ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕ್ಯಾಸಿನೊ ಮಾಯಾಲೋಕ

Last Updated 14 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

‘ಜೂಜು’ ಎಂಬ ಚಟಕ್ಕೆ ಶತಮಾನಗಳ ಇತಿಹಾಸವಿದೆ. ಕಾಲಾಂತರದಲ್ಲಿ ಅದರ ಸ್ವರೂಪ ಬದಲಾಗುತ್ತಾ, ಆಧುನಿಕ ಸಮಾಜದಲ್ಲಿ ‘ಕ್ಯಾಸಿನೊ’ಗಳ ರೂಪ ತಳೆದು ನಿಂತಿವೆ. ಕ್ಯಾಸಿನೊಗಳನ್ನು ‘ಒಳಾಂಗಣ ಮನರಂಜನಾ ತಾಣ’ಗಳೆಂದು ಹೇಳಲಾಗುತ್ತದೆ. ಆದರೆ, ಆಧುನಿಕ ಜೂಜು ಅಡ್ಡೆಗಳಾದ ಕ್ಯಾಸಿನೊಗಳೇ ಹಲವು ಅಕ್ರಮ ಚಟುವಟಿಕೆಗಳ ಮತ್ತು ಅಕ್ರಮ ಚಟುವಟಿಕೆಗಳನ್ನು ಪ್ರೇರೇಪಿಸುವ ತಾಣಗಳಾಗಿವೆ ಎಂಬ ಆರೋಪವೂ ಇದೆ.

ಅನೇಕ ರಾಷ್ಟ್ರಗಳು ಈಗ ದುಬಾರಿ ಮತ್ತು ಐಷಾರಾಮಿ ಕ್ಯಾಸಿನೊಗಳನ್ನು ಆರಂಭಿಸಿ ವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸಂಗೀತ ಕಾರ್ಯಕ್ರಮಗಳು, ಬಣ್ಣಬಣ್ಣದ ಬೆಳಕುಗಳ ಕಾರಂಜಿ, ವಾಣಿಜ್ಯ ಮಳಿಗೆ, ದುಬಾರಿ ಹೋಟೆಲ್‌ ಮುಂತಾದವುಗಳನ್ನು ಹೊಂದಿರುವ ಕ್ಯಾಸಿನೊಗಳಿಗೆ, ದೂರದೂರದ ದೇಶಗಳ ಪ್ರವಾಸಿಗರು ಬರುತ್ತಾರೆ. ಕೆಲವು ರಾಷ್ಟ್ರಗಳಲ್ಲಿ ಕ್ಯಾಸಿನೊಗಳೆ ಪ್ರವಾಸೋದ್ಯಮದ ಮುಖ್ಯ ಆಕರ್ಷಣೆಗಳಾಗುತ್ತಿವೆ. ಪ್ರಮುಖ ಸ್ಲಾಟ್‌ ಮಷೀನ್‌, ವ್ಲ್ಯಾಕ್‌ ಜಾಕ್‌, ರೋಲಟ್‌ ಮುಂತಾದ ಆಟಗಳು ಕ್ಯಾಸಿನೊಗಳಿಗೆ ಕೋಟ್ಯಂತರ ರೂಪಾಯಿ ಆದಾಯವನ್ನು ತಂದುಕೊಡುತ್ತಿವೆ.

‘ಧನಿಕ’ರಿಗೆ ರಾಜ ಮರ್ಯಾದೆ

ಕ್ಯಾಸಿನೊಗಳ ಮೂಲ ಉದ್ದೇಶ ಜೂಜಾಟವೇ. ಆದ್ದರಿಂದ ಇಲ್ಲಿ ಹೆಚ್ಚು ಹೆಚ್ಚು ಹಣ ಸುರಿಯುವವರಿಗೆ ರಾಜ ಮರ್ಯಾದೆ. ನಿಯಮಿತವಾಗಿ ಇಲ್ಲಿಗೆ ಭೇಟಿ ನೀಡುವರಿಗೆ ಉಚಿತ ಮದ್ಯ, ಊಟೋಪಚಾರ, ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ, ಹೋಗಿಬರುವ ಖರ್ಚು ವೆಚ್ಚಗಳನ್ನೂ ಕ್ಯಾಸಿನೊ ಆಯೋಜಕರು ನೀಡುತ್ತಾರೆ. ಆದರೆ, ಇಂಥವರು ಒಂದು ಭೇಟಿಯಲ್ಲಿ ಇಂತಿಷ್ಟು ಹಣ ವೆಚ್ಚ ಮಾಡಬೇಕೆಂಬ ಅಲಿಖಿತ ನಿಯಮವೂ ಇದೆ.

‘ಜೂಜು ಎಂದಮೇಲೆ ಗೆಲುವು–ಸೋಲು ಎರಡೂ ಇದ್ದದ್ದೇ. ಕ್ಯಾಸಿನೊಗಳಲ್ಲಿ ಆಗೊಮ್ಮೆ ಈಗೊಮ್ಮೆ ದೊಡ್ಡ ಮೊತ್ತವನ್ನು ಗೆಲ್ಲುವವರು ಇರುತ್ತಾರೆ. ಆದರೆ, ಗೆದ್ದದ್ದಕ್ಕೂ ಹೆಚ್ಚಿನ ಹಣವನ್ನು ಕಳೆದುಕೊಂಡಿರುತ್ತಾರೆ ಎಂಬುದು ವಾಸ್ತವ. ಮಾಲೀಕರು ಮಾತ್ರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಬಾಚಿಕೊಳ್ಳುವುದರಿಂದ, ಈ ಆಟದಲ್ಲಿ ಗೆಲ್ಲುವುದು ಅವರು ಮಾತ್ರ’ ಎಂದು ಕ್ಯಾಸಿನೊ ವ್ಯವಹಾರದ ಒಳ ಮರ್ಮ ಅರಿತಿರುವ ವ್ಯಕ್ತಿಯೊಬ್ಬರು ಹೇಳುತ್ತಾರೆ.

‘ದೊಡ್ಡ ಮೊತ್ತದಲ್ಲಿ ಬೆಟ್ಟಿಂಗ್‌ ಆಡುವ, ಕ್ಯಾಸಿನೊದಲ್ಲಿ ತುಂಬಾ ಸಮಯವನ್ನು ಕಳೆಯುವ ಇಂಥವರನ್ನು ಮಾಲೀಕರು ಒಳ್ಳೆಯ ಆಟಗಾರ’ ಎಂದು ಗುರುತಿಸುತ್ತಾರೆ. ಕ್ಯಾಸಿನೊದಲ್ಲಿ ಕಳೆಯುವ ಸಮಯ ಮತ್ತು ಮಾಡುವ ವೆಚ್ಚದ ಆಧಾರದಲ್ಲಿ ಅವರಿಗೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಎಷ್ಟು ಹಣ ವೆಚ್ಚ ಮಾಡಿದ್ದಾರೆ ಎಂದು ಇವರ ಮೇಲೆ ಕಣ್ಣಿಡುವ ವ್ಯವಸ್ಥೆಯೂ ಕ್ಯಾಸಿನೊಗಳಲ್ಲಿ ಇರುತ್ತದೆ.

‘ಮಾಲೀಕರಿಗೆ ಪ್ರತಿ ಆಟದಲ್ಲೂ ಒಂದಿಷ್ಟು ಹಣ ಬರುವಂತೆ ಎಲ್ಲಾ ಆಟಗಳನ್ನು ರೂಪಿಸಲಾಗಿರುತ್ತದೆ. ಅದರ ಪ್ರಮಾಣ ತೀರಾ ಕಡಿಮೆ (ಶೇ 2ಕ್ಕೂ ಕಡಿಮೆ) ಇದ್ದರೂ, ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುವುದರಿಂದ ದಿನಾಂತ್ಯದಲ್ಲಿ ದೊಡ್ಡ ಮೊತ್ತವೇ ಸಂಗ್ರಹವಾಗಿರುತ್ತದೆ. ಆಟಕ್ಕೆ ಅನುಗುಣವಾಗಿ ಲಾಭಾಂಶವೂ ಹೆಚ್ಚುಕಡಿಮೆ ಆಗುತ್ತದೆ’ ಎನ್ನುತ್ತಾರೆ ಅವರು.

‘ರೊಡೊಟ್ಟೊ’ದಿಂದ ‘ಕ್ಯಾಸಿನೊ’ವರೆಗೆ

ಜೂಜಿಗೆ ಬಹಳ ದೊಡ್ಡ ಇತಿಹಾಸವೇ ಇದೆ. ಆರು ಮುಖಗಳನ್ನು ಹೊಂದಿರುವ ದಾಳಗಳ ಉಲ್ಲೇಖವು ಪ್ರಾಚೀನ ಹಲವು ಶಾಸ್ತ್ರಗಳಲ್ಲಿ ದಾಖಲಾಗಿದೆ. ಸರ್ಕಾರವೇ ಇಂಥ ಜೂಜು ಅಡ್ಡೆಗಳನ್ನು ನಡೆಸಿದರೆ, ಸಾಕಷ್ಟು ಹಣ ಸಂಪಾದಿಸಬಹುದೆಂಬ ಚಿಂತನೆಯನ್ನು 1638ರ ವೇಳೆಗೆ ವೆನೀಸ್‌ ಸರ್ಕಾರ ಮಾಡಿತ್ತು. ಆ ಚಿಂತನೆಯನ್ನು ಜಾರಿಗೊಳಿಸಿ, ಸಾಕಷ್ಟು ಹಣವನ್ನೂ ಸಂಪಾದಿಸಿತ್ತು. ಇಂಥ ಕೇಂದ್ರಗಳನ್ನು ‘ರಿಡೊಟ್ಟೊ’ ಎಂದು ಗುರುತಿಸಲಾಗಿತ್ತು.

ನಾಲ್ಕು ಮಹಡಿಗಳ ರಿಡೊಟ್ಟೊ ಆರಂಭಿಸಲು ವೆನೀಸ್‌ ಸರ್ಕಾರ ಅನುಮತಿ ನೀಡಿತ್ತು. ಅಲ್ಲಿಗೆ ಜನರನ್ನು ಆಕರ್ಷಿಸಲು ಸರ್ಕಾರ ಉಚಿತ ಊಟ– ಮದ್ಯದ ಆಮಿಷವನ್ನೂ ತೋರಿಸಿತ್ತು. ಇವುಗಳನ್ನು ಸರ್ಕಾರವೇ ಅಧಿಕೃತವಾಗಿ ಮಂಜೂರು ಮಾಡಿದ ಮೊದಲ ಜೂಜು ಕೇಂದ್ರ ಎಂದು ಗುರುತಿಸಲಾಗುತ್ತದೆ.

ಇಲ್ಲಿಂದಲೇ ಯುರೋಪಿನಾದ್ಯಂತ ಈ ಸಂಸ್ಕೃತಿ ವ್ಯಾಪಿಸಿತು. ಹಲವು ರಾಷ್ಟ್ರಗಳಲ್ಲಿ ಇದೇ ಮಾದರಿಯ ಕೇಂದ್ರಗಳು ಆರಂಭವಾದವು. ಆದರೆ ಕಾಲಾಂತರದಲ್ಲಿ ರಿಡೊಟ್ಟೊಗಳು ಮುಚ್ಚಿದವು. ಅದರ ಹೊಸ ಅವತಾರವಾಗಿ ಕ್ಯಾಸಿನೊಗಳು ಹುಟ್ಟಿಕೊಂಡವು. ಆಧುನಿಕ ಕ್ಯಾಸಿನೊಗಳಲ್ಲಿ ಅತಿ ಜನಪ್ರಿಯವಾಗಿರುವ ಅನೇಕ ಆಟಗಳು ಹುಟ್ಟಿಕೊಂಡಿದ್ದು ಫ್ರಾನ್ಸ್‌ನಲ್ಲೇ ಎಂಬುದು ಹಮನಾರ್ಹ.

1800ರ ವೇಳೆಗೆ ಅಮೆರಿಕದಲ್ಲಿ ಜೂಜು ಜನಪ್ರಿಯವಾಯಿತು. ಆದರೆ 20ನೇ ಶತಮಾನದಲ್ಲಿ ನೈತಿಕ ಸಂಪ್ರದಾಯವಾದ ಗಟ್ಟಿಗೊಂಡ ಪರಿಣಾಮ, ಜೂಜಿನ ಮೇಲೆ ನಿಯಂತ್ರಣ ಬಿತ್ತು. ಆದರೆ ಅಕ್ರಮವಾಗಿ ಜೂಜು ನಡೆಯುತ್ತಿತ್ತು. 1931ರಲ್ಲಿ ಅಮೆರಿಕದ ಒಂದು ರಾಜ್ಯವು ಜೂಜನ್ನು ಕಾನೂನುಬದ್ಧಗೊಳಿಸಲು ತೀರ್ಮಾನಿಸಿತು. ಪರಿಣಾಮ ಆ ರಾಜ್ಯದಲ್ಲಿ ಕ್ಯಾಸಿನೊಗಳು ತಲೆ ಎತ್ತಿದವು. ನಿಧಾನಕ್ಕೆ ಅಮೆರಿಕದಾದ್ಯಂತ ಇದು ವಿಸ್ತರಿಸಿತು.

***

ಮಾದಕ ಬಲೆ

‘ಒಮ್ಮೆ ಒಳಗೆಬಂದ ವ್ಯಕ್ತಿಯು ಹಲವು ಗಂಟೆಗಳ ಕಾಲ ಹೊರಗೆ ಹೋಗಲು ಸಾಧ್ಯವಾಗದ ರೀತಿಯಲ್ಲಿ ಕ್ಯಾಸಿನೊಗಳ ಒಳಾಂಗಣವನ್ನು ವಿನ್ಯಾಸಗೊಳಿಸಲಾಗುತ್ತದೆ. ಉಚಿತವಾಗಿ ಲಭಿಸುವ ಮದ್ಯ ಮತ್ತು ಆಹಾರವು ಬೇರೆಲ್ಲವನ್ನೂ ಮರೆಯುವಂತೆ ಮಾಡುತ್ತದೆ’ ಎನ್ನುತ್ತಾರೆ ಅವುಗಳಿಗೆ ಭೇಟಿನೀಡುವವರು.

‘ಒಳಗಡೆ ನಗದು ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ. ಬದಲಿಗೆ ಮೊದಲೇ ಹಣ ತೆತ್ತು, ಅಲ್ಲಿಯೇ ಲಭಿಸುವ ಕಾಯಿನ್‌ಗಳನ್ನು ಖರೀದಿಸಬೇಕು. ಆಟಗಳಲ್ಲಿ ಅದನ್ನೇ ಬಳಸಬೇಕು. ಇದರಿಂದಾಗಿ ಗ್ರಾಹಕರಿಗೆ ತಾವು ಎಷ್ಟು ವೆಚ್ಚ ಮಾಡುತ್ತಿದ್ದೇವೆ ಎಂಬುದರ ಅರಿವು ಇರುವುದಿಲ್ಲ. ಮಾತ್ರವಲ್ಲ, ಎಷ್ಟು ಹಣ ಒಳಗೆ ಬಂದಿದೆ ಮತ್ತು ಎಷ್ಟು ಹೊರಗೆ ಹೋಗುತ್ತಿದೆ ಎಂಬ ಸ್ಪಷ್ಟ ಚಿತ್ರಣ ಆಯೋಜಕರಿಗೆ ಲಭಿಸುತ್ತದೆ. ಗ್ರಾಹಕರಿಗೆ ‘ಅನುಕೂಲ’ವಾಗಲಿ ಎಂಬ ದೃಷ್ಟಿಯಿಂದ ಆಯ್ದ ಜಾಗಗಳಲ್ಲಿ ಎಟಿಎಂಗಳನ್ನೂ ಇರಿಸಲಾಗುತ್ತದೆ.

‘ಕ್ಯಾಸಿನೊಗಳಿಗೆ ಕಿಟಕಿಗಳಿರುವುದಿಲ್ಲ. ಒಳಗಡೆ ಮಂದ ಬೆಳಕು ಇರುತ್ತದೆ. ಮಾತ್ರವಲ್ಲ ಎಲ್ಲೂ ಗಡಿಯಾರಗಳು ಇರುವುದಿಲ್ಲ. ಸಮಯ ಎಷ್ಟಾಗಿದೆ ಎಂಬುದು ಅರಿವಿಗೆ ಬರಬಾರದು ಎಂಬುದು ಇದರ ಉದ್ದೇಶ. ಕೈಗಡಿಯಾರ ನೋಡಿದರೂ ಸಮಯ ಗೊತ್ತಾಗುತ್ತದೆ ಎಂದು ವಾದಿಸಬಹುದು. ಆದರೆ ಕ್ಯಾಸಿನೊಗಳಲ್ಲಿ ಉದ್ದೇಶಪೂರ್ವಕವಾಗಿ ಈ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

ಕರಾಳ ಮುಖ

ಕ್ಯಾಸಿನೊಗಳ ಹಿಂದೆ ಕರಾಳ ಮುಖವಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಜೂಜು, ಸಂಗೀತ, ಕುಡಿತ– ಕುಣಿತಗಳ ಜತೆಗೆ ಅನೇಕ ಅಕ್ರಮ ಚಟುವಟಿಕೆಗಳಿಗೆ ಇವು ಕೇಂದ್ರವಾಗುತ್ತವೆ ಎಂಬ ಆರೋಪಗಳಿವೆ.

ಜೂಜಿನ ಚಟಕ್ಕೆ ಬಿದ್ದ ಹಲವರ ಕಟುಂಬಗಳು ಬೀದಿಗೆ ಬಿದ್ದಿವೆ. ಭ್ರಷ್ಟ ಮಾರ್ಗದಲ್ಲಿ ಹಣಗಳಿಸಲು ಕ್ಯಾಸಿನೊಗಳೂ ಅನೇಕರನ್ನು ಪ್ರೇರೇಪಿಸುತ್ತವೆ. ಕೆಲವು ಕ್ಯಾಸಿನೊಗಳ ಮಾಲೀಕರು ‘ಮಾಫಿಯಾ ಡಾನ್‌’ಗಳಂತೆ ವರ್ತಿಸುತ್ತಾರೆ ಎಂಬ ಆರೋಪಗಳೂ ಇವೆ.

ಡ್ರಗ್ಸ್ ಜಾಲದಂಥ ಸಂಘಟಿತ ಅಪರಾಧ ಪ್ರಕರಣಗಳಿಗೆ ಇವು ಉತ್ತೇಜನ ನೀಡುತ್ತವೆ. ಆ ಮೂಲಕ ಗಳಿಸಿದ ಹಣವನ್ನು ಕ್ಯಾಸಿನೊಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಅಲ್ಲಿಯೇ ಈ ಜಾಲವನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ. ಅಮೆರಿಕದಲ್ಲಿ ಜೂಜನ್ನು ಕಾನೂನುಬದ್ಧಗೊಳಿಸಿದ ನಂತರ ಮಾಫಿಯಾ ಹಣವು ಕ್ಯಾಸಿನೊಗಳತ್ತ ಭಾರಿ ಪ್ರಮಾಣದಲ್ಲಿ ಹರಿದುಬಂದಿದೆ ಎಂಬುದು ಅಲ್ಲಿ ನಡೆಸಿದ್ದ ಅಧ್ಯಯನದಿಂದ ತಿಳಿದುಬಂದಿತ್ತು.

ಈ ವಹಿವಾಟಿನಲ್ಲಿ ಭಾರಿ ಪ್ರಮಾಣದಲ್ಲಿ ದುಡ್ಡಿದೆ ಎಂದು ತಿಳಿದ ಹೋಟೆಲ್‌ ಮಾಲೀಕರು, ರಿಯಲ್‌ಎಸ್ಟೇಟ್‌ ಕುಳಗಳು ಆ ನಂತರದ ದಿನಗಳಲ್ಲಿ ಅಮೆರಿಕದ ಕ್ಯಾಸಿನೊಗಳಲ್ಲಿ ಹೂಡಿಕೆ ಆರಂಭಿಸಿದ್ದವು. ಡೊನಾಲ್ಡ್‌ ಟ್ರಂಪ್‌ ಅವರೂ ಹಲವು ಕ್ಯಾಸಿನೊಗಳ ಒಡೆಯರಾಗಿದ್ದಾರೆ. ಅಷ್ಟೇ ಅಲ್ಲ ಅವರು ಹಿಲ್ಟನ್‌ ಹೋಟೆಲ್‌ ಕಂಪನಿಯ ಮಾಲಕರೂ ಆಗಿದ್ದಾರೆ.

ಜೂಜಿನ ಚಟಕ್ಕೆ ಬಿದ್ದವರು ಕ್ಯಾಸಿನೊಗಳಲ್ಲಿ ವೆಚ್ಚ ಮಾಡುವ ಸಲುವಾಗಿಯೇ ಅಕ್ರಮವಾಗಿ ಹಣ ಸಂಪಾದನೆಯ ದಾರಿ ಹುಡುಕಿಕೊಳ್ಳುತ್ತಾರೆ. ಕ್ಯಾಸಿನೊಗಳಿಗೆ ನಿಯಮಿತವಾಗಿ ಭೇಟಿ ನೀಡುವವರಲ್ಲಿ ಶೇ 5ರಷ್ಟು ಜನರು ಈ ವರ್ಗದವರಾಗಿದ್ದಾರೆ. ಒಟ್ಟಾರೆ ಲಾಭದ ಶೇ 25ರಷ್ಟು ಭಾಗ ಇಂಥವರಿಂದಲೇ ಕ್ಯಾಸಿನೊಗಳಿಗೆ ಬರುತ್ತದೆ ಎಂದು ಅಧ್ಯಯನಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT