ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ಚುಟುಕು ಕ್ರಿಕೆಟ್, ಯಶಸ್ಸಿನ ಹಾದಿಯಲ್ಲಿ ದಿಟ್ಟ ಹೆಜ್ಜೆ

Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

ಇತ್ತೀಚಿನವರೆಗೂ ‘ಕ್ರಿಕೆಟ್‌ ಶಿಶು’ಗಳು ಎನಿಸಿಕೊಂಡಿದ್ದ ನೆದರ್ಲೆಂಡ್ಸ್‌, ಐರ್ಲೆಂಡ್‌, ಅಫ್ಗಾನಿಸ್ತಾನ ತಂಡಗಳು ಬಲಿಷ್ಠ ತಂಡಗಳಿಗೆ ಪೈಪೋಟಿ ನೀಡುವ ಹಂತಕ್ಕೆ ಬೆಳೆದಿವೆ. ಏಳುಬೀಳುಗಳ ನಡುವೆಯೂ ಕಳೆದ ಒಂದೂವರೆ ದಶಕದಲ್ಲಿ ಈ ತಂಡಗಳು ಸಾಧಿಸಿರುವ ಬೆಳವಣಿಗೆ ಗಮನಾರ್ಹ

ಅಫ್ಗಾನಿಸ್ತಾನ
ಹದಿಮೂರು ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಫ್ಗಾನಿಸ್ತಾನ, ಜಾಗತಿಕ ಕ್ರಿಕೆಟ್‌ನಲ್ಲಿ ಬಹಳ ಬೇಗನೇ ತನ್ನ ಛಾಪು ಮೂಡಿಸಿದ ತಂಡಗಳಲ್ಲಿ ಒಂದು.

ಹಲವು ವರ್ಷಗಳ ಯುದ್ಧ, ಭಯೋತ್ಪಾದನೆಯ ಕರಿನೆರಳು, ತಾಲಿಬಾನ್‌ ಆಡಳಿತ ಒಳಗೊಂಡಂತೆ ಹಲವು ಸವಾಲುಗಳ ನಡುವೆಯೂ ಅಲ್ಲಿ ಕ್ರಿಕೆಟ್‌ ತನ್ನ ಜೀವ ಉಳಿಸಿಕೊಂಡಿದೆ.

ಬ್ಯಾಟಿಂಗ್‌ ಕೋಚ್‌ ಇಂಗ್ಲೆಂಡ್‌ನ ಜೊನಾಥನ್‌ ಟ್ರಾಟ್‌ ಮತ್ತು ಬೌಲಿಂಗ್‌ ಕೋಚ್‌ ಪಾಕಿಸ್ತಾದ ಉಮರ್‌ ಗುಲ್‌ ಅವರ ಮಾರ್ಗದರ್ಶನದಲ್ಲಿ ತಂಡ ಇತ್ತೀಚಿನ ದಿನಗಳಲ್ಲಿ ಬಲ ಹೆಚ್ಚಿಸಿಕೊಂಡಿದೆ.

ಮೊಹಮ್ಮದ್‌ ನಬಿ ಮತ್ತು ರಶೀದ್‌ ಖಾನ್‌ ಅವರಂತಹ ವಿಶ್ವದರ್ಜೆಯ ಆಟಗಾರರು ತಂಡದ ಶಕ್ತಿ. ಸ್ಪಿನ್ನರ್‌ ರಶೀದ್‌ ಹಾಗೂ ಯುವ ವೇಗಿಗಳು ಯಾವುದೇ ಬಲಿಷ್ಠ ತಂಡಕ್ಕೂ ಬೆದರಿಕೆ ಹುಟ್ಟಿಸಬಲ್ಲರು. ಗುಲ್‌ ಅವರ ಗರಡಿಯಲ್ಲಿ ಪಳಗಿರುವ ಫಜಲ್‌ಹಕ್‌ ಫರೂಕಿ ಮತ್ತು ನವೀನ್‌ ಉಲ್‌ ಹಕ್‌ ಪ್ರಮುಖ ವೇಗಿಗಳಾಗಿ ಹೊರಹೊಮ್ಮುತ್ತಿದ್ದಾರೆ.

ಒಂದಿಬ್ಬರು ವಿಶ್ವದರ್ಜೆಯ ಬ್ಯಾಟರ್‌ ಗಳನ್ನು ಹೊಂದಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಅಫ್ಗನ್‌ ಕೂಡಾ ಬಲಿಷ್ಠ ತಂಡಗಳ ಸಾಲಿಗೆ ಸೇರುವುದರಲ್ಲಿ ಸಂದೇಹವಿಲ್ಲ.

ನೆದರ್ಲೆಂಡ್ಸ್‌
ಇಂಗ್ಲೆಂಡ್‌ ಬಳಿಕ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿರುವ ಯೂರೋಪ್‌ನ ಪ್ರಮುಖ ತಂಡಗಳಲ್ಲಿ ನೆದರ್ಲೆಂಡ್ಸ್‌ ಕೂಡ ಒಂದು.

2009ರಲ್ಲಿ ಮೊದಲ ಬಾರಿ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ನೆದರ್ಲೆಂಡ್ಸ್‌, 2014 ರಲ್ಲಿ ‘ಸೂಪರ್‌ 10’ ಹಂತದಲ್ಲಿ ಆಡಿತ್ತು. ಏಕದಿನ ವಿಶ್ವಕಪ್‌ ಟೂರ್ನಿಯನ್ನು 1996 ರಲ್ಲೇ ಆಡಿತ್ತು. ಈ ಬಾರಿಯ ಟೂರ್ನಿಯಲ್ಲಿ ಡಚ್ಚರ ತಂಡ ಸೂಪರ್‌ 12ರ ಹಂತದಲ್ಲಿ ಎರಡು ಗೆಲುವು ಸಾಧಿಸಿ ಸ್ಮರಣೀಯ ಸಾಧನೆ ಮಾಡಿದೆ.

ದಕ್ಷಿಣ ಆಫ್ರಿಕಾದಂತಹ ತಂಡವನ್ನು ಮಣಿಸಲು ಸಾಧ್ಯವಾಗಿರುವುದು ನೆದರ್ಲೆಂಡ್ಸ್‌ ತಂಡ ಸಾಧಿಸಿದ ಬೆಳವಣಿಗೆಯನ್ನು ತೋರಿಸುತ್ತದೆ.

ಐರ್ಲೆಂಡ್‌
ಐರ್ಲೆಂಡ್‌ ತಂಡ ಕಳೆದ 14 ವರ್ಷಗಳಿಂದ ಅಂತರರಾಷ್ಟ್ರೀಯ ಟಿ20 ಪಂದ್ಯ ಹಾಗೂ 16 ವರ್ಷಗಳಿಂದ ಏಕದಿನ ಪಂದ್ಯಗಳನ್ನು ಆಡುತ್ತಿದೆ.

2007ರಲ್ಲಿ ತಾನಾಡಿದ್ದ ಚೊಚ್ಚಲ ಟಿ20 ವಿಶ್ವಕಪ್‌ನಲ್ಲೇ ‘ಸೂಪರ್‌ 8’ ಹಂತ ಪ್ರವೇಶಿಸಿ ಅಚ್ಚರಿ ಮೂಡಿಸಿತ್ತು. ಆ ಬಳಿಕ ಹಲವು ಏರಿಳಿತ ಕಂಡಿದೆ.

ಪ್ರಬಲ ತಂಡಗಳ ಜತೆ ಆಡಲು ಅವಕಾಶ ಸಿಕ್ಕಾಗಲೆಲ್ಲಾ, ತನ್ನ ಸಾಮರ್ಥ್ಯ ತೋರಿಸಿದೆ. ಈ ವಿಶ್ವಕಪ್‌ನ ಅರ್ಹತಾ ಹಂತದಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಸೂಪರ್‌ 12ರಲ್ಲಿ ಇಂಗ್ಲೆಂಡ್‌ ಎದುರು ದೊರೆತ ಗೆಲುವು ತಂಡದ ಆತ್ಮ
ವಿಶ್ವಾಸವನ್ನು ಸಹಜವಾಗಿ ಹೆಚ್ಚಿಸಿದೆ.

ವೇಗಿ ಜೋಶ್‌ ಲಿಟ್ಲ್‌ ಅವರು ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಮಾಡಿದ್ದು ವಿಶೇಷ. ಕೆವಿನ್‌ ಒಬ್ರಿಯನ್‌ ಅವರ ನಿವೃತ್ತಿಯ ಬಳಿಕ ಯುವ ಬ್ಯಾಟರ್‌ಗಳ ಮೇಲಿನ ಜವಾಬ್ದಾರಿ ಹೆಚ್ಚಿದೆ. ಅನುಭವಿಗಳಾದ ಪಾಲ್‌ ಸ್ಟರ್ಲಿಂಗ್‌, ಆ್ಯಂಡ್ರ್ಯೂ ಬಲ್ಬಿರ್ನಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ.

ಜಿಂಬಾಬ್ವೆ
ಜಿಂಬಾಬ್ವೆ ತಂಡಕ್ಕೆ 1981ರಲ್ಲೇ ಐಸಿಸಿಯ ಸಹ ಸದಸ್ಯತ್ವ ಲಭಿಸಿತ್ತು. 1992 ರಲ್ಲಿ ಪೂರ್ಣಾವಧಿ ಸದಸ್ಯ ಸ್ಥಾನ ದೊರೆಯಿತು. ಆಫ್ರಿಕಾ ಖಂಡದ ಈ ತಂಡಕ್ಕೆ ಇಂದಿಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಬಲ ಶಕ್ತಿ ಎನಿಸಲು ಆಗಿಲ್ಲ. ಆದರೆ ಆಗಿಂದಾಗ್ಗೆ ಅಚ್ಚರಿಯ ಫಲಿತಾಂಶ ನೀಡುತ್ತಾ ತನ್ನ ಇರುವಿಕೆ ತೋರುತ್ತಿದೆ.

1983ರಿಂದಲೂ ಏಕದಿನ ಪಂದ್ಯ ಆಡುತ್ತಿರುವ ತಂಡ, ಒಮ್ಮೆಯೂ ಟಿ20 ವಿಶ್ವಕಪ್‌ನ ಆರಂಭಿಕ ಹಂತ ದಾಟಿರಲಿಲ್ಲ. ಐಸಿಸಿ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಜಿಂಬಾಬ್ವೆ, ಈ ಬಾರಿ ‘ಸೂಪರ್‌ 12’ ಹಂತ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿತು.

ಇದೇ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಎದುರು ಏಕದಿನ ಪಂದ್ಯ ಗೆದ್ದು, 30 ವರ್ಷಗಳಲ್ಲಿ ಮೊದಲ ಬಾರಿ ಕಾಂಗರೂ ನಾಡಿನಲ್ಲಿ ಏಕದಿನ ಪಂದ್ಯ ಗೆದ್ದ ಹಿರಿಮೆ ತನ್ನದಾಗಿಸಿಕೊಂಡಿತ್ತು.

ಫ್ಲವರ್‌ ಸಹೋದರರು, ಹೀತ್ ಸ್ಟ್ರೀಕ್ ಅವರ ನಿವೃತ್ತಿಯ ಬಳಿಕ ಹೊಸ ಪೀಳಿಗೆಯ ಆಟಗಾರರಾದ ಸಿಕಂದರ್‌ ರಝಾ, ರೆಗಿಸ್‌ ಚಕಾಬ್ವ, ಕ್ರೆಗ್‌ ಎರ್ವಿನ್‌, ಸೀನ್‌ ವಿಲಿಯಮ್ಸ್‌ ಅವರು ತಂಡಕ್ಕೆ ಬಲ ತುಂಬಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT