ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ | ಸತತ ಸೋಲು; ಕಾಂಗ್ರೆಸ್‌ ತಳಮಳ

Last Updated 20 ನವೆಂಬರ್ 2020, 3:35 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""
""

ಬಿಹಾರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತೇಜಸ್ವಿ ಯಾದವ್‌ ನೇತೃತ್ವದ ಮಹಾಮೈತ್ರಿಕೂಟವು ಅಧಿಕಾರಕ್ಕೆ ಬಾರದಂತಾಗಲು ಮಿತ್ರಪಕ್ಷ ಕಾಂಗ್ರೆಸ್‌ ಕಾರಣ ಎಂಬ ವಿಶ್ಲೇಷಣೆಯೊಂದು ವ್ಯಾಪಕವಾಗಿದೆ. ಜತೆಗೆ, ವಿವಿಧ ರಾಜ್ಯಗಳ 59 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 41ರಲ್ಲಿ ಗೆದ್ದಿದೆ. ಇದರಲ್ಲಿ 31 ಕ್ಷೇತ್ರಗಳನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿದೆ. ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಠೇವಣಿ ಕಳೆದುಕೊಂಡಿದೆ. ಇದು ಈ ದೇಶದ ಅತ್ಯಂತ ಹಳೆಯ ಮತ್ತು ಸುಮಾರು ಅರ್ಧ ಶತಮಾನ ಈ ದೇಶವನ್ನು ಆಳಿದ ಪಕ್ಷದ ಸೋಲಿನ ತೀರಾ ಇತ್ತೀಚಿನ ಕತೆ.

ನೆಹರೂ–ಗಾಂಧಿ ಕುಟುಂಬದ ಬಿಗಿ ಹಿಡಿತ ಎಂಬುದು ಕಾಂಗ್ರೆಸ್‌ ಪಕ್ಷದ ಮೂಲಭೂತ ಲಕ್ಷಣ. ಸ್ವಾತಂತ್ರ್ಯ ಬಂದ ಆರಂಭದಿಂದಲೇ ಅಧಿಕಾರಕ್ಕೆ ಬಂದು, ದೀರ್ಘ ಕಾಲ ಪಕ್ಷವು ಅಧಿಕಾರದಲ್ಲಿ ಇತ್ತು ಮತ್ತು ಈ ಕುಟುಂಬವು ಪಕ್ಷದ ನೇತೃತ್ವ ವಹಿಸಿತ್ತು ಎಂಬುದು ಇದಕ್ಕೆ ಕಾರಣ. ನೆಹರೂ–ಗಾಂಧಿ ಕುಟುಂಬದವರು ಚುಕ್ಕಾಣಿ ಹಿಡಿದಿಲ್ಲದ ದಿನಗಳಲ್ಲಿ ಪಕ್ಷದಲ್ಲಿ ಅರಾಜಕತೆ ಕಾಣಿಸಿಕೊಂಡಿತ್ತು ಎಂಬುದೂ ನಿಜ. ಹಾಗಾಗಿಯೇ, ಈ ಕುಟುಂಬ ಇಲ್ಲದೇ ಇದ್ದರೆ ಪಕ್ಷಕ್ಕೆ ನೆಲೆ–ಬೆಲೆ ಇಲ್ಲ ಎಂದು ಆ ಪಕ್ಷದ ಹಲವರು ಭಾವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಆದರೆ, ಈಗ ಆ ಕುಟುಂಬದ ನೇತೃತ್ವವೇ ಇದ್ದರೂ ಪಕ್ಷವು ಗೆಲುವಿನ ಹಳಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಇದುವೇ ಪಕ್ಷದೊಳಗೆ ಈಗ ಉಂಟಾಗಿರುವ ತಲ್ಲಣ, ತಳಮಳಗಳಿಗೆ ಕಾರಣ. ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಪ್ರತಿ ಬಾರಿಯೂ ಅತೃಪ್ತಿ, ಭಿನ್ನಮತ, ಪಕ್ಷಕ್ಕೆ ಪುನಶ್ಚೇತನದ ಅಗತ್ಯ ಮತ್ತು ನಾಯಕತ್ವ ಬದಲಾವಣೆಯ ಮಾತು ಪಕ್ಷದ ಒಳಗಿನವರಿಂದಲೇ ಕೇಳಿ ಬರುತ್ತಿದೆ. ಹೀಗೆ ಒತ್ತಾಯ ಮಾಡಿದವರ ವಿರುದ್ಧ ಪಕ್ಷದ ಒಂದು ಗುಂಪು ಮುಗಿಬಿದ್ದು ಅವರು ಮತ್ತೆ ಬಾಯಿ ತೆರೆಯದಂತೆ ಮಾಡುವುದು ಕೂಡ ಕಾಂಗ್ರೆಸ್‌ನ ಸಂಪ್ರದಾಯವೇ ಆಗಿಬಿಟ್ಟಿದೆ.

ಇಂತಹುದಕ್ಕೆ ಇತ್ತೀಚಿನ ಉದಾಹರಣೆ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಸಚಿವರಾಗಿದ್ದ ಹಿರಿಯ ಮುಖಂಡ ಕಪಿಲ್‌ ಸಿಬಲ್‌. ‘ಬಿಹಾರವಷ್ಟೇ ಅಲ್ಲ, ದೇಶದ ಯಾವುದೇ ಭಾಗದ ಜನರು ಕಾಂಗ್ರೆಸ್‌ ಪಕ್ಷವನ್ನು ಪರಿಣಾಮಕಾರಿ ಪರ್ಯಾಯ ಎಂದು ಭಾವಿಸಿಲ್ಲ’, ‘ಆರು ವರ್ಷದಲ್ಲಿ ಆತ್ಮಾವಲೋಕನ ಆಗಿಲ್ಲ, ಈಗ ಆಗಬಹುದು ಎಂಬ ಭರವಸೆ ಇರಿಸಿಕೊಳ್ಳುವುದು ಹೇಗೆ’ ಎಂದೂ ಅವರು ಹೇಳಿದ್ದಾರೆ. ತಮ್ಮ ನಿಲುವು ವ್ಯಕ್ತಪಡಿಸಲು ಪಕ್ಷದಲ್ಲಿ ಯಾವುದೇ ವೇದಿಕೆ ಇಲ್ಲದ ಕಾರಣ ಬಹಿರಂಗವಾಗಿ ಇದನ್ನು ಹೇಳಿಕೊಳ್ಳುತ್ತಿರುವುದಾಗಿಯೂ ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಹಿರಿಯ ಮುಖಂಡರಾದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ಸಿಬಲ್‌ ಮೇಲೆ ಮುಗಿಬಿದ್ದಿದ್ದಾರೆ. ‘ಸಿಬಲ್‌ ಅವರು ಬೇರೆ ಪಕ್ಷಕ್ಕೆ ಸೇರಬಹುದು ಅಥವಾ ಸ್ವಂತ ಪಕ್ಷ ಸ್ಥಾಪಿಸಬಹುದು’ ಎಂದೂ ಅವರ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.

ಆತ್ಮಾವಲೋಕನ ಮತ್ತು ನಾಯಕತ್ವ ಬದಲಾವಣೆಯ ವಿಚಾರವನ್ನು ಯಾರೇ ಎತ್ತಿದರೂ ಕಾಂಗ್ರೆಸ್‌ನ ಒಂದು ಗುಂಪು ಹೀಗೆಯೇ ಪ್ರತಿಕ್ರಿಯೆ ನೀಡುತ್ತಲೇ ಬಂದಿದೆ.

ಅಂಬಿಗನಿಲ್ಲದ ನಾವೆ

ಕಾಂಗ್ರೆಸ್‌ಗೆ ಈಗ ಪೂರ್ಣಾವಧಿ ಅಧ್ಯಕ್ಷರೇ ಇಲ್ಲ. ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರಿದ್ದಾರೆ. ರಾಹುಲ್‌ ಗಾಂಧಿ ಅವರು ಅಧ್ಯಕ್ಷ ಸ್ಥಾನ ಒಲ್ಲೆ ಎಂದಿದ್ದಾರೆ. ತಮ್ಮ ಕುಟುಂಬದ ಯಾರೂ ಈ ಸ್ಥಾನಕ್ಕೆ ಬರುವುದಿಲ್ಲ ಎಂದೂ ಹೇಳಿದ್ದಾರೆ. ಹಾಗಿದ್ದರೂ ಆಂತರಿಕ ಚುನಾವಣೆಯ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವೇ ಆಗಿಲ್ಲ. ಪಕ್ಷದ ಹುದ್ದೆಗಳಿಗೆ ನೇಮಕ, ಚುನಾವಣೆಯ ಕಾರ್ಯತಂತ್ರ ರೂಪಿಸುವಿಕೆ, ಪ್ರಚಾರ ಎಲ್ಲದರಲ್ಲಿಯೂ ರಾಹುಲ್‌ ಅವರೇ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ, ಪಕ್ಷದ ನಾಯಕತ್ವ ಯಾರ ಕೈಯಲ್ಲಿದೆ ಎಂಬ ಗೊಂದಲವೂ ಇದೆ.

***

ಚಿಂತೆ ಹೆಚ್ಚಿಸಿದ ಬಿಹಾರ

ಬಿಹಾರ ವಿಧಾನಸಭಾ ಚುನಾವಣೆಯು ಕಾಂಗ್ರೆಸ್‌ಗೆ ಹಲವು ರೀತಿಯಿಂದ ಮಹತ್ವದ್ದಾಗಿತ್ತು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷದೊಳಗೆ ಎದ್ದಿದ್ದ ಬಿರುಗಾಳಿ, ಕೇಂದ್ರದ ನಾಯಕತ್ವದಿಂದ ಬೇಸರಗೊಂಡ ಪಕ್ಷದ 20ಕ್ಕೂ ಹೆಚ್ಚು ಮುಖಂಡರು ಅಧ್ಯಕ್ಷೆ ಸೋನಿಯಾಗೆ ಪತ್ರ ಬರೆದ ಬೆಳವಣಿಗೆ ಮತ್ತು ಆ ಬಳಿಕ ಪಕ್ಷದಲ್ಲಿ ರಚನಾತ್ಮಕವಾಗಿ ಆದ ಬದಲಾವಣೆಗಳ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು.

ಆದರೆ, ಸ್ಪರ್ಧಿಸಿದ್ದ 70 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದದ್ದು 19 ಕ್ಷೇತ್ರಗಳನ್ನು ಮಾತ್ರ. ಕಳೆದ ಕೆಲವು ಚುನಾವಣೆಗಳಿಂದ ಕಾಂಗ್ರೆಸ್‌ ಇದೇ ಹಾದಿಯಲ್ಲಿದೆ. ಇದಕ್ಕೂ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 147 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 44 ಕ್ಷೇತ್ರಗಳನ್ನಷ್ಟೇ ಗೆದ್ದುಕೊಂಡಿತ್ತು. 2017ರಲ್ಲಿ ಉತ್ತರಪ್ರದೇಶದಲ್ಲಿ 114 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಏಳು ಕ್ಷೇತ್ರಗಳನ್ನಷ್ಟೇ ಗೆದ್ದುಕೊಂಡಿತ್ತು. ‘ಈ ರೀತಿಯ ಕೆಳಮುಖ ಸಾಧನೆಯಿಂದಾಗಿ ಮೈತ್ರಿಕೂಟದ ಶಕ್ತಿಯನ್ನು ಕಾಂಗ್ರೆಸ್ ಕುಂದಿಸುತ್ತಿದೆ’ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಬಿಹಾರದಲ್ಲಿ ಮಹಾಘಟಬಂಧನವು ಅಧಿಕಾರ ಹಿಡಿಯಲು ಸಾಧ್ಯವಾಗಿದ್ದಿದ್ದರೆ ಮುಂದಿನ ಕೆಲವು ಚುನಾವಣೆಗಳಿಗೆ ಯೋಜನೆ ರೂಪಿಸಲು ಕಾಂಗ್ರೆಸ್‌ಗೆ ಅನುಕೂಲವಾಗುತ್ತಿತ್ತು. ಆ ನಿರೀಕ್ಷೆಗಳು ಹುಸಿಯಾದವು. ‘ಬಿಹಾರದಲ್ಲಿ ಜಾತಿ ಆಧಾರದಲ್ಲಿ ಮತದಾನ ನಡೆಯುವುದು ಕಳೆದ ಕೆಲವು ಚುನಾವಣೆಗಳಲ್ಲಿ ಸ್ಪಷ್ಟಗೊಂಡಿದೆ. ಘಟಬಂಧನದಲ್ಲಿ ಕಾಂಗ್ರೆಸ್‌ನ ಪಾತ್ರ, ಬಿಜೆಪಿ ಅಥವಾ ಎನ್‌ಡಿಎದಿಂದ ವಿಮುಖರಾಗಿರುವ ಮೇಲ್ವರ್ಗದ ಮತಗಳನ್ನು ಸೆಳೆಯುವುದಾಗಿತ್ತು. ಆದರೆ ಕಾಂಗ್ರೆಸ್‌ಗೆ ಈ ವರ್ಗದ ಮತಗಳೂ ಬಂದಿಲ್ಲ’ ಎಂದು ವಿಶ್ಲೇಷಕರು ಹೇಳುತ್ತಾರೆ.

‘ಎಡಪಕ್ಷಗಳಿಗೆ ಇನ್ನಷ್ಟು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಿದ್ದರೆ ಬಿಹಾರದಲ್ಲಿ ಘಟಬಂಧನದ ಸಾಧನೆ ಇನ್ನೂ ಉತ್ತಮವಾಗಿರುತ್ತಿತ್ತು’ ಎಂದು ಸಿಪಿಎಂನ ನಾಯಕ ದೀಪಂಕರ್‌ ಭಟ್ಟಾಚಾರ್ಯ ಹೇಳಿದ್ದರು. ‘ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದರಿಂದ ಅಧಿಕಾರ ಕೈಗೆಟುಕಲಿಲ್ಲ’ ಎಂಬ ಧ್ವನಿ ಅವರ ಮಾತಿನಲ್ಲಿತ್ತು. ಮುಂದಿನ ಏಪ್ರಿಲ್‌– ಮೇ ವೇಳೆಗೆ ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಬಿಹಾರದ ಫಲಿತಾಂಶವು ಈ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್‌ನ ಚಿಂತೆಯನ್ನು ಹೆಚ್ಚಿಸಬಹುದು.

ಕೈಜಾರಿದ ಅಧಿಕಾರ

ಜ್ಯೋತಿರಾದಿತ್ಯ ಸಿಂಧಿಯಾ

2018ರಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ ನೇತೃತ್ವದ ಮೈತ್ರಿ ಕೂಟಕ್ಕೆ ಸರಳ ಬಹುಮತವನ್ನು ನೀಡಿದ್ದರು. ಆದರೆ ಆಂತರಿಕ ಕಲಹದಿಂದಾಗಿ 2020ರಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಬೇಕಾಯಿತು. ಮುಖ್ಯಮಂತ್ರಿ ಹುದ್ದೆಯ ಓಟದಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ, ಯಾವ ಹುದ್ದೆಯೂ ಸಿಗಲಿಲ್ಲ. ಒಂದು ವರ್ಷದವರೆಗೂ ಸುಮ್ಮನಿದ್ದ ಸಿಂಧಿಯಾ, ಆ ನಂತರ ಸರ್ಕಾರದ ವಿರುದ್ಧ ಬಂಡೆದ್ದರು, ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಜತೆಗೆ ಅವರ ಬೆಂಬಲಿಗ 22 ಶಾಸಕರೂ ರಾಜೀನಾಮೆ ನೀಡಿದರು. ‘ಯುವಕರಿಗೆ ಪಕ್ಷದಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿಲ್ಲ, ಪಕ್ಷನಿಷ್ಠರಿಗಿಂತ ಪರಿವಾರ ನಿಷ್ಠರಿಗೆ ಹೆಚ್ಚಿನ ಬೆಲೆ ನೀಡಲಾಗುತ್ತಿದೆ’ ಎಂಬೆಲ್ಲ ಆರೋಪಗಳು ಆಗ ಕೇಳಿಬಂದವು. ಅಂತೂ, ಕಮಲನಾಥ್‌ ನೇತೃತ್ವದ ಸರ್ಕಾರವು 15 ತಿಂಗಳಲ್ಲಿ ಪತನವಾಯಿತು. ರಾಜ್ಯದ ಅಧಿಕಾರದ ಚುಕ್ಕಾಣಿ ಮತ್ತೆ ಬಿಜೆಪಿಯ ಕೈಸೇರಿತು.

ಕಮಲನಾಥ್

ಬಂಡಾಯಕ್ಕೆ ತೇಪೆ?

ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿಗ ಕೆಲವು ಶಾಸಕರ ಬಂಡಾಯದಿಂದಾಗಿ ರಾಜಸ್ಥಾನದಲ್ಲೂ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳುವ ಹಂತದಲ್ಲಿತ್ತು.

ಸಚಿನ್‌ ಪೈಲಟ್

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಬಂಡೆದ್ದ ಸಚಿನ್‌ ಪೈಲಟ್‌, ತನ್ನ ಬೆಂಬಲಿಗ ಶಾಸಕರ ಜತೆಗೆ ಕೆಲವು ದಿನ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಆದರೆ, ಪ್ರಿಯಾಂಕಾ ಹಾಗೂ ರಾಹುಲ್‌ ಗಾಂಧಿ ಅವರು ಸಕಾಲದಲ್ಲಿ ಮಧ್ಯಪ್ರವೇಶ ಮಾಡಿ ಸಚಿನ್‌ ಅವರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಸರ್ಕಾರ ಉಳಿಯಿತು.

ಆದರೆ, ವಿಧಾನಸಭೆಯ ಅಧಿವೇಶನದಲ್ಲಿ ಆ ನಂತರ ಗೆಹ್ಲೋಟ್‌ ಹಾಗೂ ಸಚಿನ್‌ ಮಧ್ಯೆ ನಡೆದ ಮಾತಿನ ಚಕಮಕಿಯು, ‘ಅಸಮಾಧಾನ ಪೂರ್ತಿ ಶಮನವಾಗಿಲ್ಲ’ ಎಂಬುದನ್ನು ಸೂಚಿಸುವಂತಿತ್ತು.

ಅಶೋಕ್ ಗೆಹ್ಲೋಟ್

****

ಮುಖಂಡರ ಮಾತಿನ ವರಸೆ

ಕಾಂಗ್ರೆಸ್‌ನ ಈಗಿನ ಸ್ಥಿತಿಗೆ ಕಾರಣ ಏನು ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ, ಆ ಕಾರಣಗಳನ್ನು ಗುರುತಿಸುವ ಇಚ್ಛಾಶಕ್ತಿಯನ್ನು ಪಕ್ಷ ತೋರಿಸಬೇಕು. ಇವುಗಳನ್ನು ಚರ್ಚಿಸಲು ಪಕ್ಷದ ನಾಯಕತ್ವವು ಯತ್ನಿಸುತ್ತಿಲ್ಲ. ನಾನು ಕಾಂಗ್ರೆಸ್‌ನವನು, ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ. ಆದರೆ, ಪಕ್ಷದ ಅಧಿಕಾರಶ್ರೇಣಿ ಬದಲಾಗುತ್ತದೆ ಎಂಬ ಭರವಸೆ ಇದೆ.

ಕಪಿಲ್ ಸಿಬಲ್

ಕಪಿಲ್ ಸಿಬಲ್,ಕಾಂಗ್ರೆಸ್‌ ಮುಖಂಡ

*******
ಕಪಿಲ್ ಸಿಬಲ್ ಅವರು ಪಕ್ಷದ ಆಂತರಿಕ ವಿಚಾರಗಳನ್ನು ಮಾಧ್ಯಮಗಳ ಮುಂದೆ ಹೇಳುವ ಅವಶ್ಯಕತೆ ಇರಲಿಲ್ಲ. ಅವರು ಹಾಗೆ ಮಾಡುವ ಮೂಲಕ ಪಕ್ಷದ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದಾರೆ. ಪ್ರತಿ ಬಾರಿ ಚುನಾವಣೆಗಳಲ್ಲಿ ಸೋತಾಗಲೂ ನಮ್ಮ ಸಿದ್ಧಾಂತ, ತತ್ವ, ನೀತಿ ಮತ್ತು ಪಕ್ಷದ ನಾಯಕತ್ವದ ಮೇಲಿನ ವಿಶ್ವಾಸದ ಕಾರಣ ಮೇಲಕ್ಕೆ ಎದ್ದು ಬಂದಿದ್ದೇವೆ. ಪ್ರತಿ ಬಾರಿ ನಾವು ಸುಧಾರಿಸಿಕೊಂಡಿದ್ದೇವೆ. ಸೋನಿಯಾ ಅವರ ನಾಯಕತ್ವದಲ್ಲಿ ಯುಪಿಎ ಸರ್ಕಾರ ರಚಿಸಿದ್ದೇವೆ. ಈಗಲೂ ಸೋಲಿನಿಂದ ಹೊರಬರುತ್ತೇವೆ

ಅಶೋಕ್ ಗೆಹ್ಲೋಟ್

-ಅಶೋಕ್ ಗೆಹ್ಲೋಟ್,ರಾಜಸ್ಥಾನ ಮುಖ್ಯಮಂತ್ರಿ

************
ಕಾಂಗ್ರೆಸ್‌ನಲ್ಲಿ ಸಂಘಟನಾಶಕ್ತಿಯ ಕೊರತೆ ಇದೆ ಎಂಬುದನ್ನು ಬಿಹಾರ ಚುನಾವಣೆ ಮತ್ತು ಬೇರೆ ರಾಜ್ಯಗಳ ಉಪಚುನಾವಣೆಯ ಫಲಿತಾಂಶ ಸಾಬೀತುಮಾಡಿದೆ. ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಕರ್ನಾಟಕ ಉಪಚುನಾವಣೆಯ ಫಲಿತಾಂಶವು ಕಳವಳಕಾರಿಯಾಗಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ತೀರಾ ದುರ್ಬಲವಾಗಿದೆ ಎಂಬುದನ್ನು ಈ ಫಲಿತಾಂಶವು ತೋರಿಸುತ್ತದೆ. ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆ ಇತ್ತು. ಗೆಲುವಿಗೆ ಅಷ್ಟು ಹತ್ತಿರದಲ್ಲಿ ಇದ್ದರೂ ನಾವು ಸೋತಿದ್ದು ಏಕೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆದರೆ, ಒಂದೆರಡು ವರ್ಷಗಳ ಹಿಂದೆಯಷ್ಟೇ ಕಾಂಗ್ರೆಸ್‌ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಮತ್ತು ಜಾರ್ಖಂಡ್‌ನಲ್ಲಿ ಗೆಲುವು ಸಾಧಿಸಿತ್ತು. ಸಂಘಟನಾ ಶಕ್ತಿ ಇದ್ದರೆ ಸಿಪಿಎಂಎಲ್‌ ಮತ್ತು ಎಐಎಂಐಎಂನಂತಹ ಸಣ್ಣ ಪಕ್ಷಗಳೂ ಉತ್ತಮ ಸಾಧನೆ ಮಾಡಬಲ್ಲವು ಎಂಬುದು ಸಾಬೀತಾಗಿದೆ

ಪಿ.ಚಿದಂಬರಂ,ಕಾಂಗ್ರೆಸ್ ಮುಖಂಡ

ಪಿ.ಚಿದಂಬರಂ,ಕಾಂಗ್ರೆಸ್ ಮುಖಂಡ

*******

ತಾವು ಸರಿಯಾದ ಪಕ್ಷದಲ್ಲಿ ಇಲ್ಲ ಎಂದು ಕೆಲವು ನಾಯಕರಿಗೆ ಅನಿಸುತ್ತಿದ್ದರೆ ಅವರು ಬೇರೆ ಪಕ್ಷ ಸ್ಥಾಪಿಸಲಿ ಅಥವಾ ಪ್ರಗತಿಪರ ಮತ್ತು ತಮ್ಮ ಹಿತಾಸಕ್ತಿಗೆ ಸೂಕ್ತವಾದ ಬೇರೆ ಪಕ್ಷವನ್ನು ಸೇರಲಿ. ಆದರೆ ಮುಜುಗರಕ್ಕೆ ಕಾರಣವಾಗುವ ಇಂತಹ ಚಟುವಟಿಕೆಗಳಿಗೆ ಕಾರಣವಾಗಬಾರದು. ಇದರಿಂದ ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ. ಈ ಹಿರಿಯ ನಾಯಕರು, ಗಾಂಧಿ ಕುಟುಂಬದ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರ ಸಮಸ್ಯೆಗಳನ್ನು ಪಕ್ಷದ ವರಿಷ್ಠರ ಮುಂದೆಯೇ ಇಡಬಹುದಿತ್ತು. ಪಕ್ಷದ ಪುನರ್‌ರಚನೆಯ ಬಗ್ಗೆ ಈ ನಾಯಕರು ಅಷ್ಟು ಗಂಭೀರವಾಗಿ ಇರುವುದೇ ಆದರೆ, ಬಿಹಾರ ಚುನಾವಣೆಯ ವೇಳೆ ಎಲ್ಲಿ ಹೋಗಿದ್ದರು. ಬಿಹಾರ ಚುನಾವಣೆಯಲ್ಲಿ ಅವರು ಪಕ್ಷಕ್ಕಾಗಿ ದುಡಿಯಬೇಕಿತ್ತು

ಅಧಿರ್ ರಂಜನ್ ಚೌಧರಿ

ಅಧಿರ್ ರಂಜನ್ ಚೌಧರಿ,ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ

**********
ನಮ್ಮ ಪಕ್ಷದ ಮುಂದಾಳುಗಳು ಯಾರು ಎಂಬುದು ನಮಗೆ ಗೊತ್ತಿದೆ ಮತ್ತು ಅವರನ್ನು ನಾವು ಅನುಸರಿಸುತ್ತಿದ್ದೇವೆ ಎಂಬುದು ವಾಸ್ತವ. ನಮಗೆ ಮುಂದಾಳುವೇ ಇಲ್ಲ ಎಂದು ಕೆಲವರು ಭಾವಿಸುವುದಾದರೆ, ಪಕ್ಷ ಏನು ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಅರ್ಥ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಮ್ಮ ನಾಯಕರು. ಅವರು ಪಕ್ಷವನ್ನು ಮುನ್ನಡೆಸುತ್ತಿಲ್ಲ ಎಂದು ಕೆಲವರು ಭಾವಿಸುವುದಾದರೆ, ಅಂತಹವರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ.

ಸಲ್ಮಾನ್‌ ಖುರ್ಷಿದ್

ಸಲ್ಮಾನ್‌ ಖುರ್ಷಿದ್‌,ಕಾಂಗ್ರೆಸ್ ಮುಖಂಡ

****
(ವರದಿ: ಹಮೀದ್.ಕೆ, ಉದಯ.ಯು, ಜಯಸಿಂಹ. ಆರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT