ಗುರುವಾರ , ಆಗಸ್ಟ್ 5, 2021
22 °C

ಚೂಡಾಮಣಿ ಸೂರ್ಯಗ್ರಹಣ: ಯಾವ ರಾಶಿಯವರಿಗೆ ಯಾವ ಫಲ?

ಕೆ.ಎಲ್. ವಿದ್ಯಾಶಂಕರ ಸೋಮಯಾಜಿ Updated:

ಅಕ್ಷರ ಗಾತ್ರ : | |

ಸೂರ್ಯ ಗ್ರಹಣ– ಪ್ರಾತಿನಿಧಿಕ ಚಿತ್ರ

ಈ ಜಗತ್ತನ್ನು ವ್ಯಾಪಿಸಿರುವ ಪಂಚಭೂತಗಳಲ್ಲಿ ಒಂದಾಗಿರುವ ಆಕಾಶ ನಿಗೂಢತೆಯ ಗೂಡು. ಅಂತಹ ಆಕಾಶದಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಮತ್ತು ಆಕಾಶಕಾಯಗಳು, ಇವುಗಳ ಚಲನ-ವಲನಗಳು ವಿಸ್ಮಯಕರ. ಈ ಕುತೂಹಲಕಾರಿ ವಿಷಯಗಳನ್ನು ಭಾಸ್ಕರಾಚಾರ್ಯ ಮತ್ತು ವರಾಹಮಿಹಿರ, ಮುಂತಾದವರು ಆಧುನಿಕ ವಿಜ್ಞಾನೋಪಕರಣಗಳಿಲ್ಲದೇ, ಕೇವಲ ಭಾರತೀಯ ಸಾಂಪ್ರದಾಯಿಕ ಜ್ಞಾನಮಾರ್ಗದಲ್ಲಿ ಅಧ್ಯಯನ ಮಾಡಿರುವುದು ಅಭೂತಪೂರ್ವವಾದ ಸಂಗತಿ. ಆದ್ದರಿಂದ ಇಂದಿಗೂ ವೈಜ್ಞಾನಿಕ ಕ್ಷೇತ್ರದಲ್ಲಿ ವರಾಹಮಿಹಿರರಂತಹ ಭಾರತೀಯ ಖಗೋಳಶಾಸ್ತ್ರಜ್ಞರು ವಿಶಿಷ್ಟವಾದ ಸ್ಥಾನವನ್ನು ಹೊಂದಿದ್ದಾರೆ.

ಸೂರ್ಯೋದಯದಿಂದ ದಿನ ಪ್ರಾರಂಭವಾಗುವ ನಮಗೆ ಜೀವನದಲ್ಲಿ ಹೊಸತು ಹುಡುಕುವುದು, ಸಂಶೋಧನೆ ಮಾಡುವುದು, ನೂತನ ವಿಚಾರಗಳ ಬಗ್ಗೆ ಅಧ್ಯಯನ ಮಾಡುವುದೆಂದರೆ ಬಹಳ ಸಂತೋಷ. ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆಯು ಜೂನ್ 21ರ ರವಿವಾರದಂದು ಖಗೋಳ ವಿಜ್ಞಾನಿಗಳಿಗೆ ಮಹತ್ತರವಾದ ದಿನವಾಗಿದೆ. ಏಕೆಂದರೆ ಅಂದು ಸೂರ್ಯ, ಚಂದ್ರ ಮತ್ತು ಭೂಮಿ ಸರಳರೇಖೆಯಲ್ಲಿ ಸಂಚರಿಸಿ ಗ್ರಹಣ ಗೋಚರವಾಗಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದು ಸೂರ್ಯನು ಕೆಲಕಾಲ ಮರೆಯಾಗುತ್ತಾನೆ. ಇಂತಹ ಕಾಲವನ್ನು ನಾವು ಸೂರ್ಯಗ್ರಹಣ ಎಂದು ಹೇಳುತ್ತೇವೆ. ಈ ರೀತಿಯ ಸಂದರ್ಭಗಳು ಕೇವಲ ಅಮಾವಾಸ್ಯೆಯಂದು ಮಾತ್ರ ಶಕ್ಯವಾಗುವುದು. ಈ ಬಾರಿಯು ಸೂರ್ಯಗ್ರಹಣವು ಭಾನುವಾರದಂದು ಸಂಭವಿಸುವುದರಿಂದ ಚೂಡಾಮಣಿ ಸೂರ್ಯಗ್ರಹಣವೆಂದು ಕರೆಯುತ್ತಾರೆ. 

ಈ ಚೂಡಾಮಣಿ ಸೂರ್ಯಗ್ರಹಣದಿಂದಾಗಿ ಮೃಗಶಿರ, ರೋಹಿಣಿ, ಆರ್ದ್ರಾ, ಚಿತ್ರಾ, ಧನಿಷ್ಠಾ ನಕ್ಷತ್ರದವರಿಗೆ ಮತ್ತು ಮಿಥುನ, ವೃಷಭ, ಕರ್ಕಾಟಕ, ವೃಶ್ಚಿಕ, ಮೀನ ರಾಶಿಯವರಿಗೆ ದುಷ್ಫಲಗಳು ಅನುಭವಕ್ಕೆ ಬರಲಿದೆ.

ಗ್ರಹಣಾಚರಣೆಯ ಪದ್ಧತಿಗಳು:

• ಜೂನ್‌ 20ರ ರಾತ್ರಿ 11 ಗಂಟೆಯಿಂದ ಗ್ರಹಣಮೋಕ್ಷದವರೆಗೆ ಭೋಜನಾದಿಗಳು ನಿಷಿದ್ಧ.
• ಗ್ರಹಣ ಪ್ರಾರಂಭದಲ್ಲಿ ಮತ್ತು ಅಂತ್ಯದ ಸಮಯದಲ್ಲಿ ಸ್ನಾನವನ್ನು ಮಾಡಬೇಕು.
• ಗ್ರಹಣದ ಸಂದರ್ಭದಲ್ಲಿ ನದಿಸ್ನಾನ ಅಥವಾ ಸಮುದ್ರಸ್ನಾನ ಮಾಡಿದರೆ ವಿಶೇಷ ಪುಣ್ಯಪ್ರಾಪ್ತಿಯಾಗುವುದು.
• ಗ್ರಹಣದ ಕಾಲದಲ್ಲಿ ಜಪ, ಪಾರಾಯಣ, ಸ್ತೋತ್ರ ಪಠಣ, ತರ್ಪಣಾದಿಗಳನ್ನು ಮಾಡುವುದರಿಂದ ದುಪ್ಪಟ್ಟು ಫಲ ದೊರಕುವುದು.
• ಗ್ರಹಣದ ಸ್ಪರ್ಶಕಾಲದಿಂದ ಮಧ್ಯಕಾಲದೊಳಗಾಗಿ ತರ್ಪಣವನ್ನು ನೀಡತಕ್ಕದ್ದು.
• ಶ್ರಾದ್ಧ ಮಾಡಬೇಕಾದ ಸಂದರ್ಭಹೊಂದಿದವರು ಗ್ರಹಣಮೋಕ್ಷದ ನಂತರ ಶ್ರಾದ್ಧವನ್ನು ಮಾಡಬೇಕು.
• ಗ್ರಹಣಸಮಯದಲ್ಲಿ ಎಳ್ಳೆಣ್ಣೆಯ ದೀಪ ಅಥವಾ ತುಪ್ಪದ ದೀಪ ಹಚ್ಚುವುದರಿಂದ ಪಾಪ ಪರಿಹಾರವಾಗುತ್ತದೆ.
• ಜನ್ಮನಕ್ಷತ್ರದಲ್ಲಿ ಅಥವಾ ಜನ್ಮರಾಶಿಯಲ್ಲಿ ಗ್ರಹಣ ಸಂಭವಿಸಿದರೆ ಗರ್ಗೋಕ್ತಾದಿ ಶಾಂತಿಯನ್ನು, ನವಗ್ರಹ ಆರಾಧನೆಯನ್ನು ಹಾಗೂ ಸೂರ್ಯನ ಬಿಂಬವನ್ನು, ನಾಗನ ಬಿಂಬವನ್ನು, ಕಂಚಿನ ಪಾತ್ರೆಯಲ್ಲಿ ತುಪ್ಪವನ್ನು, ಎಳ್ಳು, ಧಾನ್ಯ ಮೊದಲಾದವುಗಳನ್ನು ದಕ್ಷಿಣೆ ಸಮೇತವಾಗಿ ದಾನ ಮಾಡುವುದರಿಂದ ಅನಿಷ್ಟಗಳು ದೂರವಾಗುವುವು.
• ಖಂಡಗ್ರಾಸ ಗ್ರಹಣವಾಗಿರುವುದರಿಂದ ವಿಶೇಷ ಕಾರ್ಯಗಳು ಮಾಡುವವರಿಗೆ ಚತುರ್ದಶ್ಯಾದಿ ಮೂರು ದಿನಗಳು ವರ್ಜ್ಯವಾಗಿರುತ್ತವೆ. ಅಂದರೆ ಜೂನ್‌ 22ರ ನಂತರದ ದಿನಗಳು ಸೂಕ್ತವಾಗಿರುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು