ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಹಿಮನದಿ ಮೇಲೊಂದು ಸೇತುವೆ ಮಾಡಿ...

Last Updated 25 ಜೂನ್ 2020, 1:44 IST
ಅಕ್ಷರ ಗಾತ್ರ
ADVERTISEMENT
""
""
""
ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ

ಹೆಮ್ಮೆಯ ಕನ್ನಡಿಗ ಬ್ರಿಗೇಡಿಯರ್‌ ಡಿ.ಎಂ. ಪೂರ್ವಿಮಠ ಅವರು ಬೆಳಗಾವಿ ಜಿಲ್ಲೆಯ ಯರಗಟ್ಟಿಯವರು. ಭಾರತೀಯ ಸೇನೆಯ ಕೋರ್‌ ಆಫ್‌ ಎಂಜಿನಿಯರ್ಸ್‌ಗೆ 1986ರಲ್ಲಿ ಸೇರ್ಪಡೆಯಾದ ಅವರು, ಉತ್ತರ ಹಾಗೂ ಈಶಾನ್ಯ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನಾ ಮುಖ್ಯ ಕಚೇರಿಯಲ್ಲಿ ಯೋಜನಾ ವಿಭಾಗದನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಸೇನಾ ಕಲ್ಯಾಣ ಸಂಸ್ಥೆಯಿಂದ ಬೆಂಗಳೂರಿನಲ್ಲಿ 1864 ಮನೆಗಳನ್ನು ನಿರ್ಮಿಸಿದ ಗರಿಮೆಯೂ ಅವರದಾಗಿದೆ. ಹಿಮಾಲಯದ ಪರ್ವತ ಶ್ರೇಣಿಯಲ್ಲಿ ಸೇನೆಗೆ ಬೇಕಾದ ಮೂಲಸೌಕರ್ಯ ಸೃಷ್ಟಿಗೆ ಆರಂಭಿಸಲಾದ ‘ಪ್ರೊಜೆಕ್ಟ್‌ ಹಿಮಾಂಕ್‌’ನ ಭಾಗವಾಗಿದ್ದರು ಪೂರ್ವಿಮಠ. ವಿಶಿಷ್ಟ ಸೇವಾ ಪದಕ, ರಾಷ್ಟ್ರಪತಿ ಪದಕ ಅವರ ಮುಡಿಗೇರಿವೆ. ಭಾರತ–ಚೀನಾ ಮುಖಾಮುಖಿಯಾದ ಗಾಲ್ವನ್‌ ಪ್ರದೇಶದಲ್ಲಿ ಭಾರತೀಯ ಸೇನೆಗೆ ಅಗತ್ಯವಾದ ರಸ್ತೆ, ಸೇತುವೆ ನಿರ್ಮಾಣ ಮಾಡಿದ ಖ್ಯಾತಿ ಪ್ರೊಜೆಕ್ಟ್‌ ಹಿಮಾಂಕ್‌ಗೆ ಇದೆ. ಅದರಮುಖ್ಯಸ್ಥರಾಗಿದ್ದ ಪೂರ್ವಿಮಠ ತಮ್ಮಅನುಭವಗಳನ್ನು ಇಲ್ಲಿದಾಖಲಿಸಿದ್ದಾರೆ...

ಸುತ್ತಲೂ ಪರ್ವತಗಳಿಂದ ಆವೃತವಾದ ರುದ್ರರಮಣೀಯವಾದ ಗಾಲ್ವನ್‌ ಕಣಿವೆಯಲ್ಲಿ ಯಾವುದೇ ಅಬ್ಬರವಿಲ್ಲದೆ, ಒಂದಿನಿತೂ ಆತುರವಿಲ್ಲದೆ ತನ್ನ ಪಾಡಿಗೆ ತಾನು ತಣ್ಣಗೆ ಹರಿಯುತ್ತಿದ್ದ ಶೋಕ ನದಿಯನ್ನು ಮೊದಲ ಬಾರಿಗೆ ಕಂಡಾಗ ಅದೇನೋ ರೋಮಾಂಚನ. ಅಪರಿಮಿತ ಆನಂದ. ಏಕೆಂದರೆ, ಅಲ್ಲಿ ಹರಿಯುತ್ತಿದ್ದುದು ನೀರಲ್ಲ; ಹಿಮವೇ ನದಿಯ ರೂಪವನ್ನು ತಾಳಿ ಹೊರಟಿತ್ತು!

ನನ್ನ ತಿರುಗಾಟದಲ್ಲಿ ಹಲವು ನದಿಗಳನ್ನು ನೋಡಿದ್ದೇನೆ. ನಾನು ಚಿಕ್ಕವನಿದ್ದಾಗ ನಮ್ಮ ಬೆಳಗಾವಿ ಜಿಲ್ಲೆಯ ಕೆಲವು ನದಿಗಳಲ್ಲಿ ಈಜಾಡಿದ್ದೇನೆ. ಅವುಗಳೆಲ್ಲ ನೀರಿನಿಂದ ತುಂಬಿಕೊಂಡು ರಭಸವಾಗಿ ಹರಿಯುತ್ತವೆ. ಇಲ್ಲದಿದ್ದರೆ ಬೇಸಿಗೆಯಲ್ಲಿ ಪಸೆಯಿಲ್ಲದೆ ಬತ್ತಿ ಹೋಗಿರುತ್ತವೆ. ಆದರೆ, ಶೋಕ ನದಿ ಹಾಗಲ್ಲ. ತಾಪಮಾನದಿಂದ ಹಿಮವು ಕರಗಿ ಅಷ್ಟಷ್ಟೆ ಕಣ್ಣೀರು ಹಾಕಿದಂತೆ, ನದಿ ಕೂಡ ಅಷ್ಟೇ ಆಮೆವೇಗದಲ್ಲಿ ಚಲಿಸುತ್ತಾ ಹೋಗುತ್ತದೆ. ಕೆಳಗೆ ನಿಧಾನವಾಗಿ ನೀರು ಹರಿದರೆ ಮೇಲೆ ಹಿಮದ ಬಂಡೆಯ ತುಂಡುಗಳು ತೇಲಿ ಬರುತ್ತವೆ.

ಶೋಕ ನದಿಯು ಸಾವಿರಾರು ಕುಟುಂಬಗಳಲ್ಲಿ ಕಣ್ಣೀರು ಹರಿಯುವಂತೆ ಮಾಡಿದೆ. ಈ ನದಿಯ ಆಚೆಯ ದಡದಲ್ಲಿ ಬಂದೂಕು ಹಿಡಿದು ಗಡಿ ರಕ್ಷಣೆಯಲ್ಲಿ ತೊಡಗಿದ್ದ ನನ್ನ ಸೈನಿಕ ಸಹೋದ್ಯೋಗಿಗಳ ಕಥೆಯನ್ನು ಕೇಳಿ ತಿಳಿದಾಗ ಸಾಧ್ಯವಾದಷ್ಟು ಬೇಗ ಈ ನದಿಗೆ ಸೇತುವೆಯನ್ನು ನಿರ್ಮಿಸಬೇಕು ಎಂದು ನಮ್ಮ ತಂಡ ಆ ಕ್ಷಣವೇ ಸನ್ನದ್ಧಗೊಂಡಿತು. ನಾವು ಅಲ್ಲಿ ಸೇತುವೆಯನ್ನು ಹೇಗೆ ನಿರ್ಮಾಣ ಮಾಡಿದೆವು ಎಂಬ ವಿಷಯವನ್ನು ಬಳಿಕ ವಿವರಿಸುತ್ತೇನೆ. ನದಿ ದಾಟಿಕೊಂಡು ಹೋಗಿ, ಗಡಿ ರಕ್ಷಣೆಗೆ ನಿಂತ ನಮ್ಮ ಮುಂಚೂಣಿ ಸೈನಿಕರ ಶೌರ್ಯದ ಕಥೆಯನ್ನು ಮೊದಲು ಒಮ್ಮೆ ಕೇಳಿಬಿಡಿ.

ಶೋಕ ಹೇಳಿ ಕೇಳಿ ಹಿಮನದಿ. ಹಿಮ ಕರಗಿ ಹರಿಯುವ ಸಂದರ್ಭದಲ್ಲಿ ಈ ನದಿಯನ್ನು ದಾಟಲು ಸಾಧ್ಯವೇ ಇರಲಿಲ್ಲ. ಅಂದರೆ ಭಾರತದ ಇತರ ಪ್ರದೇಶಗಳೊಂದಿಗೆ ಈ ಗಡಿ ಭಾಗ ಹೆಚ್ಚು ಕಡಿಮೆ ಆರು ತಿಂಗಳು ಸಂಪೂರ್ಣವಾಗಿ ಸಂಪರ್ಕವನ್ನೇ ಕಳೆದುಕೊಂಡು ಬಿಡುತ್ತಿತ್ತು. ಶೋಕ ನದಿಯನ್ನು ದಾಟಿಕೊಂಡು ಹೋದ ಸೈನಿಕರು ಸುಮಾರು 180 ದಿನಗಳನ್ನು ಅಂತಹ ವಾತಾವರಣದಲ್ಲೇ ಕಳೆಯಬೇಕಿತ್ತು.

ತುರ್ತು ಸಂದರ್ಭದಲ್ಲಿ ಲೇಹ್‌ನತ್ತ ಬರಲು ಹವಣಿಸಿದವರು ಹಿಮನದಿಯನ್ನು ದಾಟಲಾಗದೆ ಸಾವನ್ನಪ್ಪುವ ಘಟನೆಗಳು ಇಲ್ಲಿ ಸಾಮಾನ್ಯವಾಗಿದ್ದವು. ಅಪ್ಪನದೋ, ಅಮ್ಮನದೋ ಸಾವಿನ ಸುದ್ದಿ ತಿಳಿದು, ಊರಿಗೆ ಧಾವಿಸುವವರಿಗೂ ತುರ್ತು ಚಿಕಿತ್ಸೆ ಬೇಕಾದವರಿಗೂ ಶೋಕ ನದಿಯು ಒಂದು ವಿಧದಲ್ಲಿ ಮರಣ ಶಯ್ಯೆಯನ್ನು ಸಿದ್ಧಪಡಿಸಿಬಿಡುತ್ತಿತ್ತು. ಚೀನಾದೊಂದಿಗೆ ಮೇಲಿಂದ ಮೇಲೆ ಮುಖಾಮುಖಿ ಆಗಬೇಕಾದ, ಪಾಕಿಸ್ತಾನ ಗಡಿಗೂ ಸ್ವಲ್ಪ ಹತ್ತಿರವಾದ ಪ್ರದೇಶದ ಸ್ಥಿತಿ ಇದಾಗಿತ್ತು.

ಲೇಹ್‌ನಿಂದ ದೌಲತ್‌ ಬೇಗ್‌ ಓಲ್ಡಿಗೆ ಸುಮಾರು 350 ಕಿ.ಮೀ. ದೂರ. ಅದೇ ದರ್ಬಕ್‌–ಶೋಕ–ದೌಲತ್‌ ಬೇಗ್‌ ಓಲ್ಡಿ (ಡಿಎಸ್‌ಡಿಬಿಒ) ಮಧ್ಯೆ 255 ಕಿ.ಮೀ. ಅಂತರ. ಗಡಿ ರಸ್ತೆ ಸಂಸ್ಥೆಯ (ಬಿಆರ್‌ಒ) ಪರ್ವತ ಶ್ರೇಣಿಯಲ್ಲಿ ಕಾಮಗಾರಿ ನಡೆಸುವ ನಿಪುಣರ ನಮ್ಮ ತಂಡಕ್ಕೆ ಈ ರಸ್ತೆಯನ್ನು ನಿರ್ಮಿಸುವ ‘ಪ್ರೋಜೆಕ್ಟ್‌ ಹಿಮಾಂಕ್‌’ನ ಹೊಣೆಯನ್ನು ವಹಿಸಲಾಗಿತ್ತು. ಶೋಕ ನದಿಗೆ ಸೇತುವೆ ನಿರ್ಮಾಣ ಮಾಡುವುದೂ ಯೋಜನೆಯ ಭಾಗವಾಗಿತ್ತು.

ಹಿಮಚ್ಛಾದಿತವಾದ ಈ ಭೂಭಾಗದಲ್ಲಿ ರಸ್ತೆ ನಿರ್ಮಿಸುವುದು ಬಲು ಕಠಿಣವಾದ ಕೆಲಸ. ಅದರೊಟ್ಟಿಗೆ ತಾತ್ಕಾಲಿಕ ಸೇತುವೆಗಳ ಜಾಗದಲ್ಲಿ ಶಾಶ್ವತ ಸೇತುವೆಗಳನ್ನು ನಿರ್ಮಿಸುವುದು ಮತ್ತೊಂದು ಸವಾಲು. ಈ ಭಾಗದಲ್ಲಿ ಒಂದು ವರ್ಷದ ಅವಧಿಯೊಳಗೆ ಸರಿಯಾಗಿ ಕೆಲಸ ಮಾಡಲು ಸಿಗುವುದು ನಾಲ್ಕೇ ನಾಲ್ಕು ತಿಂಗಳು.

ಕಡು ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶ 10–20 ಡಿಗ್ರಿ ಸೆಲ್ಸಿಯಸ್‌ಅನ್ನೂ ದಾಟುವುದಿಲ್ಲ. ಚಳಿಗಾಲದಲ್ಲಿ ಮೈನಸ್‌ 40 ಡಿಗ್ರಿ
ವರೆಗೂ ತಾಪಮಾನ ಕುಸಿಯುತ್ತದೆ. ಇಲ್ಲಿನ ಗಿರಿಶಿಖರದಲ್ಲಿಆಮ್ಲಜನಕದ ಪ್ರಮಾಣ ಶೇ 50ಕ್ಕಿಂತ ಕಡಿಮೆ ಇರುತ್ತದೆ. ಇಂತಹ ವಾತಾವರಣದಲ್ಲಿ ನಮ್ಮ ತಂಡ ರಸ್ತೆ ನಿರ್ಮಾಣಕ್ಕೆ ಇಳಿಯಿತು. ಗಾಲ್ವನ್‌ ಕಣಿವೆಯ ವಾತಾವರಣದ ಅರಿವು ಮೊದಲೇ ಇದ್ದುದರಿಂದ ಆ ಪರಿಸರದಲ್ಲಿ ಕೆಲಸ ಮಾಡಲು ನಮ್ಮ ತಂಡಕ್ಕೆ ಅಗತ್ಯ ತರಬೇತಿಯನ್ನೂ ನೀಡಲಾಗಿತ್ತು.

ಡಿಎಸ್‌ಡಿಬಿಒ ರಸ್ತೆಯನ್ನು ಪೂರ್ಣಗೊಳಿಸಲು ನಮಗೆ ಮೂರು ವರ್ಷಗಳು (2015–2018) ಬೇಕಾದವು. ಶೋಕ ನದಿಗೆ ನಾವು ಸೇತುವೆ ನಿರ್ಮಿಸಿದ್ದು 2016ರಲ್ಲಿ. ಈ ಸೇತುವೆಯು ಗಡಿ ರಕ್ಷಣಾ ಕಾರ್ಯದಲ್ಲಿ ಸೇನೆಗೆ ಒದಗಿಬಂದ ಒಂದು ದೊಡ್ಡ ನೆರವು. ವರ್ಷದುದ್ದಕ್ಕೂ ಸೈನಿಕರ ಚಲನವಲನಕ್ಕೆ, ವಾಹನಗಳು ಸಹ ನದಿ ದಾಟುವುದಕ್ಕೆ ಇದೀಗ ಸಾಧ್ಯವಾಗಿದೆ. ಸೈನಿಕರ ನೈತಿಕ ಸ್ಥೈರ್ಯವನ್ನೂ ಈ ಸೇತುವೆಯು ಹೆಚ್ಚಿಸಿದೆ.

ಸ್ಥಳೀಯವಾಗಿ ಸಿಗುವ ಕಟ್ಟಡ ನಿರ್ಮಾಣ ಸಲಕರಣೆ, ಪರ್ವತ ಪ್ರದೇಶದ ನಿರ್ಮಾಣ ಚಟುವಟಿಕೆಗಳಿಗಾಗಿಯೇ ಅಭಿವೃದ್ಧಿಪಡಿಸಲಾದ ಹೊಸ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ. ಈ ಪರ್ವತ ಶ್ರೇಣಿಯಲ್ಲಿ ನಿರ್ಮಾಣವಾಗಿರುವುದು ಕಾಂಕ್ರಿಟ್‌ ನೆಲಹಾಸು ಹೊಂದಿರುವ ಸರ್ವಋತು ರಸ್ತೆ. ಸೇತುವೆಗೆ ಹಾಕಿದ ಪಿಲ್ಲರ್‌ಗಳಿಗೆ ಮೈಕ್ರೊಪೈಲಿಂಗ್‌ ತಂತ್ರಜ್ಞಾನ ಬಳಸಲಾಗಿದೆ. ಹಿಮ ಸುರಿದರೂ ಚಳಿ ವಾತಾವರಣವಿದ್ದರೂ ಈ ರಸ್ತೆ ಜಗ್ಗುವುದಿಲ್ಲ.

ಈ ರಸ್ತೆಯ ಮಹತ್ವ ಅರಿಯಬೇಕಾದರೆ ನೀವು ಇನ್ನೊಂದು ಮಾಹಿತಿಯನ್ನೂ ತಿಳಿಯಬೇಕು. ಲೇಹ್‌ನಿಂದ ದೌಲತ್‌ ಬೇಗ್‌ ಓಲ್ಡಿಗೆ ತಲುಪಲು ಈ ಮೊದಲು ಎರಡು ದಿನಗಳೇ ಬೇಕಾಗುತ್ತಿದ್ದವು. ರಸ್ತೆ ಹಾಗೂ ಶೋಕ ನದಿಗೆ ಸೇತುವೆ ನಿರ್ಮಾಣವಾದ ಬಳಿಕ ಈಗ ಏಳು ಗಂಟೆಗಳಲ್ಲಿ ಅಷ್ಟೂದೂರವನ್ನು ಕ್ರಮಿಸಬಹುದು. ಇದಲ್ಲದೆ ಹಲವು ಹೆಲಿಪ್ಯಾಡ್‌ಗಳನ್ನೂ ಭೂಸ್ಪರ್ಶ ನೆಲೆಗಳನ್ನೂ ನಮ್ಮ ತಂಡ ದುರಸ್ತಿ ಮಾಡಿದೆ.

ಡಿಎಸ್‌ಡಿಬಿಒ ರಸ್ತೆಯಿಂದ ಸೈನಿಕರಿಗೆ ಮಾತ್ರವಲ್ಲದೆ ಸ್ಥಳೀಯರು ಹಾಗೂ ಪ್ರವಾಸಿಗರಿಗೂ ದೊಡ್ಡ ಅನುಕೂಲವಾಗಿದೆ. ಈ ಮೂಲಸೌಕರ್ಯದಿಂದ ಲಡಾಖ್‌ ಪ್ರದೇಶದ ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗಲಿದೆ.

‘ಪ್ರೋಜೆಕ್ಟ್‌ ಹಿಮಾಂಕ್‌’ಗೆ ಇನ್ನೊಂದು ಗುರಿಯನ್ನೂ ನೀಡಲಾಗಿತ್ತು. ಜಗತ್ತಿನ ಅತೀ ಎತ್ತರದ ಪ್ರದೇಶದಲ್ಲಿ ವಾಹನ ಬಳಕೆಗೆ ಯೋಗ್ಯವಾದ ರಸ್ತೆಯನ್ನು ನಿರ್ಮಿಸುವುದೇ ಆ ಗುರಿ. ಚಿಸುಮಲ್‌ ಮತ್ತು ಡೆಮ್‌ಚುಕ್‌ ಗ್ರಾಮಗಳ ನಡುವಿನ ಈ ಸಂಪರ್ಕ ರಸ್ತೆಯು 19,300 ಅಡಿ ಎತ್ತರದ ‘ಉಮ್ಲಿಂಗ್ಲಾ ಟಾಪ್‌’ನಲ್ಲಿದೆ. ಈ ರಸ್ತೆಯನ್ನು ಪೂರ್ಣಗೊಳಿಸಲು ಬರೊಬ್ಬರಿ ಆರು ವರ್ಷಗಳೇ ಬೇಕಾದವು.

‘ಜೀರೊ ಲೈನ್‌’ (ನಿಖರವಾಗಿ ಗಡಿ ಗುರುತಿಸದ ಪ್ರದೇಶ) ಭಾಗದಲ್ಲಿ ಈ ರಸ್ತೆ ಬರುತ್ತದೆ ಎಂದು ಚೀನಾ, ಪದೇ ಪದೆ ಈ ರಸ್ತೆ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಸೇನೆಯ ವ್ಯೂಹಾತ್ಮಕ ತಂತ್ರಗಳಿಗೆ ಬೇಕಾದ ಮೂರು ರಸ್ತೆಗಳಲ್ಲಿ ಇದೂ ಒಂದಾಗಿತ್ತು.

ಏಕೆ ಈ ರಸ್ತೆಗೆ ಮಹತ್ವ?

ಗಾಲ್ವನ್‌ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ತರಬೇತಿ ಚಟುವಟಿಕೆಗಳು ಹಾಗೂ ಮಿಲಿಟರಿ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿಗಳಲ್ಲಿ ಹಲವು ಸ್ಥಿತ್ಯಂತರಗಳು ಆಗಿವೆ. ಪಶ್ಚಿಮದಲ್ಲಿರುವ ಪಾಕ್‌ ಆಕ್ರಮಿತ ಕಾಶ್ಮೀರದ ಗಿಲ್ಗಿಟ್‌–ಬಲೂಚಿಸ್ತಾನ ರಕ್ಷಣೆಗೆ ಅಗತ್ಯ ಸೌಕರ್ಯವನ್ನು ಸೃಷ್ಟಿಸಿಕೊಳ್ಳುವುದು ಅದರ ತಂತ್ರವಾಗಿದೆ. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಸಹ ಪಾಕಿಸ್ತಾನವನ್ನು ಇದೇ ಪ್ರದೇಶದಲ್ಲಿ ಸಂಪರ್ಕಿಸುತ್ತದೆ. ವ್ಯೂಹಾತ್ಮಕವಾಗಿ ಮಹತ್ವದ್ದಾದ ಈ ತಾಣದಲ್ಲಿ ಗಡಿ ರೇಖೆಯವರೆಗೆ ತಲುಪಲು ನಮ್ಮ ಸೇನೆಗೆ ತೀರಾ ಅಗತ್ಯವಾಗಿದ್ದ ರಸ್ತೆಯನ್ನು ನಿರ್ಮಾಣ ಮಾಡಿದ ತೃಪ್ತಿ ನಮ್ಮ ತಂಡದ್ದಾಗಿದೆ.

ನಿರೂಪಣೆ: ಪ್ರವೀಣ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT