ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥ, ದ್ವೇಷ ತೊರೆದು ಬದುಕೋಣ: ಡಾ.ಜೆರಾಲ್ಡ್‌ ಐಸಾಕ್ ಲೋಬೋ

Last Updated 24 ಡಿಸೆಂಬರ್ 2022, 0:30 IST
ಅಕ್ಷರ ಗಾತ್ರ

ಉಡುಪಿ: ಕ್ರಿಸ್‌ಮಸ್‌ ಅಂಗವಾಗಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್‌ ಐಸಾಕ್ ಲೋಬೋ ಹಬ್ಬದ ಸಂದೇಶ ನೀಡಿದ್ದಾರೆ.

‘ಬಂದರು ಯೇಸು ಧರೆಗೆ, ಕತ್ತಲು ತುಂಬಿದ ಜಗಕೆ, ಸೂರ್ಯ ಮುಳುಗಿ ಕತ್ತಲು ಜಗತ್ತನ್ನೇ ಆವರಿಸಿದಾಗ, ಕ್ರಿಸ್‍ಮಸ್ ಎಂಬ ಬೆಳಕಿನ ಆಗಮನವಾಯಿತು. ‘ನಿನಗೆ ಬೆಳಕು ಬಂದಿದೆ ಜೆರುಸಲೇಮ್‌ ಏಳು ಪ್ರಕಾಶಿಸು’ ಎಂಬ ಪ್ರವಾದಿ ಯೇಸುವಿನ ಮಾತುಗಳು ಕ್ರಿಸ್ತಜಯಂತಿಯಂದು ಘನೀಕೃತವಾದವು. ಕತ್ತಲ ಬದುಕಿಗೆ ಬೆಳಕಿನ ಆಹ್ವಾನವಾಯಿತು. ನೀರಸ ಬದುಕಿಗೆ ಚೈತನ್ಯದ ಸೆಲೆ ಮೂಡಿತು. ನಿಸ್ತೇಜ ಜೀವನಕ್ಕೆ ಜೀವದ ಸಂಚಾರವಾಯಿತು. ದೇವ ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್‍ಮಸ್ ಮನುಜನ ಬದುಕನ್ನು ಜ್ಯೋತಿಯಾಗಿ ಆಲಂಗಿಸಿ ಪ್ರೀತಿಯ ಸಿಂಚನದ ಹಬ್ಬವಾಗಿದೆ. ಕ್ರಿಸ್‍ಮಸ್, ಬದುಕಿನ ಬೆಳಕಿನ ಹಬ್ಬ.

ನಡುರಾತ್ರಿಯಲ್ಲಿ ಕ್ರಿಸ್ತನ ಜನನವಾಯಿತು. ಜ್ಯೋತಿಯ ಉದಯವಾಯಿತು. ಸೂರ್ಯ ಮುಳುಗಿದ್ದರೂ ಅಂಧಕಾರ ಆವರಿಸಿದ್ದರೂ, ಜಗದ ರಕ್ಷಕ ಕ್ರಿಸ್ತನ ಜನನದಿಂದ ಮೂಡಿದ ಬೆಳಕು ಮನುಜರ ಬಾಳಲ್ಲಿ ಹೊಸತನ ಮೂಡಿಸಿತು. ನೊಂದು ಬೆಂದ ಮನುಜನಿಗೆ ಬೆಚ್ಚನೆಯ ಪ್ರೀತಿಯ ಅನುಭವ ನೀಡಿತು. ಮನೆಮನಗಳ ಅಂಧಕಾರ ನೀಗಿಸುವ ಬೆಳಕಾಗಿ ಪ್ರಭು ಯೇಸು ಬಂದರು. ಯೇಸು ಧರೆಗೆ ಬಂದದ್ದು ಪ್ರೀತಿಯ ಭಾಷೆಯನ್ನು ಸರ್ವರಿಗೂ ಕಲಿಸಲು, ಪ್ರೀತಿ–ವಾತ್ಸಲ್ಯದ ಸಾಮ್ರಾಜ್ಯ ನಿರ್ಮಿಸಲು, ಪ್ರೀತಿಯೇ ಪರಂಧಾಮ ಎಂಬ ಸತ್ಯ ತಿಳಿಸಲು.

ನಾವೆಲ್ಲರೂ ಬೆಳಕಿನಲ್ಲಿ ನಡೆಯುವ ಹಂಗಿನಲ್ಲಿದ್ದೇವೆ. ಕ್ರಿಸ್ತ ಜಯಂತಿ ದೈವಿ ಪ್ರೀತಿಯ ಉಗಮವಾಗಿದ್ದು, ಜಗಜ್ಯೋತಿ ಯೇಸು ಪ್ರೀತಿಯ ಕ್ಷಮೆಯ ಶಿಖರವಾಗಿದ್ದಾರೆ. ಸೂರ್ಯನ ಪ್ರಕಾಶ ಜಗದ ಸರ್ವವನ್ನೂ ಆಲಂಗಿಸುವಂತೆ, ಯೇಸು ಸರ್ವರನ್ನೂ ಆಲಂಗಿಸುತ್ತಾರೆ. ಕ್ರಿಸ್ತ ಜಯಂತಿಯ ಸಂಭ್ರಮದಲ್ಲಿ ಎಲ್ಲರೂ ದೀಪಸ್ಥಂಭದ ದೀಪಗಳಾಗಬೇಕು. ಸಹನೆ ನೆಲೆಯಾಗಬೇಕು. ಆಗ ಮಾತ್ರ ನೈಜ ಕ್ರಿಸ್ತಜಯಂತಿಯ ಸಂಭ್ರಮ ನಮ್ಮದಾಗುತ್ತದೆ.

ಸ್ವಾರ್ಥ, ದ್ವೇಷ ತೊರೆದು, ಐಕ್ಯತೆ, ಅನ್ಯೋನ್ಯತೆಯಿಂದ ಬದುಕುವ ಮೂಲಕ ಕ್ರಿಸ್ತನ ಜ್ಯೋತಿಯ ಪ್ರಭೆ ಸರ್ವರನ್ನೂ ಆಲಂಗಿಸುತ್ತದೆ. ಎಲ್ಲರಿಗೂ ಕ್ರಿಸ್ತ ಜಯಂತಿ ಹಾಗೂ ಹೊಸವರ್ಷದ ಶುಭಾಶಯಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT