ಭಾನುವಾರ, ಮಾರ್ಚ್ 29, 2020
19 °C
ರುದ್ರಸೂಕ್ತ ಅರ್ಥಾನುಸಂಧಾನ

ಎಲ್ಲೋ ಹೇಗೋ ಅಲ್ಲ, ಇಲ್ಲೇ ಹೀಗೇ ಇದ್ದಾನೆ ಮಹಾಶಿವ

ಡಿ.ಎಂ. ಘನಶ್ಯಾಮ Updated:

ಅಕ್ಷರ ಗಾತ್ರ : | |

ದೈವವನ್ನು ಪ್ರತ್ಯಕ್ಷ ಕಂಡವರ ಭಾವನೆಗಳ ಅಭಿವ್ಯಕ್ತಿ ‘ರುದ್ರಸೂಕ್ತ’. ‘ಇಲ್ಲಿದ್ದಾನೆ ದೇವರು, ಹೀಗಿದ್ದಾನೆ ದೇವರು’ ಎನ್ನುವ ಸ್ಪಷ್ಟ ತಿಳಿವಿನ ರುದ್ರಸೂಕ್ತ, ಚಿರ–ಚರ ಎಲ್ಲದರಲ್ಲಿಯೂ ಶಿವನನ್ನು ಕಾಣುವ ಕಾಣಿಸುವ ಪ್ರಯತ್ನ. ಸತ್ಯ–ಸೌಂದರ್ಯದ ಪ್ರತಿರೂಪವಾದ ‘ಶಿವಗೀತ’ದ ಮಹತ್ವವನ್ನು ಪರಿಚಯಿಸುವ ಈ ಬರಹ – ‘ಶಿವರಾತ್ರಿ’ ವಿಶೇಷ.


‘ಸುಧಾ’ 27ನೇ ಫೆಬ್ರುವರಿ 2020ರ
ಸಂಚಿಕೆಯಲ್ಲಿ ಪ್ರಕಟವಾದ ಬರಹ

ಈಶ್ವರನ ಪೂಜೆಗೂ ರುದ್ರಾಧ್ಯಯ ಎನಿಸಿಕೊಂಡಿರುವ ನಮಕ–ಚಮಕ ಪಾರಾಯಣಕ್ಕೂ ಅವಿನಾಭಾವ ಸಂಬಂಧ. ತಲೆಯ ಮೇಲೆ ಗಂಗೆಯೇ ಇದ್ದರೂ ಮುಕ್ಕಣ್ಣ ಮಾತ್ರ ಅಭಿಷೇಕ ಪ್ರಿಯ. ರುದ್ರಸೂಕ್ತ ಪಾರಾಯಣವಿಲ್ಲದೇ ಅಭಿಷೇಕ ಕಳೆಗಟ್ಟುವುದೇ? ರುದ್ರಸೂಕ್ತ ಪಾರಾಯಣದೊಂದಿಗೆ ಶಿವಲಿಂಗಕ್ಕೆ ಮಾಡುವ ಅಭಿಷೇಕವನ್ನು ರುದ್ರಾಭಿಷೇಕ ಎಂದು ಕರೆಯುತ್ತಾರೆ. ಶಿವರಾತ್ರಿಯಂದು ನಡೆಯುವ ಯಾಮಪೂಜೆಗಳಲ್ಲಿ ರುದ್ರಾಭಿಷೇಕ ಸೇವೆಯೂ ಸೇರಿದೆ. ಶಿವರಾತ್ರಿಯಂದು ನಡೆಯುವ ರುದ್ರ ಪಾರಾಯಣಕ್ಕೆ ವಿಶೇಷ ಮಾನ್ಯತೆ.

ವೇದವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿ, ಸ್ವರ ಒಲಿಸಿಕೊಂಡು ಮಾಡುವ ಪಾರಾಯಣಕ್ಕೆ ಶ್ರದ್ಧೆಯಿಂದ ಕೇಳುವವರ ಮನಃಪಟಲದಲ್ಲಿ ಅದ್ಭುತ ಆವರಣವನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ವೈದಿಕ ಸಂಸ್ಕೃತ ಅರ್ಥವಾಗದಿದ್ದರೂ, ಮಂತ್ರೋಚ್ಚಾರಣೆಯ ನಾದದ ಲಯದಲ್ಲಿ ಋಷಿಗಳು ಕಟ್ಟಿಕೊಡುವ ಭಾವನೆಗಳು ನಮ್ಮ ಮನಸ್ಸನ್ನು ತಟ್ಟುತ್ತವೆ.

‘ದೇವರು ಜಗತ್ತಿನ ಎಲ್ಲೆಡೆ ವ್ಯಾಪಿಸಿದ್ದಾನೆ, ಎಲ್ಲರಲ್ಲಿಯೂ ಇದ್ದಾನೆ, ಎಲ್ಲವೂ ಆಗಿದ್ದಾನೆ...’ ಎನ್ನುವುದು ವೇದಾಂತದ ಪ್ರತಿಪಾದನೆ. ‘ಎಲ್ಲೆಡೆ’, ‘ಎಲ್ಲರಲ್ಲಿ’ ಮತ್ತು ‘ಎಲ್ಲವೂ’ ಎನ್ನುವ ಈ ಮೂರು ಪರಿಕಲ್ಪನೆಗಳನ್ನು ಆಳವಾಗಿ ಪರಿಶೋಧಿಸುವ ಪ್ರಯತ್ನ ರುದ್ರಸೂಕ್ತದಲ್ಲಿದೆ. ರುದ್ರ ಎನ್ನುವ ಶಬ್ದಕ್ಕೆ ಜಗತ್ತಿನ ದುಃಖವನ್ನು ಹೊಡೆದೋಡಿಸುವವ (ರು–ದುಃಖ, ದ್ರಾ–ತಡೆಯುವವ) ಎನ್ನುವ ಅರ್ಥವಿದೆ. ಇಂಥವನನ್ನು ‘ಶಿವನಾಗು’ (ಮಂಗಳನಾಗು) ಎಂದು ಪ್ರಾರ್ಥಿಸುತ್ತದೆ ರುದ್ರಸೂಕ್ತ.

ರುದ್ರಾಧ್ಯಾಯವು ತೈತ್ತರೀಯ ಕೃಷ್ಣ ಯಜು ಸಂಹಿತೆಯ ನಾಲ್ಕನೇ ಕಾಂಡದ 5ನೇ ಪ್ರಪಾಠ. ಅದೇ ಕಾಂಡದ 7ನೇ ಪ್ರಪಾಠವಾದ ಚಮಕಪ್ರಶ್ನವನ್ನು ರುದ್ರದ ಜೊತೆಗೇ ಪಠಿಸುವುದು ವಾಡಿಕೆ. ರುದ್ರಾಧ್ಯಾಯದಲ್ಲಿ 11 ಅನುವಾಕಗಳಿವೆ (ಪ್ರಘಟ್ಟ–ಪ್ಯಾರಾ). ‘ನಮಃ’ ಶಬ್ದವು ನೂರಾರು ಬಾರಿ ಪುನರುಕ್ತವಾಗುವುದರಿಂದ ಇದನ್ನು ‘ನಮಕ’ ಎಂದೂ ಕರೆಯುತ್ತಾರೆ. ಚಮಕಪ್ರಶ್ನದಲ್ಲಿ ಚ ಮತ್ತು ಮೇ ಎಂಬ ಶಬ್ದಗಳು ಬಹಳ ಸಲ ಪುನರುಕ್ತಿಯಾಗಿವೆ. ಇದೇ ಕಾರಣಕ್ಕೆ ‘ಚಮೇ’ ಹೆಸರು ರೂಢಿಗೆ ಬಂದಿದೆ.

ರುದ್ರ ಪಾರಾಯಣ ಎಂದರೆ ನಮಕ ಮತ್ತು ಚಮಕಗಳೆರಡೂ ಸೇರುತ್ತವೆ. ಈ ಬರಹದಲ್ಲಿ ನಮಕದ ಅರ್ಥಾನುಸಂಧಾನ ಪ್ರಯತ್ನವನ್ನು ಮಾತ್ರ ಮಾಡಲಾಗಿದೆ.

ಇದನ್ನೂ ಓದಿ: ಶಿವತತ್ವ: ಭಾರತೀಯತೆಯ ಪ್ರತೀಕ, ಭಾರತೀಯ ಪ್ರತಿಭೆಯ ಸಮಸ್ತ ರೂಪ-ವಿರೂಪ

ಬ್ರಹ್ಮಾಂಡ ವ್ಯಾಪ್ತ ದೇಹ

ನಾನು ಮತ್ತು ನನ್ನದು ಎಂಬ ಅಹಂಕಾರಗಳನ್ನು ತ್ಯಾಗ ಮಾಡಿ, ನನಗಿಂತ ದೊಡ್ಡದಾದ ಮತ್ತೊಂದು ವಸ್ತುವಿದೆ ಎಂಬ ಭಾವ ತೀವ್ರತೆಯೇ ಶಬ್ದಗಳಾಗಿ ಹರಿದ ಮಂತ್ರ ಇದು. ಹೀಗಾಗಿಯೇ ರುದ್ರ ಎನ್ನುವುದು ನಮಸ್ಕಾರದ ನಮಕ.

ತನ್ನೆದುರು ಉದ್ದಾನುದ್ದ ನಿಂತು, ಬಲಿಷ್ಠ ತೋಳುಗಳಲ್ಲಿ ಬಿಲ್ಲುಬಾಣ ಧರಿಸಿದವನ ಎದುರು ಕೈಮುಗಿದ ಭಕ್ತ ‘ನಮಸ್ತೇ ರುದ್ರ ಮನ್ಯವ ಉತೋ ತ ಇಷವೇ ನಮಃ | ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾಮುತ ತೇ ನಮಃ’ (ಎಲೈ ರುದ್ರನೇ ನಿನಗೆ ಮತ್ತು ನಿನ್ನ ಕೋಪಕ್ಕೆ ನಮಸ್ಕಾರ, ನಿನ್ನ ಬಾಣಗಳಿಗೆ, ಬಿಲ್ಲಿಗೆ ಮತ್ತು ತೋಳುಗಳಿಗೆ ನಮಸ್ಕಾರ) ಎಂದು ಬೇಡುವುದರೊಂದಿಗೆ ರುದ್ರಸೂಕ್ತ ಆರಂಭವಾಗುತ್ತದೆ. ಅಹಂಕಾರ ತ್ಯಾಗ ರು‌ದ್ರದ ಮೊದಲ ಮಂತ್ರವೂ ಹೌದು. ಅಧ್ಯಾತ್ಮದ ಹಾದಿಯ ಮೊದಲ ಮೆಟ್ಟಿಲೂ ಹೌದು.

ರುದ್ರ ಸೂಕ್ತ ಪಾರಾಯಣಕ್ಕೆ ಮೊದಲು ಪಠಿಸುವ ಪ್ರಾರ್ಥನಾ ಶ್ಲೋಕಗಳು ರುದ್ರವು ಪ್ರತಿಪಾದಿಸುವ ದೇವತೆಗೆ ರೂಪವೊಂದನ್ನು ಕಟ್ಟಿಕೊಡುತ್ತದೆ. ಮೂಲದಲ್ಲಿ ಒಬ್ಬನೇ ಆದ ರುದ್ರನು ತನ್ನ ಮಹಿಮೆಗಳನ್ನು ನಾನಾರೂಪಗಳಿಂದ ಪ್ರಕಟಿಸಿಕೊಂಡು ಸಾವಿರಾರು ರೂಪಗಳನ್ನು ತಾಳುತ್ತಾನೆ. ಎಲ್ಲೆಡೆ, ಎಲ್ಲರಲ್ಲಿ ಮತ್ತು ಎಲ್ಲವೂ ಆಗಿಬಿಡುತ್ತಾನೆ. ಆ ರೂಪ ಹೇಗಿದೆ ಎಂಬುದನ್ನು ‘ಬ್ರಹ್ಮಾಂಡವ್ಯಾಪ್ತದೇಹಾ ಭಸಿತಹಿಮರುಚಾ ಭಾಸಮಾನಾ ಭುಜಙ್ಗೈಃ|’ಎಂದು ಶುರುವಾಗುವ ಸಾಲುಗಳು ಕಟ್ಟಿಕೊಡುತ್ತವೆ.

‘ಬ್ರಹ್ಮಾಂಡವನ್ನೆಲ್ಲಾ ವ್ಯಾಪಿಸಿಕೊಂಡ ಶರೀರವುಳ್ಳವರು, ಹಿಮದಂತೆ ಬಿಳುಪಾದ ವಿಭೂತಿಯಿಂದಲೂ ಹಾವುಗಳಿಂದಲೂ ಅಲಂಕೃತರಾದವರು, ಕಂಠದಲ್ಲಿ ಕಪ್ಪುಳ್ಳವರೂ, ಜಟಾಜೂಟವನ್ನು ಧರಿಸಿದವರು ಮತ್ತು ಮೌಳಿಯಲ್ಲಿ ಚಂದ್ರಕಲೆಯನ್ನುಳ್ಳವರು, ತೀಕ್ಷ್ಣವಾದ ಬಿಲ್ಲುಗಳನ್ನು ಹಿಡಿದ ಕೈಗಳುಳ್ಳವರು, ಮುಕ್ಕಣ್ಣರು, ರುದ್ರಾಕ್ಷಿಯ ಆಭರಣಗಳುಳ್ಳವರು, ನಮಸ್ಕಾರ ಮಾಡಿದವರನ್ನು ಭಯದಿಂದ ಕಾಪಾಡುವವರು...’ ಎಂಬುದು ರುದ್ರ ಪಾರಾಯಣ ಮಾಡುವವರು ಚಿಂತಿಸಬೇಕಾದ ಭಗವಂತನ ರೂಪ. ಜಗತ್ತಿನ ಎಲ್ಲೆಡೆಯೂ ರುದ್ರನನ್ನು ಗುರುತಿಸುವ ಭಾವ ನಮ್ಮನ್ನು ಆವರಿಸಿಕೊಳ್ಳಬೇಕು ಎನ್ನುವುದನ್ನು ಇದು ಒತ್ತಿ ಹೇಳುತ್ತದೆ.

ಶಿವನು ಚಂದ್ರನನ್ನು ತಲೆಯ ಮೇಲೆ ಹೊತ್ತಿರುವಂತೆ ನಾವು ಮತ್ತೊಬ್ಬರ ಒಳ್ಳೇ ಗುಣಗಳನ್ನು ಎತ್ತಿ ಆಡಬೇಕು, ಶಿವನು ವಿಷವನ್ನು ಕಂಠದಲ್ಲಿ ತಡೆದಿಟ್ಟುಕೊಂಡಿರುವಂತೆ ಮತ್ತೊಬ್ಬರ ಅವಗುಣಗಳನ್ನು ಗೌಪ್ಯವಾಗಿರಿಸಬೇಕು. ಶಿವನಿಗಿರುವ ಹಲವು ಕಣ್ಣುಗಳು ಅವನ ಪರಿಶೀಲನಾ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಅದೇ ರೀತಿ ನಾವು ಸಹ ಸತ್ಯಕ್ಕಿರುವ ಹಲವು ಮುಖಗಳನ್ನು ಪರಿಶೀಲಿಸಿ, ಯಥೋಚಿತ ಅರಿಯಬೇಕು ಎನ್ನುವುದನ್ನು ಸಹ ಈ ರೂಪ ಸೂಚ್ಯವಾಗಿ ಬಿಂಬಿಸುತ್ತದೆ.

ರುದ್ರ ಅಥವಾ ಶಿವನ ಆಯುಧ ಎಂದು ತ್ರಿಶೂಲದ ಬದಲು ಇಲ್ಲಿ ಬಿಲ್ಲುಬಾಣವನ್ನು ವರ್ಣಿಸಿರುವುದು ಈ ಶ್ಲೋಕದ ಮತ್ತೊಂದು ವಿಶೇಷ.

ಇದನ್ನೂ ಓದಿ: ಸತ್ಯಂ ಶಿವಂ ಸುಂದರಂ | ವ್ರತರಾಜ ಶಿವರಾತ್ರಿ

ಪ್ರಕೃತಿ–ಪರಮೇಶ್ವರ

ಎಲ್ಲವನ್ನೂ ಆವರಿಸಿಕೊಂಡಿರುವ ಮತ್ತು ಎಲ್ಲವೂ ಆಗಿರುವ ದೇವನ ವ್ಯಾಪ್ತೋಪಾಸನೆಯ ಅದ್ಭುತ ಸಾಧ್ಯತೆಯನ್ನು ರುದ್ರಸೂಕ್ತ ಕಟ್ಟಿಕೊಡುತ್ತದೆ. ಶಿವನು ನಮ್ಮ ಮಾತಿನಲ್ಲಿದ್ದಾನೆ. ಮಾತಿನ ಮೂಲಕ ಹೊರಬರುವ ಶಬ್ದವು, ಅದರ ಅರ್ಥವೂ, ಮಾತನಾಡಬೇಕು ಎಂದು ಮನದಿಂದ ಹೊಮ್ಮುವ ಇಚ್ಛೆಯೂ ಅವನೇ ಆಗಿದ್ದಾನೆ.

ಇಂಥ ರುದ್ರನ ದರ್ಶನ ಪಡೆದ (ದ್ರಷ್ಟಾರ) ಋಷಿ ತಾನು ಕಂಡ ರೂಪವನ್ನು ಸೂರ್ಯನಿಗೆ ಹೋಲಿಸುತ್ತಾನೆ. ಎಷ್ಟಾದರೂ ಸೂರ್ಯ ಜಗತ್ತಿಗೆ ಸಾಕ್ಷಿದೇವತೆ. ಉಚ್ಚ–ನೀಚ, ಬಡವ–ಶ್ರೀಮಂತನೆಂಬ ಭೇದವಿಲ್ಲದೆ ಎಲ್ಲರಿಗೂ ಸುಲಭವಾಗಿ ದಕ್ಕುವ, ದರ್ಶನಕೊಡುವ ದೇವತೆ. ರುದ್ರನೆಂಬ ದೇವನೂ ಹೀಗೆಯೇ ಎಲ್ಲರಿಗೂ ಸುಲಭ ಸಾಧ್ಯ. ಭಕ್ತಿಯನ್ನು ಹೊರತುಪಡಿಸಿ ಬೇರೆ ಮಾನದಂಡದಿಂದಲೂ ಅವನು ಜೀವರನ್ನು ಅಳೆಯುವುದಿಲ್ಲ. ಜಗತ್ತಿನ ತಂದೆಯೂ–ತಾಯಿಯೂ ಆಗಿರುವವನಿಗೆ ಮಕ್ಕಳಲ್ಲಿ ಭೇದವೇ?

ರುದ್ರದ ಕೆಲ ಮಂತ್ರಗಳಲ್ಲಿ ‘ಹರಿಕೇಶ’ (ಹಸಿರು ಕೂದಲು) ಎಂಬ ಪ್ರಯೋಗವಿದೆ. ಸಸ್ಯಗಳಿಗೆ ಎಲೆಗಳು ಎಷ್ಟು ಮುಖ್ಯ ಎಂಬುದು ಸಸ್ಯಶಾಸ್ತ್ರದ ಪ್ರಾಥಮಿಕ ಜ್ಞಾನವಿದ್ದವರಿಗೂ ಗೊತ್ತು. ಅದೇ ರೀತಿ ಜೀವಂತಿಕೆಯನ್ನು ಹಸಿರಿನಿಂದಲೇ ಬಿಂಬಿಸುವ ಕ್ರಮವೂ ರೂಢಿಯಲ್ಲಿದೆ. ಈ ನಿಟ್ಟಿನಿಂದ ನೋಡಿದರೆ ಪ್ರಕೃತಿಯ ಮತ್ತು ಜೀವಂತಿಕೆಯ ಸಾರಸರ್ವಸ್ವವೂ ರುದ್ರನೇ ಎಂಬ ಭಾವನೆ ಸ್ಫುರಿಸುತ್ತದೆ. ಸಂಸಾರವನ್ನು ಮರಕ್ಕೆ ಹೋಲಿಸುವುದು ವಾಡಿಕೆ. ಅದನ್ನು ಅನ್ವಯಿಸಿ ನೋಡಿ, ನಮ್ಮ ಜೀವನದ ಸೂತ್ರ ಹಿಡಿದವನೂ ರುದ್ರನೇ ಆಗಿದ್ದಾನೆ ಅನ್ನಿಸಿತೆ?

ಕೇವಲ ಹಸಿರು ಮಾತ್ರವಲ್ಲ, ಅದನ್ನು ಆಧರಿಸಿರುವ ಸಮಸ್ತ ಜೀವರಾಶಿಗಳನ್ನೂ ರುದ್ರ ಆವರಿಸಿದ್ದಾನೆ. ಹಸುವಾಗಿ ಹುಲ್ಲು ಮೇಯುತ್ತಾನೆ, ಹಾಲಾಗಿ ಕರುವಿನ ಹೊಟ್ಟೆ ತುಂಬಿಸುತ್ತಾನೆ. ನೀರಾವಿಯಾಗಿ ಭೂಮಿಯಿಂದ ಮೇಲೇರುತ್ತಾನೆ, ಮೋಡವಾಗಿ ಘನೀಭವಿಸುತ್ತಾನೆ, ಮಳೆಯಾಗಿ ಕೆರೆಕುಂಟೆಗಳಿಗೆ ಇಳಿಯುತ್ತಾನೆ, ನದಿಯಾಗಿ ಹರಿಯುತ್ತಾನೆ, ಸಾಗರದಲ್ಲಿ ಶಾಂತನಾಗುತ್ತಾನೆ. ನೀರನ್ನು ಹಿಡಿದಿಡುವ ಕೆರೆ, ಕುಂಟೆ, ನದಿ, ಸಾಗರಗಳು ಮತ್ತು ಅದರಲ್ಲಿರುವ ನೀರು ಸಹ ಅವನೇ ಆಗಿದ್ದಾನೆ. ಪ್ರಕೃತಿ ಮತ್ತು ಜೀವಸೃಷ್ಟಿಯ ಆಧಾರ ಎನಿಸಿರುವ ಹಸಿರು ಮತ್ತು ನೀರನ್ನು ಅನ್ವಯಿಸಿ ರುದ್ರನನ್ನು ಉಪಾಸನೆಯನ್ನು ರುದ್ರಸೂಕ್ತ ಸಾರಿ ಹೇಳುತ್ತದೆ.

ಇದನ್ನೂ ಓದಿ: ಸುಜ್ಞಾನದ ಬೆಳಕು ನೀಡುವ ಶಿವರಾತ್ರಿ

ನೀನಲ್ಲದವ ಯಾರು ಸ್ವಾಮಿ?

ದೇವರನ್ನು ಕಂಡ ಯಾರೋ ಒಬ್ಬರು, ಮತ್ತೊಬ್ಬರಿಗೆ ಹೇಳಿದ ವರದಿಯಲ್ಲ ರುದ್ರಸೂಕ್ತ. ದೇವರು ಎದುರು ನಿಂತಾಗ ಅದನ್ನು ಕಂಡವನ ಭಾವನೆಗಳು ಹೊಮ್ಮಿಸಿದ ಶಬ್ದಗಳ ಮೊತ್ತವಿದು. ಹೀಗಾಗಿಯೇ ‘ಇಲ್ಲಿದ್ದಾನೆ ದೇವರು, ಹೀಗಿದ್ದಾನೆ ದೇವರು’ ಎನ್ನುವ ಇದಮಿತ್ಥಂ ಎನ್ನುವ ಖಚಿತ ನಿಲುವಿನ, ಐವ್ ರಿಪೋರ್ಟಿಂಗ್‌ನಂಥ ಗಟ್ಟಿ ಸಾಲುಗಳು ಇಲ್ಲಿವೆ.

‘ನೀವು ಪ್ರತ್ಯಕ್ಷ ಕಂಡು ಬರುತ್ತಿದ್ದೀರಿ, ನಿಮಗೆ ನಮಸ್ಕಾರವು’ ಎಂಬ ಸಾಲೊಂದು ರುದ್ರದಲ್ಲಿದೆ. ಈ ಸಾಲಿನಲ್ಲಿರುವ ‘ನೀವು’ ಎಂಬುದು ವಿಸ್ತಾರವಾಗುತ್ತಾ ಆಗುತ್ತಾ... ‘ಕುಳಿತಿರುವವರು, ನಿಂತಿರುವವರು, ಮಲಗಿರುವವರು, ಎಚ್ಚೆತ್ತಿರುವವರು, ಓಡುತ್ತಿರುವವರು, ಸಭಿಕರು, ಸಭಾಧ್ಯಕ್ಷರು, ದೇವರ ವಿಚಾರದಲ್ಲಿ ಆಸಕ್ತರಾದವರು, ನಿರಾಸಕ್ತರು, ಆಸೆಗೆದ್ದವರು, ಆಸೆಗೆ ಶರಣಾದವರು, ವಿರೂಪರು, ಸುಂದರಾಂಗರು, ಜನರು, ಜನಪ್ರತಿನಿಧಿಗಳು...’ ಎಂದೆಲ್ಲಾ ಮುಂದುವರಿಯುತ್ತದೆ.

ಒಂದು ಹಂತದಲ್ಲಿಯಂತೂ ‘ನಾಯಿಗಳಿಗೂ, ನಾಯಿಗಳನ್ನು ಹಿಡಿದುಕೊಂಡವರಿಗೂ, ನಾಯಿಗಳ ಒಡೆಯರಿಗೂ, ನಾಯಿಯನ್ನು ಬೇಯಿಸಿ ತಿನ್ನುವವರಿಗೂ, ಕಳ್ಳರಿಗೂ, ಕಳ್ಳರ ನಾಯಕರಿಗೂ ನಮಸ್ಕಾರ’ ಎನ್ನುವ ಮೂಲಕ ಸಮಾಜದಲ್ಲಿ ಕಂಡುಬರುವ ಉಚ್ಚ–ನೀಚ ಭಾವನೆಗಳನ್ನು ಸಾರಾಸಗಟಾಗಿ ನಿರಾಕರಿಸಿ, ‘ಎಲ್ಲವೂ ದೇವನೇ ಆಗಿದ್ದಾನೆ ಎನ್ನುವ ಎಚ್ಚರ ಮೂಡಿಸಿಕೊ ಸಾಧಕನೇ’ ಎಂದು ಪ್ರೀತಿಯ ಕಿವಿಮಾತು ಹೇಳುತ್ತದೆ.

ಭೂಮಿಯನ್ನು ಮತ್ತು ಸಹಜೀವಿಗಳನ್ನು ನಿನ್ನಂತೆಯೇ ಕಾಣು, ಪ್ರಕೃತಿಯನ್ನು ಗೌರವಿಸು. ಮನುಷ್ಯರ ಜೊತೆಗೆ ಭೂಮಂಡಲದಲ್ಲಿರುವ ಎಲ್ಲ ಜೀವಿಗಳನ್ನೂ ಪ್ರೀತಿಸು. ಇಲ್ಲದಿದ್ದರೆ ಹರ ಮುನಿದಾನು. ಮುನಿದ ಶಿವನು ಯಾರನ್ನೂ–ಯಾವುದನ್ನೂ ಉಳಿಸುವುದಿಲ್ಲ. ಆದರೆ ಅವನು ಒಲಿದು ಮಂಗಳನಾದರೆ ನಿನ್ನನ್ನು–ನಿನ್ನ ಸಂತಾನವನ್ನೂ ಕಾಪಾಡುವ ಭರವಸೆಯಾಗುತ್ತಾನೆ. ‘ರುದ್ರನನ್ನು ಶಿವನನ್ನಾಗಿ, ಮಂಗಳಕರನನ್ನಾಗಿ ಮಾಡಿಕೊ’ ಎನ್ನುವುದು ಒಟ್ಟಾರೆಯಾಗಿ ರುದ್ರಸೂಕ್ತದ ಮೂಲಕ ಋಷಿಗಳು ಮನಗಾಣಿಸಲು ಯತ್ನಿಸುವ ವಿಚಾರ.

ರುದ್ರಸೂಕ್ತದ ಪಾರಾಯಣ ಕೇಳುವಾಗ ಕೆಲವರಿಗೆ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಸಾಲುಗಳು ನೆನಪಾಗುತ್ತವೆ.

‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ! ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕೂ ತುದಿಯಿಲ್ಲ...’ ಎನ್ನುವ ಮೂಲಕ ಕುವೆಂಪು ಹೇಳುವುದು ಸಹ ಇದನ್ನೇ ಅಲ್ಲವೇ? ರುದ್ರಸೂಕ್ತದ ತಾತ್ಪರ್ಯ ಅರ್ಥ ಮಾಡಿಕೊಳ್ಳಲು, ಮನನ ಮಾಡಿಕೊಳ್ಳಲು ಈ ಸುಂದರ ಸಾಲುಗಳು ನೆರವಿಗೆ ಒದಗುತ್ತವೆ. ಈ ಸಲ ಶಿವರಾತ್ರಿಯಂದು ಯಾಮ ಪೂಜೆಯ ಅಭಿಷೇಕ ವೇಳೆ ರುದ್ರಸೂಕ್ತ ಪಾರಾಯಣ ಮಾಡುತ್ತಿದ್ದುದು ನಿಮ್ಮ ಕಿವಿಗೆ ಬಿದ್ದಾಗ ಅರ್ಥಾನುಸಂಧಾನದ ಕಡೆಗೂ ನಮ್ಮ ಚಿತ್ತ ಹರಿಯಲಿ. ಮಂತ್ರಗಳು ಸೃಷ್ಟಿಸುವ ನಾದದ ಆವರಣ ಮನಸ್ಸಿನ ಮೇಲೆ ಅಚ್ಚೊತ್ತುವ ಸುಖ–ಸೌಂದರ್ಯವನ್ನು ಬರೆದು ವಿವರಿಸಲು ಸಾಧ್ಯವೇ? ಅದನ್ನು ಅನುಭವಿಸಿಯೇ ಆಸ್ವಾದಿಸಬೇಕು.

ಇದನ್ನೂ ಓದಿ: ಶಿವರಾತ್ರಿ ಆಚರಣೆ ವಿಧಾನ, ಯಾಮಪೂಜೆಯ ವೈಶಿಷ್ಟ್ಯ

ನಮಕ–ಚಮಕ ತಿಳಿಯಬೇಕೆ?

ವೇದವನ್ನು ಗುರುಮುಖೇನ ಕಲಿಯುವುದು ಅತ್ಯುತ್ತಮ ಕ್ರಮ. ನಾವು ಇರುವ ಊರಿನಲ್ಲಿ ವೇದಪಾಠ ಮಾಡುವ ಗುರುಗಳು ಲಭ್ಯರಿಲ್ಲ ಎನ್ನುವವರಿಗೆ ಈಗ ತಂತ್ರಜ್ಞಾನದ ನೆರವು ಲಭ್ಯ.

ರುದ್ರ ಪಾರಾಯಣ ಮಾಡಲಿಚ್ಛಿಸುವವರು mantradeepika ಆ್ಯಪ್‌ನಲ್ಲಿರುವ ‘ಶ್ರೀ ರುದ್ರಪ್ರಶ್ನಃ’ ಮತ್ತು ‘ಚಮಕಪ್ರಶ್ನಃ’ ಗಮನಿಸಬಹುದು. archive.org ವೆಬ್‌ಸೈಟ್‌ನಲ್ಲಿ ರಾಮಕೃಷ್ಣಾಶ್ರಮದ ಸ್ವಾಮಿ ಚಿದಾನಂದರು ಸಂಪಾದಿಸಿರುವ ‘ಸಸ್ವರ ವೇದಮಂತ್ರಾಃ’ ಪುಸ್ತಕ ಉಚಿತ ಲಭ್ಯ.

ಉದಾತ್ತ, ಅನುದಾತ್ತ, ಸ್ವರಿತದಂಥ ವೇದಮಂತ್ರಗಳ ಉಚ್ಚಾರಣಾ ಕ್ರಮಗಳನ್ನು ಅರಿತುಕೊಳ್ಳಲು ಇಚ್ಛಿಸುವವರಿಗೆ ‘ಚಳ್ಳಕೆರೆ ಸೋದರರು’ ಎಂದೇ ಖ್ಯಾತರಾದ ಎಂ.ಎಸ್.ವೇಣುಗೋಪಾಲ್ ಮತ್ತು ಎಂ.ಎಸ್.ಶ್ರೀನಿವಾಸನ್ ಅವರ ‘ಪರಾತ್ಪರ ಪರಮೇಶ್ವರ’ ಆಲ್ಬಂ ಸಹಾಯಕ್ಕೆ ಬರುತ್ತದೆ. ಇದು ಯೂಟ್ಯೂಬ್‌ನಲ್ಲಿದೆ.

ರುದ್ರದ ಪಠ್ಯ, ಉಚ್ಚಾರಣೆ ಧಾಟಿಯನ್ನು ತಿಳಿದ ನಂತರ ಅರ್ಥಾನುಸಂಧಾನದತ್ತ ಗಮನ ಹರಿಯದಿದ್ದರೆ ಏನು ಪ್ರಯೋಜನ? ಇಂಥವರು ಎಚ್.ಎಸ್.ಲಕ್ಷ್ಮೀನರಸಿಂಹಮೂರ್ತಿಗಳ ‘ರುದ್ರಭಾಷ್ಯಪ್ರಕಾಶ’ ಮತ್ತು ‘ಚಮಕಾಧ್ಯಾಯಭಾಷ್ಯ’ ಪುಸ್ತಕಗಳನ್ನು ಗಮನಿಸಬಹುದು. ಈ ಎರಡೂ ಪುಸ್ತಕಗಳು adhyatmaprakasha.org ವೆಬ್‌ಸೈಟ್‌ನಲ್ಲಿ ಪಿಡಿಎಫ್ ರೂಪದಲ್ಲಿವೆ. ರುದ್ರ ಮತ್ತು ಚಮಕಗಳ ಬಗ್ಗೆ ಇರುವ ಹಲವು ಭಾಷ್ಯಗಳನ್ನು ಸಮಕಾಲೀನ ಸಂದರ್ಭಗಳಿಗೆ ಒಗ್ಗಿಸಿ, ಸರಳವಾಗಿ ಕಟ್ಟಿಕೊಡುವುದು ಈ ಪುಸ್ತಕಗಳ ವೈಶಿಷ್ಟ್ಯ.

(ಕೃಪೆ: ‘ಸುಧಾ’, 27ನೇ ಫೆಬ್ರುವರಿ 2020ರ ಸಂಚಿಕೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)