ಭಾನುವಾರ, ಜುಲೈ 3, 2022
23 °C

ಆಳ–ಅಗಲ | ಅಡುಗೆ ಎಣ್ಣೆ ಕೊರತೆ: ದರ ಏರಿಕೆ ಬರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡೊನೇಷ್ಯಾ ತಾಳೆ ಎಣ್ಣೆ ರಫ್ತನ್ನು ನಿಷೇಧ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್‌ 28ರಿಂದ ಅನ್ವಯವಾಗಲಿರುವ ಈ ನಿಷೇಧವು ಭಾರತದಲ್ಲಿ ತಾಳೆ ಎಣ್ಣೆ ಬಳಕೆದಾರರನ್ನು ಬಾಧಿಸಲಿದೆ ಎಂದು ಅಂದಾಜಿಸಲಾಗಿದೆ. ಈ ಆದೇಶ ಹೊರಬಿದ್ದ ಎರಡು ದಿನಗಳಲ್ಲೇ ನಿಷೇಧ ಅನ್ವಯವಾಗುವುದು ಸಂಸ್ಕರಿಸಿದ ತಾಳೆ ಎಣ್ಣೆಗೆ ಮಾತ್ರ ಎಂದು ಇಂಡೊನೇಷ್ಯಾದ ಅಧಿಕಾರಿಗಳು ಹೇಳಿದ್ದರು. ಆದರೆ, ನಿಷೇಧ ಜಾರಿಯಾಗುವುದಕ್ಕೆ ಕೆಲವೇ ಗಂಟೆಗಳು ಉಳಿದಿರುವಾಗ, ನಿಷೇಧವು ಎಲ್ಲಾ ಸ್ವರೂಪದ ತಾಳೆ ಎಣ್ಣೆಗೆ ಅನ್ವಯವಾಗಲಿದೆ ಎಂದು ಇಂಡೊನೇಷ್ಯಾ ಹಣಕಾಸು ಸಚಿವಾಲಯ ಘೋಷಿಸಿದೆ. ಇಂಡೊನೇಷ್ಯಾ ಸರ್ಕಾರವು ಹೀಗೆ ಪದೇ ಪದೇ ನಿರ್ಧಾರವನ್ನು ಬದಲಿಸಿದೆ. ಹೀಗಾಗಿ, ಆದೇಶ ಜಾರಿಗೆ ಬಂದ ನಂತರವಷ್ಟೇ ಯಾವುದೆಲ್ಲಾ ನಿಷೇಧ ಎಂಬುದು ಗೊತ್ತಾಗಲಿದೆ. ಕಚ್ಚಾ ತಾಳೆ ಎಣ್ಣೆ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆ ಎರಡರ ರಫ್ತು ನಿಷೇಧವಾದರೂ ಅಥವಾ ಕೇವಲ ಸಂಸ್ಕರಿಸಿದ ತಾಳೆ ಎಣ್ಣೆಯ ರಫ್ತು ನಿಷೇಧವಾರೂ ಅದು ಭಾರತೀಯರನ್ನು ಬಾಧಿಸಲಿದೆ.

ದೇಶವು ಆಮದು ಮಾಡಿಕೊಳ್ಳುವ ಒಟ್ಟು ತಾಳೆ ಎಣ್ಣೆಯಲ್ಲಿ, ಇಂಡೊನೇಷ್ಯಾದ ಪಾಲು ಶೇ 37ರಷ್ಟು. ಇಂಡೊನೇಷ್ಯಾವು ಎಲ್ಲಾ ಸ್ವರೂಪದ ತಾಳೆ ಎಣ್ಣೆಯ ರಫ್ತನ್ನು ರದ್ದು ಮಾಡಿದರೆ, ಭಾರತದ ಒಟ್ಟು ತಾಳೆ ಎಣ್ಣೆ ಆಮದಿನಲ್ಲಿ ಶೇ 37ರಷ್ಟು ಖೋತಾ ಆಗುತ್ತದೆ. ಇದರಿಂದ ದೇಶದಲ್ಲಿ ಅಡುಗೆ ಎಣ್ಣೆಯ ಕೊರತೆಯಾಗುತ್ತದೆ. ದೇಶದ ಒಟ್ಟು ಅಡುಗೆ ಎಣ್ಣೆ ಆಮದಿನಲ್ಲಿ ಇಂಡೊನೇಷ್ಯಾದಿಂದ ತರಿಸಿಕೊಳ್ಳುವ ಎಲ್ಲಾ ಸ್ವರೂಪದ ತಾಳೆ ಎಣ್ಣೆಯ ಪ್ರಮಾಣವು ಶೇ 17ರಷ್ಟಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಅಡುಗೆ ಎಣ್ಣೆಯನ್ನು ತಕ್ಷಣಕ್ಕೆ ಬೇರೆ ದೇಶಗಳಿಂದ ತರಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ದೇಶೀಯ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಯ ಕೊರತೆ ಉಂಟಾಗುತ್ತದೆ. ಅದರ ಪರಿಣಾಮವಾಗಿ ಎಲ್ಲಾ ಅಡುಗೆ ಎಣ್ಣೆಗಳಿಗೆ ಬೇಡಿಕೆ ಹೆಚ್ಚಿ, ಅಂತಿಮವಾಗಿ ಅವುಗಳ ಬೆಲೆ ಏರಿಕೆಯಾಗಲಿದೆ.

ದೇಶವು ಆಮದು ಮಾಡಿಕೊಳ್ಳುವ ಒಟ್ಟು ತಾಳೆ ಎಣ್ಣೆಯಲ್ಲಿ ಸಂಸ್ಕರಿಸಿದ ತಾಳೆ ಎಣ್ಣೆಯ ಪ್ರಮಾಣ ಶೇ 29ರಷ್ಟು ಮಾತ್ರ. ಒಟ್ಟು ತಾಳೆ ಎಣ್ಣೆ ಆಮದಿನಲ್ಲಿ ಇಂಡೊನೇಷ್ಯಾದಿಂದ ತರಿಸಿಕೊಳ್ಳುವ ಸಂಸ್ಕರಿಸಿದ ತಾಳೆ ಎಣ್ಣೆಯ ಪ್ರಮಾಣ ಶೇ 18ರಷ್ಟು. ಈಗ ಇಂಡೊನೇಷ್ಯಾವು ಸಂಸ್ಕರಿಸಿದ ತಾಳೆ ಎಣ್ಣೆಯ ರಫ್ತನ್ನು ಮಾತ್ರ ನಿಷೇಧ ಜಾರಿಗೆ ತಂದರೆ, ಒಟ್ಟು ತಾಳೆ ಎಣ್ಣೆ ಆಮದಿನಲ್ಲಿ ಶೇ 18ರಷ್ಟು ಖೋತಾ ಆಗಲಿದೆ. ದೇಶದ ಒಟ್ಟು ಅಡುಗೆ ಎಣ್ಣೆ ಆಮದಿನಲ್ಲಿ ಶೇ 8.4ರಷ್ಟು ಕೊರತೆಯಾಗಲಿದೆ. ಈ ಕೊರತೆಯನ್ನು ತುಂಬಿಸಿಕೊಳ್ಳಲು ಬೇರೆ ಅಡುಗೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಾ ಸ್ವರೂಪದ ಅಡುಗೆ ಎಣ್ಣೆಯ ಕೊರತೆ ಇರುವುದರಿಂದ ತಕ್ಷಣಕ್ಕೆ ತಾಳೆ ಎಣ್ಣೆಯ ಬದಲಿಗೆ, ಬೇರೆ ಎಣ್ಣೆಯನ್ನು ತರಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದ ದೇಶದಲ್ಲಿ ಇತರ ಅಡುಗೆ ಎಣ್ಣೆಗಳಿಗೂ ಬೇಡಿಕೆ ಹೆಚ್ಚುವುದರಿಂದ, ಸಹಜವಾಗಿ ಆ ಎಲ್ಲಾ ಎಣ್ಣೆಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಕಚ್ಚಾ ತಾಳೆ ಎಣ್ಣೆ ರಫ್ತನ್ನು ಇಂಡೊನೇಷ್ಯಾ ನಿಷೇಧ ಮಾಡದೇ ಇದ್ದರೆ, ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬಹುದಾದ ಸಾಧ್ಯತೆ ಇದೆ. ಇಂಡೊನೇಷ್ಯಾ, ಕಚ್ಚಾ ತಾಳೆ ಎಣ್ಣೆಯ ಮೇಲೆ ಹೆಚ್ಚಿನ ಪ್ರಮಾಣದ ರಫ್ತು ಸುಂಕ ವಿಧಿಸುತ್ತಿದೆ. ತಮ್ಮಲ್ಲಿನ ಸಂಸ್ಕರಣ ಘಟಕಗಳ ವಹಿವಾಟನ್ನು ಉತ್ತೇಜಿಸಲು ಎರಡೂ ದೇಶಗಳು, ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲೆ ಕಡಿಮೆ ರಫ್ತು ಸುಂಕ ವಿಧಿಸುತ್ತಿವೆ. ಎರಡೂ ದೇಶಗಳಿಂದ ಕಚ್ಚಾ ತಾಳೆ ಎಣ್ಣೆಯನ್ನು ತರಿಸಿಕೊಂಡು ಅದನ್ನು ಸಂಸ್ಕರಿಸಿದರೆ ತಗಲುವ ಒಟ್ಟು ವೆಚ್ಚಕ್ಕಿಂತ, ಸಂಸ್ಕರಿಸಿದ ತಾಳೆ ಎಣ್ಣೆಯನ್ನೇ ಆಮದು ಮಾಡಿಕೊಂಡರೆ ಅದರ ಬೆಲೆಯೇ ಕಡಿಮೆಯಾಗುತ್ತದೆ. ಕಚ್ಚಾ ತಾಳೆ ಎಣ್ಣೆಯ ಅಂತಿಮ ಬೆಲೆಯು, ಆಮದು ಮಾಡಿಕೊಳ್ಳಲಾದ ಸಂಸ್ಕರಿಸಿದ ತಾಳೆ ಎಣ್ಣೆಯ ಬೆಲೆಗಿಂತ ಶೇ 5–10ರಷ್ಷ್ಟು ದುಬಾರಿಯಾಗುತ್ತದೆ. ಮಲೇಷ್ಯಾವೂ ಕಚ್ಚಾ ತಾಳೆ ಎಣ್ಣೆಗೆ ಹೆಚ್ಚಿನ ರಫ್ತು ಸುಂಕ ವಿಧಿಸುವುದರಿಂದ, ಅಲ್ಲಿಂದ ಹೆಚ್ಚಿನ ಪ್ರಮಾಣದ ಆಮದು ಮಾಡಿಕೊಂಡರೂ ಬೆಲೆಯಲ್ಲಿ ಏರಿಕೆ ಇದ್ದೇ ಇರುತ್ತದೆ. ಹೀಗಾಗಿ ಕಚ್ಚಾ ತಾಳೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದೂ ಕಾರ್ಯಸಾಧುವಲ್ಲ. ಇದರಿಂದ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕಚ್ಚಾ ತಾಳೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತರಿಸಿಕೊಂಡರೂ, ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಅದರ ಮಾರಾಟ ಬೆಲೆ ಏರಿಕೆಯಾಗಲಿದೆ.

ತಾಳೆ ಎಣ್ಣೆಗೆ ಪರ್ಯಾಯವಾಗಿ ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದೆ. ಎರಡೂ ದೇಶಗಳಿಂದ ಸೂರ್ಯಕಾಂತಿ ಎಣ್ಣೆಯ ರಫ್ತು ಬಹುತೇಕ ಸ್ಥಗಿತವಾಗಿದೆ. ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಕೊರತೆಯಿದೆ. ಹೀಗಾಗಿ, ಇಂಡೊನೇಷ್ಯಾದ ರಫ್ತು ನಿಷೇಧದ ಪರಿಣಾಮವನ್ನು ಕಡಿಮೆಗೊಳಿಸಲು ಯಾವುದೇ ದಾರಿಗಳು ಇಲ್ಲ ಎನ್ನುತ್ತದೆ ದಿ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎಒಐ).

‘ದಾಸ್ತಾನು ಮಿತಿ ಹೇರಿಕೆಯಿಂದ ಕೊರತೆ’

ಇದೇ ಏಪ್ರಿಲ್‌ 1ಕ್ಕೆ ಅಂತ್ಯವಾದ ವಹಿವಾಟಿನ ಪ್ರಕಾರ ದೇಶದಲ್ಲಿ ಒಟ್ಟು 20.90 ಲಕ್ಷ ಟನ್‌ಗಳಷ್ಟು ಅಡುಗೆ ಎಣ್ಣೆ ದಾಸ್ತಾನು ಇದೆ. ಇದರಲ್ಲಿ 15 ಲಕ್ಷ ಟನ್‌ಗೂ ಹೆಚ್ಚು ಅಡುಗೆ ಎಣ್ಣೆ ಸಾಗಾಟದ ವಿವಿಧ ಹಂತಗಳಲ್ಲಿ ಇದೆ. ಈ ಹಿಂದಿನ 13 ತಿಂಗಳಲ್ಲಿ ಅಡುಗೆ ಎಣ್ಣೆಯ ಗರಿಷ್ಠ ದಾಸ್ತಾನು ಇದು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಇದ್ದರೂ ದೇಶದಲ್ಲಿ ಅಡುಗೆ ಎಣ್ಣೆಯ ಕೊರತೆ ಉಂಟಾಗಿದೆ. ‘ಸರ್ಕಾರವು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ದಾಸ್ತಾನು ಮಿತಿ ಹೇರಿರುವುದರಿಂದಲೂ ಕೊರತೆ ತಲೆದೋರಿದೆ’ ಎನ್ನುತ್ತದೆ ಎಸ್‌ಇಎಒಐ. 

ದೇಶದಲ್ಲಿ ಈಗ ಜಾರಿಯಲ್ಲಿರುವ ದಾಸ್ತಾನು ಮಿತಿ ಹೇರಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಎಸ್‌ಇಎಒಐ, ಇದೇ ಏಪ್ರಿಲ್‌ 21ರಂದು ಮಾಧ್ಯಮ ಹೇಳಿಕೆ ನೀಡಿತ್ತು.

‘ಮಾರ್ಚ್‌ 30ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರವು ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ದಾಸ್ತಾನಿಗೆ ಮಿತಿ ಹೇರಿದೆ. ಅಡುಗೆ ಎಣ್ಣೆಯ ಕೃತಕ ಅಭಾವವನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಈ ಮಿತಿಯ ಅನ್ವಯ ಚಿಲ್ಲರೆ ಮಾರಾಟಗಾರರು ಒಟ್ಟು 30 ಕ್ವಿಂಟಲ್‌ಗಿಂತ ಹೆಚ್ಚು ಮತ್ತು ಸಗಟು ಮಾರಾಟಗಾರರು 50 ಕ್ವಿಂಟಲ್‌ಗಿಂತ ಹೆಚ್ಚು ಅಡುಗೆ ಎಣ್ಣೆಯನ್ನು ಸಂಗ್ರಹಿಸುವಂತಿಲ್ಲ. ಸಾಮಾನ್ಯವಾಗಿ ಸಗಟು ವ್ಯಾಪಾರಿಗಳು 30–50 ಟನ್‌ ಸಾಮರ್ಥ್ಯದ ಟ್ರಕ್‌ಗಳಲ್ಲಿ ಅಡುಗೆ ಎಣ್ಣೆಯನ್ನು ತರಿಸಿಕೊಳ್ಳುತ್ತಾರೆ. ಮಿತಿಯ ಹೇರಿಕೆಯಿಂದ ಈ ಮಟ್ಟದಲ್ಲಿ ಅಡುಗೆ ಎಣ್ಣೆಯನ್ನು ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಡಿಮೆ ಪ್ರಮಾಣದ ಎಣ್ಣೆಯನ್ನು ತರಿಸಿಕೊಳ್ಳುತ್ತಿರುವುದರಿಂದ, ಸಾಗಾಟ ವೆಚ್ಚ ಹೆಚ್ಚಾಗುತ್ತಿದೆ. ಅಂತಿಮವಾಗಿ ಅದು ಚಿಲ್ಲರೆ ಮಾರಾಟ ಬೆಲೆ ಏರಿಕೆಗೂ ಕಾರಣವಾಗುತ್ತಿದೆ’ ಎಂದು ಎಸ್‌ಇಎಒಐ ವಿವರಿಸಿದೆ.

‘ಬೆಲೆ ಏರಿಕೆಯನ್ನು ನಿಯಂತ್ರಿಸಲು ದಾಸ್ತಾನು ಮಿತಿ ಜಾರಿಗೆ ತರಲಾಗಿದೆ. ಆದರೆ, ಮಿತಿಯ ಕಾರಣದಿಂದಲೇ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಕೊರತೆ ಉಂಟಾಗಿದೆ. ಪರಿಣಾಮವಾಗಿ ಮಾರಾಟ ಬೆಲೆ ಏರಿಕೆಯಾಗುತ್ತಿದೆ. ದಾಸ್ತಾನು ಮಿತಿ ಹೇರಿಕೆಯ ಉದ್ದೇಶವೇ ಈಡೇರುತ್ತಿಲ್ಲ. ಈ ನಿರ್ಧಾರವನ್ನು ಸರ್ಕಾರ ಮರುಪರಿಶೀಲಿಸಬೇಕು’ ಎಂದು ಎಸ್‌ಇಎಒಐ ಒತ್ತಾಯಿಸಿದೆ. 

ನಿಷೇಧ ಎಲ್ಲದಕ್ಕೂ ಅನ್ವಯ: ಇಂಡೊನೇಷ್ಯಾ

ಜಕಾರ್ತ (ರಾಯಿಟರ್ಸ್): ತಾಳೆ ಎಣ್ಣೆ ರಫ್ತು ವ್ಯಾಪ್ತಿಯನ್ನು ಇಂಡೊನೇಷ್ಯಾ ವಿಸ್ತರಿಸಿದೆ. ಸಂಸ್ಕರಿತ ತಾಳೆ ಎಣ್ಣೆಯ ಜತೆಗೆ ಕಚ್ಚಾ ತಾಳೆ ಎಣ್ಣೆಯನ್ನೂ ರಫ್ತು ನಿಷೇಧದ ವ್ಯಾಪ್ತಿಗೆ ತರಲಾಗಿದೆ ಎಂದು ಇಂಡೊನೇಷ್ಯಾ ಹಣಕಾಸು ಸಚಿವಾಲಯ ಬುಧವಾರ ಸಂಜೆ ಘೋಷಿಸಿದೆ.

‌ಈ ವಾರದ ಆರಂಭದಲ್ಲಿ, ಎಲ್ಲ ರೀತಿಯ ತಾಳೆ ಎಣ್ಣೆಯನ್ನು ರಫ್ತು ಮಾಡುವುದಾಗಿ ಇಂಡೊನೇಷ್ಯಾ ಘೋಷಿಸಿತ್ತು. ಅದರೆ ಮಂಗಳವಾರ ಬೆಳಿಗ್ಗೆ ನೀಡಿದ್ದ ಪ್ರಕಟಣೆಯಲ್ಲಿ ಕೇವಲ ಸಂಸ್ಕರಿತ ತಾಳೆ ಎಣ್ಣೆ ರಫ್ತು ನಿಷೇಧ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಬುಧವಾರ ತಡರಾತ್ರಿಯಿಂದ ನಿಷೇಧ ಜಾರಿಗೆ ಬರುತ್ತಿದೆ. ಆದೇಶ ಜಾರಿಗೆ ಕೆಲವೇ ಗಂಟೆ ಬಾಕಿಯಿರುವಾಗ, ಕಚ್ಚಾ ತಾಳೆ ಎಣ್ಣೆಯನ್ನೂ ನಿಷೇಧದ ವ್ಯಾಪ್ತಿಗೆ ತರಲಾಗಿದೆ ಎಂದು ಮುಖ್ಯ ಹಣಕಾಸು ಸಚಿವಾಲಯ ಘೋಷಿಸಿದೆ.

ವರದಿ: ಜಯಸಿಂಹ ಆರ್., ಅಮೃತ್ ಕಿರಣ್ ಬಿ.ಎಂ.

ಆಧಾರ: ದಿ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ ವರದಿಗಳು, ಪಿಟಿಐ, ರಾಯಿಟರ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು