ಶನಿವಾರ, ಜನವರಿ 18, 2020
20 °C
ಒಣ ದ್ರಾಕ್ಷಿ ತಯಾರಿಕೆಯಿಂದ ವಾರ್ಷಿಕ ₹6ರಿಂದ ₹7 ಲಕ್ಷ ಆದಾಯ

ದೇವರಹಿಪ್ಪರಗಿ: ಕೋಟಿಖಾನಿ ದಂಪತಿ ಕೃಷಿ ಯಶೋಗಾಥೆ

ಅಮರನಾಥ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ದೇವರಹಿಪ್ಪರಗಿ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎಂಬ ಗಾದೆ ಮಾತನ್ನು ಅಳವಡಿಸಿಕೊಂಡು, 10 ವರ್ಷಗಳಿಂದ ನಿರಂತರ ದ್ರಾಕ್ಷಿ ಬೆಳೆಯುವ ಮೂಲಕ ಹರನಾಳ ಗ್ರಾಮದ ಶಂಕರಗೌಡ ಕೋಟಿಖಾನಿ ಯಶಸ್ವಿ ಕೃಷಿಕರಾಗಿ ಹೊರಹೊಮ್ಮಿದ್ದಾರೆ.

ಒಂದು ವರ್ಷ ಸಂಪೂರ್ಣ ಮಳೆ, ಎರಡು ವರ್ಷ ಬರ ಎಂಬಂತಾಗಿರುವ ವಿಜಯಪುರ ಜಿಲ್ಲೆಯಲ್ಲಿ ಕೃಷಿ ಮಾಡುವುದೆಂದರೆ ‌ಜೂಜಾಟಕ್ಕೆ ಇಳಿದಂತೆ ಎಂಬುದು ಬಹುತೇಕ ರೈತರ ಅಭಿಮತ. ಆದರೆ, ಇದಾವುದನ್ನೂ ಲೆಕ್ಕಿಸದೇ ಶಂಕರಗೌಡ ತಮ್ಮ ಜಮೀನಿನಲ್ಲಿ ಸತತವಾಗಿ ದ್ರಾಕ್ಷಿ ಕೃಷಿ ಮಾಡಿ, ಕಾಸು ಕಂಡಿದ್ದಾರೆ.

‘ಆರು ಎಕರೆಯಲ್ಲಿ ದ್ರಾಕ್ಷಿ ಬೆಳೆದಿದ್ದು, ನೀರಿಗಾಗಿ ಒಂದು ಎಕರೆಯಲ್ಲಿ ಕೃಷಿ ಹೊಂಡ ನಿರ್ಮಿಸಲಾಗಿದೆ. ಕೃಷಿ ಹೊಂಡಕ್ಕೆ ನೀರು ಪೂರೈಸಲು ಅನುಕೂಲವಾಗುವಂತೆ 6 ಕಿ.ಮೀ ದೂರದ ಗುತ್ತಿ ಬಸವಣ್ಣ ಯೋಜನೆಯ ಕಾಲುವೆಯಿಂದ ಹಾಗೂ 2.5 ಕಿ.ಮೀ ದೂರದಲ್ಲಿರುವ ಚಿಮ್ಮಲಗಿ ಏತ ನೀರಾವರಿ ಕಾಲುವೆಯಿಂದ ಪೈಪ್ ಲೈನ್ ಅಳವಡಿಸಲಾಗಿದೆ’ ಎಂದು ಶಂಕರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘10 ವರ್ಷಗಳ ದ್ರಾಕ್ಷಿ ಕೃಷಿಯಲ್ಲಿ ಒಂದು ಬಾರಿ ಆಲಿಕಲ್ಲು ಮಳೆಯಿಂದ ಸ್ವಲ್ಪ ಹಾನಿಯಾದರೆ, ಕೃಷಿ ಆರಂಭದಲ್ಲಿ ನೀರಿನ ಅಭಾವ ತಲೆದೋರಿತ್ತು. ಆ ಸಮಯದಲ್ಲಿ ನೀರು ಪೂರೈಕೆಗೆ ₹3 ಲಕ್ಷ ಕೊಟ್ಟು ನೀರಿನ ಟ್ಯಾಂಕ್‌ ಇರುವ ಲಾರಿ ಖರೀದಿಸಿದೆ. ಇದರ ಮೂಲಕ 8 ಕಿ.ಮೀ ದೂರದಿಂದ ನೀರು ತಂದು ಬೆಳೆಯನ್ನು ರಕ್ಷಿಸಿಕೊಂಡೆ. ಈಗ ಪ್ರತಿ ವರ್ಷ ದ್ರಾಕ್ಷಿಯಿಂದ ಎಕರೆಗೆ 3-4 ಟನ್ ಒಣ ದ್ರಾಕ್ಷಿ ತಯಾರಿಸಲಾಗುತ್ತಿದೆ. ಇದರಿಂದ ವಾರ್ಷಿಕ ₹6-₹7 ಲಕ್ಷದವರೆಗೆ ಆದಾಯ ಬರುತ್ತಿದೆ’ ಎಂದು ಖುಷಿಯಿಂದ ಹೇಳಿದರು.

‘ನಾನು ದ್ರಾಕ್ಷಿ ಬೆಳೆಯಲು ಪ್ರಾರಂಭಿಸಿದೊಡನೆ ಮಣ್ಣಿನ ಪಿಎಚ್ ಪ್ರಮಾಣ ಎಷ್ಟಿರಬೇಕು, ಬೆಳೆಗೆ ಯಾವ ಸಮಯದಲ್ಲಿ ಯಾವ ಔಷಧಿ ನೀಡಬೇಕು, ಬದಲಾಗುತ್ತಿರುವ ವಾತಾವರಣ ಬೆಳೆ ಮೇಲೆ ಯಾವ ರೀತಿಯ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ತಕ್ಷಣ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇನೆ. ಇದರಿಂದ ಈ ಬಾರಿ ಡೌನಿ ರೋಗ ನಮ್ಮ ಬೆಳೆಯನ್ನು ಹೆಚ್ಚು ಬಾಧಿಸಲಿಲ್ಲ’ ಎಂದು ಕೃಷಿಯ ಗುಟ್ಟನ್ನು ಹೇಳಿದರು.

‘ಇಷ್ಟು ವರ್ಷದ ಕೃಷಿಗೆ ಪತ್ನಿ ಶಾಂತಾಬಾಯಿ ಕೊಡುಗೆ ಕಡೆಗಣಿಸುವಂತಿಲ್ಲ. ಪ್ರತಿದಿನ ಮನೆಗೆಲಸದ ಜೊತೆ ಬೆಳಗಿನಿಂದ ರಾತ್ರಿಯವರೆಗೆ ಜಮೀನಿನಲ್ಲಿ ಕಾರ್ಯ ನಿರ್ವಹಿಸಿ, ಜಾನುವಾರಗಳ ಆರೈಕೆ ಹಾಗೂ ಜಮೀನಿನಲ್ಲಿ ಕಳೆ ಕೀಳುವ ಕಾರ್ಯವನ್ನು ಮಾಡುತ್ತಾಳೆ’ ಎಂದು ತಮ್ಮ ಕುಟುಂಬದ ಸಾಧನೆ ಹಿಂದಿರುವ ಶ್ರಮದ ಕುರಿತು ಹೇಳಿದರು.

*
ಕೃಷಿ ಹೊಂಡ ನಿರ್ಮಾಣಕ್ಕೆ ₹5 ಲಕ್ಷ ಖರ್ಚಾಗಿದೆ. ಇದಕ್ಕೆ ಪ್ಲಾಸ್ಟಿಕ್ ಹೊದಿಕೆ ಬಳಸಿದ್ದು, ಒಂದು ಕೋಟಿ ಲೀಟರ್ ನೀರಿನ ಸಾಮರ್ಥ್ಯ ಹೊಂದಿದೆ.
-ಶಂಕರಗೌಡ ಕೋಟಿಖಾನಿ, ರೈತ, ಹರನಾಳ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು