ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಜೀವ ವೈವಿಧ್ಯ 3ನೇ 2ರಷ್ಟು ನಾಶ

ಲಿವಿಂಗ್‌ ಪ್ಲಾನೆಟ್‌ ಇಂಡೆಕ್ಸ್‌ ವರದಿ 2020
Last Updated 10 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮುಂಬೈ: ಪರಿಸರ ವಿನಾಶದಿಂದಾಗಿ ಪ್ರಾಣಿಗಳು, ಹಕ್ಕಿಗಳು, ಸರೀಸೃಪಗಳು, ಉಭಯಚರಗಳು, ಮೀನು ಮೊದಲಾದವುಗಳ ಸಂತತಿ ಕಳೆದ ಅರ್ಧಶತಮಾನದಲ್ಲಿ ಮೂರನೇ ಎರಡರಷ್ಟು ಕುಸಿತ ದಾಖಲಿಸಿದೆ ಎಂದು ಲಿವಿಂಗ್ ಪ್ಲಾನೆಟ್ ಇಂಡೆಕ್ಸ್ ವರದಿ 2020 (ಎಲ್‌ಪಿಐ) ತಿಳಿಸಿದೆ.

ಜಗತ್ತಿನ ಎಲ್ಲೆಡೆ ಒಂದೇ ರೀತಿಯಲ್ಲಿ ಪರಿಸರ ಹಾನಿ ಸಂಭವಿಸುತ್ತಿರುವುದು ಕೋವಿಡ್‌–19ನಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ ಎಂಬುದನ್ನು ಲಿವಿಂಗ್ ಪ್ಲಾನೆಟ್ ಇಂಡೆಕ್ಸ್ ತೆರೆದಿಟ್ಟಿದೆ. 1970ರಿಂದ 2016ರ ಅವಧಿಯಲ್ಲಿ ಭೂ ಬಳಕೆಯಲ್ಲಿ ಆಗಿರುವ ಬದಲಾವಣೆ ಹಾಗೂ ಪ್ರಾಣಿಗಳ ವ್ಯಾಪಾರ ಪ್ರಕ್ರಿಯೆಯಿಂದ ಕಶೇರುಕ ಜಾತಿಯ ಪ್ರಾಣಿಗಳ ಪ್ರಮಾಣವು ಶೇ 68ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

ಪ್ರಕೃತಿಯ ವಿನಾಶಕ್ಕೆ ಮನುಷ್ಯ ಎಷ್ಟರ ಮಟ್ಟಿಗೆ ಕಾರಣ ಎಂಬುದನ್ನು ವರದಿಯು ಒತ್ತಿ ಹೇಳಿದೆ. ‘ಇದು ವನ್ಯಜೀವಿಗಳ ಸಂಖ್ಯೆಯ ಮೇಲೆ ಮಾತ್ರವಲ್ಲದೆ ಮಾನವನ ಆರೋಗ್ಯ ಮತ್ತು ಜೀವನದ ಎಲ್ಲ ಅಂಶಗಳ ಮೇಲೂ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ’ ಎಂದು ಅಂತರರಾಷ್ಟ್ರೀಯ ಡಬ್ಲ್ಯುಡಬ್ಲ್ಯುಎಫ್‌ ಸಂಸ್ಥೆಯ ಮಹಾನಿರ್ದೇಶಕರಾದ ಮಾರ್ಕೊ ಲ್ಯಾಂಬರ್ಟಿನಿ ಅಭಿಪ್ರಾಯ ಪಟ್ಟಿದ್ದಾರೆ. ಡಬ್ಲ್ಯುಡಬ್ಲ್ಯುಎಫ್ ಸಂಸ್ಥೆಯು ಭಾರತದಲ್ಲಿ ವರದಿ ಬಿಡುಗಡೆ ಮಾಡಿದೆ.

‘ವಿನಾಶದ ಪುರಾವೆಗಳನ್ನು ನಾವು ನಿರ್ಲಕ್ಷಿಸಲು ಆಗುವುದಿಲ್ಲ. ವನ್ಯಜೀವಿಗಳ ಪ್ರಮಾಣ ನಿರಂತರವಾಗಿ ಕುಸಿಯುತ್ತಿರುವ ಗಂಭೀರ ವಿಚಾರವು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಸಾಗರ ಹಾಗೂ ನದಿಗಳಲ್ಲಿ ವಾಸಿಸುವ ಮೀನುಗಳಿಂದ ಹಿಡಿದು, ಕೃಷಿ ಉತ್ಪಾದನೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಜೇನುನೊಣಗಳವರೆಗೆ ಎಲ್ಲವೂ ಮುಖ್ಯ. ಆದರೆ ಅವುಗಳ ಸಂತತಿ ಕಡಿಮೆಯಾದರೆ ಅದು ನೇರವಾಗಿ ಪೌಷ್ಟಿಕತೆ, ಆಹಾರ ಭದ್ರತೆ ಮತ್ತು ಕೋಟ್ಯಂತರ ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ’ ಎಂದು ಅವರು ಎಚ್ಚರಿಸಿದ್ದಾರೆ.

‘ಜಾಗತಿಕವಾಗಿ ಸಾಂಕ್ರಾಮಿಕ ರೋಗ ಹರಡಿರುವ ಈ ಸಮಯದಲ್ಲೇ, ಜೀವವೈವಿಧ್ಯ ಮತ್ತು ವನ್ಯಜೀವಿಗಳ ನಷ್ಟವನ್ನು ತಡೆಯಲು ಸಂಘಟಿತ ಕ್ರಮ ಕೈಗೊಳ್ಳುವುದು ಅತೀ ತುರ್ತಿನ ಕೆಲಸವಾಗಿದೆ. ಈ ದಶಕ ಮುಗಿಯುವುದರೊಳಗೆ ಇದಕ್ಕೆ ಅಭೂತಪೂರ್ವ ಆರಂಭ ಸಿಗಬೇಕಿದೆ. ಆಗ ಮಾತ್ರ ಜನಸಮುದಾಯಗಳ ಭವಿಷ್ಯದ ಆರೋಗ್ಯ ರಕ್ಷಣೆ ಸಾಧ್ಯವಾಗಲಿದೆ’ ಎಂದಿದ್ದಾರೆ.

ವಿನಾಶಕ್ಕೆ ಕಾರಣ: ಭೂಮಿಯ ಮೇಲೆ ಪ್ರಾಣಿಸಂಪತ್ತು ಗಣನೀಯವಾಗಿ ಕುಸಿತ ಕಾಣಲು ಆವಾಸಸ್ಥಾನ ನಾಶ, ಅರಣ್ಯಗಳ ಅವಸಾನ ಕಾರಣ ಎಂದು ವರದಿ ಹೇಳಿದೆ. ಬೃಹತ್ ಪ್ರಮಾಣದಲ್ಲಿ ಆಹಾರ ಉತ್ಪಾದಿಸುವ ಉದ್ದೇಶಕ್ಕೆ ಅರಣ್ಯವನ್ನು ಕೃಷಿಭೂಮಿಯಾಗಿ ಪರಿವರ್ತಿಸುವ ಪ್ರಕ್ರಿಯೆಯ ಮೇಲೂ ವರದಿಯು ಬೆಳಕು ಚೆಲ್ಲಿದೆ.

ಪ್ರಾಣಿ ಪ್ರಭೇದಗಳ ಆವಾಸಸ್ಥಾನ ನಾಶ ಮತ್ತು ಅವನತಿ ತಡೆಗೆ ಜಾಗತಿವಾಗಿ ಹೆಚ್ಚಿನ ಪ್ರಯತ್ನ ಕೈಗೊಳ್ಳದೇ ಇದ್ದಲ್ಲಿ, ಜೀವವೈವಿಧ್ಯ ಕ್ಷೀಣಿಸುತ್ತಲೇ ಇರುತ್ತದೆ ಎಂದು ವರದಿ ಎಚ್ಚರಿಸಿದೆ. ಮನುಷ್ಯರಿಂದ ಉಂಟಾಗುವ ಪ್ರಕೃತಿ ವಿನಾಶಕ್ಕೆ ತಡೆ ಒಡ್ಡಿ, ಜೀವಿಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಮನುಷ್ಯ ಕೈಹಾಕದಿದ್ದಲ್ಲಿ ಜೀವವೈವಿಧ್ಯ ಉಳಿಯುತ್ತದೆ. ನಾವು ಆಹಾರವನ್ನು ಉತ್ಪಾದಿಸುವ ಮತ್ತು ಸೇವಿಸುವ ವಿಧಾನದಲ್ಲೂ ಪರಿವರ್ತನೆ ಆಗಬೇಕಿದೆ. ದಿಟ್ಟ ಕ್ರಮಗಳಿಂದ ಮಾತ್ರ ವನ್ಯಜೀವಿಗಳ ಆವಾಸಸ್ಥಾನಗಳ ಮೇಲಿನ ಒತ್ತಡವನ್ನು ತ್ವರಿತವಾಗಿ ನಿವಾರಿಸಬಹುದು ಎಂದು ವರದಿ ಸಲಹೆ ನೀಡಿದೆ. ಆದರೆ ಮನುಷ್ಯ ತನಗೆ ಯಾವುದೂ ಸಂಬಂಧವಿಲ್ಲ ಎಂಬ ಧೋರಣೆಯಲ್ಲಿ ದೈನದಿಂದ ವ್ಯವಹಾರವನ್ನು ಮುಂದುವರಿಸಿದರೆ, ಜೀವವೈವಿಧ್ಯದ ಮುಂದಿರುವ ಅಪಾಯ ಮುಂದುವರಿಯಲಿದೆ ಎಂದು ತಿಳಿಸಿದೆ. ಈ ವರ್ಷ ಪ್ರಪಂಚದಾದ್ಯಂತ ಕಾಳ್ಗಿಚ್ಚು, ಚಂಡಮಾರುತ, ಮಿಡತೆ ಹಾವಳಿ ಮತ್ತು ಕೋವಿಡ್ ಸಾಂಕ್ರಾಮಿಕಗಳ ಒತ್ತಡವೂ ಇತ್ತು ಎಂದು ವರದಿ ಉಲ್ಲೇಖಿಸಿದೆ.

2020ರ ಲಿವಿಂಗ್ ಪ್ಲಾನೆಟ್ ವರದಿಯು ನಮ್ಮ ನೈಸರ್ಗಿಕ ಪ್ರಪಂಚದ ಪ್ರಸ್ತುತ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದೆ. ಈ ವರದಿಯು ಜಾಗತಿಕ ವನ್ಯಜೀವಿಗಳ ಪ್ರವೃತ್ತಿಗಳನ್ನು ನಿರಂತರವಾಗಿ ಗಮನಿ ಸುತ್ತದೆ. 1970ರಿಂದ 2016ರವರೆಗೆ ಸುಮಾರು 21,000 ವಿವಿಧ ಪ್ರಭೇದಗಳ ವನ್ಯಜೀವಿಗಳ ಮೇಲೆ ಎಲ್‌ಪಿಐ ನಿಗಾ ವಹಿಸಿದೆ. ವಿಶ್ವದಾದ್ಯಂತ 125ಕ್ಕೂ ಹೆಚ್ಚು ತಜ್ಞರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಏನು ಆಗಬೇಕು?

ಆಹಾರ ಉತ್ಪಾದನೆಯ‌ಲ್ಲಿ ಬದಲಾವಣೆ

ತ್ಯಾಜ್ಯವನ್ನು ಕಡಿಮೆ ಮಾಡುವುದು

ಆರೋಗ್ಯಕರ ಮತ್ತು ಹೆಚ್ಚು ಪರಿಸರ ಸ್ನೇಹಿ ಆಹಾರ ಪದ್ಧತಿ ಅಳವಡಿಕೆ

ಪರಿಸರ ಸಮರ್ಥನೀಯ ಕ್ರಮಗಳನ್ನು ಅನುಸರಿಸುವುದು

ಮಸುಕಾಗುತ್ತಿದೆ ಜೀವವೈವಿಧ್ಯ

l ಸಿಹಿನೀರಿನ ಆವಾಸಸ್ಥಾನಗಳಲ್ಲಿ ಕಂಡುಬರುವ ಮೀನು ಮತ್ತಿತರ ಜೀವಿಗಳ ಸಂಖ್ಯೆ ಶೇ 84ರಷ್ಟು ಕುಸಿತ

l ಕಶೇರುಕ ಜಾತಿಯ ಪ್ರಾಣಿಗಳ ಸಂಖ್ಯೆ ಶೇ 68ರಷ್ಟು ಕುಸಿತ

l ಅಣೆಕಟ್ಟೆ ಹಾಗೂ ಹಾಗೂ ಕಾಲುವೆ ನಿರ್ಮಾಣ ಕಾಮಗಾರಿ ಪರಿಣಾಮ, ಚೀನಾದ ಯಾಂಗ್‌ತ್ಸೆ ನದಿಯಲ್ಲಿ ಸ್ಟರ್ಜನ್ ಎಂಬ ಮೀನಿನ ಪ್ರಭೇದವು 1982–2015ರ ಅವಧಿಯಲ್ಲಿ ಶೇ 97ರಷ್ಟು ಕುಸಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT