ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಅಫ್ಗಾನಿಸ್ತಾನ ಪತನ, ಭಯಭೀತ ಜನರು

Last Updated 16 ಆಗಸ್ಟ್ 2021, 1:44 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನವನ್ನು ಆಳುತ್ತಿದ್ದ ತಾಲಿಬಾನ್‌ ‘ಉಗ್ರಗಾಮಿ’ ಸಂಘಟನೆಯನ್ನು 2001ರ ಸೆಪ್ಟೆಂಬರ್‌ನಲ್ಲಿ ಅಮೆರಿಕ ಸೋಲಿಸಿತ್ತು. ಪ್ರಜಾಪ್ರಭುತ್ವ ಸ್ಥಾಪನೆಯಾದ ಬಳಿಕ ಕಾವಲಿಗೆ ಸೇನೆಯನ್ನೂ ಅಮೆರಿಕ ಅಲ್ಲಿ ಇರಿಸಿತ್ತು. ಭಯೋತ್ಪಾದನೆ ಮತ್ತು ಮೂಲಭೂತವಾದದ ಏಟಿಗೆ ಜರ್ಜರಿತವಾಗಿದ್ದ ದೇಶದ ಮರುನಿರ್ಮಾಣಕ್ಕೆ ಭಾರತ ಸೇರಿದಂತೆ ಹಲವು ದೇಶಗಳು ಕೈಜೋಡಿಸಿದ್ದವು. ತಾಲಿಬಾನ್‌ ಉಗ್ರಗಾಮಿ ಸಂಘಟನೆಯು ದೇಶದ ಬುಡಕಟ್ಟು ಮತ್ತು ಗುಡ್ಡಗಾಡು ಪ್ರದೇಶಕ್ಕೆ ಸೀಮಿತಗೊಂಡಿತ್ತು. ಆದರೆ, ಇದು ಹಳೆಯ ಕತೆ. ಈಗ, ಅಫ್ಗಾನಿಸ್ತಾನದಲ್ಲಿನ ಪ್ರಜಾಪ್ರಭುತ್ವ ಕೊನೆಗೊಂಡಿದೆ ಮತ್ತು ದೇಶವು ತಾಲಿಬಾನ್‌ ಮೂಲಭೂತವಾದಿಗಳ ಕೈಗೆ ಮತ್ತೆ ಸಿಕ್ಕಿದೆ.

ಅಮೆರಿಕದ ಸೇನೆ ನೆಲೆಗೊಂಡಿದ್ದ ಇಷ್ಟು ದಿನಗಳಲ್ಲಿ ದೇಶವನ್ನು ವಶಕ್ಕೆ ಪಡೆಯುವ ದುಸ್ಸಾಹಸಕ್ಕೆ ತಾಲಿಬಾನ್‌ ಕೈಹಾಕಿರಲಿಲ್ಲ. ಆದರೆ, ಅಮೆರಿಕದ ಸೇನೆ ವಾಪಸಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗ ಅಲ್ಲಿ ಸುಮಾರು ಮೂರು ಸಾವಿರ ಸೈನಿಕರಷ್ಟೇ ಉಳಿದಿದ್ದಾರೆ. ಇನ್ನೇನು
ಮೂರು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಅಷ್ಟು ಹೊತ್ತಿಗಾಗಲೇ ದೇಶವನ್ನು ತಾಲಿಬಾನ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಅಮೆರಿಕ ಸೇನೆ ಹಿಂತೆಗೆತ ಪ್ರಕ್ರಿಯೆ ಶುರುವಾದ ಬಳಿಕ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಅತ್ಯಂತ ವೇಗವಾಗಿ ಪ್ರಾಬಲ್ಯ ಪಡೆದುಕೊಂಡಿತು. ಸೇನೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರು ಏಪ್ರಿಲ್‌ 14ರಂದು ಘೋಷಿಸಿದ್ದರು. ದಕ್ಷಿಣದ ಹೆಲ್ಮಂಡ್‌ ಪ್ರಾಂತ್ಯದ ಮೇಲೆ ಮೇ 4ರಂದೇ ತಾಲಿಬಾನ್‌ ಪಡೆ ದಾಳಿ ನಡೆಸಿತ್ತು. ಅದೇ ಹೊತ್ತಿಗೆ ಇತರ ಆರು ಪ್ರಾಂತ್ಯಗಳಲ್ಲಿಯೂ ಆಕ್ರಮಣ ಉಂಟಾಗಿತ್ತು.

ಅಫ್ಗಾನಿಸ್ತಾನದ ಅತೀ ಹೆಚ್ಚು ಭದ್ರತೆ ಇದ್ದ ಉತ್ತರ ಭಾಗವು ಶನಿವಾರದ ಹೊತ್ತಿಗೇ ತಾಲಿಬಾನ್‌ ಕೈ ಸೇರಿತ್ತು. ಉತ್ತರ ಭಾಗದಲ್ಲಿರುವ ಮಝರ್‌ ಎ ಶರೀಫ್‌, ಅಫ್ಗಾನಿಸ್ತಾನದ ನಾಲ್ಕನೇ ಅತ್ಯಂತ ದೊಡ್ಡ ನಗರ. ಸರ್ಕಾರದ ಸೇನೆ, ಇಬ್ಬರು ಪ್ರಾದೇಶಿಕ ಪ್ರಮುಖರ ತಂಡಗಳು ಮತ್ತು ಬಂಡುಕೋರ ಗುಂಪುಗಳು ಈ ನಗರವನ್ನು ರಕ್ಷಿಸುವ ಹೊಣೆ ಹೊತ್ತಿದ್ದವು. ಸರ್ಕಾರದ ಸೇನೆಯೇ ತಾಲಿಬಾನ್‌ ಮುಂದೆ ಮೊದಲಿಗೆ ಶರಣಾಯಿತು. ಹಾಗಾಗಿ, ಉಳಿದವರ ನೈತಿಕ ಸ್ಥೈರ್ಯ ಕುಸಿದು ಇಡೀ ನಗರವೇ ತಾಲಿಬಾನ್‌ಗೆ ಸಿಕ್ಕಿತು.

ಮಝರ್‌ ಎ ಶರೀಫ್‌ ನಗರವು ಪತನವಾಗುವುದರ ಹಿಂದೆ ಪಿತೂರಿ ಇದೆ ಎಂದು ಪ್ರಾದೇಶಿಕ ಪ್ರಮುಖರಲ್ಲಿ ಒಬ್ಬರು ಅಜ್ಞಾತ ಪ್ರದೇಶದಿಂದ ಮಾಡಿದ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಪಿತೂರಿ ಮಾಡಿದವರು ಯಾರು ಎಂದು ಅವರು ಹೇಳಿಲ್ಲ. ಅದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನೂ ಅವರು ಬಹಿರಂಗಪಡಿಸಿಲ್ಲ.

ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಅವರು ದೇಶವನ್ನು ಉದ್ದೇಶಿಸಿ ಶನಿವಾರ ಮಾತನಾಡಿ, ತಾಲಿಬಾನ್‌ ಕೈಯಿಂದ ದೇಶವು ಮುಕ್ತವಾದ ಬಳಿಕದ ಎರಡು ದಶಕಗಳ ಸಾಧನೆಗಳನ್ನು ವ್ಯರ್ಥವಾಗಲು ಬಿಡುವುದಿಲ್ಲಎಂದಿದ್ದರು. ಈಗ ಅವರು ದೇಶ ಬಿಟ್ಟು ಪರಾರಿಯಾಗಿದ್ದಾರೆ.

ಅಫ್ಗಾನಿಸ್ತಾನದ ಸರ್ಕಾರವನ್ನು ಬಲವಂತವಾಗಿ ಪತನಗೊಳಿಸಿಅಧಿಕಾರಕ್ಕೆ ಬರುವ ಹೊಸ ಸರ್ಕಾರಕ್ಕೆ ಮಾನ್ಯತೆ ಇಲ್ಲ ಎಂದು ಅಂತರರಾಷ್ಟ್ರೀಯ ಸಮುದಾಯವು ಹೇಳಿದೆ. ಆದರೆ, ಒಂದರ ನಂತರ ಒಂದರಂತೆ ದೊರೆತ ಸೇನಾ ವಿಜಯದಿಂದಾಗಿ ತಾಲಿಬಾನ್‌ ಈ ಯಾವ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

ಭಯಭೀತ ಜನರು

ಸಾವಿರಾರು ಮಂದಿ ದೇಶ ತೊರೆದು ಪಲಾಯನ ಮಾಡಿದ್ದಾರೆ ಎಂಬ ವರದಿಗಳಿವೆ. ಎರಡು ದಶಕಗಳ ಹಿಂದೆ ಇದೇ ತಾಲಿಬಾನ್‌ ಸರ್ಕಾರವು ದಮನಕಾರಿ ಆಡಳಿತ ನಡೆಸಿತ್ತು. ಇಸ್ಲಾಂ ಪ್ರತಿಪಾದಿಸುತ್ತಿದೆ ಎನ್ನಲಾಗುವ ನಿಯಮಗಳನ್ನು ಕಠಿಣಾತಿಕಠಿಣವಾಗಿ ಆಗ ಜಾರಿಗೆ ತರಲಾಗಿತ್ತು. ಅದೇ ಪರಿಸ್ಥಿತಿ ಮತ್ತೆ ಮರುಕಳಿಸಲಿದೆ ಎಂಬ ಭೀತಿ ಜನರಲ್ಲಿ ಇದೆ.

ದೇಶದ ಕೆಲವೇ ಕೆಲವು ಮಹಿಳಾ ಜಿಲ್ಲಾ ಗವರ್ನರ್‌ಗಳ ಪೈಕಿ ಸಲೀಮಾ ಮಝಾರಿ ಅವರೂ ಒಬ್ಬರು. ಮಝರ್‌ ಎ ಶರೀಫ್‌ ಪತನಕ್ಕೆ ಸ್ವಲ್ಪ ಮೊದಲು ನೀಡಿದ ಸಂದರ್ಶನದಲ್ಲಿ ಅವರು ತಾಲಿಬಾನ್‌ ಆಡಳಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ‘ತಾಲಿಬಾನ್‌ ಆಳ್ವಿಕೆ ಶುರುವಾದರೆ ಮಹಿಳೆಯರಿಗೆ ಸ್ಥಳವೇ ಇರುವುದಿಲ್ಲ. ನಗರ, ಪಟ್ಟಣಗಳಲ್ಲಿ ಅವರು ಕಾಣಿಸುವುದಿಲ್ಲ. ಅವರೆಲ್ಲರೂ ಮನೆಯಲ್ಲಿ ಬಂದಿಯಾಗಿರುತ್ತಾರೆ’ ಎಂದು ಸಲೀಮಾ ಹೇಳಿದ್ದಾರೆ.

ಮೂಲಭೂತವಾದಿ ಮೌಲ್ವಿ ಮುಜೀಬ್‌ ರೆಹ್ಮಾನ್‌ ಅನ್ಸಾರಿಯನ್ನು ಹೇರಾತ್‌ ಪ್ರಾಂತ್ಯದ ಮಹಿಳಾ ವ್ಯವಹಾರಗಳ ಸಚಿವ ಎಂದು ತಾಲಿಬಾನ್‌ ಘೋಷಿಸಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿಯೊಬ್ಬರು ತಮ್ಮ ಹೆಸರು ಬಹಿರಂಗಪಡಿಸದೆಯೇ ಹೇಳಿದ್ದಾರೆ. ಈತ ಮಹಿಳಾ ಹಕ್ಕುಗಳ ವಿರೋಧಿ ಎಂದು ಹೋರಾಟಗಾರ್ತಿ ವಿವರಿಸಿದ್ಧಾರೆ. ಮಹಿಳಾ ಹಕ್ಕುಗಳ ಪ್ರತಿಪಾದನೆ ಸಲ್ಲದು ಮತ್ತು ಮಹಿಳೆಯರು ಹಿಜಬ್‌ ಧರಿಸದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬರೆದಿದ್ದ ಫಲಕಗಳನ್ನು ಹೆರಾತ್‌ನಾದ್ಯಂತ 2015ರಲ್ಲಿ ಹಾಕಿಸುವ ಮೂಲಕ ಅನ್ಸಾರಿ ಮುನ್ನೆಲೆಗೆ ಬಂದಿದ್ದ.

ಈಶಾನ್ಯದ ತಕ್‌ಹರ್‌ ಪ್ರಾಂತ್ಯದ ಗ್ರಾಮೀಣ ಪ್ರದೇಶವೊಂದರಲ್ಲಿ ನೂರಿಯ ಹಯಾ ದಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನವರೆಗೆ ಅವರು ಪುರುಷ ವೈದ್ಯರು ಮತ್ತು ಇತರ ಅಧಿಕಾರಿಗಳು ನಡೆಸುತ್ತಿದ್ದ ಸಭೆಗೆ ಹಾಜರಾಗುತ್ತಿದ್ದರು. ಈಗ, ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಸಭೆ ನಡೆಸುವಂತಿಲ್ಲ ಎಂದು ತಾಲಿಬಾನ್‌ ಆದೇಶಿಸಿದೆ.

‘ಎಲ್ಲರೂ ಭಯಭೀತರಾಗಿದ್ದಾರೆ’ ಎಂದು ಪಾಕಿಸ್ತಾನದ ಗಡಿಯಲ್ಲಿರುವ ಅರ್ಘಿಸ್ತಾನ್‌ ಜಿಲ್ಲೆಯ ಜಾನ್‌ ಅಘಾ ಹೇಳುತ್ತಾರೆ. ಹೆಚ್ಚಿನ ಗ್ರಾಮಗಳಲ್ಲಿ ತಾಲಿಬಾನ್‌ ಯೋಧರು ಗಸ್ತು ಆರಂಭಿಸಿದ್ದಾರೆ. ಮನೆಗಳ ಬಾಗಿಲು ಬಡಿದು ತಮಗೆ ಬೇಕಾದುದನ್ನು ಪಡೆದುಕೊಳ್ಳುತ್ತಿದ್ದಾರೆ.

ಎರಡು ದಶಕಗಳ ಹಿಂದೆ ಇದ್ದ ‘ಭಯಭೀತ’ ಆಳ್ವಿಕೆ ಮರಳಿ ಆರಂಭವಾಗಿದೆ.

ರಾಜತಾಂತ್ರಿಕರ ತೆರವು ಯತ್ನ

ತಾಲಿಬಾನ್ ಪಡೆಗಳು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಪ್ರವೇಶಿಸುತ್ತಿದ್ದಂತೆ, ವಿವಿಧ ದೇಶಗಳು ಅಫ್ಗನ್‌ನಲ್ಲಿರುವ ತಮ್ಮ ನಾಗರಿಕರು ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ಅಲ್ಲಿಂದ ಕರೆತರುವ ವ್ಯವಸ್ಥೆ ಮಾಡಿಕೊಳ್ಳುತ್ತಿವೆ.ಅಮೆರಿಕ ರಾಜತಾಂತ್ರಿಕರನ್ನು ಅಫ್ಗಾನಿಸ್ತಾನದಿಂದ ಸ್ಥಳಾಂತರಿಸುವ ಮೇಲ್ವಿಚಾರಣೆಗಾಗಿ 5,000 ಸೈನಿಕರನ್ನು ಕಾಬೂಲ್‌ಗೆ ನಿಯೋಜಿಸಲಾಗುವುದು ಎಂದು ಅಧ್ಯಕ್ಷ ಜೋ ಬೈಡನ್ ಅವರು ಶನಿವಾರ ಘೋಷಿಸಿದ್ದಾರೆ. ಬ್ರಿಟನ್, ಜರ್ಮನಿ, ಇಟಲಿ, ಭಾರತವೂ ಸೇರಿದಂತೆ ಹಲವು ದೇಶಗಳು ತಮ್ಮ ಯತ್ನ ಚುರುಕುಗೊಳಿಸಿವೆ.

ರಾಜಧಾನಿ ಕಾಬೂನ್‌ನ ‘ಗ್ರೀನ್‌ ಜೋನ್‌’ನಲ್ಲಿ ನೆಲೆಯಾಗಿರುವ ಬಹುತೇಕ ದೇಶಗಳ ರಾಯಭಾರ ಕಚೇರಿಗಳು ಸಿಬ್ಬಂದಿಯನ್ನುಈಗಾಗಲೇ ಕಡಿತಗೊಳಿಸಿವೆ. ಜರ್ಮನಿಯು ಕೆಲವೇ ಸಿಬ್ಬಂದಿ ಮೂಲಕ ಕೆಲಸ ನಿರ್ವಹಿಸುತ್ತಿದೆ. ಇನ್ನೂ ಕೆಲವು ದೇಶಗಳು ಕಚೇರಿಯನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಿವೆ. ತನ್ನ ಸಿಬ್ಬಂದಿ ತೆರವುಗೊಳಿಸಲು 600 ಸೈನಿಕರ ತಂಡವನ್ನು ಬ್ರಿಟನ್ ಕಳುಹಿಸಿದೆ.

ಸ್ಥಳೀಯ ಪರಿಸ್ಥಿತಿಯನ್ನು ಭಾರತ ಅವಲೋಕಿಸುತ್ತಿದ್ದು, ಭಾರತೀಯರು ಮತ್ತು ರಾಜತಾಂತ್ರಿಕ ಸಿಬ್ಬಂದಿ ತೆರವಿಗೆ ಸಿದ್ಧವಾಗಿದೆ. ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ಸೇನಾ ವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ರಷ್ಯಾದೊಂದಿಗೆ ತಾಲಿಬಾನ್ ಉತ್ತಮ ಸಂಬಂಧವನ್ನು ಹೊಂದಿದೆ. ಹೀಗಾಗಿ ರಷ್ಯಾದ ರಾಯಭಾರ ಕಚೇರಿಗಳ ಕಾರ್ಯನಿರ್ವಹಣೆಗೆ ಅಡ್ಡಿ ಮಾಡುವುದಿಲ್ಲ ಎಂದುತಾಲಿಬಾನ್ ರಾಜಕೀಯ ಕಚೇರಿಯ ವಕ್ತಾರ ಸುಹೇಲ್ ಶಾಹೀನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ,ರಷ್ಯಾದ ಸರ್ಕಾರಿ ಸುದ್ದಿ ಸಂಸ್ಥೆ ಟಾಸ್ ವರದಿ ಮಾಡಿದೆ.

ತಾಲಿಬಾನ್ ಅನ್ನು ದೇಶದ ‘ಕಾನೂನುಬದ್ಧ ಆಡಳಿತಗಾರ’ ಎಂದು ಒಪ್ಪಿಕೊಳ್ಳಲು ಚೀನಾ ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಅಫ್ಗನ್ ಸರ್ಕಾರವನ್ನು ಉರುಳಿಸಲು ತಾಲಿಬಾನ್ ಯಶಸ್ವಿಯಾದಲ್ಲಿ, ಅದಕ್ಕೆ ಸಹಕಾರ ನೀಡಲು ಚೀನಾ ಉತ್ಸುಕವಾಗಿದೆ ಎಂದು ಯುಎಸ್‌ ನ್ಯೂಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಫ್ಗಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಕಾರಣ, ಕಚೇರಿಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕೆ ಎಂಬ ಬಗ್ಗೆ ನೆದರ್ಲೆಂಡ್ಸ್ ಚಿಂತನೆ ನಡೆಸುತ್ತಿದೆ. ಆದರೂ, ರಾಯಭಾರ ಕಚೇರಿಯನ್ನು ಸಾಧ್ಯವಾದಷ್ಟು ಸಮಯ ನಡೆಸುವ ಇರಾದೆಯಲ್ಲಿದೆ ಎಂದು ವಿದೇಶಾಂಗ ಸಚಿವ ಸಿಗ್ರಿಡ್ ಕಾಗ್ ಶುಕ್ರವಾರ ಹೇಳಿದ್ದರು.

ಸ್ವಿಟ್ಜರ್ಲೆಂಡ್ ದೇಶವು ಕಾಬೂಲ್‌ನಲ್ಲಿ ರಾಯಭಾರ ಕಚೇರಿ ಹೊಂದಿಲ್ಲ. ಆದರೆ ವಿದೇಶಾಂಗ ಕಾರ್ಯದರ್ಶಿ ಲಿವಿಯಾ ಲಿಯು ಅವರು ಕಾಬೂಲ್‌ನಲ್ಲಿರುವ ಎಲ್ಲಾ ವಿದೇಶಾಂಗ ವ್ಯವಹಾರ ಇಲಾಖೆ ಉದ್ಯೋಗಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.ತನ್ನ ಇಬ್ಬರು ರಾಜತಾಂತ್ರಿಕರು ಕಾಬೂಲ್‌ನಿಂದ ಬರಲಿದ್ದಾರೆ ಎಂದುಜೆಕ್ ಗಣರಾಜ್ಯ ಶನಿವಾರ ಘೋಷಿಸಿತ್ತು. ಜರ್ಮನಿಯು ಸಿಬ್ಬಂದಿ ಕರೆತರಲು ಸೇನಾ ವಿಮಾನವನ್ನು ಕಳುಹಿಸುತ್ತಿದೆ.

ಡೆನ್ಮಾರ್ಕ್ ದೇಶವು ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುತ್ತಿದೆ ಎಂದು ವಿದೇಶಾಂಗ ಸಚಿವ ಜೆಪ್ಪೆ ಕೊಫೊಡ್ ಶುಕ್ರವಾರ ಹೇಳಿದ್ದಾರೆ. ನಾರ್ವೆ ಕೂಡ ಇದೇ ನಿರ್ಧಾರ ತಳೆದಿದೆ. ನಾರ್ವೆ ಹಾಗೂ ಡೆನ್ಮಾರ್ಕ್ ಜೊತೆಯಾಗಿ ತೆರವು ಕಾರ್ಯಾಚರಣೆ ನಡೆಸಲಿವೆ. ತಾಲಿಬಾನ್ ಉಪಟಳ ಶುರುವಾದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಿನಲ್ಲೇ ಆಸ್ಟ್ರೇಲಿಯಾವು ಕಚೇರಿ ಮುಚ್ಚಿತ್ತು. ಸ್ಪೇನ್ ದೇಶವು ನಾಗರಿಕರು ಹಾಗೂ ಸಿಬ್ಬಂದಿಯನ್ನು ತೆರವು ಮಾಡಲು ನಿರ್ಧರಿಸಿದೆ.

ತಾಲಿಬಾನ್ ಪಡೆಗಳು ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ಗೆ ಪ್ರವೇಶಿಸುತ್ತಿದ್ದಂತೆ, ಗಡಿ ದೇಶಗಳಿಗೆ ಅಫ್ಗನ್ನರು ವಲಸೆ ಹೋಗುತ್ತಿದ್ದಾರೆ. ಆದರೆ ಹೊಸ ನಿರಾಶ್ರಿತರಿಗೆ ಯಾವುದೇ ಆಶ್ರಯ ನೀಡುವುದಿಲ್ಲ ಎಂದು ಗಡಿದೇಶ ಪಾಕಿಸ್ತಾನ ಸ್ಪಷ್ಟಪಡಿಸಿದ್ದು, ಗಡಿಗಳನ್ನು ಭದ್ರಗೊಳಿಸಿದೆ. ಯೋರ್ಖಾನ್ ಗಡಿಯನ್ನು ಮುಚ್ಚಿದೆ.

ತಾಲಿಬಾನ್‌ ಚರಿತ್ರೆ

ಪಶ್ತೋ ಭಾಷೆಯಲ್ಲಿ ತಾಲಿಬಾನ್ ಅಂದರೆ ‘ವಿದ್ಯಾರ್ಥಿಗಳು’ ಎಂಬ ಅರ್ಥವಿದೆ. 1994ರಲ್ಲಿ ಕಂದಹಾರ್ ಬಳಿ ಈ ಸಂಘಟನೆ ಪ್ರವರ್ಧಮಾನಕ್ಕೆ ಬಂದಿತು.ಸೋವಿಯತ್ ಒಕ್ಕೂಟದ ವಾಪಸಾತಿ ಮತ್ತು ಆ ಬಳಿಕ ಸರ್ಕಾರದ ಪತನದ ನಂತರ, ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಅಂತರ್ಯುದ್ಧ ಶುರುಮಾಡಿತು.ಅಮೆರಿಕದ ಬೆಂಬಲದೊಂದಿಗೆ 1980ರಲ್ಲಿ ಸೋವಿಯತ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದ ‘ಮುಜಾಹಿದೀನ್‌’ ಹೋರಾಟಗಾರರನ್ನು ಈ ಸಂಘಟನೆ ಸೆಳೆಯಿತು.

ಎರಡು ವರ್ಷಗಳ ಅಂತರದಲ್ಲಿ, ದೇಶದ ಬಹುತೇಕ ಭಾಗಗಳ ಮೇಲೆ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸಿತು. ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನದೊಂದಿಗೆ 1996ರಲ್ಲಿ ‘ಇಸ್ಲಾಮಿಕ್ ಎಮಿರೇಟ್’ ಎಂಬುದಾಗಿ ಘೋಷಿಸಿಕೊಂಡಿತು. ತನ್ನದೇ ಕಾನೂನು ಜಾರಿಗೆ ತಂದಿತು.

2001ರ ಸೆಪ್ಟೆಂಬರ್ 11ರಂದು ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ಅವಳಿ ಕಟ್ಟಡಗಳನ್ನು ಅಲ್ ಖೈದಾ ಉಗ್ರರು ಧ್ವಂಸಗೊಳಿಸಿದ ಬಳಿಕ ಅಮೆರಿಕವು ಕಾಬೂಲ್‌ನಲ್ಲಿ ಭಾರಿ ವೈಮಾನಿಕ ದಾಳಿ ನಡೆಸಿತು. ಅಲ್ಲಿಂದ 20 ವರ್ಷಗಳ ಸೇನಾ ನಿಯೋಜನೆ ಶುರುವಾಯಿತು. ಈ ಅವಧಿ ಇದೇ ಆಗಸ್ಟ್ 31ರಂದು ಕೊನೆಯಾಗಲಿದ್ದು, ಅಮೆರಿಕವು ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ.

ಸಿದ್ದಾಂತ:ತಾಲಿಬಾನ್ ಷರಿಯಾ ಕಾನೂನಿನ ಕಠಿಣ ರೂಪವನ್ನು ಜಾರಿಗೊಳಿಸಿತ್ತು. ಮಹಿಳೆಯರು ಕೆಲಸ ಮಾಡುವುದನ್ನು ಅಥವಾ ಅಧ್ಯಯನ ಮಾಡುವುದನ್ನು ನಿರ್ಬಂಧಿಸಿತ್ತು. ಅವರು ಒಬ್ಬಂಟಿಯಾಗಿ ಮನೆಬಿಟ್ಟು ಹೊರಬರುವಂತಿರಲಿಲ್ಲ. ಸಾರ್ವಜನಿಕವಾಗಿ ಮರಣದಂಡನೆ ಮತ್ತು ಚಾಟಿ ಏಟಿನ ಶಿಕ್ಷೆ ನೀಡುವುದು ಸಾಮಾನ್ಯವಾಗಿತ್ತು.

ಅಫ್ಗಾನಿಸ್ತಾನಕ್ಕೆ ‘ನೈಜ ಇಸ್ಲಾಮಿಕ್ ವ್ಯವಸ್ಥೆ’ಯನ್ನು ಕಲ್ಪಿಸಲು ಬಯಸಿದ್ದಾಗಿ ತಾಲಿಬಾನ್ ಈ ವರ್ಷಾರಂಭದಲ್ಲಿ ಹೇಳಿತ್ತು.

ಅಂತರರಾಷ್ಟ್ರೀಯ ಮಾನ್ಯತೆ ಇಲ್ಲ:ನೆರೆಯ ಪಾಕಿಸ್ತಾನ, ಚೀನಾ ಸೇರಿದಂತೆ ಮೂರ್ನಾಲ್ಕು ದೇಶಗಳು ಮಾತ್ರ ಈ ಹಿಂದೆ ಅಧಿಕಾರದಲ್ಲಿ ಇದ್ದ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಿದ್ದವು.

ಆಧಾರ: ರಾಯಿಟರ್ಸ್, ಪಿಟಿಐ, ಎಎಫ್‌ಪಿ, ಎಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT