ಭಾನುವಾರ, ಸೆಪ್ಟೆಂಬರ್ 19, 2021
26 °C
ಯುವದಿನ ಜ.12

ಒಳಿತಿನ ವಿಜಯಕ್ಕೆ ವಿವೇಕಾನಂದರ ಸೂತ್ರ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಮನುಷ್ಯನಲ್ಲಿ ತಾನು ಸದಾ ಜಯಶಾಲಿಯಾಗಬೇಕೆಂಬ ಅದಮ್ಯ ಬಯಕೆ ಅಡಗಿದೆ. ಅದೂ ತಪ್ಪೇನಲ್ಲ. ಆದರೆ ಈ ವಿಜಯ ಸಾಧಿಸಲು ಅವನು ಅನುಸರಿಸುವ ಮಾರ್ಗಗಳು ಎಂತಿರಬೇಕು ಎಂಬುದು ಮುಖ್ಯ. ಇದಕ್ಕೆ ಅನೇಕ ರೀತಿಯ ಮಾರ್ಗಗಳನ್ನು ಬೋಧಿಸಲಾಗಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಸರಳವಾದ ಮೂರು ಸೂತ್ರಗಳನ್ನು ತಿಳಿಸಿದ್ದಾರೆ. ಇವುಗಳ ಮೂಲಕ ವ್ಯಕ್ತಿ, ವ್ಯಕ್ತಿತ್ವ ಮತ್ತು ದೇಶ - ಈ ಮೂರೂ ಅತ್ಯುನ್ನತವಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸೂತ್ರಗಳಲ್ಲಿ ಮೊದಲನೆಯದು ಒಳಿತಿನಲ್ಲಿ ನಂಬಿಕೆ. ಎರಡನೆಯದು ಸಂದೇಹ ಮತ್ತು ಅಸೂಯೆಗಳ ನಾಶ. ಮೂರನೆಯದು ಯಾರು ಒಳ್ಳೆಯವರಾಗಲು ಮತ್ತು ಒಳ್ಳೆಯದು ಮಾಡಲು ಪ್ರಯತ್ನಿಸುತ್ತಿರುವರೋ ಅವರಿಗೆ ಸಹಕಾರ. 1894ರ ಜನವರಿ 29ರಂದು ಸ್ವಾಮಿ ವಿವೇಕಾನಂದರು ಜುನಾಗಢದ ದಿವಾನರಾದ ಹರಿದಾಸ ವಿಹಾರಿದಾಸ ದೇಸಾಯಿ ಅವರಿಗೆ ಬರೆದ ಪತ್ರದಲ್ಲಿ ಈ ಮೂರು ಸೂತ್ರಗಳನ್ನು ಕಾಣಿಸಿದ್ದಾರೆ.

‘ಒಳಿತಿನಲ್ಲಿ ನಂಬಿಕೆ’. ಈ ಸೂತ್ರ ಉಳಿದೆರಡು ಸೂತ್ರಗಳಿಗೆ ಬುನಾದಿಯಾಗುತ್ತದೆ. ನಂಬಿಕೆಯಿಲ್ಲದಿದ್ದರೆ ಎಲ್ಲ ಪ್ರಯತ್ನಗಳೂ ವ್ಯರ್ಥವಾಗುತ್ತದೆ. ನಂಬಿಕೆಯಿಲ್ಲದವನು ತನ್ನ ಶ್ರದ್ಧೆಯನ್ನು ಕಟ್ಟಿಕೊಳ್ಳಲಾರ. ನಿವೇದಿತಾ ’ನಾ ಕಂಡಂತೆ ನನ್ನ ಗುರುದೇವ’ ಪುಸ್ತಕದಲ್ಲಿ ಒಂದು ಘಟನೆಯನ್ನು ದಾಖಲಿಸುತ್ತಾಳೆ.

‘ಒಂದು ದಿನ ತರಗತಿಯ ಪ್ರಶ್ನೋತ್ತರದ ಕಾವು ಏರಿತ್ತು. ಅವರು ಎತ್ತರದ ವೇದಿಕೆಯಲ್ಲಿ ಮತ್ತಷ್ಟು ಎತ್ತರವಾಗಿ ಕಾಣುತ್ತ ಸುತ್ತಲಿನ ಕೇಳುಗರನ್ನು ದಿಟ್ಟಿಸುತ್ತ ಹೇಳಿದರು: ’ಜಗತ್ತಿಗೆ ಇಂದು ಬೇಕಾಗಿರುವುದು ಭಗವಂತನ ಹೊರತಾಗಿ ನನ್ನಲ್ಲಿ ಏನಿಲ್ಲ ಎಂದು ಸಾರಬಲ್ಲ ಯುವಕ-ಯುವತಿಯರು.’ ಈ ಬಗೆಯ ಶ್ರದ್ಧೆಯೇ ಉಳಿದೆಲ್ಲ ಚಿಂತನೆಗೆ ಆಧಾರವೆಂದು ಅವರು ತಿಳಿಸುತ್ತಾರೆ.

‘ಒಳಿತಿನಲ್ಲಿ ನಂಬಿಕೆ’. ಹಾಗಾದರೆ ಒಳಿತೆಂದರೇನು? ವ್ಯಷ್ಟಿಗೂ-ಸಮಷ್ಟಿಗೂ ಹಾನಿಯುಂಟು ಮಾಡದಿರುವುದು ಒಳಿತು ಎಂದು ಅವರು ಇನ್ನೊಂದೆಡೆಯಲ್ಲಿ ತಿಳಿಸುತ್ತಾರೆ.

ಸಂದೇಹ ಮತ್ತು ಅಸೂಯೆಗಳು ನಾಶವಾಗಬೇಕು ಎಂಬುದು ಅವರ ಎರಡನೆಯ ಸೂತ್ರ. ಅನುಮಾನವಿದ್ದಲ್ಲಿ ಹೆಜ್ಜೆ ಹಿಂಜರಿಯುತ್ತದೆ ಎಂದು ನಮಗೆ ಗೊತ್ತು. ಆದುದರಿಂದ ಸಂದೇಹಕ್ಕೆ ಆಸ್ಪದ ಕೊಡದಂತೆ ಗಟ್ಟಿ ಮನಸ್ಸಿನಿಂದ ಮುಂದುವರೆಯಬೇಕು. ಅಸೂಯೆ ಸಂದೇಹದ ಅವಳಿ ಅಂಶವೆನ್ನಬಹುದು. ಅಸೂಯೆಯ ಮೂಲಬೀಜ ಇರುವುದು ಅನುಮಾನದಲ್ಲಿ. ಅವನು-ನಾನು ಬೇರೆ, ಅವನು ಬೆಳೆದರೆ ನಾನು ಕುಬ್ಜನಾಗುವೆ. ಅವರು ನನ್ನ ಪ್ರತಿಸ್ಪರ್ಧಿಗಳು. ಇತರರು ಕೀರ್ತಿವಂತರಾಗಿಬಿಟ್ಟರೆ?! ಹೀಗೆ ನಾನಾ ತೆರನಾದ ವರ್ಣಗಳಲ್ಲಿ ಅಸೂಯೆ ಬಲಿತು ವೈಯಕ್ತಿಕ, ಸಾಂಘಿಕ ಮತ್ತು ಸಾಮಾಜಿಕ ಪ್ರಗತಿಯನ್ನು ತಡೆಯುತ್ತದೆ. ಭಿನ್ನಾಭಿಪ್ರಾಯಗಳ ನಡುವೆಯೂ ಪ್ರೀತಿಯಿಂದ ಬದುಕಬೇಕೆಂದು ಸ್ವಾಮೀಜಿ ತಿಳಿಸುತ್ತಾರೆ.

ಮೂರನೆಯ ಸೂತ್ರ ಎರಡನೆಯದರೊಂದಿಗೆ ಸಮನ್ವಯಗೊಳ್ಳುತ್ತದೆ. ಒಳ್ಳೆಯವರಾಗಲು ಮತ್ತು ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿರುವವರೊಂದಿಗೆ ಕೈಜೋಡಿಸಿದರೆ ಆ ಒಳಿತಿನ ಲೇಪ ನಮಗೂ ಆಗುತ್ತದೆ. ಊರ ನಾಲೆ ಅಗೆಯಲು ಕೈಜೋಡಿಸಿದರೆ ನಮ್ಮ ಹೊಲಕ್ಕೂ ನೀರು ತಲುಪುವಂತೆ ಇದು. ಜಯ ಎಂಬುದು ಕೇವಲ ಒಬ್ಬ ವ್ಯಕ್ತಿಯದಲ್ಲ, ಆ ವ್ಯಕ್ತಿಯ ಪ್ರಯತ್ನದಿಂದ ಕುಟುಂಬ–ಸಮಾಜಗಳೂ ವಿಜಯದ ಹಾದಿ ಹಿಡಿಯುತ್ತವೆ. ಹೀಗೆ ಸಮಾಜಪುರುಷನ ಸಕಾರಾತ್ಮಕ ಅಭಿವ್ಯಕ್ತಿಗೆ ವ್ಯಕ್ತಿ, ವ್ಯಕ್ತಿತ್ವ ಮತ್ತು ದೇಶದ ಪ್ರಜೆಗಳು ಹೇಗೆ ಒಂದಾಗಬೇಕು ಎಂಬುದನ್ನು ವಿವೇಕಾನಂದರ ತ್ರಿವಳಿ ಸೂತ್ರ ತಿಳಿಸಿಕೊಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು