ಮಂಗಳವಾರ, ಮಾರ್ಚ್ 9, 2021
31 °C
ಆಚಾರ–ವಿಚಾರ

ಸಂಸ್ಕೃತಿ ಸಂಭ್ರಮ | ಧಾರ್ಮಿಕ ಆಚರಣೆಯ ಸರಳ ಸ್ವರೂಪ

ವಿಶ್ವನಾಥ ಭಟ್ಟ ಗೋಳಿಕೈ Updated:

ಅಕ್ಷರ ಗಾತ್ರ : | |

Prajavani

ಅನಿಷ್ಟ ನಿವೃತ್ತಿ, ಇಷ್ಟಪ್ರಾಪ್ತಿ ಇದು ಜೀವರಾಶಿಯ ಧ್ಯೇಯ. ಬೇಡವಾದದ್ದರಿಂದ ಬಿಡುಗಡೆಹೊಂದಿ ಬೇಕಾದುದ್ದನ್ನು ಪಡೆದುಕೊಳ್ಳುವುದು ಪ್ರಾಣಿಪ್ರಪಂಚದ ಬಯಕೆಯಾಗಿದೆ. ಪ್ರಾಚೀನ ಭಾರತೀಯ ದಾರ್ಶನಿಕರ ಪ್ರಕಾರ ಅನಿಷ್ಟನಿವೃತ್ತಿಯಾಗಿ ಇಷ್ಟ ಪ್ರಾಪ್ತಿ ಆಗಬೇಕಾದರೆ ಭಗವದನುಗ್ರಹ ಬೇಕಾಗುತ್ತದೆ. ಭಗವದುಪಾಸನೆಯಿಂದ ಭಗವಂತನ ದಯೆ ದೊರೆಯುತ್ತದೆ. ನಾವು ಯಾವೆಲ್ಲ ಕೆಲಸ ಮಾಡುತ್ತೇವೇಯೋ ಅವುಗಳೆಲ್ಲ ಭಗವಂತನ ಉಪಾಸನೆಯೇ ಆಗಿದೆ ಎಂದು ಗ್ರಹಿಸುವವರಿಗೆ ಇಷ್ಟಾನಿಷ್ಟದ ಸ್ಪರ್ಶವೇ ಇರುವುದಿಲ್ಲ (ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಂ - ಆಚಾರ್ಯ ಶಂಕರರು). ಇದು ವೇದಾಂತ ದೃಷ್ಟಿ. ಸಾಮಾನ್ಯ ಮನುಷ್ಯನಿಗೆ ಈ ಹಂತವನ್ನು ತಲುಪಲಾಗುವುದಿಲ್ಲ.

ನಮಗೆ ಸಂಸಾರ ಬೇರೆ. ದೇವರು ಬೇರೆ. ಲೌಕಿಕ ಕೆಲಸ ಬೇರೆ, ಅಲೌಕಿಕ ಉಪಾಸನೆ ಬೇರೆಯದ್ದೆ ಆಗಿದೆ. ಆದ್ದರಿಂದ ಭಗವಂತನ ಕೃಪೆ ಬೇಕೆಂದರೆ ಅವನ ಉಪಾಸನೆ ಅನಿವಾರ್ಯ. ದೇವತಾ ಉಪಾಸನೆಯಿಂದ ತಮಗೊದಗಿದ ತೊಂದರೆ ತಾಪತ್ರಯವನ್ನು ಪರಿಹರಿಸಿಕೊಂಡು ಹೊಸ ಚೈತನ್ಯವನ್ನು ಹೊಂದಿ ಸಂಸಾರದಲ್ಲಿ, ಸಮಾಜದಲ್ಲಿ ಯಶಸ್ವಿಯಾಗಿ ಬಾಳುತ್ತಿರುವ ಅನೇಕ ಆಸ್ತಿಕರನ್ನು ನಾವು ಕಾಣುತ್ತೇವೆ. ಗೃಹ್ಯಸೂತ್ರ, ಧರ್ಮಸೂತ್ರ, ಸ್ಮೃತಿಗಳು ನಿತ್ಯ, ನೈಮಿತ್ತಿಕ, ಕಾಮ್ಯಕರ್ಮಾಚರಣೆಯ ಮೂಲಕ ಉಪಾಸನೆಯ ವಿವಿಧ ಬಗೆಯನ್ನು ತಿಳಿಸಿಕೊಡುತ್ತವೆ. ನಿತ್ಯಕರ್ಮ ಅನುದಿನವು ನಿಯತ ಕಾಲದಲ್ಲಿ ಮಾಡಬೇಕಾದ ಭಗವದುಪಾಸನೆ. ಇದನ್ನು ಜಪ, ಪೂಜೆ, ಭಜನೆಗಳ ಮೂಲಕ ನಿರ್ವಹಿಸಲು ಅವಕಾಶವಿದೆ. ಇದು ಬಹಳ ಸರಳ ವಿಧಾನ. 

ನೈಮಿತ್ತಿಕ ಕರ್ಮ ಸಾಂದರ್ಭಿಕವಾಗಿ ಒದಗುವ ಕ್ರಿಯಾ ವಿಶೇಷ. ಇದು ಕೂಡ ಉಪಾಸನಾರೂಪದ್ದೇ ಆಗಿದೆ. ಕಾಮ್ಯಕರ್ಮ ನಿತ್ಯನೈಮಿತ್ತಿಕದಿಂದ ಭಿನ್ನವಾದದ್ದು. ನಮ್ಮ ಅಪೇಕ್ಷೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ ಇರುವ ಕ್ರಿಯಾಕಲಾಪಗಳು. ಎಲ್ಲ ಪೂರ್ವೋತ್ತರ ಸಂಸ್ಕಾರ ಕ್ರಿಯೆಗಳು ಕೂಡ ಕಾಮ್ಯಕರ್ಮಗಳೇ ಆಗಿವೆ. ಇವುಗಳನ್ನೆಲ್ಲಾ ಬಹಳ ಸರಳವಾಗಿ ಮಾಡಲು ಅವಕಾಶವಿದೆ. ಆದರೆ ಈಗ ಆಚರಣೆಯ ಹಂತದಲ್ಲಿ ಡಾಂಬಿಕ ಸ್ವರೂಪವನ್ನು ಪಡೆದುಕೊಂಡಿವೆ. ದೋಷನಿವೃತ್ತಿ, ಗುಣಾಧಾನ ಸಂಸ್ಕಾರಕ್ರಿಯೆಯ ಉದ್ದೇಶ. ಆದರೆ ಇಂದು ಮೂಲಸ್ವರೂಪವನ್ನು ಕಳೆದುಕೊಂಡು ಉದ್ದೇಶವನ್ನೇ ಮರೆತಂತೆ ಕಾಣುತ್ತಲಿವೆ. ಸಂಸ್ಕಾರಕರ್ಮವು ಯಜಮಾನ ವರ್ಗದವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಪ್ರದರ್ಶಿಸುವ ರಂಗಸಜ್ಜಿಕೆಯಾಗಿವೆ. ಯಾವುದು ಮುಖ್ಯವಾದ ಭಾಗವಾಗಿತ್ತೋ ಅದರ ಆಚರಣೆ ಗೌಣವಾಗಿದೆ.

ಉದಾಹರಣೆಗೆ ವಿವಾಹ. ಅದು ಒಂದು ಸಂಸ್ಕಾರ ಕ್ರಿಯೆ. ಭವಿಷ್ಯದ ದಾಂಪತ್ಯಜೀವನಕ್ಕೆ ಬೇಕಾದ ಭದ್ರ ಬುನಾದಿಯನ್ನು ಒದಗಿಸುವ ಸಂಸ್ಕಾರ. ಈ ಸಂಸ್ಕಾರಕ್ಕೆ ಒಳಪಡುವ ದಂಪತಿಗಳು ಅನೇಕ ತಿಳಿವಳಿಕೆಯನ್ನು ಪಡೆದುಕೊಳುತ್ತಾ ತಮ್ಮನ್ನು ತಾವು ಇದರಲ್ಲಿ ತೊಡಗಿಸಿಕೊಳ್ಳಬೇಕು. ಆದರೆ ಇಂದು ಹಾಗೆ ನಡೆಯುತ್ತಿಲ್ಲ ವಿವಾಹಮಹೋತ್ಸವಕ್ಕೆ ಆಗಮಿಸಿದ ಅನುಬಂಧಿಗಳ ಸಮೂಹವನ್ನು ನೋಡಿ ಸಂಭ್ರಮಿಸುವದೇ ನವ ದಂಪತಿಗಳ ಚರ್ಯೆ ಆಗಿದೆ.

ಸ್ಮಾರ್ತಕರ್ಮವನ್ನು ಅವರವರ ಸಾಧ್ಯತೆಯ ಮೇರೆಗೆ ನಿರ್ವಹಿಸಲು ಅವಕಾಶವಿದೆ. ವಿಸ್ತಾರವಾಗಿ ಮಾಡಲು ಅವಕಾಶವಿದೆ. ಸಂಕ್ಷಿಪ್ತವಾಗಿ ಪೂರೈಸಲು ದಾರಿಯಿದೆ. ಕರ್ಮಾಚರಣೆಯನ್ನು ನಿರ್ದೇಶಿಸುವ ಜೌತಿಷ್ಕರಿಗೆ, ಧಾರ್ಮಿಕನೇತಾರರಿಗೆ ಆಚರಣೆಯ ವಿಸ್ತೃತರೂಪದ ಪರಿಚಯವಿದ್ದಂತೆ ಮೂಲೋದ್ದೇಶಕ್ಕೆ ಭಂಗ ತರದ ಪುಣ್ಯಪ್ರದವಾದ ಸಂಕ್ಷಿಪ್ತ ಆಚರಣೆಯ ವಿಧಾನವು ತಿಳಿದಿದ್ದೇ ಆಗಿದೆ.

ಉದಾಹರಣೆಗೆ, ಅತಿರುದ್ರ ಮಹಾಯಾಗ. ಇದು ಶ್ರೀರುದ್ರನ ಉಪಾಸನೆಯಾಗಿದೆ. ಬಹಳ ವೈದಿಕರಿಂದ ಬಹುದ್ರವ್ಯತ್ಯಾಗದಿಂದ ಸಾಧ್ಯವಾಗುವ ಉಪಾಸನೆ. ಅದರದ್ದೆ ಸಂಕ್ಷಿಪ್ತರೂಪ ಲಘುರುದ್ರ ಪುರಶ್ಚರಣೆ. ಅಂತೆಯೇ ಅಯುತಚಂಡೀಹೋಮ ವಿಸ್ತಾರವಾದ ಚಂಡೀ ಉಪಾಸನೆ. ಹತ್ತುಸಾವಿರ ಸಪ್ತಶತಿ ಪಾರಾಯಣ ಮಾಡಿ ಒಂದು ಸಾವಿರ ಸಪ್ತಶತಿ ಮಂತ್ರದಿಂದ ಹೋಮಿಸುವುದು. ನವಚಂಡೀಹೋಮ ಹತ್ತು ಸಪ್ತಶತಿ ಪಾರಾಯಣವನ್ನು ಮಾಡಿ ಒಂದು ಸಪ್ತಶತಿ ಮಂತ್ರದಿಂದ ಹೋಮವನ್ನು ಮಾಡುವಂಥದ್ದು. ಇದು ಸಂಕ್ಷಿಪ್ತವಾದ ಚಂಡೀ ಉಪಾಸನೆ. ಹೀಗೆಯೇ ಎಲ್ಲಾ ದೇವತೆಗಳ ಉಪಾಸನೆಯಲ್ಲು ಸಂಕ್ಷಿಪ್ತವಾದ ವಿಧಾನಗಳು ಇವೆ. ***

ಇಂದಿನ ಕಾಲದಲ್ಲಿ ಯಜಮಾನ ವರ್ಗದವರಿಗೂ ಬಹಳ ದಿನದವರೆಗೆ ದೀಕ್ಷಾಬದ್ಧರಾಗಿ ಇದ್ದು ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವುದು ಕಷ್ಟ ಸಾಧ್ಯವೇ ಆಗಿದೆ. ಅಷ್ಟಲ್ಲದೇ ಬಹಳ ದ್ರವ್ಯವನ್ನು, ಅನೇಕ ವೈದಿಕರನ್ನು ಹೊಂದಿಸಿಕೊಂಡು ಮಾಡುವ ಕಾರ್ಯಕ್ರಮವನ್ನು ವಿಧಿವತ್ತಾಗಿ ಪೂರೈಸುವುದು ಸುಲಭವೇನಲ್ಲ. ಶಾಸ್ತ್ರೋಕ್ತವಾಗಿ ಕರ್ಮವು ಸಂಪನ್ನಗೊಳ್ಳದಿದ್ದರೆ ಕಲ್ಪೋಕ್ತಫಲ ಪ್ರಾಪ್ತಿಯಾಗುವುದಿಲ್ಲ. ಆಗ ಅನಿಷ್ಟನಿವೃತ್ತಿಯಾಗುವುದಿಲ್ಲ. ಇಷ್ಟಪ್ರಾಪ್ತಿಯು ಆಗಲಾರದು. ಕರ್ಮಾಚರಣೆಯ ಉದ್ದೇಶವೇ ವ್ಯರ್ಥವಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು