ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ವಿದ್ಯಮಾನ | ಜಿನ್‌ಪಿಂಗ್‌ ಏಕಚಕ್ರಾಧಿಪತ್ಯ

Last Updated 23 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಚೇರ್ಮನ್‌ ಮಾವೊ ಎಂದೇ ಜನಪ್ರಿಯರಾಗಿದ್ದ ಮಾವೊ ಜೆಡಾಂಗ್‌ ಅವರು 1949ರಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೀನಾವನ್ನು ಸ್ಥಾಪಿಸಿದಾಗಿನಿಂದ ಆ ದೇಶ ತನ್ನ ಜನರ ಕುರಿತು ಅನುಸರಿಸಿದ್ದು ದಮನ ನೀತಿ ಮಾತ್ರವೇ. ಚೀನಾದ ಕಮ್ಯುನಿಸ್ಟ್‌ ಪಕ್ಷವು ಸಮಾಜವಾದ ಮತ್ತು ನಾಸ್ತಿಕವಾದವನ್ನು ಪ್ರತಿಪಾದಿಸುತ್ತದೆ. ಸಮಾಜವಾದವನ್ನು ಜಾರಿಗೆ ತರುವ ಪ್ರಯತ್ನ, ಎಲ್ಲವೂ ಸರ್ಕಾರಿ ಸ್ವಾಮ್ಯದಲ್ಲಿಯೇ ಇರಬೇಕು ಎಂಬ ಹಟದಿಂದಾಗಿ ಹಲವು ದಶಕಗಳ ಕಾಲ ದೇಶದ ಜನರು ಅತೀವವಾದ ಬಡತನದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣ ಆಗಿತ್ತು.

ಚೀನಾದ ಜನರು ಪಾರಂಪರಿಕವಾಗಿ ಧಾರ್ಮಿಕ ಮತ್ತು ಆಧ್ಯಾತ್ಮಕವಾದ ಮನಃಸ್ಥಿತಿಯನ್ನು ಹೊಂದಿದ್ದುದೇ ಕಮ್ಯುನಿಸ್ಟ್ ಪಕ್ಷದ ನಾಸ್ತಿಕವಾದದ ಜಾರಿಗೆ ದೊಡ್ಡ ಸವಾಲಾಗಿತ್ತು. ಹಾಗಾಗಿಯೇ ಧರ್ಮವನ್ನು ನಿಷೇಧಿಸುವ ಸಾಹಸಕ್ಕೆ ಮಾವೊ ಕೈಹಾಕಲಿಲ್ಲ. ಆದರೆ, ಧರ್ಮವನ್ನು ಅನುಸರಿಸುವವರಿಗೆ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ದೊರಕುತ್ತಿರಲಿಲ್ಲ. ಬೌದ್ಧ, ತಾವೊ, ಇಸ್ಲಾಂ, ಪ್ರೊಟೆಸ್ಟೆಂಟ್‌ ಮತ್ತು ಕ್ಯಾಥೊಲಿಕ್‌ ಧರ್ಮಗಳಿಗೆ ದೇಶದಲ್ಲಿ ಮಾನ್ಯತೆ ಇದೆ. ಮಾವೊ ಇದ್ದ ಕಾಲದಲ್ಲಿ ಆಸ್ತಿಕ ಎಂದು ಹೇಳಿಕೊಳ್ಳುವುದು ಸಾಧ್ಯವಿರಲಿಲ್ಲ. 1966ರಿಂದ 1976ರವರೆಗೆ ಚೀನಾದಲ್ಲಿ ‘ಸಾಂಸ್ಕೃತಿಕ ಕ್ರಾಂತಿ’ ನಡೆಯಿತು. ಇದು ಸಾಂಸ್ಕೃತಿಕ ಕ್ರಾಂತಿಯೇನೂ ಆಗಿರಲಿಲ್ಲ. ಕಮ್ಯುನಿಸ್ಟ್ ಸಿದ್ಧಾಂತವನ್ನು ದೇಶದ ಮೂಲೆ ಮೂಲೆಗೆ ಹರಡುವುದು ಇದರ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ದೇಶದಲ್ಲಿ ಇದ್ದ ದೇವಾಲಯ, ಮಸೀದಿ, ಇಗರ್ಜು, ಬೌದ್ಧ ಮಂದಿರಗಳನ್ನು ಧ್ವಂಸ ಮಾಡಲಾಗಿದೆ.

ಈಗ, ಚೀನಾದ ಅಧ್ಯಕ್ಷರಾಗಿ ಮೂರನೇ ಅವಧಿಗೆ ನೇಮಕವಾಗಿರುವ ಷಿ ಜಿನ್‌ಪಿಂಗ್‌ ಅವರನ್ನು ಮಾವೊ ಜೊತೆಗೆ ಹೋಲಿಸಲಾಗುತ್ತದೆ. ಆದರೆ, ಈ ಇಬ್ಬರ ನಡುವೆ ಹೋಲಿಕೆ ಇಲ್ಲ ಎಂಬ ವಿಶ್ಲೇಷಣೆಯೂ ಇದೆ. ಸಮಾಜವಾದದ ನೆಲೆಯಲ್ಲಿಯೇ ದೇಶ ನಿರ್ಮಾಣ ಆಗಬೇಕು ಎಂಬುದು ಮಾವೊ ಸಿದ್ಧಾಂತವಾಗಿತ್ತು. ಆದರೆ, ಷಿ ಜಿನ್‌ಪಿಂಗ್ ಅವರ 10 ವರ್ಷಗಳ ಆಳ್ವಿಕೆಯಲ್ಲಿ ದೇಶದಲ್ಲಿ ಸಮಾಜವಾದವು ನೆಲೆ ಕಳೆದುಕೊಂಡಿದೆ. 1949ರಲ್ಲಿ ದೇಶ ಸ್ಥಾಪನೆ ಆದಾಗಿನಿಂದ 1976ರಲ್ಲಿ ಸಾಯುವವರೆಗೆ ಮಾವೊ ಅವರದ್ದು ಪಕ್ಷ ಮತ್ತು ದೇಶದ ಮೇಲೆ ಬಿಗಿ ಹಿಡಿತವೇ ಆಗಿತ್ತು. ಪಕ್ಷದ ಎಲ್ಲ ಅಧಿಕಾರವನ್ನೂ ತನ್ನ ಕೈವಶ ಮಾಡಿಕೊಂಡಿರುವ ಜಿನ್‌ಪಿಂಗ್ ಅವರು ನೆಪಮಾತ್ರಕ್ಕೇ ಆದರೂ ಪಕ್ಷದ ವ್ಯವಸ್ಥೆಯ ಮೂಲಕವೇ ಆಯ್ಕೆ ಆಗಬೇಕಾಗಿದೆ. ಏಕಚಕ್ರಾಧಿಪತ್ಯಕ್ಕೆ ಅವಕಾಶ ದೊರೆಯಬಾರದು ಎಂಬ ಕಾರಣಕ್ಕಾಗಿಯೇ ದೇಶದ ಅಧ್ಯಕ್ಷ ಹುದ್ದೆಯಲ್ಲಿ ಒಬ್ಬ ವ್ಯಕ್ತಿ ಐದು ವರ್ಷಗಳ ಎರಡು ಅವಧಿಗೆ ಮಾತ್ರ ಇರಲು ಸಾಧ್ಯ ಎಂಬ ನಿಯಮವನ್ನು ಮೂರು ದಶಕಗಳ ಹಿಂದೆ ಮಾಡಿಕೊಳ್ಳಲಾಗಿತ್ತು. ತಮಗೆ ಏಕಚಕ್ರಾಧಿಪತ್ಯವೇ ಬೇಕು ಎಂಬ ಕಾರಣಕ್ಕೆ 2017ರಲ್ಲಿ ಈ ನಿಯಮವನ್ನು ಜಿನ್‌ಪಿಂಗ್ ಅವರು ರದ್ದುಪಡಿಸಿದ್ದಾರೆ. ಅದರ ಪರಿಣಾಮವಾಗಿ ಮೂರನೇ ಅವಧಿಗೆ ಅವರಿಗೆ ಅಧಿಕಾರ ದಕ್ಕಿದೆ.

ದಮನ ನೀತಿಯನ್ನು ಕೈಬಿಡಬೇಕು ಎಂಬ ಚಿಂತನೆ 1980ರ ದಶಕದಲ್ಲಿ ಕಾಣಿಸಿಕೊಂಡಿತ್ತು. ಆದರೆ, 1989ರಲ್ಲಿ ಟಿಯನಾನ್‌ಮನ್‌ನಲ್ಲಿ ನಡೆದ ಹತ್ಯಾಕಾಂಡವು ದೇಶವು ದಮನ ನೀತಿಯನ್ನೇ ಗಟ್ಟಿಯಾಗಿ ನಂಬಿಕೊಂಡಿದೆ ಎಂಬುದನ್ನು ಜಗತ್ತಿಗೆ ಮತ್ತೆ ಸಾರಿ ಹೇಳಿತು. ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಬೀಜಿಂಗ್‌ನ ಟಿಯನಾನ್‌ಮನ್‌ ಚೌಕದಲ್ಲಿ ಸೇರಿದ್ದರು. ಆಗ ಅಧ್ಯಕ್ಷರಾಗಿದ್ದವರು ಸುಧಾರಣಾವಾದಿ ಝಾವೊ ಝಿಯಾಂಗ್‌. ಈ ಪ್ರತಿಭಟನೆಯನ್ನೇ ಮುಂದಿಟ್ಟು ಸುಧಾರಣೆಗೆ ವೇಗ ತುಂಬಬೇಕು ಎಂದು ಅವರು ಬಯಸಿದ್ದರು. ಪಕ್ಷದಲ್ಲಿ ಎರಡು ಬಣಗಳಾದವು. ಪಕ್ಷವನ್ನು ಅಧಿಕಾರದಿಂದ ಕೆಳಗೆ ಇಳಿಸುವುದೇ ಪ್ರತಿಭಟನೆಯ ಗುರಿ ಎಂದು ಪ್ರಧಾನಿ ಲಿ ಪೆಂಗ್‌ ಪ್ರತಿಪಾದಿಸಿದರು. ಈ ಬಣಕ್ಕೆ ಮೇಲುಗೈಯಾಯಿತು. ಜೂನ್‌ 4ರಂದು ಬೆಳಿಗ್ಗೆ ಟ್ಯಾಂಕುಗಳು ಸಾವಿರಾರು ಜನರನ್ನು ಅಪ್ಪಚ್ಚಿ ಮಾಡಿತು.

ಯಾವುದೇ ನೀತಿಯನ್ನು ಬಂದೂಕು ಹಿಡಿದೇ ಜಾರಿ ಮಾಡುವುದು ಚೀನಾ ಕಮ್ಯುನಿಸ್ಟ್ ಪಕ್ಷದ ಜಾಯಮಾನ. ಸೌಮ್ಯವಾಗಿ ಕಾಣಿಸುವ ಜಿನ್‌ಪಿಂಗ್ ಕೂಡ ಅದಕ್ಕೆ ಹೊರತಲ್ಲ. ಪಕ್ಷದ ನಾಯಕರು, ಪತ್ರಕರ್ತರು, ಹೋರಾಟಗಾರರು ಎಲ್ಲರನ್ನೂ ನಿರ್ದಯವಾಗಿ ದಮನ ಮಾಡಿದ್ದಾರೆ.

ಭ್ರಷ್ಟಾಚಾರದ ಕೂಪವಾಗಿದ್ದ ಚೋಂಗ್‌ಕ್ವಿಂಗ್‌ ಪ್ರಾಂತ್ಯದ ಶುದ್ಧೀಕರಣಕ್ಕಾಗಿ ಸಚಿವ ಬೊ ಕ್ಸಿಲಾಯ್‌ ಅವರನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಅತ್ಯಂತ ದಕ್ಷವಾಗಿದ್ದ ಬೊ, ಅಪರಾಧಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಪೊಲೀಸರು ಸೇರಿದಂತೆ ನೂರಾರು ಮಂದಿಯನ್ನು ಸೆರೆಮನೆಗೆ ತುಂಬಿದರು. ಬೊ ಅವರ ಆಳ್ವಿಕೆಯು ಜನರಲ್ಲಿ ಭೀತಿ ಮೂಡಿಸಿತ್ತು. ಮುಂದೆ ಇದೇ ನೀತಿಯನ್ನು ಜಿನ್‌ಪಿಂಗ್ ಅವರು ಅಧ್ಯಯನ ಮಾಡಿದರು. ಅದನ್ನೇ ಅವರು ದೇಶದಾದ್ಯಂತ ಜಾರಿಗೂ ತಂದಿದ್ದಾರೆ. ಆದರೆ, ಪಕ್ಷದಲ್ಲಿ ಪ್ರಾಬಲ್ಯ ಗಳಿಸಿಕೊಂಡಿದ್ದ ಬೊ ಅವರು ಮಾತ್ರ ಈಗ ಸೆರೆಮನೆಯಲ್ಲಿ ಇದ್ದಾರೆ.

ಚೀನಾದ ರಾಜಕಾರಣದಲ್ಲಿ ನಕ್ಷತ್ರದಂತೆ ಬೆಳಗುತ್ತಿದ್ದ ಬೊ ಅವರ ಪತನದ ಬಳಿಕ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ತನಿಖೆಗೆ ಒಳಪಡಿಸಲಾಗಿದೆ. ಭ್ರಷ್ಟಾಚಾರದ ಹೆಸರಿನಲ್ಲಿ ಶಿಕ್ಷೆಗೆ ಒಳಗಾದವರ ಸಂಖ್ಯೆ ಲಕ್ಷವನ್ನೂ ದಾಟುತ್ತದೆ. ಅದರಲ್ಲಿ ಪಕ್ಷ ಮತ್ತು ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ 120 ಜನರೂ ಇದ್ದಾರೆ. ಪಕ್ಷದ ನಿರ್ಧಾರ ಕೈಗೊಳ್ಳುವ ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿಯ ಸದಸ್ಯರು ಮತ್ತು ಜಿನ್‌ಪಿಂಗ್ ಅವರ ಪ್ರತಿಸ್ಪರ್ಧಿಯಾಗಿದ್ದ ಝೌ ಯೊಂಗ್‌ಕಾಂಗ್‌ ಅವರನ್ನು 2014ರಲ್ಲಿ ಬಂಧಿಸಲಾಗಿದೆ.

ಜಿನ್‌ಪಿಂಗ್‌ ಯುಗದಲ್ಲಿ ಭಿನ್ನಮತ, ವೈವಿಧ್ಯಕ್ಕೆ ಜಾಗವೇ ಇಲ್ಲ. ಉಯ್‌ಘುರ್‌ ಜನಾಂಗದ ಮುಸ್ಲಿಮರಿಗೆ ಇನ್ನಿಲ್ಲದ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬುದು ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾದ ವಿಚಾರವಾಗಿದೆ. ಈ ಸಮುದಾಯದ 1.2 ಕೋಟಿಗೂ ಹೆಚ್ಚು ಜನರ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಇಂತಹ ನರಮೇಧ ಟಿಬೆಟ್‌ ಮತ್ತು ಮಂಗೋಲಿಯಾದಲ್ಲಿಯೂ ನಡೆಯುತ್ತಿದೆ ಎಂಬ ವರದಿಗಳಿವೆ.

ರಾಜಕೀಯ ಸುಧಾರಣೆ ತರಬೇಕು ಎಂದು ಹೇಳಿದ್ದ ಲೇಖಕ ಮತ್ತು ಸಾಮಾಜಿಕ ಹೋರಾಟಗಾರ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಲಿಯು ಕ್ಸಿಯೊಬೊ ಅವರೂ ಜೈಲಿನಲ್ಲಿಯೇ ಇದ್ದಾರೆ. ಮಾಧ್ಯಮದ ಮೇಲೆ ಕಟ್ಟುನಿಟ್ಟಿನ ನಿಗಾ ಇದೆ. ಸರ್ಕಾರ ಮತ್ತು ಪಕ್ಷಕ್ಕೆ ಪಥ್ಯವಾಗದ್ದನ್ನು ಬರೆದ ಪತ್ರಕರ್ತರನ್ನು ದೇಶದ ಭದ್ರತೆಗೆ ಧಕ್ಕೆ ತಂದ ಆರೋಪದಲ್ಲಿ ಜೈಲಿಗೆ ಹಾಕಲಾಗುತ್ತದೆ. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್‌ ಸಂಸ್ಥೆಯ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದ 180 ದೇಶಗಳ ಪಟ್ಟಿಯಲ್ಲಿ ಚೀನಾಕ್ಕೆ 175ನೇ ಸ್ಥಾನ ಇದೆ. ಇದುವೇ ಆ ದೇಶದ ಮಾಧ್ಯಮ, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಷ್ಟಿದೆ ಎಂಬುದಕ್ಕೆ ಕೈಗನ್ನಡಿ.

ಚೀನಾದ ಕಮ್ಯುನಿಸ್ಟ್‌ ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯರ ಸಭೆ
ಚೀನಾದ ಕಮ್ಯುನಿಸ್ಟ್‌ ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯರ ಸಭೆ

ಮಾವೊ ನಂತರದ ಪ್ರಬಲ ನಾಯಕ

ಜಿನ್‌ಪಿಂಗ್‌ಗೆ ರಾಜಕೀಯ ಹೊಸದೇನೂ ಅಲ್ಲ. ಅವರ ತಂದೆ ಷಿ ಝಾಂಗ್‌ಕ್ಸನ್‌ ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರು. ಮಾವೊ ಜೆಡಾಂಗ್‌ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಝಾಂಗ್‌ಕ್ಸನ್‌, ಚೀನಾದ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ದೇಶದ ಅತ್ಯುನ್ನತ ರಾಜಕೀಯ ಕುಟುಂಬದಲ್ಲಿ ಜನಿಸಿದ ಕಾರಣಕ್ಕೆ ಜಿನ್‌ಪಿಂಗ್‌ ಅವರಿಗೆ ಈಗಿನ ಹುದ್ದೆ ಒಲಿದುಬಂದಿದೆ ಎಂದರೆ ಅದು ತಪ್ಪಾಗುತ್ತದೆ.

ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರೂ ದೇಶದ ಉಪಾಧ್ಯಕ್ಷರಾಗಿದ್ದರೂ ಮಾವೊಗೆ ಆಪ್ತರಾಗಿದ್ದರೂ ಝಾಂಗ್‌ಕ್ಸನ್‌ ಮತ್ತು ಮಾವೊ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಈ ಕಾರಣದಿಂದ ಝಾಂಗ್‌ಕ್ಸನ್‌ ಅವರನ್ನು ಬಂಧಿಸಿ, ಸೆರೆಮನೆಗೆ ತಳ್ಳಲಾಗಿತ್ತು. ಇನ್ನೂ 15ನೇ ವಯಸ್ಸಿನಲ್ಲಿದ್ದ ಜಿನ್‌ಪಿಂಗ್‌ ಅವರನ್ನು ಬೀಜಿಂಗ್‌ನ ಅತಿಶ್ರೀಮಂತರ ಶಾಲೆಯಿಂದ ಎಳೆದೊಯ್ಯಲಾಗಿತ್ತು. ನಂತರ ಅವರನ್ನು ಉತ್ತರ ಚೀನಾದ ಕಗ್ಗಾಡಿನಲ್ಲಿದ್ದ ‘ರಿ–ಎಜುಕೇಷನ್‌’ ಶಿಬಿರಕ್ಕೆ ತಳ್ಳಲಾಗಿತ್ತು. ಮಾವೊ ವಿಚಾರಗಳ ವಿರುದ್ಧ ದನಿ ಎತ್ತಿದವರು ಮತ್ತು ಭಿನ್ನಾಭಿಪ್ರಾಯ ಹೊಂದಿವರನ್ನು ಕೂಡಿ ಹಾಕಿ, ಕಠಿಣ ಕೆಲಸಗಳ ಮೂಲಕ ಮಾವೊ ವಿಚಾರಗಳನ್ನು ಮನವರಿಕೆ ಮಾಡಿಕೊಡುವ ಶಿಬಿರವದು. ಅಂತಹ ಶಿಬಿರದಲ್ಲಿ ಜಿನ್‌ಪಿಂಗ್‌ ಅವರನ್ನು ಏಳು ವರ್ಷ ಶಿಬಿರದಲ್ಲಿ ‘ರಿ–ಎಜುಕೇಟ್‌’ ಮಾಡಲಾಗಿತ್ತು. ಇದೇ ಅವಧಿಯಲ್ಲಿ ಜಿನ್‌ಪಿಂಗ್‌ ಅವರ ಅಕ್ಕನನ್ನು ಬೀಜಿಂಗ್‌ನಲ್ಲೇ ಹತ್ಯೆ ಮಾಡಲಾಗಿತ್ತು.

ತಮ್ಮ ಕುಟುಂಬವನ್ನೇ ಹೊಸಕಿಹಾಕಿದ್ದ ಕಮ್ಯುನಿಸ್ಟ್‌ ಪಕ್ಷದ ವಿರೋಧಿಯಾಗುವ ಬದಲಿಗೆ, ಜಿನ್‌ಪಿಂಗ್‌ ಆ ಪಕ್ಷದ ಬಗ್ಗೆ ಒಲವು ಬೆಳೆಸಿಕೊಂಡರು.ಆನಂತರ ಕಮ್ಯುನಿಸ್ಟ್‌ ಪಕ್ಷವನ್ನು ಸೇರಲು ಜಿನ್‌ಪಿಂಗ್‌ ಮಾಡಿದ ಹಲವು ಯತ್ನಗಳು ವಿಫಲವಾದವು. ಜಿನ್‌ಪಿಂಗ್‌ ಅವರ ತಂದೆ, ಮಾವೊ ವಿಚಾರಗಳಿಗೆ ವಿರುದ್ಧವಾಗಿದ್ದರು ಎಂಬ ಕಾರಣದಿಂದಲೇ ಜಿನ್‌ಪಿಂಗ್‌ ಅವರನ್ನು ಆರಂಭದ ದಿನಗಳಲ್ಲಿ ಪಕ್ಷದ ಒಳಗೆ ಬಿಟ್ಟುಕೊಂಡಿರಲಿಲ್ಲ. ಆದರೆ ಜಿನ್‌ಪಿಂಗ್‌ ತನ್ನ ಪ್ರಯತ್ನ ಬಿಟ್ಟಿರಲಿಲ್ಲ. ಮಾವೊ ವಿಚಾರಗಳಿಗೆ ನಿಷ್ಠನಾಗಿದ್ದೇನೆ ಎಂದು ಪದೇ–ಪದೇ ಸಾಬೀತು ಮಾಡಿದ ಕಾರಣಕ್ಕೆ 1974ರಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲಾಗಿತ್ತು. ನಂತರದ ಕೆಲವೇ ವರ್ಷಗಳಲ್ಲಿ ಹೆಬೇ ಪ್ರಾಂತ್ಯದ ಅಧ್ಯಕ್ಷ ಹುದ್ದೆಗೆ ಜಿನ್‌ಪಿಂಗ್‌ ಏರಿದರು. ಚೀನಾದ ಸಾಂಸ್ಕೃತಿಕ ಕ್ರಾಂತಿಯ ಭಾಗವಾಗಿ ಆಂತರಿಕ ಗಲಭೆಗಳು ಜೋರಾಗಿದ್ದ ಕಾರಣ, 2000ನೇ ಇಸವಿಯಲ್ಲಿ ಒಲಿಪಿಂಕ್ಸ್‌ ಆಯೋಜಕನ ಸ್ಥಾನವನ್ನು ಚೀನಾ ಕಳೆದುಕೊಳ್ಳಬೇಕಾಯಿತು. ಆದರೆ, 2008ರಲ್ಲಿ ಆ ಅವಕಾಶ ಚೀನಾಗೆ ಮತ್ತೆ ಒದಗಿಬಂದಿತ್ತು. ಒಲಿಪಿಂಕ್ಸ್‌ ಆಯೋಜಿಸುವ ಹೊಣೆ ಜಿನ್‌ಪಿಂಗ್ ಅವರದ್ದಾಗಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ಜಿನ್‌ಪಿಂಗ್‌ ಅವರಿಗೆ ಪಕ್ಷದ ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿಗೆ ಪ್ರವೇಶ ದೊರೆಯಿತು. ಅಲ್ಲಿಂದಲೂ ಒಂದು ಹಂತ ಮೇಲಕ್ಕೇರಿದ ಜಿನ್‌ಪಿಂಗ್‌ 2012ರಲ್ಲಿ ಅಧ್ಯಕ್ಷರಾದರು.

ಮಾವೊ ಜೆಡಾಂಗ್‌ ಅವರನ್ನು ಚೀನಾದ ಅತಿ ನಿರಂಕುಶವಾದಿ ಎಂದು ಕರೆಯಲಾಗುತ್ತದೆ. ಅಂತಹ ನಿರಂಕುಶವಾದದ ವಿರುದ್ಧ ದನಿ ಎತ್ತಿ ಜೈಲು ಸೇರಿದ್ದ ಷಿ ಝಾಂಗ್‌ಕ್ಸನ್‌ ಅವರ ಮಗ ಷಿ ಜಿನ್‌ಪಿಂಗ್‌ ಅವರನ್ನು ಈಗ, ಮಾವೊ ನಂತರದ ಅತ್ಯಂತ ಪ್ರಬಲ ನಿರಂಕುಶವಾದಿ ಎಂದು ಕರೆಯಲಾಗುತ್ತಿದೆ. ಈ ಹಿಂದೆ ಎಂದೂ ಇಲ್ಲದಷ್ಟು ‘ರಿ–ಎಜುಕೇಷನ್‌’ ಶಿಬಿರಗಳನ್ನು ಚೀನಾದ ಉದ್ದಗಲಕ್ಕೂ ಜಿನ್‌ಪಿಂಗ್‌ ಅವಧಿಯಲ್ಲಿ ಸ್ಥಾಪಿಸಲಾಗಿದೆ. ಸಂಪೂರ್ಣ ಸ್ವಾಯತ್ತೆ ಬಯಸುತ್ತಿರುವ ಹಾಂಗ್‌ಕಾಂಗ್‌ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ. ಅಲ್ಲಿನ ಹೋರಾಟಗಾರರನ್ನು ‘ರಿ–ಎಜುಕೇಷನ್‌’ ಶಿಬಿರಗಳಿಗೆ ತಳ್ಳಲಾಗುತ್ತಿದೆ. ತೈವಾನ್‌ ಅನ್ನು ಚೀನಾ ಜತೆಗೆ ಮರುಕೂಡಿಸುವ ‘ಅಖಂಡ ಚೀನಾ’ ಮಂತ್ರವನ್ನು ಜಿನ್‌ಪಿಂಗ್‌ ಪಠಿಸಿದ್ದಾರೆ. ಅಗತ್ಯಬಿದ್ದರೆ ಸೇನೆ ಬಳಸುವುದಾಗಿಯೂ ಹೇಳಿದ್ದಾರೆ.

ಪಾಲಿಟ್‌ಬ್ಯೂರೊ ಮೇಲೆ ಬಿಗಿಹಿಡಿತ

ಏಳು ಸದಸ್ಯರ ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿಯು ಈಗ ಜಿನ್‌ಪಿಂಗ್ ಅವರ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಸಮಿತಿಯ ಏಳೂ ಸದಸ್ಯರು ಅವರ ನಿಷ್ಠರೇ ಆಗಿದ್ದಾರೆ ಎಂಬುದು ವಿಶೇಷ. ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಸಮಾವೇಶದಲ್ಲಿ ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿ ಸದಸ್ಯರ ನೇಮಕವಾಗುತ್ತದೆ. ಇದೇ ಮೊದಲ ಬಾರಿಗೆ ಏಳೂ ಜನರು ಜಿನ್‌ಪಿಂಗ್‌ ಬಣದಕ್ಕೆ ಸೇರಿದವರೇ ಆಯ್ಕೆಯಾಗಿದ್ದಾರೆ. ತಮ್ಮ ನಿಷ್ಠರನ್ನೇ ನೇಮಿಸಿಕೊಳ್ಳುವ ಮೂಲಕ ತಮ್ಮ ಸ್ಥಾನವನ್ನು ಜಿನ್‌ಪಿಂಗ್‌ ಭದ್ರಪಡಿಸಿಕೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಏಳು ಸದಸ್ಯರ ಸಮಿತಿಗೆ ಈ ಬಾರಿ ಇಬ್ಬರು ಹೊಸಬರು ಬಂದಿದ್ದಾರೆ. ಝಾವೊ ಲೆಜಿ ಹಾಗೂ ವಾಂಗ್ ಹನಿಂಗ್ ಅವರಿಗೆ ಪಾಲಿಟ್‌ಬ್ಯೂರೊದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅಚ್ಚರಿಯೆಂದರೆ, ಹಾಲಿ ಪ್ರಧಾನಿ ಲಿ ಕೆಕಿಯಾಂಗ್ ಅವರನ್ನು ಸಮಿತಿ ಒಳಗೊಂಡಿಲ್ಲ. ಜಿನ್‌ಪಿಂಗ್‌ ನಂತರದ ಸ್ಥಾನದಲ್ಲಿರುವ ಅವರನ್ನು ಕೈಬಿಡಲಾಗಿದೆ. ಇವರ ಸ್ಥಾನಕ್ಕೆ, ಪಕ್ಷದ ಶಾಂಘೈ ಘಟಕದ ಮುಖ್ಯಸ್ಥರಾಗಿರುವ ಲಿ ಕಿಯಾಂಗ್ ಬಂದಿದ್ದಾರೆ.

ಮುಂದಿನ ವರ್ಷದ ಮಾರ್ಚ್‌ನಲ್ಲಿ ತೆರವಾಗಲಿರುವ ಪ್ರಧಾನಿ ಹುದ್ದೆಗೆ ಲಿ ಕಿಯಾಂಗ್ ನೇಮಕಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಿನ ಪ್ರಧಾನಿ ಲಿ ಕೆಕಿಯಾಂಗ್ ಅವರನ್ನು ಸುಲಭವಾಗಿ ಹೊರಗೆ ಕಳುಹಿಸುವುದಕ್ಕೆ ಜಿನ್‌ಪಿಂಗ್‌ ವೇದಿಕೆ ಸಿದ್ಧ ಮಾಡಿದ್ದಾರೆ.ಕಾಯ್‌ ಕಿ, ಡಿಂಗ್ ಷುಷಿಯಾಂಗ್, ಲೀ ಷಿ ಅವರು ಇನ್ನಿತರ ಸದಸ್ಯರು. ಪಕ್ಷದ ಗುವಾಂಗ್‌ಡಾಂಗ್‌ ಘಟಕದ ಮುಖ್ಯಸ್ಥರಾಗಿರುವ ಲೀ ಷಿ ಅವರು ಜಿನ್‌ಪಿಂಗ್ ಅವರಜೊತೆಗೆ ಈ ಹಿಂದೆ ಕೆಲಸ ಮಾಡಿದ್ದರು. 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸ್ಥಾಯಿ ಸಮಿತಿಯಲ್ಲಿ ಮಹಿಳೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.ಸಮಿತಿಯಲ್ಲಿರುವ ಎಲ್ಲರೂ 60 ವರ್ಷ ಮೀರಿದವರು. ಇವರು ಮತ್ತೆ ಎರಡು ಅವಧಿಗೆ ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿಗೆ ಪುನರಾಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ ಎನ್ನಲಾಗಿದೆ.

ಸರ್ವೋಚ್ಚ ನಾಯಕ

ಕಮ್ಯುನಿಸ್ಟ್ ಪಕ್ಷದ ಸಮಾವೇಶದಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ ಜಿನ್‌ಪಿಂಗ್‌ ಅವರ ಪರಮಾಧಿಕಾರ ಹಾಗೂ ತೈವಾನ್‌ನ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ನಿರ್ಣಯಗಳು ಮುಖ್ಯವಾದವು.

ಜಿನ್‌ಪಿಂಗ್ ಅವರು ಪಕ್ಷ ಮತ್ತು ಪಾಲಿಟ್‌ಬ್ಯೂರೊ ಸ್ಥಾಯಿ ಸಮಿತಿಯ ಕೇಂದ್ರ ಎಂದು ಕಮ್ಯುನಿಸ್ಟ್ ಪಕ್ಷದ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಇದನ್ನು ಪಕ್ಷದ ಸಂವಿಧಾನದಲ್ಲಿ ಸೇರಿಸಲು ಒಪ್ಪಿಗೆ ಸಿಕ್ಕಿದೆ. ಜಿನ್‌ಪಿಂಗ್‌ ಅವರು ಸ್ವತಂತ್ರವಾಗಿ ಯಾವುದೇ ನಿರ್ಧಾರ ಕೈಗೊಳ್ಳಬಹುದಾಗಿದೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ಜಿನ್‌ಪಿಂಗ್‌ ಅವರು ತೆಗೆದುಕೊಂಡ ನಿರ್ಧಾರಗಳು ವಿಫಲವಾದರೂ, ಅವರನ್ನು ದೂರುವಂತಿಲ್ಲ.

ತೈವಾನ್‌ ಸ್ವಾತಂತ್ರ್ಯವನ್ನು ವಿರೋಧಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ತೈವಾನ್ ತನ್ನ ಭಾಗ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದ ಚೀನಾ, ಪಕ್ಷದ ಸಮಾವೇಶದಲ್ಲಿ ಈ ಕುರಿತು ಅಧಿಕೃತ ನಿರ್ಣಯವನ್ನು ಅಂಗೀಕರಿಸಿದೆ.

ಆಧಾರ: ಬಿಬಿಸಿ, ಬ್ರಿಟಾನಿಕಾ, ಕೌನ್ಸಿಲ್‌ ಆನ್‌ ಫಾರಿನ್‌ ರಿಲೇಷನ್ಸ್‌, ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT