ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಕರ್ನಾಟಕದಲ್ಲಿ ಶಿಕ್ಷೆ ಪ್ರಮಾಣ ಕನಿಷ್ಠ, ಶೂನ್ಯ

ಎಸ್‌ಸಿ–ಎಸ್‌ಟಿ ಮೇಲಿನ ದೌರ್ಜನ್ಯ ಪ್ರಕರಣ
Last Updated 13 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ 2021ರಲ್ಲಿ ಪರಿಶಿಷ್ಟ ಪಂಗಡದ ಜನರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಒಂದೂ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ. 2021ರಲ್ಲಿ ವಿಲೇವಾರಿಯಾದ ಪ್ರಕರಣಗಳಲ್ಲಿ ಖುಲಾಸೆ ಪ್ರಮಾಣ ಶೇ 99.8ರಷ್ಟಿದೆ. ಉಳಿದ ಪ್ರಕರಣಗಳು ವಜಾ ಆಗಿವೆ. ಪರಿಶಿಷ್ಟ ಜಾತಿಯ ಜನರ ಮೇಲಿನ ದೌರ್ಜನ್ಯದ ಪ್ರಕರಣಗಳಲ್ಲೂ ನ್ಯಾಯದಾನದ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಒಟ್ಟಾರೆ ದಲಿತ ಸಮುದಾಯದ ಜನರ ಮೇಲೆ ದೌರ್ಜನ್ಯ ನಡೆದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ರಾಜ್ಯದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ದಲಿತರ ಮೇಲಿನ ನ್ಯಾಯದಾನದಲ್ಲಿ ರಾಜ್ಯವು ಕೊನೆಯ ಸ್ಥಾನದಲ್ಲಿದೆ.

Caption
Caption

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆಯು 2018ರಿಂದ ಸತತ ಏರಿಕೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ದೇಶದ ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ, ಇಂತಹ ಪ್ರಕರಣಗಳಲ್ಲಿ ನ್ಯಾಯದಾನದ ಮಟ್ಟದ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಮೇಲೆ ದೌರ್ಜನ್ಯ ನಡೆದ 458 ಪ್ರಕರಣಗಳು 2021ರಲ್ಲಿ ದಾಖಲಾಗಿವೆ. ಇವುಗಳಲ್ಲಿ ಒಟ್ಟು 128 ಪ್ರಕರಣಗಳು ನ್ಯಾಯಾಲಯದಲ್ಲಿ ವಿಲೇವಾರಿಯಾಗಿವೆ. 128ರಲ್ಲಿ ಒಂದು ಪ್ರಕರಣ ಮಾತ್ರ ವಜಾ ಆಗಿದ್ದರೆ, 127 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆ ಆಗಿದ್ದಾರೆ. ಆ ವರ್ಷದಲ್ಲಿ ವಿಲೇವಾರಿಯಾದ ಎಲ್ಲಾ ಪ್ರಕರಣಗಳಲ್ಲಿ ಎಲ್ಲವೂ ಸಾಕ್ಷ್ಯ ಕೊರತೆಯ ಕಾರಣಕ್ಕೆ ಖುಲಾಸೆ ಆಗಿವೆ. ತನಿಖೆ ಮತ್ತು ಆರೋಪ ಪಟ್ಟಿ ಸಲ್ಲಿಸುವಲ್ಲಿ ‍ಆಗಿರುವ ಲೋಪಗಳಿಂದ ಹೀಗೆ ಆಗಿದೆ. ಹೀಗಾಗಿ ಒಂದೂ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ.

ಪರಿಶಿಷ್ಟ ಜಾತಿಯ ಜನರ ಮೇಲೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ, 2021ರಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಶೇ 1.6ರಷ್ಟು ಪ್ರಕರಣಗಳಲ್ಲಿ ಮಾತ್ರ. 2021ರಲ್ಲಿ 632 ಪ್ರಕರಣಗಳನ್ನು ನ್ಯಾಯಾಲಯಗಳು ವಿಲೇವಾರಿ ಮಾಡಿವೆ. ಅವುಗಳಲ್ಲಿ 10 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಒಟ್ಟು 613 ಪ್ರಕರಣಗಳಲ್ಲಿ ಖುಲಾಸೆಯಾಗಿದೆ. 9 ಪ್ರಕರಣಗಳು ವಿವಿಧ ಕಾರಣಗಳಿಗೆ ವಜಾ ಆಗಿವೆ.

ಒಡಿಶಾದಲ್ಲಿ ಗರಿಷ್ಠ, ರಾಜ್ಯದಲ್ಲಿ ಕನಿಷ್ಠ

ಕರ್ನಾಟಕಕ್ಕೆ ಹೋಲಿಸಿದರೆ, ಬೇರೆ ರಾಜ್ಯಗಳಲ್ಲಿ ನ್ಯಾಯಾಲಯಗಳು ವಿಲೇವಾರಿ ಮಾಡಿದ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಮಾಣ ಹೆಚ್ಚು. ಉತ್ತರ ಪ್ರದೇಶದಲ್ಲಿ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 76.3ರಷ್ಟಿದ್ದರೆ, ಜಾರ್ಖಂಡ್‌ನಲ್ಲಿ ಶೇ 53.8ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ವಿಲೇವಾರಿಯಾದವುಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 36ರಷ್ಟಿದೆ. ಶಿಕ್ಷೆಯ ಪ್ರಮಾಣವು ರಾಜ್ಯದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ ಇದೆ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆಯ ಪ್ರಮಾಣದಲ್ಲಿ ಒಡಿಶಾವು ಕರ್ನಾಟಕಕ್ಕಿಂತ ಕೆಳಮಟ್ಟದಲ್ಲಿದೆ.

ವಿಲೇವಾರಿಯಾದ ಪ್ರಕರಣಗಳಲ್ಲಿ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವ ಪ್ರಮಾಣ ನಾಲ್ಕು ವರ್ಷಗಳಿಂದ ಕುಸಿತದ ಹಾದಿಯಲ್ಲಿವೆ

* ಪರಿಶಿಷ್ಟ ಜಾತಿಯ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 2018ರಲ್ಲಿ ಶೇ 7.4ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿತ್ತು. 2021ರಲ್ಲಿ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 1.6ಕ್ಕೆ ಕುಸಿದಿದೆ

* ಪರಿಶಿಷ್ಟ ಪಂಗಡದಜನರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 2018ರಲ್ಲಿ ಶೇ 1.6ರಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿತ್ತು. 2021ರಲ್ಲಿ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೂನ್ಯಕ್ಕೆ ಕುಸಿದಿದೆ

ದಲಿತರಿಗೆ ಅಪಮಾನದ ಮೇಲೆ ಅಪಮಾನ

Caption
Caption

ಮುಖ್ಯಮಂತ್ರಿಗಳು, ಸಚಿವರು, ರಾಜಕೀಯ ನಾಯಕರು ಹಾಗೂ ಅಧಿಕಾರಿಗಳು ಪರಿಶಿಷ್ಟ ಸಮುದಾದವರ ಮನೆಯಲ್ಲಿ ಊಟ, ವಾಸ್ತವ್ಯ ಮಾಡುವ ಮೂಲಕ ಜಾತಿ ತಾರತಮ್ಯ ನಿವಾರಣೆಗೆ ಯತ್ನಿಸುತ್ತಿದ್ದರೂ, ಆ ಸಮುದಾಯಗಳ ಮೇಲಾಗುತ್ತಿರುವ ದೌರ್ಜನ್ಯಗಳು ನಿಂತಿಲ್ಲ. ರಾಜ್ಯದಲ್ಲಿ ಸರಿಸುಮಾರು ಒಂದು ತಿಂಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಮೇಲೆ ಹಲವು ದೌರ್ಜನ್ಯ ಪ್ರಕರಣಗಳು ನಡೆದಿವೆ. ಕೋಲಾರದ ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಜಾತಿಯ ಬಾಲಕನು ದೇವರ ಗುಜ್ಜುಕೋಲು ಮುಟ್ಟಿದ ಪ್ರಕರಣದಿಂದ ಆರಂಭಿಸಿ, ತುಮಕೂರಿನ ನಿಟ್ಟೂರು ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಕುಟುಂಬವೊಂದಕ್ಕೆ ದೇವಸ್ಥಾನದಲ್ಲಿ ಪೂಜೆಯ ನಿರಾಕರಣೆವರೆಗೆ ಹಲವು ಘಟನೆಗಳು ನಡೆದಿವೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ತಿಡಿಗೋಳ ಗ್ರಾಮದಲ್ಲಿ ರಥ ಮುಟ್ಟಿದ ಕಾರಣಕ್ಕೆ ಪರಿಶಿಷ್ಟ ಜಾತಿಯ ಯುವಕರ ಮೇಲೆ ಲಿಂಗಾಯತ ಸಮುದಾಯದ ಯುವಕರು ಹಲ್ಲೆ ಮಾಡಿದ್ದಾರೆ. ಈ ಘಟನೆ ನಡೆದು ಎರಡು ವಾರ ಕಳೆದರೂ, ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರ ಮೇಲಿನ ಅಘೋಷಿತ ಬಹಿಷ್ಕಾರ ಕೊನೆಗೊಂಡಿಲ್ಲ.

ತುಮಕೂರಿನ ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಪೂಜೆ ಮಾಡಲು ಮುಳುಕಟ್ಟಮ್ಮ ದೇವಸ್ಥಾನದ ಅರ್ಚಕರು ಪರಿಶಿಷ್ಟ ಸಮುದಾಯದ ಕುಟುಂಬಕ್ಕೆ ಅವಕಾಶ ನೀಡಿಲ್ಲ ಎಂದು ಮಂಗಳವಾರ ವರದಿಯಾಗಿತ್ತು. ದೇಗುಲದ ಒಳಗೆ ಪ್ರವೇಶಿಸುವಾಗ ಗದರಿಸಿ ಹೊರಗಡೆ ನಿಲ್ಲುವಂತೆ ಅರ್ಚಕರು ಸೂಚಿಸಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದರು. ಪ್ರಕರಣ ಗಂಭೀರವಾಗುತ್ತಿದ್ದಂತೆಯೇ ರಾಜಿಗೆ ಯತ್ನಿಸಿದ ದೇವಸ್ಥಾನದ ಟ್ರಸ್ಟಿಗಳು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಮುಂದಾದರು. ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ಬಳಿಕ, ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಲು ಟ್ರಸ್ಟ್ ನಿರ್ಧರಿಸಿತು. ಕುಟುಂಬವು ಈ ಘಟನೆಯಿಂದ ಎದುರಾದ ಅಪಮಾನವನ್ನು ಮೆಟ್ಟಿ ನಿಂತಿದ್ದರಿಂದ ಎಲ್ಲ ವರ್ಗದವರಿಗೂ ದೇಗುಲ ಮುಕ್ತವಾಗಿದೆ.

ಚಿಕ್ಕಮಗಳೂರಿನ ಆಲ್ದೂರು ಸಮೀಪದ ಹುಣಸೆಹಳ್ಳಿಪುರದ ಎಸ್ಟೇಟ್‌ನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಂದೇ ಕುಟುಂಬದ ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಕೂಡಿಹಾಕಿದ ಘಟನೆ ನಾಲ್ಕು ದಿನಗಳ ಹಿಂದೆಯಷ್ಟೇ ನಡೆಯಿತು. ಹೆಣ್ಣುಮಕ್ಕಳೂ ಸೇರಿದಂತೆ ಎಲ್ಲರನ್ನೂ ಥಳಿಸಿ, ಮೊಬೈಲ್ ಕಿತ್ತುಕೊಂಡು, ದನಗಳ ರೀತಿ ಕೂಡಿಹಾಕಿ ಹಿಂಸಿಸಿ ಅನಾಗರಿಕವಾಗಿ ನಡೆಸಿಕೊಳ್ಳಲಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ. ಮಕ್ಕಳು, ಹೆಣ್ಣುಮಕ್ಕಳನ್ನು ಅವಾಚ್ಯ ಪದಗಳಿಂದ ನಿಂದಿಸಲಾದ ವಿಡಿಯೊ ಹರಿದಾಡಿತು. ಈ ಘಟನೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಸ್ಟೇಟ್ ಮಾಲೀಕರು ಪ್ರತಿದೂರು ದಾಖಲಿಸಿದ್ದಾರೆ.

ಇವೆಲ್ಲಕ್ಕೂ ಮುನ್ನ ದೊಡ್ಡ ಸುದ್ದಿಯಾಗಿದ್ದು ಕೋಲಾರದ ಉಳ್ಳೇರಹಳ್ಳಿಯ ಘಟನೆ. ಗ್ರಾಮದೇವತೆ ಭೂತಮ್ಮನ ಮೆರವಣಿಗೆ ವೇಳೆ ಪರಿಶಿಷ್ಟ ಜಾತಿಯ ಬಾಲಕನೊಬ್ಬ ಗುಜ್ಜುಕೋಲು ಮುಟ್ಟಿದ್ದರಿಂದ ದೇವರಿಗೆ ಅಪಚಾರವಾಯಿತು ಎಂಬುದಾಗಿ ಗ್ರಾಮಸ್ಥರು ಭಾವಿಸಿದರು. ಬಾಲಕನ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ₹60 ಸಾವಿರ ದಂಡ ವಿಧಿಸಲಾಗಿತ್ತು. ದಂಡದ ಹಣ ಪಾವತಿಸಲು ಶಕ್ತರಲ್ಲದ ಬಾಲಕನ ಕುಟುಂಬ ಅಂತಿಮವಾಗಿ ಪೊಲೀಸರ ಮೊರೆ ಹೋಗಬೇಕಾಯಿತು.

ಈ ಘಟನೆಯ ಕಹಿ ಮಾಸುವ ಮುನ್ನವೇ, ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಗುಟ್ಲೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ವ್ಯಕ್ತಿ ಮೇಲೆ ಪ್ರಬಲ ಜಾತಿಯ ಜನರು ಹಲ್ಲೆ ನಡೆಸಿದರು ಎಂಬುದಾಗಿ ದೂರು ದಾಖಲಾಯಿತು. ಪರಿಶಿಷ್ಟ ಜಾತಿಯ ಮುನಿರಾಜು ಎಂಬುವರು ಪೆದ್ದಪಲ್ಲಿ ಗಂಗಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿದ್ದೇ ಪ್ರಬಲ ಜಾತಿಯವರಲ್ಲಿ ಸಿಟ್ಟು ತರಿಸಿತ್ತು. ಪೂಜೆ ಮಾಡಿದ್ದಕ್ಕೆ ಆ ವ್ಯಕ್ತಿಯನ್ನು ಥಳಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ಸೇರಿಸಬೇಕಾಯಿತು.

ಒಂದು ವಾರದ ಹಿಂದೆಯಷ್ಟೇ, ಬೀದರ್‌ನ ಕಮಲನಗರ ತಾಲ್ಲೂಕಿನ ಮುರ್ಗ (ಕೆ) ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಪರಿಶಿಷ್ಟ ಸಮುದಾಯದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಮತ್ತೊಂದು ಸಮುದಾಯ ವಿರೋಧಿಸಿದ ಘಟನೆ ನಡೆಯಿತು. ಶವಸಂಸ್ಕಾರಕ್ಕೆ ಸರ್ಕಾರ ಮಂಜೂರು ಮಾಡಿದ್ದ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಮುಂದಾಗಿದ್ದರೂ, ಆ ಜಾಗವು ಮನೆಗಳಿಗೆ ಸಮೀಪದಲ್ಲೇ ಇದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು.

ಕೋಲಾರ ತಾಲ್ಲೂಕಿನ ದಾವನಹಳ್ಳಿಯಲ್ಲಿ ದಸರಾ ಪ್ರಯುಕ್ತ ಗಂಗಮ್ಮ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಕಾರ್ಯಕ್ರಮವಿತ್ತು. ಉತ್ಸವಮೂರ್ತಿಯ ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಬೇಕು ಎಂಬ ವಿಚಾರದಲ್ಲಿ ವಾಗ್ವಾದ ಶುರುವಾಯಿತು. ಮೆರವಣಿಗೆಯು ಪರಿಶಿಷ್ಟರ ಮನೆಗಳ ಬಳಿಗೆ ಏಕೆ ಕೊನೆಯಲ್ಲಿ ಸಾಗಬೇಕು ಎಂದು ಸಮುದಾಯದ ಕೆಲವು ಪ್ರಶ್ನಿಸಿದರು. ಸಂಪ್ರದಾಯ ಬದಲಿಸಬೇಡಿ ಎಂದು ಮತ್ತೊಂದು ಗುಂಪಿನವರು ವಾದಿಸಿದರು. ಹೀಗಾಗಿ ಎರಡೂ ಗುಂಪಿನ ನಡುವೆ ಘರ್ಷಣೆ ನಡೆಯಿತು. 11 ಪರಿಶಿಷ್ಟರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಯಿತು.

ಒಂದು ತಿಂಗಳ ಅವಧಿಯಲ್ಲಿ ಕೋಲಾರ ಜಿಲ್ಲೆಯೊಂದರಲ್ಲೇ ಇಂತಹ ಮೂರು ಘಟನೆಗಳು ಸರದಿಯಂತೆ ನಡೆದಿವೆ. ಬಹುತೇಕ ಘಟನೆಗಳು ದೇವಸ್ಥಾನ, ಉತ್ಸವ, ಪೂಜೆಗೆ ಸಂಬಂಧಿಸಿವೆ.

ಆಧಾರ: ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧ’ ವರದಿಗಳು, ವಿವಿಧ ಪ್ರಕರಣಗಳ ಎಫ್‌ಐಆರ್‌ಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT