ಸಮಾನವಾದ ಬಂಧುವೂ ಇಲ್ಲ; ನಿರಂತರ ಕ್ರಿಯಾಶೀಲನಾಗಿರುವವನು ಎಂದೂ ಕೆಡುವುದಿಲ್ಲ‘ – ಎನ್ನುತ್ತಿದೆ, ಈ ಶ್ಲೋಕ.

ಜೀವನವನ್ನು ಸವಿಯಬೇಕಾದರೆ ಕ್ರಿಯಾಶೀಲವಾಗಿರಬೇಕೇ ವಿನಾ ಸೋಮಾರಿಯಾಗಿರುವುದಲ್ಲ. ಆದರೆ ಈ ಕ್ರಿಯಾಶೀಲತೆಯನ್ನು ನಾವು ಅಭಿವ್ಯಕ್ತಿಸಬೇಕಾದುದು ಎಲ್ಲಿ ಎಂಬ ವಿವೇಕವೂ ನಮಗಿರಬೇಕೆನ್ನಿ! 

ಅಕ್ಕಮಹಾದೇವಿಯ ವಚನವೊಂದನ್ನು ಇಲ್ಲಿ ನೋಡಬಹುದು: 

ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ

ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ

ಶಿವನ ನೆನೆಯಿರೇ ! ಶಿವನ ನೆನೆಯಿರೇ !

ಈ ಜನ್ಮ ಬಳಿಕಿಲ್ಲ!

ಚೆನ್ನಮಲ್ಲಿಕಾರ್ಜುನದೇವರ ದೇವನ ನೆನೆದು

ಪಂಚಮಹಾಪಾತಕರೆಲ್ಲರು ಮುಕ್ತಿವಡೆದರಂದು

ಅಕ್ಕಮಹಾದೇವಿ ಬಳಸಿರುವ ಉಪಮೆ ಕೂಡ ಸೊಗಸಾಗಿದೆ. ಉದಯ ಮತ್ತು ಅಸ್ತಮಾನ – ಎಂಬುದು ಎರಡು ಕೊಳಗಗಳಂತೆ. ಇವು ನಮ್ಮ ಅಯುಷ್ಯವನ್ನು ಅಳೆದು ಅಳೆದು ಬರಿದು ಮಾಡುತ್ತಿದೆ. ನಮ್ಮ ಜೀವನ ಎಂಬ ಜನ್ಮರಾಶಿ ಬೇಗನೆ ಬರಿದಾಗುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ಈ ರಾಶಿ ಒಮ್ಮೆ ಮುಗಿದರೆ ಮತ್ತೆ ಸಂಗ್ರಹಿಸಲು ಸಾಧ್ಯವಿಲ್ಲ. ಆದುದರಿಂದ ಶಿವನ ನೆನೆಯಿರಿ, ಶಿವನ ನೆನೆಯಿರಿ.

ಶಿವನನ್ನು ನೆನೆಯುವುದು ಎಂದರೇನು? ಶಿವ ಎಂದರೆ ಮಂಗಳ; ಒಳಿತು. ನಮ್ಮ ಜೀವನವನ್ನು ಒಳಿತಿಗೋಸ್ಕರ ಒಳಿತಿನಿಂದ ನಡೆಸುವುದೇ ಶಿವನನ್ನು ನೆನೆಯುವುದರ ತಾತ್ಪರ್ಯ. ಲೋಕಸಂಗ್ರಹಕ್ಕಾಗಿ ಜೀವನವನ್ನು ಸಿದ್ಧಗೊಳಿಸಿಕೊಳ್ಳುವುದೇ ನಮ್ಮ ಕ್ರಿಯಾಶೀಲವಾಗಬೇಕು; ಜೀವನದ ಸತ್ಯ ಶಿವ ಸುಂದರಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಅಣಿಯಾಗಬೇಕು. ಹೀಗಲ್ಲದೆ ಸಮಾಜಕ್ಕೆ ಮಾರಕವಾಗುವ ಹಾಗೆ ಜೀವನವನ್ನು ಸವೆಸುವುದು ಎಂದರೆ ಶವವಾಗಿ ಬದುಕಿದಂತೆಯೇ ಹೌದು.

ಮನುಷ್ಯಜನ್ಮ ಎನ್ನುವುದು ದೊಡ್ಡದು, ಶ್ರೇಷ್ಠವಾದುದು. ಇದನ್ನು ಹಾಳುಮಾಡಿಕೊಳ್ಳುವುದು ಬೇಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು