ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ವಾಣಿ| ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–5

Last Updated 17 ಆಗಸ್ಟ್ 2020, 3:48 IST
ಅಕ್ಷರ ಗಾತ್ರ

ದೇವರ ನೆನೆದು ಮುಕ್ತರಾದೆವೆಂಬ ಯುಕ್ತಿಶೂನ್ಯರ ಮಾತ ಕೇಳಲಾಗದು,
ಅದೇನು ಕಾರಣವೆಂದಡೆ : ದೇವರ ನೆನೆವಂಗೆ ದೇವರುಂಟೆ?
ದೂರ ದೂರದಲ್ಲಿದ್ದವರ ನೆನೆವರಲ್ಲದೆ, ಸಮೀಪದಲ್ಲಿದ್ದವರ ನೆನವವರಿಲ್ಲ.
ಇದನರಿದು ನೀನೆನ್ನೊಳಡಗಿ, ನಾನಿನ್ನ ನೆನೆಯಲಿಲ್ಲ.
ನೀನೆನಗೆ ಮುಕ್ತಿಯನೀಯಲಿಲ್ಲ. ನೀನಾನೆಂದೆನಲಿಲ್ಲ ಮಹಾಲಿಂಗ ಗಜೇಶ್ವರಾ.
- ಗಜೇಶ ಮಸಣಯ್ಯ

ದೇವರನ್ನು ಕುರಿತ ಪರಿಕಲ್ಪನೆಗಳು ವೈವಿಧ್ಯಪೂರ್ಣ ಹಾಗೂ ವೈಚಿತ್ರ್ಯಪೂರ್ಣ. ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ಅವನನ್ನು ಕಾಣುವುದು ಹೇಗೆ? ಎಂಬ ಪ್ರಶ್ನೆಗಳಿಗೆ, ತರಹೇವಾರಿ ಉತ್ತರಗಳು ಹೊರಡುತ್ತವೆ. ಸಾಮಾನ್ಯವಾಗಿ ದೇವರನ್ನು ಮನುಷ್ಯನಿಂದ ಭಿನ್ನವಾದ ಅವತಾರ ಮತ್ತು ಸ್ಥಳದಲ್ಲಿ ಕಾಣುವುದೇ ಹೆಚ್ಚು. ಈ ನಂಬಿಕೆಗಳಿಂದಾಗಿಯೇ ದೇವರು ನಮ್ಮಿಂದ ಬೇರೆ ಮತ್ತು ದೂರವಿದ್ದಾನೆ ಎಂಬ ವಿಚಾರಗಳೇ ಪ್ರಚಲಿತವಾಗಿವೆ.

ಹಾಗಿದ್ದರೆ ದೇವರು ನಮ್ಮಿಂದ ದೂರ ಮತ್ತು ಬೇರೆ ಇದ್ದಾನೆಯೆ? ಎಂಬ ಈ ಪ್ರಶ್ನೆಗಳನ್ನೇ ಪ್ರಧಾನ ಚರ್ಚೆಗೆ ಎತ್ತಿಕೊಳ್ಳುವ ಗಜೇಶ ಮಸಣಯ್ಯ ಅಂಥ ನಂಬಿಕೆಗಳನ್ನೇ ನಿರಾಕರಿಸುತ್ತ, ಆ ನಿರಾಕರಣೆಗೆ ವೈಚಾರಿಕ ಮತ್ತು ವಾಸ್ತವಿಕ ಸಾಕ್ಷಿಗಳನ್ನೂ ಕೊಡುತ್ತಾನೆ ಪ್ರಸ್ತುತ ವಚನದಲ್ಲಿ.

ದೇವರನ್ನು ನೆನೆದ ಮಾತ್ರಕ್ಕೇ ಮುಕ್ತಿ ಸಿಗುತ್ತದೆಯೇ? ಎಂಬ ಪ್ರಶ್ನೆಯನ್ನೇ ಮೊದಲು ಕೇಳುವ ಮಸಣಯ್ಯ, ಹಾಗಿದ್ದರೆ ದೇವರು ಕೇವಲ ನೆನೆಯುವುದಕ್ಕೆ ಮಾತ್ರವೇ? ಎಂಬ ಮತ್ತೊಂದು ಪ್ರಶ್ನೆಯನ್ನು ಜೋಡಿಸುತ್ತಾನೆ. ಈ ಬಗೆಯ ವಿಚಾರ ಆಧಾರರಹಿತವಾದದ್ದು ಎಂಬುದನ್ನು ತರ್ಕಬದ್ಧ ಪ್ರಮೇಯದೊಂದಿಗೆ ಮಂಡಿಸುವ ಆತ, ಸಾಮಾನ್ಯವಾಗಿ ನಾವು ಯಾರನ್ನಾದರೂ ನೆನೆಯುವುದು ಅವರು ದೂರವಿದ್ದಾಗ ಮಾತ್ರ, ಹತ್ತಿರವೇ ಇದ್ದರೆ ಅವರನ್ನು ನೆನೆಯುವ ಪ್ರಮೇಯವೇ ಬರುವುದಿಲ್ಲ ಎನ್ನುತ್ತಾನೆ. ಹೀಗೆ ಹೇಳಿದ ನಂತರ ದೇವರು ವಾಸ್ತವವಾಗಿ ಇರುವುದೇ ಮನುಷ್ಯನ ಮನಸ್ಸಿನಲ್ಲಿ ಎಂದೂ, ಇಷ್ಟು ಹತ್ತಿರವೇ ಇರುವ ದೇವರನ್ನು ನೆನಯುವ ಅಗತ್ಯವೇ ಇಲ್ಲವೆಂದೂ ಪ್ರತಿಪಾದಿಸುತ್ತಾನೆ. ದೇವರು ಮತ್ತು ದೇವತ್ವದ ಗುಣ ಮನುಷ್ಯನಲ್ಲೇ ಇದೆಯೆಂಬುದೇ ಗಜೇಶ ಮಸಣಯ್ಯನ ಈ ವಚನದ ಒಟ್ಟು ಸಾರ. ಹೀಗಿರುವಾಗ ನಮ್ಮೊಳಗನ್ನು ನೋಡಿಕೊಳ್ಳದೆ, ದೇವರನ್ನು ಹೊರಗೆ ಹುಡುಕುವ ಮತ್ತು ನೆನೆಯುವ ಅಗತ್ಯ ಇದೆಯೇ ಎಂಬುದೇ ಅವನ ನೇರ ಪ್ರಶ್ನೆ. ಇದು ಶರಣಕ್ರಾಂತಿಯ ಒಟ್ಟಾರೆ ಪ್ರಶ್ನೆ ಕೂಡ.

ದೇವರು ಹೊರಗೆಲ್ಲಿಯೂ ಇಲ್ಲ, ನಮ್ಮೊಳಗೇ ಇದ್ದಾನೆ ಎನ್ನುವ ವಚನಕಾರರು, ಮನುಷ್ಯನೊಳಗಿನ ದೇವತ್ವದ ಅರಿವು ಮೂಡಿಸಿಕೊಳ್ಳುವ ದಾರಿ ತೋರಿಸುತ್ತಾರೆ. ನಾವು ದೇವರಲ್ಲಿ ಕಾಣುವ ಗುಣಗಳೆಲ್ಲವೂ ಮನುಷ್ಯನಲ್ಲೇ ಇದ್ದು, ಅವುಗಳನ್ನು ಜಾಗೃತ ಮಾಡಿಕೊಳ್ಳುವುದು ಅಗತ್ಯ. ಶರಣರು ʻದೇಹವೇ ದೇವಾಲಯ, ಶಿರ ಹೊನ್ನ ಕಳಶ, ಅರಿವುಳ್ಳ ಆತ್ಮವೇ ದೇವರುʼ ಎಂಬ ಮೌಲಿಕ ಮಾತುಗಳನ್ನು ಆಡಿದರು ಮತ್ತು ಅಂಥ ದೇವತ್ವದ ಮಾರ್ಗದಲ್ಲೇ ನಡೆದರು. ಆ ಮೂಲಕ ದೇವರನ್ನು ಹೊರಗೆ ಹುಡುಕುವವರಿಗೆ, ಆತ ಒಳಗೇ ಇದ್ದಾನೆಂಬುದನ್ನು ತೋರಿಸಿದರು ಕೂಡ.

ನಮ್ಮೊಳಗೇ ದೇವರಿರುವಾಗ ದೇವರು ಮತ್ತು ಮನುಷ್ಯ ಭಿನ್ನರೆಂಬ ಭಾವ ಬರಲು ಸಾಧ್ಯವೇ ಇಲ್ಲ.ಅಂತೆಯೇ ಒಬ್ಬನಿಗೆ ಮತ್ತೊಬ್ಬ ಮುಕ್ತಿಯನ್ನು ಕೊಡುವುದಾಗಲಿ, ನೆನೆಯುವ ಅಗತ್ಯವಾಗಲಿ ಇಲ್ಲವೆ ಇಲ್ಲ. ಹೀಗೆ ತಮ್ಮಲ್ಲಿಯ ದೇವತ್ವವನ್ನು ಜಾಗೃತಗೊಳಿಸಿಕೊಂಡ ಶರಣರು ಅದನ್ನು ನಡೆಯಲ್ಲೂ ತಂದರು, ನುಡಿಯಲ್ಲಿ ಆ ಸತ್ಯವನ್ನು ಜಗತ್ತಿಗೂ ಸಾರಿದರು. ಗಜೇಶ ಮಣಯ್ಯನ ಈ ವಚನವೇ ಅದಕ್ಕೊಂದು ಸತ್ಯಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT