ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ಭಾಗ್ಯಕ್ಕಾಗಿ ಮಂಗಳಗೌರೀವ್ರತ

Last Updated 17 ಆಗಸ್ಟ್ 2020, 19:41 IST
ಅಕ್ಷರ ಗಾತ್ರ

ಕುಟುಂಬ ಎನ್ನುವುದು ಸಮಾಜದ ತುಂಬ ಮುಖ್ಯವಾದ ಘಟಕ. ಇದಕ್ಕೆ ಆಧಾರವೇ ಮದುವೆ. ಶ್ರಾವಣಮಾಸದ ಮಂಗಳವಾರಗಳಂದು ಮಂಗಳಗೌರೀವ್ರತವನ್ನು ಆಚರಿಸುವ ಪದ್ಧತಿ ಇದೆ. ಮದುವೆಯ ಬಾಂಧವ್ಯ ಗಟ್ಟಿಯಾಗಿರಲಿ, ಫಲಪ್ರದವಾಗಿರಲಿ; ಅದರಿಂದ ಜೀವನ ಸುಖಮಯವಾಗಿರಲಿ ಎಂಬ ಸಂಕಲ್ಪದಿಂದ ಈ ವ್ರತವನ್ನು ಆಚರಿಸಲಾಗುತ್ತದೆ.

ಈ ವ್ರತವನ್ನು ಆಚರಿಸುವುದರಲ್ಲಿ ಕುಲಾಚಾರ ಮತ್ತು ದೇಶಾಚಾರಗಳು ಮುಖ್ಯ ಭೂಮಿಕೆಯನ್ನು ವಹಿಸುತ್ತವೆ. ಕೆಲವು ಕುಟುಂಬಗಳಲ್ಲಿ, ಮದುವೆಗೆ ಸಿದ್ಧತೆಯಲ್ಲಿರುವ ಹೆಣ್ಣುಮಕ್ಕಳು ಈ ವ್ರತವನ್ನು ಹಿಡಿದು, ಐದು ವರ್ಷಗಳು ಸತತವಾಗಿ ಆಚರಿಸುತ್ತಾರೆ; ಗಂಡನ ಮನೆಯಲ್ಲಿ ವ್ರತದ ಉದ್ಯಾಪನೆಯನ್ನು ಮಾಡು‌ತ್ತಾರೆ. ಇನ್ನು ಕೆಲವರಲ್ಲಿ, ಮದುವೆಯಾದ ಮೊದಲನೆಯ ವರ್ಷದಿಂದ ಸತತವಾಗಿ ಐದು ವರ್ಷಗಳ ಕಾಲ ಈ ವ್ರತವನ್ನು ಆಚರಿಸುವ ಪದ್ಧತಿ ಉಂಟು.

ಈ ವ್ರತದಲ್ಲಿ ಗೌರೀಪೂಜೆ ಮುಖ್ಯವಾದ ಭಾಗ. ಅವಳನ್ನು ಮಂಗಳಸ್ವರೂಪದಲ್ಲಿ ಅರ್ಚಿಸಲಾಗುತ್ತದೆ. ಅವಳ ಲಲಿತಾರೂಪಕ್ಕೆ ವಿಶೇಷ ಒತ್ತನ್ನು ನೀಡಲಾಗಿದೆ. ಗೌರೀ ಎಂದರೆ ಪಾರ್ವತಿ. ಅವಳು ಶಿವನ ಮಡದಿ. ಶಿವ–ಪಾರ್ವತಿಯರು ಸೃಷ್ಟಿಯ ಆದಿದಂಪತಿಗಳು. ಅಂಥ ಆದರ್ಶಮಯ ದಾಂಪತ್ಯ ಎಲ್ಲರಿಗೂ ಒದಗಲಿ ಎಂಬ ಆಶಯವೇ ಈ ವ್ರತದ ಉದ್ದೇಶ.

ಅರಿಶಿನದಲ್ಲಿ ಗೌರಿಯ ಆಕಾರವನ್ನು ತಿದ್ದಿ, ಅದರಲ್ಲಿಯೇ ದೇವಿಯನ್ನು ಆಹ್ವಾನಿಸಿ ಪೂಜಿಸಲಾಗುತ್ತದೆ. ಹೆಣ್ಣುಮಕ್ಕಳೇ ಆಚರಿಸುವ ಈ ವ್ರತದಲ್ಲಿ ದೀಪಾರಾಧನೆ ಮುಖ್ಯವಾದ ಪೂಜಾಕಲಾಪವಾಗಿ ನಡೆಯುತ್ತದೆ. ಹದಿನಾರು ದೀಪಗಳನ್ನು ದೇವಿಯ ಸಮ್ಮುಖದಲ್ಲಿ ಬೆಳಗಲಾಗುತ್ತದೆ. ಈ ದೀಪದ ಎರಡೂ ಕಡೆ ಬೆಲ್ಲದ ಅಚ್ಚುಗಳನ್ನೂ ಕೊಬ್ಬರಿಗಿಟುಕುಗಳನ್ನೂ ಇಟ್ಟು ದೀಪವನ್ನು ಪೂಜಿಸಲಾಗುತ್ತದೆ. ವ್ರತದ ಕಥೆಯನ್ನು ಕೇಳುತ್ತ, ಆ ದೀಪಗಳ ಮೂಲಕವೇ ಕಾಡಿಗೆಯನ್ನು ಸಿದ್ಧಪಡಿಸಿಕೊಳ್ಳುವ ಸಂಪ್ರದಾಯವೂ ಉಂಟು. ಕಳಶವನ್ನು ಸ್ಥಾಪಿಸಿ ಅದರ ಮೇಲೆ ಕುಪ್ಪಸದ ಕಣವನ್ನು ಇಡಲಾಗುತ್ತದೆ.ಷೋಡಶೋಪಚಾರ ಪೂಜೆಯ ಜೊತೆಗೆ ಅಷ್ಟೋತ್ತರ ಶತನಾಮಾವಳಿಯೊಂದಿಗೆ ಗೌರಿಯನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಬೇಕು. ಎಳ್ಳುಂಡೆ, ತಂಬಿಟ್ಟು, ಹೆಸರುಬೇಳೆಗಳ ವಿಶೇಷ ನೈವೇದ್ಯವನ್ನು ದೇವಿಗೆ ಸಲ್ಲಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಹದಿನಾರು ಗಂಟುಗಳ ತಂತು, ಎಂದರೆ ದಾರವನ್ನು ಕಟ್ಟಿಕೊಳ್ಳಲಾಗುತ್ತದೆ.

ದಾಂಪತ್ಯದ ಅರ್ಥಪೂರ್ಣತೆಗಾಗಿಯೂ, ಕುಟುಂಬದ ಯೋಗಕ್ಷೇಮಕ್ಕಾಗಿಯೂ ಆಚರಿಸುವ ಮಂಗಳಗೌರೀವ್ರತವು ಹೆಣ್ಣುಮಕ್ಕಳಿಗೆ ಸಂಭ್ರಮಕ್ಕೂ ಶ್ರದ್ಧೆಗೂ ಒದಗುವ ಧಾರ್ಮಿಕ ವಿಧಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT