ಗುರುವಾರ , ಆಗಸ್ಟ್ 18, 2022
23 °C

PV Web Exclusive| 170 ಕೋಟಿ ವೀಕ್ಷಣೆ ಪಡೆದ ‘ಹನುಮಾನ್‌ ಚಾಲೀಸಾ’!

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ಈಚೆಗೆ ಯೂಟ್ಯೂಬ್‌ನಲ್ಲಿ 100 ಕೋಟಿ ವೀಕ್ಷಣೆ ದಾಟುವುದೇ ಒಂದು ಸಾಧನೆ ಎಂಬಂತಾಗಿದೆ. ಅಷ್ಟು ವೀಕ್ಷಣೆ ಪಡೆಯುವುದು ಸುಲಭವಲ್ಲ. ದೇಶದ ಜನರ ನಿತ್ಯಪಾಠಗಳಲ್ಲಿ ಒಂದಾಗಿರುವ ‘ಹನುಮಾನ್‌ ಚಾಲೀಸಾ’ ಭಕ್ತಿಸ್ತೋತ್ರ ಕೆಲವು ತಿಂಗಳುಗಳ ಹಿಂದೆ ಈ ಸಾಧನೆಯ ಶಿಖರವನ್ನೇರಿದೆ.

ದೇಶದಲ್ಲಿ ಸಿದ್ಧಪಡಿಸಲಾದ ಹಲವು ಸಿನಿಮಾ ಹಾಡು, ಶಿಶುಗೀತೆಗಳು, ವಿವಿಧ ವಿಡಿಯೊಗಳು ಈ ಮೊದಲೇ ಈ ಮೆಟ್ಟಿಲೇರಿವೆಯಾದರೂ ಭಕ್ತಿಸಂಗೀತವೊಂದು ಈ ಮಟ್ಟದ ಜನಪ್ರಿಯತೆ ಗಳಿಸಿರುವುದು ಗಮನಾರ್ಹ. ದೇಶದ ಭಕ್ತಿಸಂಗೀತ ಕ್ಷೇತ್ರದಲ್ಲಿ 100 ಕೋಟಿ ವೀಕ್ಷಣೆ ಪಡೆದ ಮೊದಲ ಸ್ತೋತ್ರ ಎಂಬ ಹೆಗ್ಗಳಿಕೆಯನ್ನು ಇದು ಗಳಿಸಿದೆ.

2011ರಲ್ಲಿ ಟಿ–ಸಿರೀಸ್‌ ಮೂಲಕ ಗುಲ್ಶನ್‌ಕುಮಾರ್ ಅವರು ನಿರ್ಮಿಸಿರುವ ಈ ಭಕ್ತಿಸ್ತೋತ್ರ ಖ್ಯಾತ ಗಾಯಕ ಹರಿಹರನ್‌ ಅವರ ದನಿಯಲ್ಲಿ ಮೂಡಿಬಂದಿದೆ. ಇದಕ್ಕೆ 63 ಲಕ್ಷ ಲೈಕ್ಸ್‌ ಬಂದಿವೆ. ಕಾಮೆಂಟ್‌ಗಳೇ 6 ಲಕ್ಷ ಮೀರಿವೆ.

ಸಂತ ಗೋಸ್ವಾಮಿ ತುಲಸೀದಾಸರು ಅವಧಿ ಭಾಷೆಯಲ್ಲಿ ಬರೆದಿರುವ 40 ಸ್ತೋತ್ರಗಳ ಈ ಗುಚ್ಛವನ್ನು ಹಿಂದೂ ಧರ್ಮೀಯರ ಅನೇಕ ಮನೆಗಳಲ್ಲಿ ನಿತ್ಯವೂ ಪಠಿಸಲಾಗುತ್ತದೆ. ಸದ್ಯ ಹಲವು ಸಂಗೀತ ಕಲಾವಿದರ ದನಿಯಲ್ಲಿ ಹನುಮಾನ್‌ ಚಾಲೀಸಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಸಂಗೀತ ನಿರ್ದೇಶಕ, ಗಾಯಕ ಶೇಖರ್‌ ರವಜಿಯಾನಿ (7.3 ಕೋಟಿ ವ್ಯೂಸ್) ಹಾಗೂ ಬಾಲಗಾಯಕಿ ಸೂರ್ಯಗಾಯತ್ರಿ ಹಾಡಿರುವ ಹನುಮಾನ್‌ ಚಾಲೀಸಾ (7.3 ಕೋಟಿ) ಜನರ ಮನಗೆದ್ದಿವೆ. ಆದರೂ ಗುಲ್ಶನ್‌ಕುಮಾರ್‌ ಅವರ ನಿರ್ಮಾಣದ ಧ್ವನಿಸುರುಳಿ ಹಾಗೂ ವಿಡಿಯೊ ಇಂದಿಗೆ 170 ಕೋಟಿ ವೀಕ್ಷಣೆಯನ್ನು ದಾಟಿ ಮುಂದಕ್ಕೆ ಸಾಗುತ್ತಿದೆ. 200 ಕೋಟಿಯ ಕ್ಲಬ್‌ಗೆ ಸೇರುವತ್ತ ದಾಪುಗಾಲಿಟ್ಟಿದೆ.

ಈ 40 ಸ್ತೋತ್ರಗಳನ್ನು ಓದಲು ಕನಿಷ್ಠ 10 ನಿಮಿಷಗಳ ಅವಧಿ ಅಗತ್ಯ. ಹನುಮಂತನ ವರ್ಣನೆ ಮಾಡುವ ಈ ಸ್ತೋತ್ರಗಳ ರಚನೆ ಹಾಗೂ ಪಠಣದಿಂದ ಸಂತ ಗೋಸ್ವಾಮಿ ತುಲಸೀದಾಸರ ಆರೋಗ್ಯ ಸುಧಾರಣೆಯಾಯಿತು ಎಂಬ ನಂಬಿಕೆ ಭಕ್ತರಲ್ಲಿದೆ. ಶಕ್ತಿ ಹಾಗೂ ಧೈರ್ಯದ ಪ್ರತೀಕವೆನಿಸಿದ ಹನುಮಂತನ ಆರಾಧನೆಯಿಂದ ಮಾನಸಿಕ ಸ್ಥೈರ್ಯ ಪಡೆಯಲು ಸ್ಫೂರ್ತಿ ದೊರಕುತ್ತದೆ ಎಂಬುದೂ ಆರಾಧಕರ ಅಭಿಮತ.

100 ಕೋಟಿ ವೀಕ್ಷಣೆ ದಾಟಿದ ವಿಡಿಯೊಗಳು

ಚುಚು ಟಿವಿಯ ‘ಫೋನಿಕ್ಸ್‌ ಸಾಂಗ್‌ ವಿತ್‌ 2 ವರ್ಡ್ಸ್‌’ (383 ಕೋಟಿ ವ್ಯೂಸ್) ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವ್ಯೂಸ್ ಗಳಿಸಿದ ದೇಸಿ ವಿಡಿಯೊ ಆಗಿದೆ. ಕಿಡ್ಡೀಸ್‌ಟಿವಿಯ ‘ಹಂಪ್ಟಿ ಟ್ರೇನ್‌ ಔರ್‌ ಉಸ್‌ಕೇ ಫಲ್‌ ದೋಸ್ತೋಂಸೇ ಮಿಲಿಯೇ’ (250 ಕೋಟಿ ವಿವ್ಸ್‌) , ಜಿಂಗಲ್‌ ಟೂನ್ಸ್‌ನ ಲಕಡಿ ಕೀ ಕಾಟಿ (234 ಕೋಟಿ ವಿವ್ಸ್‌), ಇನ್‌ಫೋಬೆಲ್ಸ್‌ನ ಹಶ್‌ ಎ ಬೈ ಬೇಬಿ, ಇನ್‌ಫೋಬೆಲ್ಸ್‌ನ ಚಲ್‌ಚಲ್‌ ಗುರ್ರ್ಂ, ಚುಚು ಟಿವಿಯ ಜಾನಿ ಜಾನಿ ಯೆಸ್‌ ಪಾಪಾ ಸೇರಿ ಹಲವು ಶಿಶುಗೀತೆಗಳು 100 ಕೋಟಿಯ ಕುಟುಂಬದಲ್ಲಿ ಸೇರಿವೆ. 2019ರ ಜನವರಿಯಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ತಮಿಳಿನ ‘ರೌಡಿ ಬೇಬಿ’ ಹಾಡು ಕಳೆದ ವರ್ಷ ಯೂಟ್ಯೂಬ್‌ನಲ್ಲಿ 100 ಕೋಟಿ ವ್ಯೂಸ್ ದಾಟಿ ವೀಕ್ಷಕರ ಪ್ರೀತಿಗೆ ಪಾತ್ರವಾಗಿತ್ತು. ಇದರಂತೆಯೇ ದೇಶದಲ್ಲೇ ಸಿದ್ಧವಾದ ಹಲವು ಹಾಡುಗಳು ಈಗಾಗಲೇ ಈ ಮೈಲುಗಲ್ಲು ದಾಟಿ ಜನಪ್ರಿಯತೆ ಸಾಬೀತು ಮಾಡಿವೆ. ಅತಿ ಹೆಚ್ಚಿನ ವೀಕ್ಷಣೆ ಪಡೆಯುವ ವಿಡಿಯೊಗಳಲ್ಲಿ ಮಕ್ಕಳ ಹಾಡುಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಮಹತ್ವದ ಸಂಗತಿ.

100 ಕೋಟಿ ವ್ಯೂಸ್ ಪಟ್ಟಿಗೆ ಕೆಲವು ಫಿಲ್ಮ್‌ ಸಾಂಗ್‌ಗಳು, ಆಲ್ಪಂ ಸಾಂಗ್‌ಗಳು ಒಂದೆರಡು ವರ್ಷಗಳಲ್ಲೇ ಸೇರಿಕೊಂಡಿವೆ. 10 ವರ್ಷಗಳ ಹಿಂದೆ ಅಪ್‌ಲೋಡ್‌ ಆದ ಗುಲ್ಶನ್‌ಕುಮಾರ್‌ ಅವರ ಹನುಮಾನ್‌ ಚಾಲೀಸಾ ನಿಧಾನ ಗತಿಯಲ್ಲಿ ಈ ಸಾಧನೆ ಮಾಡಿದೆ. ಆದರೂ ಕಳೆದ ಒಂದು ವರ್ಷದಲ್ಲೇ ಅದರ ನೋಡುಗರ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗಿದೆ. ಕೋವಿಡ್‌ ಬಂದ ನಂತರ ಮಾನಸಿಕ ನೆಮ್ಮದಿ ಅರಸುವವರ ಸಂಖ್ಯೆ ಹೆಚ್ಚಾಗಿದ್ದೇ ಯೂಟ್ಯೂಬ್‌ನಲ್ಲಿ ಹಾಡುಗಳ ಮೊರೆಹೋಗುವವರ ಸಂಖ್ಯೆಯೂ ಹೆಚ್ಚಿದೆ. ಕೆಲವರಿಗೆ ಸಿನಿಮಾ ಗೀತೆಗಳು ಮುದ ನೀಡಿದರೆ, ಇನ್ನು ಕೆಲವರಿಗೆ ದೇವರ ಭಜನೆಗಳು ನೆಮ್ಮದಿಯ ತಾಣಗಳಾಗಿವೆ. ಹೀಗಾಗಿ 100 ಕೋಟಿಯ ಕ್ಲಬ್‌ಗೆ ಸೇರುವ ವಿಡಿಯೊಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕೋವಿಡ್‌ನಿಂದ ಜರ್ಝರಿತಗೊಂಡಿರುವ ಜನಮಾನಸಕ್ಕೆ ಸಕಾರಾತ್ಮಕ ಬೆಳಕಿನ ಕಿರಣಗಳು ಎಲ್ಲಿಂದ ಬಂದರೂ ಸರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು