ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುತ್ತಿಲ್ಲ

Last Updated 16 ಫೆಬ್ರವರಿ 2023, 4:51 IST
ಅಕ್ಷರ ಗಾತ್ರ

ರಾಜ್ಯದ ಯಾದಗಿರಿ ಜಿಲ್ಲೆಯ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಎಂಟು ತಿಂಗಳ ಅವಧಿಯಲ್ಲಿ ಹೀಗೆ ಕಲುಷಿತ ನೀರು ಕುಡಿದು ಮೃತಪಟ್ಟವರ ಸಂಖ್ಯೆ ಹತ್ತು. ದೇಶದ ಪ್ರತಿ ಮನೆಗೂ ನಲ್ಲಿ ನೀರಿನ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಜಲಜೀವನ್ ಮಿಷನ್‌’ ಅನ್ನು ಆರಂಭಿಸಿದೆ. ಕರ್ನಾಟಕದಲ್ಲಿ ‘ಮನೆಮನೆಗೆ ಗಂಗೆ’ ಹೆಸರಿನಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಈ ಕಾರ್ಯಕ್ರಮ ಜಾರಿಯಾದಾಗಿನಿಂದ ಈವರೆಗೆ 38 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ. ಆದರೆ, ಇನ್ನೂ 38 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆಯಬೇಕಿದೆ. ಕಲುಷಿತ ನೀರು ಕುಡಿದು ಜನರು ಪದೇ ಪದೇ ಸಾವನ್ನಪ್ಪುತ್ತಿರುವ ಘಟನೆಗಳು, ಎಲ್ಲರಿಗೂ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ ಎಂಬುದರತ್ತ ಬೊಟ್ಟು ಮಾಡುತ್ತಿವೆ.

***

ರಾಜ್ಯದ ಎಲ್ಲಾ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವ ‘ಮನೆಮನೆಗೆ ಗಂಗೆ’ ಕಾರ್ಯಕ್ರಮವನ್ನು 2019ರಲ್ಲಿ ಆರಂಭಿಸಲಾಗಿತ್ತು. ಕಾರ್ಯಕ್ರಮವನ್ನು ಆರಂಭಿಸಿ ದಾಗ ರಾಜ್ಯದಲ್ಲಿ ಒಟ್ಟು 1.01 ಕೋಟಿ ಮನೆಗಳಿದ್ದವು. ಅವುಗಳಲ್ಲಿ ನಲ್ಲಿ ನೀರಿನ ಸಂಪರ್ಕ ಇದ್ದ ಮನೆಗಳ ಸಂಖ್ಯೆ 24.51 ಲಕ್ಷದಷ್ಟಿತ್ತು. 2024ರ ಆಗಸ್ಟ್ ವೇಳೆಗೆ ಎಲ್ಲಾ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಒದಗಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಕಾರ್ಯಕ್ರಮ ಆರಂಭವಾದಾಗಿನಿಂದ 38 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ. ಒಟ್ಟಾರೆ ಶೇ 62.2ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ದೊರೆತಿದೆ. ಆದರೆ, ಶೇ 37.8ರಷ್ಟು ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಇನ್ನಷ್ಟೇ ದೊರೆಯಬೇಕಿದೆ.

ಆಳ–ಅಗಲ | ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುತ್ತಿಲ್ಲ

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶಗಳಲ್ಲಿ ಒಂದು. ಆದರೆ, ಕಾರ್ಯಕ್ರಮ ಆರಂಭವಾದ ನಂತರವೂ ಕಲುಷಿತ ನೀರು ಕುಡಿದು ಜನರು ಮೃತಪಟ್ಟ ಹಲವು ಘಟನೆಗಳು ರಾಜ್ಯದಲ್ಲಿ ವರದಿಯಾಗಿವೆ. ಕೆಲವು ಪ್ರಕರಣಗಳಲ್ಲಿ ನಲ್ಲಿಯಲ್ಲೇ ಕಲುಷಿತ ನೀರು ಬಂದ ನಿದರ್ಶನಗಳಿವೆ. ಮನೆಮನೆಗೆ ಸಂಪರ್ಕ ನೀಡುವ ನಲ್ಲಿ, ಟ್ಯಾಂಕ್‌ಗಳಿಗೆ ಪೂರೈಕೆಯಾಗುವ ನೀರಿನ ಕೊಳವೆಗಳು ಒಡೆದು, ಕೊಳಚೆ ನೀರು ಪೂರೈಕೆಯಾಗಿದ ಉದಾಹರಣೆಯಿದೆ. ಕುಡಿಯುವ ನೀರಿನ ಕೊಳವೆಗಳು, ಕೊಳಚೆ ನೀರಿನ ಕೊಳವೆಗಳ ಸಮೀಪ ಮತ್ತು ಚರಂಡಿಗಳ ಸಮೀಪ ಇರುವುದೇ ನೀರು ಕಲುಷಿತವಾಗಲು ಕಾರಣ ಎಂದು ಜಿಲ್ಲಾಡಳಿತಗಳು ತಮ್ಮ ತನಿಖಾ ವರದಿಗಳಲ್ಲಿ ಹೇಳಿವೆ.

ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಆರ್‌ಒ ಶುದ್ಧೀಕರಣ ಘಟಕಗಳನ್ನೂ ಸ್ಥಾಪಿಸಲಾಗುತ್ತಿದೆ. ಇವು ಬಹುಪಾಲು ಮಾಲಿನ್ಯಕಾರಕ ಕಣ/ಅಂಶಗಳನ್ನು ನೀರಿನಿಂದ ಬೇರ್ಪಡಿಸುತ್ತವೆ. ಆದರೆ ಕೆಲವು ಆಮ್ಲಕಾರಕ ಅಂಶಗಳನ್ನು ಬೇರ್ಪಡಿಸುವುದಿಲ್ಲ. ಇಂತಹ ಶುದ್ಧೀಕರಣ ಘಟಕಗಳೂ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಇಲ್ಲ. ಇನ್ನೂ ಮೂರನೇ ಒಂದರಷ್ಟು ಗ್ರಾಮಗಳಲ್ಲಿ ಇನ್ನಷ್ಟೇ ಇಂತಹ ಘಟಕಗಳನ್ನು ಸ್ಥಾಪಿಸಬೇಕಿದೆ.

ರಾಷ್ಟ್ರೀಯ ಜಲಜೀವನ ಮಿಷನ್‌ನ ಕ್ರಿಯಾಯೋಜನೆ ಪ್ರಕಾರ ರಾಜ್ಯದಲ್ಲಿ ಒಟ್ಟು 28,333 ಗ್ರಾಮಗಳು ಇವೆ. ಇವುಗಳಲ್ಲಿ ಎಲ್ಲಾ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಪಡೆದ ಗ್ರಾಮಗಳ ಸಂಖ್ಯೆ 4,410. ಆದರೆ, ಕೇಂದ್ರ ಸರ್ಕಾರವು ಈ ಎಲ್ಲಾ ಗ್ರಾಮಗಳಿಗೆ ಶೇ 100ರಷ್ಟು ನಲ್ಲಿ ನೀರಿನ ಸಂಪರ್ಕ ಪಡೆದ ಗ್ರಾಮಗಳ ಮಾನ್ಯತೆ ನೀಡಿಲ್ಲ. ಇಂತಹ ಮಾನ್ಯತೆ ಪಡೆದಿರುವ ಗ್ರಾಮಗಳ ಸಂಖ್ಯೆ 1,117 ಮಾತ್ರ.

ಎಂಟು ತಿಂಗಳು, ಸಾವು ಹತ್ತು
ಕಲುಷಿತ ನೀರು ಪೂರೈಕೆಯು ರಾಜ್ಯದ ಗ್ರಾಮೀಣ ಭಾಗದಲ್ಲಿ ಗಂಭೀರ ಸಮಸ್ಯೆಯಾಗಿದ್ದು, ವಾಂತಿ–ಭೇದಿ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ರಾಜ್ಯ ಉತ್ತರ ಭಾಗದ ಜಿಲ್ಲೆಗಳಲ್ಲೇ ಬಹುತೇಕ ಪ್ರಕರಣಗಳು ವರದಿಯಾಗಿವೆ. ಕಳೆದ ಎರಡು ವರ್ಷಗಳಿಂದ, ಕಲಬುರಗಿ ಜಿಲ್ಲೆಯ 41 ಗ್ರಾಮಗಳಲ್ಲಿ 883 ಜನರು ವಾಂತಿ–ಭೇದಿಯಿಂದ ಅಸ್ವಸ್ಥರಾಗಿದ್ದರು. ಈ ಪ್ರಕರಣಗಳು ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲದಿರುವುದನ್ನು ಸೂಚಿಸುತ್ತದೆ.

* 2023ರ ಜನವರಿ 11ರಂದು, ಹೊಸಪೇಟೆಯ ರಾಣಿಪೇಟೆಯಲ್ಲಿ ಕುಲುಷಿತ ನೀರು ಸೇವನೆಗೆ ಲಕ್ಷ್ಮಿದೇವಿ ಎಂಬುವರು ಬಲಿಯಾಗಿದ್ದರು. ಸುಮಾರು 200 ಜನರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು

* 2022ರ ನವೆಂಬರ್‌ನಲ್ಲಿ ಶಿವಮೊಗ್ಗದ ಶಾರದಾ ನಗರದಲ್ಲಿ ರಸ್ತೆ ದುರಸ್ತಿ ಮಾಡುವಾಗ ಜಲಮಂಡಳಿಯ ಪೈಪ್ ಒಡೆದಿತ್ತು. ಕಾರ್ಖಾನೆಯಲ್ಲಿ ಕಲುಷಿತ ನೀರು ಸೇವಿಸಿದ್ದ ಒಡಿಶಾದ ಕೂಲಿ ಕಾರ್ಮಿಕ ಮೃತಪಟ್ಟಿದ್ದ ಘಟನೆ ವರದಿಯಾಗಿತ್ತು

* 2022ರ ನವೆಂಬರ್‌ನಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಮೂವರು ಮೃತಪಟ್ಟು, 186 ಮಂದಿ ಅಸ್ವಸ್ಥರಾಗಿದ್ದರು

* 2022ರ ಸೆಪ್ಟೆಂಬರ್‌ನಲ್ಲಿ, ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ 80 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಜಿಲ್ಲೆಯ ಗೊಬ್ಬರವಾಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡಿದ್ದ ಸಾಯಿಬಣ್ಣ ಭಜಂತ್ರಿ ಮೃತಪಟ್ಟಿದ್ದರು. 15 ಮಂದಿ ವಾಂತಿ–ಭೇದಿಯಿಂದ ನರಳಿದ್ದರು

* 2022ರ ಆಗಸ್ಟ್‌ನಲ್ಲಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕ್ಯಾಸನಕೆರೆ ಗ್ರಾಮದಲ್ಲಿ 6 ಜನ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಗ್ರಾಮದ ಬಾಲಕಿ ಮೃತಪಟ್ಟಿದ್ದಳು. ಸಾವಿಗೆ ಕಲುಷಿತ ನೀರು ಸೇವನೆ ಕಾರಣ ಎಂದು ಶಂಕಿಸಲಾಗಿತ್ತು

* 2022ರ ಜುಲೈನಲ್ಲಿ ಕಂಪ್ಲಿ ತಾಲ್ಲೂಕು ಗೋನಾಳು ಗ್ರಾಮದಲ್ಲಿ ಕಲುಷಿತ ನೀರು ಕುಡಿದಿದ್ದ ಬಾಲಕಿ ಮೃತಪಟ್ಟಿದ್ದಳು. 20 ಮಂದಿ ಅಸ್ವಸ್ಥರಾಗಿದ್ದರು

* 2022ರ ಜುಲೈನಲ್ಲಿ, ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದ ಯುವಕ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. 15 ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ಈತ ಅಸ್ವಸ್ಥಗೊಂಡಿದ್ದ

* ನೂರಾರು ಜನ ಅಸ್ವಸ್ಥ: ಯಾದಗಿರಿ, ಕಲಬುರಗಿ, ಬಳ್ಳಾರಿ, ರಾಯಚೂರು, ವಿಜಯನಗರ, ಚಾಮರಾಜನಗರ, ಚಿತ್ರದುರ್ಗ, ಕೊಪ್ಪಳ, ಬೆಳಗಾವಿ ಜಿಲ್ಲೆಗಳಲ್ಲಿ 2022ರ ಜುಲೈನಿಂದ ಇಲ್ಲಿಯವರೆಗೆ 236 ಜನರು ವಾಂತಿ–ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿವೆ. ವರದಿಯಾಗದ ಪ್ರಕರಣಗಳು ಇನ್ನೂ ಹೆಚ್ಚಿವೆ. 2022ರ ಆಗಸ್ಟ್‌ನಲ್ಲಿ, ಬಳ್ಳಾರಿ ಜಿಲ್ಲೆಯ ‌ಅಂಕಮನಾಳ್‌ ಗ್ರಾಮದಲ್ಲಿ 84 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದರು

ಆಳ–ಅಗಲ | ಶುದ್ಧ ಕುಡಿಯುವ ನೀರು ಎಲ್ಲರಿಗೂ ಸಿಗುತ್ತಿಲ್ಲ

ನೀರು ಕಲುಷಿತವಾಗುವುದೇಕೆ?
ಕರ್ನಾಟಕದಲ್ಲಿ ಕಲುಷಿತ ನೀರು ಕುಡಿದು ಜನರು ಮೃತಪಟ್ಟ ಮತ್ತು ಅಸ್ವಸ್ಥರಾದ ಬಹುತೇಕ ಪ್ರಕರಣಗಳಲ್ಲಿ, ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಬೆರೆತದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕುಡಿಯುವ ನೀರಿನ ಕೊಳವೆಗಳನ್ನು ಕೊಳಚೆ ನೀರಿನ ಕೊಳವೆಗಳ ಪಕ್ಕದಲ್ಲೇ ಹಾಕುವುದು ಮತ್ತು ಚರಂಡಿಗಳಲ್ಲಿ ಹಾಕುವುದು ರೂಢಿಯಲ್ಲಿದೆ. ಎರಡೂ ಕೊಳವೆಗಳಲ್ಲಿ ಸೋರಿಕೆ ಇದ್ದರಷ್ಟೇ ಕುಡಿಯುವ ನೀರು ಕಲುಷಿತವಾಗುತ್ತದೆ. ರಾಜ್ಯದ ಹಲವೆಡೆ ಇಂತಹ ಸ್ಥಿತಿ ಇದೆ ಎಂದು ಬೆಂಗಳೂರಿನ, ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಸೇರುವ ಕಾರಣ, ಕುಡಿಯುವ ನೀರಿನಲ್ಲಿ ಅಪಾಯಕಾರಿ ಸೂಕ್ಷ್ಮಾಣು ಜೀವಿಗಳು ಬೆರೆಯುತ್ತವೆ. ಅಂತಹ ನೀರನ್ನು ಸೇವಿಸಿದಾಗ, ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಹೀಗೆ ಕೊಳಚೆ ನೀರು ಕುಡಿಯುವ ನೀರಿನೊಂದಿಗೆ ಬೆರೆತಾಗ, ಅದರಲ್ಲಿ ಇರುವ ಅಪಾಯಕಾರಿ ಸೂಕ್ಷ್ಮಾಣು ಜೀವಿಗಳಲ್ಲಿ ಇ–ಕೊಲಿ ಬ್ಯಾಕ್ಟೀರಿಯಾವೇ ಪ್ರಧಾನ. ಕುಡಿಯುವ ನೀರಿನಲ್ಲಿ ಮನುಷ್ಯ ಮತ್ತು ಪ್ರಾಣಿಗಳ ಮಲವು ನೀರಿನಲ್ಲಿ ಬೆರೆತಿರುವುದನ್ನು, ಈ ಬ್ಯಾಕ್ಟೀರಿಯಾದ ಇರುವಿಕೆ ಸೂಚಿಸುತ್ತದೆ. ನೀರಿನಲ್ಲಿ ಇವುಗಳ ಪ್ರಮಾಣ ಕಡಿಮೆ ಇದ್ದರೆ, ಹೆಚ್ಚು ತೊಂದರೆಯಾಗುವುದಿಲ್ಲ. ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇದ್ದರೆ, ವಾಂತಿ–ಭೇದಿಯಂತಹ ಸಮಸ್ಯೆ ಉಂಟಾಗುತ್ತದೆ. ಪ್ರಾಣಾಪಾಯದ ಸಾಧ್ಯತೆಯೂ ಇದೆ.

ಕುಡಿಯಲು ಯೋಗ್ಯವಾದ ನೀರಿನ ಗುಣಮಟ್ಟವನ್ನು ಭಾರತೀಯ ಮಾನಕ ಬ್ಯೂರೊ (ಐಎಸ್‌ಐ) ನಿಗದಿಪಡಿಸಿದೆ. 100 ಮಿಲಿಲೀಟರ್‌ ನೀರನ್ನು ಪರಿಶೀಲಿಸಿದಾಗ, ಅದರಲ್ಲಿ ಇ–ಕೊಲಿ ಬ್ಯಾಕ್ಟೀರಿಯಾ ಪತ್ತೆಯಾಗಲೇಬಾರದು. ಪತ್ತೆಯಾದ ನೀರು ಕುಡಿಯಲು ಯೋಗ್ಯವಲ್ಲ ಎಂದು ಐಎಸ್‌ಐ ಹೇಳುತ್ತದೆ. ಇನ್ನು 6.5ರಿಂದ 8.5ರಷ್ಟು ಆಮ್ಲೀಯ (ಪಿಎಚ್‌) ಇರುವ ನೀರು ಮಾತ್ರ ಕುಡಿಯಲು ಯೋಗ್ಯ ಎಂದು ಐಎಸ್‌ಐ ಹೇಳುತ್ತದೆ.

ಆಧಾರ: ರಾಷ್ಟ್ರೀಯ ಜಲಜೀವನ್ ಮಿಷನ್‌, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪ್ರಜಾವಾಣಿ ವರದಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT