ಶುಕ್ರವಾರ, ಅಕ್ಟೋಬರ್ 7, 2022
24 °C

ವಾರ ಭವಿಷ್ಯ | 24-7-2022ರಿಂದ 30-7-2022ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)

ಒಂದು ರೀತಿಯ ವ್ಯಗ್ರತೆ ನಿಮ್ಮನ್ನು ಕಾಡಬಹುದು. ಹಣದ ಹರಿವು ಅವಶ್ಯಕತೆಗೆ ತಕ್ಕಷ್ಟು ಇರುತ್ತದೆ. ಸರ್ಕಾರಿ ಆಸ್ತಿಗಳನ್ನು ಕೊಳ್ಳುವ ಮನಸ್ಸು ಇರುತ್ತದೆ ಅಥವಾ ಅದರ ವ್ಯವಹಾರದಲ್ಲಿ ಸಾಕಷ್ಟು ಮುನ್ನಡೆಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಮುನ್ನಡೆ ಇರುತ್ತದೆ. ರಕ್ತಸಂಬಂಧಿ ಕಾಯಿಲೆಗಳಿರುವವರು ಎಚ್ಚರ ವಹಿಸಿರಿ. ಸಂಗಾತಿಯ ಅತಿ ಹೆಚ್ಚು ಖರ್ಚು ತಲೆಬಿಸಿ ತರುತ್ತದೆ. ಕೆಲವು ಅನಿರೀಕ್ಷಿತ ಚಟುವಟಿಕೆಗಳಿಂದ ಆದಾಯ ಬರುತ್ತದೆ. ತಂದೆಗಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ವೃತ್ತಿಯಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಕೃಷಿಗೆ ಬಳಸುವ ಕಬ್ಬಿಣದ ಯಾಂತ್ರಿಕ ವಸ್ತುಗಳನ್ನು ತಯಾರಿಸುವವರಿಗೆ ಮತ್ತು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಮ್ಮಿಯಾಗುತ್ತದೆ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಬಹಳ ಚುರುಕಾಗಿ ಎಲ್ಲ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಎಲ್ಲ ಕಾರ್ಯಗಳಲ್ಲಿ ಭಾಗವಹಿಸಿ ಚುರುಕಾಗಿ ಓಡಾಡುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನ ಮಾಡುವ ಯೋಗವಿದೆ. ಉದರಕ್ಕೆ ಸಂಬಂಧಪಟ್ಟ ಕಾಯಿಲೆ ಇರುವವರು ಚಿಕಿತ್ಸೆಗೆ ಹೋಗುವುದು ಒಳ್ಳೆಯದು. ಸಂಗಾತಿಯ ಕಡೆಯ ಆಸ್ತಿ ವಿಚಾರದಲ್ಲಿ ಕಾವೇರಿದ ಮಾತುಗಳು ಆಗಬಹುದು. ಈ ಬಗ್ಗೆ ಅನಿರೀಕ್ಷಿತವಾಗಿ ಕೆಲವೊಂದು ಖರ್ಚುಗಳು ಬರುವ ಸಾಧ್ಯತೆ ಇದೆ. ತಂದೆಯಿಂದ ಕೃಷಿ ಭೂಮಿಯು ದೊರೆಯಬಹುದು. ವೃತ್ತಿಯಲ್ಲಿ ಒತ್ತಡಗಳು ಸಾಕಷ್ಟು ಕಡಿಮೆಯಾಗಿ ನಿರಾಳವೆನಿಸುವುದು. ಮನೆಪಾಠ ಮಾಡುವವರಿಗೆ, ಶಾಲೆಗಳನ್ನು ನಡೆಸುವವರಿಗೆ ಆದಾಯ ಹೆಚ್ಚುತ್ತದೆ. ವಿದೇಶದಲ್ಲಿ ಆಸ್ತಿ ವ್ಯವಹಾರ ಮಾಡುವಾಗ ದಾಖಲೆಯ ಬಗ್ಗೆ ಸಾಕಷ್ಟು ಎಚ್ಚರವಹಿಸಿರಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಉಲ್ಲಾಸಕರವಾದ ವಾತಾವರಣ ಇರುತ್ತದೆ. ಆದಾಯದಷ್ಟೇ ಖರ್ಚು ಇರುತ್ತದೆ. ಸ್ವಯಂ ಉದ್ಯೋಗ ಮಾಡುವವರ ವ್ಯವಹಾರ ಹೆಚ್ಚುತ್ತದೆ. ಕಟ್ಟಡಗಳನ್ನು ಕಟ್ಟುವ ಸಂಸ್ಥೆಗಳಿಗೆ ಕಾನೂನು ತೊಡಕುಗಳು ಎದುರಾಗಬಹುದು. ನಿಮ್ಮ ಅಗತ್ಯತೆಗೆ ಬೇಕಾದ ಸಾಲ ಸೌಲಭ್ಯಗಳು ದೊರೆಯುತ್ತವೆ. ಮಕ್ಕಳಿಂದ ಅಗೌರವ ಆಗಬಹುದು. ಕೃಷಿಕರಿಗೆ ಅಲ್ಪಹಿನ್ನಡೆ ಇರುತ್ತದೆ, ಆದರೆ ನಂತರ ಸರಿಯಾಗುತ್ತದೆ. ನಿಮ್ಮ ಸಂಗಾತಿಯ ವೃತ್ತಿಯಲ್ಲಿನ ಸ್ಥಾನ ವೃದ್ಧಿಯಾಗುತ್ತದೆ ಜೊತೆಗೆ ಆದಾಯವೂ ಹೆಚ್ಚುತ್ತದೆ. ಕೆಲವೊಂದು ಕೆಲಸಗಳು ಆಗದೆ ಬಹಳ ಸತಾಯಿಸಬಹುದು. ಹಿರಿಯರು ನಡೆಸುತ್ತಿರುವ ವ್ಯವಹಾರಗಳು ಲಾಭವನ್ನು ತರುತ್ತವೆ. ವಿದೇಶದಲ್ಲಿ ಆಸ್ತಿ ಮಾಡುವವರಿಗೆ ಅನುಕೂಲಕರವಾದ ವಾತಾವರಣವಿದೆ. ಕ್ಷೀರೋತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರ ಸಾಮಾನ್ಯವಾಗಿರುತ್ತದೆ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ಹೊಸ ಜನರ ಪರಿಚಯವಾಗುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ನಿಮ್ಮ ನಡವಳಿಕೆಯು ಸಂಪೂರ್ಣ ವ್ಯಾವಹಾರಿಕವಾಗಿರುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಹಿನ್ನಡೆಯನ್ನು ಕಾಣಬಹುದು. ಮಕ್ಕಳ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಉದರದಲ್ಲಿನ ತೊಂದರೆಗಳು ಗುಣಮುಖವಾಗುವ ಲಕ್ಷಣಗಳಿವೆ. ಕೃಷಿಕರ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಹಿರಿಯರಿಂದ ಧನಸಹಾಯ ಒದಗುವ ಲಕ್ಷಣವಿದೆ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಹೆಚ್ಚಾಗುವ ಲಕ್ಷಣಗಳಿವೆ, ಎಚ್ಚರವಹಿಸಿರಿ. ದ್ರವರೂಪದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುತ್ತದೆ.

ಸಿಂಹ ರಾಶಿ ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಸ್ವಲ್ಪ ಆಲಸಿತನ ಹೆಚ್ಚಾಗುವ ಸಾಧ್ಯತೆಗಳಿವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಒಡಹುಟ್ಟಿದವರ ಸಂಬಂಧಗಳಲ್ಲಿ ವ್ಯತ್ಯಾಸಗಳು ಆಗುವ ಸೂಚನೆ ಇದೆ. ವಿದೇಶಗಳಿಗೆ ಆಹಾರ ವಸ್ತುಗಳನ್ನು ರಫ್ತು ಮಾಡುವವರ ವ್ಯವಹಾರದಲ್ಲಿ ಸ್ವಲ್ಪ ಕಾನೂನು ತೊಡಕುಗಳು ಆಗಬಹುದು. ಸೂಕ್ತ ದಾಖಲೆಗಳನ್ನು ಒದಗಿಸಿದಲ್ಲಿ ಎಲ್ಲವೂ ಪರಿಹಾರವಾಗುತ್ತದೆ. ಮಕ್ಕಳ ಏಳಿಗೆ ನಿಧಾನಗತಿಯಲ್ಲಿ ಇರುತ್ತದೆ. ಮೂಳೆ ತೊಂದರೆ ಇರುವವರಿಗೆ ಪಾರಂಪರಿಕ ಚಿಕಿತ್ಸೆಗಳಿಂದ ಅನುಕೂಲವಾಗಬಹುದು. ತಂದೆ ಮಕ್ಕಳ ನಡುವೆ ಕೆಲವೊಂದು ವಿಚಾರಗಳಿಗೆ ಕಾವೇರಿದ ಮಾತುಗಳು ಆಗುವ ಸಾಧ್ಯತೆಗಳಿವೆ. ಕೆಲವು ನಿರುದ್ಯೋಗಿಗಳಿಗೆ, ವೃತ್ತಿಯನ್ನು ಬದಲಿಸಬೇಕೆಂದಿರುವವರಿಗೆ ಉತ್ತಮ ವೃತ್ತಿ ದೊರೆಯುವ ಸಾಧ್ಯತೆಗಳಿವೆ. ಆಭರಣ ತಯಾರಕರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸರ್ಕಾರಿ ಸಂಸ್ಥೆಗಳ ಜೊತೆ ಮಾಡುವ ವ್ಯವಹಾರಗಳಲ್ಲಿ ನಿಧಾನಗತಿ ಇರುತ್ತದೆ. ಸ್ವಂತ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಬಂಧು ಬಾಂಧವರಿಂದ ನಿಷ್ಠುರಗಳು ಎದುರಾಗಬಹುದು. ದೈವಭಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಸಾಲಗಾರರ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ. ಸಂಗಾತಿ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ದೇಸಿ ವಸ್ತುಗಳನ್ನು ವಿದೇಶಗಳಲ್ಲಿ ಮಾರುವವರಿಗೆ ಅಭಿವೃದ್ಧಿ ಇರುತ್ತದೆ. ಹೈನುಗಾರಿಕೆ ಅಥವಾ ಕುಕ್ಕುಟ ಸಾಕಾಣಿಕೆ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಚಿನ್ನ, ಚಿನ್ನದ ಒಡವೆಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುವ ಅವಕಾಶಗಳಿವೆ. ಆಹಾರ ಪದಾರ್ಥಗಳನ್ನು ತಯಾರಿಸಿ ಮಾರುವವರ ವ್ಯವಹಾರ ವಿಸ್ತರಿಸುತ್ತದೆ.

ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಮನಸ್ಸಿನಲ್ಲಿ ಪಾಪಪ್ರಜ್ಞೆ ಕಾಡುತ್ತಿರುತ್ತದೆ. ಹಣಕಾಸಿನ ಬಿಕ್ಕಟ್ಟುಗಳು ಹೆಚ್ಚಾಗಬಹುದು. ನೀವು ನಂಬಿದ್ದ ಜನರು ಕೈಕೊಡುವ ಸಾಧ್ಯತೆಗಳಿವೆ. ತಂದೆಯಿಂದ ಸಿದ್ಧ ಉಡುಪುಗಳ ವ್ಯವಹಾರ ಮಾಡಲು ಹಣಸಹಾಯ ದೊರೆಯುತ್ತದೆ. ಹೈನುಗಾರಿಕೆ ಮಾಡಲು ಹೋದ ಕೆಲವರಿಗೆ ಹಿಂಜರಿಕೆ ಉಂಟಾಗಬಹುದು. ಉದ್ಯೋಗ ಸ್ಥಳದಲ್ಲಿ ಅಭಿವೃದ್ಧಿ ಇರುತ್ತದೆ. ವೃತ್ತಿಯ ಸ್ಥಳದಲ್ಲಿದ್ದ ಗೋಜಲುಗಳು ಮರೆಯಾಗುತ್ತವೆ. ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಕಬ್ಬಿಣದ ಅಲಂಕಾರಿಕ ವಸ್ತುಗಳನ್ನು ತಾವೇ ತಯಾರಿಸಿ ಮಾರುವವರ ವ್ಯಾಪಾರದಲ್ಲಿ ನಿಧಾನಗತಿ ಕಾಣಬಹುದು. ವಿದ್ಯಾರ್ಥಿ ವೇತನ ಈಗ ಬರುವ ಸಾಧ್ಯತೆ ಇದೆ. ಧರ್ಮ ಕಾರ್ಯಗಳಿಂದ ಹಣ ಸಂಪಾದನೆಯಾಗುತ್ತದೆ. ಧಾರ್ಮಿಕ ಪ್ರವಚನಗಳನ್ನು ಮಾಡುವ ಜನರಿಗೆ ಬೇಡಿಕೆ ಹೆಚ್ಚುತ್ತದೆ.

ವೃಶ್ಚಿಕ ರಾಶಿ ( ವಿಶಾಖಾ 4  ಅನುರಾಧ ಜೇಷ್ಠ)         

ವಿದೇಶದಲ್ಲಿ ಇರುವವರಿಗೆ ಸ್ವದೇಶದಲ್ಲಿ ಆಸ್ತಿ ಮಾಡುವ ಯೋಗವಿದೆ. ಹಣದ ಒಳಹರಿವು ಸಾಮಾನ್ಯಗತಿಯಲ್ಲಿ ಇರುತ್ತದೆ. ಹಿರಿಯರಿಂದ ನಿಮಗೆ ಸಲ್ಲಬೇಕಾದ ಆಸ್ತಿ ಪಾಲು ದೊರೆಯುತ್ತದೆ. ಎಣ್ಣೆ ಕಾಳುಗಳನ್ನು ಬೆಳೆಯುವವರಿಗೆ ಬೇಡಿಕೆ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ಸಾಧನೆಯನ್ನು ಮಾಡುವ ಅವಕಾಶ ದೊರೆಯುತ್ತದೆ. ಕೀಲುನೋವು, ಸ್ನಾಯು ಸೆಳೆತ ಇರುವವರು ಚಿಕಿತ್ಸೆಗೆ ಹೋಗಬೇಕಾಗಬಹುದು. ಪ್ರೀತಿ, ಪ್ರೇಮ ಯಶಸ್ವಿಯಾಗುವ ಲಕ್ಷಣವಿದೆ. ಹಣಕಾಸಿನ ವ್ಯವಹಾರ  ಮಾಡುವವರಿಗೆ ಅಥವಾ ಲೇವಾದೇವಿ ಮಾಡುವವರಿಗೆ ಹಿನ್ನಡೆಯಾಗುವ ಸಂದರ್ಭವಿದೆ. ತಂದೆಯ ಸಹಾಯದಿಂದ ಕೆಲವರಿಗೆ ನೌಕರಿ ದೊರೆಯುತ್ತದೆ. ಮಿಶ್ರಲೋಹಗಳ ವ್ಯಾಪಾರವನ್ನು ಮಾಡುವವರಿಗೆ ಹೆಚ್ಚು ಲಾಭ ಬರುತ್ತದೆ.

ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1  )

ಆಲಸ್ಯದ ನಡವಳಿಕೆ ನಿಮ್ಮದಾಗಿರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ತೀಕ್ಷ್ಣವಾಗಿ ಮಾತನಾಡಿ ನಿಮ್ಮತನವನ್ನು ತೋರಿಸಿಕೊಳ್ಳುವಿರಿ. ಆಸ್ತಿ ಮಾಡುವ ವಿಚಾರದಲ್ಲಿ ಪ್ರಗತಿಯನ್ನು ಸಾಧಿಸಬಹುದು. ಮಕ್ಕಳ ನಡುವಳಿಕೆ ಸಾಕಷ್ಟು ಅಚ್ಚರಿಯನ್ನು ಉಂಟುಮಾಡುತ್ತದೆ. ಶ್ವಾಸಕೋಶದ ತೊಂದರೆ ಇದ್ದರೆ ಹೆಚ್ಚು ಎಚ್ಚರವಹಿಸಿರಿ. ಸಂಗಾತಿಯ ನಡವಳಿಕೆಯಲ್ಲಿ ಹೊಸತನವನ್ನು ಕಾಣಬಹುದು. ಸರ್ಕಾರಿ ಗುತ್ತಿಗೆಯನ್ನು ಮಾಡುತ್ತಿರುವವರಿಗೆ ಗುತ್ತಿಗೆ ಹಣದ ಬಿಡುಗಡೆ  ವಿಚಾರದಲ್ಲಿ ಸ್ವಲ್ಪ ನಿಧಾನವಾಗಬಹುದು. ವೃತ್ತಿಯಲ್ಲಿ ನಿಮ್ಮ ವಿರುದ್ಧ ಚಾಡಿ ಹೇಳುವವರು ಹುಟ್ಟಿಕೊಳ್ಳಬಹುದು. ಧಾರ್ಮಿಕ ಸಲಹೆ-ಸೂಚನೆಗಳನ್ನು ಕೊಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಹೆಚ್ಚು ಹಣ ಬರುತ್ತದೆ.

ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಹಣದ ಹರಿವು ಕಡಿಮೆ ಇದ್ದರೂ ಜಾಣ್ಮೆಯಿಂದ ನಿಮ್ಮ ಆರ್ಥಿಕ ನಿರ್ವಹಣೆಯನ್ನು ಮಾಡುವಿರಿ. ನಡವಳಿಕೆಯಲ್ಲಿ ಹೆಚ್ಚಿನ ದೈವಭಕ್ತಿ ಕಂಡುಬರುತ್ತದೆ. ಆಸ್ತಿ ವಿಚಾರದಲ್ಲಿ ಹೆಚ್ಚಿನ ತಗಾದೆ ಬೇಡ. ವಿದ್ಯಾರ್ಥಿಗಳಿಗೆ  ಉತ್ತಮ ಕಾಲ. ಮೂತ್ರನಾಳದ ಸಮಸ್ಯೆಯಿಂದ ಬಳಲುತ್ತಿರುವವರು ಚಿಕಿತ್ಸೆಗೆ ಹೋಗುವುದು ಬಹಳ ಒಳ್ಳೆಯದು. ಸಂಗಾತಿಗೆ ವೃತ್ತಿಯಲ್ಲಿ ಹೆಚ್ಚಿನ ಸ್ಥಾನಮಾನ ದೊರೆಯುತ್ತದೆ. ಅವರ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಪಿತ್ರಾರ್ಜಿತ ವ್ಯವಹಾರಗಳಲ್ಲಿ ನಿಮ್ಮ ಪಾಲು ಹೆಚ್ಚುತ್ತದೆ. ಧಾರ್ಮಿಕ ವೃತ್ತಿಯನ್ನು ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಕೃಷಿಕರಿಗೆ ಹೆಚ್ಚಿನ ಆದಾಯ ದೊರೆತರೂ ಅಷ್ಟೇ ಖರ್ಚು  ಇರುತ್ತದೆ.

ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಬೇಕಾಗಿದ್ದ ಎಲ್ಲ ರೀತಿಯ ಸವಲತ್ತುಗಳು ದೊರೆತು ವಿದ್ಯಾರ್ಥಿಗಳಿಗೆ ಸಂತೋಷವಾಗುತ್ತದೆ. ನಿಶ್ಚಿತ ಆಸ್ತಿಯನ್ನು ಖಂಡಿತ ಖರೀದಿ ಮಾಡಬಹುದು. ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿರಿ. ಹಣದ ಒಳಹರಿವು ಉತ್ತಮವಾಗಿದ್ದರೂ ಸಹ ನಿರ್ವಹಣೆ ಅತಿ ಮುಖ್ಯ. ಯುವಕರ ಹಮ್ಮಿನ ಮಾತುಗಳು ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ಪ್ರೇಮಿಗಳ ನಡುವೆ ಕಾವೇರಿದ ಮಾತುಗಳು ಆಗಬಹುದು. ಕೆಲವು ವ್ಯವಹಾರಸ್ಥರಿಗೆ ಅನಿರೀಕ್ಷಿತ ನಷ್ಟ ಇರುತ್ತದೆ. ವೃತ್ತಿಯಲ್ಲಿ ಹಿತಶತ್ರುಗಳ ಬೆಳವಣಿಗೆ ಆಗಬಹುದು. ಹಳೆ ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ಹೆಚ್ಚುತ್ತದೆ. ಹಿರಿಯರಿಗೆ ಉತ್ತಮ ಗೌರವ ದೊರೆಯುವ ಸಾಧ್ಯತೆ ಇದೆ. ಒಡಹುಟ್ಟಿದವರು ನಿಮ್ಮ ಮೇಲೆ ಅಸೂಯೆ ಪಡಬಹುದು. ಮಹಿಳೆಯರು ನಡೆಸುವ ಉದ್ಯಮಗಳಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ.

ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಸರ್ಕಾರಿ ಕೆಲಸಗಳಲ್ಲಿ ಸಾಕಷ್ಟು ಮುನ್ನಡೆ ಇರುತ್ತದೆ. ಲೇವಾದೇವಿ ಅಥವಾ ಬಡ್ಡಿ ವ್ಯವಹಾರ ಖಂಡಿತ ಬೇಡ. ಸಹೋದರಿಯರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಭೂ ವ್ಯವಹಾರ ಮಾಡುವವರಿಗೆ ವ್ಯಾಪಾರ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ದರ್ಜೆಯ ವಿದ್ಯಾಸೌಲಭ್ಯ ದೊರೆಯುತ್ತದೆ. ಹೃದಯದ ತೊಂದರೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಿರಿ. ಸಂಗಾತಿಯ ವ್ಯವಹಾರದಲ್ಲಿ ಈಗ ಅಭಿವೃದ್ಧಿ ಕಾಣಬಹುದು. ಕೆಲವೊಂದು ಖಾಸಗಿ ಹೂಡಿಕೆ ನಷ್ಟಕ್ಕೆ ಕಾರಣವಾಗಬಹುದು. ತಂದೆ ಮಕ್ಕಳ ನಡುವೆ ಆಸ್ತಿ ವಿಚಾರಕ್ಕಾಗಿ ಗಲಾಟೆ ಆಗಬಹುದು. ವೃತ್ತಿಯಲ್ಲಿ ನಿಮ್ಮ ನಡವಳಿಕೆಯಿಂದ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಅದಿರು ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಾಗಿ ಲಾಭವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.