ಶನಿವಾರ, ಜೂನ್ 19, 2021
24 °C

ಅಸಂಖ್ಯಾತ ದೇವರುಗಳ ನಾಡಿನಲ್ಲಿ

ಕ್ಯಾಪ್ಟನ್‌ ಜಿ.ಆರ್‌. ಗೋಪಿನಾಥ್‌ Updated:

ಅಕ್ಷರ ಗಾತ್ರ : | |

Prajavani

ಜಾತಿ, ವರ್ಗಗಳ ಆಧಾರದ ಮೇಲೆ ದೇವರ ಆರಾಧನೆಯಲ್ಲೂ ತಾರತಮ್ಯ ನಡೆಯುವುದು, ರಾಮಮಂದಿರಕ್ಕೆ ಹೆಚ್ಚು ಹೋಗದಿದ್ದರೂ ಹಿಂದುಳಿದ ವರ್ಗದವರು ರಾಮಾಯಣದ ನಾಟಕಗಳನ್ನು ಆಡುವುದು... ಅಬ್ಬಬ್ಬಾ, ಇದೆಂತಹ ದೈವಲೀಲೆ!

ಅಯೋಧ್ಯೆಯಲ್ಲಿ ಆಗಸ್ಟ್‌ 5ರಂದು ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿಪೂಜೆಯನ್ನು ವೀಕ್ಷಿಸುವಾಗ, ನನ್ನೂರು ಗೊರೂರಿನ ಗತಕಾಲದ ಚಿತ್ರಣಗಳು ಕಣ್ಮುಂದೆ ಬಂದವು. ಅಲ್ಲಿನ ದೇವಾಲಯಗಳು, ದೇವರ ಪಲ್ಲಕ್ಕಿಗಳು, ಪೂಜಾರಿಗಳ ಕಾರ್ಯಗಳು, ಮೆರವಣಿಗೆಗಳು ಎಲ್ಲವೂ ನೆನಪಾಗಿ ಕಾಡಿದವು. ಅಂದದ ಆ ಊರನ್ನು ಪ್ರವೇಶಿಸಿದೊಡನೆ ಹಳೆಯ ಅರಳಿ ಮರವೊಂದು ಸಿಗುತ್ತಿತ್ತು (ಅದಕ್ಕೆ ಬೋಧಿವೃಕ್ಷ ಎಂದೂ ಕರೆಯಲಾಗುತ್ತಿತ್ತು). ಅದರ ಸುತ್ತಲೂ ನಾಗರ ವಿಗ್ರಹಗಳಿದ್ದವು. ಊರಿನ ಮಹಿಳೆಯರು ಆ ಮರದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದ್ದರು. ಊದುಬತ್ತಿಯನ್ನು ಬೆಳಗುತ್ತಿದ್ದರು. ವಿಗ್ರಹಗಳಿಗೆ ಕುಂಕುಮವನ್ನೂ ಹಚ್ಚುತ್ತಿದ್ದರು. ಏಕೆಂದರೆ, ಆ ವಿಗ್ರಹಗಳು ಅವರ ಪಾಲಿಗೆ ಫಲ ನೀಡುವ ಸಂಕೇತಗಳಾಗಿದ್ದವು. ಆಲದ ಮರಕ್ಕೆ ಹೊಂದಿಕೊಂಡು ಅಲ್ಲಿ ಕೆಲವು ಬೇವಿನ ಮರಗಳೂ ಇದ್ದವು. ನಮ್ಮೂರಷ್ಟೇ ಅಲ್ಲ; ಹಳೇ ಮೈಸೂರು ಪ್ರಾಂತ್ಯದ ಪ್ರತೀ ಹಳ್ಳಿಯಲ್ಲೂ ಇಂತಹ ನೋಟಗಳು ಸಾಮಾನ್ಯವಾಗಿದ್ದವು.

ಮದುವೆಯಾಗದೆ ಇನ್ನೂ ಮನೆಯಲ್ಲಿಯೇ ಉಳಿದ ಮಗಳಿಗೆ ಬೇಗ ಗಂಡು ಸಿಗಲಿ ಎಂದು ಹರಕೆ ಹೊತ್ತ ತಂದೆ–ತಾಯಿ, ಆ ಎರಡೂ ಪ್ರಭೇದಗಳ (ಅರಳಿ, ಬೇವು) ಸಸಿಗಳನ್ನು ಅಕ್ಕಪಕ್ಕದಲ್ಲಿ ನೆಟ್ಟು, ಬೆಳೆಸಿ ಎರಡಕ್ಕೂ ಮದುವೆ ಮಾಡಿಸುವಂತಹ ಸಂಪ್ರದಾಯವೊಂದು ರೂಢಿಯಲ್ಲಿತ್ತು. ಆಲದ ಮರದಿಂದ ಸ್ವಲ್ಪ ಮುಂದೆ ಬಂದರೆ ಎರಡು ದೈವಗಳ ಒಂದು ಸಣ್ಣ ದೇವಾಲಯವಿತ್ತು. ಪಶ್ಚಿಮಕ್ಕೆ ಮುಖ ಮಾಡಿದ ಹನುಮಾನ್‌ ವಿಗ್ರಹ ಹಾಗೂ ದಕ್ಷಿಣಕ್ಕೆ ಮುಖ ಮಾಡಿದ ಮಾರಮ್ಮನ ವಿಗ್ರಹ ಎರಡೂ ಅಲ್ಲಿದ್ದವು (ಕರ್ನಾಟಕದ ದಕ್ಷಿಣ ಭಾಗ ಹಾಗೂ ತಮಿಳುನಾಡಿನಲ್ಲಿ ಎಲ್ಲೆಡೆ ಕಾಣಸಿಗುವ ಪ್ರಭಾವಿ ದೇವತೆ ಈಕೆ. ಮಾರಕ ಪಿಡುಗುಗಳಿಂದ ರಕ್ಷಿಸಿ, ಮಳೆಯ ಮುನ್ಸೂಚನೆಯನ್ನೂ ಈ ದೇವತೆ ನೀಡುತ್ತಾಳೆ ಎನ್ನುವುದು ಜನರ ನಂಬಿಕೆ).

ನಮ್ಮೂರಿನಲ್ಲಿ ಇತರ ಮೂರು ಮುಖ್ಯ ದೇವಾಲಯಗಳಿದ್ದವು. ಊರಿನ ದಕ್ಷಿಣ ತುದಿಗೆ ಹೊಂದಿಕೊಂಡು, ಹೇಮಾವತಿ ದಂಡೆಯ ಮೇಲೆ ಯೋಗಾ ನರಸಿಂಹ ದೇವಸ್ಥಾನವಿತ್ತು. ಉತ್ತರ ದಿಕ್ಕಿನಲ್ಲಿ ಶಿವನ ದೇವಾಲಯವಿದ್ದರೆ, ಪಶ್ಚಿಮದ ಅಗ್ರಹಾರದ (ಬ್ರಾಹ್ಮಣ ಸಮುದಾಯದವರ ಮನೆಗಳಿದ್ದ ಪ್ರದೇಶ) ಪಕ್ಕದಲ್ಲಿ ಪರವಾಸುದೇವನ ಮಂದಿರವಿತ್ತು. ಕೆಲವು ಕಿಲೊ ಮೀಟರ್‌ಗಳ ದೂರದಲ್ಲಿ ನದಿ ದಂಡೆಯ ಬಳಿ ಮತ್ತೊಂದು ದೇವಾಲಯವಿತ್ತು. ಅಲ್ಲಿನ ದೈವದ ಹೆಸರು ಬನದಮ್ಮ. ಹೆಸರೇ ಸೂಚಿಸುವಂತೆ ಈಕೆ ಕಾಡಿನ ದೇವತೆ; ತೋಪಿನ ಮಧ್ಯೆ ನೆಲೆಸಿದ್ದಳು. ಪ್ರತೀ ಹಳ್ಳಿಯೂ ಶಿವ ಮತ್ತು ವಿಷ್ಣುವಿನ ಅವತಾರದ ದೇವಾಲಯಗಳ ಜತೆಗೆ ಹೆಣ್ಣು ದೇವರುಗಳನ್ನೂ ಪುರದಮ್ಮ ಎಂದು ಕರೆಯಲಾಗುವ ಗ್ರಾಮ ದೇವತೆಯನ್ನೂ ಹೊಂದಿರುವುದು ರೂಢಿ. ಈ ಎಲ್ಲ ದೇವಾಲಯಗಳು ಹಾಗೂ ಆರಾಧನಾ ಸ್ಥಳಗಳು ಹಳ್ಳಿಗಳಲ್ಲಿ ಪ್ರಾಚೀನ ಕಾಲದಿಂದಲೂ ಇದ್ದಂಥವು.

ಗೊರೂರಿನಲ್ಲಿ ರಾಮಮಂದಿರವೇನೂ ಇರಲಿಲ್ಲ. ಕೆಲವು ಊರುಗಳಲ್ಲಷ್ಟೇ ಏಕೆ ರಾಮ ಮಂದಿರಗಳಿವೆ, ಅದೇ ಉಳಿದ ಕಡೆಗಳಲ್ಲಿ ಏಕೆ ನರಸಿಂಹ, ನಾರಾಯಣ, ಕೃಷ್ಣ ಅಥವಾ ಕೇಶವನ ದೇವಾಲಯಗಳಿವೆ ಎಂಬ ಪ್ರಶ್ನೆಗೆ ಹಿರಿಯರು ಯಾರೂ ಉತ್ತರ ಕೊಡುತ್ತಿರಲಿಲ್ಲ. ಈ ಎಲ್ಲ ದೇವರುಗಳೂ ವಿಷ್ಣುವಿನ ರೂಪಗಳೇ ಆಗಿವೆ ಎಂದಷ್ಟೇ ಹೇಳುತ್ತಿದ್ದರು. ಎಲ್ಲ ಹಳ್ಳಿಗಳಲ್ಲಿ ಇರುತ್ತಿದ್ದ ಶಿವ ಮತ್ತು ವಿಷ್ಣು ಮಂದಿರಗಳ ಆಡಳಿತವು ಮೇಲ್ವರ್ಗಗಳ ಹಿಡಿತದಲ್ಲಿ ಇರುತ್ತಿತ್ತು. ಒಂದು ದೈವದ ಭಕ್ತರು ಇನ್ನೊಂದು ದೈವದ ದರ್ಶನಕ್ಕೆ ಸಾಮಾನ್ಯವಾಗಿ ಹೋಗುತ್ತಿರಲಿಲ್ಲ. ಆದಿವಾಸಿಗಳು, ದಲಿತರು, ಹಿಂದುಳಿದ ಸಮುದಾಯಗಳ ಜನರ ಜೀವನವು ಅವರ ಕೌಟುಂಬಿಕ ದೇವತೆಗಳಾದ ಮಾರಮ್ಮ, ಬನದಮ್ಮ ಹಾಗೂ ಪುರದಮ್ಮ ಅವರ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ರಾಮ, ಕೃಷ್ಣ ಅಥವಾ ವಿಷ್ಣು ಎಂದಿಗೂ ಅವರ ಬದುಕನ್ನು ಪ್ರಭಾವಿಸಿದ್ದಿಲ್ಲ.

ಊರಿನ ಜನರಲ್ಲದೆ ಸುತ್ತಲಿನ ಹಳ್ಳಿಗಳ ಜನರೂ ನರಸಿಂಹಸ್ವಾಮಿ ದೇವಾಲಯದ ದರ್ಶನಕ್ಕೆ ಬರುತ್ತಿದ್ದರು. ವರ್ಷಕ್ಕೊಮ್ಮೆ ಈ ದೈವದ ಭವ್ಯ ರಥೋತ್ಸವವೂ ನಡೆಯುತ್ತಿತ್ತು. ಎಲ್ಲ ಜಾತಿ, ಸಮುದಾಯಗಳ ಹತ್ತಾರು ಸಾವಿರ ಜನ ಜಾತ್ರೆಯಲ್ಲಿ ನೆರೆಯುತ್ತಿದ್ದರು. ಆದರೆ, ಅಷ್ಟಾಗಿ ಪ್ರಸಿದ್ಧಿ ಪಡೆಯದ ಊರಿನ ಹೆಣ್ಣು ದೇವರುಗಳಿಗೆ ಇಂತಹ ಉತ್ಸವವಿರಲಿಲ್ಲ. ವರ್ಷದುದ್ದಕ್ಕೂ, ಅದೂ ಸಾಮಾನ್ಯ ದಿನಗಳಲ್ಲಿ, ದಲಿತರು ಹಾಗೂ ಹಿಂದುಳಿದ ಸಮುದಾಯದವರು ಆ ದೈವಗಳ ನೆಲೆಗಳಿಗೆ ತೆರಳಿ, ಪ್ರಾಣಿಬಲಿ ನೀಡಿ, ಹರಕೆಯನ್ನು ತೀರಿಸುತ್ತಿದ್ದರು ಹಾಗೂ ಪೂಜೆಯ ವಿಧಿಗಳು ಮುಗಿದ ಬಳಿಕ ಹಬ್ಬದೂಟ ಸವಿದು ಬರುತ್ತಿದ್ದರು. ವಿಪತ್ತುಗಳು ಎದುರಾದಾಗ ಅಥವಾ ಹರಕೆ ಹೊರಬೇಕಾದಾಗ ಅವರಿಗೆ ಹಿಂದೂಗಳು ಆರಾಧಿಸುವ ಪ್ರಮುಖ ದೇವರುಗಳಾದ ರಾಮ, ಕೃಷ್ಣ ಹಾಗೂ ವಿಷ್ಣು ಎಂದಿಗೂ ನೆನಪಾಗುತ್ತಿರಲಿಲ್ಲ.

ಯಾವುದೇ ಮಂದಿರವನ್ನು ಆಯ್ಕೆ ಮಾಡಿಕೊಂಡು, ಮಿಕ್ಕ ದೇವರುಗಳಿಗಿಂತ ‘ಈ’ ದೇವರೇ ಹೆಚ್ಚು ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಎಂದೂ ನಂಬಿಸಿ, ಅದಕ್ಕೆ ಪೂರಕವಾಗಿ ಹೇಳುವಂತಹ ದಂತಕಥೆಗಳು ಹಾಗೂ ಸಿದ್ಧಾಂತಗಳಲ್ಲಿ ವಿರೋಧಾಭಾಸಗಳೇ ತುಂಬಿಹೋಗಿವೆ. ತಿರುಪತಿಯ ಬಾಲಾಜಿ ಮಂದಿರ (ಇದು ಸಹ ವಿಷ್ಣುವಿನ ದೇವಸ್ಥಾನ) ಸರ್ಕಾರಿ ಟ್ರಸ್ಟ್‌ನಿಂದ ನಿರ್ವಹಣೆಯಾದರೆ, ಧರ್ಮಸ್ಥಳದ ಮಂಜುನಾಥ (ಶಿವ) ದೇವಸ್ಥಾನವು ಜೈನ ಮನೆತನದ ಟ್ರಸ್ಟ್‌ನಿಂದ ನಿರ್ವಹಣೆ ಆಗುತ್ತಿದೆ. ಕೊಲ್ಲೂರು ಮೂಕಾಂಬಿಕಾ ಮತ್ತು ಶಿರಡಿ ಸಾಯಿಬಾಬಾ ದೇವಸ್ಥಾನಗಳು ಮುಖ್ಯವಾಗಿ ಹಿಂದೂ ಭಕ್ತರನ್ನು ಹೊಂದಿದ್ದರೂ ಅವುಗಳಿಗೆ ನಡೆದುಕೊಳ್ಳುವ ಮುಸ್ಲಿಂ ಭಕ್ತರ ಸಂಖ್ಯೆಯೇನೂ ಕಡಿಮೆಯಿಲ್ಲ.

ಶಬರಿಮಲೆಯ ಅಯ್ಯಪ್ಪ, ಮುಂಬೈನ ಸಿದ್ಧಿವಿನಾಯಕ, ಕಾಶಿಯ ವಿಶ್ವನಾಥನ ತರಹದ ಹಲವು ಮಂದಿರಗಳಿಗೆ ಹಿಂದೂಗಳು ಬಹುದೊಡ್ಡ ಪ್ರಮಾಣದಲ್ಲಿ ದರ್ಶನಕ್ಕಾಗಿ ತೆರಳುತ್ತಿರುವುದು ಇತ್ತೀಚಿನ ವಿದ್ಯಮಾನ. ಅದರಲ್ಲೂ ಸಂಪ್ರದಾಯಸ್ಥ ಮಧ್ಯಮ ವರ್ಗದದವರು, ದಿಢೀರ್‌ ಸಿರಿವಂತಿಕೆ ಕಂಡವರು, ಚಿತ್ರತಾರೆಯರು, ರಾಜಕಾರಣಿಗಳು ರಕ್ಷಣೆ ಕೋರಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಈ ದೇವರುಗಳ ಮೊರೆ ಹೋಗುವುದುಂಟು. ಮೂಢನಂಬಿಕೆಗಳಿಂದಾಗಿ ಹರಿಯುವ ಹಣದ ಹೊಳೆಯು ದೈವಗಳ ಮಧ್ಯೆ ವಾಣಿಜ್ಯ ಪೈಪೋಟಿಯನ್ನೂ ಹುಟ್ಟುಹಾಕಿರುವುದು ಸುಳ್ಳಲ್ಲ. ದೇವಾಲಯಗಳನ್ನು ನಿರ್ವಹಿಸುವ ಟ್ರಸ್ಟ್‌ಗಳ ಹುಂಡಿಗಳಿಗೆ ಹಣದ ಹೊಳೆ ಹರಿದುಬರುತ್ತಿರುವುದು ಗುಟ್ಟಿನ ಸಂಗತಿಯೂ ಅಲ್ಲ.

ದೂರದ ಪಟ್ಟಣಗಳ ಈ ಪ್ರಸಿದ್ಧ ದೇವಾಲಯಗಳ ಕುರಿತು ಬಡ ಜನರಿಗೆ ಒಂದು ರೀತಿಯ ಉದಾಸೀನ ಮನೋಭಾವ. ಅವರು ಸದಾ ಧೈರ್ಯದಿಂದ, ಹರ್ಷಚಿತ್ತದಿಂದ ಬದುಕನ್ನು ಎದುರಿಸುತ್ತಾರೆ ಮತ್ತು ಸ್ಥಳೀಯ ದೇವತೆಗಳಲ್ಲಿಯೇ ಆಶ್ರಯ, ಸಾಂತ್ವನ ಮತ್ತು ಶಕ್ತಿಯನ್ನು ಹುಡುಕುತ್ತಾರೆ.

ದಲಿತರು ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರು ಅಪರೂಪಕ್ಕೊಮ್ಮೆ ರಾಮ ಅಥವಾ ಕೃಷ್ಣನ ದೇವಸ್ಥಾನಗಳಿಗೆ ಹೋದರೂ ಪ್ರತಿ ವರ್ಷ ಮಹಾಭಾರತ ಹಾಗೂ ರಾಮಾಯಣದ ಕಥೆಗಳನ್ನು ಆಧರಿಸಿ ರಾತ್ರಿಯಿಡೀ ಅತ್ಯಂತ ಉತ್ಸಾಹದಿಂದ ನಾಟಕ ಆಡುತ್ತಿದ್ದರು. ಬಿತ್ತನೆ ಹಂಗಾಮು ಮುಗಿದ ಮೇಲೆ ನಾಟಕದ ಚಟುವಟಿಕೆಗಳು ಶುರುವಾಗುತ್ತಿದ್ದವು. ಪುರಾಣ ಹಾಗೂ ಮಹಾಕಾವ್ಯಗಳ ಮೇಲೆ ಪ್ರಭುತ್ವ ಹೊಂದಿದ್ದ, ಬೇರೆ ಊರಿನಿಂದ ಬರುತ್ತಿದ್ದ ನಾಟಕದ ಮಾಸ್ತರರು ಅವರಿಗೆ ತಾಲೀಮು ಮಾಡಿಸುತ್ತಿದ್ದರು. ಪಾತ್ರಧಾರಿಗಳು ಎಂದಿಗೂ ಸ್ಕ್ರಿಪ್ಟ್‌ನ  ಮೊರೆ ಹೋಗುತ್ತಿರಲಿಲ್ಲ. ಸಂಭಾಷಣೆಗಳು ಹಾಗೆಯೇ ಕಂಠಪಾಠ ಆಗುತ್ತಿದ್ದವು. ಪೀಳಿಗೆಯಿಂದ ಪೀಳಿಗೆಗೆ ಸಾಂಸ್ಕೃತಿಕ ಸಿರಿಯ ವರ್ಗಾವಣೆ ಹೀಗೇ ಸಾಗುತ್ತಿತ್ತು. ಸಂಭಾಷಣೆಗಳು ಸರಿಯಾಗಿ ಕಂಠಪಾಠ ಆಗಬೇಕಾದ ಕಾರಣ ತಾಲೀಮು ಮೂರ್ನಾಲ್ಕು ತಿಂಗಳವರೆಗೆ ನಡೆಯುತ್ತಿತ್ತು.

ನಾಟಕದ ಪಾತ್ರಧಾರಿಗಳು (ಅದರಲ್ಲೂ ನಾಯಕನ ಪಾತ್ರಧಾರಿಯಾಗಲು ಭಾರೀ ಪೈಪೋಟಿ ಇರುತ್ತಿತ್ತು), ಅವರೆಲ್ಲ ಬಡವರಲ್ಲಿ ಕಡುಬಡವರು. ನಾಟಕ ಮಾಸ್ತರರ ಸಂಭಾವನೆ, ವೇಷಭೂಷಣ, ರಂಗಸಜ್ಜಿಕೆ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಎಲ್ಲದಕ್ಕೂ ಹಣ ಹೊಂದಿಸಬೇಕಾಗಿತ್ತು. ದೈನಂದಿನ ಕೆಲಸ ಮುಗಿದ ಮೇಲೆ ಶುರುವಾಗುತ್ತಿದ್ದ ತಾಲೀಮು ತಡರಾತ್ರಿಯವರೆಗೆ ನಡೆಯುತ್ತಿತ್ತು. ಮಹಾಕಾವ್ಯಗಳಿಗೆ ಸಂಬಂಧಿಸಿದ ಜನಪದ ಗೀತೆಗಳು ಹಾರ್ಮೋನಿಯಂ ಹಿಮ್ಮೇಳದೊಂದಿಗೆ ಊರಿನ ಮನೆ–ಮನೆಗೂ ಅಲೆ ಅಲೆಯಾಗಿ ತೇಲಿ ಬರುತ್ತಿದ್ದವು. ಊರ ಸುತ್ತಲಿನ ಗದ್ದೆಯಲ್ಲಿ ಇದ್ದವರನ್ನೂ ಆ ಅಲೆಗಳು ಬಂದು ತಲುಪುತ್ತಿದ್ದವು. ಲಯಬದ್ಧವಾದ ಆ ಗೀತೆಗಳು ತೇಲಿ ಬಂದಾಗ ಹೃದಯ ತುಂಬಿ, ಕಣ್ಣುಗಳು ಹನಿಗೂಡುತ್ತಿದ್ದವು. ಅವರದೇನೂ ಧಾರ್ಮಿಕ ಕ್ರಿಯೆಯಾಗಿರಲಿಲ್ಲ. ಸಮುದಾಯದ ಪ್ರೀತಿ ಹಾಗೂ ಆರಾಧನಾ ಭಾವಗಳಿಂದ ತುಂಬಿರುತ್ತಿದ್ದ ಜನಪದ ಕಲೆಯ ಅಭಿವ್ಯಕ್ತಿಯಾಗಿತ್ತು.

ಗತಕಾಲದ ಆ ಚಿತ್ರಣಗಳು ಹಾಗೂ ಯೋಚನೆಗಳು ಮನಸ್ಸನ್ನು ತುಂಬಿಹೋಗಿವೆ. ಮುಂದಿನ ಮೂರು ವರ್ಷಗಳಲ್ಲಿ ಎದ್ದುನಿಲ್ಲುವ ರಾಮಮಂದಿರ, ಹೊಲಗಳಲ್ಲಿ ಕೈ ಕೆಸರು ಮಾಡಿಕೊಳ್ಳುವ, ಕಾರ್ಖಾನೆಗಳು ಹಾಗೂ ಮಳಿಗೆಗಳಲ್ಲಿ ದುಡಿಯುವ, ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕೋಟ್ಯಂತರ ಜನರ ಪಾಲಿಗೆ ಎಷ್ಟು ಮಹತ್ವದ್ದು ಎಂಬ ಪ್ರಶ್ನೆ ಈಗ ನನ್ನನ್ನು ಕಾಡುತ್ತಿದೆ. ದೇಶದ ಮೂರನೇ ಒಂದು ಭಾಗದಷ್ಟು ಹಿಂದೂಗಳು– ಮಧ್ಯಮ ವರ್ಗದವರು ಹಾಗೂ ಶ್ರೀಮಂತರು– ತಮ್ಮ ತೀರ್ಥಯಾತ್ರೆಯ ಪಟ್ಟಿಯಲ್ಲಿ ಇನ್ನುಮುಂದೆ ಅಯೋಧ್ಯೆಯ ಹೆಸರನ್ನೂ ಸೇರಿಸಬಹುದು. ತಮ್ಮ ಯಶಸ್ಸಿಗಾಗಿ, ಇಷ್ಟಾರ್ಥ ಸಿದ್ಧಿಗಾಗಿ ಕಾಶಿ, ಹರಿದ್ವಾರ, ಬದರಿನಾಥ, ಕೇದಾರನಾಥ ಮೊದಲಾದ ಕ್ಷೇತ್ರಗಳಿಗೆ ಕಾರು, ರೈಲು, ವಿಮಾನಗಳ ಮೂಲಕ ಜನ ಹೋಗುವುದು ರೂಢಿ. ಯಾತ್ರೆಗಳು ಎಂದಮೇಲೆ ತಿಂಡಿ–ತಿನಿಸುಗಳ ಮೂಟೆ ಇರಲೇಬೇಕು. ಯಾತ್ರಾ ಸ್ಥಳಗಳಲ್ಲಿರುವ ನದಿ, ತೊರೆಗಳು ಈ ಯಾತ್ರೆಗಳಿಂದ ಮಲಿನವಾಗುತ್ತಿರುವುದು ಎದುರಿಗೆ ಕಾಣುತ್ತಿರುವ ವಿದ್ಯಮಾನ. ತ್ಯಾಜ್ಯವೂ ರಾಶಿ ರಾಶಿಯಾಗಿ ಬೀಳು
ತ್ತಿದೆ. ಇದರಿಂದ ನೆಲ, ಜಲ ಹಾಗೂ ಗಾಳಿ ಎಲ್ಲವೂ ಮಲಿನವಾಗುತ್ತಿವೆ. ಆಧುನಿಕ ಭಾರತದಲ್ಲಿ ದೇವಾಲಯ
ಗಳ ದರ್ಶನಕ್ಕಾಗಿ ಹೋಗುವುದು ತೀರ್ಥಯಾತ್ರೆಗಿಂತ ಹೆಚ್ಚಾಗಿ ವಿಲಾಸಿ ಪ್ರವಾಸವೇ ಆಗಿ ಹೋಗಿದೆ.

ಮಿಕ್ಕ ಮೂರನೇ ಎರಡು ಭಾಗದಷ್ಟು– ಅಮೂರ್ತ– ಹಿಂದೂಗಳು ಯಾವುದೇ ನಿರ್ದಿಷ್ಟ ದೇವರಲ್ಲಿ ನಿಷ್ಠೆ ಹೊಂದಿರದವರು. ರೈತರು, ನೇಕಾರರು, ಕುಂಬಾರರು, ಬೆಸ್ತರು, ಗೊಲ್ಲರು, ಕುರುಬರು, ಕಲ್ಲು ಒಡೆಯುವವರು, ಭೂಮಿ ಅಗೆಯುವವರು... ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಸಿಕೊಳ್ಳುವ ಅಗಣಿತ ಸಂಖ್ಯೆಯ ಕಾರ್ಮಿಕರು ಅಸಂಖ್ಯಾತ ದೇವರುಗಳ ಈ ನಾಡಿನಲ್ಲಿ ಇದ್ದಾರೆ. ಅವರೆಲ್ಲ ನಗರ ಪ್ರದೇಶದ ನಾವುಗಳೆಲ್ಲ ಚೆನ್ನಾಗಿರಲು, ನಮ್ಮನ್ನು ಬೆಚ್ಚಗಿಡಲು ಸದ್ದಿಲ್ಲದೆ ಸಹಾಯ ಮಾಡುತ್ತಿದ್ದಾರೆ. ಈಗ ಅವರೆಲ್ಲ ಮನೆಗೆ ಹಿಂದಿರುಗಿದ್ದಾರೆ. ಮತ್ತೆ ನಗರಗಳಿಗೆ ವಾಪಸ್‌ ಬರುವ ಸಾಧ್ಯತೆಯೇ ಕಾಣಿಸುತ್ತಿಲ್ಲ. ಬಯಲಿಗೆ ಬಾರದ ತಮ್ಮ ದೇವಾನುದೇವತೆಗಳ ಕುರಿತು ಅವರೀಗ ಹಾಡುತ್ತಾರೆ ಮತ್ತು ಆ ದೈವಗಳ ಸುತ್ತ ಉತ್ಸಾಹದಿಂದ ಕುಣಿಯುತ್ತಾರೆ. ಕಾಯಕದ ಆರಾಧನೆಯ ಮೂಲಕ ಬಿಡುಗಡೆಯ ಹಾದಿಯನ್ನೂ ಅವರು ಕಂಡುಕೊಳ್ಳುತ್ತಾರೆ.

ಭೂಮಿಪೂಜೆ ಸಂದರ್ಭದಲ್ಲಿ ರಾಮನನ್ನು ಸ್ತುತಿಸುವ ಮಂತ್ರಗಳನ್ನು ಋತ್ವಿಜರು ಹೇಳುತ್ತಿದ್ದಾಗ, ಬೆಳ್ಳಿ ಮತ್ತು ಕಲ್ಲಿನ ಇಟ್ಟಿಗೆಗಳನ್ನು ಇಡುತ್ತಿದ್ದಾಗ, ನೂರಾರು ಕಲ್ಲಿನ ಕಂಬಗಳ, ಭವ್ಯ ಗೋಪುರದ ಚಿತ್ರವು ಟಿ.ವಿ ಪರದೆಯ ಮೇಲೆ ಮೂಡಿಬರುತ್ತಿದ್ದಾಗ ಟ್ಯಾಗೋರ್‌ ಅವರ ಈ ವಾಕ್ಯ ಮನದಲ್ಲಿ ಅನುರಣಿಸುತ್ತಿತ್ತು:

‘ದೇವರು, ತನ್ನ ಮಂದಿರವು ಪ್ರೀತಿಯಿಂದ ನಿರ್ಮಾಣವಾಗಬೇಕು ಎಂದು ಕಾದಿದ್ದಾಗ ಜನ ಕಲ್ಲುಗಳನ್ನು ತಂದರು.’

ಶುಭ ಸೂಚಕವಾಗಿ ಬಿದ್ದ ಹೂವು ಮತ್ತು ಕುರಿಮರಿ
ವಿಧಾನಸಭಾ ಚುನಾವಣೆಯಲ್ಲಿ ನಾನು ಹಾಸನ ಜಿಲ್ಲೆಯಿಂದ ಸ್ಪರ್ಧಿಸಿದ ದಿನಗಳ ನೆನಪೂ ಈಗ ಆಗುತ್ತಿದೆ. ನಾನು ಸ್ಪರ್ಧಿಸಿದ್ದ ಕ್ಷೇತ್ರದ ಕಾಡಿನಲ್ಲಿದ್ದ ಹೆಣ್ಣು ದೇವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ನಮ್ಮ ಮೆರವಣಿಗೆ ಅಲ್ಲಿಗೆ ಹೋದ ಬಳಿಕ, ನನ್ನ ಬೇಡಿಕೆಯನ್ನು ದೇವತೆಯ ಮುಂದಿಟ್ಟು ಆಶೀರ್ವದಿಸುವಂತೆ ಬೇಡಿಕೊಂಡೆ. ಹೂವು ಯಾವ ಕಡೆ ಬಿದ್ದರೆ ಶುಭಸೂಚಕ ಎಂದು ನಾನು ಅಂದುಕೊಂಡಿದ್ದೆನೋ ಅದೇ ಕಡೆಗೆ ಹೂವು ಬಿದ್ದಿತ್ತು. ದೇವತೆಗೆ ಕುರಿಮರಿಯನ್ನು ಅರ್ಪಿಸಲು ನನಗೆ ಸೂಚಿಸಲಾಯಿತು. ಗೆಲುವಿನ ಕುರಿತು ತುಂಬಾ ಆತಂಕದಿಂದಿದ್ದ ನಾನು, ದಡ ತಲುಪಲು ಯಾವುದೇ ಹುಲ್ಲುಕಡ್ಡಿಯ ಆಶ್ರಯವನ್ನೂ ಪಡೆಯಲು ತಯಾರಾಗಿದ್ದೆ. ಶುಭಸೂಚಕವಾಗಿ ಹೂವು ಬೀಳಿಸುವ ಮೂಲಕ ದೇವತೆ ಭರವಸೆಯನ್ನೂ ಕೊಟ್ಟಿದ್ದಳು. ಹರಕೆ ತೀರಿಸಿದ ಕುರಿಮರಿಯಿಂದ ಸಿದ್ಧವಾಗಿದ್ದ ಪ್ರಸಾದ ಸೇವಿಸಿದ ನಮ್ಮ ತಂಡ, ಪ್ರಚಾರಕ್ಕಾಗಿ ಹೊರಟಿತು. ಫಲಿತಾಂಶ ಬಂದಾಗ ನಾನು ಹೀನಾಯ ಸೋಲು ಅನುಭವಿಸಿದ್ದೆ. ನನ್ನ ವಿರುದ್ಧ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಯೂ ಇದೇ ದೇವತೆಯ ದರ್ಶನ ಪಡೆದು ಪ್ರಚಾರ ನಡೆಸಿದ್ದರು. ರಾಮ, ಕೃಷ್ಣ ಇಲ್ಲವೆ ಶಿವನ ದೇವಾಲಯಕ್ಕೆ ಕರೆದೊಯ್ಯುವುದನ್ನು ಬಿಟ್ಟು ಕಾಡಿನ ಇದ್ಯಾವ ದೇವಸ್ಥಾನಕ್ಕೆ ನನ್ನನ್ನು ಕರೆತಂದರು ಎಂದು ನಾನು ಕಳವಳಗೊಂಡಿದ್ದೆ. ನನ್ನ ನಂಬಿಕೆ ದುರ್ಬಲವಾಗಿತ್ತೇ ವಿನಾ ಕಾರ್ಯಕರ್ತರದು ಆಗಿರಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು