ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಸಂಭ್ರಮ: ನಾಡಹಬ್ಬ ದಸರಾ ಹತ್ತಾರು ಥರ

Last Updated 16 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ವಿಜಯನಗರ ಸಾಮ್ರಾಜ್ಯದಲ್ಲಿ ನಡೆಯುತ್ತಿದ್ದ ಮಹಾನವಮಿ ಪರಂಪರೆಯನ್ನು ಕ್ರಿ.ಶ.1610ರಲ್ಲಿ ಯದುವಂಶದ ರಾಜ ಒಡೆಯರ್,‌ ತಮ್ಮ ರಾಜಧಾನಿ ಶ್ರೀರಂಗಪಟ್ಟಣದಲ್ಲಿಪುನರ್ ಸ್ಥಾಪಿಸಿ, ಆಚರಿಸಲಾರಂಭಿಸಿದ್ದರು. ಆ ಮಹೋತ್ಸವಕ್ಕೆ ಇದೀಗ 410ರ ಸಂಭ್ರಮ.

ನಾಡದೇವತೆ ಚಾಮುಂಡೇಶ್ವರಿಯು ಮಹಿಷಾಸುರನನ್ನು ಸಂಹಾರ ಮಾಡಿದ, ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿ ವರ್ಷ ಹತ್ತು ದಿನ ಮೈಸೂರಿನಲ್ಲಿ ದಸರಾ ಆಚರಿಸಲಾಗುತ್ತದೆ.

ಮೈಸೂರು ದಸರಾ ವಿಶ್ವಪ್ರಸಿದ್ಧ. ನಾಡಿನ ಇತರ ಭಾಗಗಳಲ್ಲೂ ದಸರಾ ಹಬ್ಬವನ್ನು ವೈಭವದಿಂದ ಆಚರಿಸಲಾಗುತ್ತದೆ. ಒಂದೊಂದು ಆಚರಣೆಗೂ ಒಂದೊಂದು ಹಿನ್ನೆಲೆ, ಐತಿಹಾಸಿಕ ಮಹತ್ವ ಹಾಗೂ ವಿಶಿಷ್ಟ ಸಂಪ್ರದಾಯ ಇದೆ. ಆ ಕಾರಣಕ್ಕಾಗಿಯೇ ನಾಡಿನಾದ್ಯಂತ ಈ ಹಬ್ಬವು ವಿಶೇಷ ಸಂಭ್ರಮ ಮೂಡಿಸುತ್ತದೆ.

ಸೈನಿಕರು ಆರಂಭಿಸಿದ ಹಬ್ಬ

ಬೆಂಗಳೂರಿನ ಜಯಚಾಮರಾಜೇಂದ್ರ ನಗರದಲ್ಲಿ ನಡೆಯುವ ದಸರಾ ಆಚರಣೆಗೆ ಶತಮಾನದ ಇತಿಹಾಸವಿದೆ. ಇದು ಸೈನಿಕರು ಆರಂಭಿಸಿದ ಉತ್ಸವ ಎಂಬುದು ವಿಶೇಷ.

‘ಮೈಸೂರು ಮಹಾರಾಜರ ಸೇನೆಯ ತುಕಡಿಗಳು ನಗರದ ಮುನಿರೆಡ್ಡಿಪಾಳ್ಯದ (ಈಗಿನ ಜೆ.ಸಿ.ನಗರ) ಬಳಿ ಬೀಡುಬಿಟ್ಟಿದ್ದವು. ಮೈಸೂರಿನಲ್ಲಿ ನಡೆಯುವ ಹಬ್ಬದ ಸಡಗರವನ್ನು ಕಣ್ತುಂಬಿಕೊಳ್ಳಲು ಆಗುತ್ತಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲೆಂದೇ ಇಲ್ಲೂ ದಸರಾ ಆಚರಣೆ ಆರಂಭಿಸಲಾಯಿತು’ ಎನ್ನುತ್ತಾರೆ
ಜೆ.ಸಿ.ನಗರ ದಸರಾ ಉತ್ಸವ ಸಮಿತಿಯ ಪ್ರಮುಖರು.

‘ಮೊದಲ ವಿಶ್ವ ಮಹಾಯುದ್ಧಕ್ಕೆ ಮೈಸೂರು ಮಹಾರಾಜರು ಮುನಿರೆಡ್ಡಿಪಾಳ್ಯದಲ್ಲಿ ಬೀಡುಬಿಟ್ಟಿದ್ದ ದಂಡನ್ನು ಕಳುಹಿಸಿಕೊಟ್ಟಿದ್ದರು. ಸೈನಿಕರು ಯುದ್ಧಕ್ಕೆ ಹೊರಡುವ ಮುನ್ನ ತಾವು ನೆಲೆಸಿದ್ದ ಪ್ರದೇಶದ ಆಸುಪಾಸಿನಲ್ಲಿದ್ದ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಯುದ್ಧದಲ್ಲಿ ಗೆದ್ದು ಮರಳಿದರೆ ಬೆಂಗಳೂರಿನಲ್ಲೂ ದಸರಾ ಹಬ್ಬ ಆಚರಿಸುವುದಾಗಿ ಹರಕೆ ಹೊತ್ತಿದ್ದರು. ಯುದ್ಧದಲ್ಲಿ ಜಯ ಸಾಧಿಸಿ ತವರಿಗೆ ಮರಳಿದ ಬಳಿಕ ನಗರದ ಮಹಾನವಮಿ ದಿನ್ನೆಯಲ್ಲಿ ಜಂಬೂಸವಾರಿ ಆಚರಿಸಿದ್ದರು. ನಂತರ ಪ್ರತಿವರ್ಷವೂ ಸೈನಿಕರು ನಗರದಲ್ಲಿ ದಸರಾ ಸಂದರ್ಭದಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಸೇನೆಯ ತುಕಡಿಗಳು ಮುನಿರೆಡ್ಡಿಪಾಳ್ಯದಲ್ಲಿ ನೆಲೆಸಿದ್ದರಿಂದ ಈಮೆರವಣಿಗೆಯನ್ನು ಮೈಸೂರು ಲ್ಯಾನ್ಸರ್ಸ್‌ ಮೈದಾನದಲ್ಲೇ ನಡೆಸಲಾಗುತ್ತಿತ್ತು’ ಎನ್ನುತ್ತಾರೆ ಜೆ.ಸಿ.ನಗರದ ದಸರಾ ಉತ್ಸವ ಸಮಿತಿಯ ಪ್ರಮುಖರಲ್ಲಿ ಒಬ್ಬರಾದ ಟಿ.ಪ್ರಭಾಕರ್‌.

ಅಂಬಾಭವಾನಿಗೆ ಪೂಜೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ದಸರಾ ಸಂದರ್ಭದಲ್ಲಿ ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಸಂಪ್ರದಾಯ. ತುಳಜಾಭವಾನಿ, ಅಂಬಾಭವಾನಿ, ಜಗದಂಬಾ, ರೇಣುಕಾ ಯಲ್ಲಮ್ಮ... ಮುಂತಾದ ಹೆಸರುಗಳಿಂದ ಕರೆಯುವ ದೇವಿಯ ಮೂರ್ತಿಗಳು ನಗರದ ಮೂಲೆಮೂಲೆಯಲ್ಲೂ ಪೂಜೆಗೊಳ್ಳುತ್ತವೆ. ಕಲಬುರ್ಗಿ ನಗರದಲ್ಲಿ 55ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದು ವಾಡಿಕೆ. ಬೀದರ್‌, ಯಾದಗಿರಿ ಹಾಗೂ ಕೊಪ್ಪಳ ನಗರಗಳಲ್ಲೂ ಇದೇ ಮಾದರಿಯಲ್ಲಿ ಹಬ್ಬ ಆಚರಿಸುತ್ತಾರೆ.

ಬಂಜಾರರ ನೃತ್ಯ: ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯದಲ್ಲಿ ದಸರಾ ಕೂಡ ವೈಭವದ ಹಬ್ಬ. ಬಂಜಾರ ಮಹಿಳೆಯರು ತಮ್ಮ ಸಮುದಾಯದ ಜನಪದ ಹಾಡುಗಳನ್ನು ಹಾಡುತ್ತ, ನೃತ್ಯ ಮಾಡುವ ಸಂಪ್ರದಾಯ ಅಲ್ಲಲ್ಲಿ ಇನ್ನೂ ಇದೆ.

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಭ್ರಮರಾಂಬಾ ದೇವಸ್ಥಾನದಲ್ಲಿ ಪ‍್ರತಿ ದಸರೆಗೂ ರಥೋತ್ಸವ ಇರುತ್ತದೆ. ಗ್ರಾಮದ ಮಹಿಳೆಯರು ಮಾತ್ರ ಈ ರಥ ಎಳೆದು, ಉತ್ಸವ ನಡೆಸುವುದು ವಿಶೇಷವಾಗಿದೆ.

ದಸರೆಯ ದಿನ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ‘ನಾವು ನೀವು ಬಂಗಾರದಂಗ ಇರೋಣ’ ಎಂದು ಬನ್ನಿ ಎಲೆಗಳನ್ನು ನೀಡಿ, ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಈ ಭಾಗದ ಸಂಪ್ರದಾಯ.

ರಂಗೇರಿಸುವ ದಾಂಡಿಯಾ

ಕಾರವಾರ ಮತ್ತು ದಾಂಡೇಲಿಯಲ್ಲಿ ನವರಾತ್ರಿ ಸಮಯದಲ್ಲಿ ದೇವಿಯ ಪೂಜೆಯೊಂದಿಗೆ ದಾಂಡಿಯಾ ನೃತ್ಯದ ಸೊಬಗು ಸಂಜೆಗೆ ರಂಗೇರಿಸುತ್ತದೆ. ದೇವಿಯ ಮೂರ್ತಿಗಳ ಖರೀದಿ, ಹಬ್ಬಕ್ಕೆ ಮಂಟಪ ಕಟ್ಟುವುದು, ವೇದಿಕೆ ಸಿದ್ಧಪಡಿಸುವುದು ಮುಂತಾದ ಚಟುವಟಿಕೆಗಳು ಹಬ್ಬದ ಸಂದರ್ಭದಲ್ಲಿ ಕಾಣಿಸುತ್ತಿದ್ದವು.

‘ಜಿಲ್ಲೆಯಲ್ಲಿ ನವರಾತ್ರಿ ಉತ್ಸವಗಳು ಮೊದಲಿನಿಂದಲೂ ಸಾಂಪ್ರದಾಯಿಕವಾಗಿ ನಡೆಯುತ್ತಿವೆ. ಆದರೆ, ಒಂದೆರಡು ದಶಕಗಳಿಂದ ಹೊರರಾಜ್ಯಗಳ ಕಾರ್ಮಿಕರು ವಲಸೆ ಬಂದ ಬಳಿಕ ಕಾರವಾರ, ದಾಂಡೇಲಿಯಲ್ಲಿ ದಾಂಡಿಯಾ ಪ್ರಸಿದ್ಧವಾಯಿತು. ನಾವು 11 ವರ್ಷಗಳಿಂದ ರಂಗೋಲಿ ಸ್ಪರ್ಧೆ, ಐದು ಓವರ್‌ಗಳ ಕ್ರಿಕೆಟ್ ಟೂರ್ನಿ, ಥ್ರೋ ಬಾಲ್, ಒಂಟಿ ಕಾಲಿನ ಓಟ, ಸೂಜಿ ದಾರ ಪೋಣಿಸುವುದು ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ’ ಎನ್ನುತ್ತಾರೆ ಸೋನರವಾಡ ನವರಾತ್ರಿ ಸಮಿತಿಯ ಶ್ರೀಕಾಂತ.

ದಾಂಡೇಲಿಯಲ್ಲಿ ದಸರಾ ಅಂಗವಾಗಿ ರಾಮಲೀಲಾ ನಡೆಯುತ್ತದೆ. ರಾವಣ, ಕುಂಭಕರ್ಣ, ಮೇಘನಾದರ ಪ್ರತಿಕೃತಿಗಳನ್ನು ಸುಡುವ ಸಂಪ್ರದಾಯವಿದೆ.

ಹಳಿಯಾಳದಲ್ಲಿ ಹಿಂದೂ ಪ್ರತಿಷ್ಠಾನದ ವತಿಯಿಂದ ‘ದುರ್ಗಾದೌಡ್’ ಆಯೋಜಿಸಲಾಗುತ್ತದೆ. ನವರಾತ್ರಿಯ ಮೊದಲದಿನ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಪಟ್ಟಣದಲ್ಲಿ ಬೈಕ್ ರ‍್ಯಾಲಿ, ದುರ್ಗಾದೇವಿಗೆ ಪೂಜೆ ಮಾಡಿ ಬಡಾವಣೆಗಳಲ್ಲಿ ಮೆರವಣಿಗೆಯಲ್ಲಿ ಸಾಗುತ್ತಾರೆ. ಈ ಸಂದರ್ಭದಲ್ಲಿ ಆಯಾ ದಿನಮಾನಗಳಿಗೆ ಸಂಬಂಧಿಸಿದ ಸ್ತಬ್ಧಚಿತ್ರಗಳು, ವೇಷಭೂಷಣಗಳೂ ಇರುತ್ತವೆ.

ಮಂಜಿನ ನಗರಿಯ ಕರಗ

‘ಮಂಜಿನ ನಗರಿ’ ಮಡಿಕೇರಿಯಲ್ಲಿ ಪಂಪಿನಕೆರೆ ಬಳಿಯಿಂದ ನಾಲ್ಕು ಶಕ್ತಿದೇವತೆಗಳಾದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿಯಮ್ಮ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಸಡಗರಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಮೊದಲ ದಿವಸ ಕರಗಗಳ ನಗರ ಪ್ರದಕ್ಷಿಣೆ ರಾತ್ರಿಯಿಡೀ ನಡೆಯುತ್ತದೆ. ಮರು ದಿನದಿಂದ ಕರಗಗಳ ಮನೆ ಮನೆ ಪ್ರದಕ್ಷಿಣೆ ನಡೆಯುತ್ತದೆ.

ನವರಾತ್ರಿ ವೇಳೆ ನಡೆಯುವ ಪ್ರಸಿದ್ಧ ಕರಗೋತ್ಸವಕ್ಕೆ ಇತಿಹಾಸವಿದೆ. ಹಲವು ವರ್ಷಗಳ ಹಿಂದೆ ಮಡಿಕೇರಿಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾದಾಗ ಧಾರ್ಮಿಕ ಮುಖಂಡರು ದೇವರ ಮೊರೆ ಹೋಗಿದ್ದರು. ರೋಗಕ್ಕೆ ದುಷ್ಟಶಕ್ತಿಗಳು ಕಾರಣವಾಗಿದ್ದು ಅದಕ್ಕೆ ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು, ನವರಾತ್ರಿಯ ವೇಳೆ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಬೇಕು ಎಂದು ಸಲಹೆ ಕೊಟ್ಟಿದ್ದರು. ಅದರಂತೆ ‘ಕರಗೋತ್ಸವ’ ಆರಂಭಗೊಂಡಿತ್ತು’ ಎಂದು ದಸರಾ ಸಮಿತಿ ಮುಖಂಡ ಜಗದೀಶ್‌ ತಿಳಿಸಿದರು.

ವಿಜಯದಶಮಿಯ ದಿವಸ ನಡೆಯುವ ದಶಮಂಟಪಗಳ ಶೋಭಾಯಾತ್ರೆಯೂ ಅಷ್ಟೇ ಪ್ರಸಿದ್ಧ. ದೇವಸ್ಥಾನ ಸಮಿತಿಗಳು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮಂಟಪ ಅಣಿಗೊಳಿಸುತ್ತಿದ್ದವು. ವಿದ್ಯುತ್‌ ಬೆಳಕಿನಲ್ಲಿ ಪ್ರಸ್ತುತ ಪಡಿಸುತ್ತಿದ್ದ ಪೌರಾಣಿಕ ಕಥೆಯ ಸಾರಾಂಶವನ್ನು ಸಾವಿರಾರು ಜನರು ರಾತ್ರಿಯಿಡೀ ವೀಕ್ಷಿಸುತ್ತಾರೆ.

ಐದೇ ಆನೆ: ಜನರಿಲ್ಲದೇ ಆಚರಣೆ

ಈ ಬಾರಿ ದಸರಾ ಸಂಭ್ರಮಕ್ಕೆ ಕೋವಿಡ್‌ ಆವರಿಸಿದೆ. ಪ್ರವಾಸಿಗರಿಂದ ತುಂಬಿರಬೇಕಿದ್ದ ಮೈಸೂರಿನಲ್ಲಿ ಸಂಭ್ರಮವಿಲ್ಲ. ಚಾಮುಂಡಿಬೆಟ್ಟ ಮತ್ತು ಅರಮನೆ ಆವರಣಕ್ಕೆ ಸೀಮಿತವಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಹಬ್ಬದ ಆಚರಣೆ ನಡೆಯುತ್ತಿದೆ. ಎರಡೂ ಕಡೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ವರ್ಚುಯಲ್‌ (ಆನ್‌ಲೈನ್‌) ಆಗಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಅ.17ರಂದು ಬೆಟ್ಟದಲ್ಲಿ ಉದ್ಘಾಟನೆ, 26 ರಂದು ಅರಮನೆ ಆವರಣದಲ್ಲಿ ಜಂಬೂಸವಾರಿ, ನಡುವಿನ ದಿನಗಳಲ್ಲಿ ನಿತ್ಯ ಸಂಜೆ ಎರಡು ಗಂಟೆ ರಾಜ್ಯದ ಕಲಾವಿದರಿಂದ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರ. ಪ್ರತಿವರ್ಷ 12 ಆನೆಗಳು ಬರುತ್ತಿದ್ದರೆ, ಈ ಬಾರಿ ಐದು ಆನೆಗಳು ಮಾತ್ರ ಪಾಲ್ಗೊಳ್ಳುತ್ತಿವೆ. ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಯಾವುದೂ ಈ ಬಾರಿ ಇರುವುದಿಲ್ಲ.

ನಾಡಿನ ಇತರ ಭಾಗಗಳಲ್ಲೂ ಈ ಬಾರಿ ಹಬ್ಬವನ್ನು ಸಂಪ್ರದಾಯಕ್ಕೆ ಸೀಮಿತವಾಗಿರಿಸಲಾಗಿದೆ.

ಮಂಗಳೂರಿನಲ್ಲಿ ‘ಮಾರ್ನೆಮಿ’

‘ಒಂದೇ ಜಾತಿ, ಮತ ಹಾಗೂ ದೇವರು’ ತತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು 1912ರಲ್ಲಿ ಸ್ಥಾಪಿಸಿದ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ‘ಮಾರ್ನೆಮಿ’ (ನವರಾತ್ರಿ) ಉತ್ಸವವೇ ‘ಮಂಗಳೂರು ದಸರಾ’ ಆಗಿ ಖ್ಯಾತಿ ಪಡೆದಿದೆ.

ಅಂದಿನಿಂದ ಎಚ್.ಕೊರಗಪ್ಪ ನೇತೃತ್ವದಲ್ಲಿ ನಡೆಯುತ್ತಿದ್ದ ‘ಮಾರ್ನೆಮಿ’ಗೆ, 1989ರಲ್ಲಿ ಬಿ.ಆರ್‌. ಕರ್ಕೇರಾ ‘ದಸರಾ’ ರೂಪ ನೀಡಿದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ 1991ರಲ್ಲಿ ದೇಗುಲ ಜೀರ್ಣೋದ್ಧಾರಗೊಳಿಸಿ ವೈಭವೀಕರಿಸಿದ್ದು, 2004ರಲ್ಲಿ ‘ಮಂಗಳೂರು ದಸರಾ’ ಎಂದೇ ಜನಪ್ರಿಯಗೊಂಡಿತು.

‘ದಸರಾದಲ್ಲಿ ದೇವಿಯ ಒಂಬತ್ತು ಅವತಾರಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ಇಲ್ಲಿಯ ವೈಶಿಷ್ಟ್ಯ. ಇದು ಸರ್ಕಾರದ ಅಧೀನ ಹಾಗೂ ಅನುದಾನ ಇಲ್ಲದೇ ನಡೆಯುವ ದಸರಾ’ ಎನ್ನುತ್ತಾರೆ ಕ್ಷೇತ್ರದ ಕಾರ್ಯದರ್ಶಿ ಪದ್ಮರಾಜ್.

ಇಲ್ಲಿ ಜಾತಿ, ಮತ, ಧರ್ಮ, ಲಿಂಗ ಮತ್ತಿತರ ತಾರತಮ್ಯಗಳಿಲ್ಲ. ವಿಧವೆಯರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ. ವಿಧವಾ ಅರ್ಚಕಿಯರೂ ಇದ್ದಾರೆ.ದಸರಾ ಮೆರವಣಿಗೆಯಲ್ಲಿ ‘ಪಿಲಿ ವೇಷ ನಲಿಕೆ’ (ಹುಲಿ ವೇಷ ಕುಣಿತ) ಹಾಗೂ ಸ್ಥಳೀಯ ಆರಾಧನೆಗಳು ಆಕರ್ಷಣೆಯಾಗಿರುತ್ತವೆ.

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯುತ್ತದೆ. 9 ದಿನ ದೇವಿ ಪೂಜೆ ಹಾಗೂ ಕೊನೆಯ ದಿನ ಚಂಡಿಕಾ ಹೋಮ ನೆರವೇರುತ್ತದೆ.

ಪ್ರತಿದಿನ ಸುಮಂಗಲಿಯರಿಗೆ ಪೂಜೆ ಹಾಗೂ ವಿಜಯ ದಶಮಿಯ ದಿನ ವಿದ್ಯಾರಂಭ ಹಾಗೂ ಹೊಸತು ಆಚರಣೆ ವಿಶೇಷವಾಗಿದೆ. ನವಮಿ ರಥೋತ್ಸವಕ್ಕೆ ಎಸೆಯುವ ನಾಣ್ಯಗಳನ್ನು ಹೆಕ್ಕಲು ಭಕ್ತರು ಮುಗಿಬೀಳುತ್ತಾರೆ.

ಆನೆಗೊಂದಿಯೇ ಮೂಲ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಆನೆಗೊಂದಿಯೇ ದಸರೆಯ ಮೂಲ. ಸುಮಾರು 600 ವರ್ಷಗಳ ಹಿಂದೆಯೇ ಇಲ್ಲಿ ದಸರೆ ನಡೆಯುತ್ತಿತ್ತು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಹಕ್ಕ– ಬುಕ್ಕರ ತಾಯಿಯ ತವರೂರು ಈ ಆನೆಗೊಂದಿ.‌

ಆನೆಗೊಂದಿಯಲ್ಲಿ ಈಗಲೂ ಇರುವ ದುರ್ಗಾದೇವಿಯೇ ಮೂಲ ನಾಡದೇವತೆ. ಈ ಮಂದಿರದಲ್ಲೇ ಮೊದಲ ಬಾರಿಗೆ ನವರಾತ್ರಿ ವೈಭವ ಆರಂಭವಾಯಿತು ಎಂಬುದು ನಂಬಿಕೆ. ಆನೆಗೊಂದಿ ಸಂಸ್ಥಾನ ಅಳಿದ ಮೇಲೆ ವಿಜಯನಗರ ಪ್ರವರ್ಧಮಾನಕ್ಕೆ ಬಂತು. ಆಗ ಹಂಪಿಯ ಮಹಾನವಮಿ ದಿಬ್ಬದಲ್ಲೇ ದಸರೆ ಹಬ್ಬ ವಿಶ್ವ ಪ್ರಸಿದ್ಧವಾಯಿತು. ವಿಜಯನಗರ ಛಿದ್ರವಾದ ಮೇಲೆ ಮೈಸೂರು ಒಡೆಯರು ಇದನ್ನು ಮುಂದುವರಿಸಿಕೊಂಡು ಬಂದರು.

ಊರು ಸುತ್ತುವ ದೇವರು!

ಹೊಸಪೇಟೆಯ ಏಳುಕೇರಿಗಳ ಮನೆ ಮನೆಗೆ ದಸರಾ ಸಂದರ್ಭದಲ್ಲಿ ಸ್ವತಃ ದೇವಿಯರೇ ಬರುತ್ತಾರೆ! ಇದನ್ನು ಸ್ಥಳೀಯರು ‘ದೇವಿ ಊರು ಸುತ್ತುವುದು ಅಥವಾ ಆಡುವುದು’ ಎನ್ನುತ್ತಾರೆ.

ಇಂಥದ್ದೊಂದು ಆಚರಣೆ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಚಾಲ್ತಿಯಲ್ಲಿ ಇದೆ. ‘ದೇವಿ ಊರು ಸುತ್ತುವ’ ಆಚರಣೆ ನವರಾತ್ರಿಯ ಮೊದಲ ದಿನ ಆರಂಭಗೊಂಡು ಆಯುಧ ಪೂಜೆಯ ದಿನ ಕೊನೆಗೊಳ್ಳುತ್ತದೆ.

ವಿಶೇಷ ರೀತಿಯಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯನ್ನು ಹೊತ್ತು, ತಮಟೆ ಬಾರಿಸುತ್ತ ಮನೆಮನೆಗೆ ಹೋಗುತ್ತಾರೆ. ಮನೆ ಮಂದಿ ದೇವಿಗೆ ಹೂ, ಕಾಯಿ, ನೈವೇದ್ಯ ಸಮರ್ಪಿಸುತ್ತಾರೆ. ಈ ಸಂದರ್ಭಕ್ಕಾಗಿಯೇ ಕಾಯುವ ಕೇರಿಯ ಜನ ತಳಿರು, ತೋರಣಗಳಿಂದ ಇಡೀ ಕೇರಿಯನ್ನು ಅಲಂಕರಿಸುತ್ತಾರೆ. ಆಯುಧ ಪೂಜೆಯ ದಿನ ಎಲ್ಲ ದೇವತೆಗಳನ್ನು ಒಟ್ಟಿಗೆ ಬೀಳ್ಕೊಡುವುದು ಮತ್ತೊಂದು ವಿಶೇಷ. ಆ ದಿನ ರಾತ್ರಿಯಿಡೀ ಕಾರ್ಯಕ್ರಮಗಳು ಜರುಗುತ್ತವೆ. ವಿಜಯದಶಮಿ ದಿನ ಬನ್ನಿ ಮುಡಿದು, ಪರಸ್ಪರ ಶುಭ ಕೋರುತ್ತಾರೆ. ನಗರದಿಂದ ಹತ್ತು ಕಿ.ಮೀ ದೂರದಲ್ಲಿರುವ ಧರ್ಮದಗುಡ್ಡದ ಬಳಿ ಇಡೀ ಕೇರಿಯ ಜನ ಸೇರುತ್ತಾರೆ.

ಏಳುಕೇರಿಗಳಿಗೆ ಏಳು ಬೇರೆ ಬೇರೆ ದೇವಿಯವರನ್ನು ಕರೆ ತರಲಾಗುತ್ತದೆ. ಮ್ಯಾಸಕೇರಿಯಲ್ಲಿ ಹುಲಿಗೆಮ್ಮ, ಉಕ್ಕಡಕೇರಿಯಲ್ಲಿ ಕೊಂಗಮ್ಮ, ಚಿತ್ರಕೇರಿಯಲ್ಲಿ ಜಲದುರ್ಗಮ್ಮ, ಬಾಣದಕೇರಿಯಲ್ಲಿ ಬಳ್ಳಾರಿ ದುರ್ಗಮ್ಮ, ತಳವಾರಕೇರಿಯಲ್ಲಿ ನಿಜಲಿಂಗಮ್ಮ, ಜಂಬಾನಹಳ್ಳಿ ಕೇರಿಯಲ್ಲಿ ರಾಂಪುರ ದುರ್ಗಮ್ಮ ಹಾಗೂ ಬಂಡಿಕೇರಿಯಲ್ಲಿ ತಾಯಮ್ಮ– ಮರಿಯಮ್ಮ ದೇವತೆ ಬರುತ್ತಾರೆ. ತಾಲ್ಲೂಕಿನ ಕಮಲಾಪುರದ ಏಳು ಕೇರಿಗಳಲ್ಲೂ ಈ ಆಚರಣೆ ಇದೆ.

‘ಏಳುಕೇರಿಗಳಲ್ಲಿ ಬೇಡ ಅಥವಾ ವಾಲ್ಮೀಕಿ ನಾಯಕ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಸಮುದಾಯದವರಿಗೆ ಮೇಲ್ವರ್ಗದ ಜನ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸಿದಾಗ ಅವರು ಸ್ಥಳೀಯ ದೇವತೆಗಳನ್ನು ಪೂಜಿಸಲು ಆರಂಭಿಸಿದರು. ಆ ಪರಂಪರೆ ಇಂದಿಗೂ ಹಾಗೆಯೇ ಮುಂದುವರಿದಿದೆ. ಅದು ಈ ನೆಲದ ವೈಶಿಷ್ಟ್ಯ’ ಎನ್ನುತ್ತಾರೆ ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ.

ಶರಣ ಸಂಸ್ಕೃತಿ ಉತ್ಸವ

ದಸರಾ ಮಹೋತ್ಸವದ ಸಂದರ್ಭದಲ್ಲಿ ಚಿತ್ರದುರ್ಗದ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಕಳೆಗಟ್ಟುತ್ತದೆ.

ನಾಡಿನ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಶ್ರಮಿಸುತ್ತಿರುವ ಇತಿಹಾಸ ಪ್ರಸಿದ್ಧ ಮುರುಘಾಮಠದ ಈ ಉತ್ಸವ ಮಧ್ಯ ಕರ್ನಾಟಕದ ದಸರಾ ಮಹೋತ್ಸವ ಎಂಬಂತೆ ಖ್ಯಾತಿ ಗಳಿಸಿದೆ. ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮ, ಕ್ರೀಡೆ, ಸೌಹಾರ್ದ ಸಂದೇಶ ನೀಡುವ ನಡಿಗೆ ಎಲ್ಲವೂ ಉತ್ಸವದ ಭಾಗ.

ಈ ಬಾರಿ ಅ.24ರಿಂದ 28ರವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿಗಳು ನಡೆಯಲಿವೆ. ಫೇಸ್‌ಬುಕ್‌ ಹಾಗೂ ಯುಟ್ಯೂಬ್ನೇರ ಪ್ರಸಾರಕ್ಕೆ ಸಿದ್ಧತೆಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT