ಅರೆಮಲೆನಾಡಿನ ಮನೆಗಳಲ್ಲಿ ‘ಮಾಲಿಂಗನ ಬಳ್ಳಿ’ ಹೊಕ್ಕಿತೆಂದರೆ ದೀಪಾವಳಿ ಹಬ್ಬ ಶುರುವಾಯಿತೆಂತಲೇ. ಬಚ್ಚಲು ಮನೆಯೊಳಗಿನ ಹಂಡೆ, ಹೊಗೆ ಹೋಗುವ ಪೈಪು, ನೀರು ಕಾಯಿಸುವ ಒಲೆ ಕೆಮ್ಮಣ್ಣು (ಊರ್‌ಮಂಜು), ಸುಣ್ಣ ಪೂಸಿಕೊಂಡು ‘ಲಕಲಕ’ ಹೊಳೆಯುತ್ತಿದ್ದರೆ ಹಬ್ಬದ ಸಂಭ್ರಮ ಮೈದುಂಬಿದಂತೆಯೇ... ಬರೋಬ್ಬರಿ ಐದು ದಿನಗಳ ಆಚರಣೆಯ ಹೊತ್ತು ತರುವ ‘ನೀರು ತುಂಬುವ ಹಬ್ಬ’ (ಗಂಗೆ ತುಂಬುವ ಹಬ್ಬ) ಮಧ್ಯ ಕರ್ನಾಟಕದ ದೀವಟಿಗೆಯ ಹಬ್ಬಕ್ಕೆ ಮುನ್ನುಡಿ ಬರೆಯುತ್ತದೆ.

ಅಟ್ಟದ ಮೇಲೆ ಪೇರಿಸಿಟ್ಟ ತಾಮ್ರದ ಹಂಡೆಗಳಿಗೆ ವರ್ಷಕ್ಕೊಮ್ಮೆ ಹುಣಸೆಹಣ್ಣು, ಉಪ್ಪು ಬೆರೆಸಿಕೊಂಡು ಮೈಉಜ್ಜಿಸಿಕೊಳ್ಳುವ ಭಾಗ್ಯ. ನೀರು ಕಾಯಿಸುವ ಹಂಡೆ, ತಪ್ಪಲಿ, ಕೊಳಗಗಳು ಮಾಲಿಂಗನ ಬಳ್ಳಿ, ಹಿಂಡ್ಲೆಕಾಯಿ ಬಳ್ಳಿ ಸುತ್ತಿಕೊಂಡು, ಸುಣ್ಣ– ಕೆಮ್ಮಣ್ಣು ಬಳಿದುಕೊಂಡು ಮರುದಿನದ ‘ನೀರು ಎರೆದುಕೊಳ್ಳುವ ಹಬ್ಬಕ್ಕೆ’ (ಬೂರೇ ಹಬ್ಬ, ಅಭ್ಯಂಜನ ಸ್ನಾನ) ಅಣಿಯಾಗುತ್ತವೆ. ಉತ್ರಾಣಿ ಕಡ್ಡಿ, ಬಿದಿರು ಸೊಪ್ಪೂ ಹಂಡೆಯ ಅಕ್ಕಪಕ್ಕ ಹಾಜರಿ ಹಾಕುತ್ತವೆ. ಮಾರನೇ ದಿನ ಮನೆಮಂದಿಗೆಲ್ಲ ಬಿಸಿ ಎಣ್ಣೆಯ ನಂಟು. ದೇಹ ಪೂರ್ತಿ ಎಣ್ಣೆಯಲ್ಲಿ ಮಿಂದೆದ್ದು, ತಲೆಗೆ ಹಾಲು, ತುಪ್ಪ ಹಾಕಿಕೊಂಡು ಬಿಸಿ ನೀರ ಮೈಗೆ ಸೋಕಿಸಿದರೆ ‘ಬೂರೇ ಹಬ್ಬ’ ಸಂಪನ್ನ. ಮಾಗಿಚಳಿಯ ಹೊಸ್ತಿಲಲ್ಲಿ ಬರುವ ಈ ಸಂಪ್ರದಾಯ ದೇಹ ರಕ್ಷಣೆಯ ಪಾಠವನ್ನೂ ಹೇಳುತ್ತದೆ.

ನರಕ ಚತುರ್ದಶಿಯ ಹಿಂದಿನ ದಿನ ಅಂದರೆ ತ್ರಯೋದಶಿಯ ದಿನದ ಈ ಆಚರಣೆಗೆ ‘ಮಾಲಿಂಗನ ಬಳ್ಳಿ’ ಇರಲೇ ಬೇಕು. ಅದಿಲ್ಲದಿದ್ದರೆ ಆಚರಣೆ ಅಪೂರ್ಣ ಎಂತಲೇ. ನಗರ, ಪಟ್ಟಣಗಳಲ್ಲಿ ವಾಸಿಸುವವರೂ ಆ ದಿನ ಬಳ್ಳಿಯನ್ನು ಹುಡುಕಿಕೊಂಡು ತರುವುದುಂಟು. ಈಗೀಗ ಮಾರುಕಟ್ಟೆಗೂ ಈ ಬಳ್ಳಿ ಲಗ್ಗೆ ಇಟ್ಟಿದೆ. ಅಷ್ಟರ ಮಟ್ಟಿನ ಪ್ರಭಾವ ‘ಮಾಲಿಂಗನ ಬಳ್ಳಿ’ಯದ್ದು. ಬಳ್ಳಿಯಲ್ಲಿ ಬಿಡುವ ಕಾಯಿಯ ಒಳಭಾಗದಲ್ಲಿ ಶಿವಲಿಂಗದ ಪ್ರತಿರೂಪ ಒಡಮೂಡಿರುತ್ತದೆ. ಬಹುತೇಕರು ಇದನ್ನು ‘ಶಿವಲಿಂಗನ ಬಳ್ಳಿ’ ಎಂತಲೇ ಕರೆಯುವರು. ಗಂಗೆಗೆ ಮಾಂಗಲ್ಯ ಕಟ್ಟುವ ಸಂಕೇತವಾಗಿ ಬಳ್ಳಿಯನ್ನು ಹಂಡೆಯ ಕೊರಳಿಗೆ ಕಟ್ಟಲಾಗುತ್ತದೆ.

ಬಳ್ಳಿಯಲ್ಲಿ ಬಿಡುವ ಕಾಯಿ ಅತೀ ಕಹಿಯಾಗಿದ್ದು, ಔಷಧೀಯ ಗುಣವೂ ಅದಕ್ಕಿದೆ. ಹಂಡೆ ಬಿಸಿಯಾದಾಗ ಬಳ್ಳಿಯೂ ಬಿಸಿಯಾಗಿ ಹಿತವಾದ ಆವಿಯನ್ನು ಹೊರಸೂಸುತ್ತದೆ. ಈ ಆವಿ ದೇಹಕ್ಕೆ ಸೋಂಕುವುದರಿಂದ ಆರೋಗ್ಯಪೂರ್ಣ ಸ್ನಾನ ಎನಿಸಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.