ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ 27-9-2020ರಿಂದ 4-10-2020 ರವರೆಗೆ

Last Updated 26 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಈ ವಾರ ಹೆಚ್ಚು ಕ್ರಿಯಾಶೀಲರಾಗಿರುವಿರಿ. ವ್ಯಾಪಾರಗಳಲ್ಲಿ ಹೆಚ್ಚು ಮುಂದಾಲೋಚನೆ ವಹಿಸಿ ಲಾಭದತ್ತ ಹೆಜ್ಜೆ ಹಾಕುವಿರಿ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಅನುಕೂಲದ ವಾರ. ಸೃಜನಶೀಲ ಕಾರ್ಯಗಳಲ್ಲಿ ಹೆಚ್ಚು ಮಗ್ನರಾಗಿ ಯಶಸ್ಸು ಗಳಿಸುವಿರಿ. ನಿಮ್ಮ ಕಾರ್ಯಕ್ಷಮತೆಯಿಂದ ಮಾನಸಿಕ ಒತ್ತಡ ದೂರ ಮಾಡಿಕೊಳ್ಳುವಿರಿ. ವೃತ್ತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳಿಂದ ನಿಮಗೆ ಗೌರವ ದೊರೆಯುತ್ತದೆ. ನರದೌರ್ಬಲ್ಯಗಳ ಬಗ್ಗೆ ಎಚ್ಚರ ವಹಿಸಿ. ಧಾರ್ಮಿಕ ವಿದ್ಯೆಗಳನ್ನು ಕಲಿಯಲು ಆಸಕ್ತಿ ತೋರುವವರಿಗೆ ಸೂಕ್ತ ಮಾರ್ಗದರ್ಶನ ಈಗ ಸಿಗುತ್ತದೆ. ಹಣದ ಹರಿವು ಸಾಮಾನ್ಯ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚಿಂತನೆ ಮಾಡುವಿರಿ. ನಿವೃತ್ತರು ಮುಂದಿನ ಜೀವನದ ಭವಿಷ್ಯಕ್ಕಾಗಿ ಆದಾಯದ ಮಾರ್ಗಗಳನ್ನು ಹುಡುಕುವರು. ಸಂಸಾರ ಸೌಖ್ಯಕ್ಕಾಗಿ ಹೊಸ ಸೂತ್ರಗಳನ್ನು ಹುಡುಕುವಿರಿ. ಕೆಲವು ಕೆಲಸಗಳಲ್ಲಿ ನೀವು ಮಾಡುವ ಬದಲಾವಣೆಗಳು ಉತ್ತಮ ಫಲಿತಾಂಶ ತರುತ್ತವೆ. ರಕ್ಷಣಾ ಕ್ಷೇತ್ರದಲ್ಲಿ ದುಡಿಯುವವರಿಗೆ ಅತ್ಯಂತ ಕಠಿಣ ಸವಾಲುಗಳು ಎದುರಾದರೂ ಹಾಗೆಯೇ ಪರಿಹಾರಗಳು ಸಹ ಸಿಗುತ್ತವೆ. ಅನಾರೋಗ್ಯಪೀಡಿತರ ಆರೋಗ್ಯ ಸುಧಾರಿಸುತ್ತದೆ. ಪುರಾಣಗಳನ್ನು ಪ್ರವಚನ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಆರ್ಥಿಕ ಸ್ಥಿತಿಯು ಪರವಾಗಿಲ್ಲ ಎಂಬಂತಿರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ. ಉನ್ನತ ವಿದ್ಯಾಭ್ಯಾಸದ ಬಗ್ಗೆ ಸಾಕಷ್ಟು ಆಲೋಚನೆ ಮಾಡುವಿರಿ. ಭ್ರಮೆ ಮತ್ತು ವಾಸ್ತವಗಳ ನಡುವೆ ವ್ಯತ್ಯಾಸ ಅರಿಯುವಿರಿ. ಇರುವ ಕೆಲಸದಲ್ಲಿದ್ದು ನಂತರ ಉತ್ತಮ ಕೆಲಸ ಹುಡುಕಿ. ಸ್ವಂತ ಜಾಗಕ್ಕಾಗಿ ಸರ್ಕಾರಕ್ಕೆ ಸಾಕಷ್ಟು ಬರೆದು ಅಲೆದಾಡಿ ನಿರಾಶರಾಗಿದ್ದ ನಿಮಗೆ ಆ ಬಗ್ಗೆ ಸಂತಸದ ವಾರ್ತೆ ಕೇಳಿಬರುತ್ತದೆ. ಹೊಸಬಗೆಯ ವ್ಯವಹಾರದ ಬಗ್ಗೆ ಸರಿಯಾಗಿ ತಿಳಿದು ವ್ಯವಹರಿಸಿ. ಸಂಗಾತಿಯ ಹುಡುಕಾಟದಲ್ಲಿ ಇದ್ದವರಿಗೆ ಆಸಕ್ತಿ ಹೆಚ್ಚಿಸುವಂತಹ ವಿಷಯಗಳು ಕೇಳಿಬರುತ್ತವೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ರಾಜಕೀಯ ವ್ಯಕ್ತಿಗಳಿಗೆ ಅವರ ಸ್ನೇಹಿತರ ಸಹಾಯದಿಂದ ರಾಜಕೀಯದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಆರ್ಥಿಕ ಶಕ್ತಿಯ ವೃದ್ಧಿಗಾಗಿ ನೀವು ಹಮ್ಮಿಕೊಂಡ ಕೆಲವು ಯೋಜನೆಗಳು ಫಲ ಕೊಡಲಿವೆ. ವ್ಯವಹಾರದ ಉನ್ನತಿಯಿಂದಾಗಿ ಗಣ್ಯರ ಪರಿಚಯ ಆಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಸಾಮಾನ್ಯ ಪ್ರಗತಿ. ಮಕ್ಕಳಿಂದ ಸಹಾಯ ಸಿಗದೇ ಮಾನಸಿಕ ಕಿರಿಕಿರಿ ಅನುಭವಿಸುವಿರಿ. ಸಂಗಾತಿಯ ಕೋಪಕ್ಕೆ ತಾಳ್ಮೆಯ ಉತ್ತರ ಕೊಡಿ. ಮಹಿಳೆಯರು ನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಸಂತೋಷಕೂಟದಲ್ಲಿ ಅತಿಯಾಗಿ ಮೈ ಮರೆಯಬೇಡಿ. ಮೈಮರೆತಲ್ಲಿ ಜನರು ನಿಮ್ಮಲ್ಲಿರುವ ಅಮೂಲ್ಯ ವಸ್ತುಗಳನ್ನು ದೋಚಬಹುದು ಎಚ್ಚರ. ರಾಜಕೀಯದಲ್ಲಿರುವವರಿಗೆ ಅವರ ಕಾರ್ಯಕರ್ತರ ಮೂಲಕ ಬೇಸರವಾಗುವ ಸುದ್ದಿ ಸಿಗಬಹುದು. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಸರ್ಕಾರದಿಂದ ಬರಬೇಕಾಗಿದ್ದ ಧನಸಹಾಯಗಳು ಬರುತ್ತವೆ. ಸರ್ಕಾರಿ ಗುತ್ತಿಗೆದಾರರಿಗೆ ಸ್ವಲ್ಪ ಮಟ್ಟಿನ ಗುತ್ತಿಗೆಯ ಹಣ ಬರುತ್ತದೆ. ವಿದ್ಯಾರ್ಥಿಗಳಿಗೆ ಅವರ ಸಾಧನೆಗೆ ತಕ್ಕ ಫಲಿತಾಂಶ ಸಿಗಲಿದೆ. ವಿದೇಶಿ ಕಂಪನಿಗಳಿಗೆ ಕಚ್ಚಾ ಮಾಲು ಪೂರೈಸುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಶ್ರದ್ಧೆಯು ನಿಮ್ಮನ್ನು ವೃತ್ತಿಯಲ್ಲಿ ಉಳಿಸಿ, ಮುಂದುವರಿಸುತ್ತದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ವಿದ್ಯಾರ್ಥಿಗಳಿಗೆ ಅವರ ಪ್ರಯತ್ನದಲ್ಲಿ ಯಶಸ್ಸು ಸಿಗುತ್ತದೆ. ಎದುರಾಳಿಗಳು ನಿಮ್ಮ ವಿರುದ್ಧ ಮಾಡಿದ್ದ ಆಪಾದನೆಗಳ ಮೂಲಕಾರಣ ಸಿಕ್ಕು ಅವರನ್ನು ಝಾಡಿಸುವಿರಿ. ವ್ಯವಹಾರದಲ್ಲಿ ಸ್ವಲ್ಪ ಲಾಭ ನಿರೀಕ್ಷಿಸಬಹುದು. ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತದೆ. ನವೀನ ರೀತಿಯ ವಸ್ತ್ರವಿನ್ಯಾಸ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ನಿಂತಿದ್ದ ಸಂಬಳಗಳು ಕೆಲವರಿಗೆ ಈಗ ಬರುತ್ತವೆ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ತಾಂತ್ರಿಕ ಪರಿಣತರಿಗೆ ಉತ್ತಮ ಕಡೆ ಕೆಲಸ ದೊರೆಯುತ್ತದೆ. ಕೆಲಸದಲ್ಲಿ ಹೆಚ್ಚಿನ ನೈಪುಣ್ಯ ಪಡೆಯಲು ಅನುಕೂಲ ಸಿಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ಅದನ್ನು ಸರಿದಾರಿಗೆ ತರುವಿರಿ. ಕೆಲವು ಉದ್ದೇಶಿತ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಯಾರ ಬಗ್ಗೆಯೂ ಟೀಕಿಸುವ ಮುನ್ನ ವಾಸ್ತವ ತಿಳಿದು ಮಾತನಾಡಿ. ಉಸಿರಾಟದ ತೊಂದರೆ ಕಂಡು ಬಂದರೂ ನಂತರ ಆರೋಗ್ಯ ಸರಿಯಾಗುವುದು. ವಸ್ತ್ರ ವಿನ್ಯಾಸಕಾರರಿಗೆ ಕೈತುಂಬಾ ಕೆಲಸ ದೊರೆತು ಧನ ಸಂಪಾದನೆ ಹೆಚ್ಚುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಸರ್ಕಾರಿ ಕಾರ್ಯಗಳಲ್ಲಿ ಇದ್ದ ಅಡಚಣೆಗಳು ನಿವಾರಣೆಯಾಗುತ್ತವೆ. ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗಳಿಗೆ ಹೆಚ್ಚಿನ ಪರಿಶ್ರಮಪಡಲೇಬೇಕು. ಹಣದ ಹರಿವು ಸಾಕಷ್ಟು ವೃದ್ಧಿಸುತ್ತದೆ. ಶತ್ರುಗಳನ್ನು ನಿಗ್ರಹಿಸಲು ನೀವು ಹೂಡುವ ತಂತ್ರಗಳು ನಿಮಗೆ ಫಲಿತಾಂಶ ಕೊಡುತ್ತವೆ. ಅನಿರೀಕ್ಷಿತವಾಗಿ ಮಕ್ಕಳಿಂದ ಧನಸಹಾಯ ಒದಗಿ ಬರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಸಂತೋಷಪಡುವಿರಿ. ಸ್ತ್ರೀಯರು ಮಾಡುವ ವಸ್ತ್ರಗಳ ವ್ಯಾಪಾರಗಳಲ್ಲಿ ಅಭಿವೃದ್ಧಿ ಇದೆ. ಹಿರಿಯರ ಆಸ್ತಿಯಲ್ಲಿ ಸ್ವಲ್ಪ ಭಾಗ ನಿಮಗೆ ಸಿಗುವ ಲಕ್ಷಣಗಳಿವೆ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಇರುವ ಸಂಪನ್ಮೂಲಕ್ಕೆ ಅನುಗುಣವಾಗಿ ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಿ. ವೃತ್ತಿಯಲ್ಲಿ ಇದ್ದ ಹಿರಿಯ ಅಧಿಕಾರಿಗಳ ತೊಂದರೆಗಳು ನಿವಾರಣೆ ಆಗಿ ನಿರಾಳವಾಗುತ್ತದೆ. ಲೋಹಗಳ ಎರಕದ ಮೂರ್ತಿಗಳನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ಕೃಷಿಕರಿಗೆ ಅವರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುತ್ತದೆ. ತೆರಿಗೆ ತಜ್ಞರಿಗೆ ಉತ್ತಮ ಬೇಡಿಕೆ ಸೃಷ್ಟಿಯಾಗುತ್ತದೆ. ತೆರಿಗೆ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಕೆಲಸದ ಒತ್ತಡ ಹೆಚ್ಚುತ್ತದೆ. ಮೂಳೆ ನೋವುಗಳು ಹೆಚ್ಚು ಬಾಧಿಸಬಹುದು. ಸಂಗಾತಿಯ ಆದಾಯದಲ್ಲಿ ಅನಿರೀಕ್ಷಿತ ಏರಿಕೆ ಕಾಣಬಹುದು

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಅತಿ ಅವಸರದಿಂದ ಮಾಡುವ ಕೆಲಸಗಳಲ್ಲಿ ಅವಘಡಗಳು ಹೆಚ್ಚುತ್ತವೆ. ಸಮಾಧಾನವಾಗಿ ಯೋಚಿಸಿ ಕೆಲಸ ಮಾಡಿ. ನಿಮ್ಮ ಮೇಲಿದ್ದ ಹೆಚ್ಚಿನ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ. ಸ್ಥಿರಾಸ್ತಿ ಸಂಪಾದಿಸುವ ಯೋಗವಿದೆ. ವೇದಿಕೆಗಳ ಮತ್ತು ಒಳಾಂಗಣ ಅಲಂಕಾರ ಮಾಡುವವರಿಗೆ ಬೇಡಿಕೆ ಬರಲಿದೆ. ಕೃಷಿ ವಿಜ್ಞಾನ ಓದುತ್ತಿರುವವರಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಮೂಳೆ ತಜ್ಞರ ಖ್ಯಾತಿಯು ಹೆಚ್ಚಾಗುತ್ತದೆ. ಸಂಗಾತಿಯ ಮೇಲಿದ್ದ ಮುನಿಸು ಮಾಯವಾಗಿ ಸಂತೋಷ ನೆಲೆಸಲಿದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಉದ್ಯೋಗ ಅರಸುತ್ತಿರುವವರು ಬರುವ ಎಲ್ಲಾ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ, ಇರುವುದರಲ್ಲಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಉದ್ಯೋಗ ಸ್ಥಳಗಳಲ್ಲಿ ಹೊಸ ಬದಲಾವಣೆಗಳಿಗೆ ಮುಕ್ತಮನಸ್ಸಿನಿಂದ ತೆರೆದುಕೊಂಡಲ್ಲಿ ಅದು ನಿಮಗೆ ಒಳಿತು. ಅಗತ್ಯಕ್ಕೆ ತಕ್ಕಷ್ಟು ಆದಾಯವಿರುತ್ತದೆ. ಖರ್ಚಿನ ಮೇಲೆ ಸ್ವಲ್ಪ ನಿಗಾ ಇಡಿ. ಮಹಿಳೆಯರ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಬಹುದು. ಅವಿವಾಹಿತರಿಗೆ ಸೂಕ್ತ ಸಂಬಂಧಗಳು ಒದಗುವ ಕಾಲ. ಕೆಲವು ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ ಕಂಡರೂ ಕೆಲಸ ನಿಲ್ಲುವುದಿಲ್ಲ. ಕವಿಗಳಿಗೆ ಹೊಸ ಕಾದಂಬರಿಗಾಗಿ ಬಂಡವಾಳ ಹೂಡುವವರು ಬರುತ್ತಾರೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಕಷ್ಟಪಟ್ಟು ಸರಿದಾರಿಗೆ ತಂದಿದ್ದ ವ್ಯವಹಾರಗಳಲ್ಲಿ ಚೇತರಿಕೆ ಕಂಡು ಸಂಪಾದನೆ ಆಗಲಿದೆ. ಯಾರೋ ಹೇಳಿದರೆಂದು ಇರುವ ಹಣವನ್ನು ಸಿಕ್ಕಸಿಕ್ಕಲ್ಲಿ ಹೂಡಬೇಡಿ, ಸರಿಯಾಗಿ ಆಲೋಚಿಸಿ ಸೂಕ್ತ ಜಾಗದಲ್ಲಿ ಬಂಡವಾಳ ತೊಡಗಿಸಿ. ಸಜ್ಜನರ ಒಡನಾಟದಿಂದ ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೇಳುವ ಅವಕಾಶ. ಸಗಟು ದಿನಸಿ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ಹಿರಿಯರ ಒಡವೆಗಳಲ್ಲಿ ನಿಮಗೆ ಸ್ವಲ್ಪ ಪಾಲು ದೊರೆಯುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT