ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಅಯೋಧ್ಯೆ ರಾಮಮಂದಿರ: ವಿಎಚ್‌ಪಿ ಹೋರಾಟವನ್ನು ದಡಮುಟ್ಟಿಸಿದ ಬಿಜೆಪಿ

Last Updated 16 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವು ಕಳೆದ ಕೆಲವು ದಶಕಗಳಲ್ಲಿ ಭಾರತದ ರಾಜಕೀಯ, ಸಾಮಾಜಿಕ ರಚನೆಯಲ್ಲಿ ಬಹುದೊಡ್ಡ ಪಲ್ಲಟವನ್ನೇ ಉಂಟು ಮಾಡಿತ್ತು. ಬಹುದೊಡ್ಡ ನ್ಯಾಯಾಂಗ ಹೋರಾಟವೂ ನಡೆದಿತ್ತು. ನಿವೇಶನ ವಿವಾದದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಅದರಂತೆ, ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆಯೂ ನಡೆದಿದೆ. ಆದರೆ, 1992ರಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣ ಇನ್ನೂ ಬಾಕಿ ಇದೆ. ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿ ಮುಂತಾದವರು ಈ ಪ್ರಕರಣದ ಆರೋಪಿಗಳು. ಇದೇ 30ರಂದು ಲಖನೌನ ವಿಶೇಷ ಸಿಬಿಐ ನ್ಯಾಯಾಲಯ ಪ್ರಕರಣದ ತೀರ್ಪು ನೀಡಲಿದೆ...

ಬಾಬರಿ ಮಸೀದಿ ಇದ್ದ ಜಾಗದಲ್ಲಿ ರಾಮ ಮಂದಿರ ನಿರ್ಮಿಸಬೇಕು ಎಂದು ದೊಡ್ಡಮಟ್ಟದಲ್ಲಿ ಒತ್ತಾಯ ಆರಂಭವಾದದ್ದು 1984ರಲ್ಲಿ. ವಿಶ್ವ ಹಿಂದೂಪರಿಷತ್‌ನ ಅಂದಿನ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರು ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ರಥಯಾತ್ರೆ ಆರಂಭಿಸಿದ್ದರು. ರಾಮ ಮಂದಿರ ವಿಚಾರದಲ್ಲಿ ಇದು ಹಿಂದೂಗಳ ಭಾವನೆಯನ್ನು ಕೆರಳಿಸಿತು. ರಾಮ ಮಂದಿರ ನಿರ್ಮಾಣವಾಗಲೇಬೇಕು ಎಂಬ ಒತ್ತಾಸೆ, ರಾಮಭಕ್ತರಲ್ಲಿ ಮೂಡಲು ಸಿಂಘಾಲ್ ಅವರ ಈ ರಥಯಾತ್ರೆಯೇ ಕಾರಣ.ರಾಮ ಮಂದಿರ ನಿರ್ಮಾಣ ಹೋರಾಟದ ರೂಪುರೇಷೆಗಳನ್ನು ರೂಪಿಸಿದ್ದು, ಹೋರಾಟಕ್ಕೆ ಜನರನ್ನು ಪ್ರೇರೇಪಿಸಿದ್ದು ಅಶೋಕ್‌ ಸಿಂಘಾಲ್.‌ ಲಿಬರ‍್ಹಾನ್ ಆಯೋಗದ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.

1949ರಲ್ಲಿ ಮಸೀದಿಯ ಮುಖ್ಯ ಗುಮ್ಮಟದ ಕೆಳಗೆ ರಾಮಲಲ್ಲಾನ ಮೂರ್ತಿಯನ್ನು ಇರಿಸಿದ ನಂತರ, ಮಸೀದಿಯ ಬಾಗಿಲನ್ನು ಬಂದ್ ಮಾಡಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದರೂ, ಮಸೀದಿಯ ಬಾಗಿಲನ್ನು ತೆರೆಯಲು ಅವಕಾಶ ದೊರೆತಿರಲಿಲ್ಲ. 1986ರ ಫೈಜಾಬಾದ್ ಜಿಲ್ಲಾ ನ್ಯಾಯಾಧೀಶರು, ಮಸೀದಿಯ ಬಾಗಿಲನ್ನು ತೆರೆಯಲು ಸೂಚನೆ ನೀಡಿದರು. ಈ ಆದೇಶವನ್ನು ನೀಡುವಂತೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಾರ್ಯಾಲಯದಿಂದ ನ್ಯಾಯಾಧೀಶರಿಗೆ ನಿರ್ದೇಶನ ಬಂದಿತ್ತು ಎಂಬ ಆರೋಪ ಇದೆ. ರಾಮ ಮಂದಿರ ವಿಚಾರದಲ್ಲಿ ವ್ಯಕ್ತವಾಗುತ್ತಿರುವ ಭಾವನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ರಾಜೀವ್ ಈ ನಿರ್ಧಾರ ಮಾಡಿದ್ದರು ಎಂಬ ಆರೋಪ ಇದೆ. ಆದರೆ, ಲಿಬರ‍್ಹಾನ್‌ ಆಯೋಗದ ವರದಿಯಲ್ಲಿ ಮತ್ತು ಸಿಬಿಐನ ಆರೋಪ ಪಟ್ಟಿಯಲ್ಲಿ ಈ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ಮಸೀದಿಯ ಬಾಗಿಲನ್ನು ತೆರೆಯುವಂತೆ ನ್ಯಾಯಾಧೀಶರು ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ಬಾಗಿಲನ್ನು ತೆರಯಲಾಯಿತು. ಇದು ದೇಶದಾದ್ಯಂತ ದೊಡ್ಡ ಸುದ್ದಿಯಾಯಿತು. ರಾಮಲಲ್ಲಾನ ದರ್ಶನಕ್ಕೆ ಅವಕಾಶವನ್ನೂ ನೀಡಲಾಯಿತು. ಇದನ್ನು ವಿರೋಧಿಸಿ ಮುಸ್ಲಿಮರು ಬಾಬರಿ ಮಸೀದಿ ಕ್ರಿಯಾಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದರು. ರಾಮಮಂದಿರ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ವಿಎಚ್‌ಪಿಯ ನಾಯಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಇದರ ಹೊರತಾಗಿಯೂ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಭೌತಿಕ ಚಟುವಟಿಕೆಗಳನ್ನೂ ವಿಎಚ್‌ಪಿ ನಡೆಸುತ್ತಿತ್ತು. ಇದರ ಅಂಗವಾಗಿ 1989ರಲ್ಲಿ, ವಿವಾದಿತ ಜಮೀನಿಗೆ ಹೊಂದಿಕೊಂಡಿರುವ ನಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವನ್ನೂ ವಿಎಚ್‌ಪಿ ನೆರವೇರಿಸಿತು.

1990ರಲ್ಲಿ ವಿಎಚ್‌ಪಿ ಕಾರ್ಯಕರ್ತರು ಮತ್ತು ಕರಸೇವಕರ ಸಮಾವೇಶವನ್ನು ಅಯೋಧ್ಯೆಯಲ್ಲಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕರಸೇವಕರು ಬಾಬರಿ ಮಸೀದಿಯ ಕೆಲವು ಭಾಗಗಳನ್ನು ಧ್ವಂಸ ಮಾಡಿದ್ದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.ವಿಎಚ್‌ಪಿ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಹೋರಾಟಕ್ಕೆ 1990ರಲ್ಲಿ ಬಿಜೆಪಿ ಸಹ ಜತೆಯಾಯಿತು.ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಥಯಾತ್ರೆ ನಡೆಸಲು ಬಿಜೆಪಿ ನಾಯಕರಾಗಿದ್ದ ಎಲ್‌.ಕೆ.ಅಡ್ವಾಣಿ ಮತ್ತು ಪ್ರಮೋದ್ ಮಹಾಜನ್ 1990ರಲ್ಲಿ ಮುಂದಾದರು. ಗುಜರಾತಿನ ಸೋಮನಾಥಪುರ ದೇವಾಲಯದಿಂದ ಅಯೋಧ್ಯೆವರೆಗೆ ರಥಯಾತ್ರೆ ಆರಂಭಿಸಿದರು. ಗುಜರಾತ್‌ ಮತ್ತು ಮಧ್ಯಪ್ರದೇಶದಲ್ಲಿ ರಥಯಾತ್ರೆಗೆ ಭಾರಿ ಬೆಂಬಲ ವ್ಯಕ್ತವಾಯಿತು. ಈ ರಥಯಾತ್ರೆಯು ಕೋಮುಸೌಹಾರ್ದಕ್ಕೆ ಧಕ್ಕೆ ತರುತ್ತಿದೆ ಎಂಬ ಆರೋಪದಲ್ಲಿ ಅಡ್ವಾಣಿ ಅವರನ್ನು ಬಿಹಾರದಲ್ಲಿ ಬಂಧಿಸಲಾಯಿತು. ಇಬ್ಬರು ನಾಯಕರು ಇನ್ನಷ್ಟು ರಥಯಾತ್ರೆಗಳನ್ನು ನಡೆಸಿದರು. ಇದು ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಮತಬ್ಯಾಂಕ್‌ ಅನ್ನು ಹಿಗ್ಗಿಸಿತು. 1991ರ ಚುನಾವಣೆಯಲ್ಲಿ ಬಿಜೆಪಿಯಿಂದ 120 ಸಂಸದರು ಆರಿಸಿಬಂದರು.ರಾಮಮಂದಿರ ನಿರ್ಮಾಣದ ಒತ್ತಾಯವು ಹೆಚ್ಚುತ್ತಲೇ ಹೋಯಿತು. 1992ರ ಡಿಸೆಂಬರ್‌ನಲ್ಲಿ ಬಿಜೆಪಿ ಕಾರ್ಯಕರ್ತರು, ವಿಎಚ್‌ಪಿ ಕಾರ್ಯಕರ್ತರು, ಕರಸೇವಕರು ಅಯೋಧ್ಯೆಯಲ್ಲಿ ಸೇರಿದ್ದರು.

1992ರ ಡಿಸೆಂಬರ್‌ 5ರಂದು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕರಸೇವಕರು ಸರಯೂ ನದಿಯಿಂದ ಮರಳು ಮತ್ತು ನೀರನ್ನು ತಂದು ಕರಸೇವೆ ನಡೆಸಿದರು. ವಿಎಚ್‌ಪಿಯ ಅಧ್ಯಕ್ಷ ಅಶೋಕ್ ಸಿಂಘಾಲ್, ಬಿಜೆಪಿಯ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ, ಸಾಕ್ಷಿ ಮಹಾರಾಜ್ ಮತ್ತಿತರರು ಅಯೋಧ್ಯೆಯಲ್ಲಿ ಇದ್ದರು. ಅಡ್ವಾಣಿ, ಜೋಷಿ, ಉಮಾಭಾರತಿ ಅವರು ಮಾಡಿದ ಪ್ರಚೋದನಕಾರಿ ಭಾಷಣದ ನಂತರ ಕರಸೇವಕರು ಬಾಬರಿ ಮಸೀದಿಯನ್ನು ಧ್ವಂಸ ಮಾಡಿದರು ಎಂದು ಲಿಬರ‍್ಹಾನ್ ಆಯೋಗದ ವರದಿ ಮತ್ತು ಸಿಬಿಐನ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ರಾಮಮಂದಿರ ನಿರ್ಮಾಣದ ಉದ್ದೇಶದಿಂದ ವಿಎಚ್‌ಪಿ ಆರಂಭಿಸಿದ್ದ ರಥಯಾತ್ರೆ ಮತ್ತು ಹೋರಾಟವನ್ನು ಬಿಜೆಪಿ ದಡಮುಟ್ಟಿಸಿತ್ತು. ರಾಮಮಂದಿರ ಹೋರಾಟಕ್ಕೆ ಧುಮಿಕಿದ ನಂತರ ದೇಶದಲ್ಲಿ ಬಿಜೆಪಿಯ ನೆಲೆಗಟ್ಟಿಯಾಯಿತು.

ಬಾಬರಿ ಮಸೀದಿ ಧ್ವಂಸ:ಸಾಮಾಜಿಕ, ರಾಜಕೀಯ ಪಲ್ಲಟಗಳಿಗೆ ಮುನ್ನುಡಿ

ಅಯೋಧ್ಯೆಯಲ್ಲಿ ಸೇರಿದ್ದಸಾವಿರಾರು ಕರಸೇವಕರುಡಿಸೆಂಬರ್‌ 6,1992 ರಂದು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದರು. ಭಾರತದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ಕಾರಣವಾದ ಘಟನೆ ಘಟಿಸಿ 28 ವರ್ಷ ಸಂದಿವೆ.

ಈ ಘಟನೆಯ ನಂತರ 90ರ ದಶಕದ ಅಂತ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಕಾಣಿಸಿದವು. ಡಿಸೆಂಬರ್‌ 6ರ ನಂತರ ದೇಶದಲ್ಲಿ ಹೊಸ ಯುಗವೊಂದು ಆರಂಭವಾಗಲಿದೆ ಎಂದು ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆದವು. ಸಾಮಾಜಿಕ ವಿಭಜನೆ ಮತ್ತು ರಾಜಕೀಯ ಧ್ರುವೀಕರಣದ ಜತೆಗೆ ‘ಹಿಂದೂ ರಾಷ್ಟ್ರೀಯವಾದ’ ಮುನ್ನೆಲೆಗೆ ಬಂದಿತು.

‘ಹಿಂದೂ–ಮುಸ್ಲಿಂ ಭಾಯಿ–ಭಾಯಿ’ ಎಂಬ ವಾತಾವರಣ ನಿಧಾನವಾಗಿ ಕರಗತೊಡಗಿತು. ಮಾನಸಿಕವಾಗಿ ದೂರವಾಗುತ್ತಲೇ ಸಾಗಿದಈ ಎರಡೂ ಧರ್ಮೀಯರನ್ನು ಬೆಸೆಯುವ ಪ್ರಯತ್ನಗಳು ನಡೆಯಲಿಲ್ಲ.ಮುಂಬೈ ಬಾಂಬ್ ಸ್ಫೋಟ ನೂರಾರು ಅಮಾಯಕರ ಜೀವಗಳನ್ನು ಬಲಿಪಡೆಯಿತು. ಇದನ್ನು ಡಿ.6ರ ಘಟನೆಯ ಪ್ರತೀಕಾರ ಎಂದು ವ್ಯಾಖ್ಯಾನಿಸಲಾಯಿತು.

ರಾಜಕೀಯ ಧ್ರುವೀಕರಣ:ಬಹುಸಂಖ್ಯಾತ ಹಿಂದೂಗಳಿಗೆ ರಾಜಕೀಯ ಧ್ವನಿ ಅಗತ್ಯ ಎಂಬ ಬಿಜೆಪಿಯ ವಾದಕ್ಕೆ ಸ್ಪಷ್ಟವಾದ ರಾಜಕೀಯ ರೂಪುರೇಷೆ ನೀಡಿದ್ದು ರಾಮಜನ್ಮಭೂಮಿ ಹೋರಾಟ. ಈ ಹೋರಾಟದ ನಂತರ ಬಿಜೆಪಿಗೂ ಒಂದು ಶಾಶ್ವತ ಮತಬ್ಯಾಂಕ್ ಸೃಷ್ಟಿಯಾಯಿತು.‌ ಮೇಲ್ವರ್ಗ, ನಗರವಾಸಿ ಮಧ್ಯಮ ವರ್ಗ ಮತ್ತು ಯುವ ಸಮೂಹ ಬಿಜೆಪಿಯ ಮತಬ್ಯಾಂಕ್‌ಗಳಾಗಿ ಪರಿವರ್ತಿತರಾದರು.

1992ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಿ.ವಿ. ನರಸಿಂಹರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಸೀದಿಯನ್ನು ರಕ್ಷಿಸಲು ವಿಫಲವಾಯಿತು ಎಂಬ ಸಿಟ್ಟು ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಮುನಿಸಿಕೊಳ್ಳುವಂತೆ ಮಾಡಿತು.

ಬಾಬ್ರಿ ಮಸೀದಿ ಧ್ವಂಸದ ನಂತರ ಹಿಂದೂ ಮತಗಳ ಧ್ರುವೀಕರಣವಾಗಬಹುದು ಎಂಬ ಬಿಜೆಪಿ ನಾಯಕರ ಎಣಿಕೆ ತಕ್ಷಣಕ್ಕೆ ಫಲ ನೀಡಲಿಲ್ಲ. 1993ರಲ್ಲಿ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಸರ್ಕಾರ ರಚಿಸಲುಬಿಜೆಪಿಗೆ ಸಾಧ್ಯವಾಗಲಿಲ್ಲ. ಆದರೆ, 1999ರಲ್ಲಿ ಕೇಂದ್ರದಲ್ಲಿ ಮೈತ್ರಿ ಸರ್ಕಾರ ರಚಿಸಲು ಬಿಜೆಪಿ ಯಶಸ್ವಿಯಾಯಿತು. ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಮತ್ತೆ ಎರಡು ದಶಕ ಕಾಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT