ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ ಅಗಲ | ಬೊಕ್ಕಸದ ಬಲ ಮದ್ಯದೊಳಗೆ...

Last Updated 15 ಮೇ 2020, 4:40 IST
ಅಕ್ಷರ ಗಾತ್ರ
ADVERTISEMENT
""

ಮೊದಲ ಲಾಕ್‌ಡೌನ್ ಅವಧಿಯಲ್ಲಿ ಬಾಗಿಲು ಮುಚ್ಚಿದ್ದ ಮದ್ಯದ ಅಂಗಡಿಗಳು ಈಗ ತೆರೆದಿವೆ. ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು ಎಂಬ ಕೂಗು ಸಹ ಜೋರಾಗಿಯೇ ಎದ್ದಿದೆ. ಮದ್ಯ ಎಂದರೆ ನಶೆಯ ಸರಕಷ್ಟೇ ಅಲ್ಲ, ಅದೇ ಬದುಕು ಎಂಬುದು ಈ ಉದ್ಯಮ ನೆಚ್ಚಿಕೊಂಡಿರುವ ಲಕ್ಷಾಂತರ ಜನರ ನಂಬಿಕೆ. ಮದ್ಯದ ಸಾಂಗತ್ಯವಿಲ್ಲದೆ ದಿನ ಕಳೆಯುವುದಾದರೂ ಹೇಗೆ ಎನ್ನುವುದು ಅದರ ಗ್ರಾಹಕರ ಪ್ರಶ್ನೆ.

ರಾಜ್ಯದಲ್ಲಿ ಮದ್ಯ ತಯಾರಿಕೆಯ 40 ಡಿಸ್ಟಲರಿಗಳು, 11 ಸಾವಿರಕ್ಕೂ ಹೆಚ್ಚು ಮದ್ಯ ಮಾರಾಟ ಕೇಂದ್ರಗಳು, ಉತ್ಪಾದಕರು ಮತ್ತು ಮದ್ಯ ಮಾರಾಟ ಗಾರರ ನಡುವೆ ಸೇತುವೆಯಾಗಿರುವ ಕರ್ನಾಟಕ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ಹಾಗೂ ಸುಂಕ ಸಂಗ್ರಹಕ್ಕೆ ಅಬಕಾರಿ ಇಲಾಖೆ ಇದೆ.

ಸಣ್ಣ ಡಿಸ್ಟಲರಿಗಳಲ್ಲಿ 300 ಜನರ ಕಾರ್ಮಿಕರಿದ್ದರೆ, ದೊಡ್ಡ ಡಿಸ್ಟಲರಿಗಳಲ್ಲಿ ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಸರಾಸರಿ 500 ಜನರೆಂದರೂ ಕಾರ್ಮಿಕರ ಸಂಖ್ಯೆ 20 ಸಾವಿರ ದಾಟುತ್ತದೆ. ಮದ್ಯದ ಅಂಗಡಿ, ಬಾರ್‌ ಆ್ಯಂಡ್ ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ, ಪಬ್‌ಗಳಲ್ಲಿ ಉದ್ಯೋಗಿಗಳ ಎರಡೂವರೆ ಲಕ್ಷಕ್ಕೂ ಹೆಚ್ಚು ಎಂಬುದು ಅಂದಾಜು. ಬೆಂಗಳೂರಿನಲ್ಲಿ ನೂರಾರು ಡ್ಯಾನ್ಸ್ ಬಾರ್‌ಗಳಿದ್ದು, ಅವುಗಳನ್ನು ನಂಬಿಕೊಂಡಿರುವ ಸಾವಿರಾರು ನೃತ್ಯಗಾರ್ತಿಯರೂ ಇದ್ದಾರೆ. ಕೊರೊನಾ ಸೋಂಕು ವ್ಯಾಪಿಸಿದ ಕಾರಣ ಸದ್ಯ ಈ ಡ್ಯಾನ್ಸ್‌ ಬಾರ್‌ಗಳು ಬಂದ್ ಆಗಿವೆ. ವೈನ್ ಶಾಪ್ ಆಜುಬಾಜಿನ ಗೂಡಂಗಡಿಗಳು, ಕ್ಯಾಂಟೀನ್‌ಗಳು, ಮಾಂಸಾಹಾರ ಹೋಟೆಲ್‌ಗಳು, ಬೀಡಾ ಅಂಗಡಿ‌ಗಳನ್ನು ನಡೆಸುವರೂ ಇದೇ ಉದ್ಯಮವನ್ನು ಪರೋಕ್ಷವಾಗಿ ಅವಲಂಬಿಸಿದ್ದಾರೆ.

ಮದ್ಯದ ಉತ್ಪಾದನಾ ವೆಚ್ಚಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ. ಮದ್ಯದ ಮೂಲ ದರಕ್ಕೆ ನಾಲ್ಕುಪಟ್ಟು ಹೆಚ್ಚಿನ ಸುಂಕ ಸೇರ್ಪಡೆಯಾಗುತ್ತದೆ. ಈ ಸುಂಕ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ. ಕೊರೊನಾ ಸೋಂಕಿನಿಂದ ಸೊರಗಿರುವ ಬೊಕ್ಕಸಕ್ಕೆ ಮದ್ಯದ ಸುಂಕವೇ ಆಧಾರ. ಹೀಗಾಗಿಯೇ ಲಾಕ್‌ಡೌನ್ ಸಡಿಲಿಕೆಯ ಜೊತೆಯಲ್ಲೇ ಅಬಕಾರಿ ಸುಂಕಗಳನ್ನು ಶೇ 11ರಿಂದ ಶೇ 25ರಷ್ಟು ಹೆಚ್ಚಳ ಮಾಡಲಾಗಿದೆ. ತನ್ನ ಕಾರ್ಯಕ್ರಮಗಳಿಗೆ ವ್ಯಯಿಸಲು ಸರ್ಕಾರ ಈ ವರಮಾನವನ್ನು ಬಹುವಾಗಿ ನೆಚ್ಚಿಕೊಂಡಿದೆ.

‘ಮದ್ಯವೆಂದರೆ ಪಾನಪ್ರಿಯರನ್ನು ಮತ್ತಿನಲ್ಲಿ ತೇಲಾಡಿಸುವ ಸರಕು ಮಾತ್ರವಲ್ಲ, ಲಕ್ಷಾಂತರ ಕುಟುಂಬಗಳ ಬದುಕನ್ನೂ ತೂಗಿಸುತ್ತದೆ. ಸರ್ಕಾರದ ಬೊಕ್ಕಸವನ್ನೂ ತುಂಬಿಸುತ್ತದೆ’ ಎನ್ನುತ್ತಾರೆ ಮದ್ಯ ಮಾರಾಟಗಾರರು ಮತ್ತು ಡಿಸ್ಟಲರಿ ಕಂಪನಿಗಳ ಮಾಲೀಕರು.

* 40 ರಾಜ್ಯದಲ್ಲಿರುವ ಡಿಸ್ಟಲರಿಗಳು

* 20 ಸಾವಿರ ಉದ್ಯೋಗಿಗಳನ್ನು ಈ ಡಿಸ್ಟಲರಿಗಳು ಹೊಂದಿವೆ

* 11,136ಮದ್ಯ ಮಾರಾಟ ಕೇಂದ್ರಗಳು ರಾಜ್ಯದಲ್ಲಿವೆ

* 2.50 ಲಕ್ಷಉದ್ಯೋಗಿಗಳು ಈ ಮಾರಾಟ ಕೇಂದ್ರಗಳಿಂದ ಬದುಕು ಕಂಡುಕೊಂಡಿದ್ದಾರೆ

* 1.50 ಲಕ್ಷಜನ, ಮದ್ಯ ವಹಿವಾಟಿನಿಂದ ಪರೋಕ್ಷ ಉದ್ಯೋಗ ಗಿಟ್ಟಿಸಿದ್ದಾರೆ

ಅಬಕಾರಿ ಇಲಾಖೆ ನೌಕರರು

* 5,485ಮಂಜೂರಾಗಿರುವ ಹುದ್ದೆಗಳು

*2,870ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ

ಸರ್ಕಾರದ ಬೊಕ್ಕಸಕ್ಕೆವರಮಾನ ಎಷ್ಟು?

* ₹22,700 ಕೋಟಿ2020–21ನೇ ಸಾಲಿನಲ್ಲಿ ವರಮಾನ ನಿರೀಕ್ಷೆ

* ₹2,200 ಕೋಟಿಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಸ್ಥಗಿತದಿಂದ ಆದ ವರಮಾನ ಖೋತಾ

* ₹55 ಕೋಟಿಲಾಕ್‌ಡೌನ್‌ಗೂ ಮೊದಲ ಪ್ರತಿದಿನ ಸರಾಸರಿ ವರಮಾನ

* ₹60 ಕೋಟಿಲಾಕ್‌ಡೌನ್ ಸಡಿಲಿಕೆ ನಂತರ ದಿನದ ಸರಾಸರಿ ವರಮಾನ

ರಾಜ್ಯ ಸರ್ಕಾರಗಳ ‘ಹಿಂಡುವ ಆಕಳು’

ಸ್ವಾತಂತ್ರ್ಯ ಪೂರ್ವದಿಂದಲೂ ಮದ್ಯಪಾನ ನಿಷೇಧದ ವಿಷಯ ದೇಶದ ಒಂದಿಲ್ಲೊಂದು ಭಾಗದಲ್ಲಿ ಆಗಾಗ ಸದ್ದು ಮಾಡುತ್ತಲೇ ಇದೆ. ಆದರೆ, ಭಾರತೀಯ ಅರ್ಥವ್ಯವಸ್ಥೆಯಲ್ಲಿ ಮದ್ಯ ವಹಿವಾಟು ಎಷ್ಟೊಂದು ಹಾಸುಹೊಕ್ಕಾಗಿದೆ ಮತ್ತು ಅನಿವಾರ್ಯವಾಗಿದೆ ಎನ್ನುವುದಕ್ಕೆ ಮೇ ಮೊದಲ ವಾರದಲ್ಲಿ ದೇಶದಾದ್ಯಂತ ನಡೆದ ಬೆಳವಣಿಗೆಗಳೇ ಸಾಕ್ಷಿ.

ಕೊರೊನಾ ಸೋಂಕು ದೇಶದ ಅರ್ಥವ್ಯವಸ್ಥೆ, ಜನರ ಕೆಲಸ, ಅಷ್ಟೇ ಏಕೆ; ಅವರ ಬದುಕಿನಲ್ಲಿ ಭಾರಿ ಬದಲಾವಣೆಯನ್ನು ತಂದಿದೆ. ಆದರೆ, ಮದ್ಯದೊಂದಿಗೆ ದೇಶದ ಸಂಬಂಧ ಮಾತ್ರ ಯಥಾಸ್ಥಿತಿಯಲ್ಲಿಯೇ ಉಳಿದಿದೆ. ತುಸು ಮುಂದುವರಿದು ಹೇಳುವುದಾದರೆ ಆ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ರಾಜ್ಯ ಸರ್ಕಾರಗಳ ಪಾಲಿಗೆ ಅಬಕಾರಿ ತೆರಿಗೆ ಎಂದರೆ ‘ಹಿಂಡುವ ಆಕಳು’ ಇದ್ದಂತೆ. ತಮಿಳುನಾಡು, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ಸರ್ಕಾರಗಳಂತೂ ವಾರ್ಷಿಕ ತಲಾ ₹ 20 ಸಾವಿರ ಕೋಟಿಗಿಂತ ಅಧಿಕ ಆದಾಯವನ್ನು ಈ ಬಾಬತ್ತಿನಿಂದಲೇ ಪಡೆಯುತ್ತವೆ. ಕರ್ನಾಟಕ ಸಹ ಈ ಸಲ ಅಬಕಾರಿ ತೆರಿಗೆಯಿಂದ ಬೊಕ್ಕಸಕ್ಕೆ ₹ 22 ಸಾವಿರ ಕೋಟಿಗೂ ಅಧಿಕ ವರಮಾನ ಹರಿದುಬರುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅಲ್ಲವೆ ಮತ್ತೆ; ಜಿಎಸ್‌ಟಿ ಜಾರಿಯಾದ ಬಳಿಕ ರಾಜ್ಯ ಸರ್ಕಾರಗಳ ಮುಖ್ಯ ಆದಾಯ ಮೂಲವಾಗಿ ಉಳಿದಿರುವುದು ಇದೇ ಅಲ್ಲವೆ?

ಮೊದಲ ಸಲ ಲಾಕ್‌ಡೌನ್‌ ವಿಧಿಸಿದ ಸಂದರ್ಭದಲ್ಲಿ ಮದ್ಯ ಮಾರಾಟವನ್ನೂ ನಿರ್ಬಂಧಿಸಲಾಗಿತ್ತು. ಆಗ ರಾಜ್ಯ ಸರ್ಕಾರಗಳು, ಕೇಂದ್ರದ ನಿರ್ಧಾರವನ್ನು ಬೆಂಬಲಿಸಿದ್ದವು. ದಿನಗಳು ಕಳೆದಂತೆ ವರಮಾನವಿಲ್ಲದೆ ಬೊಕ್ಕಸ ಸೊರಗತೊಡಗಿದಾಗ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರಗಳೇ ಕೇಂದ್ರದ ಮೇಲೆ ಒತ್ತಡಹೇರಲು ಶುರು ಮಾಡಿದವು. ಸ್ಥಗಿತಗೊಂಡಿದ್ದ ಮದ್ಯ ಮಾರಾಟ ಪುನರಾರಂಭವಾದ ದಿನ ಅಂತರದ ನಿಯಮವೆಲ್ಲ ಗೌಣವಾಗಿ ಮದ್ಯದಂಗಡಿಗಳ ಮುಂದೆ ದೊಡ್ಡ ಸರದಿಗಳು ಕಾಣಿಸಿಕೊಂಡವು. ಎರಡನೇ ದಿನ ರಾಜ್ಯದಲ್ಲಿ ದಾಖಲೆಯ ₹ 197 ಕೋಟಿ ಮೌಲ್ಯದ ಮದ್ಯ ಬಿಕರಿಯಾಯಿತು. ಖರೀದಿಗಾಗಿ ಉಂಟಾದ ನೂಕು ನುಗ್ಗಲು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣರಾದರು. ದೆಹಲಿಯಲ್ಲಿ ಇ–ಟೋಕನ್‌ ವಿತರಿಸುವ ಪರಿಪಾಟ ಆರಂಭವಾದರೆ, ಮಹಾರಾಷ್ಟ್ರದಲ್ಲಿ ಹೋಂ ಡೆಲಿವರಿಗೆ ಅವಕಾಶ ಕಲ್ಪಿಸಲಾಯಿತು. ಮದ್ಯ ಮಾರಾಟದ ‘ಕಿಕ್‌’ ಅಂತಹದ್ದು.

ನಿಷೇಧ ಸಾಧ್ಯವಾದೀತೇ?

ಮದ್ಯ ಮಾರಾಟ ನಿಷೇಧ ಮಾಡಿದ ಕೂಡಲೇ ಮದ್ಯಪಾನ ಸಂಪೂರ್ಣ ಸ್ಥಗಿತವಾಗುತ್ತದೆ, ಮದ್ಯ ವ್ಯಸನಿಗಳ ಕುಟುಂಬಗಳಲ್ಲಿ ನೆಮ್ಮದಿ ನೆಲೆಸುತ್ತದೆ ಎಂದುಕೊಳ್ಳುವುದು ಕಷ್ಟ. ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟ ಸ್ಥಗಿತವಾಗಿದ್ದರೂ ಮದ್ಯ ಪೂರೈಕೆ ಸಂಪೂರ್ಣವಾಗಿ ನಿಲ್ಲಲಿಲ್ಲ. ಅಬಕಾರಿ ಇಲಾಖೆ 1,989 ಪ್ರಕರಣಗಳನ್ನು ದಾಖಲಿಸಿತು. 471 ಮಂದಿಯನ್ನು ಬಂಧಿಸಿತು. 113 ಪರವಾನಗಿಗಳನ್ನು ಅಮಾನತು ಮಾಡಿತು. ನಾಲ್ಕು ಪರವಾನಗಿಗಳನ್ನು ರದ್ದುಗೊಳಿಸಿತು. ಆದರೂ ನಾಲ್ಕೈದು ಪಟ್ಟು ಹೆಚ್ಚಿನ ದರಕ್ಕೆ ಮದ್ಯ ಮಾರಾಟವಾಯಿತು.

‘ಮದ್ಯ ಮಾರಾಟ ನಿಷೇಧ ಮಾಡಿದರೂ ನಕಲಿ ಮದ್ಯ, ಕಳ್ಳಭಟ್ಟಿ, ನೆರೆ ರಾಜ್ಯಗಳಿಂದ ಅಕ್ರಮ ಮದ್ಯ ಪೂರೈಕೆ – ಹೀಗೆ ನಾನಾ ದಾರಿಗಳುಂಟು. ಮದ್ಯಪ್ರಿಯರು ದುಬಾರಿ ಬೆಲೆಯನ್ನೂ ಲೆಕ್ಕಿಸದೆ ಮದ್ಯ ಖರೀದಿ ಮಾಡುತ್ತಾರೆ. ಆಗ ಇನ್ನಷ್ಟು ಹೊಸ ಸಮಸ್ಯೆಗಳು ಸುತ್ತಿಕೊಳ್ಳುತ್ತವೆ’ ಎನ್ನುತ್ತಾರೆ ಮದ್ಯ ಮಾರಾಟಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT