ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ –ಸುದ್ದಿ: ದೆಹಲಿ ವಾಯುಮಾಲಿನ್ಯ ವಾರ್ಷಿಕ ಕಾಯಿಲೆ

Last Updated 10 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಚಳಿಗಾಲ ಬಂತೆಂದರೆ ರಾಷ್ಟ್ರ ರಾಜಧಾನಿ ದೆಹಲಿಯ ಜನರಲ್ಲಿ (ದೆಹಲಿ ಎನ್‌ಸಿಆರ್) ಕಿರಿಕಿರಿ ಶುರುವಾಗುತ್ತದೆ. ಪ್ರತೀ ವರ್ಷದ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿ ಅಲ್ಲಿನ ಜನರಿಗೆ ಯಾತನಾಮಯ ಆಗಿರುತ್ತದೆ. ಚಳಿಗಿಂತ ಹೆಚ್ಚಾಗಿ ಇಲ್ಲಿನ ಜನರನ್ನು ಕಾಡುವುದು ವಾಯುಮಾಲಿನ್ಯ. ಈ ಅವಧಿಯಲ್ಲಿ ನಗರದಲ್ಲಿ ಗಾಳಿಯ ಗುಣಮಟ್ಟ ವಿಪರೀತ ಎನಿಸುವಷ್ಟು ಕುಸಿಯುತ್ತದೆ. ಈ ವರ್ಷವೂ ವಾಯುಮಾಲಿನ್ಯ ಕನಿಷ್ಠ ಮಟ್ಟಕ್ಕೆ ಅಂದರೆ ಅಪಾಯಕಾರಿ ಹಂತಕ್ಕೆ ಕುಸಿದಿದೆ.

ಕಳಪೆ ಗುಣಮಟ್ಟದ ಗಾಳಿಯಿಂದಾಗಿಶೇ 80ರಷ್ಟು ಜನರಲ್ಲಿ ಆರೋಗ್ಯದ ಹಲವು ಸಮಸ್ಯೆಗಳು ಕಾಣಿಸಿಕೊಂಡಿವೆ ಎನ್ನುತ್ತದೆ ‘ಲೋಕಲ್ ಸರ್ಕಲ್ಸ್’ ಸಮೀಕ್ಷಾ ವರದಿ. ರಾಜ್ಯ ಸರ್ಕಾರವು ಮುಂಜಾಗ್ರತಾ ಕ್ರಮವಾಗಿ ಕೆಲವು ದಿನಗಳ ಮಟ್ಟಿಗೆ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಆದೇಶಿಸಿತ್ತು. ಅತ್ತ ಜನರು ಆರೋಗ್ಯ ಸಮಸ್ಯೆಗಳಿಂದ ತೊಂದರೆ ಎದುರಿಸುತ್ತಿದ್ದರೆ, ಇತ್ತ ರಾಜಕಾರಣಿಗಳು ವಾಯುಮಾಲಿನ್ಯದ ಹೆಸರಲ್ಲಿ ಕೆಸರೆರಚಾಟದಲ್ಲಿ ತೊಡಗಿದ್ದಾರೆ.

ಡಬ್ಲ್ಯೂಎಚ್‌ಒ ಎಚ್ಚರಿಕೆ
ಇತ್ತೀಚಿನ ದಶಕಗಳಲ್ಲಿ ದೆಹಲಿಯ ನಾಗರಿಕರು ವಾಯುಮಾಲಿನ್ಯದ ಸಂತ್ರಸ್ತರಾಗಿದ್ದಾರೆ. ಮುಂಗಾರು ಹಂಗಾಮು ಕಳೆದು ಉತ್ತರದ ರಾಜ್ಯಗಳಲ್ಲಿ ಕೊಯ್ಲು ಮುಗಿಯುವ ವೇಳೆಗೆ ರಾಜಧಾನಿಯಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಗಾಳಿಯಲ್ಲಿರುವ ಮಾಲಿನ್ಯಕಾರಕ ಸೂಕ್ಷ್ಮ ಕಣಗಳು (ಪಿಎಂ 2.5) ಉಸಿರಾಟದ ಮೂಲಕ ಶ್ವಾಸಕೋಶವನ್ನು ಸೇರಿ, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮಕ್ಕಳು, ವಯಸ್ಸಾದವರು ಹಾಗೂ ಈ ಮೊದಲೇ ಅಸ್ತಮಾ, ಹೃದಯ ಸಮಸ್ಯೆಗಳನ್ನು ಹೊಂದಿರುವವರಿಗೆ ವಾಯುಮಾಲಿನ್ಯ ಇನ್ನಷ್ಟು ಕಿರಿಕಿರಿ ಉಂಟುಮಾಡುತ್ತದೆ. ಮಾಲಿನ್ಯಕಾರಕ ಕಣಗಳನ್ನು ಹೊಂದಿರುವ ಗಾಳಿಯನ್ನು ದೀರ್ಘಕಾಲ ಸೇವಿಸುವುದರಿಂದ ಆರೋಗ್ಯವಂತರಲ್ಲೂ ಸಮಸ್ಯೆಗಳು ಕಾಣಿಸುತ್ತವೆ. ಇಂತಹ ಗಾಳಿಯ ಸೇವನೆಯು ಉಸಿರಾಟದ ಸೋಂಕು, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶದ ಕ್ಯಾನ್ಸರ್‌ನಂತಹ ಸಮಸ್ಯೆಗಳನ್ನು ಉಂಟುಮಾಡುವ ಅಪಾಯವಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಎಚ್ಚರಿಸಿದೆ.

ಐವರಲ್ಲಿ ನಾಲ್ವರಿಗೆ ಅನಾರೋಗ್ಯ
ದೆಹಲಿ ರಾಜಧಾನಿ ಪ್ರದೇಶದ ಪ್ರತಿ 5 ಜನರ ಪೈಕಿ 4 ಜನರು ವಾಯು ಮಾಲಿನ್ಯದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆ ಪ್ರಕಾರ, ಈಗಾಗಲೇ ಶೇ 18ರಷ್ಟು ಜನರು ಆರೋಗ್ಯ ಸಮಸ್ಯೆ ಕಾರಣಕ್ಕೆ ಆಸ್ಪತ್ರೆಗಳಿಗೆ ಎಡತಾಕಿದ್ದಾರೆ. ಗಂಟಲು ಕೆರೆತ, ಕೆಮ್ಮು, ನೆಗಡಿ, ಕಣ್ಣುರಿಯಂತಹ ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ

ಐದೇ ದಿನಗಳಲ್ಲಿ ಆರೋಗ್ಯ ಏರುಪೇರು
ದೀಪಾವಳಿಯ ಬಳಿಕ ದೆಹಲಿಯ ವಾಯು ಗುಣಮಟ್ಟ ಹೇಗಿದೆ ಎಂದು ಸಮೀಕ್ಷೆ ನಡೆಸಲಾಯಿತು. ಅ.30ರ ವೇಳೆಗೆ ಶೇ 70ರಷ್ಟು ಜನರು ತಾವು ವಾಯುಮಾಲಿನ್ಯದ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಇದಾದ ಐದು ದಿನಕ್ಕೆ ಮತ್ತೊಂದು ಸಮೀಕ್ಷೆ ನಡೆಸಲಾಯಿತು. ನ.4ರ ವೇಳೆಗೆ, ವಾಯುಮಾಲಿನ್ಯದಿಂದ ತೊಂದರೆ ಎದುರಿಸುತ್ತಿದ್ದೇವೆ ಎಂದು ಹೇಳುವವರ ಪ್ರಮಾಣ ಶೇ 80ಕ್ಕೆ ಜಿಗಿಯಿತು. ಕೇವಲ ಐದು ದಿನಗಳಲ್ಲಿ ದೆಹಲಿಗರ ಆರೋಗ್ಯದಲ್ಲಿ ಭಾರಿ ಏರುಪೇರು ಕಂಡುಬಂದಿದೆ ಎಂದು ವರದಿ ತಿಳಿಸಿದೆ. ತಮ್ಮ ಕುಟುಂಬದ ಕನಿಷ್ಠ ಒಬ್ಬರು ಸದಸ್ಯರು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುತ್ತಾಗಿದ್ದಾರೆ ಎಂದು ಜನರು ಹೇಳಿದ್ದಾರೆ

ವೈದ್ಯಕೀಯ ಸಲಹೆಗೆ ಮುಂದಾದ ಜನ...
ಅಕ್ಟೋಬರ್‌ ಶುರುವಾಗುತ್ತಲೇ ಜನರಲ್ಲಿ ಆರೋಗ್ಯ ಸಮಸ್ಯೆಗಳು ಶುರುವಾದವು. ಒಂದು ತಿಂಗಳು ಕಳೆಯುವಷ್ಟರಲ್ಲಿ ಶೇ 12ರಷ್ಟು ಜನರು ವೈದ್ಯರನ್ನು ಭೇಟಿ ಮಾಡಿಬಂದರು. ಇನ್ನೂ ಶೇ 6ರಷ್ಟು ಜನರು ಆಸ್ಪತ್ರೆಗೆ ಹೋಗಿಬಂದಿದ್ದಾರೆ. ಶೇ 22ರಷ್ಟು ಜನರು ವೈದ್ಯರ ಜೊತೆ ದೂರವಾಣಿಯಲ್ಲಿ ಸಮಾಲೋಚಿಸಿ ಸಲಹೆ ಪಡೆದಿದ್ದಾರೆ. ಇನ್ನಷ್ಟು ಮಂದಿ ವೈದ್ಯರ ಸಲಹೆ ಪಡೆಯಲು ಮುಂದಾಗಿದ್ದಾರೆ. ಶೇ 24ರಷ್ಟು ಜನರಲ್ಲೂ ವಾಯುಮಾಲಿನ್ಯ ಸಂಬಂಧ ಸಮಸ್ಯೆಗಳಿದ್ದರೂ, ಅವರು ಸ್ವಂತಕ್ಕೆ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.

ಕೃಷಿ ತ್ಯಾಜ್ಯ ದಹನ ಮುಖ್ಯ ಕಾರಣ
ಚಳಿಗಾಲದಲ್ಲಿ ದೆಹಲಿ ಎನ್‌ಸಿಆರ್ ವಲಯದಲ್ಲಿ ಗಾಳಿಯ ಗುಣಮಟ್ಟ ವಿಪರೀತ ಕುಸಿಯಲು ಕೃಷಿ ತ್ಯಾಜ್ಯ ಸುಡುವಿಕೆಯೇ ಮುಖ್ಯ ಕಾರಣ ಎಂದು ಹೆಚ್ಚಿನ ಜನ ಅಭಿಪ್ರಾಯಪಟ್ಟಿದ್ದಾರೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಲ್ಲಿ ರೈತರು ತಮ್ಮ ಹೊಲಗಳಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಡುತ್ತಾರೆ. ಕೃಷಿ ತ್ಯಾಜ್ಯ ಸುಡುವಿಕೆಯಿಂದ ಏಳುವ ಹೊಗೆಯು ಪಕ್ಕದ ದೆಹಲಿವರೆಗೆ ವ್ಯಾಪಿಸುತ್ತದೆ. ಇದರಿಂದಲೇ ಅಧಿಕ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಶೇ 50ಕ್ಕೂ ಹೆಚ್ಚು ಜನರು ಅಭಿಪ್ರಾಯಪಟ್ಟಿದ್ದಾರೆ. 10,037 ಜನರು ಈ ಸಮೀಕ್ಷೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

‘ಸುಪ್ತ ಹಂತಕ’
ಒಂದು ದಶಕದಿಂದ ದೆಹಲಿಯ ನಾಗರಿಕರು ಗಾಳಿಯ ಗುಣಮಟ್ಟ ಕುಸಿತದ ಸಂತ್ರಸ್ತರಾಗಿದ್ದಾರೆ. ಮುಂಗಾರು ಹಂಗಾಮು ಕಳೆದು ಉತ್ತರದ ರಾಜ್ಯಗಳಲ್ಲಿ ಕೊಯ್ಲು ಮುಗಿಯುವ ವೇಳೆಗೆ ರಾಜಧಾನಿಯಲ್ಲಿ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ. ಗಾಳಿಯಲ್ಲಿರುವ ಸೂಕ್ಷ್ಮ ಕಣಗಳು (ಪಿಎಂ 2.5) ಉಸಿರಾಟದ ಮೂಲಕ ಶ್ವಾಸಕೋಶವನ್ನು ಸೇರಿ, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮಕ್ಕಳು, ವಯಸ್ಸಾದವರು ಹಾಗೂ ಈ ಮೊದಲೇ ಅಸ್ತಮಾ, ಹೃದಯ ಸಮಸ್ಯೆಗಳನ್ನು ಹೊಂದಿರುವವರಿಗೆ ವಾಯುಮಾಲಿನ್ಯ ಇನ್ನಷ್ಟು ಕಿರಿಕಿರಿ ಉಂಟುಮಾಡುತ್ತದೆ. ಮಾಲಿನ್ಯಕಾರಕ ಕಣಗಳನ್ನು ಹೊಂದಿರುವ ಗಾಳಿಯನ್ನು ದೀರ್ಘಕಾಲ ಸೇವಿಸುವುದರಿಂದ ಆರೋಗ್ಯವಂತರಲ್ಲೂ ಸಮಸ್ಯೆಗಳು ಕಾಣಿಸುತ್ತವೆ. ಮಾಲಿನ್ಯಕಾರಕ ಗಾಳಿಯ ಉಸಿರಾಟವು ಉಸಿರಾಟದ ಸೋಂಕು, ಹೃದಯ ಸಂಬಂಧಿ ಕಾಯಿಲೆ ಹಾಗೂ ಶ್ವಾಸಕೋಶ ಕ್ಯಾನ್ಸರ್‌ ಅನ್ನು ತರುವ ಅಪಾಯವಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಎಚ್ಚರಿಸಿದೆ.

‘ಹೆಚ್ಚು ಮಾಲಿನ್ಯದ ಪ್ರದೇಶಗಳಿಂದ ಮಕ್ಕಳು, ವಯಸ್ಸಾದವರು ಹಾಗೂ ಆರೋಗ್ಯ ಸಮಸ್ಯೆ ಇರುವವರು ದೂರವಿರಬೇಕು. ಹೊರಗಡೆ ಹೋಗಲೇಬೇಕೆಂದಾದಲ್ಲಿ ಹಗಲು ಹೊತ್ತಿನಲ್ಲಿ ಮಾಸ್ಕ್ ಧರಿಸಿ ಓಡಾಡಬೇಕು. ವಾಯುಮಾಲಿನ್ಯವು ಸುಪ್ತ ಹಂತಕನಿದ್ದಂತೆ’ ಎಂದು ಏಮ್ಸ್ ಮಾಜಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.

ಆಧಾರ: ಲೋಕಲ್ ಸರ್ಕಲ್ಸ್‌, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT