ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟಕ್‍ನ ದೇವಿ ಮೃಣ್ಮಯಿಗೆ ಮೀನಿನ ನೈವೇದ್ಯ!

Last Updated 2 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ನವರಾತ್ರಿ ಎಂದರೆ ಶಕ್ತಿಯ ಆರಾಧನೆ, ಭಾರತದೆಲ್ಲೆಡೆ ಸಡಗರ-ಸಂಭ್ರಮದಿಂದ ಆಚರಿಸುವ ಹಬ್ಬ. ಒಡಿಶಾದ ಕಟಕ್‍ನಲ್ಲಿ ನವರಾತ್ರಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹದಿನಾರನೇ ಶತಮಾನದಲ್ಲಿ ಶ್ರೀ ಚೈತನ್ಯ ಮಹಾಪ್ರಭು, ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಬಂದಾಗ ಈ ದೇವಿಪೂಜೆಯ ಸಂಪ್ರದಾಯ ಆರಂಭವಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ. ಪೂರ್ವ ಭಾರತದೆಲ್ಲೆಡೆ ದೇವಿಪೂಜೆ ಪ್ರಮುಖವಾದರೂ ಕಟಕ್‍ನಲ್ಲಿಬಹಳ ವಿಶಿಷ್ಟ. ಇಲ್ಲಿನ ದೇವಿ ಸಕಲಾಭರಣಭೂಷಿತೆ ಮತ್ತು ಮೀನು ಪ್ರಿಯೆ!

ಮಸಾಲೆ ಮೀನು

ಸಾಮಾನ್ಯವಾಗಿ ದೇವಿಗೆ ಸಿಹಿತಿಂಡಿ, ಹೂವು, ಹಣ್ಣುಗಳನ್ನು ನೈವೇದ್ಯವಾಗಿ ಇಡುವುದು ರೂಢಿ. ಆದರಿಲ್ಲಿ ಭೋಗ್ ಆಗಿ ದೇವಿಗೆ ಮೀನನ್ನು ಅರ್ಪಿಸಲಾಗುತ್ತದೆ. ಈ ಪದ್ಧತಿ 1817ರಿಂದ ಜಾರಿಯಲ್ಲಿದೆ ಎನ್ನುತ್ತಾರೆ ಸ್ಥಳೀಯರು. ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಕಟಕ್‍ನಲ್ಲಿರುವ ಅಷ್ಟ ಶಂಭು ದೇಗುಲದ ಹತ್ತಿರ ಪುಟ್ಟ ಗುಡಿಸಿಲಿನಲ್ಲಿ ದತ್ತ ಎಂಬ ಬೆಂಗಾಲಿ ಕುಟುಂಬದವರು ವಾಸವಾಗಿದ್ದರು. ಅವರ ಬಳಿಯಿದ್ದ ದೇವಿಯ ಮಣ್ಣಿನ ಮೂರ್ತಿಗೆ ದಸರೆಯಂದು ವಿಶೇಷ ಪೂಜೆ ಸಲ್ಲುತ್ತಿತ್ತು. ಬೆಂಗಾಲಿಗಳಿಗೆ ಮೀನೆಂದರೆ ಎಲ್ಲಿಲ್ಲದ ಪ್ರೀತಿ. ತಮಗಿಷ್ಟವಾದ ಹುರಿದ ಮೀನು, ಬೇಳೆ, ತರಕಾರಿಯನ್ನು ಮಸಾಲೆಯೊಂದಿಗೆ ಬೆರೆಸಿ ದೇವಿಗೂ ನೈವೇದ್ಯವಾಗಿ ಇಟ್ಟರು. ಸುತ್ತಮುತ್ತಲಿನ ಜನ ಪೂಜೆಗೆ ಬಂದವರು ಇದನ್ನು ನೈವೇದ್ಯವಾಗಿ ಸ್ವೀಕರಿಸಿದರು. ದೇವಿಪೂಜೆಯ ಜತೆ ಅದೇ ಇಂದಿಗೂ ಮುಂದುವರಿದಿದೆ!

ಹತ್ತೊಂಬತ್ತನೇ ಶತಮಾನದವರೆಗೆ ದೇಗುಲದ ಆವರಣದಲ್ಲಿ ದೇವಿಯ ಮೆರವಣಿಗೆಯ ಜವಾಬ್ದಾರಿ ದರ್ಪಾನಿ ರಾಜವಂಶಸ್ಥರಿಗೆ ಸೇರಿತ್ತು. ತದನಂತರ ಜನಸಾಮಾನ್ಯರೆಲ್ಲರೂ ಸೇರಿ ಆಚರಿಸುವ ಸಾಮೂಹಿಕ ಪೂಜೆಯಾಗಿ ಬದಲಾಗಿ ಅತ್ಯಂತ ಜನಪ್ರಿಯವಾಗಿದೆ. ಇಲ್ಲಿನ ಪೆಂಡಾಲ್‍ಗಳಲ್ಲಿ ಕೂರಿಸುವ ದೇವಿ, ಬಂಗಾಳದ ದೇವಿಗಿಂತ ಭಿನ್ನ. ಅಗಲ ಮುಖ, ದೊಡ್ಡ ನಗು, ಸೌಮ್ಯ ಕಳೆಯ ದೇವಿಯರು. ಕಣ್ಣುಗಳಲ್ಲೂ ರೌದ್ರತೆ ಇಲ್ಲ, ಪ್ರಸನ್ನತೆಯೇ ಹೆಚ್ಚು!

ಮೀನಿನ ಖಾದ್ಯ
ಮೀನಿನ ಖಾದ್ಯ

ಮಚ್ಛ ಭೋಗ್

ದಶಮಿಯಂದು ದಹಿ ಪಖಾಲ್ (ಜೀರಿಗೆ, ಪುದಿನಾ, ಈರುಳ್ಳಿ ಹಾಕಿದ ಮೊಸರನ್ನ) ನೈವೇದ್ಯವಾದರೆ ನವಮಿಯಂದು ಮಚ್ಛ ಭೋಗ್! ಕಟಕ್‍ನ ಚಾಂದಿನಿ ಚೌಕ್ ಮತ್ತು ಅಲಿಶಾ ಬಜಾರ್‌ನಲ್ಲಿ ಸಾವಿರಾರು ಭಕ್ತಾದಿಗಳಿಗೆ ಈ ಪ್ರಸಾದವನ್ನು ಹಂಚಲಾಗುತ್ತದೆ. ರೋಹಿ ಮತ್ತು ಭಕುರಾ ಎಂಬ ಪ್ರಭೇದಗಳ ಮೀನುಗಳನ್ನು ಪ್ರಸಾದಕ್ಕಾಗಿ ಬಳಸಲಾಗುತ್ತದೆ. ಜನರ ಸಂಖ್ಯೆ ಕಡಿಮೆ ಇದ್ದಾಗ ಕಟಕ್‍ನ ಹತ್ತಿರದಲ್ಲಿರುವ ನರಾಜ್ ಹಳ್ಳಿಯಿಂದ ಮೀನುಗಾರರು ಮೀನುಗಳನ್ನು ಪೂರೈಸುತ್ತಿದ್ದರು. ಅಷ್ಟಮಿಯಂದು ದೇವಿಯ ಸಿಂಧೂರವನ್ನು ತೆಗೆದುಕೊಂಡು ತಮ್ಮ ದೋಣಿಗೆ ಹಾಕಿ ಪೂಜಿಸಿದರೆ ಅದೃಷ್ಟ ಒಲಿಯುತ್ತದೆ, ತಾಯಿ ರಕ್ಷಣೆ ನೀಡುತ್ತಾಳೆ ಎಂಬ ನಂಬಿಕೆ ಅವರಲ್ಲಿದೆ. ಈಗ ಹೆಚ್ಚಿದ ಬೇಡಿಕೆಯಿಂದ (ಮೂರರಿಂದ ನಾಲ್ಕು ಕ್ವಿಂಟಲ್ ಮೀನು) ಸಾಂಕೇತಿಕವಾಗಿ ಇಪ್ಪತ್ತೈದು ಕೆ.ಜಿ. ಮೀನು, ಸಾವಿರದೊಂದು ರೂಪಾಯಿ ಕಾಣಿಕೆ ನೀಡಿ ಸಿಂಧೂರವನ್ನು ಆಶೀರ್ವಾದವಾಗಿ ಪಡೆಯುತ್ತಾರೆ. ಪ್ರಸಾದಕ್ಕೆ ಬೇಕಾದ ಮೀನನ್ನು ಭಕ್ತಾದಿಗಳಿಂದ ಕಾಣಿಕೆಯ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.

ಈ ಪ್ರಸಾದವನ್ನು ಮಾಡುವಾಗ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸಲಾಗುತ್ತದೆ. ಏಳು ಜನ ಬ್ರಾಹ್ಮಣರು ಸ್ನಾನ ಮಾಡಿ, ಹೊಸ ಧೋತಿ ಚದ್ದರ್ ತೊಟ್ಟು, ಕೆಂಪು/ ಬಿಳಿ ವಸ್ತ್ರದಿಂದ ತಮ್ಮ ಮುಖವನ್ನು ಮರೆಮಾಡಿ (ದೇವಿಗೆ ಅಪಚಾರವಾಗದಂತೆ) ಪ್ರಸಾದ ತಯಾರಿಸುತ್ತಾರೆ. ಸಂಜೆ ದೇವಿಗೆ ನೈವೇದ್ಯ ಅರ್ಪಣೆಯಾಗುವವರೆಗೆ ಹೀಗೆ ಇದ್ದು ನಂತರ ಪ್ರಸಾದ ಸೇವನೆಯ ಕಾರ್ಯಕ್ರಮ. ಹಿಂದಿನ ವರ್ಷ ಕೋವಿಡ್‌ನಿಂದಾಗಿ ಈ ಪ್ರಸಾದ ನಿಲ್ಲಿಸಲಾಗಿತ್ತು. ದೇವಿಯ ದರ್ಶನಕ್ಕೆ ಆನ್‍ಲೈನ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಸುರಕ್ಷಾ ಕ್ರಮಗಳನ್ನು ಅನುಸರಿಸಿ ದೇವಿಯ ಪೂಜೆಗೆ ಸಿದ್ಧತೆ ನಡೆದಿದೆ.

ತರಕಾಸಿ

ಬೆಳ್ಳಿಯ ನಗರ ಎಂದೇ ಪ್ರಸಿದ್ಧವಾದ ಒಡಿಶಾದ ರಾಜಧಾನಿ ಕಟಕ್‍ನಲ್ಲಿ ಬೆಳ್ಳಿಯ ಸೂಕ್ಷ್ಮ ತಂತಿಗಳನ್ನು ಬಳಸಿ ನಾಜೂಕಾದ ಆಕರ್ಷಕ ಆಭರಣ ತಯಾರಿಸುವ ವಿಶಿಷ್ಟ ಕಲೆ ತರಕಾಸಿ. ಲೋಹದ ಎಳೆಗಳನ್ನು ವಿವಿಧ ವಿನ್ಯಾಸಗಳಲ್ಲಿ ಬಲೆಯಂತೆ ಹರಡಿ ತಯಾರಾಗುವ ಈ ಆಭರಣಗಳು ನೋಡಲು ಸುಂದರ ಮತ್ತು ಧರಿಸಲು ಹಗುರ. ಒಂದು ಪೆಂಡಾಲ್‍ನಲ್ಲಿ ಬೆಳ್ಳಿಯ ಕಿರೀಟ, ಪ್ರಭಾವಳಿ, ಅಲಂಕಾರ ಮಾಡಲು ಸುಮಾರು ಇಪ್ಪತ್ತರಿಂದ ಮೂವತ್ತು ಕಲಾವಿದರಿಗೆ ಸುಮಾರು ಒಂದು ವರ್ಷ ದಿನಕ್ಕೆಂಟು ತಾಸಿನ ಕೆಲಸ ಬೇಕು. ದೇವಿಯ ಕಿರೀಟ ಇಪ್ಪತ್ತು ಕೆ.ಜಿ. ತೂಕವಿದ್ದರೆ, ಧರಿಸಿರುವ ಆಭರಣ (ಕಿರೀಟ, ಹಾರ, ಬಾಜುಬಂದಿ, ಸೊಂಟದ ಪಟ್ಟಿ, ಬಳೆ ಇತ್ಯಾದಿ) ಐವತ್ತು ಕೆ.ಜಿ., ಸುತ್ತಲಿನ ಪ್ರಭಾವಳಿ ಮೂನ್ನೂರರಿಂದ ನಾನೂರು ಕೆ.ಜಿ.!

ತರಕಾಸಿ ಸುಮಾರು ಐದು ಶತಮಾನಗಳಿಂದ ಒಡಿಶಾದಲ್ಲಿ ಪ್ರಚಲಿತವಾಗಿರುವ, ಧಾರ್ಮಿಕ ಆಯಾಮವನ್ನೂ ಹೊಂದಿರುವ ಕಲಾಪ್ರಕಾರ. ಹೆಚ್ಚಿನವರು ಹೇಳುವಂತೆ, ಮೊಘಲರ ಆಳ್ವಿಕೆಯ ಕಾಲದಲ್ಲಿ ಈ ಕಲಾಪ್ರಕಾರ ಆರಂಭವಾಯಿತು. ಇನ್ನು ಕೆಲವು ಮೂಲಗಳು, ಕ್ರಿ.ಪೂ 2500ರಲ್ಲಿ ಮೆಸಪಟೋಮಿಯಾ ಮತ್ತು ಈಜಿಪ್ಟ್‌ನಿಂದ ನಡೆಯುತ್ತಿದ್ದ ವಾಣಿಜ್ಯ ವ್ಯವಹಾರಗಳಿಂದ ಈ ಆಭರಣ ತಯಾರಿಕಾ ವಿಧಾನ ಏಷ್ಯಾ ಖಂಡದಲ್ಲೂ ಜನಪ್ರಿಯವಾಯಿತು, ಈಗಲೂ ಗ್ರೀಕ್ ಮತ್ತು ಭಾರತೀಯ ಆಭರಣ ವಿನ್ಯಾಸಗಳಿರುವ ಸಾಮ್ಯತೆ ಇದಕ್ಕೆ ಸ್ಪಷ್ಟ ನಿದರ್ಶನ ಎನ್ನುತ್ತವೆ.

ಕಟಕ್‍ನಲ್ಲಿರುವ ನೂರಕ್ಕೂ ಹೆಚ್ಚು ಕುಟುಂಬಗಳು ತಲೆತಲಾಂತರದಿಂದ ಇದನ್ನು ತಮ್ಮ ವೃತ್ತಿಯನ್ನಾಗಿ ಸ್ವೀಕರಿಸಿವೆ. ಸಾಂಪ್ರದಾಯಿಕವಾಗಿ ಚಿನ್ನದ ಕೆಲಸ ಮಾಡುವ ಅಕ್ಕಸಾಲಿಗರು ಇವರಾಗಿದ್ದು ಒರಿಯಾ ಭಾಷೆಯಲ್ಲಿ ಇವರನ್ನು ರೂಪ್ಯಕರಾಸ್ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ಹಿರಿಯರಿಂದ ಶಿಕ್ಷಣ ಪಡೆಯುವ ಈ ಕಲಾವಿದರಲ್ಲಿ ಹೆಚ್ಚಿನವರು ಬನಿಯಾಗಳು. ಆಭರಣಗಳನ್ನು ಕೆತ್ತನೆ/ ಕುಸುರಿಯಿಂದ ಮಾಡಲಾಗುವುದಿಲ್ಲ. ಬದಲಾಗಿ ಕೂದಲೆಳೆಯಷ್ಟು ಸೂಕ್ಷ್ಮ ತಂತಿಯನ್ನು ಸ್ವಲ್ಪ ಸ್ವಲ್ಪವೇ ಬಾಗಿಸಿ, ಜೋಡಿಸಿ ಬೇಕಾದ ರೂಪವನ್ನು ನೀಡಲಾಗುತ್ತದೆ.

ಮೊದಲು ಹಾಳೆಯ ಮೇಲೆ ಬೇಕಾದ ಚಿತ್ರ ಬಿಡಿಸಲಾಗುತ್ತದೆ. ನಂತರ ದಪ್ಪ ತಂತಿಗಳಿಂದ ಹೊರ ವಿನ್ಯಾಸ ಮಾಡಲಾಗುತ್ತದೆ. ಅದರೊಳಗೆ ಸಣ್ಣ ತಂತಿಗಳನ್ನು ಕೈಯಿಂದ ಕೂರಿಸಿ ಬೆಂಕಿಯ ಶಾಖದಿಂದ ಜೋಡಿಸಲಾಗುತ್ತದೆ. ಸಾಕಷ್ಟು ಶ್ರಮ, ಸಮಯ, ಸಹನೆ, ನೈಪುಣ್ಯ ಬೇಡುವ ಕೆಲಸವಿದು! ಚಕ್ರ, ಹೂವು, ಶಂಖ, ರಥ, ಮೀನು, ಹಕ್ಕಿ ಕೆಲವು ಜನಪ್ರಿಯ ವಿನ್ಯಾಸಗಳು. ಒಡಿಸ್ಸಿ ನೃತ್ಯ ಕಲಾವಿದರು ಪ್ರದರ್ಶನ ನೀಡುವಾಗ ಈ ಆಭರಣಗಳನ್ನು ಧರಿಸುವುದು ಸಂಪ್ರದಾಯ. ಒರಿಯಾ ವಧುಗಳಲ್ಲಿ ತರಕಾಸಿ ಕಾಲುಂಗುರ ಮತ್ತು ಗೆಜ್ಜೆ ಪವಿತ್ರ ಸಂಕೇತಗಳು. ಒಡಿಶಾದ ಜನಜೀವನದಲ್ಲಿ ಈ ಆಭರಣಗಳು ಮಹತ್ವದ ಸ್ಥಾನ ಪಡೆದಿವೆ.

ಮಾಡಿದ್ದು ಮಣ್ಣಿನಲ್ಲಿ, ತಿನ್ನುವುದು ಸಾಮಾನ್ಯ ಜನರ ಆಹಾರ ಮೀನು, ಅಲಂಕಾರಕ್ಕೆ ಬೆಳ್ಳಿಯೇಕೆ ಎಂದರೆ ‘ದೇವಿ ಮಾ, ನಮ್ಮೆಲ್ಲರ ಅಮ್ಮ. ಅವಳ ಮಡಿಲಲ್ಲಿ ಬೆಳೆಯುವವರು ನಾವು. ಅಮ್ಮನಿಗೆ ಅಲಂಕಾರ ಬೇಡವೇ? ನಮ್ಮ ಸಾಂಪ್ರದಾಯಿಕ ಕಲೆಯ ಮೂಲಕ ಭಕ್ತಿ-ಪ್ರೀತಿಯ ಸಿಂಗಾರ ಇದು. ಎಷ್ಟೇ ಕಷ್ಟವಾದರೂ ಸರಿ ಅಮ್ಮನಿಗೆ ಅಲಂಕಾರ ತಪ್ಪಿಸುವುದಿಲ್ಲ!’ ಎನ್ನುತ್ತಾರೆ. ದಶಮಿ ನಂತರ ಮಣ್ಣಿನ ಮೂರ್ತಿಯನ್ನು ಪುರಿಘಾಟ್ ಬಳಿ ಮೆರವಣಿಗೆಯಲ್ಲಿ ಒಯ್ದು ನದಿಯಲ್ಲಿ ವಿಸರ್ಜಿಸುವಾಗ ಕೈಮುಗಿದು ‘ಮುಂದಿನ ಬಾರಿ ತಪ್ಪದೇ ಬಾರಮ್ಮಾ’ ಎಂದು ಪ್ರಾರ್ಥಿಸುವ ಇವರ ಪಾಲಿಗೆ ದಸರೆ, ಅಮ್ಮನ ಹಬ್ಬ!

ಅಲಂಕಾರ ಭೂಷಿತೆ

ಜೇಡಿ ಮಣ್ಣಿನಲ್ಲಿ ತಯಾರಾದ ಸುಮಾರು ನೂರೈವತ್ತಕ್ಕೂ ಹೆಚ್ಚು ದೇವಿಯರನ್ನು ನವರಾತ್ರಿಯ ಮೊದಲ ದಿನ ದೊಡ್ಡ-ಸಣ್ಣ ಪೆಂಡಾಲ್‍ಗಳಲ್ಲಿ (ಮೆಧೊ) ಅಲಂಕಾರ ಮಾಡಿ ಶಾಸ್ತ್ರೋಕ್ತವಾಗಿ ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಇದರಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ದೊಡ್ಡ ಪೆಂಡಾಲ್‍ಗಳಲ್ಲಿ ಬೆಳ್ಳಿಯ ಅಲಂಕಾರವಿರುತ್ತದೆ. ಜಗಮಗಿಸುವ ಈ ಪೆಂಡಾಲ್‍ಗಳಲ್ಲಿ ಇರುವುದೆಲ್ಲವೂ ಬೆಳ್ಳಿ-ಬಂಗಾರದ ಅಲಂಕಾರಗಳು!

ಬೆಳ್ಳಿಯ ನಗರ ಎಂದೇ ಪ್ರಸಿದ್ಧವಾಗಿರುವ, ದುರ್ಗೆ ತಮ್ಮನ್ನು ಕಾಯುವ ಅಮ್ಮ ಎಂದು ನಂಬಿರುವ ಕಟಕ್‍ನಲ್ಲಿ ಬೆಳ್ಳಿ ಬೆಲೆ ಎಷ್ಟೇ ಹೆಚ್ಚಾದರೂ ದೇವಿಯ ಅಲಂಕಾರ ಮಾತ್ರ ಪೈಪೋಟಿಯಲ್ಲಿ ನಡೆಯುತ್ತದೆ. ದೇವಿಯ ವಿಶೇಷ ಅಲಂಕಾರ ಚಾಂದಿಮೇಧಾ. ದೇವಿಯ ಕಿರೀಟ ಮತ್ತು ಸುತ್ತಲಿರುವ ಪ್ರಭಾವಳಿಗೆ ಈ ಹೆಸರು. ಇದರೊಂದಿಗೆ ವಿವಿಧ ಸನ್ನಿವೇಶ, ಸ್ತಬ್ಧ ಚಿತ್ರದ ಹಿನ್ನೆಲೆಯಲ್ಲಿ ದೇವಿಯನ್ನು ಸ್ಥಾಪಿಸಲಾಗುತ್ತದೆ. ದೇವಿಯ ಮೂರ್ತಿ ಮಣ್ಣಿನದ್ದಾದರೂ ಕಟಕ್‍ನ ವಿಶಿಷ್ಟ ‘ಕಟಕಿ ತರಕಾಸಿ’ ವಿಧಾನದಲ್ಲಿ ತಯಾರಾದ ಈ ಅಲಂಕಾರಿಕ ಸಾಮಗ್ರಿಗಳು ಬೆಳ್ಳಿಯವು. ಅಲಂಕಾರಭೂಷಿತೆ ದೇವಿಯ ದರ್ಶನಕ್ಕೆ ನಿತ್ಯ ಸಾವಿರಾರು ಜನ ಸರದಿಯಲ್ಲಿ ನಿಂತು ಕಾಯುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT