ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ ಧರ್ಮಶ್ರದ್ಧೆಯೇ ಮದ್ದು

ಅಕ್ಷರ ಗಾತ್ರ

ತನ್ನ ದೇವರಿಗೆ ನೆಲೆ ಕಲ್ಪಿಸಲು ತನ್ನ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ ಮಾನವ. ಮನುಷ್ಯನ ಒಳಿತಿಗೆ ಹುಟ್ಟಿದ ಧರ್ಮಗಳೇ ಆತನ ನೆಮ್ಮದಿಗೆ ಭಂಗ ತರುತ್ತಿವೆ ಅನ್ನುವುದು ಸುಳ್ಳಲ್ಲ. ಕೆಲವರು ಮತಭ್ರಾಂತ ಜನರಿಂದ ಹುಟ್ಟಿದ ಕೋಮುವಾದ ಮಾನವರ ಜೀವಕ್ಕೆ ಕುತ್ತು ತರುತ್ತಿದೆ. ವಿಶಾಲ ತಳಹದಿಯಲ್ಲಿ ವಿಚಾರಶೀಲವಾಗಿ ಅರಳಿದ ಧರ್ಮಗಳು ಮತಾಂಧರಿಂದ ಸಂಕುಚಿತಗೊಳ್ಳುತ್ತಿರುವುದು ದುರ್ದೈವದ ಸಂಗತಿ.

ಇಡೀ ಜಗತ್ತೇ ದೇವರದು. ಆತನ ಅಧೀನದಲ್ಲಿ ಸಕಲ ಜೀವರಾಶಿಗಳಿವೆ. ಆತನ ಅಪ್ಪಣೆ ಇಲ್ಲದೆ ಒಂದು ಕ್ರಿಮಿಯೂ ಮಿಸುಕಾಡಲಾರದು. ಅಂತಹ ಸರ್ವಶಕ್ತನನ್ನು ತನ್ನ ಸಂಕುಚಿತ ಬುದ್ಧಿಯೊಳಗೆ ಸೀಮಿತಗೊಳಿಸುತ್ತಿರುವ ಮನುಷ್ಯನ ವರ್ತನೆ ವಿಚಿತ್ರವಾಗಿದೆ. ಎಲ್ಲ ಧರ್ಮಗಳೂ ಸಮಾಜದ ಒಳಿತಿಗಿವೆ. ಎಲ್ಲ ದೇವರುಗಳೂ ಜನರ ರಕ್ಷಣೆಗಿದ್ದಾರೆ. ಅಂತಹ ಮಹಾಮಹಿಮ ದೇವರ ಹೆಸರಿನಲ್ಲಿ ಮಾನವರು ದುರಾಕ್ರಮಣ, ದುರಾಚಾರ ಮಾಡುವುದು ಅಕ್ಷಮ್ಯ.

ಪ್ರಸ್ತುತ ಭಾರತ ಧರ್ಮಸಂಘರ್ಷದಲ್ಲಿ ತತ್ತರಿಸುತ್ತಿದೆ. ಭಾರತದ ಭದ್ರ ತಳಹದಿಯಾದ ಭಾವೈಕ್ಯ ಹಾನಿಗೀಡಾಗುತ್ತಿದೆ. ಭಾರತದ ಭವಿಷ್ಯದ ಬಗ್ಗೆ ಎಲ್ಲೂ ಭರವಸೆಯ ಬೆಳಕು ಕಾಣುತ್ತಿಲ್ಲ. ಸಮಾಜದಲ್ಲಿ ಮತಾಂಧರ ಸಂಖ್ಯೆ ಕಡಿಮೆ ಇದೆ. ಜನ ಮೂಕಪ್ರೇಕ್ಷಕರಾಗಿರುವುದರಿಂದಲೇ ಅವರ ಕೈ ಮೇಲಾಗುತ್ತಿದೆ. ಈಗಲಾದರೂ ಜನ ಮೌನಕ್ಕೆ ಶರಣಾಗಿ, ನಿತ್ಯದ ನಾಟಕ ನೋಡುತ್ತಾ ಕೂರದೆ ಎಚ್ಚೆತ್ತುಕೊಳ್ಳಬೇಕು. ಪರಸ್ಪರ ಅಪನಂಬಿಕೆಯಿಂದ ಹುಟ್ಟಿರುವ ಮತೀಯವಾದವನ್ನು ತೊಡೆಯಲು ಪ್ರಯತ್ನಿಸಬೇಕು. ಇಲ್ಲದಿದ್ದರೆ, ಧರ್ಮನಿರಪೇಕ್ಷೆಯಿಂದ ಜನ ಬಾಳಬೇಕು, ವಿಶ್ವಭ್ರಾತೃತ್ವಕ್ಕೆ ಮಾದರಿಯಾಗಬೇಕು ಎಂದು ನಮ್ಮ ಹಿರಿಯರು ಕಟ್ಟಿದ ಕನಸು ನುಚ್ಚುನೂರಾಗುತ್ತದೆ.

ಈ ನೆಲದ ಅಂತಃಸತ್ವ, ಈ ದೇಶದ ಗೌರವ, ಜನರ ನೆಮ್ಮದಿ ಕಾಪಾಡಬೇಕಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಯಾರೊಬ್ಬರ ಆತ್ಮಗೌರವಕ್ಕೂ ಧಕ್ಕೆಯಾಗದಂತೆ ಪರಸ್ಪರ ಧರ್ಮಗಳ ವಿಚಾರ ಪ್ರಸರಿಸಬೇಕು. ಎಲ್ಲ ಧರ್ಮಗಳ ತತ್ವವೂ ಒಂದೇ, ಯಾವ ಧರ್ಮದಡಿ ಆರಾಧಿಸಿದರೂ ಅದು ಜಗದೊಡೆಯನಿಗೆ ಸಲ್ಲುತ್ತದೆ ಎಂಬುದನ್ನು ಜನ ಮನದಟ್ಟು ಮಾಡಿಕೊಳ್ಳಬೇಕು. ಪ್ರತಿಯೊಬ್ಬರನ್ನು ಧರ್ಮಗಳ ಚೌಕಟ್ಟಿನಲ್ಲಿ ಗುರುತಿಸದೆ, ಮಾನವತೆಯ ದೃಷಿಯಿಂದ ನೋಡಬೇಕು. ಭಕ್ತಿಭಂಡಾರಿ ಬಸವಣ್ಣ ಹೇಳಿದಂತೆ ‘ಇವ ಯಾರವ ಎನ್ನದೆ, ಇವ ನಮ್ಮವ’ ಅಂತ ಹೃದಯದಿಂದ ಕರೆವ ಮನಃಸ್ಥಿತಿ ಎಲ್ಲರಲ್ಲೂ ಮೂಡಬೇಕು. ಪ್ರತಿ ಧರ್ಮವನ್ನು ಗೌರವದಿಂದ ಕಾಣುವ ‘ಅಂತರ್ ಧರ್ಮ’ ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕು.

ಮತಾಂಧರ ಪ್ರಚೋದನೆಯಿಂದ ಮನಸಿಗೆ ಕೋಮುವ್ಯಾಧಿ ಅಂಟಿಸಿಕೊಳ್ಳುತ್ತಿರುವ ಜನರಿಗೆ ಅಂತರ್ ಧರ್ಮ ಶ್ರದ್ಧೆಯೇ ಮದ್ದು. ಇಂಥವರ ಮನಸ್ಸಿನ ಮೇಲೆ ಮಾನವ ಸೌಹಾರ್ದತೆಯ ಸಿಂಚನವನ್ನು ಪ್ರೋಕ್ಷಿಸಿ, ಅವರಿಗೆ ನಿಜವಾದ ದೈವದ ಸಾಕ್ಷಾತ್ಕಾರ ಮಾಡಿಸಬೇಕು. ವಿದ್ಯಾವಂತ, ಬುದ್ಧಿವಂತ ಜನ ಬಹಿರಂಗವಾಗಿ ಇಂಥ ಧರ್ಮಶ್ರದ್ಧೆಯ ಕಡೆ ದಿಟ್ಟ ಹೆಜ್ಜೆ ಇಡಬೇಕು. ಕೋಮುವಾದದ ಅಂಧಶ್ರದ್ಧೆಯನ್ನು ಬಿಟ್ಟು, ಅನ್ಯಧರ್ಮವನ್ನು ಸ್ವಧರ್ಮದಂತೆ ಪ್ರೀತಿಸುವ, ‘ಅಂತರ್ ಧರ್ಮಶ್ರದ್ಧೆ’ಯ ಬೀಜವನ್ನು ಎಲ್ಲರ ಮನದಲ್ಲಿ ಬಿತ್ತಿ, ಮಾನವಸೌಹಾರ್ದದ ಹೆಮ್ಮೆಯ ಮರವನ್ನು ಬೆಳೆಸಬೇಕು.

ಯಾವುದೇ ಶ್ರಮ, ತಾಳ್ಮೆ, ತ್ಯಾಗವಿಲ್ಲದೆ ಲೋಕಕಲ್ಯಾಣವನ್ನು ಸಾಧಿಸುವುದು ಕಷ್ಟ. ಪ್ರಜ್ಞಾವಂತರು ಎಲ್ಲ ಧರ್ಮಗಳ ಉತ್ತಮ ಸಾರವನ್ನು ಜನರಿಗೆ ತಿಳಿಸಬೇಕು. ಪರಕೀಯ ಭಾವನೆ ಇಲ್ಲದೆ, ಜನರೆಲ್ಲಾ ಒಂದೆಡೆ ಕಲೆಯುವ ಸೌಹಾರ್ದ ವಾತಾವರಣವನ್ನು ಕಲ್ಪಿಸಬೇಕು. ಧರ್ಮ-ಧರ್ಮಗಳ ನಡುವೆ ನಿಂತಿರುವ ಸಂಕುಚಿತ ಗೋಡೆಗಳನ್ನು ಕೆಡವಿ, ವಿಶಾಲ ತಳಹದಿಯ ವಿಚಾರ ಮಂಟಪವನ್ನು ಪ್ರತಿಯೊಬ್ಬ ಮಾನವನ ಹೃದಯದಲ್ಲಿ ಸ್ಥಾಪಿಸಬೇಕು.ಆಗ ಮಾತ್ರ ನಮಗೆ ‘ಸಚ್ಚಿದಾನಂದ’ಮಯ ನೆಮ್ಮದಿಯ ಬದುಕು ಪ್ರಾಪ್ತವಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT