ಗುರುವಾರ , ಮಾರ್ಚ್ 30, 2023
21 °C

‘ನೆನಪುಗಳ’ ಆಕಾಶ ‘ಬುಟ್ಟಿ’

ಕಿರಣ ನಾಯ್ಕನೂರ Updated:

ಅಕ್ಷರ ಗಾತ್ರ : | |

Prajavani

ಮನಿ ಮುಂದ ಕಟ್ಟೇವಿ
ಆಕಾಶ ಬುಟ್ಟಿ
ಮಕ್ಕಳಾಡ್ಯಾವ ಅಂಗಳದ ತುಂಬ
ಚಪ್ಪಾಳೆ ತಟ್ಟಿ ತಟ್ಟಿ

ಎಂದು ತಾಯಿ ತನ್ನ ಮಕ್ಕಳ ಸಂತೋಷವನ್ನು ಆಕಾಶ ಬುಟ್ಟಿಯಲ್ಲಿ ಕಂಡರೆ...

ಚಂದ್ರಾಮನಂತ ನನ್ನ ಗೆಳೆಯ
ಮನೆ ಮುಂದ ಕಟ್ಟೇನಿ ಆಕಾಶ ಬುಟ್ಟಿಯ
ವಿರಹದ ಕತ್ತಲಿಗೆ ಬೆಳಕಾಗೊ ‘ಮಾರ’ಯ

ಎಂದು ಚಂದ್ರನಾಕಾರದ ಆಕಾಶ ಬುಟ್ಟಿಯಲ್ಲಿ ಹುಡುಗಿಯೊಬ್ಬಳು ಪ್ರಿಯತಮನನ್ನು ನೆನೆಯುತ್ತಾಳೆ.

ನಿತ್ಯ ಮನೆ ಹೊರಗಿನ ಕಟ್ಟೆ (ಬಂಕ) ಮೇಲೆ ಕುಳಿತು ನಮಗೆಲ್ಲ ಕಥೆ ಹೇಳುತ್ತಿದ್ದ ಅಜ್ಜ ದೀಪಾವಳಿಯಲ್ಲಿ ಮಾತ್ರ ಆಕಾಶ ಬುಟ್ಟಿಯ ಕೆಳಗೆ ಮಟ್ಟಸವಾಗಿ ಹಾಸಿಗೆ ಹಾಸಿಕೊಂಡು ಕುಳಿತು ಕಥೆಯಲ್ಲೇ ಚಂದ್ರನನ್ನು ಕರೆಯುತ್ತಿದ್ದರೆ ನಾವು ಮೈ ಮೇಲೆ ಬಿದ್ದ ಬೆಳಕಿನ ಚುಕ್ಕಿಗಳ ಜತೆ ಆಟವಾಡುತ್ತಾ ಅಲ್ಲೇ ನಿದ್ದೆಗೆ ಜಾರುತ್ತಿದ್ದೇವು.

ಹೀಗೆ, ಗೂಡುದೀಪ, ಬೆಳಕಿನ ಬುಟ್ಟಿ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಿಸಿಕೊಳ್ಳುವ ಆಕಾಶ ಬುಟ್ಟಿ ನಮ್ಮ ಭಾವನೆ, ನೆನಪು, ಸಂಸ್ಕೃತಿಯ ಜತೆ ಬೆಸೆದುಕೊಂಡಿದೆ. ಮೊದಲೆಲ್ಲ ಆಚರಣೆ ಒಂದು ಭಾಗವಾಗಿದ್ದ ಆಕಾಶ ಬುಟ್ಟಿಗಳು ಆಧುನಿಕತೆಯ ಭರಾಟೆಯಲ್ಲಿ ಕೆಲವರಿಗೆ ಪ್ರತಿಷ್ಠೆಯಾದರೆ ಇನ್ನೂ ಕೆಲವರು ತಮ್ಮ ಮನೆ ಅಂದ, ಅಲಂಕಾರಕ್ಕೆ ಇವುಗಳನ್ನು ಹಾಕುತ್ತಿದ್ದಾರೆ.

ಆಕಾಶ ಬುಟ್ಟಿ ಎಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಮಾರುಕಟ್ಟೆ ಹೋಗಿ ತರುವುದರಿಂದ ಹಿಡಿದು ವಿದ್ಯುತ್‌ ಸಂಪರ್ಕ ಕೊಟ್ಟು ಮನೆ ಮುಂದೆ ಕಟ್ಟಿ ಅಂಗಳದ ತುಂಬ ನಕ್ಷತ್ರ ಅರಳಿಸಿ ಅವುಗಳೊಂದಿಗೆ ತಾವು ನಕ್ಕುನಲಿಯುವವರೆಗೂ ಪುಟಾಣಿಗಳದ್ದೇ ಸಂಭ್ರಮ.

ಕಡುಬಡವರು ಸಹ ಚಿಕ್ಕದಾರೂ ಪರವಾಗಿಲ್ಲ ಎಂದು ತಮ್ಮ ಮನೆಮುಂದೆ ಆಕಾಶ ಬುಟ್ಟಿಯೊಂದನ್ನು ಕಟ್ಟಿ ಹಬ್ಬ ಆಚರಿಸುತ್ತಾರೆ. ಹಳ್ಳಿಗಳಲ್ಲಿ ಜಾತಿಯ ಬೇಧ ಇಲ್ಲದೆ ಮುಸ್ಲಿಂ ಸಮುದಾಯವರು ಇವುಗಳನ್ನು ಕಟ್ಟಿ ಸಂಭ್ರಮಿಸುತ್ತಾರೆ.

ನಮ್ಮೂರ ವೀರಭದ್ರ ದೇವರ ಗುಡಿ ಪೂಜಾರಿಯೊಬ್ಬರು ಮನೆಯಲ್ಲೇ ತೆಳ್ಳಗೆ ಬಿದಿರು ಸೀಳಿ, ಹಳೆ ಸೀರೆ, ಬಣ್ಣದ ಹಾಳೆಗಳಿಂದ ಆಕಾಶ ಬುಟ್ಟಿಗಳನ್ನು ಅದೆಷ್ಟು ಚೆಂದ ತಯಾರಿಸುತ್ತಿದ್ದರೆಂದರೆ; ಆಗೆಲ್ಲ ಅವರ ಹಾಗೆ ನಾವು ಮಾಡಲು ಹೋಗಿ ಎಷ್ಟೋ ಸಾರಿ ತಪ್ಪುಗಳಾಗಿ, ಮನೆಯಲ್ಲಿನ ಕಸಬರಿಗೆ (ಜಾಡು) ಸೇರಿ ಅನೇಕ ವಸ್ತುಗಳನ್ನು ಹಾಳು ಮಾಡಿ ಹೊಡೆತ ತಿಂದಿದ್ದು, ಶಾಲೆಯ ಪ್ರತಿಭಾ ಕಾರಂಜಿ ಸೇರಿ ಅನೇಕ ಚಟುವಟಿಕೆಗಳಲ್ಲಿ ಅವುಗಳನ್ನೇ ಮಾಡಿ ಮೆಚ್ಚುಗೆ ಗಳಿಸಿದ್ದು ಇವತ್ತಿಗೆ ಸಿಹಿ ನೆನಪು.

ಆಚರಣೆಗಳು ಅರ್ಥ ಕಳೆದುಕೊಂಡು ಆಡಂಬರದ ರೂಪ ಪಡೆಯುತ್ತಿರುವ ಇಂದಿನ ಆಧುನಿಕ ದಿನಗಳಲ್ಲಿ ಚಿಕ್ಕದೊಂದು ಆಕಾಶ ಬುಟ್ಟಿ ನಮ್ಮ ಬಾಳಲ್ಲೂ ವರ್ಷಪೂರ್ತಿ ಬೆಳಗಲಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು