ಶುಕ್ರವಾರ, ಡಿಸೆಂಬರ್ 3, 2021
24 °C

ಆಳ–ಅಗಲ | ಬಾಂಗ್ಲಾ: ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಂಗ್ಲಾ: ಹಿಂಸಾಚಾರಕ್ಕೆ ಕಾರಣವಾದ ವೈರಲ್ ವಿಡಿಯೊ

ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಹಿಂದೂಗಳನ್ನು ಗುರಿಯಾಗಿಸಿಕೊಂಡು ಒಂದು ವಾರದಲ್ಲಿ ಹಲವು ದಾಳಿಗಳು ನಡೆದಿವೆ. ಹಿಂದೂಗಳ ಮನೆಗಳಿಗೆ, ವಾಹನಗಳಿಗೆ ಮತ್ತು ಅಂಗಡಿಗಳಿಗೆ
ಬೆಂಕಿ ಹಚ್ಚಲಾಗಿದೆ. ಈ ಹಿಂಸಾಚಾರದಲ್ಲಿ ಆರು ಹಿಂದೂಗಳು ಮತ್ತು ಪೊಲೀಸರ ದಾಳಿಗೆ ಇಬ್ಬರು ಮುಸ್ಲಿಮರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಸರ್ಕಾರ ಇದನ್ನು ದೃಢಪಡಿಸಿಲ್ಲ.

ಎಲ್ಲವೂ ಆರಂಭವಾದದ್ದು ಒಂದು ಫೇಸ್‌ಬುಕ್ ಪೋಸ್ಟ್‌ನಿಂದ. ಕಳೆದ ಬುಧವಾರ ಕೊಮಿಲ್ಲಾ ಜಿಲ್ಲೆಯಲ್ಲಿ ದುರ್ಗಾ ಪೂಜೆ ವೇಳೆಯಲ್ಲಿ, ಮುಸ್ಲಿಮರ ಪವಿತ್ರ ಗ್ರಂಥ ಕುರ್‌–ಆನ್‌ಗೆ ಅಪಮಾನ ಮಾಡಲಾಗಿದೆ ಎಂಬ ವಿವರ ಇರುವ ಬರಹ ಮತ್ತು ದುರ್ಗಾ ಪೂಜೆ ಸಂಭ್ರಮಾಚರಣೆಯ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಆ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಯಿತು. ಕೊಮಿಲ್ಲಾದಲ್ಲಿ ಆನಂತರ ಹಿಂದೂಗಳ ಮೇಲೆ ದಾಳಿ ನಡೆಯಿತು. ದುರ್ಗಾ ಪೂಜೆಯ ಪೆಂಡಾಲ್‌ ಅನ್ನು ಧ್ವಂಸ ಮಾಡಲಾಯಿತು. ಆದರೆ ನಂತರದ ಮೂರು ದಿನಗಳಲ್ಲಿ ಹಿಂದೂಗಳ ವಿರುದ್ಧದ ಹಿಂಸಾಚಾರದ ತೀವ್ರತೆ ಹೆಚ್ಚಾಯಿತು. ಹಿಂಸಾಚಾರವು ಐದಾರು ಜಿಲ್ಲೆಗಳಿಗೆ ವಿಸ್ತರಿಸಿತು.

ಭಾನುವಾರ ಮಧ್ಯಾಹ್ನ ಹಿಂದೂಗಳಿರುವ ಪ್ರದೇಶಕ್ಕೆ ನುಗ್ಗಿದ ಮುಸ್ಲಿಮರ ಗುಂಪು ದೇವಾಲಯಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ದಾಳಿ ನಡೆಸಿತು. ಆ ದಾಳಿಯ ವೇಳೆ 20ಕ್ಕೂ ಹೆಚ್ಚು ವಾಹನಗಳು ಮತ್ತು ಹಿಂದೂಗಳ 10 ಮನೆಗಳಿಗೆ ಬೆಂಕಿ ಹಚ್ಚಲಾಯಿತು. ದಾಳಿಯಲ್ಲಿ 66 ಮನೆಗಳಿಗೆ ಹಾನಿಯಾಯಿತು.

ಹಿಂಸಾಚಾರದ ವೇಳೆ ಹಲವು ಹಿಂದೂಗಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಮತ್ತು ಹಲವು ಹಿಂದೂಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಆದರೆ ಹಿಂಸಾಚಾರದಲ್ಲಿ ಆಗಿರುವ ಸಾವಿನ ಬಗ್ಗೆ ಸರ್ಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಬಾಂಗ್ಲಾದೇಶ ಸರ್ಕಾರವು ಈ ದಾಳಿಯನ್ನು ಖಂಡಿಸಿದೆ. ವಿಶ್ವ ಸಂಸ್ಥೆ ಸಹ ಈ ದಾಳಿಯನ್ನು ಖಂಡಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಪ್ರಧಾನಿ ಶೇಖ್‌ ಹಸೀನಾ ಅವರು ಆದೇಶಿಸಿದ್ದಾರೆ. ಹಿಂಸಾಚಾರದ ಸಂಬಂಧ ಈವರೆಗೆ 450 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ಪ್ರಗತಿಯಲ್ಲಿ ಇದೆ.

‘ಅವಮಾನ ಸತ್ಯವಲ್ಲ’

ಕೊಮಿಲ್ಲಾ ಜಿಲ್ಲೆಯಲ್ಲಿ ನಡೆಸಲಾಗುತ್ತಿದ್ದ ದುರ್ಗಾ ಪೂಜೆಯ ಪೆಂಡಾಲ್‌ನಲ್ಲಿ ಕುರ್‌ಆನ್‌ಗೆ ಅವಮಾನ ಮಾಡಲಾಗಿದೆ ಎಂಬ ಆರೋಪದ ಆಧಾರದ ಮೇಲೆ ಈ ಹಿಂಸಾಚಾರ ನಡೆದಿದೆ. ಆದರೆ ದುರ್ಗಾ ಪೂಜೆಯ ಪೆಂಡಾಲ್‌ನಲ್ಲಿ ಕುರ್‌ಆನ್‌ಗೆ ಅವಮಾನ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ನಡೆದದ್ದು ಏನು ಎಂಬುದನ್ನೂ ಪೊಲೀಸರು ವಿವರಿಸಿದ್ದಾರೆ.

ಕೊಮಿಲ್ಲಾದಲ್ಲಿ ಹಿಂದೂಗಳು ಧಾರ್ಮಿಕ ಅಲ್ಪಸಂಖ್ಯಾತರು. ಇಲ್ಲಿ ದುರ್ಗಾ ಪೂಜೆ ನಡೆಸಲು ಮುಸ್ಲಿಂ ವ್ಯಾಪಾರಿಗಳಿಂದಲೂ ಚಂದಾ ಪಡೆಯಲಾಗುತ್ತದೆ. ಮುಸ್ಲಿಮರ ಬೆಂಬಲವಿಲ್ಲದೆ ದುರ್ಗಾ ಪೂಜೆ ನಡೆಯುವುದಿಲ್ಲ. ರಾತ್ರಿಯೇ ಪೆಂಡಾಲ್‌ನಿಂದ ಎಲ್ಲಾ ಹಿಂದೂಗಳು ನಿರ್ಗಮಿಸುತ್ತಾರೆ. ಬೆಳಿಗ್ಗೆ ಬಂದು ಮತ್ತೆ ಪೂಜೆ ಆರಂಭಿಸುತ್ತಾರೆ.

ಆದರೆ, ಅಕ್ಟೋಬರ್ 12ರ ತಡರಾತ್ರಿ ದುರ್ಗಾ ಪೆಂಡಾಲ್‌ನಲ್ಲಿದ್ದ ಹನುಮಂತನ ಮೂರ್ತಿಯ ಪಾದದ ಬಳಿ ಯಾರೋ, ಕುರ್‌ಆನ್‌ನ ಪ್ರತಿ ಇರಿಸಿದ್ದಾರೆ. ಜತೆಗೆ ಅದರ ಚಿತ್ರ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಮಾಡಲಾಗಿರುವ ಆರೋಪಗಳು ಸುಳ್ಳು ಎಂದು ಪೊಲೀಸರು ದೃಢಪಡಿಸಿದ್ದಾರೆ. ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಹಿಂದೂಗಳ ವಿರುದ್ಧ ಹಿಂಸಾಚಾರ ಎಲ್ಲೆಡೆ ಆರಂಭವಾಗಿತ್ತು.

ಹೊರಗಿನವರ ಕೈವಾಡದ ಶಂಕೆ

‘ಬಾಂಗ್ಲಾದೇಶವು ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದು 50 ವರ್ಷ ಕಳೆದರೂ, ಕೆಲವರು ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಅವರು ಇಲ್ಲಿನ ಶಾಂತಿಯನ್ನು ಕದಡಲು ಸದಾ ಯತ್ನಿಸುತ್ತಲೇ ಇರುತ್ತಾರೆ. ಇದು ಸಹ ಅಂತಹದ್ದೇ ಒಂದು ಕೃತ್ಯ. ಅವರ ಸಂಚಿನಿಂದ ಹಿಂಸಾಚಾರ ಭುಗಿಲೆದ್ದಿದೆ. ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಬಾಂಗ್ಲಾದೇಶ ಗೃಹ ಸಚಿವಾಲಯವು ಹೇಳಿದೆ.

ಈ ಕೃತ್ಯಗಳ ಹಿಂದೆ ಗಡಿಯಾಚೆಯ ಶಕ್ತಿಗಳ ಕೈವಾಡವೂ ಇದೆ ಎಂದು ಸರ್ಕಾರವು ಹೇಳಿದೆ. ಆದರೆ ಅದು ಬೇರೆ ದೇಶದ ಸರ್ಕಾರದ ಕೈವಾಡವೇ ಅಥವಾ ಉಗ್ರ ಸಂಘಟನೆಗಳ ಕೈವಾಡವೇ ಎಂಬುದನ್ನು ಬಾಂಗ್ಲಾ ಸರ್ಕಾರ ದೃಢಪಡಿಸಿಲ್ಲ.

ಬಾಂಗ್ಲಾದೇಶದಲ್ಲಿ ಅಶಾಂತಿ ಸೃಷ್ಟಿಸಲು ಕೆಲವು ಉಗ್ರ ಸಂಘಟನೆಗಳು ಯತ್ನಿಸುತ್ತಿವೆ. ಆ ಸಂಘಟನೆಗಳೇ ಇಂತಹ ಕೃತ್ಯ ನಡೆಸಿರುವ ಸಾಧ್ಯತೆ ಇದೆ. ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕಾರಣ ಮತ್ತು ಅವರಿಂದ ಬರುವ ಪ್ರತಿರೋಧದ ತೀವ್ರತೆ ಕಡಿಮೆ ಇರುವ ಕಾರಣ ಅವರನ್ನು ಗುರಿಯಾಗಿಸಿಕೊಂಡು ಈ ಸಂಚು ರೂಪಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಬಾಂಗ್ಲಾದಲ್ಲಿ ಕೋಮುಹಿಂಸೆ ಹೊಸದಲ್ಲ

1971ರಲ್ಲಿ ಬಾಂಗ್ಲಾದೇಶ ಉದಯವಾದ ಕ್ಷಣದಿಂದಲೂ ಅಲ್ಪಸಂಖ್ಯಾತರು ಅದರಲ್ಲೂ ಮುಖ್ಯವಾಗಿ  ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 9ರಷ್ಟು ಹಿಂದೂಗಳಿದ್ದು, ಹಿಂಸಾಚಾರಗಳು ಅಲ್ಪಸಂಖ್ಯಾತರಲ್ಲಿ ಭೀತಿ ಹುಟ್ಟಿಸಿವೆ. 

ಬಾಂಗ್ಲಾದೇಶದಲ್ಲಿ 2013ರಿಂದ ಹಿಂದೂ ಸಮುದಾಯದ ಮೇಲೆ 3,721 ದಾಳಿಗಳು ವರದಿಯಾಗಿವೆ ಎಂದು ಬಾಂಗ್ಲಾದೇಶದ ಮಾನವ ಹಕ್ಕುಗಳ ಸಂಘಟನೆ ‘ಐನ್ ಒ ಸಲೀಶ್’ ಕೇಂದ್ರ ತಿಳಿಸಿದೆ. ಈ ಪೈಕಿ  2021ನೇ ವರ್ಷ ಅತ್ಯಂತ ಮಾರಕವಾದದ್ದು. 

ಕಳೆದ ಮೂರು ವರ್ಷಗಳಲ್ಲಿ 18 ಹಿಂದೂ ಕುಟುಂಬಗಳು ದಾಳಿಗೆ ಒಳಗಾಗಿವೆ. ಹಿಂದೂ ದೇವಾಲಯಗಳು, ವಿಗ್ರಹಗಳು ಮತ್ತು ಪೂಜಾ ಸ್ಥಳಗಳಿಗೆ ಬೆಂಕಿ ಹಚ್ಚುವುದೂ ಸೇರಿದಂತೆ 1,678 ವಿಧ್ವಂಸಕ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದೆ. 

2001ರಲ್ಲಿ ಖಲೀದಾ ಜಿಯಾ ಪ್ರಧಾನಿಯಾಗಿ ಮರು ನೇಮಕಗೊಂಡ ನಂತರ, ಅವರ ಬೆಂಬಲಿಗರು ಹಿಂದೂಗಳ ವಿರುದ್ಧ ಹಿಂಸಾಚಾರದ ಅಭಿಯಾನ ಆರಂಭಿಸಿದರು. 18,000ಕ್ಕಿಂತ ಹೆಚ್ಚು ಪ್ರಮುಖ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಬಾಂಗ್ಲಾದೇಶದ ನ್ಯಾಯಾಂಗ ಸಮಿತಿ ತನಿಖಾ ವರದಿ ಉಲ್ಲೇಖಿಸಿತ್ತು. ಸಂಡೇ ಗಾರ್ಡಿಯನ್ ಲೈವ್ ವರದಿ ಪ್ರಕಾರ, 1,000ಕ್ಕೂ ಹೆಚ್ಚು ಹಿಂದೂ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿದ್ದರು. 

2014ರಲ್ಲಿ 1,201 ಅಲ್ಪಸಂಖ್ಯಾತರ ಮನೆಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು. 2016ರಲ್ಲಿ, 55 ವರ್ಷದ ಹಿಂದೂ ಅರ್ಚಕ ಜೋಗೇಶ್ವರ್ ರಾಯ್ ಅವರನ್ನು ಉಗ್ರರು ಶಿರಚ್ಛೇದನ ಮಾಡಿದರು. ಈ ವರ್ಷದ ಸೆಪ್ಟೆಂಬರ್ ವೇಳೆಗೆ ಸುಮಾರು 196 ಮನೆಗಳು, ವ್ಯಾಪಾರ ಕೇಂದ್ರಗಳು, ದೇವಾಲಯಗಳು, ಮಠಗಳು ಮತ್ತು ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ‘ಢಾಕಾ ಟ್ರಿಬ್ಯೂನ್’ ವರದಿ ಮಾಡಿದೆ. 

ದುಷ್ಟಶಕ್ತಿಗಳ ವಿರುದ್ಧ ಕಾವಲು: ಬಾಂಗ್ಲಾ ನಿಲುವು

‘ಧರ್ಮವು ವೈಯಕ್ತಿಕವಾಗಿದ್ದರೂ, ಹಬ್ಬಗಳ ಆಚರಣೆ ಎಲ್ಲರಿಗೂ ಸಂಬಂಧಿಸಿದ್ದು’ ಎಂಬ ಆಶಯವನ್ನು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಎಲ್ಲೆಡೆ ಪಸರಿಸುತ್ತಿದ್ದಾರೆ. ಸಮಾಜದ ಪ್ರತಿಯೊಬ್ಬರಿಗೂ ಅವರ ಧರ್ಮ ಪಾಲನೆಗೆ ಅವಕಾಶವಿದೆ ಎಂಬುದು ತಮ್ಮ ಸರ್ಕಾರದ ನಿಲುವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆಡಳಿತಾರೂಢ ಅವಾಮಿ ಲೀಗ್ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳು ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿವೆ. ಶಾಂತಿ ಮೆರವಣಿಗೆ ನಡೆಸಿ, ಅಲ್ಪಸಂಖ್ಯಾತ ಹಿಂದೂಗಳಿಗೆ ಬೆಂಬಲ ಸೂಚಿಸಿವೆ. ದೇಶದಾದ್ಯಂತ ಇಂತಹ ಸಾಮರಸ್ಯ ಜಾಥಾ ಆಯೋಜಿಸುವಂತೆ ಪಕ್ಷ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ. ಘಟನಾ ಸ್ಥಳಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಸೂಚಿಸಲಾಗಿದೆ.

ಡಾಕೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಹಿಂದೂ ಸಮುದಾಯದ ಸದಸ್ಯರಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರದ ಭರವಸೆಯನ್ನು ಹಸೀನಾ ನೀಡಿದರು. ತಪ್ಪಿತಸ್ಥರು ಯಾವುದೇ ಧರ್ಮಕ್ಕೆ ಸೇರಿದ್ದರೂ, ಅವರನ್ನು ಹುಡುಕಿ ಶಿಕ್ಷಿಸುವ ಅಭಯ ನೀಡಿದರು.

‘ಭಯಪಡಬೇಡಿ, ಹಿಂದೂ ಸಹೋದರ ಸಹೋದರಿಯರೇ. ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ನಿಮ್ಮೊಂದಿಗಿದೆ. ಹಸೀನಾ ಸರ್ಕಾರವು ಅಲ್ಪಸಂಖ್ಯಾತ ಸ್ನೇಹಿ ಸರ್ಕಾರ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್‌ ಹೇಳಿದ್ದು, ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. 

ಹಿಂದೂ ಅಲ್ಪಸಂಖ್ಯಾತರ ವಿರುದ್ಧದ ದಾಳಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಶೇಖ್ ಹಸೀನಾ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಮರ ರೀತಿಯಲ್ಲಿ ಹಿಂದೂಗಳು ಸಹ ನಿರ್ಭೀತವಾಗಿ ಪೂಜಿಸುವ ಹಕ್ಕನ್ನು ಹೊಂದಿದ್ದಾರೆ ಎಂದಿದ್ದಾರೆ. ಬಾಂಗ್ಲಾದೇಶ ವಿಮೋಚನೆಯ ಸಮಯದಲ್ಲಿ ಹಿಂದೂಗಳು ಮುಸ್ಲಿಂ ಸಹೋದರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದನ್ನು ಹಸೀನಾ ಸ್ಮರಿಸಿದ್ದಾರೆ. ಈ ಮೂಲಕ ತಮ್ಮ ಸರ್ಕಾರವು ಹಿಂದೂಗಳ ರಕ್ಷಣೆಗೆ ಬದ್ಧ ಎಂಬ ಸಂದೇಶ ರವಾನಿಸಿದ್ದಾರೆ.

ಏನೇ ಅಡ್ಡಿ ಎದುರಾದರೂ, ಕೋಮು ಸೌಹಾರ್ದ ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ತಿಳಿಸಿದೆ. ‘ಸಹಿಷ್ಣುತೆ, ಶಾಂತಿ ಮತ್ತು ಬಹುತ್ವದ ಮನೋಭಾವವನ್ನು ಎತ್ತಿಹಿಡಿಯಬೇಕಿದೆ. ಒಗ್ಗಟ್ಟು ಹಾಗೂ ದೇಶದ ಪ್ರತಿಷ್ಠೆ ಹಾಳುಗೆಡವಲು ಮುಂದಾಗುವ ಶಕ್ತಿಗಳ ವಿರುದ್ಧ ಕಾವಲು ಕಾಯುವಂತೆ ಸರ್ಕಾರ ಎಲ್ಲರಿಗೂ ಮನವಿ ಮಾಡಿದೆ’ ಎಂದು ಸಚಿವಾಲಯ ತಿಳಿಸಿದೆ.

ಬಾಂಗ್ಲಾದೇಶದ ಜಾತ್ಯತೀತ, ಕೋಮು ಸೌಹಾರ್ದ ಮತ್ತು ಬಹುಸಂಖ್ಯಾತ ನೆಲೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ  ದುರ್ಬಲಗೊಳಿಸಲು ಸ್ಥಳೀಯ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಸಚಿವಾಲಯ ಆರೋಪಿಸಿದೆ.

ಜಾಗತಿಕ ಖಂಡನೆ

ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಜಾಗತಿಕ ಸಮುದಾಯ ಖಂಡಿಸಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯ ಈ ಹಿಂಸಾಚಾರವನ್ನು ವಿರೋಧಿಸಿದೆ. ‘ಧಾರ್ಮಿಕ ಸ್ವಾತಂತ್ರ್ಯ ಅಥವಾ ನಂಬಿಕೆಯನ್ನು ಮಾನವ ಹಕ್ಕು ಎಂದು ಪರಿಗಣಿಸಲಾಗುತ್ತದೆ. ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಆತನ ಧಾರ್ಮಿಕ ಹಿನ್ನೆಲೆ ಅಥವಾ ನಂಬಿಕೆಯ ಹೊರತಾಗಿಯೂ ಸುರಕ್ಷತಾ ಭಾವನೆಯನ್ನು ಹೊಂದುವ ಹಕ್ಕು ಇದೆ ಮತ್ತು ಪ್ರಮುಖ ಹಬ್ಬಗಳನ್ನು ಆಚರಿಸಲು ಆತನಿಗೆ ಬೆಂಬಲವಿರಬೇಕು. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂ ಸಮುದಾಯದ ಮೇಲೆ ನಡೆದ ದಾಳಿಗಳನ್ನು ಅಮೆರಿಕ ಖಂಡಿಸುತ್ತದೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಹಿಂದೂಗಳ ಮೇಲೆ ನಡೆದಿರುವ ದಾಳಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ದ್ವೇಷದ ಭಾಷಣಗಳು ಆ ದೇಶ ಆಂಗೀಕಾರ ಮಾಡಿರುವ ಸಂವಿಧಾನಕ್ಕೆ ವಿರುದ್ಧವಾಗಿವೆ. ಬಾಂಗ್ಲಾದೇಶ ಸರ್ಕಾರ ಹಿಂದೂಗಳಿಗೆ ರಕ್ಷಣೆ ನೀಡಬೇಕು ಮತ್ತು ಈ ಹಿಂಸಾಚಾರದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಬಾಂಗ್ಲಾದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಕೈಜೋಡಿಸಲು ಎಲ್ಲರಿಗೂ ನಾವು ಕರೆ ನೀಡುತ್ತಿದ್ದೇವೆ ಎಂದು ವಿಶ್ವಸಂಸ್ಥೆ ಸ್ಥಾನಿಕ ಸಂಯೋಜಕರಾದ ಮಿಯಾ ಸೆಪ್ಪೊ ಹೇಳಿದ್ದಾರೆ.

ತನ್ನ ಸಂಸ್ಥೆಗಳ ದೇವಾಲಯಗಳ ಮೇಲೆ ದಾಳಿ ನಡೆದಿರುವುದನ್ನು ‘ಇಸ್ಕಾನ್‌’ ಖಂಡಿಸಿದೆ. ಇಸ್ಕಾನ್‌ ವತಿಯಿಂದ 150 ದೇಶಗಳಲ್ಲಿ ಅ.23ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಕೋಲ್ಕತ್ತ ಇಸ್ಕಾನ್‌ ಉಪಾಧ್ಯಕ್ಷ ರಾಧಾರಾಮ್‌ ದಾಸ್‌ ಹೇಳಿದ್ದಾರೆ.

ಹಿಂಸಾಚಾರ ಖಂಡಿಸಿ ಭಾರತದ ಹಲವೆಡೆ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿವೆ. ಅಸ್ಸಾಂ ರಾಜಧಾನಿ ಗುವಾಹಟಿ, ತ್ರಿಪುರಾ ರಾಜಧಾನಿ ಅಗರ್ತಲಾ ಸೇರಿ ಈಶಾನ್ಯ ಭಾರತದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಕೋಲ್ಕತ್ತ ಸೇರಿ ಪಶ್ಚಿಮ ಬಂಗಾಳದ ಹಲವೆಡೆ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು