ಮಂಗಳವಾರ, ಸೆಪ್ಟೆಂಬರ್ 21, 2021
22 °C

ಆಳ–ಅಗಲ: ಲಸಿಕೆ ಮಿಶ್ರಣದಿಂದ ಹೆಚ್ಚಿನ ಪರಿಣಾಮ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಕೋವಿಡ್‌ನ ಭಿನ್ನ ಲಸಿಕೆಗಳ ಸಂಯೋಜನೆಯ ಪರಿಣಾಮವನ್ನು ಪರೀಕ್ಷಿಸಲು ನಾಲ್ಕನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತೀಯ ಪ್ರಧಾನ ಔಷಧ ನಿಯಂತ್ರಕರ (ಡಿಸಿಜಿಐ) ಅನುಮತಿ ದೊರೆತಿದೆ. ತಮಿಳುನಾಡಿನ ವೆಲ್ಲೋರ್‌ನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ (ಸಿಎಂಸಿ) ಈ ಕ್ಲಿನಿಕಲ್ ಟ್ರಯಲ್ ನಡೆಸಲಿದೆ.

ಭಾರತದಲ್ಲಿ ಈಗ ಕೋವಿಡ್‌ ನಿಯಂತ್ರಣಕ್ಕಾಗಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಗೆ ಯಾವುದಾದರೂ ಒಂದು ಲಸಿಕೆಯ ಎರಡು ಡೋಸ್‌ ನೀಡುವ ಪದ್ಧತಿ ಅನುಸರಿಸಲಾಗುತ್ತಿದೆ. ಆದರೆ ಈಗ ಎರಡೂ ಲಸಿಕೆಯ ಒಂದೊಂದು ಡೋಸ್‌ ನೀಡುವ ಕಾರ್ಯಸಾಧ್ಯತೆ ಮತ್ತು ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಅನುಮತಿ ದೊರೆತಿದೆ. ವೆಲ್ಲೋರ್‌ನ ಸಿಎಂಸಿ ಇಂತಹ ಒಂದು ಪ್ರಸ್ತಾವವನ್ನು ಡಿಸಿಜಿಐ ಮುಂದೆ ಇರಿಸಿತ್ತು. ಡಿಸಿಜಿಐ ಈಗ ಅದನ್ನು ಮಾನ್ಯ ಮಾಡಿದೆ.

ಈಗಾಗಲೇ ಸಾರ್ವಜನಿಕ ಬಳಕೆಗೆ ಲಭ್ಯವಿರುವ ಔಷಧ/ಲಸಿಕೆಗಳ ಸಂಯೋಜಿತ ಬಳಕೆಯ ಅಧ್ಯಯನವನ್ನು ನಾಲ್ಕನೇ ಹಂತದ ಕ್ಲಿನಿಕಲ್ ಟ್ರಯಲ್ ಎನ್ನಲಾಗುತ್ತದೆ. ಈ ಅಧ್ಯಯನದ ಭಾಗವಾಗಿ ಒಬ್ಬ ವ್ಯಕ್ತಿಗೇ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ ಒಂದೊಂದು ಡೋಸ್‌ ನೀಡಿ ಪರಿಣಾಮಗಳನ್ನು ಕಂಡುಕೊಳ್ಳಲು ವೆಲ್ಲೋರ್‌ ಸಿಎಂಸಿ ಕಾರ್ಯಯೋಜನೆ ಸಿದ್ಧಪಡಿಸಿದೆ.

‘ಈ ಅಧ್ಯಯನದಲ್ಲಿ 500-600 ಸ್ವಯಂಸೇವಕರು ಭಾಗಿಯಾಗಲಿದ್ದಾರೆ. ಎರಡು ರೀತಿಯ ಸಂಯೋಜನೆಯಲ್ಲಿ ಅಧ್ಯಯನ ನಡೆಸಲಾಗುತ್ತದೆ. ಮೊದಲು ಕೋವಿಶೀಲ್ಡ್‌ ಡೋಸ್‌ ನೀಡಿ, ನಂತರ ಕೋವ್ಯಾಕ್ಸಿನ್ ಡೋಸ್ ನೀಡುವುದು ಒಂದು ಸಂಯೋಜನೆ. ಮೊದಲು ಕೋವ್ಯಾಕ್ಸಿನ್ ಡೋಸ್‌ ನೀಡಿ, ನಂತರ ಕೋವಿಶೀಲ್ಡ್ ಡೋಸ್ ನೀಡುವುದು ಎರಡನೇ ರೀತಿಯ ಸಂಯೋಜನೆ. ಯಾವ ಸಂಯೋಜನೆಯು ಎಷ್ಟು ಪರಿಣಾಮಕಾರಿ ಎಂಬುದನ್ನು ಅಧ್ಯಯನದಲ್ಲಿ ಪರಿಶೀಲಿಸಲಾಗುತ್ತದೆ. ಎರಡೂ ಲಸಿಕೆಗಳು ಭಿನ್ನ ವಿಧಾನದ ಲಸಿಕೆಗಳು ಆಗಿರುವ ಕಾರಣ, ಸಂಯೋಜಿತ ಬಳಕೆಯಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ ಎಂಬುದನ್ನು ಪರಿಶೀಲಿಸುವುದು ಅಧ್ಯಯನದ ಪ್ರಧಾನ ಉದ್ದೇಶ’ ಎಂದು ವೆಲ್ಲೋರ್ ಸಿಎಂಸಿ ವಿವರಿಸಿದೆ.

ಅಚಾತುರ್ಯದಿಂದ ಬೆಳಕಿಗೆ ಬಂದ ಸಾಧ್ಯತೆ

ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ ಒಂದೊಂದು ಡೋಸ್ ಪಡೆದುಕೊಂಡರೆ ಕೋವಿಡ್ ನಿರೋಧಕ ಶಕ್ತಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬುದು ಪತ್ತೆಯಾಗಿದೆ. ಸಿಬ್ಬಂದಿಯಿಂದ ಆದ ಅಚಾತುರ್ಯವು ಈ ಹೊಸ ಸಾಧ್ಯತೆಯ ಬಗ್ಗೆ ಅರಿವು ಮೂಡಿಸಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಹೇಳಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ 18 ಜನರಿಗೆ ಅಚಾತುರ್ಯದ ಕಾರಣ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ನ ಒಂದೊಂದು ಡೋಸ್‌ ನೀಡಲಾಗಿತ್ತು. ಮೇ ತಿಂಗಳಿನಲ್ಲಿ ನಡೆದ ಈ ಅಚಾತುರ್ಯದ ಮೇಲೆ ಐಸಿಎಂಆರ್ ಅಧ್ಯಯನ ನಡೆಸಿತು. ಭಿನ್ನ ಡೋಸ್‌ ಪಡೆದವರ ಆರೋಗ್ಯದಲ್ಲಿ ಯಾವುದೇ ಅಡ್ಡಪರಿಣಾಮ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಆ ಅಧ್ಯಯನದ ಉದ್ದೇಶವಾಗಿತ್ತು.

ಆದರೆ ಭಿನ್ನ ಡೋಸ್‌ ಪಡೆದ 18 ಜನರಲ್ಲೂ ಗಣನೀಯ ಅಡ್ಡಪರಿಣಾಮಗಳು ತಲೆದೋರಲಿಲ್ಲ. ಬದಲಿಗೆ ಅವರಲ್ಲಿ ಕೋವಿಡ್‌ ನಿರೋಧಕ ಶಕ್ತಿ ಉತ್ತಮಗೊಂಡಿತ್ತು. ಕೋವಿಶೀಲ್ಡ್‌ನ ಎರಡು ಡೋಸ್‌ ಪಡೆದ 40 ಮಂದಿ ಮತ್ತು ಕೋವ್ಯಾಕ್ಸಿನ್‌ನ ಎರಡು ಡೋಸ್‌ ಪಡೆದ 40 ಮಂದಿಯ ಜತೆಗೆ ಈ 18 ಜನರನ್ನು ಹೋಲಿಸಿ ನೋಡಲಾಗಿತ್ತು. ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ ತಲಾ ಎರಡು ಡೋಸ್‌ ಪಡೆದಿದ್ದವರಿಗಿಂತ, ಎರಡೂ ಲಸಿಕೆಯ ಒಂದೊಂದು ಡೋಸ್ ಪಡೆದುಕೊಂಡಿದ್ದವರಲ್ಲಿ ಕೋವಿಡ್ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇತ್ತು. ಆದರೆ ಈ ಅಧ್ಯಯನವನ್ನು ತಜ್ಞರ ಸಮಿತಿಯು ಇನ್ನಷ್ಟೇ ಪರಿಶೀಲಿಸಬೇಕಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ವಿಶ್ವಾಸ ಹೆಚ್ಚಿಸಿದ ಅಧ್ಯಯನ ವರದಿಗಳು

ಕೊರೊನಾ ಸೋಂಕು ತಡೆಗಟ್ಟುವ ದಿಸೆಯಲ್ಲಿ ಎರಡು ವಿವಿಧ ಕಂಪನಿಗಳ ಲಸಿಕೆಗಳನ್ನು ನೀಡುವ ವಿದ್ಯಮಾನ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಹೀಗೆ ಮಾಡುವುದರಿಂದ ಪ್ರಬಲವಾದ ರೋಗನಿರೋಧಕ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ಅಧ್ಯಯನಗಳು ಅಭಿಪ್ರಾಯಪಟ್ಟಿವೆ. ಅಡ್ಡಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆಯನ್ನೂ ನೀಡಿದ್ದಾರೆ. ಸಾರ್ಸ್ ಕೋವ್–2 ಸೋಂಕಿನ ವಿರುದ್ಧ ಹೋರಾಡಲು ಎರಡು ಡೋಸ್‌ಗಳಲ್ಲಿ ಲಸಿಕೆ ನೀಡಲಾಗುತ್ತದೆ. ಅಸ್ಟ್ರಾಜೆನೆಕಾ ಮತ್ತು ಫೈಝರ್ ಲಸಿಕೆಗಳನ್ನು ಬೆರೆಸಿದರೆ ಪರಿಣಾಮ ಹೇಗಿರುತ್ತದೆ ಎಂಬ ಬಗ್ಗೆ ಜಗತ್ತಿನ ವಿವಿಧ ದೇಶಗಳಲ್ಲಿ ಅಧ್ಯಯನಗಳು ನಡೆದಿವೆ. ಬ್ರಿಟನ್, ಜರ್ಮನಿ ಮೊದಲಾದೆಡೆ ನಡೆದ ಅಧ್ಯಯನಗಳು ಪರಿಣಾಮಕಾರಿ ಎಂಬ ಅಭಿಪ್ರಾಯಕ್ಕೆ ಬಂದಿವೆ. 

ಈ ಪರಿಕಲ್ಪನೆ ಹುಟ್ಟಿದ್ದು ಅನಿವಾರ್ಯ ಪರಿಸ್ಥಿತಿಯಲ್ಲಿ. ಆಸ್ಟ್ರಾಜೆನೆಕಾ ಲಸಿಕೆ ಪಡೆದ ಒಂದು ವಯೋಮಾನದ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದಿತು. ಹೀಗಾಗಿ ಕಳೆದ ಮಾರ್ಚ್ ತಿಂಗಳಲ್ಲಿ ಯುರೋಪ್‌ನ ಕೆಲವು ದೇಶಗಳು ಈ ಲಸಿಕೆ ನೀಡುವುದನ್ನು ನಿಲ್ಲಿಸಿದವು. ಎರಡನೇ ಡೋಸ್‌ಗೆ ಕಾಯುತ್ತಿದ್ದವರಿಗೆ ಮತ್ತೆ ಅದೇ ಕಂಪನಿಯ ಡೋಸ್ ನೀಡುವ ಬದಲು, ಬೇರೊಂದು ಕಂಪನಿಯ ಲಸಿಕೆ ನೀಡದೇ ಬೇರೆ ವಿಧಿ ಇರಲಿಲ್ಲ. ಹೀಗಾಗಿ ಲಸಿಕೆ ಮಿಶ್ರಣವನ್ನು ಐರೋಪ್ಯ ಒಕ್ಕೂಟದ ಹಲವು ದೇಶಗಳು ಶಿಫಾರಸು ಮಾಡುತ್ತಿವೆ. 

ಮೇ 12ರಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವರದಿ ಪ್ರಕಟವಾಯಿತು. ಎರಡು ವಿಭಿನ್ನ ಲಸಿಕೆಗಳನ್ನು ನೀಡಿದರೂ, ಉತ್ತಮ ರೋಗನಿರೋಧಕ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಬ್ರಿಟನ್‌ನ ಕಾಮ್‌–ಕೋವ್ ಅಧ್ಯಯನ ವರದಿ ತಿಳಿಸಿತು. ಮೇ ತಿಂಗಳಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನ ಕಾರ್ಲೋಸ್ ಆರೋಗ್ಯ ಸಂಸ್ಥೆಯ ಸಂಶೋಧಕರು ಕಾಂಬಿವ್ಯಾಕ್ಸ್ ಪ್ರಯೋಗದ ಫಲಿತಾಂಶ ಪ್ರಕಟಿಸಿದರು. ಆಕ್ಸ್‌ಫರ್ಡ್-ಆಸ್ಟ್ರಾಜೆನೆಕಾ ಲಸಿಕೆ ಪಡೆದ 8-12 ವಾರಗಳ ನಂತರ ಫೈಝರ್ ಲಸಿಕೆ ಪಡೆದ ಜನರಲ್ಲಿ ಪ್ರಬಲವಾದ ರೋಗನಿರೋಧಕ ಶಕ್ತಿ ಉಂಟಾಗಿದೆ ಎಂಬುದನ್ನು ಅಧ್ಯಯನ ಕಂಡುಕೊಂಡಿತು. 

ಪ್ರಯೋಗಾಲಯ ಪರೀಕ್ಷೆಗಳ ಪ್ರಕಾರ, ಅಸ್ಟ್ರಾಜೆನೆಕಾದ ಒಂದು ಡೋಸ್ ‍ಪಡೆದ ವ್ಯಕ್ತಿಗೆ ಹೋಲಿಸಿದರೆ, ಎರಡು ವಿಭಿನ್ನ ಲಸಿಕೆಗಳನ್ನು ಪಡೆದವರಲ್ಲಿ 37 ಪಟ್ಟು ಹೆಚ್ಚು‌ ಸಾರ್ಸ್ ಕೋವ್–2 ವೈರಾಣು ನಿಷ್ಕ್ರಿಯಗೊಳಿಸುವ ಪ್ರತಿಕಾಯಗಳು ಹಾಗೂ ನಾಲ್ಕು ಪಟ್ಟು ಹೆಚ್ಚು ಟಿ–ಸೆಲ್ಸ್ ಉತ್ಪಾದನೆಯಾಗುತ್ತವೆ ಎಂಬುದು ದೃಢಪಟ್ಟಿತು. 

ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಸಾರ್‌ಲ್ಯಾಂಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಎರಡೂ ಡೋಸ್ ಆಸ್ಟ್ರಾಜೆನೆಕಾ ಪಡೆದ ವ್ಯಕ್ತಿಗಿಂತ ಮಿಶ್ರಿತ ಡೋಸ್ ಪಡೆದ ವ್ಯಕ್ತಿಗಳಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉತ್ತಮವಾಗಿದೆ. ಜೂನ್ ಅಂತ್ಯದ ವೇಳೆಗೆ ಇದೇ ರೀತಿಯ ಪರಿಣಾಮವನ್ನು ತೋರಿಸುವ ಅಧ್ಯಯನಗಳು ಬಹಿರಂಗವಾದವು. 

ಯಾವ ದೇಶಗಳಲ್ಲಿ ಪರಿಗಣನೆ?

ಲಸಿಕೆ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವೂ ಈ ವಿದ್ಯಮಾನಕ್ಕೆ ಕಾರಣ. ಅಲಭ್ಯತೆಯ ಕಾರಣ, ಎರಡನೇ ಡೋಸ್‌ ಲಸಿಕೆ ನೀಡಲು ವಿವಿಧ ದೇಶಗಳು ಅನ್ಯ ಕಂಪನಿಗಳ ಮೊರೆ ಹೋಗುತ್ತಿವೆ. 

l ಬ್ರಿಟನ್: ಮೊದಲ ಲಸಿಕೆ ದಾಸ್ತಾನು ಇಲ್ಲದ ಸಂದರ್ಭಗಳು ಹಾಗೂ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಎರಡನೇ ಡೋಸ್‌ಗಾಗಿ ಜನರಿಗೆ ಬೇರೆ ಲಸಿಕೆಯನ್ನು ಹಾಕಿಸಲು ಅವಕಾಶ ನೀಡುವ ಬಗ್ಗೆ ಜನವರಿಯಲ್ಲಿ ಬ್ರಿಟನ್ ಮಾಹಿತಿ ನೀಡಿತ್ತು. ಬೇರೆ ಲಸಿಕೆಯನ್ನು ಬೂಸ್ಟರ್ ಆಗಿ ಬಳಸುವ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳುವುದಾಗಿ ನೊವಾವಾಕ್ಸ್ ಮೇ 21ರಂದು ತಿಳಿಸಿತ್ತು 

l ಅಮೆರಿಕ: ಫೈಜರ್ ಮತ್ತು ಮೊಡೆರ್ನಾ ಲಸಿಕೆಗಳನ್ನು ಎರಡೂ ಪ್ರತ್ಯೇಕ ಡೋಸ್‌ಗಳಾಗಿ ನೀಡಲು ಅವುಗಳ ಮಧ್ಯೆ ಕನಿಷ್ಠ 28 ದಿನ ಅಂತರವಿರಬೇಕು ಎಂದು ಅಮೆರಿಕದ ಸಿಡಿಸಿ ಜನವರಿಯಲ್ಲಿ ಪ್ರಕಟಿಸಿದ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿತ್ತು

l ಬಹರೇನ್/ಯುಎಇ: ಆರಂಭದಲ್ಲಿ ಯಾವುದೇ ಲಸಿಕೆ ಪಡೆದಿದ್ದರೂ, ಎರಡನೇ ಡೋಸ್‌ ಆಗಿ ಫೈಝರ್ ಅಥವಾ ಸಿನೋಫಾರ್ಮ್ ಲಸಿಕೆ ಪಡೆಯಬಹುದು ಎಂದು ಬಹರೇನ್, ಯುಎಇ ತಿಳಿಸಿವೆ  

l ಕೆನಡಾ: ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್ ಪಡೆದವರು ಫೈಝರ್ ಅಥವಾ ಮೊಡೆರ್ನಾ ಲಸಿಕೆಯನ್ನು ಎರಡನೇ ಡೋಸ್ ಆಗಿ ಪಡೆಯಲು ರಾಷ್ಟ್ರೀಯ ಸಲಹಾ ಸಮಿತಿ ಶಿಫಾರಸು ಮಾಡಿದೆ

l ಚೀನಾ: ಕ್ಲಿನಿಕಲ್ ಟ್ರಯಲ್ ನೋಂದಣಿ ಮಾಹಿತಿಯ ಪ್ರಕಾರ, ಚೀನಾದ ಸಂಶೋಧಕರು ಕಳೆದ ಏಪ್ರಿಲ್‌ನಲ್ಲಿ ಕ್ಯಾನ್ಸಿನೋ ಬಯಾಲಾಜಿಕ್ಸ್ ಮತ್ತು ಚೋಂಗ್‌ಕ್ವಿಂಗ್ ಜಿಫಿ ಬಯಾಲಾಜಿಕಲ್ ಪ್ರಾಡಕ್ಟ್ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಪ್ರತ್ಯೇಕ ಲಸಿಕೆಗಳನ್ನು ಒಂದೇ ವ್ಯಕ್ತಿಗೆ ನೀಡುವ ಬಗ್ಗೆ ಅಧ್ಯಯನ ನಡೆಸಿದ್ದರು

l ಫಿನ್ಲೆಂಡ್: ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್ ಪಡೆದ 65ಕ್ಕಿಂತ ಕಡಿಮೆ ವಯಸ್ಸಿನವರು ಎರಡನೇ ಲಸಿಕೆಯಾಗಿ ಬೇರೊಂದು ಕಂಪನಿಯ ಡೋಸ್ ಪಡೆಯಬಹುದು ಎಂದು ಫಿನ್ಲೆಂಡ್ ಆರೋಗ್ಯ ಮತ್ತು ಕಲ್ಯಾಣ ಸಂಸ್ಥೆ ಏಪ್ರಿಲ್ 14ರಂದು ತಿಳಿಸಿತ್ತು

l ಫ್ರಾನ್ಸ್: ಇನ್ನೂ ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸದಿದ್ದರೂ, ಆಸ್ಟ್ರಾಜೆನೆಕಾ ಪಡೆದ 55 ವರ್ಷದೊಳಗಿನವರು ಎರಡನೇ ಡೋಸ್ ಆಗಿ ಎಂಆರ್‌ಎನ್‌ಎ (mRNA) ಲಸಿಕೆಗಳನ್ನು ಪಡೆಯಬಹುದು ಎಂದು ಸರ್ಕಾರ ತಿಳಿಸಿತ್ತು 

l ನಾರ್ವೆ: ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್ ಪಡೆದವರಿಗೆ, ಎಮ್‌ಆರ್‌ಎನ್‌ಎ ಚುಚ್ಚುಮದ್ದನ್ನು ಎರಡನೇ ಡೋಸ್ ಆಗಿ ನೀಡಲಾಗುತ್ತದೆ ಎಂದು ಏಪ್ರಿಲ್ 23ರಂದು ನಾರ್ವೆ ಹೇಳಿತ್ತು

l ರಷ್ಯಾ: ಈ ಬಗ್ಗೆ ಆರೋಗ್ಯ ಸಚಿವಾಲಯದ ಸಮಿತಿಯು ಹೆಚ್ಚಿನ ದತ್ತಾಂಶವನ್ನು ಕೇಳಿದ್ದರಿಂದ, ಆಸ್ಟ್ರಾಜೆನೆಕಾ ಮತ್ತು ಸ್ಪುಟ್ನಿಕ್–ವಿ ಲಸಿಕೆಗಳನ್ನು ಸಂಯೋಜಿಸುವ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ ನೀಡುವುದನ್ನು ರಷ್ಯಾ ತಡೆಹಿಡಿದಿದೆ ಎಂದು ಮೇ 28ರಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿತ್ತು

‘ಪ್ರಯೋಗಗಳು ಸೀಮಿತ’

ಕೋವಿಡ್‌ ಲಸಿಕೆಗಳ ಮಿಶ್ರ ಡೋಸ್‌ ‍ಪಡೆಯುವ ಬಗ್ಗೆ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಎಚ್ಚರಿಸಿದ್ದು, ಇಂಥ ವಿಷಯದಲ್ಲಿ ಸಾರ್ವಜನಿಕ ಆರೋಗ್ಯ ಪ್ರಾಧಿಕಾರಗಳ ನಿರ್ಧಾರಕ್ಕೆ ಬದ್ಧವಾಗಿರಬೇಕು ಎಂದು ಹೇಳಿದೆ.

ಎರಡು ಭಿನ್ನ ಸಂಯೋಜನೆಗಳ ಲಸಿಕೆಯ ಪರಿಣಾಮದ ಬಗ್ಗೆ ನಡೆದಿರುವ ಅಧ್ಯಯನಗಳ ಬಗ್ಗೆ ಇನ್ನಷ್ಟು ಮಾಹಿತಿಯ ಅವಶ್ಯಕತೆ ಇದೆ. ಇದರೊಂದಿಗೆ, ಅದು ನೀಡಬಹುದಾದ ಪ್ರತಿರೋಧ ಶಕ್ತಿ ಹಾಗೂ ಸುರಕ್ಷತೆಯನ್ನೂ ಪರಿಗಣಿಸುವುದು ಅತ್ಯಗತ್ಯ. ಹೀಗಾಗಿ,‌ ಪರಿಣಾಮದ ಅರಿವಿಲ್ಲದೇ ಪ್ರಯೋಗಕ್ಕೆ ಮುಂದಾಗುವುದು ಸಲ್ಲದು ಎಂದು ವಿಶ್ವ ಆರೋಗ್ಯಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ. 

‘ಕೋವಿಡ್‌–19 ತಡೆಯುವಲ್ಲಿ ಲಸಿಕೆಯ ಮಿಶ್ರ ಡೋಸ್‌ ಎಷ್ಟು ಪರಿಣಾಮಕಾರಿ ಎಂಬುದನ್ನು ಹೇಳಲು, ಈ ಬಗ್ಗೆ ಈಗ ನಡೆದಿರುವ ಪ್ರಯೋಗಗಳು ಸೀಮಿತ. ಫಲಿತಾಂಶಕ್ಕಾಗಿ ದೀರ್ಘಾವಧಿಯ ಅಧ್ಯಯನ ನಡೆಯದ ಹೊರತು ಈ ಮಿಶ್ರ ಲಸಿಕೆಯ ದಕ್ಷತೆ ಎಂಥದ್ದು ಅಥವಾ ಎಷ್ಟು ದಿನಗಳವರೆಗೆ ರಕ್ಷಣೆ ನೀಡಬಲ್ಲದು ಎಂಬುದನ್ನು ಹೇಳಲಾಗದು’ ಎನ್ನುತ್ತಾರೆ ಈ ಬಗ್ಗೆ ಸಂಶೋಧನೆ ನಡೆಸಿರುವ ಜರ್ಮನಿಯ ಹ್ಯಾಂಬರ್ಗ್‌ನ ಸಾರ್‌ಲ್ಯಾಂಡ್‌ ವಿಶ್ವವಿದ್ಯಾಲಯದ ವೈರಾಣುತಜ್ಞೆ ಮಾರ್ಟಿನಾ ಸೆಸ್ತರ್. 

ವಿಭಿನ್ನ ಸಂಯೋಜನೆಗಳನ್ನು ಹೋಲಿಸುವುದು ಕೂಡ ಕಷ್ಟವಾದದ್ದು. ಇದು ಕೂಡ ಈ ಪ್ರಯೋಗದ ಮಿತಿಯಾಗಿದೆ. ಬಯಸಿದ ಫಲಿತಾಂಶ ಅಥವಾ ಪರಿಣಾಮಕ್ಕಾಗಿನ ಬೃಹತ್‌ ಪ್ರಮಾಣದ ಅಧ್ಯಯನ ತುಂಬಾ ಕಷ್ಟ. ಅಧ್ಯಯನದ ಪರಿಣಾಮವು ವಿರುದ್ಧವಾಗಿ ಬಂದ ಸಂದರ್ಭದಲ್ಲಿ, ನೈತಿಕತೆಯ ಪ್ರಶ್ನೆಯೂ ಉದ್ಭವಿಸುತ್ತದೆ ಎನ್ನುತ್ತಾರೆ ಅವರು. ಹೀಗಾಗಿಯೇ ರೋಗದ ವಿರುದ್ಧ ನೀಡಬಹುದಾದ ರಕ್ಷಣೆಯ ಬಗ್ಗೆ ನಿರ್ಧರಿಸುವ ಕುರಿತು ಪ್ರಯತ್ನಗಳಾಗುತ್ತಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಆಧಾರ: ಪಿಟಿಐ, ನೇಚರ್, ಯುಎಸ್‌ ನ್ಯೂಸ್, ರಾಯಿಟರ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು