ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿಯ ಮಹಾತತ್ತ್ವ

Last Updated 21 ಆಗಸ್ಟ್ 2020, 15:34 IST
ಅಕ್ಷರ ಗಾತ್ರ

ಮತ್ತೊಮ್ಮೆ ಗಣೇಶನ ಹಬ್ಬ ಬಂದಿದೆ. ಆದರೆ ಈ ಸಲದ ಹಬ್ಬ ಎಂದಿನಂತೆ ಬಂದಿಲ್ಲ. ಹಬ್ಬವನ್ನು ಧೈರ್ಯವಾಗಿ ಆಚರಿಸುವುದಕ್ಕೇ ಅಡ್ಡಿಯಾಗಿರುವ ಕಾಲದಲ್ಲಿ ಹಬ್ಬ ಬಂದಿದೆ. ಒಂದು ವಿಧದಲ್ಲಿ ಇದೇ ಈ ಬಾರಿಯ ಹಬ್ಬದ ಆಚರಣೆಗೊಂದು ಸಾರ್ಥಕತೆಯನ್ನೂ ತಂದಿದೆ ಎಂದೂ ಅರ್ಥಮಾಡಿಕೊಳ್ಳಲಾದೀತು!

ಗಣೇಶ ಎಂದರೆ ಯಾರು? ವಿಘ್ನಹರ್ತೃ; ಎಂದರೆ ವಿಘ್ನಗಳನ್ನು ನಾಶಮಾಡುವವನು. ನಮಗೆ ಈಗ ಎದುರಾಗಿರುವ ಮಹಾವಿಘ್ನವನ್ನು ನಿವಾರಿಸಬೇಕಾದವನು ಅವನೇ ತಾನೆ? ಅವನು ವರಸಿದ್ಧಿವಿನಾಯಕನೂ ಹೌದು. ಕೇಳಿದ ಕೂಡಲೇ ವರವನ್ನು ನೀಡಬಲ್ಲವನು. ಈಗ ಎದುರಾಗಿರುವ ಕಷ್ಟಪರಂಪರೆಗಳನ್ನು ನಿವಾರಿಸು ಎಂಬ ನಮ್ಮ ಪ್ರಾರ್ಥನೆಗೆ ವರವನ್ನು ಕರುಣಿಸಬೇಕಾದವನು ಅವನೇ! ನಮ್ಮ ಶ್ರದ್ಧಾಪೂರ್ವಕ ವ್ರತಸಂಕಲ್ಪವನ್ನು ಅವನು ಈಡೇರಿಸುತ್ತಾನೆ ಎಂಬುದೇ ನಮ್ಮ ಶ್ರದ್ದಾಭಕ್ತಿಗಳ ಭಾಗವೇ ಆಗಿದೆ.

ಗಣೇಶನ ಕಲ್ಪನೆ ತುಂಬ ಪ್ರಾಚೀನವಾದುದು; ವೇದಗಳಲ್ಲಿಯೇ ಅವನ ಮೂಲವನ್ನು ವಿದ್ವಾಂಸರು ಗುರುತಿಸಿದ್ದಾರೆ:

ಗಣಾನಾಂ ತ್ವಾ ಗಣಪತಿಗ್ಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಮ್ ।
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಸ್ಸೀದ ಸಾದನಮ್‌ ।।

ಈ ಮಂತ್ರದಲ್ಲಿರುವ ದೇವತೆ ಅದು ಗಣಪತಿಯೇ ಎಂದು ಕೆಲವರು, ಅಲ್ಲ ಎಂದು ಕೆಲವರು ಹೇಳುವುದುಂಟು. ಆದರೆ ಗಣಪತಿಯ ಕಲ್ಪನೆಯ ಎಳೆ ಇಲ್ಲಿ ಇಲ್ಲವೇ ಇಲ್ಲ ಎಂದು ತಳ್ಳಿಹಾಕುವುದು ಸುಲಭವಲ್ಲ. ದೇಶ–ವಿದೇಶಗಳಲ್ಲಿ ಹಬ್ಬಿರುವ ಗಣೇಶಕಲ್ಪನೆಯ ವಿಸ್ತಾರವನ್ನೂ ವೈವಿಧ್ಯವನ್ನೂ ಅವಲೋಕಿಸಿದಾಗ ಗಣೇಶತತ್ತ್ವದ ವ್ಯಾಪಕತೆಯ ಜೊತೆಗೆ ಅನಿವಾರ್ಯತೆಯೂ ಸ್ಪಷ್ಟವಾಗುತ್ತದೆ.

ಗಣೇಶ, ವಿನಾಯಕ, ಗಣಪತಿ, ಕುಮಾರಗುರು, ಗೌರೀಪುತ್ರ, ಶಿವಸುತ, ಸುಮುಖ, ಏಕದಂತ, ಲಂಬೋದರ, ಮೂಷಿಕವಾಹನ, ವಕ್ರತುಂಡ, ಶೂರ್ಪಕರ್ಣ, ಗಜಾನನ, ವಿಘ್ನರಾಜ, ವಿಘ್ನವಿನಾಶಕ – ಹೀಗೆ ಅವನ ಒಂದೊಂದು ಹೆಸರು ಅವನ ತತ್ತ್ವವನ್ನು ಎತ್ತಿಹಿಡಿಯುತ್ತದೆ.

ಇಲ್ಲೊಂದು ಸ್ವಾರಸ್ಯವನ್ನು ಗಮನಿಸಬೇಕು. ವಿಘ್ನರಾಜ – ಎಂದರೆ ವಿಘ್ನಗಳಿಗೆ ರಾಜನೂ ಅವನೇ; ವಿಘ್ನವಿನಾಶಕ – ಎಂದರೆ ವಿಘ್ನಗಳನ್ನು ನಾಶಪಡಿಸುವವನೂ ಅವನೇ! ಇದೊಂದು ರೀತಿಯಲ್ಲಿ ನಾಯಕನೂ ಅವನೇ, ಪ್ರತಿನಾಯಕನೂ ಅವನೇ ಎನ್ನುವಂತೆ – ಹೀರೋ–ವಿಲನ್‌ಗಳಿಬ್ಬರೂ ಒಬ್ಬನದೇ ವೇಷಗಳು ಎಂದಂತೆ!! ಎಂದರೆ ಇಡಿಯ ಸೃಷ್ಟಿ ಅವನಿಗೊಂದು ಲೀಲೆ, ವಿನೋದ, ಆಟ, ನಾಟಕ ಎಂಬುದು ಇಲ್ಲಿರುವ ರಹಸ್ಯಾರ್ಥ.

ನಮ್ಮ ಸಂಸ್ಕೃತಿಯಲ್ಲಿ ಪುರಾಣಗಳ ಪಾತ್ರ ತುಂಬ ದೊಡ್ಡದು. ಇವು ನಮ್ಮ ಸಂಸ್ಕೃತಿಯ ಸೂಕ್ಷ್ಮಗಳನ್ನೂ ಗಹನತೆಯನ್ನೂ ಸೊಗಸನ್ನೂ ಮನೋಧರ್ಮವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಗಣಪತಿಯ ಕಲ್ಪನೆಯೂ ಹೀಗೆ ಹಲವು ಪುರಾಣಗಳಲ್ಲಿ ಹರಡಿರುವುದನ್ನು ಕಾಣಬಹುದು.

ಗಣಪತಿಯ ಹೆಸರುಗಳ ಹಿಂದೆ ಮಾತ್ರವಲ್ಲ, ಅವನ ಆಕಾರದ ಒಂದೊಂದು ವಿವರದ ಹಿಂದೆಯೂ ಪುರಾಣಪ್ರತಿಮೆಗಳು ನಂಟನ್ನು ಹೊಂದಿವೆ.ಗಣಪತಿಯ ಕಲ್ಪನೆಯಲ್ಲಿ ಹಲವು ಸ್ವಾರಸ್ಯಗಳೂ ಧ್ವನಿಗಳೂ ಸೇರಿಕೊಂಡಿವೆ.

ಪಾರ್ವತಿಯ ಮೈಮೇಲಿನ ಲೇಪನದಿಂದಲೇ ಜನಿಸಿದವನು ಅವನು. ಹೀಗಾಗಿ ಅವನ ಹುಟ್ಟು ಕಾಮಾತೀತತತ್ತ್ವವನ್ನು ಸಂಕೇತಿಸುತ್ತದೆ. ಅವನು ವಿದ್ಯೆಗೆ ಅಧಿಪತಿ; ಬ್ರಹ್ಮಚಾರಿಯೂ ಹೌದು. ವಿದ್ಯೆಗೂ ಬ್ರಹ್ಮಚರ್ಯಕ್ಕೂ ಇರುವ ನಂಟನ್ನು ಅವನಲ್ಲಿ ನೋಡಬಹುದು. ಅವನು ಬ್ರಹ್ಮಚಾರಿಯಾದರೂ ಸಿದ್ಧಿ–ಬುದ್ಧಿ ಎಂಬ ಪತ್ನಿಯರಿಬ್ಬರು ಅವನಿಗೆ ಇದ್ದಾರೆ ಎಂದೂ ಕಾಣಿಸಲಾಗಿದೆ. ನಮ್ಮ ಎಲ್ಲ ಸಿದ್ಧಿಗೂ ಬುದ್ಧಿಗೂ ಅವನೇ ಯಜಮಾನ ಎಂಬುದು ಇದರ ತಾತ್ಪರ್ಯ. ಅವನದ್ದು ಆನೆಯ ಮುಖ; ಇದು ಓಂಕಾರವನ್ನು ಸೂಚಿಸುತ್ತದೆ; ಅವನು ಪ್ರಣವಸ್ವರೂಪಿ. ಅವನ ಕಿವಿಗಳು ವಿಶಾಲವಾಗಿದೆ; ವಿದ್ಯೆಯ ಸಿದ್ಧಿಗೆ ಕೇಳ್ಮೆ ತುಂಬ ಮುಖ್ಯ ಎನ್ನುವುದನ್ನು ಇದು ಸೂಚಿಸುತ್ತದೆ. ಅವನ ದೊಡ್ಡದಾದ ಹೊಟ್ಟೆಯು ಇಡೀ ಬ್ರಹ್ಮಾಂಡವನ್ನೇ ಸಂಕೇತಿಸುತ್ತದೆ.

ಹೆತ್ತವರನ್ನೇ ಅವನು ತನ್ನ ಜಗತ್ತಾಗಿ ಸ್ವೀಕರಿಸಿದವನು. ಹೀಗಾಗಿ ಅವನು ಆದರ್ಶಪುತ್ರ. ತಾಯಿಯ ಜೊತೆಯಲ್ಲಿಯೇ ಅವನು ಭೂಲೋಕಕ್ಕೆ ಬರುತ್ತಾನೆ. ಅಪಹಾಸ್ಯವನ್ನು ದಂಡಿಸಿ, ಚಂದ್ರನಿಗೆ ಶಾಪವನ್ನು ಕೊಟ್ಟನಷ್ಟೆ. ಆದರೆ ಅವನು ಹಾಸ್ಯಪ್ರಿಯ; ಒಳ್ಳೆಯ ಹಾಸ್ಯ ಅವನಿಗೆ ಇಷ್ಟವೇ. ಅವನು ಹಾಸ್ಯಾಧಿಪತಿಯೇ ಹೌದು. ಅವನು ಹೊಟ್ಟೆಗೆ ಸುತ್ತಿಕೊಂಡಿರುವ ಹಾವು ಯೋಗಕ್ಕೆ ಸಂಕೇತ; ಕುಂಡಲಿನೀಶಕ್ತಿಗೆ ಸಂಕೇತ. ಅವನ ವಾಹನ ಇಲಿ. ಅವನ ಪರ್ವತದಂಥ ಶರೀರವನ್ನು ಸಣ್ಣ ಇಲಿ ಹೊರುತ್ತಿದೆ; ಇದೊಂದು ಸೋಜಿಗ; ಮಾತ್ರವಲ್ಲ, ಸಣ್ಣ ಜೀವಿಗೆ ಗಣ್ಯಸ್ಥಾನವನ್ನು ನೀಡಿದವನು ಅವನು ಸಾಮರಸ್ಯಕ್ಕೂ ಸಂಕೇತವಾಗಿದ್ದಾನೆ.

ಅವನನ್ನು ನಾವು ಪೂಜಿಸುವುದು ಅವನ ಮೂರ್ತಿಯನ್ನು ಮಣ್ಣಿನಿಂದ ತಯಾರಿಸಿ, ಅಲ್ಲವೆ? ಅಂದರೆ ಅವನು ಪ್ರಕೃತಿಯಲ್ಲಿಯೇ ಇರುವವನು. ಕೊನೆಗೆ ಪ್ರಕೃತಿಗೇ ಸೇರುವವನು. ಅವನಿಗೆ ಹೂವಿಗಿಂತಲೂ ಇಷ್ಟವಾದುದು ಎಲೆಗಳು – ಎಂದರೆ ಪತ್ರಪೂಜೆ; ಅದಕ್ಕಿಂತಲೂ ಪ್ರಿಯವಾದುದು ಹುಲ್ಲಿನ ಪೂಜೆ; ಅದೇ ಗರಿಕೆಯ ಪೂಜೆ – ದೂರ್ವಾಪೂಜೆ. ಸೃಷ್ಟಿಯ ಯಾವ ವಸ್ತುವೂ ಕೂಡ ಯಾವುದೋ ಒಂದು ಕೋನದಿಂದ ಗಣಪತಿಯಂತೆಯೇ ಕಾಣುತ್ತದೆ. ಇದು ಅವನ ನಿರಾಕಾರತತ್ತ್ವಕ್ಕೂ ಸರ್ವಾಕಾರತತ್ತ್ವಕ್ಕೂ ಸಂಕೇತ.

ಅವನು ಕಲಾಪ್ರಿಯ; ನಾಟ್ಯವೂ ಅವನಿಗೆ ಇಷ್ಟ; ಸಂಗೀತವೂ ಇಷ್ಟ. ಜಾತಿ ಮತ ಪ್ರಾಂತಗಳ ಭೇದವಿಲ್ಲದೆ ಎಲ್ಲರಿಂದಲೂ ಪೂಜೆಯನ್ನು ಸ್ವೀಕರಿಸುವ ದೇವತೆ ಅವನು; ಭಾರತ ಮಾತ್ರವಲ್ಲದೆ ಹಲವು ಬೇರೆ ಬೇರೆ ದೇಶಗಳಲ್ಲೂ ಗಣಪತಿಯ ಆರಾಧನೆಯನ್ನು ನೋಡಬಹುದು. ಎಲ್ಲ ಪೂಜೆಗಳಿಗೂ ಮೊದಲ ಅವನ ಪೂಜೆ ನಡೆಯಬೇಕು – ಎಂಬ ಪರಂಪರೆಯ ನಿಲುವು ಇಂಥ ಸರ್ವಮಾನ್ಯ ದೇವತೆಗೆ ಸಂದಿರುವುದು ಉಚಿತವಾಗಿಯೇ ಇದೆ.

ಒಟ್ಟಿನಲ್ಲಿ ಗಣಪತಿಯ ಒಂದೊಂದು ವಿವರವೂ ಒಂದೊಂದು ಮಹಾತತ್ತ್ವವನ್ನೇ ಪ್ರತಿನಿಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT