ಭಾನುವಾರ, ಜೂನ್ 26, 2022
26 °C

ಆಳ-ಅಗಲ| ‘ಅಗ್ನಿಪಥ’ಕ್ಕೆ ವಿರೋಧವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಸೇನೆಯ ಮೂರೂ ಪಡೆಗಳ ಸೇವೆಗೆ ಯುವಜನರನ್ನು ಅಲ್ಪಾವಧಿಗೆ ನೇಮಕ ಮಾಡಿಕೊಳ್ಳುವ ಸಲುವಾಗಿ ಸರ್ಕಾರವು ನೂತನವಾಗಿ ಆರಂಭಿಸಿರುವ, ‘ಅಗ್ನಿಪಥ’ ಯೋಜನೆಗೆ ದೇಶದ ಎಲ್ಲೆಡೆ ಭಾರಿ ವಿರೋಧ ವ್ಯಕ್ತವಾಗಿದೆ. ಸೇನಾ ನೇಮಕಾತಿಯಲ್ಲಿ ಸರ್ಕಾರವು ಮಾಡಿರುವ ಬದಲಾವಣೆಯನ್ನು ವಿರೋಧಿಸಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೈನಿಕರಿಗೆ ದೊರೆಯುವ ಸವಲತ್ತುಗಳು ಹೊಸದಾಗಿ ಸೃಷ್ಟಿಸಲಾಗಿರುವ ಅಗ್ನಿಪಥ ಯೋಜನೆ ಅಡಿಯಲ್ಲಿ ನೇಮಕವಾಗುವ ‘ಅಗ್ನಿವೀರ’ರಿಗೆ ಲಭ್ಯ ಆಗುವುದಿಲ್ಲ ಎಂಬುದು ವಿರೋಧಕ್ಕೆ ಪ್ರಮುಖ ಕಾರಣವಾಗಿದೆ.

ಸಾವು: ಪರಿಹಾರದಲ್ಲಿ ತಾರತಮ್ಯ

ಸೇನಾ ಕರ್ತವ್ಯದಲ್ಲಿರುವ ಅಗ್ನಿವೀರರು, ಕರ್ತವ್ಯದಲ್ಲಿ ಇದ್ದಾಗಲೇ ಮೃತಪಟ್ಟರೆ ಸರ್ಕಾರವು ಇಂತಿಷ್ಟು ಎಂದು ಪರಿಹಾರವನ್ನು ನೀಡುತ್ತದೆ. ಆದರೆ, ಕರ್ತವ್ಯದಲ್ಲಿನ ಸಾವನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ಮೂರು ವರ್ಗಗಳಲ್ಲಿ ಎರಡು ವರ್ಗಕ್ಕೆ ಮಾತ್ರ ಹೆಚ್ಚಿನ ಮೊತ್ತದ ಪರಿಹಾರವಿದ್ದು, ಒಂದು ವರ್ಗಕ್ಕೆ ಕಡಿಮೆ ಮೊತ್ತದ ಪರಿಹಾರವನ್ನು ನಿಗದಿ ಮಾಡಲಾಗಿದೆ.

ನೈಸರ್ಗಿಕ ವಿಕೋಪದಿಂದ ಸಂಭವಿಸಿದ ಸಾವುಗಳಿಗೆ ಪರಿಹಾರವಾಗಿ ಜೀವವಿಮೆ ಮಾತ್ರ ದೊರೆಯಲಿದೆ. ಜತೆಗೆ, ಮೃತಪಟ್ಟ ಅಗ್ನಿವೀರರ ಉಳಿಕೆ ಅವಧಿಯ ವೇತನವನ್ನು ಸರ್ಕಾರ ನೀಡುವುದಿಲ್ಲ. ಒಂದು ಬಾರಿಯ ಪರಿಹಾರ ಮತ್ತು ಉಳಿಕೆ ಸೇವಾವಧಿಯ ಪೂರ್ಣ ವೇತನದಿಂದ ಈ ವರ್ಗವು ವಂಚಿತವಾಗುತ್ತದೆ

ಅಪಘಾತ/ಅವಘಡಗಳಲ್ಲಿ ಸಂಭವಿಸಿದ ಸಾವುಗಳಿಗೆ ಜೀವವಿಮೆಯ ಜತೆಗೆ ಸರ್ಕಾರವು ಹೆಚ್ಚುವರಿಯಾಗಿ ₹44 ಲಕ್ಷವನ್ನು ಒಂದು ಬಾರಿಯ ಪರಿಹಾರವಾಗಿ ನೀಡಲಿದೆ. ಜತೆಗೆ ಅಗ್ನಿವೀರರ ಉಳಿಕೆ ಅವಧಿಯ ವೇತನವನ್ನು ಸರ್ಕಾರ ನೀಡಲಿದೆ. ಝಡ್‌ ವರ್ಗದ ಸಾವುಗಳಿಗೂ ಇದೇ ಸ್ವರೂಪದ ಪರಿಹಾರ ದೊರೆಯಲಿದೆ

ಹಲವು ಸವಲತ್ತುಗಳಿಗೆ ಕೊಕ್‌

l ಸೇನಾ ಸೇವೆಗೆ ನಿಯುಕ್ತರಾದ ಎಲ್ಲರಿಗೂ ದೊರೆಯುವ ಪಿಂಚಣಿ ಮತ್ತು ಗ್ರಾಚ್ಯುಟಿಯಂತಹ ಯಾವುದೇ ಸೌಲಭ್ಯಗಳು ಅಗ್ನಿವೀರರಿಗೆ ದೊರೆಯುವುದಿಲ್ಲ

l ನಿವೃತ್ತ ಸೈನಿಕರಿಗೆ ದೊರೆಯುವ ಆರೋಗ್ಯ ವಿಮೆ ಸೌಲಭ್ಯವು ಅಗ್ನಿವೀರರಿಗೆ ದೊರೆಯವುದಿಲ್ಲ

l ಸೈನಿಕರು ಮತ್ತು ನಿವೃತ್ತ ಸೈನಿಕರಿಗೆ ಇರುವ ಸೇನಾ ಕ್ಯಾಂಟೀನ್‌ ಸೌಲಭ್ಯವು ಅಗ್ನಿವೀರರಿಗೆ ಅನ್ವಯವಾಗುವುದಿಲ್ಲ

l ನಿವೃತ್ತ ಸೈನಿಕ (ಎಕ್ಸ್‌ ಸರ್ವಿಸ್‌ಮನ್‌) ಸ್ಥಾನಮಾನ ಮತ್ತು ಸಂಬಂಧಿತ ಸವಲತ್ತುಗಳಿಗೆ ಅಗ್ನಿವೀರರು ಅರ್ಹರಲ್ಲ

l ಸಶಸ್ತ್ರ ಪಡೆಗಳ ಭವಿಷ್ಯ ನಿಧಿ (ಎಎಫ್‌ಪಿಪಿಎಫ್‌) ಯೋಜನೆ ಅಡಿ, ಹಣ ಉಳಿತಾಯ ಸವಲತ್ತು ಅಗ್ನಿವೀರರಿಗೆ ಇರುವುದಿಲ್ಲ

l ಸೇನಾ ಸಮೂಹ ವಿಮಾ ನಿಧಿ ಸವಲತ್ತು ಅಗ್ನಿವೀರರಿಗೆ ಅನ್ವಯವಾಗುವುದಿಲ್ಲ

ಸೇವಾ ನಿಧಿ: ಹಲವು ಗೊಂದಲ

ಅಗ್ನಿವೀರರಾಗಿ ನೇಮಕಗೊಂಡ ಮೊದಲ ತಿಂಗಳಿಂದಲೂ ಅವರ ವೇತನದಲ್ಲಿ ಶೇ 30ರಷ್ಟು ಮೊತ್ತವು ಸೇವಾನಿಧಿಗೆ ಜಮೆ ಆಗಲಿದೆ. ಅಷ್ಟೇ ಮೊತ್ತವನ್ನು ಸರ್ಕಾರವೂ ಜಮೆ ಮಾಡಲಿದೆ. ನಾಲ್ಕು ವರ್ಷದ ಅಂತ್ಯದ ವೇಳೆಗೆ ಎರಡೂ ಮೊತ್ತ ಮತ್ತು ಅದಕ್ಕೆ ದೊರೆತ ಬಡ್ಡಿಯನ್ನು ಸೇರಿಸಿ ಒಟ್ಟು ₹11.71 ಲಕ್ಷದ ಮೊತ್ತವನ್ನು ಅಗ್ನಿವೀರರಿಗೆ ನೀಡಲಾಗುತ್ತದೆ ಎಂದು ಸರ್ಕಾರವು ಹೇಳಿದೆ. ಈ ಯೋಜನೆಗೆ ಸಂಬಂಧಿಸಿದ ಹಲವು ದಾಖಲೆ ಪತ್ರಗಳಲ್ಲೂ ಈ ರೀತಿಯೇ ಹೇಳಲಾಗಿದೆ. ಆದರೆ, ‘ಅಗ್ನಿಪಥ’ ಯೋಜನೆಗೆ ಸಂಬಂಧಿಸಿದ ‘ನಿಯಮಗಳು ಮತ್ತು ಷರತ್ತುಗಳು’ ದಾಖಲೆ ಪತ್ರದಲ್ಲಿ ಕೆಲವು ಷರತ್ತುಗಳನ್ನು ಉಲ್ಲೇಖಿಸಲಾಗಿದೆ. ಸೇವಾನಿಧಿಗೆ ಸಂಬಂಧಿಸಿದ ವಿವಿಧ ದಾಖಲೆ ಪತ್ರಗಳಲ್ಲಿ ಇರುವ ವಿವರವು ಪರಸ್ಪರ ವ್ಯತಿರಿಕ್ತವಾಗಿವೆ.

‘ನಿಯಮಗಳು ಮತ್ತು ಷರತ್ತುಗಳು’ ದಾಖಲೆ ಪತ್ರದ 12ನೇ ಸೆಕ್ಷನ್‌ನ, ಬಿ ಮತ್ತು ಸಿ ಭಾಗಗಳಲ್ಲಿ ಸೇವಾನಿಧಿಗೆ ಸಂಬಂಧಿಸಿದ ಷರತ್ತುಗಳನ್ನು ಉಲ್ಲೇಖಿಸಲಾಗಿದೆ. ಸಿ ಭಾಗದಲ್ಲಿ ‘ಸೇವಾನಿಧಿ ಪಾವತಿಯ ವಿಧಾನ’ವನ್ನು ವಿವರಿಸಲಾಗಿದೆ. ಈ ಭಾಗದಲ್ಲಿ, ‘ಸೇವಾನಿಧಿಯ ಮೊತ್ತವನ್ನು ಪಾವತಿ ಮಾಡಲು ಪ್ರತಿ ಅಗ್ನಿವೀರರಿಗೂ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಸ್ವಯಂ ಉದ್ಯೋಗ ಮತ್ತು ಉದ್ದಿಮೆ ಆರಂಭಿಸುವವರಿಗೆ ಮತ್ತು ತಕ್ಷಣದ ವೆಚ್ಚಗಳನ್ನು ಭರಿಸಲು ಬ್ಯಾಂಕ್‌ ಗ್ಯಾರಂಟಿಯ ಮುಖೇನ ಹಣಕಾಸು ಸಾಲವನ್ನು ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರತ್ಯೇಕವಾಗಿ ರೂಪಿಸಲಾಗುತ್ತದೆ’ ಎಂದು ಹೇಳಲಾಗಿದೆ.

ಸೇವಾನಿಧಿಯ ಮೊತ್ತವನ್ನು ಅಗ್ನಿವೀರರ ಖಾತೆಗೆ ಜಮೆ ಮಾಡಲಾಗುತ್ತದೆಯೇ ಅಥವಾ ಚೆಕ್‌ ರೂಪದಲ್ಲಿ ನೀಡಲಾಗುತ್ತದೆಯೇ ಅಥವಾ ನಗದು ರೂಪದಲ್ಲಿ ನೀಡಲಾಗುತ್ತದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಈ ದಾಖಲೆ ಪತ್ರದಲ್ಲಿ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಸೇವಾನಿಧಿ ಮೊತ್ತವು ಯಾವ ರೂಪದಲ್ಲಿ ಅಗ್ನಿವೀರರಿಗೆ ದೊರೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ.

l ಸೇನೆಯ ಕಾಯಂ ಸೇವೆಗೆ ನಿಯುಕ್ತರಾದ ಅಗ್ನಿವೀರರಿಗೆ ಅವರ ವೇತನದಲ್ಲಿ ಕಡಿತವಾಗಿದ್ದ ಸೇವಾನಿಧಿ ಮೊತ್ತ ಮತ್ತು ಅದಕ್ಕೆ ಲಭ್ಯವಾದ ಬಡ್ಡಿ ಮಾತ್ರ ನೀಡಲಾಗುತ್ತದೆ. ಸರ್ಕಾರದ ಕೊಡುಗೆಗೆ ಇವರು ಅರ್ಹರಾಗುವುದಿಲ್ಲ

l ನಾಲ್ಕು ವರ್ಷಗಳಿಗೂ ಮುನ್ನವೇ ಅಗ್ನಿಪಥ ಸೇವೆಯಿಂದ ಕೋರಿಕೆ ಮೇರೆಗೆ ಸೇವಾ ಬಿಡುಗಡೆ ಪಡೆಯುವ ಅಗ್ನಿವೀರರಿಗೆ, ಅಲ್ಲಿಯವರೆಗೆ ಅವರ ವೇತನದಲ್ಲಿ ಕಡಿತ ಮಾಡಲಾಗಿದ್ದ ಸೇವಾನಿಧಿ ಮೊತ್ತ ಮತ್ತು ಅದಕ್ಕೆ ಲಭ್ಯವಾದ ಬಡ್ಡಿ ಮಾತ್ರ ದೊರೆಯಲಿದೆ. ಸೇವಾನಿಧಿಗೆ ಸರ್ಕಾರವು ಜಮೆ ಮಾಡಿದ್ದ ಮೊತ್ತವು ದೊರೆಯುವುದಿಲ್ಲ

ನೇಮಕಾತಿ ಹೆಚ್ಚಿದ್ದಲ್ಲಿ ಪ್ರತಿಭಟನೆಯೂ ಹೆಚ್ಚು

‘ಅಗ್ನಿಪಥ’ ಯೋಜನೆಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಹೆಚ್ಚಿನ ನೇಮಕಾತಿ ನಡೆಯುವ ರಾಜ್ಯಗಳಲ್ಲಿ ಪ್ರತಿಭಟನೆಯು ತೀವ್ರ ಸ್ವರೂಪದ ಹಿಂಸಾಚಾರಕ್ಕೆ ತಿರುಗಿದೆ. ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ಮಧ್ಯಪ್ರದೇಶದ, ಜಾರ್ಖಂಡ್ ಮೊದಲಾದ ಉತ್ತರದ ರಾಜ್ಯಗಳಲ್ಲಿ ಕಿಚ್ಚು ದೊಡ್ಡ ಪ್ರಮಾಣದಲ್ಲಿ ಹಬ್ಬಿದೆ. ಹತ್ತಾರು ರೈಲುಗಳಿಗೆ ಬೆಂಕಿ ಹಚ್ಚಲಾಗಿದೆ. ಈ ರಾಜ್ಯಗಳಲ್ಲಿ ಪ್ರತಿಭಟನೆಯ ಕಾವು ಇನ್ನೂ ಆರಿಲ್ಲ.

2020ರ ಬಳಿಕ ಕೋವಿಡ್ ಕಾರಣದಿಂದ ನೇಮಕಾತಿ ಸ್ಥಗಿತಗೊಂಡಿದೆ. ಇದಕ್ಕೂ ಹಿಂದಿನ ಸೇನಾ ನೇಮಕಾತಿಯ ದತ್ತಾಂಶಗಳನ್ನು ಗಮನಿಸಿದರೆ, ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 1.54 ಲಕ್ಷ ಸೈನಿಕರನ್ನು ನೇಮಿಸಿಕೊಳ್ಳಲಾಗಿದೆ. ಅಂದರೆ, ವರ್ಷಕ್ಕೆ ಸರಾಸರಿ 50 ಸಾವಿರ ಸೈನಿಕರು ಸೇನೆಯನ್ನು ಸೇರಿದ್ದಾರೆ. ಆದರೆ ಈ ವರ್ಷದಿಂದ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಾತಿ ನಡೆಯಲಿದ್ದು, ನೇಮಕಾತಿಯ ಸ್ವರೂಪದಲ್ಲಿ ಭಾರಿ ಬದಲಾವಣೆ ಮಾಡಿರುವುದು ಆಕಾಂಕ್ಷಿಗಳನ್ನು ಸಿಟ್ಟಿಗೇಳಿಸಿದೆ.

ಸೇನಾ ನೇಮಕಾತಿಯಲ್ಲಿ ಉತ್ತರ ಭಾರತದ ರಾಜ್ಯಗಳಿಂದ ಹೆಚ್ಚು ಜನರು ಸೇನೆಗೆ ನೇಮಕವಾಗುತ್ತಿದ್ದಾರೆ ಎಂಬುದು ಅಂಕಿ–ಅಂಶಗಳಿಂದ ತಿಳಿಯುತ್ತದೆ. ಉತ್ತರ ಭಾರತದ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಅಗ್ರ ಸ್ಥಾನದಲ್ಲಿದೆ. ಮೂರು ವರ್ಷಗಳ ಅವಧಿಯಲ್ಲಿ ಈ ರಾಜ್ಯದಿಂದ 18,906 ಸೈನಿಕರು ಆಯ್ಕೆಯಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಪಂಜಾಬ್ ಇದೆ. ಇಲ್ಲಿ ಸುಮಾರು 15 ಸಾವಿರ ಸೈನಿಕರ ನೇಮಕಾತಿ ನಡೆದಿದೆ. ರಾಜಸ್ಥಾನದಲ್ಲಿ 13 ಸಾವಿರ, ಮಹಾರಾಷ್ಟ್ರದಲ್ಲಿ 11 ಸಾವಿರ ಹಾಗೂ ಹರಿಯಾಣದಲ್ಲಿ 10 ಸಾವಿರ ಯುವಕರಿಗೆ ಕೆಲಸ ಸಿಕ್ಕಿದೆ. ಬಿಹಾರ ಹಾಗೂ ಹಿಮಾಚಲ ಪ್ರದೇಶದಿಂದ ಆಯ್ಕೆಯಾಗುವವರ ಪ್ರಮಾಣವೂ ಗಮನಾರ್ಹ ಮಟ್ಟದಲ್ಲಿದೆ. ಸೇನಾ ಕಾಯ್ದೆ–1950ರ ಪ್ರಕಾರ, ಪಕ್ಕದ ದೇಶ ನೇಪಾಳದಿಂದಲೂ ಸೇನೆಗೆ ಯುವಕರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಮೂರು ವರ್ಷಗಳ ಅವಧಿಯಲ್ಲಿ 5,275 ನೇಪಾಳಿಗರು ಭಾರತದ ಸೇನೆಗೆ ಆಯ್ಕೆಯಾಗಿದ್ದಾರೆ.

ದಕ್ಷಿಣದ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ ಮೂರು ವರ್ಷಗಳಲ್ಲಿ 5,300 ಸೈನಿಕರ ನೇಮಕಾತಿ ಆಗಿದೆ. ಕರ್ನಾಟದ 4,267 ಜನರಿಗೆ ಮಾತ್ರ ಈ ಅವಕಾಶ ಸಿಕ್ಕಿದೆ. ಉಳಿದ ರಾಜ್ಯಗಳ ಪಾಲು ಕಡಿಮೆಯಿದೆ. ಪ್ರತಿಭಟನೆಯ ವಿಚಾರಕ್ಕೆ ಬಂದರೆ, ದಕ್ಷಿಣ ಭಾರತದ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳಲ್ಲಿ ಮಾತ್ರ ಹೆಚ್ಚು ಪ್ರತಿರೋಧ ಕಂಡುಬಂದಿದೆ. ಇನ್ನುಳಿದ ರಾಜ್ಯಗಳಲ್ಲಿ ವಿರೋಧವಷ್ಟೇ ವ್ಯಕ್ತವಾಗಿದೆ. ಹಿಂಸಾಚಾರದ ಹಿಂದೆ ಸೇನಾ ನೇಮಕಕ್ಕೆ ತರಬೇತಿ ನೀಡುವ ಸಂಸ್ಥೆಗಳ ಕುಮ್ಮಕ್ಕು ಇದೆ ಎಂಬ ಆರೋಪವೂ ಕೇಳಿಬಂದಿದೆ.

ಆಧಾರ: ಭಾರತೀಯ ಸೇನೆಯ ಅಗ್ನಿಪಥ ಯೋಜನೆ, ಅಗ್ನಿಪಥ ಯೋಜನೆಯ ನಿಯಮಗಳು ಮತ್ತು ಷರತ್ತುಗಳು, ಪಿಐಬಿ ಪತ್ರಿಕಾ ಪ್ರಕಟಣೆ, ಪಿಟಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು