ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಕೋವಿಡ್‌: ಭೀತಿ ಬೇಡ, ಇರಲಿ ಎಚ್ಚರ

Last Updated 28 ಡಿಸೆಂಬರ್ 2022, 0:30 IST
ಅಕ್ಷರ ಗಾತ್ರ

ಚೀನಾದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್‌ನ ಮತ್ತೊಂದು ಅಲೆ ಭಾರತಕ್ಕೂ ತಟ್ಟಲಿದೆಯೇ? ಮತ್ತೆ ಲಾಕ್‌ಡೌನ್‌ ಹೇರಲಾಗುತ್ತದೆಯೇ? ಸೋಂಕಿತರು ಮತ್ತೆ ಪ್ರತ್ಯೇಕವಾಸಕ್ಕೆ ಹೋಗಬೇಕಾಗುತ್ತದೆಯೇ ಎಂಬ ಹಲವು ಪ್ರಶ್ನೆಗಳು ಭಾರತದಲ್ಲಿ ಮತ್ತೆ ಚರ್ಚೆಗೆ ಬರುತ್ತಿವೆ. ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನು ಚರ್ಚಿಸುತ್ತಿದ್ದಾರೆ.

ಕೋವಿಡ್‌ ತಡೆಗಟ್ಟಲು ಏನೆಲ್ಲಾ ಮನೆಮದ್ದು ಮಾಡಬೇಕು ಎಂಬುದೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೋವಿಡ್‌ ಕುರಿತು ಭಯ ಮತ್ತು ಗಾಬರಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಆದರೆ, ಕೋವಿಡ್‌ ಕುರಿತು ಈಗ ಅಷ್ಟು ಭಯ ಮತ್ತು ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂಬುದು ತಜ್ಞರ ಸಲಹೆ.

ಚೀನಾದಲ್ಲಿ ಡಿಸೆಂಬರ್ ಮೂರನೇ ವಾರದಲ್ಲಿ ಒಂದೇ ದಿನ 2.7 ಕೋಟಿ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್‌ ರೋಗ ಎಂದು ಪರಿಗಣಿಸುವ ಮಾನದಂಡಗಳನ್ನು ವಿಸ್ತರಿಸಿದ ಕಾರಣ, ಕೋವಿಡ್‌ ಎಂದು ಪರಿಗಣಿಸದೇ ಇದ್ದ ಪ್ರಕರಣಗಳನ್ನೂ ಕೋವಿಡ್‌ ವ್ಯಾಪ್ತಿಗೆ ತರಲಾಯಿತು. ಹೀಗಾಗಿ ಒಂದೇ ದಿನ ಅಷ್ಟೊಂದು ಪ್ರಕರಣಗಳು ಪತ್ತೆಯಾದವು ಎಂದು ವರದಿಯಾಗಿದೆ. ಚೀನಾವೇ ಹೇಳುತ್ತಿರುವ ಪ್ರಕಾರ ಅಲ್ಲಿ ಪ್ರತಿದಿನ ಈಗ ಸರಾಸರಿ 2,700 ಪ್ರಕರಣಗಳು ಪತ್ತೆಯಾಗುತ್ತಿವೆ. ಚೀನಾದ ಮಟ್ಟಿಗೆ ಇದು ಗಾಬರಿಯಾಗುವ ವಿಚಾರವೇ ಆಗಿದೆ. ಏಕೆಂದರೆ, ಚೀನಾದಲ್ಲಿ ಕೋವಿಡ್‌ನ ಮೊದಲ ಅಲೆಯೇ ಕೊನೆಗೊಂಡಿಲ್ಲ. ಕೋವಿಡ್ ಹರಡುವುದನ್ನು ತಡೆಗಟ್ಟಿದ್ದರಿಂದ ಅಲ್ಲಿ ಈವರೆಗೆ ಕೋವಿಡ್‌ ವ್ಯಾಪಕವಾಗಿ ಹರಡಿರಲೇ ಇಲ್ಲ. ಈಗ ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಸಡಿಲಿಸಿದ ಕಾರಣ ವ್ಯಾಪಕವಾಗಿ ಹರಡುತ್ತಿದೆ. ಆದರೆ, ಭಾರತದ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ ಎನ್ನುತ್ತಾರೆ ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಜೆನೆಟಿಕ್ಸ್ ಅಂಡ್ ಸೊಸೈಟಿಯ ನಿರ್ದೇಶಕ ರಾಕೇಶ್ ಮಿಶ್ರಾ.

ಭಾರತದಲ್ಲಿ ಕೋವಿಡ್‌ ಸಂಬಂಧಿತ ದತ್ತಾಂಶಗಳೂ ಮಿಶ್ರಾ ಅವರ ಪ್ರತಿಪಾದನೆಯನ್ನೇ ಪುಷ್ಟೀಕರಿಸುತ್ತವೆ. ಭಾರತದಲ್ಲಿ ಕಳೆದ 15 ದಿನಗಳಲ್ಲಿ ಪ್ರತಿದಿನ ಪತ್ತೆಯಾದ ಕೋವಿಡ್‌ ಪ್ರಕರಣಗಳ ಸಂಖ್ಯೆಯು 250ನ್ನು ದಾಟಿಲ್ಲ. ಈಗಲೂ ಪ್ರತಿದಿನ 160–170 ಹೊಸ ಪ್ರಕರಣಗಳಷ್ಟೇ ಪತ್ತೆಯಾಗುತ್ತಿವೆ. ಜತೆಗೆ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 3,500ಕ್ಕಿಂತ ಕಡಿಮೆ ಇದೆ. ಸೋಮವಾರ ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 3,421. ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳಿಗೆ ಹೋಲಿಸಿದರೆ, ಪ್ರತಿದಿನ ರೋಗದಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹೋಗುತ್ತಿರುವವರ ಸಂಖ್ಯೆಯೇ ಹೆಚ್ಚು ಇದೆ. ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯೂ ಕಡಿಮೆ ಇದೆ. ಭಾರತದಲ್ಲಿ ಕೋವಿಡ್‌ ಮತ್ತೆ ತೀವ್ರತೆ ಪಡೆಯುವುದಿಲ್ಲ ಎಂಬುದನ್ನು ಇವೆಲ್ಲವೂ ಸೂಚಿಸುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಹೀಗೆಂದು ಭಾರತದಲ್ಲಿ ಮತ್ತೆ ಕೋವಿಡ್‌ ಹರಡುವುದಿಲ್ಲ ಎಂದು ತಜ್ಞರು ಹೇಳಿಲ್ಲ. ಕೋವಿಡ್‌ ಮತ್ತೆ ಹರಡುವ ಅಪಾಯ ಇದ್ದೇ ಇದೆ. ಆದರೆ, ಈಗಾಗಲೇ ಹಲವು ಅಲೆಗಳು ಮತ್ತು ಲಸಿಕೆಯ ಕಾರಣ ಭಾರತೀಯರಲ್ಲಿ ಕೋವಿಡ್‌ ಪ್ರತಿರೋಧಕ ಶಕ್ತಿ ಅಭಿವೃದ್ಧಿಯಾಗಿದೆ. ಹೀಗಾಗಿ ಕೋವಿಡ್‌ ತಗುಲಿದರೂ, ಅದು ಉಂಟು ಮಾಡುವ ಅನಾರೋಗ್ಯದ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಆದರೂ, ಕೋವಿಡ್‌ ನಿಯಂತ್ರಣ ಕ್ರಮಗಳನ್ನು ಪಾಲಿಸುವುದು ಒಳಿತು ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್‌ ಸ್ಥಿತಿಗತಿ


156 ಸೋಮವಾರ ಪತ್ತೆಯಾದ ಪ್ರಕರಣಗಳ ಸಂಖ್ಯೆ

163 ಸೋಮವಾರ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದವರ ಸಮಖ್ಯೆ

0 ಸೋಮವಾರ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ

–––

3,421 ಸೋಮವಾರ ದೇಶದಲ್ಲಿದ್ದ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ

49,464 ಸೋಮವಾರ ದೇಶದಲ್ಲಿ ನಡೆಸಲಾದ ಕೋವಿಡ್‌ ಪತ್ತೆ ಪರೀಕ್ಷೆಗಳ ಸಂಖ್ಯೆ

–––

ಕೋವಿಡ್‌ ಲಸಿಕೆ

220.06 ಕೋಟಿ ದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್‌ ಲಸಿಕೆಯ ಡೋಸ್‌ಗಳ ಒಟ್ಟು ಸಂಖ್ಯೆ

102.07 ಕೋಟಿದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್‌ ಲಸಿಕೆಯ ಮೊದಲ ಡೋಸ್‌ಗಳ ಸಂಖ್ಯೆ

95.11 ಕೋಟಿದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ಗಳ ಸಂಖ್ಯೆ

22.23 ಕೋಟಿದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್‌ ಲಸಿಕೆಯ ಮುನ್ನೆಚ್ಚರಿಕಾ ಡೋಸ್‌ಗಳ ಸಂಖ್ಯೆ

‘ಕೋವಿಡ್ ಅಲೆ ಮತ್ತೆ ಬಾರದು’

‘ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಅಷ್ಟಾಗಿ ಕಂಡುಬಂದಿಲ್ಲ. ಹೀಗಾಗಿ ಲಾಕ್‌ಡೌನ್ ಅಥವಾ ವಿಮಾನ ಸಂಚಾರ ನಿರ್ಬಂಧ ಸದ್ಯಕ್ಕೆಅಗತ್ಯವಿಲ್ಲ’ ಎಂದು ಏಮ್ಸ್ ಮಾಜಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ. ‘ಸೋಂಕು ಪ್ರಸರಣ ತಡೆಗೆ ವಿಮಾನಸಂಚಾರ ನಿರ್ಬಂಧಿಸುವುದು ಅಷ್ಟೊಂದು ಪರಿಣಾಮಕಾರಿ ವಿಧಾನ ಅಲ್ಲ ಎಂಬುದು ಈ ಹಿಂದಿನ ವಿದ್ಯಮಾನಗಳಲ್ಲಿ ದೃಢಪಟ್ಟಿದೆ. ಚೀನಾದಲ್ಲಿ ಈಗ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿರುವ ಬಿಎಫ್‌.7 ಉಪತಳಿ ಈಗಾಗಲೇ ದೇಶದಲ್ಲಿ ಇದೆ. ಆದರೆ ಅದು ಅಲ್ಲಿಯಷ್ಟು ಪಸರಿಸಿಲ್ಲ’ ಎಂದು ಅವರುಕಾರಣ ನೀಡಿದ್ದಾರೆ.

ದೇಶದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ರೋಗನಿರೋಧಕ ಶಕ್ತಿ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಮಂಡಳಿಯ ಮುಖ್ಯಸ್ಥ ಡಾ. ಎನ್.ಕೆ. ಅರೋರಾ ಅಭಿಪ್ರಾಯಪಟ್ಟಿದ್ದಾರೆ.

‘ಓಮೈಕ್ರಾನ್‌ ಉಪತಳಿಗಳು ಹರಡುವಿಕೆ ವಿಚಾರದಲ್ಲಿ ಅಪಾಯಕಾರಿ ಎನಿಸಿವೆ.ಚೀನಾದಲ್ಲಿ ಈಗ ಕೋಲಾಹಲಕ್ಕೆ ಕಾರಣವಾಗಿರುವ ಉಪತಳಿಯು ಹಲವು ರೂಪಾಂತರಗಳನ್ನು ಸೃಷ್ಟಿಸಲಿದೆ. ಈ ವೈರಾಣುಗಳು ರೂಪಾಂತರವಾದಾಗ, ವೇಗವಾಗಿ ಹರಡುವ ಗುಣದ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಶಕ್ತಿಯನ್ನೂ ಗಳಿಸಿಕೊಂಡಾಗ ಅಪಾಯ ಎದುರಾಗುತ್ತದೆ’ಎಂದು ರಾಕೇಶ್‌ ಮಿಶ್ರಾ ಅವರು ಎಚ್ಚರಿಸಿದ್ದಾರೆ.

ಹೊಸ ಹೊಸ ಉಪತಳಿಗಳ ಸೃಷ್ಟಿ ಪ್ರಕ್ರಿಯೆ ನಡೆಯುತ್ತಿದ್ದು, ಪ್ರತಿಯೊಂದು ಉಪತಳಿಗಳ ವಂಶವಾಹಿ ಸಂರಚನೆ ವಿಶ್ಲೇಷಣೆಯ ಮೇಲೆ ನಿಗಾ ಇಡಬೇಕಾದುದು ತೀರಾ ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

‘ಚೀನಾದಲ್ಲಿ ಜಾರಿಯಲ್ಲಿದ್ದ ‘ಕೋವಿಡ್‌ ಝೀರೊ ನೀತಿ’ಯು, ದೇಶದಲ್ಲಿ ವೈರಾಣು ಹರಡಲು ಅವಕಾಶ ನೀಡಿರಲಿಲ್ಲ. ಹೀಗಾಗಿ, ಸೋಂಕು ಹೊಸದಾಗಿ ಹರಡುತ್ತಿದೆ. ಈವರೆಗೆ ಕೋವಿಡ್‌ನ ಯಾವುದೇ ಅಲೆಯನ್ನುಚೀನಾ ಎದುರಿಸಿಲ್ಲ. ಜನರಿಗೆ ಸೋಂಕು ತಟ್ಟಿಯೇ ಇರಲಿಲ್ಲ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸಹ ಲಾಕ್‌ಡೌನ್ ಹಾಗೂ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದವು. ಜೊತೆಗೆ ಲಸಿಕೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿದ್ದವು. ಆದರೆ ಲಸಿಕೆ ವಿಚಾರದಲ್ಲಿ ಚೀನಾ ವೈಫಲ್ಯ ಕಂಡಿದ್ದರಿಂದ ಈಗ ಪರಿಸ್ಥಿತಿ ಕೈಮೀರಿದೆ’ ಎಂದು ಅವರು ವಿವರಿಸಿದ್ದಾರೆ.

ಲಸಿಕಾ ಕಾರ್ಯಕ್ರಮ ಹಾಗೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮವಾಗಿದ್ದು, ಚೀನಾದ ಪರಿಸ್ಥಿತಿ ಇಲ್ಲಿ ಎದುರಾಗುವುದಿಲ್ಲ ಎಂದುಕೋವಿಡ್ ತಡೆ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅದಾರ್ ಪೂನಾವಾಲಾ ಅವರು ಹೇಳಿದ್ದಾರೆ. ಆದರೂ ಜನರು ನಿರ್ಲಕ್ಷ್ಯ ವಹಿಸದೇ, ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಇಂತಹ ವೈರಾಣುಗಳು ವೇಗವಾಗಿ ಹರಡುವ ಗುಣ ಹೊಂದಿದ್ದರೂ, ಕಟ್ಟುನಿಟ್ಟಿನ ಕ್ರಮಗಳಿಂದ ಅವುಗಳ ಪ್ರಸರಣವನ್ನು ನಿಯಂತ್ರಿಸಬಹುದು ಎಂದುಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ. ಆರ್.ಆರ್. ಗಂಗಖೇಡ್ಕರ್ ಅವರು ಹೇಳಿದ್ದಾರೆ. ‘ಅವು ದೀರ್ಘಕಾಲದವರೆಗೆ ಅದೇ ವೇಗದಲ್ಲಿ ಹರಡುತ್ತದೆ ಎಂದು ಹೇಳಲಾಗುವುದಿಲ್ಲ. ಕಡಿಮೆ ಅವಧಿಯಲ್ಲಿ ಅವುಗಳ ಪ್ರಸರಣವನ್ನು ನಿಯಂತ್ರಿಸಿದರೆ, ರೂಪಾಂತರ ಹೊಂದಲು ಅವುಗಳಿಗೆ ಸಮಯ ಸಿಗುವುದಿಲ್ಲ’ ಎಂದು ಹೇಳಿದ್ದಾರೆ.

‘ದೇಶದಲ್ಲಿ 220 ಕೋಟಿಯಷ್ಟು ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು,ಲಸಿಕೆ ಪಡೆದವರಿಗೆ ಸೋಂಕಿನಿಂದ ರಕ್ಷಣೆ ಸಿಗಲಿದೆ. ಹೀಗಾಗಿ ಮತ್ತೊಂದು ಕೋವಿಡ್ ಅಲೆಯ ಸಾಧ್ಯತೆ ಇಲ್ಲ’ ಎಂದು ಕೌನ್ಸಿಲ್‌ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ (ಸಿಎಸ್‌ಐಆರ್) ಮಹಾನಿರ್ದೇಶಕ ಡಾ. ಶೇಖರ್ ಮಂದೆ ಅವರು ಹೇಳಿದ್ದಾರೆ.

ಭಾರತದಲ್ಲಿ ಬಿಎಫ್‌.7

ಚೀನಾದಲ್ಲಿ ಈಗ ವ್ಯಾಪಕವಾಗಿ ಹರಡುತ್ತಿರುವ ಓಮೈಕ್ರಾನ್‌ನ ಉಪತಳಿ ಬಿಎಫ್‌.7ನ ಕೆಲವು ಪ್ರಕರಣಗಳು ಈ ಹಿಂದೆಯೇ ಭಾರತದಲ್ಲೂ ಪತ್ತೆಯಾಗಿವೆ. ಇದೇ ಜುಲೈನಲ್ಲಿ ಗುಜರಾತ್‌ನಲ್ಲಿ ಎರಡು, ಒಡಿಶಾದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಅವು ಹೆಚ್ಚಿನ ಜನರಿಗೆ ಹರಡಿಲ್ಲ ಎಂದು ದಾಖಲೆಗಳು ಹೇಳುತ್ತವೆ.ಭಾರತದಲ್ಲಿ ಈಗ ಇದೇ ಉಪತಳಿಯ ಇನ್ನೊಂದು ಪ್ರಕರಣ ಪತ್ತೆಯಾಗಿದೆ.

ಮೂಗಿನ ಮೂಲಕ ನೀಡುವ ಲಸಿಕೆ ಜನವರಿಯಲ್ಲಿ ಲಭ್ಯ

ಹೈದರಾಬಾದ್:ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ, ಮೂಗಿನ ಮೂಲಕ ನೀಡಬಹುದಾದ ಕೋವಿಡ್ ತಡೆ ಲಸಿಕೆ ‘ಇನ್‌ಕೊವ್ಯಾಕ್’ (ಬಿಬಿವಿ154) ಮುಂದಿನ ತಿಂಗಳು ಬಳಕೆಗೆ ಲಭ್ಯವಾಗಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆಯ ಒಂದು ಡೋಸ್‌ಗೆ ₹800 ನಿಗದಿಪಡಿಸಲಾಗಿದೆ. ಸರ್ಕಾರದ ಆರೋಗ್ಯ ಕೇಂದ್ರಗಳಲ್ಲಿ ಇದು ₹325ಕ್ಕೆ ಲಭ್ಯವಾಗಲಿದೆ.

18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್) ಆಗಿಈ ಲಸಿಕೆಯನ್ನು ನೀಡಲಾಗುತ್ತದೆ. ಈಗಾಗಲೇ, ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್‌ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರು, ಮೂರನೇ ಡೋಸ್‌ ಆಗಿ ಇನ್‌ಕೊವ್ಯಾಕ್ ಲಸಿಕೆ ಪಡೆಯಬಹುದು.

ಖಾಸಗಿ ಆಸ್ಪತ್ರೆಗಳಲ್ಲಿ ಇನ್‌ಕೊವ್ಯಾಕ್ ಲಸಿಕೆ ಪಡೆಯಬೇಕಿದ್ದರೆ, ₹990 ಪಾವತಿಸಬೇಕು. ಜಿಎಸ್‌ಟಿ ಹಾಗೂ ಲಸಿಕೆ ನೀಡಿಕೆ ಶುಲ್ಕವನ್ನು ಇದು ಒಳಗೊಂಡಿದೆ. ಇದು ಸೂಜಿರಹಿತ ಹಾಗೂ ನೋವುರಹಿತ ಲಸಿಕೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ತುರ್ತು ಬಳಕೆಗೆ ಕಳೆದ ತಿಂಗಳು ಅನುಮತಿ ನೀಡಿತ್ತು.ಈ ಸ್ವರೂಪದ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಬಳಸಲು ಅನುಮತಿ ನೀಡಿದ್ದು ಇದೇ ಮೊದಲು.

ಓಮೈಕ್ರಾನ್‌ನ ಉಪತಳಿ ಬಿಎಫ್.7ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ಮೂಗಿನ ಮೂಲಕ ನೀಡಬಹುದಾದ ಲಸಿಕೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಪಡೆಯಲು ಇಚ್ಛಿಸುವವರು, ಕೇಂದ್ರ ಸರ್ಕಾರದ ‘ಕೋವಿನ್‌’ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಸಂಸ್ಥೆಯ ವಕ್ತಾರರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಜನವರಿ ಕೊನೆಯ ವಾರದಲ್ಲಿ ಲಸಿಕೆಯು ಲಭ್ಯವಾಗಲಿದೆ. ಅದಕ್ಕೆ ಇನ್ನೂ ಒಂದು ತಿಂಗಳು ಸಮಯಾವಕಾಶವಿದ್ದು, ಬೇಡಿಕೆಗೆ ಅನುಗುಣವಾಗಿ ಲಸಿಕೆಯ ತಯಾರಿಕೆ ಪ್ರಮಾಣ ಹಾಗೂ ದೇಶದಾದ್ಯಂತ ಪೂರೈಕೆಯನ್ನು ನಿರ್ಧರಿಸಲಾಗುತ್ತದೆ.

ಸಂಸ್ಥೆಯು ಕೋವ್ಯಾಕ್ಸಿನ್ ಮತ್ತು ಇನ್‌ಕೊವ್ಯಾಕ್ ಎಂಬ ಎರಡು ವಿಭಿನ್ನ ಮಾದರಿಯ ಕೋವಿಡ್ ತಡೆ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ. ಮೂಗಿನ ಮೂಲಕ ನೀಡುವ ಲಸಿಕೆಯನ್ನು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಲು ಸಾಧ್ಯವಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಕೃಷ್ಣ ಎಲ್ಲ ಅವರು ಹೇಳಿದ್ದಾರೆ. ಲಸಿಕೆಯನ್ನು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಲಸಿಕೆಯ ಮೂರನೇ ಹಂತದ ಪರೀಕ್ಷೆಯನ್ನು ದೇಶದ ವಿವಿಧ ಸ್ಥಳಗಳಲ್ಲಿ ಕೈಗೊಳ್ಳಲಾಗಿತ್ತು. ಲಸಿಕೆಯ ಅಭಿವೃದ್ಧಿ ಹಾಗೂ ಪ್ರಾಯೋಗಿಕ ಪರೀಕ್ಷೆಗಳಿಗೆ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಹಣಕಾಸು ನೆರವು ಒದಗಿಸಿದೆ.

ಲಸಿಕೆ ಪಡೆದವರಲ್ಲಿಮ್ಯೂಕೋಸಲ್ ಐಜಿಎ ಪ್ರತಿಕಾಯಗಳು ಗಮನಾರ್ಹ ಮಟ್ಟದಲ್ಲಿ ಏರಿಕೆಯಾಗಿರುವುದು ಪ್ರಾಯೋಗಿಕ ಪರೀಕ್ಷೆಯ ವೇಳೆ ಕಂಡುಬಂದಿದೆ ಎಂದು ಸಂಸ್ಥೆ ತಿಳಿಸಿದೆ. ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮ್ಯೂಕೋಸಲ್ ಐಜಿಎ ಪ್ರತಿಕಾಯಗಳು ನೆರವಾಗುತ್ತವೆ.

lಬೂಸ್ಟರ್‌ ಡೋಸ್ ಆಗಿ ಮಾತ್ರವಲ್ಲದೇ, ಪ್ರಾಥಮಿಕ ಡೋಸ್ ಆಗಿ ಬಳಸುವ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ

lಈ ಲಸಿಕೆಯನ್ನು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ

lಲಸಿಕೆಯ ದಾಸ್ತಾನು ಹಾಗೂ ಸರಬರಾಜು ಸಮಯದಲ್ಲಿ2ರಿಂದ 8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಅಗತ್ಯ

lಬೂಸ್ಟರ್‌ ಡೋಸ್ ಆಗಿ ಮಾತ್ರವಲ್ಲದೇ, ಪ್ರಾಥಮಿಕ ಡೋಸ್ ಆಗಿ ಬಳಸುವ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ

lಈ ಲಸಿಕೆಯನ್ನು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ

lಲಸಿಕೆಯ ದಾಸ್ತಾನು ಹಾಗೂ ಸರಬರಾಜು ಸಮಯದಲ್ಲಿ2ರಿಂದ 8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT