ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ| ಕೋವಿಡ್‌ ಎರಡನೇ ಅಲೆ

ಯುರೋಪ್‌, ಅಮೆರಿಕದಲ್ಲಿ ಕೊರೊನಾ ಸೋಂಕು ಹೆಚ್ಚಳ: ಕೆಲವೆಡೆ ಮತ್ತೆ ಲಾಕ್‌ಡೌನ್‌ ಹೇರಿಕೆ
Last Updated 1 ನವೆಂಬರ್ 2020, 19:41 IST
ಅಕ್ಷರ ಗಾತ್ರ

ಕೋವಿಡ್‌ನ ಎರಡನೇ ಅಲೆ ಆರಂಭವಾಗಿದೆಯೇ?

ಈ ವರ್ಷದ ಆರಂಭದಲ್ಲೇ ಈ ಸೋಂಕಿನಿಂದ ನಲುಗಿದ್ದ, ಅತಿಯಾದ ಸಾವು ನೋವುಗಳನ್ನು ಕಂಡಿದ್ದ ಅನೇಕ ರಾಷ್ಟ್ರಗಳಲ್ಲಿ ಸೋಂಕಿನ ತೀವ್ರತೆ ಪುನಃ ಹೆಚ್ಚುತ್ತಿದೆ. ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲಿ ಹಗಲಿರುಳೆನ್ನದೆ ರೋಗಿಗಳಿಗೆ ಚಿಕಿತ್ಸೆ ನೀಡಿ ಹೈರಾಣಾಗಿದ್ದ ವೈದ್ಯಕೀಯ ಸಿಬ್ಬಂದಿ ನಿಟ್ಟುಸಿರು ಬಿಡುವಷ್ಟರಲ್ಲಿ, ರೋಗಿಗಳು ಪುನಃ ಆಸ್ಪತ್ರೆಯತ್ತ ಧಾವಿಸಿಬರುತ್ತಿದ್ದಾರೆ. ಖಾಲಿಯಾಗಿದ್ದ ತೀವ್ರನಿಗಾ ಘಟಕಗಳು (ಐಸಿಯು) ತುಂಬುತ್ತಿವೆ. ಅಮೆರಿಕ, ಫ್ರಾನ್ಸ್‌, ರಷ್ಯಾದಲ್ಲಿ ಈ ಬೆಳವಣಿಗೆಗಳು ಕಾಣಿಸುತ್ತಿರುವುದು ಕೋವಿಡ್‌ನ ಎರಡನೇ ಅಲೆ ಅಪ್ಪಳಿಸುತ್ತಿರುವ ಸೂಚನೆ ಎಂದು ಹೇಳಲಾಗುತ್ತಿದೆ.

ಮೊದಲ ಅಲೆಯ ಹೊಡೆತದಿಂದ ನಲುಗಿದ್ದ ಕೆಲವು ರಾಷ್ಟ್ರಗಳು ಪುನಃ ಲಾಕ್‌ಡೌನ್‌ ಘೋಷಿಸಲು ಮುಂದಾಗಿವೆ. ಕೆಲವು ಕಡೆ ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಲಾಕ್‌ಡೌನ್‌ಗೆ ಹೆದರಿ ನಗರಗಳಿಂದ ಜನರು ಹಳ್ಳಿಗಳ ಕಡೆಗೆ ಧಾವಿಸುತ್ತಿದ್ದಾರೆ. ಇದರಿಂದಾಗಿ ನೂರಾರು ಕಿಲೋಮೀಟರ್‌ ಟ್ರಾಫಿಕ್‌ ಜಾಮ್‌ ಆಗಿರುವುದು ವರದಿಯಾಗಿದೆ. ಇದರ ಜತೆಗೆ ಪುನಃ ಲಾಕ್‌ಡೌನ್‌ ಜಾರಿ ಮಾಡುವುದಕ್ಕೆ ಜನರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.

ಮತ್ತೊಮ್ಮೆ ಲಾಕ್‌ಡೌನ್‌

ಕೋವಿಡ್‌ ರೋಗಿಗಳ ಸಂಖ್ಯೆ ಈಚಿನ ದಿನಗಳಲ್ಲಿ ಏರಿಕೆಯಾಗುತ್ತಿರುವುದನ್ನು ಗಮನಿಸಿದ ಫ್ರಾನ್ಸ್, ಮತ್ತೆ ಲಾಕ್‌ಡೌನ್‌ ಘೋಷಿಸಿದೆ. ಯುರೋಪ್‌ನ ಇತರ ಕೆಲವು ರಾಷ್ಟ್ರಗಳು ಇಂಥ ನಿರ್ಧಾರ ಕೈಗೊಳ್ಳುವ ಹಾದಿಯಲ್ಲಿವೆ.

l ಯುರೋಪ್‌ನ 14 ರಾಷ್ಟ್ರಗಳಲ್ಲಿ ಕೊರೊನಾದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳ

l ಹಿಂದಿನ ಏಳು ದಿನಗಳಿಗೆ ಹೋಲಿಸಿದರೆ, ಬೆಲ್ಜಿಯಂನಲ್ಲಿ ಕಳೆದ ವಾರ ಸೋಂಕಿತರ ಪ್ರಮಾಣವು ಶೇ 41ರಷ್ಟು ಏರಿಕೆಯಾಗಿರುವುದರಿಂದ ಅಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಅತ್ಯಗತ್ಯವಲ್ಲದ ವ್ಯಾಪಾರ ವಹಿವಾಟಿಗೆ ನಿಷೇಧ ಹೇರಲಾಗಿದೆ

l ನವೆಂಬರ್‌ 20ರವರೆಗೆ ದೇಶದಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಲು ಜೆಕ್‌ ಗಣರಾಜ್ಯದ ಜನಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಐಸ್‌ಲ್ಯಾಂಡ್‌ನಲ್ಲಿ ಬಾರ್‌, ನೈಟ್‌ಕ್ಲಬ್‌ಗಳನ್ನು ಮುಚ್ಚಲಾಗಿದೆ. 10ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ಸೂಚಿಸಲಾಗಿದೆ

l ಐರ್ಲೆಂಡ್‌, ಜನರ ಸಂಚಾರದ ಮೇಲೆ ನಿರ್ಬಂಧ ಹೇರಿದೆ, ಬೇರೆಯವರ ಮನೆಗೆ ಭೇಟಿನೀಡದಂತೆ ನಾಗರಿಕರಿಗೆ ಸೂಚಿಸಿದೆ

l ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌‌ ದೇಶದಲ್ಲಿ ಪುನಃ ನಾಲ್ಕು ವಾರಗಳ ಲಾಕ್‌ಡೌನ್‌ ಘೋಷಿಸಿದ್ದಾರೆ. ಮಧ್ಯ ಇಂಗ್ಲೆಂಡ್‌ನ ನಾಟಿಂಗ್‌ಹಾಮ್‌ನಲ್ಲಿ ಶುಕ್ರವಾರದಿಂದ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ

l ದೇಶದಲ್ಲಿ ಲಾಕ್‌ಡೌನ್‌ ಜಾರಿ ಮಾಡುವ ಉದ್ದೇಶ ಇಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹೇಳಿದ್ದಾರೆ. ಅತಿ ಹೆಚ್ಚು ಕೊರೊನಾ ಸೋಂಕಿತ ಜನರಿರುವ ರಾಷ್ಟ್ರಗಳಲ್ಲಿ ರಷ್ಯಾ ನಾಲ್ಕನೇ ಸ್ಥಾನದಲ್ಲಿದೆ. ಮಾತ್ರವಲ್ಲದೆ ಅಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯೂ ಜನರನ್ನು ತೀವ್ರವಾಗಿ ಕಾಡುತ್ತಿದೆ

l ದೇಶದ ಎಲ್ಲಾ 54 ಲಕ್ಷ ಜನರನ್ನು ಆ್ಯಂಟಿಜೆನ್‌ ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಸ್ಲೊವಾಕಿಯಾ ಆರಂಭಿಸಿದೆ. ಬೇರೆ ಯಾವ ರಾಷ್ಟ್ರವೂ ಈವರೆಗೆ ಇಂಥ ಕ್ರಮ ಕೈಗೊಂಡಿಲ್ಲ

ಚೀನಾ– ಅಮೆರಿಕ ತದ್ವಿರುದ್ಧ

ಕಳೆದ ಕೆಲವು ವರ್ಷಗಳಿಂದ ವಾಣಿಜ್ಯ ಸಮರದಲ್ಲಿ ತೊಡಗಿಕೊಂಡಿರುವ ಚೀನಾ ಮತ್ತು ಅಮೆರಿಕ, ಕೋವಿಡ್‌ ವಿಚಾರದಲ್ಲೂ ಪರಸ್ಪರರ ಮೇಲೆ ಆರೋಪಗಳನ್ನು ಮಾಡುತ್ತಾ ಬಂದಿವೆ. ಕೋವಿಡ್‌ನಿಂದ ಜಗತ್ತಿನಲ್ಲೇ ಅತಿ ಹೆಚ್ಚು ಹಾನಿ ಅನುಭವಿಸಿರುವ ರಾಷ್ಟ್ರ ಅಮೆರಿಕ. ‘ಈ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಲಾಕ್‌ಡೌನ್‌ ಮೂಲಕ ಆರ್ಥಿಕತೆಗೆ ಹಾನಿ ಮಾಡಿಕೊಳ್ಳಲು ನಾವು ಸಿದ್ಧರಿಲ್ಲ’ ಎಂದು ಅಮೆರಿಕ ಹೇಳಿದೆ. ಅಮೆರಿಕದಲ್ಲಿ ಕೊರೊನಾದ ಮೂರನೇ ಅಲೆ ಕಾಣಿಸಿಕೊಂಡಿದ್ದು, ಸೋಂಕನ್ನು ನಿಯಂತ್ರಿಸಲು ಅದು ಸಾಕಷ್ಟು ಹೆಣಗಾಡುತ್ತಿದೆ.

‘ನಾವು ಸೋಂಕನ್ನು ನಿಯಂತ್ರಿಸುವತ್ತ ಗಮನ ಕೊಡುತ್ತಿಲ್ಲ, ಬದಲಿಗೆ ಲಸಿಕೆ ಶೋಧನೆ ಮತ್ತು ಕಾಯಿಲೆಗೆ ಚಿಕಿತ್ಸೆ ನೀಡುವ ಮೂಲಕ ಅದನ್ನು ನಿಯಂತ್ರಿಸುವತ್ತ ಗಮನಹರಿಸುತ್ತೇವೆ’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ಚೀನಾ, ಸೋಂಕನ್ನು ನಿಯಂತ್ರಿಸಲು ಹೆಚ್ಚಿನ ಗಮನ ಹರಿಸುತ್ತಿದೆ. ಕಟ್ಟುನಿಟ್ಟಿನ ಕ್ರಮಗಳಿಂದ ಸೋಂಕನ್ನು ತಡೆಯಲು ಸಾಧ್ಯ ಎಂದು ವಾದಿಸುತ್ತಿದೆ. ಹೊಸ ಕ್ರಮಗಳಿಂದ ಚೀನಾದ ಆರ್ಥಿಕತೆಯು ಚೇತರಿಸಿಕೊಂಡಿದೆ ಎಂಬುದು ಈಚೆಗೆ ವರದಿಯಾಗಿದೆ.

ಎಲ್ಲಾ ಗಡಿಗಳನ್ನು ಮುಚ್ಚುವ ಮೂಲಕ ಚೀನಾ, ಜಗತ್ತಿನ ಇತರ ರಾಷ್ಟ್ರಗಳ ಜತೆಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದೆ. ಯಾವುದೇ ಪ್ರದೇಶದಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ಕಂಡುಬಂದರೂ ಇಡೀ ಪ್ರದೇಶವನ್ನು ಸೀಲ್‌ ಮಾಡಿ, ಸುತ್ತಮುತ್ತಲಿನ ಲಕ್ಷಾಂತರ ಮಂದಿಯ ಪರೀಕ್ಷೆ ನಡೆಸುತ್ತಿದೆ.

ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಸೋಂಕು, ವಿಶ್ವದ ಇತರ ರಾಷ್ಟ್ರಗಳಿಗೂ ಪಸರಿಸಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾವನ್ನು ತೀವ್ರವಾಗಿ ಟೀಕಿಸಿದ್ದರು. ಆದರೆ ಈಗ ಚೀನಾದ ವಿದೇಶಾಂಗ ಸಚಿವಾಲಯವು ಟ್ರಂಪ್‌ ಅವರ ಭಾಷೆಯಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಿದೆ. ‘ಈ ಪಿಡುಗು ಅಮೆರಿಕದ ಪ್ರಜಾತಂತ್ರದ ಅರಸನ ಹೊಸ ಬಟ್ಟೆಗಳನ್ನು ಹರಿದುಹಾಕಿದೆ. ಅಮೆರಿಕದ ಪರಿಸ್ಥಿತಿಯು ಮಾನವಹಕ್ಕುಗಳ ಬಹು ದೊಡ್ಡ ದುರಂತ’ ಎಂದಿದೆ.


ಕೋವಿಡ್‌ ರಾಜಕೀಯ

ಅನೇಕ ರಾಷ್ಟ್ರಗಳಲ್ಲಿ ಕೋವಿಡ್‌ ರಾಜಕೀಯ ವಾಗ್ದಾಳಿಗಳಿಗೂ ಬಳಕೆಯಾಗಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ಟ್ರಂಪ್‌ ಅವರು ತಮ್ಮ ಚುನಾವಣಾ ರ್‍ಯಾಲಿಗಳಲ್ಲಿ ಕೋವಿಡ್‌ ಹಾಗೂ ಚೀನಾವನ್ನು ಸಮಾನವಾಗಿ ಟೀಕೆಗೆ ಒಳಪಡಿಸುತ್ತಿದ್ದಾರೆ. ಟ್ರಂಪ್‌ ಸ್ವತಃ ಕೋವಿಡ್‌ಗೆ ಒಳಗಾಗಿ ಚೇತರಿಸಿಕೊಂಡಿದ್ದಾರೆ.

ಪ್ರತಿದಿನ ಸೋಂಕಿಗೆ ಒಳಗಾಗುವರರ ಸಂಖ್ಯೆ ಪುನಃ ಏರಿಕೆಯಾಗಿ 91,000 ದಾಟಿದೆ. ಆದರೆ, ಟ್ರಂಪ್‌ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ, ‘ನಾವು ಇನ್ನು ಮುಂದೆ ಲಾಕ್‌ಡೌನ್‌ ಹೇರುವುದಿಲ್ಲ. ಬೈಡನ್‌ ಅವರು ಅಧ್ಯಕ್ಷರಾದರೆ ಲಾಕ್‌ಡೌನ್‌ ಹೇರಿ, ಜನಜೀವನವನ್ನು ಹಾಳು ಮಾಡುವರು’ ಎಂದಿದ್ದಾರೆ.

‘ನಾನು ದೇಶವನ್ನು, ಆರ್ಥವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಿಲ್ಲ, ಬದಲಿಗೆ ವೈರಸ್‌ ಅನ್ನು ನಿಯಂತ್ರಿಸುತ್ತೇನೆ’ ಎಂದು ಪ್ರತಿಸ್ಪರ್ಧಿ ಬೈಡನ್‌ ಅವರು ಟ್ರಂಪ್‌ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ

ವಿರೋಧ– ಪ್ರತಿಭಟನೆ

ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲಿ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದ್ದ ಜನರು, ಪುನಃ ಲಾಕ್‌ಡೌನ್‌ ಹೇರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿದ್ದರೆ, ಕೆಲವೆಡೆ ಜನರು ಪೊಲೀಸರ ಜತೆ ಸಂಘರ್ಷಕ್ಕೆ ಇಳಿದಿದ್ದಾರೆ.

ಇಟಲಿಗೂ ಕಾಡಿದೆ ಭಯ

ಇಟಲಿಯಲ್ಲೂ ಸೋಂಕಿತರ ಸಂಖ್ಯೆ ಈಚೆಗೆ ಹೊಸ ದಾಖಲೆ ಸೃಷ್ಟಿಸಿದೆ. ಇದರಿಂದಾಗಿ ‘ನಾವೂ ಫ್ರಾನ್ಸ್‌ನಂತೆ ರಾಷ್ಟ್ರದಾದ್ಯಂತ ಲಾಕ್‌ಡೌನ್‌ ಜಾರಿಮಾಡಬೇಕೇ’ ಎಂಬ ಚರ್ಚೆ ಅಲ್ಲಿ ಆರಂಭವಾಗಿದೆ. ಕೊರೊನಾ ಸೋಂಕು ತೀವ್ರಗೊಂಡು ಆಸ್ಪತ್ರೆಗಳೆಲ್ಲವೂ ಭರ್ತಿಯಾದಾಗ ರಾಷ್ಟ್ರದಾದ್ಯಂತ ಲಾಕ್‌ಡೌನ್‌ ಘೋಷಿಸುವ ಮೂಲಕ ಇತರ ರಾಷ್ಟ್ರಗಳಿಗೆ ಇಟಲಿ ಮಾದರಿಯಾಗಿತ್ತು. ಸರ್ಕಾರದ ತೀರ್ಮಾನಕ್ಕೆ ಜನರೂ ಸಹಕಾರ ನೀಡಿದ್ದರು. ಇದರಿಂದಾಗಿ ಆರಂಭದ ದಿನಗಳಲ್ಲಿ ಅಲ್ಲಿ ಸೋಂಕು ನಿಯಂತ್ರಣಕ್ಕೂ ಬಂದಿತ್ತು. ಫ್ರಾನ್ಸ್‌ನಲ್ಲಿ ಈಗ ಕಾಣಿಸಿದ ಕೋವಿಡ್‌ನ ಎರಡನೇ ಅಲೆಯು ಇಟಲಿಯನ್ನೂ ಭಯಭೀತಗೊಳಿಸಿದೆ. ಇಲ್ಲಿಯೂ ಆಸ್ಪತ್ರೆಗಳ ಐಸಿಯುಗಳು ನಿಧಾನಕ್ಕೆ ಭರ್ತಿಯಾಗುತ್ತಿವೆ. ಲಾಕ್‌ಡೌನ್‌ ಮೂಲಕ ಸೋಂಕನ್ನು ನಿಯಂತ್ರಿಸಬಹುದು ಎಂದು ಜಗತ್ತಿಗೆ ತಿಳಿಸಿಕೊಟ್ಟ ರಾಷ್ಟ್ರದ ಮುಂದೆ ಈಗ ಕತ್ತಲು ಆವರಿಸಿದಂತಾಗಿದೆ. ಇನ್ನೊಂದು ಸುತ್ತಿನ ಲಾಕ್‌ಡೌನ್‌ ನಡೆಸುವುದನ್ನು ಜನರು ವಿರೋಧಿಸುತ್ತಿದ್ದಾರೆ. ಅಸಮಾಧಾನ ಸ್ಫೋಟಗೊಳ್ಳುವ ಹಂತದಲ್ಲಿದೆ.

ಸಂಜೆ 6 ಗಂಟೆಯೊಳಗೆ ಹೋಟೆಲ್‌ಗಳನ್ನು ಮುಚ್ಚಬೇಕು ಎಂಬ ಸರ್ಕಾರದ ಸೂಚನೆಯನ್ನು ಖಂಡಿಸಿ ಅಡುಗೆಯವರು ಹಾಗೂ ಹೋಟೆಲ್‌ ಮಾಲೀಕರು ಈಚೆಗೆ ಪ್ರತಿಭಟನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT