ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ‘ಕ್ರಿಸ್‌ಮಸ್‌ ಟ್ರೀ’... ಇಲ್ಲಿ ನೋಡ್ರೀ...

Last Updated 15 ಡಿಸೆಂಬರ್ 2020, 5:27 IST
ಅಕ್ಷರ ಗಾತ್ರ

ಡಿಸೆಂಬರ್‌ ತಿಂಗಳೆಂದರೆ, ಹೆಚ್ಚಿನವರಿಗೆ ಕ್ರಿಸ್‌ಮಸ್‌ ಧ್ಯಾನ. ಸಾಂಟಾಕ್ಲಾಸ್‌, ಆತ ತರುವ ಉಡುಗೊರೆ, ಥರಥರದ ಕೇಕ್‌, ಕೆರೋಲ್‌ ಹಾಡುಗಳು, ದೀಪಾಲಂಕೃತ ಚರ್ಚ್‌, ಅವುಗಳ ಮುಂದೆ ಏಸುವಿನ ಜನ್ಮ ವೃತ್ತಾಂತವನ್ನು ಬಿಂಬಿಸುವ ಗೋದಲಿ... ಈ ಪಟ್ಟಿಯಲ್ಲಿ ಒಂದು ಪ್ರಮುಖ ಅಂಶವೇ ಬಿಟ್ಟು ಹೋಯಿತಲ್ಲ?

ಕ್ರಿಶ್ಚಿಯನ್ನರ ಹೊರತಾಗಿಯೂ ಎಲ್ಲರೂ ಕ್ರಿಸ್‌ಮಸ್‌ನಲ್ಲಿ ಕಣ್ತುಂಬಿಕೊಳ್ಳ ಬಯಸುವುದು ‘ಕ್ರಿಸ್‌ಮಸ್‌ ಟ್ರೀ’. ಮನೆಗಳ ಒಳಗೆ ಅಥವಾ ಆವರಣದಲ್ಲಿ ತ್ರಿಕೋನಾಕಾರದ ಮರವನ್ನು ತಂದಿಟ್ಟು ಅಲಂಕರಿಸುವುದು ಈ ಹಬ್ಬದ ವಿಶೇಷ ಆಕರ್ಷಣೆ. ‘ಕ್ರಿಸ್‌ಮಸ್‌ ಟ್ರೀ’ ಈ ಆಚರಣೆಯ ಅವಿಭಾಜ್ಯ ಅಂಗವಾಗಿರುವುದು ಹೇಗೆ ಗೊತ್ತಾ?

ಯುರೋಪ್‌ ಹಾಗೂ ಅಮೆರಿಕಗಳಲ್ಲಿ ಡಿಸೆಂಬರ್‌ ತಿಂಗಳ ಚಳಿಗಾಲದಲ್ಲಿ ಕೊರೆಯುವ ಚಳಿ, ಹಿಮ ಆವರಿಸುವ ಸಂಗತಿ ಎಲ್ಲರಿಗೂ ಗೊತ್ತಿದ್ದದ್ದೇ. ಇಂಥ ಪರಿಸರದಿಂದಾಗಿ ಮನಸ್ಸಿಗೆ ಕವಿಯುವ ಮಂಕು ಅಳಿಸಿ ಆಹ್ಲಾದ ಮೂಡಿಸಲು ಜನರು ಮೊರೆ ಹೋಗಿದ್ದು ನಿತ್ಯ ಹರಿದ್ವರ್ಣವಾಗಿರುವ ಮರಗಳಿಗೆ. ಹೀಗಾಗಿಯೇ ಅವುಗಳನ್ನು ಮನೆಯೊಳಗೆ ತಂದಿರಿಸಿಕೊಂಡು ಅಲಂಕರಿಸುವ ಪದ್ಧತಿ ಪಾಶ್ಚಾತ್ಯರಲ್ಲಿ ರೂಢಿಗೆ ಬಂತೆಂಬುದು ಅಧ್ಯಯನಕಾರರ ಅಭಿಪ್ರಾಯ. ಪಾಗನ್‌ ಸಮುದಾಯದವರಲ್ಲಿ ಸಾವಿರಾರು ವರ್ಷಗಳಿಂದ ಮರಗಳನ್ನು ಸಿಂಗರಿಸುವ ರೂಢಿ ಇತ್ತೆಂಬುದು ಇತಿಹಾಸದಲ್ಲಿ ಕಂಡು ಬರುತ್ತದೆ. ಕಾಲ ಕಳೆದಂತೆ ಇದೇ ಕ್ರಿಸ್‌ಮಸ್‌ ಟ್ರೀ ಸ್ಥಾಪನೆಗೆ ನಾಂದಿ ಹಾಡಿದೆ ಎಂದು ನಂಬಲಾಗಿದೆ.

ಆಧುನಿಕ ಕ್ರಿಸ್‌ಮಸ್‌ ಟ್ರೀ ಹಾಗೂ ಅದನ್ನು ಅಲಂಕರಿಸುವ ಪದ್ಧತಿ ಅವತರಿಸಿದ್ದು 16ನೇ ಶತಮಾನದಲ್ಲಿ. ಹಿಮ ಬೀಳುವ ಚಳಿಗಾಲದಲ್ಲಿ ಫರ್‌ ಮರಗಳ ಕೊಂಬೆಗಳನ್ನು ತಂದು ಮನೆಯನ್ನು ಅಲಂಕರಿಸುವ ಮೂಲಕ ಯುರೋಪಿಯನ್ನರು ಉತ್ಸಾಹದಿಂದಿರುವ ಪ್ರಯತ್ನ ಮಾಡುತ್ತಿದ್ದರಂತೆ. ರೋಮ್‌ನಲ್ಲಿ ನಿತ್ಯಹರಿದ್ವರ್ಣದ ವಿವಿಧ ಮರಗಳನ್ನು ಅಲಂಕರಿಸುತ್ತಿದ್ದರೆ, ಇಜಿಪ್ಶಿಯನ್ನರು ಹಸಿರು ಪಾಮ್‌ ಮರಗಳಿಗೆ ಸಿಂಗಾರ ಮಾಡುತ್ತಿದ್ದುದು ಕಂಡು ಬಂದಿದೆ. ಹೀಗೆ ಆ ಕಾಲದಲ್ಲಿ ಯಾವ ಮರಗಳು ಹಸಿರಾಗಿಯೇ ಇದ್ದು ಜೀವನ್ಮುಖಿಯಾಗಿರುತ್ತವೋ ಅವುಗಳು ‘ಕ್ರಿಸ್‌ಮಸ್‌ ಟ್ರೀ’ ಆಗಿ ಬಳಕೆಯಾಗತೊಡಗಿವೆ.

ಏನೇನು ಅಲಂಕಾರ?

16ನೇ ಶತಮಾನದಲ್ಲಿ ಪಶ್ಚಿಮ ಜರ್ಮನಿಯಲ್ಲಿ ಕ್ರಿಸ್‌ಮಸ್‌ ಟ್ರೀಗೆ ಬ್ರೆಡ್‌, ಒಣ ಹಣ್ಣು, ಬೀಜಗಳು, ಸೇಬುಹಣ್ಣುಗಳನ್ನು ಕಟ್ಟಿ ಸಿಂಗಾರ ಮಾಡುತ್ತಿದ್ದರು. 17ನೇ ಶತಮಾನದಲ್ಲಿ ರಾಜ ಮನೆತನದವರಿಂದಾಗಿ ಕ್ರಿಸ್‌ಮಸ್‌ ಟ್ರೀ ಅಲಂಕಾರ ಅದ್ದೂರಿಯಾಗತೊಡಗಿತು. ಬಂಗಾರದ ಎಲೆಗಳು, ಬಣ್ಣದ ಕಾಗದ, ಕ್ಯಾಂಡಲ್‌ಗಳು ಚಿತ್ರಣವನ್ನು ಇನ್ನಷ್ಟು ವರ್ಣಮಯಗೊಳಿಸಿದವು. 19ನೇ ಶತಮಾನದಲ್ಲಿ ಕ್ರಿಸ್‌ಮಸ್‌ ಟ್ರೀ ಇಡುವ ಪದ್ಧತಿ ಜಗತ್ತಿನ ಎಲ್ಲೆಡೆ ಹರಡಿತು ಹಾಗೂ ಜನರಿಗೆ ಇನ್ನಷ್ಟು ಆಪ್ತವಾಯಿತು. ಜರ್ಮನಿಗರಿಂದ ಇದು ಜಗತ್ತಿನಾದ್ಯಂತ ಹರಡಿತು ಎಂದು ಅಧ್ಯಯನಗಳು ತಿಳಿಸುತ್ತವೆ. ಅಮೆರಿಕದಲ್ಲಿ ಮಾತ್ರ 19ನೇ ಶತಮಾನದ ಮಧ್ಯದ ನಂತರವೇ ಈ ಸಂಪ್ರದಾಯ ಪ್ರಚುರವಾಯಿತು.

1840ರಿಂದ 1850ರವರೆಗೆ ಬ್ರಿಟನ್‌ನ ರಾಣಿ ವಿಕ್ಟೋರಿಯಾ ಹಾಗೂ ರಾಜಕುಮಾರ ಆಲ್ಪರ್ಟ್‌ ಕ್ರಿಸ್‌ಮಸ್‌ ಟ್ರೀಗೆ ಹೆಚ್ಚಿನ ಉತ್ತೇಜನ ನೀಡಿದರು. 1848ರಲ್ಲಿ ವಿಂಡ್ಸರ್‌ ಕೋಟೆಯಲ್ಲಿ ಕ್ರಿಸ್‌ಮಸ್‌ ಟ್ರೀ ಸ್ಥಾಪಿಸಿ ಭವ್ಯ ಅಲಂಕಾರ ಮಾಡಿದ್ದು ಪತ್ರಿಕೆಗಳಲ್ಲಿ ಬಂದಿದ್ದೇ ಬಂದಿದ್ದು. ಅಲ್ಲಿಂದ ಮುಂದೆ ಇಂಗ್ಲೆಂಡ್‌, ಅಮೆರಿಕ ಹಾಗೂ ಕೆನಡಾಗಳಲ್ಲಿ ಕ್ರಿಸ್‌ಮಸ್‌ ಟ್ರೀ ಸ್ಥಾಪಿಸುವ ಆಚರಣೆ ಸಂಪ್ರದಾಯವೇ ಆಗಿಬಿಟ್ಟಿತು. 20ನೇ ಶತಮಾನದಲ್ಲಿ ಅಮೆರಿಕನ್ನರು ಮನೆಯಲ್ಲೇ ಸಿದ್ಧಪಡಿಸಿದ ಕರಕುಶಲ ವಸ್ತುಗಳಿಂದ ಕ್ರಿಸ್‌ಮಸ್‌ ಟ್ರೀಗಳನ್ನು ಸಿಂಗರಿಸುತ್ತಿದ್ದರು. ಜರ್ಮನ್‌ ಮೂಲದ ಅಮೆರಿಕನ್ನರು ಸೇಬು, ಒಣ ಹಣ್ಣು–ಬೀಜಗಳು, ಕುಕಿಸ್‌ಗಳಿಂದ ಅಲಂಕಾರ ಮಾಡುತ್ತಿದ್ದರು. ನಂತರ ಪಾಪ್‌ಕಾರ್ನ್‌ಗಳಿಗೆ ಬಣ್ಣ ಬಳಿದು ಅವುಗಳನ್ನು ಒಣಹಣ್ಣುಗಳು– ಬೀಜಗಳ ನಡುವೆ ಹಾಕಿ ಹಾರದಂತೆ ಮಾಡುವ ಪದ್ಧತಿಯೂ ಶುರುವಾಯಿತು. ನಿಧಾನಕ್ಕೆ ವಿದ್ಯುತ್‌ ದೀಪಾಲಂಕಾರ ಸೇರಿಕೊಂಡಿತು. ಮನೆಗಳಲ್ಲಿ ಮಾಡುತ್ತಿದ್ದ ಕ್ರಿಸ್‌ಮಸ್‌ ಟ್ರೀ ಅಲಂಕಾರ ನಗರದ ಪ್ರಮುಖ ಚೌಕಗಳಲ್ಲಿಯೂ ಶುರುವಾಗಿ ಸಮುದಾಯ ಉತ್ಸವದ ರೂಪ ತಾಳಿತು.

ನ್ಯೂಯಾರ್ಕ್‌ ನಗರದ ರಾಕ್‌ಫೆಲ್ಲರ್‌ ಸೆಂಟರ್‌ನಲ್ಲಿ 1948ರಲ್ಲಿ 100 ಅಡಿ ಎತ್ತರದ ಕ್ರಿಸ್‌ಮಸ್‌ ಟ್ರೀ ನಿಲ್ಲಿಸುವ ಕಾರ್ಯಕ್ರಮ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೂ ಈ ಕ್ರಿಸ್‌ಮಸ್‌ ಟ್ರೀ ಪ್ರತಿಷ್ಠೆಯ ಸಂಕೇತವಾಗಿ ಬೆಳೆದು ಬಂದಿದೆ. ಈಚೆಗೆ ಇಲ್ಲಿ ನಿಲ್ಲಿಸಲಾದ ಕ್ರಿಸ್‌ಮಸ್‌ ಟ್ರೀಗೆ 25,000 ದೀಪಗಳನ್ನು ಹಾಕಲಾಗಿದ್ದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಮೊಂಬತ್ತಿಗಳು, ಹೊಳೆಯುವ ಅಲಂಕಾರ ಸಾಮಗ್ರಿಗಳು, ಉಡುಗೊರೆಗಳು, ಬಣ್ಣದ ಬಲ್ಬ್‌ಗಳು, ತುದಿಯಲ್ಲಿ ಏಂಜಲ್‌ ಪ್ರತಿಕೃತಿ, ನಕ್ಷತ್ರಗಳು, ಸ್ಟ್ರಾಗಳಿಂದ ಮಾಡಿದ ಹಿಮದ ವಿನ್ಯಾಸ, ಮರದಿಂದ ಮಾಡಿದ ಪ್ರಾಣಿಗಳ ಪ್ರತಿಕೃತಿ ಹೀಗೆ ಮರಗಳಿಗೆ ಕಟ್ಟುವ ಸಾಮಗ್ರಿಗಳು ವರ್ಷ ವರ್ಷಕ್ಕೂ ವೈವಿಧ್ಯಮಯವಾಗುತ್ತ ಸಾಗುತ್ತಿವೆ. ಕೆರೋಲ್‌ ಹಾಡುಗಳನ್ನು ಹಾಡುತ್ತ ಕ್ರಿಸ್‌ಮಸ್‌ ಟ್ರೀಗಳ ಸುತ್ತ ಸುತ್ತುವುದು, ಮರದ ಕಾಂಡದ ಒಳಗೆ ಚಾಕೊಲೆಟ್‌, ಬಾದಾಮಿ, ಒಣಹಣ್ಣುಗಳು ಹಾಗೂ ಕೆಲವು ಸಿಹಿ ತಿನಿಸುಗಳನ್ನು ತುಂಬಿ ಇಡುವುದು. ಅದನ್ನು ತೆಗೆಯುವಂತೆ ಮಕ್ಕಳಿಗೆ ಸವಾಲು ಹಾಕುವುದು... ಹೀಗೆ ವಿವಿಧ ಮನರಂಜನೀಯ ಸಂಗತಿಗಳೂ ಕ್ರಿಸ್ಮಸ್‌ ಟ್ರೀ ಜೊತೆ ಸೇರಿಕೊಳ್ಳುತ್ತವೆ.

ಜಗತ್ತಿನ ಪ್ರಖ್ಯಾತ ‘ಕ್ರಿಸ್‌ಮಸ್‌ ಟ್ರೀ’

ಇಟಲಿಯ ಗುಬ್ಬಿಯೊದಲ್ಲಿ ಪ್ರತಿವರ್ಷ ಜಗತ್ತಿನ ಅತಿ ಎತ್ತರದ ಕ್ರಿಸ್‌ಮಸ್‌ ಟ್ರೀ ಆಕಾರದ ದೀಪಾಲಂಕಾರ ಮಾಡಲಾಗುತ್ತದೆ. ಬೆಟ್ಟದ ಇಳಿಜಾರಿನಲ್ಲಿ ಕಂಡು ಬರುವ ಇದು 2,460 ಅಡಿ ಎತ್ತರವಿದ್ದು ಹಲವು ಕಿಲೊಮೀಟರ್‌ಗಳವರೆಗೂ ದರ್ಶನ ನೀಡುತ್ತದೆ. ಇದರಲ್ಲಿ 700 ದೀಪಗಳು ಬೆಳಗುತ್ತವೆ. ರಿಯೊ ಡಿ ಜನೈರೊದಲ್ಲಿ ಜಗತ್ತಿನ ಅತಿ ಎತ್ತರದ ಕೃತಕ ಕ್ರಿಸ್‌ಮಸ್‌ ಟ್ರೀ (278 ಅಡಿ ಎತ್ತರ) ಇದೆ. ಇದು ನೀರಿನಲ್ಲಿ ತೇಲುವುದು ಇನ್ನೂ ವಿಶೇಷ. ಜರ್ಮನಿಯ ಡಾರ್ಟ್‌ಮುಂಡ್ಸ್‌ನ ಕ್ರಿಸ್ಮಸ್‌ ಮಾರುಕಟ್ಟೆಯಲ್ಲಿ ಹಲವು ಮರಗಳನ್ನು ಸೇರಿಸಿ ಅತಿ ಎತ್ತರದ ನೈಸರ್ಗಿಕ ಕ್ರಿಸ್‌ಮಸ್‌ ಟ್ರೀ (145 ಅಡಿ ಎತ್ತರ) ಸ್ಥಾಪಿಸಲಾಗುತ್ತದೆ. ಇದಕ್ಕೆ 48,000 ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗುತ್ತದೆ. 400 ವರ್ಷಗಳಷ್ಟು ಹಳೆಯದಾದ ಕ್ರಿಸ್‌ಮಸ್‌ ಟ್ರೀ (ಓಕ್‌ ಮರ) ವಿಲ್ಮಿಂಗ್‌ಟನ್‌ನಲ್ಲಿ ಇದೆ. 5,250 ಬಣ್ಣದ ದೀಪಗಳನ್ನು ಇದಕ್ಕೆ ಹಾಕಲಾಗುತ್ತದೆ. ಗಿನ್ನಿಸ್‌ ಬುಕ್‌ ಆಫ್‌ ರೆಕಾರ್ಡ್ಸ್‌ ಪ್ರಕಾರ 1950ರಲ್ಲಿ ವಾಷಿಂಗ್ಟನ್‌ನ ಸಿಯಾಟಲ್‌ ನಾರ್ಥ್‌ಗೇಟ್‌ ಶಾಪಿಂಗ್‌ ಸೆಂಟರ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದ 221 ಅಡಿ ಎತ್ತರದ ಡೌಗ್ಲಾಸ್‌ ಫರ್‌ ಜಗತ್ತಿನ ಅತಿ ಎತ್ತರದ ಕ್ರಿಸ್‌ಮಸ್‌ ಟ್ರೀ ಆಗಿತ್ತು. ಇನ್ನು ನಮ್ಮ ದೇಶಕ್ಕೆ ಬಂದರೆ ಬೆಂಗಳೂರಿನ ವೈಟ್‌ಫೀಲ್ಡ್‌ನ ಫೀನಿಕ್ಸ್‌ ಮಾರ್ಕೆಟ್‌ ಸಿಟಿಯಲ್ಲಿ ಕಳೆದ ವರ್ಷ ದೇಶದ ಅತಿ ಎತ್ತರದ ಕ್ರಿಸ್‌ಮಸ್‌ ಟ್ರೀ (75 ಅಡಿ) ರಚಿಸಲಾಗಿತ್ತು.

ಹವಾಯಿ, ಅಲಾಸ್ಕಾ ಸೇರಿದಂತೆ 50 ರಾಷ್ಟ್ರಗಳಲ್ಲಿ ಕ್ರಿಸ್‌ಮಸ್‌ ಟ್ರೀಗಳನ್ನು ಫಾರ್ಮ್‌ಗಳಲ್ಲಿ ಬೆಳೆಯಲಾಗುತ್ತದೆ. 10,00,000 ಎಕರೆಗಳಷ್ಟು ಪ್ರದೇಶದಲ್ಲಿ ಇವುಗಳ ಬೆಳೆ ಇದೆ. ಪ್ರತಿ ಎಕರೆಯಲ್ಲಿ 2,000 ಮರಗಳನ್ನು ಬೆಳೆಯಬಹುದು. ನಾರ್ವೆ ಸ್ಪ್ರೂಸ್, ಸ್ಕೋಚ್‌ ಪೈನ್‌, ಡೌಗ್ಲಾಸ್‌ ಫರ್‌, ಬಲ್ಸಾಂ ಫರ್‌ ಹಾಗೂ ಬಿಳಿಯ ಪೈನ್‌ ಮರಗಳನ್ನು ಅಲಂಕರಿಸಲು ಜನ ಇಷ್ಟಪಡುತ್ತಾರೆ. ಇವುಗಳನ್ನು ಖರೀದಿಸಲು ಸಾಧ್ಯವಾಗದವರು ಕಟ್ಟಿಗೆಗಳಲ್ಲಿ ಪಿರಮಿಡ್‌ ಆಕಾರ ಮಾಡಿ ಅದನ್ನು ಅಲಂಕರಿಸಿ ಖುಷಿ ಪಡುತ್ತಾರೆ. ನಮ್ಮ ದೇಶದಲ್ಲಿ ಅರಕೇರಿಯಾ, ಜುನಿಪರ್‌, ಸೈಪ್ರಸ್‌ ಮೊದಲಾದ ಗಿಡಗಳು ನರ್ಸರಿಗಳಲ್ಲಿ ಲಭಿಸುತ್ತವೆ.

ಭಾರತೀಯರಲ್ಲಿ ಮರ ಸುತ್ತುವುದು, ಮರಕ್ಕೆ ದಾರ ಸುತ್ತುತ್ತ ಹರಕೆ ಹೇಳಿಕೊಳ್ಳುವುದು, ತುಳಸಿ ಪೂಜೆ, ಕಬ್ಬು, ಬಾಳೆ ಕಂದು, ಕಹಿಬೇವಿನ ಗೆಲ್ಲುಗಳು, ಮಾವಿನ ಗಿಡದ ಗೆಲ್ಲುಗಳನ್ನು ಮನೆಗೆ ತಂದು ಕಟ್ಟುವುದು ಹೀಗೆ ಗಿಡಮರ ಎಲೆಗಳಿಂದ ಆರಾಧನೆ ಕಂಡು ಬಂದರೆ, ಪಾಶ್ಚಾತ್ಯರಲ್ಲಿ ಕ್ರಿಸ್‌ಮಸ್‌ ಟ್ರೀ ಮೂಲಕ ಇಂಥ ಆರಾಧನೆ ಕಂಡು ಬರುತ್ತದೆ. ಈಚೆಗೆ ಕ್ರಿಸ್‌ಮಸ್‌ ಟ್ರೀ ಅಲಂಕಾರದಲ್ಲಿ ವೈವಿಧ್ಯಗಳ ಸಾಗರವೇ ಕಂಡು ಬರುತ್ತದೆ. ರಟ್ಟು, ಪ್ಲಾಸ್ಟಿಕ್‌, ಲೋಹ ಸೇರಿ ಹಲವು ಪದಾರ್ಥಗಳಿಂದ ಮಾಡಿದ ಕೃತಕ ಕ್ರಿಸ್‌ಮಸ್‌ ಟ್ರೀಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ನೇರ ಮಾರುಕಟ್ಟೆಯಲ್ಲಿ, ಆನ್‌ಲೈನ್‌ ಮಾರುಕಟ್ಟೆಯಲ್ಲಿ ಕ್ರಿಸ್‌ಮಸ್‌ ಟ್ರೀಯಿಂದ ಹಿಡಿದು ಅದನ್ನು ಸಿಂಗರಿಸುವ ವಸ್ತುಗಳೆಲ್ಲ ಲಭ್ಯವಿವೆ.‌

ಕ್ರಿಸ್‌ಮಸ್‌ ಟ್ರೀ ಅಲಂಕಾರ ಮಾಡುವುದು ಕ್ರಿಶ್ಚಿಯನ್ನರಿಗೆ ಸೀಮಿತವಾಗಿ ಉಳಿದಿಲ್ಲ. ಎಲ್ಲ ಸಮುದಾಯದವರೂ ಇದನ್ನು ನೋಡಲು, ಮಾಡಲು ಇಷ್ಟಪಡುತ್ತಾರೆ. ವಿಶೇಷವಾಗಿ ಮಕ್ಕಳಿಗೆ ಇದೊಂದು ಸಂಭ್ರಮದ ಸಂಗತಿ. ಈ ತಿಂಗಳಲ್ಲಿ ಮಾಲ್‌ಗಳ ಎದುರು, ದೊಡ್ಡ ಮಳಿಗೆಗಳ ಎದುರು ಸಹ ಕ್ರಿಸ್‌ಮಸ್‌ ಟ್ರೀ ಇಟ್ಟು ಅಲಂಕರಿಸಿ ಗ್ರಾಹಕರನ್ನು ಆಕರ್ಷಿಸುವ ಮಾರುಕಟ್ಟೆಯ ತಂತ್ರ ಈಚೆಗೆ ಅವತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT