ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ವಿಶ್ವಕರ್ಮ ಜಯಂತಿ: ವಿಶ್ವಸೃಷ್ಟಿಯ ವಿಶ್ವಕರ್ಮತತ್ವ

Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಲೇಖಕರು: ವೀರೇಶ ಬಡಿಗೇರ

ಶ್ರುತಿ ಮತ್ತು ಪುರಾಣಗಳಲ್ಲಿ ಶಿವನನ್ನು ವಿಶ್ವಕರ್ಮನೆಂದು ವರ್ಣಿಸಲಾಗಿದೆ. ಅವನು ಸೃಷ್ಟಿ, ಸ್ಥಿತಿ, ಸಂಹಾರ, ತಿರೋಧಾನ ಮತ್ತು ಅನುಗ್ರಹ ಎಂಬ ಐದು ಹೊಣೆಗಾರಿಕೆಯುಳ್ಳವನು. ಯಜುರ್ವೇದದ ಪ್ರಕಾರ ವಿಶ್ವಕರ್ಮನು ತನ್ನ ಸಂಕಲ್ಪ ಮಾತ್ರದಿಂದಲೇ ಈ ಸೃಷ್ಟಿಯನ್ನು ಮಾಡಿದನು. ತನ್ನ ಶ್ರುತ, ಧಾರಣ, ಪ್ರಜ್ಞಾಶಕ್ತಿಗಳ ಮೂಲಕ ಜಗತ್ತಿನ ಚೇತನ ಮತ್ತು ಅಚೇತನ ರೂಪಗಳಲ್ಲಿ ಅಸಾಧಾರಣ ಚೈತನ್ಯಶಕ್ತಿ ತುಂಬಿದವನು. ಸೃಷ್ಟಿಯಲ್ಲಿರುವ ಚರಾಚರವಾಗಲೀ ಮೂರ್ತಾಮೂರ್ತವಾಗಲೀ, ಯಾವುವೂ ನಿಷ್ಕರ್ಮವಾಗಿರುವುದು ಸಾಧ್ಯವಿಲ್ಲ. ಎಲ್ಲ ಕರ್ಮಗಳಿಗೆ ವಿಶ್ವಕರ್ಮನೇ ಅಧಿಷ್ಠಾನ ಕರ್ತೃ. ಈ ಅರ್ಥದಲ್ಲಿ ವಿಶ್ವಕರ್ಮನೆಂದರೆ ಸಕಲ ಶಕ್ತಿವಂತ ಹಾಗೂ ಸರ್ವಸ್ಯ ಕರ್ತಾರ.

ವಿಶ್ವಕರ್ಮನೆಂದರೆ ಕೇವಲ ನಾಮ–ರೂಪಗಳಲ್ಲ; ಅದೊಂದು ಸಕರ್ಮಕ ತತ್ವ. ಮೌನೇಶ್ವರರು ‘ನಾನಾ ದೇವರು ಚಾಣಿನ ಮಕ್ಕಳು’ ಎಂದು ಹೇಳುತ್ತಾರೆ. ಎಂದರೆ ಮೂವತ್ತಮೂರು ಕೋಟಿ ದೇವತೆಗಳಿಗೆ ನಾಮ–ರೂಪಗಳನ್ನು ಕೊಟ್ಟು, ಅವರಿಗೆ ಕರ್ತೃತ್ವ ಮತ್ತು ಕರ್ತವ್ಯಗಳನ್ನು ನಿಯಮಿಸಿದ ವಿಶ್ವಕರ್ಮನಿಗೆ ನಾಮ–ರೂಪಗಳಿಲ್ಲ. ರುದ್ರತ್ವ, ವಿಷ್ಣುತ್ವ, ಬ್ರಹ್ಮತ್ವ, ನಾರಾಯಣತ್ವ, ಇಂದ್ರತ್ವ, ಅಗ್ನಿತ್ವ ಮುಂತಾದ ಎಲ್ಲ ರೂಪ ಮತ್ತು ಕರ್ಮಗಳು ಗುಣಾತ್ಮಕವಾಗಿ ವಿಶ್ವಕರ್ಮನಲ್ಲಿ ಅಡಕವಾಗಿವೆ.

ಅಖಂಡ ಕೋಟಿ ಬ್ರಹ್ಮಾಂಡದಲ್ಲಿ ಯಾವುದು ಉಂಟೋ, ಯಾವುದನ್ನು ನಮ್ಮ ಕಣ್ಣಿನಿಂದ ನೋಡುತ್ತೇವೆಯೋ, ಯಾವುದನ್ನು ಕೇಳುತ್ತೇವೆಯೋ, ಯಾವುದರ ಕುರಿತು ಆಲೋಚಿಸುತ್ತೇವೆಯೋ, ಯಾವುದರ ಕುರಿತು ತಿಳಿಯುತ್ತೇವೆಯೋ, ಅವೆಲ್ಲವೂ ವಿಶ್ವಕರ್ಮನಲ್ಲಿ ಬಯಲುರೂಪದಲ್ಲಿ ಬೆರೆತಿವೆ. ಅಥರ್ವಶ್ರುತಿ ಹೇಳುವಂತೆ ವಿಶ್ವಕರ್ಮನೆಂದರೆ ‘ವಾಚಸ್ಪತಿ’. ವಾಣಿಯ ಮೂಲಕ ಉಂಟಾಗುವ ಎಲ್ಲ ವಿಧದ ಜ್ಞಾನಕ್ಕೆ ಕರ್ತೃಸ್ಥಾನದಲ್ಲಿರುವವನು. ಅವನು ಸ್ವಯಂಭೂ ಮತ್ತು ಸ್ವತಂತ್ರ; ತ್ರಿಮೂರ್ತಿಗಳಿಗೆ ಈ ಜಗದ ಹೊಣೆಗಾರಿಕೆಯನ್ನು ವಹಿಸಿದವನು. ಬ್ರಹ್ಮನನ್ನೇ ಸೃಷ್ಟಿಸಿ ಅವನಿಗೆ ವೇದಗಳನ್ನು ಕಲಿಸಿದವನು ಅವನು ಎಂದು ಶ್ವೇತಾಶ್ವತರೋಪನಿಷತ್ತು ಹೇಳುತ್ತದೆ. ಅವನು ಸುಂದರರೂಪವನ್ನು ನಿರ್ಮಿಸುವವನು ಎಂದು ಋಗ್ವೇದ ಹೇಳುತ್ತದೆ. 

ಅನಂತಮಯವಾದ ಸಕಲಕರ್ಮಗಳನ್ನು ಯಾರು ಆಚರಿಸಬಲ್ಲರೋ ಆತನೇ ವಿಶ್ವಕರ್ಮ; ಅವನು ಜ್ಞಾನ ಮತ್ತು ವಿಜ್ಞಾನಗಳಿಂದ ಆವೃತವಾದವನು. ಶಿಲ್ಪಶಾಸ್ತ್ರವನ್ನು ಅಮರಕೋಶದಲ್ಲಿ ‘ವಿಜ್ಞಾನ’ವೆಂದು ಕರೆಯಲಾಗಿದೆ. ಜ್ಞಾನ ಮತ್ತು ವಿಜ್ಞಾನಗಳಿಂದ ಕೂಡಿದ ವಿಶ್ವಕರ್ಮನು ಯಾವಾಗಲೂ ಒಂದೇ ರೀತಿ ಇರುವನು. ಮಣ್ಣು, ಕಲ್ಲು, ಚಿನ್ನಗಳ ವ್ಯತ್ಯಾಸವನ್ನು ನೋಡದೇ ಒಂದೇ ಸಮನಾಗಿ ಭಾವಿಸುವವನೇ ಯೋಗಿ. ಅಂತಹ ಸಮಭಾವವುಳ್ಳವನೇ ವಿಶ್ವಕರ್ಮ.

ವಿಶ್ವಕರ್ಮನು ಆತ್ಮಸಂಸ್ಕೃತಿಯ ಪ್ರತಿನಿಧಿ. ಈ ಆತ್ಮಸಂಸ್ಕೃತಿಯ ಪ್ರತೀಕವಾದ ಶಿಲ್ಪಗಳ ಆರಾಧನೆಯಿಂದ ಆರಾಧಕ ತನ್ನನ್ನು ತಾನು ಸಂಸ್ಕಾರ ಮಾಡಿಕೊಳ್ಳಬೇಕೆಂದು ಐತ್ತರೇಯ ಬ್ರಾಹ್ಮಣ ಹೇಳುತ್ತದೆ. ಅಂತಹ ಶಿಲ್ಪಗಳನ್ನು ಒದಗಿಸುವ ಶಿಲ್ಪಿಯೇ ವಿಶ್ವಕರ್ಮ ಅಥವಾ ಪಾಂಚಾಳ. ಶೈವಾಗಮದಲ್ಲಿ ಸ್ವರ್ಣಾದಿ ಪಂಚಶಿಲ್ಪಗಳಿಂದ ಲೋಕೋಪಕಾರಿಯಾಗಿ ಲೋಕದ ಸೌಂದರ್ಯವನ್ನು ಹೆಚ್ಚಿಸುವವನೇ ಪಾಂಚಾಳ ಎಂದು ಹೇಳಲಾಗಿದೆ. ಪಂಚಮಹರ್ಷಿಗಳಿಗೆ ಕ್ರಮವಾಗಿ ಮನು, ಮಯ, ತ್ವಷ್ಟ್ರು, ಶಿಲ್ಪಿ, ವಿಶ್ವಜ್ಞ ಎಂಬ ಹೆಸರುಗಳಿವೆ. ಅವರೇ ಕಬ್ಬಿಣ, ಮರ, ಕಂಚು, ಶಿಲೆ ಮತ್ತು ಸುವರ್ಣಾದಿಗಳಲ್ಲಿ ಕೆಲಸ ಮಾಡುವ ಪಾಂಚಾಳರು. ಇವರು ವಿಶ್ವಕರ್ಮನ ಗೋತ್ರೋದ್ಭವರು.

ವಿಶ್ವಕರ್ಮ ಪಂಚವದನನಾಗಿದ್ದಾನೆ. ಸದ್ಯೋಜಾತ (ಪೂರ್ವ), ವಾಮದೇವ (ದಕ್ಷಿಣ), ಆಘೋರ (ಪಶ್ಚಿಮ), ತತ್ಪುರುಷ (ಉತ್ತರ), ಈಶಾನ್ಯ (ಊರ್ಧ್ವ)  – ಈ ಐದು ರೂಪಗಳಿಂದ ಸಾಕಾರನಾದವನೇ ವಿಶ್ವಕರ್ಮ ಪರಮಾತ್ಮ.

ಒಟ್ಟಿನಲ್ಲಿ ವಿಶ್ವಕರ್ಮ ಪರಮಾತ್ಮನೆಂದರೆ ಅದೊಂದು ಲೋಕತತ್ತ್ವ; ಲೋಕದ ಜ್ಞಾನ ಮತ್ತು ಕರ್ಮಮಾರ್ಗಗಳನ್ನು ಆಗುಮಾಡುತ್ತ, ಆಯಾ ಮತ ಮತ್ತು ವೃತ್ತಿಯವರು ತಮ್ಮ ತಮ್ಮ ಕೆಲಸಗಳ ಮೂಲಕವೇ ತಮ್ಮ ಬದುಕಿನ ಕ್ರಮಗಳನ್ನು ರೂಪಿಸಿಕೊಳ್ಳಲು ಪ್ರೇರಕವಾದ ಜೀವಪರತತ್ವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT