ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಪಶ್ಚಿಮ ಘಟ್ಟಕ್ಕೆ ಅಣೆಕಟ್ಟೆ ಏಟು?

ಸೂಕ್ಷ್ಮ ಪ್ರದೇಶದಲ್ಲಿ 1,400 ಕಿರು ಅಣೆಕಟ್ಟೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದಿಂದ ಪ್ರಸ್ತಾವ
Last Updated 18 ಆಗಸ್ಟ್ 2021, 19:46 IST
ಅಕ್ಷರ ಗಾತ್ರ

ಪಶ್ಚಿಮ ಘಟ್ಟದಲ್ಲಿ 1,400 ಕಿರು ಅಣೆಕಟ್ಟೆಗಳನ್ನು (ಚೆಕ್‌ ಡ್ಯಾಂ) ನಿರ್ಮಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. 1,400 ಕಿರು ಅಣೆಕಟ್ಟೆಗಳನ್ನು ನಿರ್ಮಿಸುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆರ್ಥಿಕ ನೆರವನ್ನು ಕೇಳಿದೆ. ಈ ಸಲುವಾಗಿ ರಾಜ್ಯದ ಕಿರು ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ, ನೆರವು ಕೋರಿದ್ದಾರೆ. ಸಚಿವ ಮಾಧುಸ್ವಾಮಿ ಅವರೇ ಬಹಿರಂಗಪಡಿಸಿದ ಈ ಯೋಜನೆಗೆ ರಾಜ್ಯದ ಪರಿಸರ ಸಂರಕ್ಷಣಾ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಯೋಜನೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದೆ.

ಈ ಯೋಜನೆಯೂ ಸೇರಿ, ರಾಷ್ಟ್ರೀಯ ಜಲ ಮಿಷನ್ ಯೋಜನೆ ಅಡಿ ರಾಜ್ಯಕ್ಕೆ₹3,500 ಕೋಟಿ ನೆರವು ನೀಡಬೇಕು ಎಂದು ಮಾಧುಸ್ವಾಮಿ ಅವರು ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ‘ಈ ಪ್ರಸ್ತಾವಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದೂ ಮಾಧುಸ್ವಾಮಿ ಹೇಳಿದ್ದಾರೆ.

‘ಪಶ್ಚಿಮ ಘಟ್ಟಗಳಲ್ಲಿನ ನದಿಗಳ ನೀರು ವ್ಯರ್ಥವಾಗಿ ಹರಿದು, ಸಮುದ್ರ ಸೇರುತ್ತದೆ. ಆ ನೀರನ್ನು ಕುಡಿಯುವುದಕ್ಕಾಗಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ಕಾರಣದಿಂದ, ಪಶ್ಚಿಮ ಘಟ್ಟದಲ್ಲಿ 1,400 ಕಿರು ಅಣೆಕಟ್ಟೆಗಳನ್ನು ನಿರ್ಮಿಸಲಾಗುವುದು’ ಎಂದು ಮಾಧುಸ್ವಾಮಿ ಮಾಹಿತಿ ನೀಡಿದ್ದರು.

ಯೋಜನೆಗೆ ಆಕ್ಷೇಪ ವ್ಯಕ್ತವಾದ ಕಾರಣ, ಯೋಜನೆ ಕುರಿತು ಮತ್ತಷ್ಟು ಮಾಹಿತಿಯನ್ನು ಅವರು ನೀಡಿದರು. ‘ಕೊಡಗು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ಕಿರು ಅಣೆಕಟ್ಟೆಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಅಣೆಕಟ್ಟೆಯ ಅಚ್ಚುಕಟ್ಟಿನ ಪ್ರದೇಶ 60-70 ಎಕರೆಯಷ್ಟು ಕಿರಿದಾಗಿರಲಿದೆ. ಅಣೆಕಟ್ಟೆಯ ಎತ್ತರ ಕೇವಲ ಆರು ಅಡಿ ಇರಲಿದೆ. ಇದರಿಂದ ಭಾರಿ ಪ್ರಮಾಣದ ನೀರು ಸಂಗ್ರಹವಾಗುವುದಿಲ್ಲ. ಅರಣ್ಯ ನಾಶವಾಗುವುದಿಲ್ಲ. ಈ ಕಿರುಅಣೆಕಟ್ಟೆಗಳಲ್ಲಿ ಹೆಚ್ಚು ನೀರು ಸಂಗ್ರಹ ಆಗುವುದಿಲ್ಲವಾದ ಕಾರಣ, ಯಾವುದೇ ರೀತಿಯ ಪರಿಸರ ಸಮಸ್ಯೆಗಳೂ ಉದ್ಭವಿಸುವುದಿಲ್ಲ’ ಎಂದು ಅವರು ಹೆಚ್ಚುವರಿ ಮಾಹಿತಿ ನೀಡಿದ್ದಾರೆ.

ಅಪೂರ್ಣ ಮಾಹಿತಿ

*ಯೋಜನೆ ಅನುಷ್ಠಾನದಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ ಅಥವಾ ತಜ್ಞರ ಅಭಿಪ್ರಾಯ ಕೇಳಲಾಗಿದೆಯೇ ಎಂಬುದರ ಮಾಹಿತಿಯನ್ನು
ಸಚಿವ ಮಾಧುಸ್ವಾಮಿ ಅವರು
ನೀಡಿಲ್ಲ

*ಯೋಜನೆ ಯಾವ ಹಂತದಲ್ಲಿದೆ ಎಂಬುದರ ಮಾಹಿತಿಯನ್ನು ಮಾಧುಸ್ವಾಮಿ ಅವರು ನೀಡಿಲ್ಲ. ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆಯೇ ಅಥವಾ ಕಾರ್ಯಸಾಧ್ಯತಾ ಅಧ್ಯಯನ ನಡೆದಿದೆಯೇ ಎಂಬುದರ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ, ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವನ್ನು ಕೇಳಲಾಗಿದೆ ಎಂದಷ್ಟೇ ಹೇಳಿದ್ದಾರೆ. ಯಾವ ಆಧಾರದಲ್ಲಿ ಆರ್ಥಿಕ ನೆರವನ್ನು ಕೇಳಲಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಯೋಜನೆಯ ಅಂದಾಜು ವೆಚ್ಚ ಎಷ್ಟು ಎಂಬುದನ್ನೂ ಅವರು ತಿಳಿಸಿಲ್ಲ

*ಪಶ್ಚಿಮ ಘಟ್ಟವಿರುವ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಚಾಮರಾಜನಗರ ಜಿಲ್ಲೆಗಳನ್ನು ಯೋಜನೆಯಿಂದ ಹೊರಗೆ ಇಡಲಾಗಿದೆ. ಕೊಡಗು, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಾತ್ರವೇ ಯೋಜನೆ ಜಾರಿಗೆ ಬರಲಿದೆ ಎಂದಿದ್ದಾರೆ. ಈ ಕಿರುಅಣೆಕಟ್ಟೆಗಳಲ್ಲಿ ಸಂಗ್ರಹಿಸಲಾಗುವ ನೀರನ್ನು ಎಲ್ಲಿ ಬಳಸಲಾಗುವುದು ಎಂಬುದನ್ನೂ ಹೇಳಿಲ್ಲ

*ಕಿರುಅಣೆಕಟ್ಟೆಗಳಲ್ಲಿ ಸಂಗ್ರಹವಾಗುವ ನೀರನ್ನು ಯಾವ ವಿಧಾನದ ಮೂಲಕ ಉದ್ದೇಶಿತ ಪ್ರದೇಶಗಳಿಗೆ ಪೂರೈಸಲಾಗುತ್ತದೆ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲ

*1,400 ಕಿರುಅಣೆಕಟ್ಟೆಗಳಿಗೆ, ಅವುಗಳ ಕಾಲುವೆ ಅಥವಾ ಕೊಳವೆಮಾರ್ಗಕ್ಕೆ ಅಂದಾಜು ಎಷ್ಟು ವಿಸ್ತೀರ್ಣದ ಭೂಮಿ ಬೇಕಾಗುತ್ತದೆ ಎಂಬುದರ ಮಾಹಿತಿಯನ್ನು ಸಚಿವರು ನೀಡಿಲ್ಲ.

ಗುಡ್ಡವೇ ಕಳಚಿ ಬಿದ್ದೀತು

ಪಶ್ಚಿಮ ಘಟ್ಟಗಳು ಯಾವ ರೀತಿಯಲ್ಲಿ ಸೂಕ್ಷ್ಮ ಮತ್ತು ಅಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮುನ್ನ ಯಾವ ಎಚ್ಚರ ಇರಬೇಕು ಎಂಬುದನ್ನು ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್‌, ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿ ರಂಗನ್ ಸೇರಿದಂತೆ ಅನೇಕ ಭೂವಿಜ್ಞಾನಿಗಳು ವೈಜ್ಞಾನಿಕ ಸಮೀಕ್ಷಣೆ ನಡೆಸಿ ತಿಳಿಸಿದ್ದಾರೆ. ಪಶ್ಚಿಮ ಘಟ್ಟಗಳು ಅಂದರೆ ಆಟದ ಬೊಂಬೆ ಎಂದು ಸಚಿವರು ಭಾವಿಸಿದಂತಿದೆ. ಘಟ್ಟದ ಮೇಲೆ ಮಾನವರ ಅವೈಜ್ಞಾನಿಕ ನಡೆಯಿಂದ ಇಡೀ ಘಟ್ಟಗಳ ಸಾಲುಗಳು ಕಳಚಿ ಬೀಳುತ್ತಿರುವುದು, ಮಡ್ಡಿಯಾಗಿ ಹರಿದು ಹೊಳೆಯಾಗುತ್ತಿರುವ ವಿಷಯ ಅವರು ತಿಳಿದಂತಿಲ್ಲ. ಪಶ್ಚಿಮಘಟ್ಟದ ಮೇಲೆ ಮತ್ತೆ ಮತ್ತೆ ದಾಳಿ ಮಾಡುತ್ತಿದ್ದರೆ ಮುಂದೆ ಅಪಾಯ ತಪ್ಪಿದ್ದಲ್ಲ.

ಘಟ್ಟದ ಮೇಲೆ ಯಾವುದೇ ಕಾಮಗಾರಿ ಹಮ್ಮಿಕೊಂಡರೂ ಪರಿಸರದ ಲಯ ತಪ್ಪುತ್ತದೆ. ಕಳೆದ ವರ್ಷ ತಲಕಾವೇರಿಯ ಘಟನೆ ಇನ್ನೂ ಹಸಿಯಾಗಿಯೇ ಇದೆ. ಇತ್ತೀಚೆಗೆ ಗುಡ್ಡಗಳು ಕುಸಿದಿರುವುದಕ್ಕೆ ಮಾನವರ ಅವೈಜ್ಞಾನಿಕ ನಡೆ, ಹಣಗಳಿಕೆಯ ದುರಾಸೆ, ಹುಂಬತನ ಕಾರಣ. ಕೂಡಗು ಜಿಲ್ಲೆಯ ಜನರ ಬದುಕು ಇತ್ತೀಚಿನ ವರ್ಷಗಳಲ್ಲಿ ನರಕವಾಗಿದೆ. ಗುಡ್ಡಗಳು, ಕಾಫಿ ತೋಟಗಳು ಮಡ್ಡಿ ನೀರಿನಲ್ಲಿ ಕೊಚ್ಚಿಹೋಗಿ ಜಮೀನುಗಳನ್ನು ಹುಡುಕುವಂತಾಗಿದೆ.

ಘಟ್ಟಗಳನ್ನು ಕೆಣಕಿದರೆ ಕೇವಲ ಘಟ್ಟದ ಬುಡದಲ್ಲಿ ಬದುಕು ಕಟ್ಟಿ ಕೊಂಡವರು ಮಾತ್ರವಲ್ಲ ರಾಜ್ಯದ ಜನತೆಯ ಜೀವನದ ಮೇಲೆ ಪರಿಣಾಮ ಉಂಟಾಗುತ್ತದೆ. ಸಿಹಿ ನೀರು ಸಂಗ್ರಹಿಸಲು ಸಚಿವರಿಗೆ ಪಶ್ಚಿಮಘಟ್ಟವೇ ಬೇಕೇ? ನದಿಯ ಹರಿವಿನ ಉದ್ದಕ್ಕೂ ಅಣೆಕಟ್ಟು ಕಟ್ಟಬಹುದಲ್ಲ. ದಯವಿಟ್ಟು ಈ ಯೋಜನೆ ತಕ್ಷಣ ನಿಲ್ಲಿಸಲಿ.

ನದಿಗಳು ಹುಟ್ಟುವ ಸ್ಥಳದಲ್ಲೇ ಕಿರು ಅಣೆಕಟ್ಟು ನಿರ್ಮಿಸುವುದರಿಂದ ಯಾವ ಪ್ರಯೋಜನವಿದೆ? ಅಭಿವೃದ್ಧಿ ಹೆಸರಿನಲ್ಲಿ ಕೈಗೊಂಡ ಕಾಮಗಾರಿಗಳಿಂದ ಘಟ್ಟವು ನಲುಗಿ ಹಿಂಡಿದ ಬಟ್ಟೆಯಂತಾಗಿದೆ.

1,400 ಕಿರು ಅಣೆಕಟ್ಟೆಗಳು ಎಂದರೆ, ಕರ್ನಾಟಕದ ವ್ಯಾಪ್ತಿಯಲ್ಲಿರುವ ಪಶ್ಚಿಮ ಘಟ್ಟವನ್ನು ಪೂರ್ತಿಯಾಗಿ ವ್ಯಾಪಿಸುತ್ತದೆ. ಅಣೆಕಟ್ಟೆಸಣ್ಣದಿರಲಿ ದೊಡ್ಡದಿರಲಿ ಅಲ್ಲಿ ನಡೆಯುವ ಕಾಂಕ್ರಿಟ್ ಕೆಲಸಕ್ಕೆ ಘಟ್ಟದ ಬುಡವೇ ಅಲ್ಲಾಡುತ್ತದೆ. ಮಳೆಗಾಲದಲ್ಲಿ ಬೀಳುವ ಮಳೆಯಿಂದಲೇ ಘಟ್ಟ ಕುಸಿಯುತ್ತದೆ ಅಂದ ಮೇಲೆ, ಅಣೆಕಟ್ಟೆಯಲ್ಲಿ ಶಾಶ್ವತವಾಗಿ ನಿಲ್ಲುವ ನೀರು ಮತ್ತು ಅದರಿಂದಾದ ನಾಶದಿಂದಾಗಿ ಬಿರುಕು ಮೂಡಿ ಗುಡ್ಡಗಳು ಅಣೆಕಟ್ಟೆ ಸಮೇತ ಕಳಚಿ ಬೀಳದೆ ಇರಲಾರದು.

- ಟಿ.ಎಂ. ಶಿವಶಂಕರ್,ನಿವೃತ್ತ ಹಿರಿಯ ಭೂಜಲವಿಜ್ಞಾನಿ, ಬೆಂಗಳೂರು

ಶಾಶ್ವತ ಜಲಪ್ರಳಯಕ್ಕೆ ಕಾರಣ:

ಪಶ್ಚಿಮಘಟ್ಟ ವ್ಯಾಪ್ತಿಯ ಕೊಡಗು ಕಳೆದ ಮೂರು ವರ್ಷಗಳಿಂದಲೂ ಪ್ರಾಕೃತಿಕ ವಿಕೋಪದಿಂದ ನಲುಗುತ್ತಿದೆ. ಅದಕ್ಕೆ ಪರಿಸರ ನಾಶವೇ ಕಾರಣವೆಂದು ಭೂವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆದರೆ, ಇದೀಗ ಪಶ್ಚಿಮಘಟ್ಟದಲ್ಲಿ ಮಿನಿ ಜಲಾಶಯ ನಿರ್ಮಾಣ ಮಾಡುತ್ತೇವೆ ಎಂದು ಸಚಿವರು ನೀಡಿರುವ ಹೇಳಿಕೆಯಿಂದ ಕೊಡಗಿನಲ್ಲಿ ಆತಂಕ ಮನೆ ಮಾಡಿದೆ. ಈ ಯೋಜನೆಯು ಶಾಶ್ವತ ಜಲಪ್ರಳಯಕ್ಕೆ ಕಾರಣವಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಾರೆ.

‘ಗುಡ್ಡಗಾಡು ಪ್ರದೇಶವು ಜಲಾಶಯ ನಿರ್ಮಾಣಕ್ಕೆ ಸೂಕ್ತವಾದ ಸ್ಥಳವಲ್ಲ. ಕೊಡಗಿನ ಹಾರಂಗಿ ಜಲಾಶಯದ ಹಿನ್ನೀರು ಪ್ರತಿವರ್ಷವೂ ಸಾಕಷ್ಟು ಸಮಸ್ಯೆ ತಂದೊಡ್ಡುತ್ತಿದೆ. ಈ ಜಲಾಶಯದ ಹಿನ್ನೀರು 2018ರಲ್ಲಿ ಆವರಿಸಿ, ಬೆಟ್ಟಗಳು ಸ್ಫೋಟಗೊಂಡಿದ್ದವು. ಹಿನ್ನೀರು ವ್ಯಾಪ್ತಿಯ 20 ಹಳ್ಳಿಗಳಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಜಲಾಶಯದ ನಿರ್ವಹಣೆಯೇ ಸರಿಯಾಗಿ ನಡೆಯುತ್ತಿಲ್ಲ. ನಾಲ್ಕು ವರ್ಷದಿಂದ ಹೋರಾಟ ನಡೆಸುತ್ತಿದ್ದೇನೆ. ಕೊಡಗಿನದ್ದು ಮೆದು ಮಣ್ಣು. ತೇವಾಂಶ ಹೆಚ್ಚಾದರೆ ಭೂಕುಸಿತವಾಗಲಿದೆ. ಮತ್ತೆ ಜಲಾಶಯ ನಿರ್ಮಿಸಿದರೆ, ದುರಂತಗಳ ಸರಮಾಲೆ ಆರಂಭಗೊಳ್ಳಲಿದೆ’ ಎಂದು ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು.ನಾಚಪ್ಪ ಆತಂಕ ವ್ಯಕ್ತಪಡಿಸುತ್ತಾರೆ.

‘ಕಾಫಿ ತೋಟಕ್ಕೆ ಬೇಸಿಗೆಯಲ್ಲಿ ಸ್ಪಿಂಕ್ಲರ್‌ ಮೂಲಕ ನೀರು ಹಾಯಿಸಲು ಬೆಟ್ಟದ ಮೇಲ್ಭಾಗದಲ್ಲಿ ಕಾಫಿ ಬೆಳೆಗಾರರಲ್ಲಿ ಹಲವರು ಕೆರೆ ನಿರ್ಮಿಸಿದ್ದರು. ಮೂರು ವರ್ಷಗಳ ಹಿಂದೆ ಮಳೆ ಹೆಚ್ಚಾಗಿ, ಕೆರೆಗಳು ಕುಸಿದು ಬೆಟ್ಟವೇ ಸ್ಫೋಟಗೊಂಡಿದ್ದವು. ತೋಟಕ್ಕಾಗಿ ಬೆಟ್ಟದ ಮೇಲೆ ಕೆರೆ ನಿರ್ಮಿಸಿದ್ದು ದುರಂತಕ್ಕೆ ಕಾರಣವೆಂದು ಭೂವಿಜ್ಞಾನಿಗಳೂ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಮಿನಿ ಜಲಾಶಯ ನಿರ್ಮಿಸಿದರೆ ಕಥೆ ಏನಾಗಬಹುದು ಊಹಿಸಿ? ಯಾವುದೇ ಕಾರಣಕ್ಕೂ ಸರ್ಕಾರವು ಈ ಪ್ರಯತ್ನಕ್ಕೆ ಕೈಹಾಕಬಾರದು’ ಎಂದು ಪರಿಸರವಾದಿ ರವಿ ಎಚ್ಚರಿಸುತ್ತಾರೆ.

‘ಪರಿಸರ ನಾಶದಿಂದ ಇಲ್ಲಿನ ಅರಣ್ಯ ಪ್ರದೇಶವು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿವೆ. ಭೂಸವಕಳಿ ಹೆಚ್ಚಾಗಿದೆ. ಅಭಿವೃದ್ಧಿ, ಜನವಸತಿ, ವಾಣಿಜ್ಯ ಬೆಳೆಗಾಗಿ ಅರಣ್ಯಗಳು ಕರಗಿ ಹೋಗುತ್ತಿವೆ’ ಎಂದು ಆತಂಕದಿಂದ ನುಡಿಯುತ್ತಾರೆ.

‘ಪರಿಸರದ ಜೀವವೈವಿಧ್ಯಕ್ಕೆ ಧಕ್ಕೆ’

‘ಮೀಸಲು ಅರಣ್ಯ, ರಕ್ಷಿತಾರಣ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಬಾರದು’ ಎಂದು ಮಾಧವ ಗಾಡ್ಗೀಳ್ ಸಮಿತಿಯ ವರದಿ ಸ್ಪಷ್ಟವಾಗಿ ಹೇಳಿದೆ. ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡರೆ ಪರಿಸರ ಅಸಮತೋಲನ ಉಂಟಾಗಿ ಭವಿಷ್ಯದಲ್ಲಿ ಅಪಾರ ನಷ್ಟ ಉಂಟಾಗುವ ಸಾಮಾನ್ಯ ಪರಿಜ್ಞಾನ ಯಾವಾಗ ಜಾಗೃತವಾಗುತ್ತದೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ’ ಎನ್ನುತ್ತಾರೆ ಪರಿಸರ ತಜ್ಞ, ನಿವೃತ್ತ ಪ್ರಾಧ್ಯಾಪಕ ಡಾ. ದೇವಿಪ್ರಸಾದ್.

ಕಿಂಡಿ ಅಣೆಕಟ್ಟೆಯಿಂದ ಭೂಮಿ ಮುಳುಗಡೆ ಆಗುವುದಿಲ್ಲ ಎಂಬುದು ಮೇಲ್ನೋಟದ ಸಮರ್ಥನೆ. ಆದರೆ, ಅಣೆಕಟ್ಟೆ ನಿರ್ಮಿಸುವಾಗ ಅಲ್ಲಿ ಜೆಸಿಬಿ ಯಂತ್ರಗಳು ಕೆಲಸ ಮಾಡುತ್ತವೆ. ರಸ್ತೆ ನಿರ್ಮಾಣವಾಗುತ್ತದೆ. ಕಲ್ಲುಗಳಿದ್ದರೆ ಅವುಗಳನ್ನು ಸ್ಫೋಟಿಸಬೇಕಾಗುತ್ತದೆ. ಇದು ಭವಿಷ್ಯದಲ್ಲಿ ಭೂಕುಸಿತಕ್ಕೆ ಕಾರಣವಾಗಬಹುದು. ಒಂದು ಅಣೆಕಟ್ಟೆ ಕಟ್ಟುವಾಗ ಆ ಜಾಗದ ಸುತ್ತಲಿನ
ಎಷ್ಟೋ ಹೆಕ್ಟೇರ್‌ ಪ್ರದೇಶದ ಕಾಡುಪ್ರಾಣಿಗಳು, ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

‘ಪಶ್ಚಿಮಘಟ್ಟಕ್ಕೆ ಮಾರಕ’

‘ಸಕಾರಾತ್ಮಕ ಅಂಶ ನೋಡಿದರೆ ಸಾಲದು ನಕಾರಾತ್ಮಕ ಸಂಗತಿಗಳನ್ನು ನೋಡಬೇಕು. ನಾಲ್ಕೈದು ವರ್ಷಗಳಲ್ಲಿ ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಆಗಿರುವ ಪ್ರಾಕೃತಿಕ ವಿಕೋಪ ಗಮನಿಸಿದರೆ ಪಶ್ಚಿಮಘಟ್ಟಕ್ಕೆ ಈ ಯೋಜನೆ ಪೂರಕವಲ್ಲ, ಮಾರಕವಾಗಿದೆ. ಪಶ್ಚಿಮಘಟ್ಟದ ಮಣ್ಣಿನ ಮೇಲ್ಮೈಪದರ ವಿವಿಧ ಕಾಮಗಾರಿ, ಯೋಜನೆಗಳಿಂದಈಗಾಗಲೇ ಸಡಿಲಗೊಂಡಿದೆ. ಇದರಿಂದಲೇ ಭೂಕುಸಿತ ಆಗುತ್ತಿದೆ. ಇದೇ ಸ್ಥಳದಲ್ಲಿ ಮತ್ತೆ ಕಿಂಡಿ ಅಣೆಕಟ್ಟೆ ನಿರ್ಮಿಸಿದರೆ ಮಣ್ಣು ಸಡಿಲುಗೊಂಡು ಇನ್ನಷ್ಟು ಭೂ ಕುಸಿತಕ್ಕೆ ಕಾರಣವಾಗಬಹುದು’ ಎಂದು ಪರಿಸರ ತಜ್ಞ ದಿನೇಶ ಹೊಳ್ಳ ಹೇಳಿದ್ದಾರೆ.

ಜನರಿಗೆ ನಿಖರವಾದ ಮಾಹಿತಿ ಕೊಡಿ

‘ಪಶ್ಚಿಮ ಘಟ್ಟವೆಂಬುದು ವಿಶಾಲವಾದ ಪ್ರದೇಶ. ಕಿರು ಅಣೆಕಟ್ಟೆಗಳನ್ನು ಅದರ ಮೇಲ್ಭಾಗದಲ್ಲಿ, ಮಧ್ಯಭಾಗದಲ್ಲಿ ಅಥವಾ ತಳಭಾಗದಲ್ಲಿ, ಹೀಗೆ ಎಲ್ಲಿ ನಿರ್ಮಿಸಲಾಗುತ್ತದೆ ಎಂದು ನಿಖರವಾಗಿ ತಿಳಿಸಬೇಕು. ಅಕ್ಷಾಂಶ, ರೇಖಾಂಶಗಳನ್ನು ತಿಳಿಸಿದರೆ ಯೋಜನಾ ಪ್ರದೇಶದ ಬಗ್ಗೆ ಜನರಿಗೆ ಸ್ಪಷ್ಟವಾದ ಚಿತ್ರಣ ಸಿಕ್ಕಿ, ಪಾರದರ್ಶಕತೆ ಮೂಡುತ್ತದೆ. ಒಂದುವೇಳೆ, ಕಾಮಗಾರಿಯ ಪ್ರದೇಶವನ್ನು ಬದಲಿಸಿದರೆ ಪ್ರಶ್ನಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯನಿವೃತ್ತ ಹಿರಿಯ ವಿಜ್ಞಾನಿ ಡಾ.ಜಿ.ವಿ.ಹೆಗಡೆ.

‘ಕಿರು ಅಣೆಕಟ್ಟೆಗಳನ್ನು ನಿರ್ಮಿಸುವ ಪ್ರದೇಶದಲ್ಲಿ ನೀರು ಸಂಗ್ರಹವಾಗಲು ಕನಿಷ್ಠ 500 ಮೀಟರ್ ನೇರವಾದ ಜಾಗ ಬೇಕಾಗುತ್ತದೆ. ಬಯಲುಸೀಮೆಯಲ್ಲಿ ಇಂಥ ಭೂ ಪ್ರದೇಶಗಳಿವೆ. ಪಶ್ಚಿಮ ಘಟ್ಟದಲ್ಲಿ ಕಡಿಮೆಯಿವೆ.50–60 ಡಿಗ್ರಿಗಳಷ್ಟು ಇಳಿಜಾರಾದ ಪ್ರದೇಶದಲ್ಲಿ ಜಲಾಶಯ ನಿರ್ಮಾಣಕ್ಕೆ ಯೋಗ್ಯವಾದ ಸ್ಥಳವನ್ನು ಮುಂಚಿತವಾಗಿಯೇ ಗುರುತಿಸಬೇಕು. ಇಲ್ಲಿ ಮೂರು– ನಾಲ್ಕು ಮೀಟರ್ ನೀರು ಸಂಗ್ರಹಿಸಲು ಹಲವು ಕಿಲೋಮೀಟರ್ ದೂರದಿಂದ ಕಟ್ಟೆ ನಿರ್ಮಿಸುವ ಅಗತ್ಯವಿದೆ. ಆಗ ಅದು ಕಿಂಡಿ ಅಣೆಕಟ್ಟೆಯ ಬದಲು ಜಲಾಶಯವೇ ಆಗುತ್ತದೆ’ ಎಂದು ಅವರು ವಿವರಿಸುತ್ತಾರೆ.

‘ಸುಮಾರು 30 ಅಡಿ ಅಗಲದ ಕಿರು ಅಣೆಕಟ್ಟೆ ನಿರ್ಮಾಣದ ಕಾಮಗಾರಿಯು ಅಷ್ಟೇ ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ಅದರ ಎರಡೂ ತುದಿಗಳಲ್ಲಿ ಎರಡು ಮೂರು ಮೀಟರ್ ಗುಡ್ಡದ ಒಳಗೆ ಕಾಂಕ್ರೀಟ್, ಗೋಡೆ ನಿರ್ಮಾಣ ಮಾಡಬೇಕಾಗುತ್ತದೆ. ಹಾಗಾಗಿ ಕಾಮಗಾರಿಯ ಇತರ ಪರಿಣಾಮಗಳು ಹೆಚ್ಚಿರುತ್ತವೆ’ ಎಂದು ಅವರು ಹೇಳುತ್ತಾರೆ.

‘ಗಟ್ಟಿಯಾದ ಶಿಲೆಗಳಿದ್ದಲ್ಲಿ ಸಮಸ್ಯೆಯಿಲ್ಲ. ಆದರೆ, ಜೌಗು ಮಣ್ಣಿರುವಲ್ಲಿ ಗುಡ್ಡವನ್ನು ಕಡಿದರೆ ಭೂಕುಸಿತ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಒಂದುವೇಳೆ, ಕಿರು ಜಲಾಶಯಗಳನ್ನು ಅಂತರ್ಜಲ ಹೆಚ್ಚಿಸುವ ಸಲುವಾಗಿ ನಿರ್ಮಿಸುವುದಾದರೆ, ಮೇಲ್ಪದರದಲ್ಲೇ ಗಟ್ಟಿ ಶಿಲೆಗಳು ಸಿಕ್ಕಿದರೆ ಪ್ರಯೋಜನವಿಲ್ಲ. ಕಾಮಗಾರಿಗೆ ಪೂರಕವಾಗಿ ರಸ್ತೆ ನಿರ್ಮಾಣ, ಮರ ಕಡಿಯುವುದು, ಮಣ್ಣು ತೆರವು ಮುಂತಾದವುಗಳನ್ನು ಸೂಕ್ಷ್ಮ ಪ್ರದೇಶದಲ್ಲಿ ಮಾಡಬೇಕಾಗುತ್ತದೆ. ಇದು ಸಮಸ್ಯೆ ತರಬಲ್ಲದು’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

‘ಪಶ್ಚಿಮ ಘಟ್ಟದಿಂದ ಹರಿದು ಸಮುದ್ರ ಸೇರುವ ಕೆಸರುಮಿಶ್ರಿತ ನೀರಿನಲ್ಲಿ, ಸಮುದ್ರದ ಜೀವಿಗಳಿಗೆ ಬೇಕಾದ ಆಹಾರಗಳಿರುತ್ತವೆ. ಸಮುದ್ರದ ಉಪ್ಪು ನೀರನ್ನು ಹಿಮ್ಮೆಟ್ಟಲು ಸಿಹಿ ನೀರಿನ ಅಗತ್ಯವಿದೆ. ನೈಸರ್ಗಿಕವಾಗಿ ಹರಿಯುವ ನೀರನ್ನು ಅಣೆಕಟ್ಟೆಗಳ ನಿರ್ಮಾಣದ ಮೂಲಕ ತಡೆದಾಗ ಸಮುದ್ರದಲ್ಲಿ ಆಹಾರದ ಸರಪಳಿಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿರುತ್ತದೆ’ ಎಂಬ ಕಳವಳ ಅವರದ್ದಾಗಿದೆ.

‘ಇಷ್ಟೊಂದು ದೊಡ್ಡ ಯೋಜನೆಗಳನ್ನು ಜಾರಿಗೆ ತರುವ ಮೊದಲು ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಭೂ ಸ್ವರೂಪ, ಭೂ ಆಕೃತಿ ಮತ್ತು ಶಿಲಾ ಪದರಗಳಿಗೆ ತೊಂದರೆ ಆಗದಿರುವಂತೆ ಯೋಜನೆಯನ್ನು ಯಾವ ರೀತಿ ರೂಪಿಸಲಾಗುತ್ತದೆ ಎಂಬ ಮಾಹಿತಿ ತಿಳಿಸುವುದು ಸೂಕ್ತ’ ಎಂದು ಅನಿಸಿಕೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT