ಗುರುವಾರ , ಜೂನ್ 17, 2021
21 °C

ಹೇ ಗಣಪ... ಯಾವುದು ನಿನ್ನ ಸ್ವರೂಪ?!

ಕರಣಂ ಪವನ್ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ನಾವು ಕೇಳುವ ಪಾರ್ವತಿ ಪುತ್ರ, ಆನೆ ತಲೆ ಮತ್ತಿತರ ಎಲ್ಲವೂ ಪುರಾಣ ಕಾಲದ ಕಲ್ಪನೆ. ವೈದಿಕ ಮತವು ಯಜ್ಞವನ್ನೇ ಬಹುಕಾಲ ಮುಖ್ಯವಾಗಿ ಇಟ್ಟುಕೊಂಡಿದ್ದರಿಂದ ಮೂರ್ತಿ ಪೂಜೆ ಆ ಮಟ್ಟದಲ್ಲಿರಲಿಲ್ಲ. ಹಾಗೆಂದು ದೇವತೆಗಳ ರೂಪದ ವರ್ಣನೆ ವೇದದಲ್ಲಿಲ್ಲ ಎಂದಲ್ಲ.

ಪ್ರಾಚೀನ
ಬ್ರಹ್ಮಣಸ್ಪತಿ ಮತ್ತು ಬೃಹಸ್ಪತಿ ಈ ಎರಡೂ ದೇವತೆಗಳು ಋಗ್ವೇದದಲ್ಲಿ ಬರುತ್ತವೆ. ಇವು ಎರಡೂ ಒಂದೇ ದೇವತೆಯಲ್ಲ, ಬೇರೆ ಬೇರೆ ಎಂದು ಋಗ್ವೇದ ಭಾಷ್ಯಕಾರರಾದ ಸಾಯಣಾಚಾರ್ಯರು (ಮಾಧವಾಚಾರ್ಯರ (ವಿದ್ಯಾರಣ್ಯ) ಸಹೋದರ) ಸೇರಿದಂತೆ ಯಾಸ್ಕರು, ಶೌನಕರು ನಿರ್ಣಯಿಸಿದ್ದಾರೆ. ಅದನ್ನು ಮೊದಲಿಗೆ ಹೇಳಲಿಕ್ಕೆ ಕಾರಣವೂ ಉಂಟು. ಈ ಎರಡೂ ದೇವತೆಗಳ ಬಗ್ಗೆ ಋಗ್ವೇದದ ಎರಡನೇ ಮಂಡಲದ ಇಪ್ಪತ್ತಮೂರನೇ ಸೂಕ್ತದಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು. ಅದೇ ಸೂಕ್ತವನ್ನು ಇಂದು ಗಣಪತಿ ದೇವತೆಗೆ ವಿನಿಯೋಗ ಮಾಡಲಾಗುತ್ತಿದೆ. ಆ ಸೂಕ್ತವನ್ನು ಸ್ವಲ್ಪ ಪರಾಮರ್ಶಿಸೋಣ. ಅದು ಬಹುಪಾಲು ಆಸ್ತಿಕರ ಕಿವಿಗೆ ಬಿದ್ದಿರಲಿಕ್ಕೂ ಉಂಟು.

ಗಣಾನಾಂ ತ್ವಾ ಗಣಪತಿಂ ಹವಾಮಹೇ
ಕವಿಂ ಕವೀನಾಂ ಉಪಮಶ್ರಮವಸ್ತಮಂ    

ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಆನಃಶೃಣ್ವನ್‌ ಊತಿಭಿಃ ಸೀದ ಸಾಧನಂ

ಎಲೈ ಬ್ರಹ್ಮಣಸ್ಪತಿಯೇ, ದೇವಗಣಕ್ಕೆ ಸಂಬಂಧಿಸಿದವನು, ತನ್ನ ಗಣಕ್ಕೆ ಒಡೆಯನು, ಕ್ರಾಂತದರ್ಶಿಯಾದ ಕವಿಗಳಲ್ಲಿ ಅತ್ಯುತ್ತಮ ಕವಿಯಾದವನು, ಸ್ತುತ್ಯರ್ಹವಾದವರ ಮಧ್ಯೆ ಪ್ರಕಾಶಿಸುವವನು, ಮಂತ್ರಗಳಿಗೆ ಒಡೆಯನೂ ಆದ ನಿನ್ನನ್ನು ಕರೆಯುತ್ತೇವೆ, ನಮ್ಮ ಸ್ತುತಿ ಕೇಳುತ್ತಾ ರಕ್ಷಣೆಯೊಡನೆ ಯಜ್ಞಗೃಹಕ್ಕೆ ಬಂದು ಕುಳಿತುಕೊ.

ಈ ಸೂಕ್ತದ ಋಷಿಯು ಗೃತ್ಸಮದ ಎಂದು. ಇಲ್ಲಿ ಗಣಪತಿ ಎಂಬುದು ಆ ಗಣಕ್ಕೆ ಮುಖ್ಯಸ್ಥ ಎಂಬರ್ಥದಲ್ಲಿ ಬಂದಿದೆಯೇ ಹೊರತು, ಪುರಾಣಪ್ರಣೀತ ಈಶ್ವರ ಪುತ್ರ ಗಣಪತಿಗೂ ಇದಕ್ಕೂ ಸಂಬಂಧವಿಲ್ಲ. ವಸ್ತುತಃ ಋಗ್ವೇದದಲ್ಲಿ ಗಣಪತಿ ಎಂಬ ದೇವತೆಯೇ ಇಲ್ಲ! ಹಾಗಾದರೆ ಮತ್ತೆಲ್ಲೂ ಇಲ್ಲವೇ ಎಂದರೆ, ಗಣಪತ್ಯಥರ್ವಶೀರ್ಷ ಎಂಬ ಉಪನಿಷತ್ ಭಾಗವಿದೆ; ಅದು ತೀರಾ ನಂತರದ್ದು ಮತ್ತು ಅದು ಅಥರ್ವವೇದಕ್ಕೆ ಸೇರಿದ ಭಾಗವಲ್ಲ ಎಂಬ ವಿದ್ವಾಂಸರ ಮತವೂ ಇದೆ. ಹಾಗೆ ನೋಡಿದರೆ, ಇಂದು ಆರಾಧನೆಯಲ್ಲಿರುವ ಬಹುಪಾಲು ದೇವತಾ ರೂಪಾಂತರಗಳು ವೇದದಲ್ಲಿಲ್ಲ, ಅಂದಮಾತ್ರಕ್ಕೆ ಅವೆಲ್ಲಾ ಹೊಸವೇ ಎಂದರೆ ಅದೂ ತಪ್ಪೇ. ಋಗ್ವೇದದ ಬ್ರಹ್ಮಣಸ್ಪತಿಯೇ ಗಣಪತಿ ತತ್ತ್ವವಾದದ್ದು, ಹಾಗಾಗಿಯೇ ಮಂತ್ರಗಳ ಒಡೆಯ, ಜ್ಞಾನದ ಒಡೆಯ ಎಂಬ ಅಭಿದಾನಕ್ಕೆ ಗಣಪತಿ ಪಾತ್ರನಾಗಿದ್ದು. ಈ ನಿಟ್ಟಿನಲ್ಲಿ ಬ್ರಹ್ಮಣಸ್ಪತಿಯು ಗಣಪತಿ ದೇವತೆಯ ಪ್ರೊಟೊಟೈಪ್. ಪ್ರವರ್ಗ್ಯ ಯಾಗಕ್ಕೆ ಉಪಯೋಗಿಸುವ ಈ ಮೇಲಿನ ಸೂಕ್ತವನ್ನು ಗಣಪತಿ ಸ್ತುತಿಯಾಗಿ ಬಳಸುವುದರಲ್ಲಿ ಅಂತಹ ತಪ್ಪೇನೂ ಇಲ್ಲ. ಸೋಮಯಾಗದ ಸೂಕ್ತವನ್ನು ಪಂಚಾಮೃತ ಅಭಿಷೇಕದ ಸಂದರ್ಭದಲ್ಲಿ ಬಳಸುವುದಿಲ್ಲವೇ?!

ನಾವು ಕೇಳುವ ಪಾರ್ವತಿ ಪುತ್ರ, ಆನೆ ತಲೆ ಮತ್ತಿತರ ಎಲ್ಲವೂ ಪುರಾಣ ಕಾಲದ ಕಲ್ಪನೆ. ವೈದಿಕ ಮತವು ಯಜ್ಞವನ್ನೇ ಬಹುಕಾಲ ಮುಖ್ಯವಾಗಿ ಇಟ್ಟುಕೊಂಡಿದ್ದರಿಂದ ಮೂರ್ತಿ ಪೂಜೆ ಆ ಮಟ್ಟದಲ್ಲಿರಲಿಲ್ಲ. ಹಾಗೆಂದು ದೇವತೆಗಳ ರೂಪದ ವರ್ಣನೆ ವೇದದಲ್ಲಿಲ್ಲ ಎಂದಲ್ಲ. ರುದ್ರನಿಂದ ಬ್ರಹ್ಮಣಸ್ಪತಿಯವರೆಗೂ ರೂಪ ವರ್ಣನೆಯನ್ನು ಅಲ್ಲಲ್ಲಿ ಕಾಣಬಹುದು. ಆದರೆ, ಶಿಲ್ಪವಾಗಿ, ಪ್ರತಿಮೆಯಾಗಿ ಅದು ಬಂದಿರಲಿಲ್ಲ. ಬಂದಿದ್ದರೂ ಈಗಿನ ದೇವಾಲಯ ವ್ಯವಸ್ಥೆಯನ್ನು ಕಂಡಿರಲಿಲ್ಲ. ಬಹುಶಃ ಗುಪ್ತರ ಕಾಲದಲ್ಲಿ ಬಹುತೇಕ ವೈದಿಕ ದೇವತೆಗಳ ಮೂರ್ತಿಗೆ ಸ್ಪಷ್ಟತೆ ಸಿಕ್ಕಿತು. ಪ್ರಪ್ರಥಮ ಗಣಪತಿ ಮೂರ್ತಿ, ಅಂದರೆ ಆನೆಮುಖ, ದೊಡ್ಡ ದೇಹದ ರೂಪುರೇಖೆಗಳು ಈ ಕಾಲದಲ್ಲಿ ಇರುವಂಥವು, ಗಣಪತಿ ತತ್ತ್ವವು ನಂತರದಲ್ಲಿ ಬ್ರಹ್ಮ ತತ್ತ್ವವಾಗಿ ರೂಪಿತವಾಗಿರುವುದನ್ನು ಕಾಣಬಹುದು.

ಪಂಚಭೂತ ಕಲ್ಪನೆ, ಭೂಮ್ಯಾಕಾಶ ತತ್ತ್ವ ಇನ್ನಿತರ ಎಲ್ಲವನ್ನೂ ಗಣಪತಿ ದೇವತೆಗೆ ಆರೋಪಿಸಿ ವರ್ಣನೆ ಮಾಡುವುದನ್ನು ಕಂಡಿದ್ದೇವೆ. ಗಣಪತಿಯು ವಿಘ್ನಕಾರಕನೂ ಹೌದು, ವಿಘ್ನನಿವಾರಕನೂ ಹೌದು ಎಂಬ ಉಲ್ಲೇಖಗಳನ್ನು ಕಾಣಬಹುದು. ಪ್ರಾಚೀನ ಯುದ್ಧಪರಂಪರೆಯಲ್ಲಿ ಆನೆ (ಗಜಪಡೆ) ಎಂಬುದು ತುಂಬಾ ಪ್ರಮುಖವಾದ, ಮುನ್ನುಗ್ಗುವ, ಶತ್ರುವನ್ನು ಸಂಹರಿಸುವ ಪ್ರಾಣಿಯಾದ್ದರಿಂದ ಅದೇ ರೀತಿಯ ವರ್ಣನೆ ಬ್ರಹ್ಮಣಸ್ಪತಿಗೂ ಋಗ್ವೇದದಲ್ಲಿ ಇರುವುದರಿಂದ (ತೇಜಿಷ್ಠಯಾ ತಪನೀ ರಕ್ಷಸಸ್ತಪ ಯೇ ತ್ವಾ ನಿದೇ ದಧಿರೇ ದೃಷ್ಟವೀರ್ಯಂ...) ಗಣಪತಿಯು ಶಕ್ತಿ ದೇವತೆಯಾಗಿ, ಆನೆಯ ರೂಪದಲ್ಲಿ ಅನಾಯಾಸವಾಗಿ ನಮ್ಮ ಪರಂಪರೆಯಲ್ಲಿ ರೂಪುಗೊಂಡಿತು ಎಂಬುದು ನನ್ನ ಮಾತು.

ಮಿಕ್ಕಂತೆ ಗಣಪತಿ ಎಂಬುದು ಬುಡಕಟ್ಟು ದೇವರು, ಬೌದ್ಧರಿಂದ, ಜೈನರಿಂದ, ಸಿದ್ಧ ಪರಂಪರೆಯಿಂದ ಬಂದದ್ದು. ಮೊದಲಿಗೆ, ಅರಣ್ಯಕನಾದ ಅವನು ಯಜ್ಞವನ್ನು ಹಾಳುಮಾಡುತ್ತಿದ್ದ, ನಂತರ ವೈದಿಕರು ಅವನನ್ನು ಲಪಟಾಯಿಸಿದರು. (ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ವ್ಯತ್ಯಾಸ ಗೊತ್ತಿಲ್ಲದೇ) ವೇದದ ಬೃಹಸ್ಪತಿಯನ್ನು ಚಾರ್ವಾಕ ಮತದ ಬೃಹಸ್ಪತಿ ಎಂದು ಹೇಳಿ, ಅದಕ್ಕೆ ಗಣಪತಿಯನ್ನು ಗಂಟು ಹಾಕಿ ಹಲವರು ವಾದ ಮಾಡುವುದಿದೆ. ಇವುಗಳಲ್ಲಿ ಗಣಪತಿಯು ವೈದಿಕ ದೇವತೆಯಲ್ಲ ಎಂದು ತೋರಿಸಲು ಮಾಡಿದ ವ್ಯಾಯಾಮಗಳೇ ಹೆಚ್ಚಿನವು. ದೇವರನ್ನೇ ಧಿಕ್ಕರಿಸುವವರಿಗೆ ಆತ ವೈದಿಕ್‌ ಗಾಡ್‌ ಆದರೇನು, ನಾನ್ ವೈದಿಕ್ ಗಾಡ್‌ ಆದರೇನು ಎಂಬುದು ನನ್ನ ಪ್ರಶ್ನೆ. ಗಾಡ್ ಎಂಬ ಕಲ್ಪನೆಗೂ ಭಾರತೀಯ ದೇವತಾ ಕಲ್ಪನೆಗೂ ವ್ಯತ್ಯಾಸವಿದೆ ಎಂಬುದು ಅರಿಯಬೇಕಾದ ಪ್ರಥಮ ವಿಚಾರ.

ಪ್ರಸ್ತುತ
ಯುಟ್ಯೂಬಿನಲ್ಲಿ ವಿಡಿಯೊ ನೋಡುವಾಗ, ಮಧ್ಯೆ ಬರುವ ಸ್ಕಿಪ್ ಮಾಡಬಹುದಾದ ಆ್ಯಡ್ ತರಹದ್ದೇ ಪುರಾಣಗಳು. ತರ್ಕಕ್ಕೆ ಒದಗುವುದು ಶ್ರುತಿಸ್ಮೃತಿಗಳು ಮಾತ್ರ. ಏಕೆಂದರೆ, ಪ್ರತೀ ಜನಾಂಗದಲ್ಲೂ ಪರಂಪರೆಯ ಮೌಲ್ಯವನ್ನು ಉಳಿಸಲು ಮಿಥ್‍ಗೆ ಮೊರೆ ಹೋಗಿದ್ದು ಕಾಣುತ್ತದೆ. ಸಹಜವಾಗಿ ಅದು ಉತ್ಪ್ರೇಕ್ಷೆ, ಅತಿರಂಜಿತವಾಗಿ ಕೊನೆಗೊಳ್ಳುತ್ತದೆ. ಅತಾರ್ಕಿಕವಾದ ಪುರಾಣ ಕತೆಗಳು ಗ್ರೀಕರಲ್ಲಿ ಇಲ್ಲವೇ? ಅಲ್ಲಿ ಸಾಕ್ರಟೀಸ್, ಪ್ಲೇಟೊ ಹುಟ್ಟಲಿಲ್ಲವೇ? ಮೊದಲ ಡೆಮಾಕ್ರಟಿಕ್ ವ್ಯವಸ್ಥೆ ಅಲ್ಲಿ ಬರಲಿಲ್ಲವೇ? ದೈವದ ಬಳಿ ಪ್ರಶ್ನೆ ಕೇಳುತ್ತಾರಲ್ಲ, ಅದು ಗ್ರೀಕರಲ್ಲೂ ಇತ್ತು. ಡೆಲ್ಫಿ ದೇವಸ್ಥಾನಕ್ಕೆ ಹೋಗಿ ಅಪೋಲೊ ದೇವತೆಯ ಬಳಿ ಕೇಳುತ್ತಿದ್ದರು.

ಗಣಪತಿಯ ಪುರಾಣ ವರ್ಣನೆ ಆಕರ್ಷಕವಾಗಿಯೂ ಉಪಾಸನೆಗೆ ಉದ್ದೀಪಿಸುವಂತೆಯೂ ಇತ್ತಾದ್ದರಿಂದ, ಗಣಪತಿ ಸಗುಣ ದೇವರಾಗಿ ಬಹುಬೇಗ ಹೆಚ್ಚು ಪ್ರಚಲಿತನಾದ. ಪ್ರಥಮ ಪೂಜಿತ ಎಂದು ಯಾವ ಕಾಲದಲ್ಲಿ ಬಂತು ಎಂದು ಖಚಿತವಾಗಿ ಹೇಳಲಾಗದು. ನನಗೆ ಶಂಕರರ ಮೇಲೆ ಅಥವಾ ಶಾಂಕರ ಪರಂಪರೆಯ ಮೇಲೆ ಶಂಕೆ. ಹೇಗಾದರೂ ಷಣ್ಮತ ಸ್ಥಾಪನೆಯ ಕೀರ್ತಿಯನ್ನು ಅವರ ಹೆಗಲಿಗೆ ಹಾಕಿರುವುದರಿಂದ, ಗಣಪತಿಯ ಜನಪ್ರಿಯತೆಗೆ ಅವರೇ ಕಾರಣವಿರಬಹುದು. ಕೇದಾರದಲ್ಲಿ ದೇವಸ್ಥಾನದ ಈಚೆ ಇರುವ ಗಣಪತಿ ಮೂರ್ತಿ ನೋಡಿದಾಗ ಈ ಆಲೋಚನೆ ಬಂದಿತ್ತು. ಇದಕ್ಕೆ ನನ್ನ ಬಳಿ ಆಧಾರವಿಲ್ಲ. ಆದರೆ ಕಾಕತಾಳೀಯವೆಂಬಂತೆ, ಆರನೇ ಶತಮಾನದ ಈಚೆಗೆ ಗಣಪತಿ ಮೂರ್ತಿಯ ಉಪಾಸನೆ, ಕೆತ್ತನೆ ಹೆಚ್ಚಾಗಿರುವುದನ್ನು ಕಾಣಬಹುದು. ಎಷ್ಟಾದರೂ ಮನುಷ್ಯನು ಉಪಾಸನಾಧೀನ, ಉತ್ಸವಪ್ರಿಯ. ಗಣಪತಿಗಿಂತ ಇನ್ನೊಂದು ಪ್ರತಿಮೆ ಅದಕ್ಕೆ ಬೇಕೇ? ಆಚರಣೆಯ ಆನಂದ (ಜಾಯ್ ಆಫ್ ರಿಚುಯಲ್ಸ್) ಇಲ್ಲದೆ ಯಾವ ಮತವೂ ಬೆಳೆದಿಲ್ಲ ಅಥವಾ ಉಳಿದಿಲ್ಲ. ಈಗಂತೂ ಗಣಪತಿಯು ಎಲ್ಲ ಕಡೆಯೂ ಕೂರಬಲ್ಲ, ಯಾವ ಭೇದವಿಲ್ಲದೆ ಎಲ್ಲರನ್ನೂ ಒಳಗೊಳ್ಳುವ ದೇವತೆ. ಕನಿಷ್ಠ ಆ ಮಟ್ಟದಲ್ಲಾದರೂ ಗಣಪತಿಯ ಬ್ರಹ್ಮತತ್ತ್ವ ಅನುಷ್ಠಾನವಾಗಿದೆ. ಈ ಬಗೆಯಾಗಿ ಹೊಳೆನರಸೀಪುರದ ಸಚ್ಚಿದಾನಂದೇಂದ್ರ ಸರಸ್ವತಿಗಳವರ ಈ ಶ್ಲೋಕ ಉಚಿತವೆನಿಸುತ್ತದೆ.

ಯತೋ ವೇದವಾಚೋsತಿಕುಂಠಾ ಮನೋಭಿಃ
ಸದಾ ನೇತಿ ನೇತೀತಿ ಯತ್ತಾ ಗೃಣಂತಿ|
ಪರಬ್ರಹ್ಮರೂಪಂ ಚಿದಾನಂದಭೂತಂ
ಸದಾ ತಂ ಗಣೇಶಂ ನಮಾಮೋ ಭಜಾಮಃ||

(ಯಾರನ್ನು ವರ್ಣಿಸಿ ಮುಗಿಸಲಾರದೆ ವೇದವಾಕ್ಕುಗಳೂ ಮನೋವೃತ್ತಿಯೂ ಕುಗ್ಗುತ್ತವೆಯೋ ಯಾರು ತನ್ನ ಸ್ವರೂಪ ‘ಇದಲ್ಲ, ಇದಲ್ಲ’ ಎಂದು ಹೇಳುವನೋ ಆ ಜ್ಞಾನಾನಂದ ಪರಬ್ರಹ್ಮನೆನಿಸಿರುವ ಗಣೇಶನಿಗೆ ನಮಸ್ಕರಿಸುತ್ತೇನೆ, ಭಜಿಸುತ್ತೇನೆ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು