ಗುರುವಾರ , ಅಕ್ಟೋಬರ್ 29, 2020
28 °C

PV Web Exclusive | ದಸರಾ ಗೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೆ..

ರಾಘವೇಂದ್ರ ಕೆ. ತೊಗರ್ಸಿ Updated:

ಅಕ್ಷರ ಗಾತ್ರ : | |

Prajavani

ಮನೆಯ ಪಡಸಾಲೆಯ ಅಲಂಕೃತ ಅಟ್ಟಣಿಗೆ ಮೇಲೆ ಪಟ್ಟಕ್ಕೇರಿವೆ ಗೊಂಬೆಗಳು. ಒಂದೊಂದು ಗೊಂಬೆಯೂ ಕಾಲಗತಿಯ ಕಥೆಯನ್ನು ಹೇಳುತ್ತವೆ. ಅಲ್ಲಿ ಚರಿತ್ರೆ–ಪುರಾಣಗಳ ಜೊತೆ ರಾಮಾಯಣ–ಮಹಾಭಾರತದಂಥ ಮಹಾಕಾವ್ಯಗಳ ಘಟನೆಗಳು ಮೂರ್ತರೂಪ ಪಡೆಯುತ್ತಿವೆ. ಈ ಸಂಭ್ರಮವನ್ನು ಸವಿಯಲು ಊರಿಂದೂರಿಗೆ, ಮನೆಯಿಂದ ಮನೆಗೆ ಗೊಂಬೆಯನ್ನು ನೋಡಲೆಂದೇ ಬಂಧು ಬಳಗ ಭೇಟಿ ನೀಡುತ್ತದೆ. ಗೊಂಬೆಗಳು ರಾಜ ವೈಭವದ ಮೆರುಗನ್ನು ಮನೆಗೆ ನೀಡುತ್ತಿವೆ. ಇದು ದಸರಾ ಹಬ್ಬದ ವಿಶೇಷದಲ್ಲಿ ಒಂದು.

ಬಣ್ಣ, ಸ್ವರೂಪ, ವಿನ್ಯಾಸ, ಆಕಾರ, ಆಕೃತಿ ಎಲ್ಲೆಲ್ಲೂ ವೈವಿಧ್ಯ. ಬಗೆ ಬಗೆಯ ಕಥನವನ್ನು ಸಂವಹನ ಮಾಡುವ, ಗೊಂಬೆ ಉತ್ಸವ ‘ವಿಜಯನಗರ’ ಅರಸರ ಕಾಲದಿಂದಲೂ ಚಾಲ್ತಿಯಲ್ಲಿದೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಈಗಲೂ ಈ ಸಂಪ್ರದಾಯವನ್ನು ಕೆಲವರು ಅದ್ಧೂರಿಯಾಗಿ ಆಚರಿಸುತ್ತಾರೆ. ಭಕ್ತಿ–ಭಾವದಲ್ಲಿ ಗೊಂಬೆಯನ್ನು ಕೂರಿಸಿ ಪೂಜಿಸುತ್ತಾರೆ. ಒಂಬತ್ತು ದಿನಗಳ ಕಾಲ ಬಗೆ ಬಗೆಯ ಸಿಹಿ ಪದಾರ್ಥಗಳನ್ನು ದೇವರಿಗೆ ಸಮರ್ಪಿಸಿ, ಸವಿಯುವ ಭಾಗ್ಯ ಕಲ್ಪಿಸುತ್ತಾರೆ. ಜನಪದರ ಪರಂಪರೆಯಲ್ಲಿರುವ ಶಿವ–ದುರ್ಗಿಯ ಪುರಾಣದ ಹೊರತಾಗಿ ವಿಷ್ಣುಪುರಾಣ, ಮಹಾಕಾವ್ಯಗಳು, ಶ್ರೀಕೃಷ್ಣನ ಕಥನವನ್ನೂ ಹೇಳುತ್ತವೆ. ಸಮಾಜದ ಸಂರಚನೆಯನ್ನೂ ಚಿತ್ರಿಸುತ್ತವೆ. ವಿವಿಧ ವೃತ್ತಿ ಬದುಕನ್ನು ಸಂಕೇತಿಸುವ ಬಿಂಬಗಳನ್ನೂ ಒಳಗೊಳ್ಳುತ್ತವೆ. ದೀರ್ಘ ಇತಿಹಾಸ ಇರುವ ಗೊಂಬೆಯನ್ನೂ ಕೆಲವರ ಮನೆಯಲ್ಲಿ ಕಾಣಬಹುದು. ಗೊಂಬೆಯನ್ನು ಕೂರಿಸುವವರು ಪ್ರತಿ ವರ್ಷ ಅದಕ್ಕೆ ಒಂದಾದರೂ ಹೊಸ ಗೊಂಬೆ ಸೇರಿಸಬೇಕು ಎನ್ನುವ ಸಂಪ್ರದಾಯ ಇದೆ.

ಪರಂಪರೆ ಬದುಕಿನ ಭಾಗ...

ಜನಸಮುದಾಯದ ಈ ನಂಬಿಕೆಗಳನ್ನು ಒಡೆದು ನೋಡಿದರೆ ಅದರೊಳಗೆ ವಿಕಾಸದ ಆಶಯ ಇದೆ. ಪ್ರತಿವರ್ಷ ಒಂದೊಂದು ಗೊಂಬೆ ಸೇರಿಸಬೇಕು ಎನ್ನುವುದು ಕೇವಲ ಸಂಪ್ರದಾಯ ಮಾತ್ರವಲ್ಲ. ಅದು ನಮ್ಮ ಶ್ರೆಯೋಭಿವೃದ್ಧಿ ಮತ್ತು ಏಳಿಗೆಯನ್ನು ಸಂಕೇತಿಸುತ್ತದೆ. ಗೊಂಬೆಗಳು ಸೇರುತ್ತಾ ಬೆಳೆಯುವಂತೆ ನಮ್ಮ ಸಂಪತ್ತು, ಸಂತಾನ, ಜ್ಞಾನ, ತಿಳಿವಳಿಕೆ ಎಲ್ಲವೂ ಬೆಳೆಯಬೇಕು ಎನ್ನುವುದನ್ನು ಇದು ಸೂಚಿಸುತ್ತದೆ. ಗೊಂಬೆಯ ಮೇಲೆ ಇರುವ ಪ್ರೀತಿ ಮತ್ತು ಆಕರ್ಷಣೆಯ ಕಾರಣಕ್ಕೆ ಮಕ್ಕಳು ಈ ಆಚರಣೆಯಲ್ಲಿ ಹೆಚ್ಚು ಸಹಭಾಗಿಗಳಾಗುತ್ತಾರೆ. ಅದಕ್ಕಾಗಿ ವೇದಿಕೆ ಸಜ್ಜುಗೊಳಿಸುವುದರಿಂದ ಗೊಂಬೆಗಳನ್ನು ಚಂದ ಕಾಣಿಸುವ ನಿಟ್ಟಿನಲ್ಲಿ ಅವರ ಸೃಜನಶೀಲತೆ ಮತ್ತು ಕೌಶಲ ಮುಖ್ಯವಾಗಿರುತ್ತದೆ.

ರಾಜಮಹಾರಾಜರ ಕಾಲದಲ್ಲಿ ಈ ಆಚರಣೆಯ ಹಿಂದೆ ಕಲಾವಿದರನ್ನು ಪೋಷಿಸುವ ಉದಾತ್ತ ಆಶಯವೂ ಇದ್ದಿರಬಹುದು. ಆ ಆಶಯ ಇಂದೂ ಸಾಕಾರಗೊಳ್ಳುತ್ತಿರುವುದು ಹೆಚ್ಚುಗಾರಿಕೆಯೇ ಸರಿ. ಗೊಂಬೆಯ ಜಗತ್ತು ಕೂಡ ಪ್ರತಿವರ್ಷ ಕೋಟ್ಯಂತರ ರೂಪಾಯಿ ವಹಿವಾಟನ್ನು ಮಾಡುತ್ತದೆ. ಸಾಮಾನ್ಯವಾಗಿ ದಸರಾ ಗೊಂಬೆಗಳನ್ನು ಮರ ಇಲ್ಲವೆ ಮಣ್ಣಿನಿಂದ ತಯಾರಿಸುತ್ತಾರೆ. ಅವುಗಳನ್ನು ತಯಾರಿಸುವ ಕಲಾವಿದರ ಕರಕೌಶಲ್ಯದ ಹಿಂದೆ ಅನೇಕರ ಶ್ರಮ ಅಡಗಿದೆ. ಇದರಿಂದ ಬಣ್ಣಗಾರರು– ವರ್ತಕರೂ ಸೇರಿದಂತೆ ಅನೇಕ ಶ್ರಮಿಕರ ಬದುಕೂ ಹಸನಾಗುತ್ತದೆ.

ಮಣ್ಣು ಬಣ್ಣದ ಮೆರುಗು

ಒಂಬತ್ತು ದಿನ ನವದುರ್ಗೆಯರನ್ನು ಆರಾಧಿಸುವ ದಸರಾ ಗೊಂಬೆಯ ಉತ್ಸವ ಭಕ್ತಿಯಿಂದಾಚೆ ಸೃಜನಶೀಲತೆಯ ಸವಾಲು ಕೂಡ. ದುರ್ಗೆಯರಲ್ಲಿ ಒಂಬತ್ತು ಅವತಾರ, ಅದರಲ್ಲಿ ಮಹಾಗೌರಿಯೂ ಒಂದು. ಗೊಂಬೆ ರೂಪದ ಗೌರಿಯರಲ್ಲಿಯೂ ಒಂದೇ ಎರಡೇ? ಸ್ವರ್ಣಗೌರಿ, ತ್ರಿಲೋಚನಾ ಗೌರಿ, ಮೌನ ಗೌರಿ, ಅಂಗುಷ್ಟ ಗೌರಿ, ಲಲಿತಾ ಗೌರಿ, ಕುಂಡ ಗೌರಿ, ಬದರಿ ಗೌರಿ ಹೀಗೆ ಹಲವು. ಆಂಜನೇಯ, ಶ್ರೀರಾಮ, ಲಕ್ಷ್ಮಣ ಯಾವುದೇ ವ್ಯಕ್ತಿತ್ವ ತೆಗೆದುಕೊಂಡರೂ ಅದರ ಹಲವು ರೂಪ ಚಿತ್ರಿಸುವುದು ಕಲಾವಿದನಿಗೂ ಸವಾಲೇ. ಅಂದರೆ ಯಾವುದೇ ಮೂರ್ತಿ ಜಡತ್ವವನ್ನು ಪ್ರತಿಫಲಿಸುವುದಿಲ್ಲ. ಎಲ್ಲವೂ ಕ್ರಿಯೆಯನ್ನೇ ಸಂಕೇತಿಸುತ್ತವೆ. ಇದರಿಂದ ಏಕರೂಪತೆಯನ್ನು ಒಡೆಯುವ ಜೊತೆಗೆ ಸೃಜನಶೀಲತೆ ಮತ್ತು ಅಭಿರುಚಿಯ ವೈವಿಧ್ಯವನ್ನೂ ಬಿಂಬಿಸುತ್ತವೆ. ಧಾರ್ಮಿಕವಾದ ಈ ಆಚರಣೆ ಸಾಂಸ್ಕೃತಿಕ ಉತ್ಸವವಾಗಿ ಜನಪದರಲ್ಲಿ ಪರಂಪರೆಯ ಪ್ರದರ್ಶನ ರೂಪದಲ್ಲಿ ಬೆಳೆಯುತ್ತಿದೆ. 

ಕುಟುಂಬದಲ್ಲಿ ಗೊಂಬೆ ಕೂರಿಸುವ ಸಂಪ್ರದಾಯ ಇಲ್ಲದಿದ್ದರೂ ಕೆಲವರು ಚಂದಕ್ಕಾಗಿ, ತಮ್ಮ ಮನೆಯ ಮಕ್ಕಳ ಖುಷಿಗಾಗಿ ಕೂರಿಸುತ್ತಾರೆ. ಉದ್ದೇಶ ಏನೇ ಇರಲಿ, ಬಣ್ಣದ ಬೆರುಗು ಎಂತಹವರನ್ನೂ ಮೋಡಿ ಮಾಡುತ್ತದೆ. ಒಂದು ಕ್ಷಣ ಎಂತಹ ಮನಸ್ಸನ್ನೂ ಉಲ್ಲಾಸಗೊಳಿಸುತ್ತದೆ. ನೋಡಿದ ಕಣ್ಣನ್ನು ಚಿಂತನೆಗೆ ಒಡ್ಡುತ್ತದೆ. ಗೊಂಬೆಗಳು ಸಮಾಜದ ಅನೇಕ ಸ್ತರಗಳನ್ನು ವಿವರಿಸುತ್ತವೆ. ಇಲ್ಲಿ ಅನೇಕ ಕಸುಬುದಾರರ ಚಿತ್ರಗಳೂ ಮೂಡಿರುತ್ತವೆ. ರಾಜ, ರಾಣಿ, ದೇವಾನುದೇವತೆಗಳು, ಪ್ರಾಣಿ–ಪಕ್ಷಿಗಳು... ಹೀಗೆ ಪ್ರಕೃತಿಯ ವಿಸ್ಮಯ ಗೊಂಬೆಯ ರೂಪದಲ್ಲಿ ಅವತರಿಸಿರುತ್ತದೆ. ಇದರೊಳಗೆ ಕುಟುಂಬದ ಚಿತ್ರಣವೂ ಒಡಮೂಡಿರುತ್ತದೆ. ಅಲಂಕೃತ ಆಸೀನ ಗೊಂಬೆಗಳ ಕೇಂದ್ರ ಪಟ್ಟದ ರಾಜ–ರಾಣಿ. ಆ ಜೋಡಿ ದಾಂಪತ್ಯ ಬದುಕಿನ ಸಾರ್ಥಕತೆ ಮತ್ತು ಸಹಜೀವನದ ಹೊಂದಾಣಿಕೆಯನ್ನೂ ಹೇಳುವಂತೆ ಕಾಣಿಸುತ್ತದೆ. ಕೆಲ ಸಮುದಾಯದಲ್ಲಿ ಈ ಜೋಡಿ ಗೊಂಬೆಗಳನ್ನು ಗಂಡನ ಮನೆಗೆ ಮೊದಲ ಸಲ ಹೋಗುತ್ತಿರುವ ಮಗಳಿಗೆ ಬಳುವಳಿಯ ರೂಪದಲ್ಲಿ ನೀಡುವ ಪದ್ಧತಿ ಇದೆ. ವೈವಿಧ್ಯ ಬಣ್ಣದ ಗೊಂಬೆಗಳನ್ನು ಕೂರಿಸಲು ಆಗದವರು ಇಂತಹ ಜೋಡಿ ಗೊಂಬೆಯನ್ನೇ ಪೂಜಿಸಿ ತಮ್ಮ ಭಕ್ತಿ ಸಮರ್ಪಿಸುತ್ತಾರೆ. ಅಂದರೆ ಗೊಂಬೆ ಸಂಭ್ರಮ ಸರಳವೂ, ಅದ್ಧೂರಿಯೂ ಹೌದು. ಇದೇ ಕಾರಣಕ್ಕೆ ಗೊಂಬೆ ಸಂಸ್ಕೃತಿ ಅನೇಕ ನಮ್ಮ ಕಲಾ ಪ್ರಕಾರವನ್ನೂ ಆತುಕೊಂಡಿದೆ. ಅದರ ಕುರುವು ಅನೇಕ ಸಿನಿಮಾಗಳಲ್ಲೂ ಕಾಣಬಹುದು.

ದಸರಾ–ನವರಾತ್ರಿ–ಬನ್ನಿ ಹಬ್ಬ–ಮಾರ್ನಾಮಿ ಎಂದು ಕರೆಯಿಸಿಕೊಳ್ಳುವ ವಿಜಯದಶಮಿಗೆ ಆಚರಣೆ ಸ್ವರೂಪದಲ್ಲಿ ಹಲವು ರೂಪ. ನವರಾತ್ರಿ ಕಾಲಮಾನದಲ್ಲಿ ಜರುಗುವ ಶಕ್ತಿ ದೇವತೆಯ ಆರಾಧನೆಗೂ ಗೊಂಬೆಗಳ ಉತ್ಸವಕ್ಕೂ ಅವಿನಾಭಾವ ಸಂಬಂಧವಿದೆ. ದಸರೆಯ ಮೊದಲ ದಿನದಿಂದಲೇ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಗೊಂಬೆಗಳ ದೃಶ್ಯ ವೈಭವ ಬಣ್ಣಗಟ್ಟುತ್ತದೆ. ಈ ಹೊತ್ತಿನ ಜೀವನ ಶೈಲಿ ಮತ್ತು ಜನಾಪೇಕ್ಷೆಗೆ ತಕ್ಕಂತೆ ಗೊಂಬೆಗಳಲ್ಲೂ ಪರಿವರ್ತನೆ ಆಗಿರುತ್ತದೆ. ಪೀಜಾ– ಬರ್ಗರ್‌ನಂತೆ ಶಾಪಿಂಗ್‌ ಮಾಲ್‌ಗಳನ್ನೂ ಪಡಸಾಲೆಯಲ್ಲಿ ಪವಡಿಸಿರುವ ಗೊಂಬೆಗಳಲ್ಲಿ ಕಾಣುವಂತೆ ಆಗಿದೆ. ಇದೆಲ್ಲ ಈ ಹೊತ್ತು ‘ದಸರಾ ಗೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೆ...’ ಎಂದು ಗುನುಗುವಂತೆ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು