ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ‘ಭದ್ರಾ ಮೇಲ್ದಂಡೆ’ಗೆ ರಾಷ್ಟ್ರೀಯ ಮಾನ್ಯತೆ ಗರಿ

Last Updated 17 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಧ್ಯ ಕರ್ನಾಟಕಕ್ಕೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಸಿಗಲು ಇನ್ನೊಂದು ಮೆಟ್ಟಿಲು ಬಾಕಿ ಇದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಮಾತ್ರ ಬಾಕಿ ಇದೆ.ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ನೀರಾವರಿ ಯೋಜನೆ ಎಂಬ ಹಿರಿಮೆಗೆ ‘ಭದ್ರಾ ಮೇಲ್ದಂಡೆ’ ಪಾತ್ರವಾಗಲಿದೆ. ಹನಿ ನೀರಾವರಿ ಮೂಲಕ ಸೌಲಭ್ಯ ಕಲ್ಪಿಸುವ ಬೃಹತ್‌ ಗಾತ್ರದ ನೀರಾವರಿ ಯೋಜನೆ ಇದಾಗಿದೆ. ಇತರ ರಾಜ್ಯಗಳ ನೀರಾವರಿ ಯೋಜನೆಗಳಿಗೂ ಇದು ಮಾದರಿಯಾಗಲಿದೆ.

ವಾಣಿವಿಲಾಸ (ವಿ.ವಿ.) ಸಾಗರ ಜಲಾಶಯ ಶತಮಾನದ ಹಿಂದೆ ನಿರ್ಮಾಣವಾದರೂ ಚಿತ್ರದುರ್ಗ ಜಿಲ್ಲೆ ಬರದ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಬದಲಾದ ಹವಾಮಾನ, ಕಾಲಕಾಲಕ್ಕೆ ಸರಿಯಾಗಿ ಮಳೆ ಆಗದಿರುವುದರಿಂದ ವಿ.ವಿ.ಸಾಗರ ಜಲಾಶಯ ಭರ್ತಿಯಾಗಿದ್ದು ವಿರಳ. ಮಳೆಯಾಶ್ರಿತ ಕೃಷಿಯನ್ನೇ ನಂಬಿಕೊಂಡ ರೈತರ ಬದುಕು ತೀರ ದುರ್ಬರವೆಂಬುದು ಸರ್ಕಾರಕ್ಕೆ ಮನವರಿಕೆಯಾದ ಬಳಿಕ ರೂಪುಗೊಂಡ ಯೋಜನೆಯೇ ‘ಭದ್ರಾ ಮೇಲ್ದಂಡೆ’.

ಏನಿದು ಯೋಜನೆ?: ಚಿಕ್ಕಮಗಳೂರು–ಶಿವಮೊಗ್ಗ ಜಿಲ್ಲೆಯಲ್ಲಿರುವ ಭದ್ರಾ ಜಲಾಶಯದಿಂದ ಮಧ್ಯಕರ್ನಾಟಕಕ್ಕೆ ನೀರುಣಿಸುವುದೇ ‘ಭದ್ರಾ ಮೇಲ್ದಂಡೆ’ ಉದ್ದೇಶ. ವರ್ಷಕ್ಕೆ 29.9 ಟಿಎಂಸಿ ಅಡಿ ನೀರನ್ನು ಮೇಲ್ದಂಡೆಗೆ ಮೀಸಲಿಟ್ಟು ಯೋಜನೆ ರೂಪಿಸಲಾಗಿದೆ. ಹೆಸರು ಭದ್ರಾ ಮೇಲ್ದಂಡೆ ಎಂದಿದ್ದರೂ ತುಂಗಾ ನದಿಯ ಪಾಲು ಹೆಚ್ಚಿದೆ.

ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ತುಂಗಾ ಜಲಾಶಯದ ನೀರನ್ನು ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ತರುವ ಸಾಹಸಮಯ ಕೆಲಸ ಯೋಜನೆಯ ಭಾಗವಾಗಿದೆ. ಭದ್ರಾ ಜಲಾಶಯದಿಂದ 12.5 ಟಿಎಂಸಿ ಅಡಿ ನೀರನ್ನು ‘ಭದ್ರಾ ಮೇಲ್ದಂಡೆ’ಗೆ ಹರಿಸಲಾಗುತ್ತದೆ.

ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಇದರ ಉದ್ದೇಶ. ವಿ.ವಿ.ಸಾಗರ ಜಲಾಶಯಕ್ಕೂ 2.5 ಟಿಎಂಸಿ ಅಡಿ ನೀರನ್ನು ಒದಗಿಸಲಾಗುತ್ತದೆ.ನಾಲ್ಕು ಜಿಲ್ಲೆಯ 5.57 ಲಕ್ಷ ಎಕರೆಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಬಹುದೊಡ್ಡ ಯೋಜನೆ ಇದಾಗಿದೆ. 2,25,515 ಹೆಕ್ಟೇರ್‌ ಪ್ರದೇಶ ಹಸನಾಗಲಿದ್ದು, 367 ಕೆರೆಗಳಿಗೆ ಶೇ 50ರಷ್ಟು ನೀರು ತುಂಬಿಸಲಾಗುತ್ತದೆ.

ಯೋಜನೆ ರೂಪುಗೊಂಡಿದ್ದು ಹೀಗೆ...: 2003ರಲ್ಲಿ ರೂಪುಗೊಂಡ ಯೋಜನೆಗೆ₹2 ಸಾವಿರ ಕೋಟಿ ಮೀಸಲಿಡಲಾಯಿತು.ನೀರಾವರಿ ತಜ್ಞ ಕೆ.ಸಿ.ರೆಡ್ಡಿ ಅಧ್ಯಕ್ಷತೆಯಲ್ಲಿ ರಚನೆಗೊಂಡ ಸಮಿತಿ ಅಧ್ಯಯನ ನಡೆಸಿ 2004ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಪರಿಷ್ಕೃತ ಯೋಜನೆಗೆ ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ, 2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತು. 2015ರಲ್ಲಿ ಮತ್ತೆ ಪರಿಷ್ಕರಣೆ ಮಾಡಿ ₹12,340 ಕೋಟಿ ಅಂದಾಜು ವೆಚ್ಚ ತಯಾರಿಸಲಾಯಿತು.ರಾಷ್ಟ್ರೀಯ ಮಾನ್ಯತೆ ಪಡೆಯುವ ಹೊಸ್ತಿಲಲ್ಲಿ ಯೋಜನಾ ವೆಚ್ಚವನ್ನು ₹21 ಸಾವಿರ ಕೋಟಿಗೆ ಏರಿಕೆ ಮಾಡಲಾಯಿತು. ಯೋಜನೆ ಆರಂಭವಾದಾಗಿನಿಂದ ಈವರೆಗೆ ₹4,866 ಕೋಟಿ ವೆಚ್ಚವಾಗಿದೆ.

ಬೃಹತ್‌ ನೀರಾವರಿ ಯೋಜನೆ: ಹೊಸ ಜಲಾಶಯ ನಿರ್ಮಿಸದೇ ಇಷ್ಟೊಂದು ಪ್ರಮಾಣದ ನೀರು ಸದ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ತುಂಗಾದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಲುವೆ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲ್ಲೂಕಿನಲ್ಲಿ ಹಾದು ಹೋಗುತ್ತದೆ. ಕಣಬೂರು, ಕುಸಬೂರು ಗ್ರಾಮಗಳ ಬಳಿ ಎರಡು ಹಂತದಲ್ಲಿ ನೀರು ಲಿಫ್ಟ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಭದ್ರಾ ಜಲಾಶಯದಿಂದ ಮೇಲ್ದಂಡೆ ನಾಲೆಯ ಮೂಲಕ ಹರಿಯುವ ನೀರನ್ನು ಮತ್ತೆ ಎರಡು ಸ್ಥಳಗಳಲ್ಲಿ ಲಿಫ್ಟ್‌ ಮಾಡುವ ಅಗತ್ಯವಿದೆ. ತರೀಕೆರೆ ತಾಲ್ಲೂಕಿನ ಶಾಂತಿಪುರ ಹಾಗೂ ಬೆಟ್ಟದತಾವರೆಕೆರೆ ಗ್ರಾಮಗಳ ಬಳಿ ಪಂಪ್‌ಹೌಸ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.ಎರಡೂ ಕಡೆ ನೀರನ್ನು 45 ಮೀಟರ್‌ ಮೇಲೆತ್ತಿ ನಾಲೆಗೆ ಹರಿಸಲಾಗುತ್ತದೆ. ಪ್ರತಿ ಪಂಪ್‌ಹೌಸ್‌ನಲ್ಲಿ ನಾಲ್ಕು ಮೋಟರುಗಳಿದ್ದು, ಪ್ರತಿ ಮೋಟರು 750 ಕ್ಯುಸೆಕ್‌ ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿದೆ. ಉಳಿದಂತೆ ಗುರುತ್ವಾಕರ್ಷಣ ಶಕ್ತಿಯ ಬಲದಿಂದ ನೀರು ಹರಿದು ಹೋಗುವಂತೆ ಯೋಜನೆ ಸಿದ್ಧಪಡಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ತುಮಕೂರು ಹಾಗೂ ಚಿತ್ರದುರ್ಗ ಶಾಖಾ ಕಾಲುವೆಗಳು ಕವಲೊಡೆಯುತ್ತವೆ.ಚಿತ್ರದುರ್ಗ ಶಾಖಾ ಕಾಲುವೆಗೆ 11.96 ಟಿಎಂಸಿ ಅಡಿ ನೀರು ಹಾಗೂ ತುಮಕೂರು ಶಾಖಾ ಕಾಲುವೆಗೆ 9.4 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರ ಜಲಾಶಯಕ್ಕೆ ತುಮಕೂರು ಶಾಖಾ ಕಾಲುವೆ ಮೂಲಕ ನೀರು ಹರಿಸಲಾಗುವುದು.159 ಕಿ.ಮೀ ಉದ್ದದ ತುಮಕೂರು ಶಾಖಾ ಕಾಲುವೆ ನಿರ್ಮಾಣ ಕಾಮಗಾರಿ ತೀರಾ ನಿಧಾನಗತಿಯಲ್ಲಿ ಸಾಗುತ್ತಿದೆ. ಹಾಗಾಗಿ, ಪರ್ಯಾಯ ಮಾರ್ಗದ ಮೂಲಕ ವಿ.ವಿ.ಸಾಗರಕ್ಕೆ ಭದ್ರಾ ನೀರು ಹರಿಸಲಾಗುತ್ತಿದೆ. ಹಲವು ದಶಕಗಳ ಬಳಿಕ ವಿ.ವಿ.ಸಾಗರ ಭರ್ತಿಯಾಗಿದೆ.

ಅಜ್ಜಂಪುರದ ಬಳಿ ಏಳು ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಹೇಮಾವತಿ ನಾಲೆ ಬಳಿಕ ಅತಿ ಉದ್ದದ ಸುರಂಗ ನಿರ್ಮಿಸಿದ್ದು ಭದ್ರಾ ಮೇಲ್ದಂಡೆಗೆ. ಇದು ರಾಜ್ಯದ ಎರಡನೇ ಅತಿ ದೊಡ್ಡ ನೀರಾವರಿ ಸುರಂಗ ಮಾರ್ಗವಾಗಿದೆ. 8 ಮೀಟರ್‌ ಅಗಲದ ಸುರಂಗ ನಾಲೆ ಭೂಮಿಯಿಂದ 150 ಅಡಿ ಆಳದಲ್ಲಿದೆ. ಸುರಂಗ ನಿರ್ಮಾಣ ಕಾಮಗಾರಿ ಎರಡೂವರೆ ವರ್ಷ ನಡೆದಿದೆ.

ಭದ್ರಾ ಜಲಾಶಯದಿಂದ ತರೀಕೆರೆ ತಾಲ್ಲೂಕುವರೆಗಿನ 46 ಕಿ.ಮೀ. ಉದ್ದದ ನಾಲೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.134 ಕಿ.ಮೀ. ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ 61 ಕಿ.ಮೀ. ಕಾಲುವೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಒಂದೆಡೆ 1.9 ಕಿ.ಮೀ. ಹಾಗೂ ಮತ್ತೊಂದೆಡೆ 400 ಮೀಟರ್‌ ನಾಲೆ ಮಾತ್ರ ಬಾಕಿ ಇದೆ. ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ ತಾಲ್ಲೂಕಿನ ಉಪ ಕಾಲುವೆ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಚಳ್ಳಕೆರೆ, ಪಾವಗಡ, ಶಿರಾ, ಜಗಳೂರು, ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿ ಭೂಸ್ವಾಧೀನ ನಡೆಯಬೇಕಿದೆ.

13 ವರ್ಷ ಶೇ 40 ಕಾಮಗಾರಿ: ಕಾಮಗಾರಿಗೆ ಚಾಲನೆ ನೀಡಿ 13 ವರ್ಷ ಕಳೆದರೂ ಅರ್ಧದಷ್ಟು ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ. 2008ರಿಂದ ಈವರೆಗೆ ಶೇ 40ರಷ್ಟು ಕಾಮಗಾರಿ ಮಾತ್ರ ಮುಗಿದಿದೆ. ಇನ್ನೂ ಶೇ 60ರಷ್ಟು ಕಾಮಗಾರಿ ನಡೆಯಬೇಕಿದೆ. ಅನುದಾನ ಹಂಚಿಕೆ ಹಾಗೂ ತಾಂತ್ರಿಕ ಕಾರಣಕ್ಕೆ ಯೋಜನೆ ತ್ವರಿತಗತಿ ಪಡೆಯಲು ಸಾಧ್ಯವಾಗಿಲ್ಲ.

ಈ ಯೋಜನೆಗೆ ಒಟ್ಟು 7,012 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಇದರಲ್ಲಿ 3,500 ಎಕರೆ ಭೂಸ್ವಾಧೀನವಾಗಿದ್ದು, ಇನ್ನೂ 3,512 ಎಕರೆ ಭೂಸ್ವಾಧೀನ ಬಾಕಿ ಇದೆ. ಈ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದ ಇಡೀ ಯೋಜನೆ ಕುಂಟುತ್ತ ಸಾಗುತ್ತಿದೆ. ಅರಣ್ಯ ಭೂಮಿ, ಅಮೃತ್‌ ಮಹಲ್‌ ಕಾವಲು ಹಾಗೂ ರೈತರ ಜಮೀನು ವಶಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ.

ತುಂಗಾ ಜಲಾಶಯ ಮತ್ತು ಭದ್ರಾ ಜಲಾಶಯದ ನಡುವೆ 11 ಕಿ.ಮೀ. ಉದ್ದದ ಕಾಲುವೆ ನಿರ್ಮಾಣಕ್ಕೆ 2008ರಲ್ಲೇ ಗುತ್ತಿಗೆ ನೀಡಲಾಗಿದೆ. ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಬೇಕಿದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಕಾರಣಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ ಕಡ್ಡಾಯ. ಈ ಅನುಮತಿ ಪಡೆಯಲು ಎಂಟು ವರ್ಷ ಹಿಡಿದಿದೆ. 2016ರಿಂದ ಕಾಮಗಾರಿ ಆರಂಭವಾದರೂ ಇನ್ನೂ ಪೂರ್ಣಗೊಂಡಿಲ್ಲ.

ಭದ್ರಾ ಮೇಲ್ದಂಡೆ ಯೋಜನೆಯ ನಕ್ಷೆ
ಭದ್ರಾ ಮೇಲ್ದಂಡೆ ಯೋಜನೆಯ ನಕ್ಷೆ

ಆಂಧ್ರ ಪ್ರದೇಶದ ಆಕ್ಷೇಪ ಏನು?

ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಪಡೆದುಕೊಳ್ಳುವ ಪ್ರಯತ್ನ ನಡೆದಿದ್ದು ತೀರಾ ಇತ್ತೀಚೆಗೆ. 2020ರ ಡಿಸೆಂಬರ್‌ನಲ್ಲಿ ಕೇಂದ್ರ ಜಲಶಕ್ತಿ ಆಯೋಗದ ತಾಂತ್ರಿಕ ಸಮಿತಿ ಸಕಾರಾತ್ಮಕವಾಗಿ ಸ್ಪಂದಿಸಿತು. ಕೇಂದ್ರ ಜಲಶಕ್ತಿ ಆಯೋಗ ಉನ್ನತಾಧಿಕಾರ ಸಮಿತಿ ಎದುರು ಯೋಜನೆ ಚರ್ಚೆಗೆ ಬಂದಾಗ ಆಂಧ್ರಪ್ರದೇಶ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು.

‘ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡರೆ ಹೊಸಪೇಟೆಯ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಆಂಧ್ರಪ್ರದೇಶದ ರಾಜೋಳಿಬಂಡಾ ತಿರುವು ಯೋಜನೆ, ಕರ್ನೂಲ್‌–ಕಡಪಾ ಕಾಲುವೆ, ಶ್ರೀಶೈಲಂ ಯೋಜನೆಯ ಮೇಲೆ ಪರಿಣಾಮ ಉಂಟಾಗಲಿದೆ. ನೀರಿನ ಹಂಚಿಕೆಯೇ ಇಲ್ಲದ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ ಹೇಗೆ ನೀಡುತ್ತೀರಿ?’ ಎಂಬುದು ಆಂಧ್ರಪ್ರದೇಶದ ತಕರಾರು. ಈ ಆಕ್ಷೇಪಕ್ಕೆ ಕೇಂದ್ರಜಲಶಕ್ತಿ ಆಯೋಗ ಉನ್ನತಾಧಿಕಾರ ಸಮಿತಿ ಮನ್ನಣೆ ನೀಡಿಲ್ಲ.

ರಾಷ್ಟ್ರೀಯ ಮಾನ್ಯತೆಯ ಪ್ರಯೋಜನಗಳೇನು?

*ಭದ್ರಾ ಮೇಲ್ದಂಡೆಗೆ ಸಂಬಂಧಿಸಿದ ಅಂತರರಾಜ್ಯ ನೀರು ಹಂಚಿಕೆಯ ವಿವಾದಕ್ಕೆ ತೆರೆಬಿದ್ದಿದೆ

*ನೀರಾವರಿ ಯೋಜನೆಯ ಒಟ್ಟು ವೆಚ್ಚದ ಶೇ 60ರಷ್ಟನ್ನು ಕೇಂದ್ರ ಸರ್ಕಾರ ಭರಿಸುತ್ತದೆ

*ಯೋಜನಾ ವೆಚ್ಚದ ₹ 21,000 ಕೋಟಿಯಲ್ಲಿ ಕೇಂದ್ರ ಸರ್ಕಾರ ₹ 12,500 ಕೋಟಿ ಅನುದಾನ ನೀಡಲಿದೆ

*ಯೋಜನೆಯ ಅನುಷ್ಠಾನಕ್ಕೆ ಕಾಲಮಿತಿ ನಿಗದಿಯಾಗಲಿದ್ದು, ಕಾಮಗಾರಿ ವೇಗ ಪಡೆಯಲಿದೆ

*ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆ ಕಡಿಮೆ ಆಗಲಿದೆ. ಕಾಮಗಾರಿಯ ವೇಗಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಿದೆ.

****

ತಾಂತ್ರಿಕ ತೊಡಕುಗಳು ನಿವಾರಣೆಯಾಗಿವೆ. ಕೆಲವೇ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದ ಎದುರು ಚರ್ಚೆಗೆ ಬರಲಿದೆ. ಇದೇ ಮೊದಲ ಬಾರಿಗೆ ರಾಜ್ಯದ ನೀರಾವರಿ ಯೋಜನೆಯೊಂದು ರಾಷ್ಟ್ರೀಯ ಮಾನ್ಯತೆಗೆ ಭಾಜನವಾಗುತ್ತಿದೆ

- ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ

****

ಬೃಹತ್‌ ನೀರಾವರಿ ಯೋಜನೆಯನ್ನು ಅನುಷ್ಠಾನ ಗೊಳಿಸುವಷ್ಟು ಆರ್ಥಿಕ ಸುಸ್ಥಿತಿಯಲ್ಲಿ ರಾಜ್ಯವಿಲ್ಲ. ರಾಷ್ಟ್ರೀಯ ಮಾನ್ಯತೆಗೆ ಎದುರು ನೋಡುತ್ತಿದ್ದ ದಿನ ಸಮೀಪಿಸಿರುವುದು ಸಂತಸದ ಸಂಗತಿ. ಯೋಜನೆ ಅನುಷ್ಠಾನ ತ್ವರಿತಗೊಳಿಸಬೇಕು

-ಪಿ.ಕೋದಂಡರಾಮಯ್ಯ,ಅಧ್ಯಕ್ಷ, ನೀರಾವರಿ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT